28.2 C
Bengaluru
Sunday, March 19, 2023
spot_img

ಪ್ರಾಣಿಗಳ ಅಂತರಜಾಲದ ಬಗ್ಗೆ ಗೊತ್ತೇ?

-ಡಾ| ಯು.ಬಿ. ಪವನಜ

ಪ್ರಾಣಿಗಳಿಗೆ ಜೋಡಿಸುವ ಸಾಧನವು ಹಲವು ಸಂವೇದಕಗಳನ್ನು ಒಳಗೊಂಡಿರುತ್ತದೆ. ಅವುಗಳು ಪ್ರಾಣಿಗಳ ಕೆಲವು ಭಾವನೆಗಳನ್ನು ಅಳೆಯಬಲ್ಲವು. ಇವುಗಳಿಂದ ಕೆಲವು ಅತ್ಯುತ್ತಮ ಮಾಹಿತಿ ಪಡೆಯಬಹುದು. ಒಂದು ಉದಾಹರಣೆ ಭೂಕಂಪ ಮತ್ತು ಜ್ವಾಲಾಮುಖಿಗಳಿಗೆ ಸಂಬಂಧಿಸಿದ್ದು. ಭೂಕಂಪ ಸಂಭವಿಸುವ ಮತ್ತು ಜ್ವಾಲಾಮುಖಿ ಉಕ್ಕುವ ಸ್ವಲ್ಪ ಸಮಯದ ಮುನ್ನ ಅದರ ಆಸುಪಾಸಿನಲ್ಲಿರುವ ಪ್ರಾಣಿಗಳು ವಿಚಿತ್ರವಾಗಿ ನಡೆದುಕೊಳ್ಳುತ್ತವೆ ಎಂಬುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಸ್ಥಳಗಳಲ್ಲಿ ಕೆಲವು ಪ್ರಾಣಿಗಳಿಗೆ ಈ ಸಾಧನವನ್ನು ಜೋಡಿಸಿದರೆ ಅವುಗಳು ನೀಡುವ ಸಂದೇಶದ ಮೂಲಕ ಭೂಕಂಪ ಮತ್ತು ಜ್ವಾಲಾಮುಖಿ ಸಂಭವಿಸುವುದನ್ನು ಮೊದಲೇ ತಿಳಿಯಬಹುದು. ನೀರಿನಲ್ಲಿ ವಾಸಿಸುವ ಹಕ್ಕಿಗಳಿಗೆ ಈ ಸಾಧನ ಜೋಡಿಸುವ ಮೂಲಕ ಹೇಗೆ ನೀರಿನ ಆಕರಗಳು ಬದಲಾಗುತ್ತಿವೆ ಎಂದು ಅಧ್ಯಯನ ಮಾಡಬಹುದು. ಇನ್ನೂ ಹಲವಾರು ಉಪಯೋಗಗಳು ಈ ಯೋಜನೆಯಿಂದ ಆಗಲಿವೆ.

ಪ್ರಾಣಿಗಳ ಅಂತರಜಾಲ ಎಂಬ ವಿಚಿತ್ರ ಪದವನ್ನು ವಿವರಿಸುವ ಮುನ್ನ ಹಿಂದೊಮ್ಮೆ ಚತುರಮನೆ ಬಗ್ಗೆ ಬರೆಯುವಾಗ ಹೇಳಿದ್ದ ವಸ್ತುಗಳ ಅಂತರಜಾಲ ನೆನಪಿಸಿಕೊಳ್ಳಿ. ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ ಪ್ರಪಂಚಕ್ಕೆ ಇಂಗ್ಲಿಶಿನಲ್ಲಿ Internet of Things ಅಥವಾ ಚುಟುಕಾಗಿ IoT (ಐಓಟಿ) ಎಂಬ ಹೆಸರಿದೆ. ಇದಕ್ಕೆ connected devices ಎಂಬ ಇನ್ನೊಂದು ಹೆಸರೂ ಇದೆ. ಸಾಧನ, ಪರಿಕರ, ಸಂಪರ್ಕಕ್ಕೊಳಪಡಬಹುದಾದ ಗ್ಯಾಜೆಟ್‌ಗಳು, ಗಣಕ, ಸಂವೇದಕ (sensor) ಇವೆಲ್ಲ ಅಂತರಜಾಲದ ಮೂಲಕ ಸಂಪರ್ಕಗೊಂಡು ಅವುಗಳನ್ನು ವೀಕ್ಷಿಸುವುದು, ಅವುಗಳಿಂದ ಮಾಹಿತಿಯನ್ನು ಪಡೆಯುವುದು ಮತ್ತು ಅವುಗಳನ್ನು ನಿಯಂತ್ರಿಸುವುದು ಇವೆಲ್ಲ ಈ ವಿಷಯದ ವ್ಯಾಪ್ತಿಯಲ್ಲಿ ಬರುತ್ತವೆ.

ವಸ್ತುಗಳನ್ನು ಅಂತರಜಾಲಕ್ಕೆ ಜೋಡಿಸಿದರೆ ಅದು ವಸ್ತುಗಳ ಅಂತರಜಾಲ ಆಗುತ್ತದೆ. ಅದೇ ರೀತಿ ಪ್ರಾಣಿಗಳನ್ನು ಅಂತರಜಾಲಕ್ಕೆ ಜೋಡಿಸಿದರೆ ಅದು ಪ್ರಾಣಿಗಳ ಅಂತರಜಾಲ ಆಗುತ್ತದೆ ಎಂದು ನೀವು ಅಂದುಕೊಂಡರೆ ಅದು ಸರಿ. ಇದರಿಂದ ಏನು ಪ್ರಯೋಜನ? ಅದನ್ನು ತಿಳಿಯಬೇಕಾದರೆ ಸ್ವಲ್ಪ ಪ್ರಾಣಿಗಳ ಬಗ್ಗೆ, ಪಕ್ಷಿಗಳ ಬಗ್ಗೆ ಹಾಗೂ ಮುಖ್ಯವಾಗಿ ವಲಸೆ ಹೋಗುವ ಹಕ್ಕಿಗಳ ಬಗ್ಗೆ ನೆನಪು ಮಾಡಿಕೊಳ್ಳಬೇಕು. ಕೆಲವು ಹಕ್ಕಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವುದು ಗೊತ್ತು. ಕೆಲವು ಹಕ್ಕಿಗಳು ಹೀಗೆ ಹೋಗುವಾಗ ಸಾವಿರಾರು ಕಿ.ಮೀ.ಗಳಷ್ಟು ದೂರವನ್ನೂ ಕ್ರಮಿಸುತ್ತವೆ. ಹಕ್ಕಿಗಳು ಹಣ್ಣುಗಳನ್ನು ತಿಂದು ಅದರ ಬೀಜವನ್ನು ಬೇರೆ ಕಡೆ ವಿಸರ್ಜಿಸಿ ಆ ಮೂಲಕ ಸಸ್ಯಗಳು ಎಲ್ಲ ಕಡೆ ಹುಟ್ಟಲು ಕಾರಣವಾಗುತ್ತವೆ ಎಂಬುದು ಗೊತ್ತು ತಾನೆ? ಆಫ್ರಿಕಾದ ಬಹುತೇಕ ಕಾಡುಗಳು ಒಂದು ಜಾತಿಯ ಬಾವಲಿಯು ಬೀಜಗಳನ್ನು ಪ್ರಸರಿಸುವ ಮೂಲಕ ಆಗಿವೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಈ ಹಕ್ಕಿಗಳನ್ನು ಅವು ಎಲ್ಲೆಲ್ಲಿ ಹೋಗುತ್ತವೆ, ಎಲ್ಲಿ ಎಷ್ಟು ಸಮಯ ಇರುತ್ತವೆ, ಯಾವ ಸಮಯದಲ್ಲಿ ಹೋಗುತ್ತವೆ, ಇತ್ಯಾದಿಗಳನ್ನು ತಂತ್ರಜ್ಞಾನದ ಮೂಲಕ ಅಧ್ಯಯನ ಮಾಡಲು ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ. ನಮ್ಮಲ್ಲೂ ಹುಲಿಗಳಿಗೆ ರೇಡಿಯೋ ಕೊರಳಪಟ್ಟಿ ಕಟ್ಟಿ ಅವುಗಳ ವಲಸೆ, ಜೀವನ ವಿಧಾನ ಎಲ್ಲ ಕಲಿಯುವುದು ಗೊತ್ತಿರಬಹುದು. ಇವು ಸ್ವಲ್ಪ ಹಳೆಯ ವಿಧಾನ. ಈಗ ವಿಜ್ಞಾನಿಗಳು ಪ್ರಾರಂಭಿಸಿರುವುದು ಸುಧಾರಿತ ವಿಧಾನ. ಇದರಲ್ಲಿ ಅಂತರಜಾಲದ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಹಕ್ಕಿಗಳಿಗೆ ಜೋಡಿಸುವ ಸಾಧನದಲ್ಲಿ ಅಂತರಜಾಲಕ್ಕೆ ಸಂಪರ್ಕ ಹೊಂದುವ ಸವಲತ್ತು ಇರುತ್ತದೆ. ಆದರೆ ಆಫ್ರಿಕ ಅಥವಾ ಅಮೆಝಾನ್‌ನ ದಟ್ಟ ಕಾಡಿನ ನಡುವೆ ಅಂತರಜಾಲ ಸಂಪರ್ಕ ಇರುವುದಿಲ್ಲ. ಇದಕ್ಕೆ ಪರಿಹಾರವಾಗಿ ಈ ಸಾಧನವು ಅಂತರಿಕ್ಷದಲ್ಲಿ ಭೂಮಿಯನ್ನು ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station – ISS) ಸಂದೇಶವನ್ನು ಕಳುಹಿಸುತ್ತದೆ. ಅಲ್ಲಿಂದ ಅದು ಭೂಮಿಯ ಇನ್ನೊಂದು ಊರಿನಲ್ಲಿರುವ ಪ್ರಯೋಗಶಾಲೆಗೆ ಕಳುಹಿಸುತ್ತದೆ. ಹೀಗೆ ಹಕ್ಕಿ ಎಲ್ಲಿಗೆ ಹೋಗುತ್ತಿದೆ, ಎಷ್ಟು ವೇಗವಾಗಿ ಹೋಗುತ್ತಿದೆ. ಎಲ್ಲಿ ಎಷ್ಟು ಸಮಯ ನಿಲ್ಲುತ್ತದೆ, ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲಾಗುತ್ತದೆ.

ಹಕ್ಕಿಗಳಿಗೆ ಜೋಡಿಸುವ ಇಂತಹ ಸಾಧನದಲ್ಲಿ ತಾನಿರುವ ಸ್ಥಳದ ಅಕ್ಷಾಂಶ ರೇಖಾಂಶ ತಿಳಿಸುವ ಜಿಪಿಎಸ್, ಉಷ್ಣತೆ, ವೇಗ, ಎತ್ತರ, ತೇವ, ಇತ್ಯಾದಿಗಳನ್ನು ಅಳೆಯುವ ಸಂವೇದಕಗಳಿರುತ್ತವೆ. ಇವುಗಳು ಕೆಲಸ ಮಾಡಲು ಚಿಕ್ಕ ಲಿಥಿಯಂ ಬ್ಯಾಟರಿ ಇರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು ಚಿಕ್ಕ ಸೌರಪ್ಯಾನೆಲ್ ಕೂಡ ಇರುತ್ತದೆ. ಇಷ್ಟೆಲ್ಲ ಇರುವ ಸಾಧನದ ತೂಕ ಸುಮಾರು 5 ಗ್ರಾಂನಷ್ಟಿರುತ್ತದೆ. ತುಂಬ ಜಾಸ್ತಿ ತೂಕ ಇದ್ದರೆ ಹಕ್ಕಿಗಳು ಅದನ್ನು ಹೊತ್ತುಕೊಂಡು ಹಾರಲಾರವು. ಈ ಸಾಧನಕ್ಕೆ ಎರಡು ಆಂಟೆನಾಗಳಿರುತ್ತವೆ. ಇವುಗಳಲ್ಲಿ ಒಂದು ರೇಡಿಯೋ ಸಂವಹನಕ್ಕಾಗಿ ಮತ್ತು ಇನ್ನೊಂದು ಜಿಪಿಎಸ್‌ಗಾಗಿರುತ್ತವೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಭೂಮಿಗೆ ಸುತ್ತು ಬರುತ್ತಿರುತ್ತದೆ. ಇದು ಭೂಸ್ಥಿರ ಉಪಗ್ರಹವಲ್ಲ. ಅಂದರೆ ಇದು ಭೂಮಿಯ ಒಂದು ಸ್ಥಳದ ಮೇಲೆ ಶಾಶ್ವತವಾಗಿ ಇರುವುದಿಲ್ಲ. ಒಂದು ಸ್ಥಳದ ಮೇಲೆ ಅದು ಆಗಾಗ ಬರುತ್ತದೆ. ಹಕ್ಕಿಯ ಮೇಲೆ ಜೋಡಿಸಿರುವ ಸಾಧನವು ಹೀಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ತನ್ನ ಮೇಲೆ ಬಂದಾಗ ಸಂದೇಶ ಕಳುಹಿಸುತ್ತದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅದು ಭೂಮಿಯಲ್ಲಿರುವ ಪ್ರಯೋಗಶಾಲೆಗೆ, ಅಲ್ಲಿಂದ ವಿಜ್ಞಾನಿಗಳಿಗೆ ಹಂಚಲ್ಪಡುತ್ತದೆ. ಈ ಮಾಹಿತಿಯನ್ನು ಅಧ್ಯಯನ ಮಾಡಲು ವಿಶ್ವಾದ್ಯಂತ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಕಿರುತಂತ್ರಾಂಶವೂ (App) ಲಭ್ಯವಿದೆ. Animal Tracker ಎಂಬ ಹೆಸರಿನ ಈ ಕಿರುತಂತ್ರಾಂಶವನ್ನು ನೀವೂ ನಿಮ್ಮ ಮೊಬೈಲ್‌ನಲ್ಲಿ ಹಾಕಿಕೊಂಡು ಈ ಕೆಲಸದಲ್ಲಿ ಕೈಜೋಡಿಸಬಹುದು.

ಈ ಯೋಜನೆಯನ್ನು ನಡೆಸುತ್ತಿರುವುದು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಸೊಸೈಟಿ. ಈ ಯೋಜನೆಗೆ ಅವರು ತುಂಬ ಉದ್ದದ ಹೆಸರಿಟ್ಟಿದ್ದಾರೆ. ಅದು International Cooperation for Animal Research Using Space  ಅಥವಾ ಚಿಕ್ಕದಾಗಿ Icarus. ಈ ಯೋಜನೆಯ ಪೂರ್ತಿ ವಿವರಗಳನ್ನು www.icarus.mpg.de/en ಜಾಲತಾಣದಲ್ಲಿ ತಿಳಿಯಬಹುದು.

ಪ್ರಾಣಿಗಳಿಗೆ ಜೋಡಿಸುವ ಸಾಧನವು ಹಲವು ಸಂವೇದಕಗಳನ್ನು ಒಳಗೊಂಡಿರುತ್ತದೆ. ಅವುಗಳು ಪ್ರಾಣಿಗಳ ಕೆಲವು ಭಾವನೆಗಳನ್ನು ಅಳೆಯಬಲ್ಲವು. ಇವುಗಳಿಂದ ಕೆಲವು ಅತ್ಯುತ್ತಮ ಮಾಹಿತಿ ಪಡೆಯಬಹುದು. ಒಂದು ಉದಾಹರಣೆ ಭೂಕಂಪ ಮತ್ತು ಜ್ವಾಲಾಮುಖಿಗಳಿಗೆ ಸಂಬಂಧಿಸಿದ್ದು. ಭೂಕಂಪ ಸಂಭವಿಸುವ ಮತ್ತು ಜ್ವಾಲಾಮುಖಿ ಉಕ್ಕುವ ಸ್ವಲ್ಪ ಸಮಯದ ಮುನ್ನ ಅದರ ಆಸುಪಾಸಿನಲ್ಲಿರುವ ಪ್ರಾಣಿಗಳು ವಿಚಿತ್ರವಾಗಿ ನಡೆದುಕೊಳ್ಳುತ್ತವೆ ಎಂಬುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಸ್ಥಳಗಳಲ್ಲಿ ಕೆಲವು ಪ್ರಾಣಿಗಳಿಗೆ ಈ ಸಾಧನವನ್ನು ಜೋಡಿಸಿದರೆ ಅವುಗಳು ನೀಡುವ ಸಂದೇಶದ ಮೂಲಕ ಭೂಕಂಪ ಮತ್ತು ಜ್ವಾಲಾಮುಖಿ ಸಂಭವಿಸುವುದನ್ನು ಮೊದಲೇ ತಿಳಿಯಬಹುದು. ನೀರಿನಲ್ಲಿ ವಾಸಿಸುವ ಹಕ್ಕಿಗಳಿಗೆ ಈ ಸಾಧನ ಜೋಡಿಸುವ ಮೂಲಕ ಹೇಗೆ ನೀರಿನ ಆಕರಗಳು ಬದಲಾಗುತ್ತಿವೆ ಎಂದು ಅಧ್ಯಯನ ಮಾಡಬಹುದು. ಇನ್ನೂ ಹಲವಾರು ಉಪಯೋಗಗಳು ಈ ಯೋಜನೆಯಿಂದ ಆಗಲಿವೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles