-ನಾಗರತ್ನ ಅಸುಂಡಿ
ಇಳಕಲ್ ಸೀರೆಗಳನ್ನು ಮುಖ್ಯವಾಗಿ ಮೂರು ರೀತಿಯ ನೂಲುಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ರೇಷ್ಮೆ-ರೇಷ್ಮೆ, ರೇಷ್ಮೆ-ಹತ್ತಿ, ಕಚ್ಛಾ ರೇಷ್ಮೆ-ಹತ್ತಿಯಿಂದ ನೇಯಲಾಗುತ್ತದೆ. ಈ ಸೀರೆಯು ದೀರ್ಘ ಬಾಳಿಕೆ ಬರುವ ಗುಣಮಟ್ಟ, ವಿವಿಧ ಬಗೆಯ ಕಾಂಟ್ರಾಸ್ಟ್ ಬೋರ್ಡರ್‌ಗಳನ್ನು ಹೊಂದಿರುತ್ತದೆ. ಈ ಬೋರ್ಡರ್ 4 ರಿಂದ 6 ಇಂಚಿನವರೆಗೂ ಅಗಲವಿದ್ದು, 6, 8 ಮತ್ತು 9 ಮಣಗಳಲ್ಲಿ ಈ ಸೀರೆಗಳು ನೇಯಲ್ಪಡುತ್ತವೆ. ದೇಹದ ಸುತ್ತಿಗೆ ಬಳಸುವ ನೂಲು ಪ್ರತ್ಯೇಕವಾದರೆ, ಪಲ್ಲೂಗೆ ಬಳಸುವ ನೂಲು ಶುದ್ಧ ರೇಷ್ಮೆಯದಾಗಿರುತ್ತದೆ.

ಕನ್ನಡ ನಾಡಿನ ವಸ್ತ್ರ ಪರಂಪರೆಯಲ್ಲಿ ಉತ್ತರ ಕರ್ನಾಟಕ ಭಾಗದ ಇಳಕಲ್ ಸೀರೆಗೆ ಮಹತ್ವದ ಸ್ಥಾನವಿತ್ತು. ನೂರಾರು ವರ್ಷಗಳ ಸಾಂಪ್ರದಾಯಿಕ ಇಳಕಲ್ ಸೀರೆ ಇದೀಗ ವಿದೇಶಿ ಫ್ಯಾಷನ್ ಮೋಹದ ಎದುರು ನಿಧಾನವಾಗಿ ತೆರೆಮರೆಗೆ ಸರಿಯುತ್ತಿದೆ. ರೇಷ್ಮೆ, ಶುದ್ಧ ಹತ್ತಿಯಿಂದ ಕೈಮಗ್ಗದಲ್ಲಿ ನೇಯುವ ಈ ಸೀರೆಗಾಗಿ ಮಹಿಳೆಯರು ಹಪಹಪಿಸುತ್ತಿದ್ದರು. ಎಲ್ಲಾ ವರ್ಗದ ಹೆಂಗಳೆಯರಿಗೂ ಸೀರೆಯೆಂದರೆ ಅದು ಇಳಕಲ್ ಸೀರೆ ಮಾತ್ರ ಎಂಬಂತಹ ಭಾವನೆ ಇತ್ತು. ದೇಶ ವಿದೇಶದವರೆಗೂ ಇಳಕಲ್ ಸೀರೆಯ ಖ್ಯಾತಿ ಹಬ್ಬಿತ್ತು. ಇಂತಹ ಕೈಮಗ್ಗದ ಸೀರೆ ಉಡಲು ಮೂಗು ಮುರಿಯುವ ಪೀಳಿಗೆಯಲ್ಲಿ ನಾವಿದ್ದೇವೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣ ಒಂದು ಕಾಲಕ್ಕೆ ಸೀರೆಗೆ ಪ್ರಸಿದ್ಧವಾಗಿತ್ತು. ಕಾಲದ ಚಕ್ರ ಈ ಖ್ಯಾತಿಯನ್ನು ಅಳಿಸಿ ಹಾಕಿದೆ. ಇಲ್ಲಿಂದ ಪ್ರತಿನಿತ್ಯ ಲೋಡುಗಟ್ಟಲೆ ಸೀರೆ ಖರೀದಿಸುತ್ತಿದ್ದ ವರ್ತಕರು ಕರ್ನಾಟಕದಾದ್ಯಂತ ನಗರ ಪಟ್ಟಣಗಳಲ್ಲಿ ಮಾರಾಟ ಮಾಡುತ್ತಿದ್ದರು. ಸೀರೆ ಸಂಸ್ಕೃತಿಗೆ ಮಾರುಹೋದ ಹೊರ ರಾಜ್ಯದವರು, ವಿದೇಶಿಗರು ಕೂಡಾ ಆಸೆಪಟ್ಟು ಇಳಕಲ್ ಸೀರೆ ಖರೀದಿಸುತ್ತಿದ್ದರು. ಮಹಿಳೆಯರು ಆಸೆಪಟ್ಟು ಉಡುತ್ತಿದ್ದರು. ಈಗ ಬೇಡಿಕೆ ಕುಸಿದ ಹಿನ್ನೆಲೆ ಇಳಕಲ್‌ನಲ್ಲಿ ಬಹುತೇಕ ಕೈಮಗ್ಗಗಳು ಮುಚ್ಚಿವೆ. ಕೆಲವು ಕೊನೆಯುಸಿರೆಳೆಯುತ್ತಿವೆ.

ಇಳಕಲ್ ಸೀರೆಯ ವಿಶಿಷ್ಟತೆ
ಇಳಕಲ್ ಸೀರೆಗಳನ್ನು ಮುಖ್ಯವಾಗಿ ಮೂರು ರೀತಿಯ ನೂಲುಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ರೇಷ್ಮೆ-ರೇಷ್ಮೆ, ರೇಷ್ಮೆ-ಹತ್ತಿ, ಕಚ್ಛಾ ರೇಷ್ಮೆ-ಹತ್ತಿಯಿಂದ ನೇಯಲಾಗುತ್ತದೆ. ಈ ಸೀರೆಯು ದೀರ್ಘ ಬಾಳಿಕೆ ಬರುವ ಗುಣಮಟ್ಟ, ವಿವಿಧ ಬಗೆಯ ಕಾಂಟ್ರಾಸ್ಟ್ ಬೋರ್ಡರ್‌ಗಳನ್ನು ಹೊಂದಿರುತ್ತದೆ. ಈ ಬೋರ್ಡರ್ 4 ರಿಂದ 6 ಇಂಚಿನವರೆಗೂ ಅಗಲವಿದ್ದು, 6, 8 ಮತ್ತು 9 ಮಣಗಳಲ್ಲಿ ಈ ಸೀರೆಗಳು ನೇಯಲ್ಪಡುತ್ತವೆ. ದೇಹದ ಸುತ್ತಿಗೆ ಬಳಸುವ ನೂಲು ಪ್ರತ್ಯೇಕವಾದರೆ, ಪಲ್ಲೂಗೆ ಬಳಸುವ ನೂಲು ಶುದ್ಧ ರೇಷ್ಮೆಯದಾಗಿರುತ್ತದೆ. ಅಥವಾ ಆರ್ಟ್ ಸಿಲ್ಕ್ ಆಗಿರುತ್ತದೆ.

ವಿಭಿನ್ನ ಕಸೂತಿ ಒಳಭಾಗ ಪೂರಾ ಸಾದಾ, ಪಟ್ಟೆಗಳು, ಆಯತ, ಚೌಕ ರೀತಿಯ ಡಿಸೈನ್‌ಗಳನ್ನು ಸೀರೆಯಲ್ಲಿ ಕಾಣಬಹುದಾಗಿದೆ. ಸೀರೆಯ ಸೆರಗಿನ ಉದ್ದ 16 ರಿಂದ 20 ಇಂಚಿನವರೆಗೆ ಇರುತ್ತದೆ. ಉಡುವವರಿಗೆ ಆರಾಮದಾಯಕವಾಗಿರುತ್ತದೆ. ಶುದ್ಧ ಹತ್ತಿಯನ್ನು ಹೆಚ್ಚಾಗಿ ಬಳಸುವುದರಿಂದ ಚರ್ಮದ ಸಮಸ್ಯೆಗಳು, ಅಲರ್ಜಿಯಿಂದ ತಪ್ಪಿಸಿಕೊಳ್ಳಬಹುದು.
ಇಳಕಲ್ ಸೀರೆ ಉಳಿಯಲಿ
ಅಪ್ಪಟ ದೇಸೀ ಸೊಗಡಿನ ಇಳಕಲ್ ಸೀರೆ ಅಸ್ತಿತ್ವವನ್ನು ಕಾಪಾಡಬೇಕೆಂದರೆ ಹೊಸ ಫ್ಯಾಷನ್ ಟಚ್ ಕೊಟ್ಟು ಮಾರುಕಟ್ಟೆಗೆ ತರಬೇಕಿದೆ. ಸ್ವದೇಶಿ ಕೈಮಗ್ಗ ಉತ್ಪನ್ನವನ್ನು ಮತ್ತೆ ಜನಪ್ರಿಯಗೊಳಿಸಬೇಕಿದೆ.

ಟ್ರೆಂಡ್ ಬದಲಾದರೂ ಸೀರೆ ಎಲ್ಲ ವರ್ಗದ ಮಹಿಳೆಯರಿಗೂ ಅಚ್ಚುಮೆಚ್ಚು. ಇಳಕಲ್ ಸೀರೆಯನ್ನು ಬ್ರಾಂಡ್ ಮಾಡುವತ್ತ ಫ್ಯಾಷನ್ ಲೋಕ ಗಮನಹರಿಸಬೇಕಿದೆ. ನೇಕಾರರನ್ನು ರಕ್ಷಿಸುವುದರ ಜೊತೆಗೆ ದೇಸೀ ವಸ್ತ್ರ ಪರಂಪರೆಯನ್ನು ಉಳಿಸುವ ಕೆಲಸ ಆಗಬೇಕಿದೆ. ಮಹಿಳೆಯರು ದೇಹಕ್ಕೆ ಸರಿಹೊಂದುವ ವಸ್ತ್ರ ಗಳನ್ನು ತೊಡುವುದು ಫ್ಯಾಷನ್ ಆಗಬೇಕಿದೆ.
ಇಳಕಲ್ ಸೀರೆ ನೇಯ್ಗೆಯೇ ಒಂದು ಕಲೆ. ನೇಕಾರನ ಈ ಕಲೆಗೆ ಎಂದಿಗೂ ಇರಬೇಕಿದೆ ಬೆಲೆ.
