30.6 C
Bengaluru
Wednesday, March 15, 2023
spot_img

ಭಾರತದ ಚರಿತ್ರೆ ದಾಖಲಿಸಿದ ಚೀನಿ ಯಾತ್ರಿಕನ ಜೀವನಗಾಥೆ

ಹುಯೆನ್ ತ್ಸಾಂಗನ ಮಹಾಪಯಣ

-ಶಶಿಕಲಾ ಜೊತೆಪ್ಪನವರ್

ಚೀನಾ ಯಾತ್ರಿಕ ಹುಯೆನ್ ತ್ಸಾಂಗನ ಭಾರತ ಪ್ರವಾಸದ ಬಗ್ಗೆ ಪ್ರಾಥಮಿಕ ಶಾಲಾ ಪಠ್ಯಪುಸ್ತಕದಲ್ಲಿ ಓದಿ ಕೌತುಕ ಕಾಡಿದ ನೆನಪು ಎಲ್ಲರಿಗೂ ಇರಲಿಕ್ಕೆ ಸಾಧ್ಯ. ಏಳನೇ ಶತಮಾನ ಕಾಲಘಟ್ಟದ ಭಾರತದ ಇತಿಹಾಸವನ್ನು ದಾಖಲಿಸಿರುವ ಈ ಯಾತ್ರಿಕನ ಬಗ್ಗೆ ಹೆಚ್ಚು ತಿಳಿಯಲು ಕನ್ನಡದಲ್ಲಿ ಗ್ರಂಥ, ಪುಸ್ತಕ ಅಧ್ಯಯನ ಸಾಮಗ್ರಿ ಅಷ್ಟಾಗಿ ಲಭ್ಯವಾಗುವುದಿಲ್ಲ. ಇತರೆ ಭಾರತೀಯ ಭಾಷೆಗಳಲ್ಲೂ ಈತನ ಕುರಿತು ಸಾಹಿತ್ಯ ರಚನೆಯಾಗಿಲ್ಲ. ಅಮೆರಿಕದ ಚಿಕಾಗೋದಲ್ಲಿ ಮ್ಯಾನೇಜ್‌ಮೆಂಟ್ ತಜ್ಞರಾಗಿರುವ, ಮೂಲತಃ ಮೈಸೂರಿನವರಾದ ಬರಹಗಾರ ರವಿ ಹಂಜ್ ಅವರು ರಚಿಸಿರುವ `ಹುಯೆನ್ ತ್ಸಾಂಗನ ಮಹಾಪಯಣ’  ಈ ಕೊರತೆಯನ್ನು ನೀಗಿಸುತ್ತದೆ. ಕನ್ನಡದಲ್ಲಿ ಮೊದಲ ಬಾರಿಗೆ ಹುಯೆನ್ ತ್ಸಾಂಗ್ ಓದಲು ಸಿಕ್ಕಿದ್ದಾನೆ. ಆತನ ಭಾರತ ಯಾತ್ರೆಯ ಸಂಪೂರ್ಣ ವಿವರಗಳು ಹಾಗೂ ತಾಯ್ನಾಡಿಗೆ ಹಿಂದಿರುಗಿದ ನಂತರದ ಆತನ ಜೀವನ, ಚೀನಾದ ದೊರೆಗಳು ನೀಡಿದ ಸ್ಥಾನಮಾನ, ಭಾರತದ ನೆಲದಲ್ಲಿ ಬೌದ್ಧ ಧರ್ಮದ  ಆಳ ಜ್ಞಾನ, ಅಧ್ಯಯನ ಪಡೆದ ಆತ ಚೀನಿಯರಿಗೆ ನೀಡಿದ ಧರ್ಮಜ್ಞಾನ ಹಾಗೂ ಗ್ರಂಥ ರಚನೆ ಸೇರಿದಂತೆ ಎಲ್ಲ ಅಂಶಗಳ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ. ಈ ಅಮೂಲ್ಯ ಕೃತಿ ಚರಿತ್ರೆಯ ಆಕರವಾಗಿದೆ. ಈ ಪುಸ್ತಕ ಕುರಿತು ಶಶಿಕಲಾ ಜೊತೆಪ್ಪನವರ್ ಅವರು ಬರೆದಿರುವ ವಿಮರ್ಶಾತ್ಮಕ ಪರಿಚಯ ಲೇಖನ ಇಲ್ಲಿದೆ.

ಲಾಕ್‌ಡೌನ್ ಅವಧಿಯಲ್ಲಿ ರವಿ ಹಂಜ್‌ರವರ `ಹುಯೆನ್ ತ್ಸಾಂಗನ ಮಹಾಪಯಣ’ ಪುಸ್ತಕವನ್ನು ಓದುತ್ತಿದ್ದ ನನಗೆ ಈ ಕೃತಿ ಬಹುವಾಗಿ ಚಿಂತನೆಗೆ ಹಚ್ಚಿತು. ಮುನ್ನುಡಿಯಲ್ಲಿ ರಹಮತ್ ತರೀಕೆರೆ ಅವರು ಗುರುತಿಸಿರುವಂತೆ ತ್ಸಾಂಗನ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಕೃತಿ, ಅದೂ ಒಂದೇ ಬೈಠಕ್‌ನಲ್ಲಿ ಓದಿಸಿಕೊಂಡು ಹೋಗುವ ಪುಸ್ತಕವಿದು. ಭಾರತದ ಇತಿಹಾಸದ ಬಗೆಗಿನ ನಮ್ಮ ಕೌತುಕಗಳನ್ನು ಇದು ತಣಿಸುತ್ತದೆ. ಸಂಶೋಧನೆಯನ್ನು ಬೆರೆಸಿಯೂ, ಇತಿಹಾಸವನ್ನು ಕಟ್ಟಿಕೊಡುವ ಪ್ಯಾಂಟಸಿ ಬಗೆಯ ಲೇಖಕರ ಶೈಲಿ ವೇಗವಾಗಿ ಓದಿಸಿಕೊಂಡು ಹೋಗುತ್ತದೆ. ತ್ಸಾಂಗನ ಒಟ್ಟಿಗೆ ನಾವೂ ರೇಶಿಮೆಯ ಹಾದಿಯಲ್ಲಿ ಕ್ರಮಿಸುತ್ತಿದ್ದೇವೇನೋ ಅನಿಸುತ್ತದೆ.

ಜುಯೆನ್ ಜಾಂಗ ಎಂಬ ಚೀನಿ ನಾಮದ ತ್ಸಾಂಗ ನಮ್ಮ ಇತಿಹಾಸದ ಪಠ್ಯಗಳಲ್ಲಿ `ಭಾರತಕ್ಕೆ ಬಂದ ಒಬ್ಬ ಚೀನಿ ಪ್ರವಾಸಿ’ ಮಾತ್ರವಾಗಿ ಪರಿಚಿತನಾಗಿದ್ದಾನೆ. ಈ ಪುಸ್ತಕದ ಲೇಖಕರು ಹುಯೆನ್ ತ್ಸಾಂಗನ ವ್ಯಕ್ತಿತ್ವದ ಅಪರೂಪದ ಆಯಾಮಗಳನ್ನು ಪರಿಚಯಿಸಿದ್ದಾರೆ. ಚೀನಿಯರ ರೇಶಿಮೆ ಗೂಡಿನ ಗುಟ್ಟು ಹೆಣ್ಣಿನ ಮುಡಿಯಲ್ಲಿ ಕುಳಿತು ಎಲ್ಲೆಡೆ ಪಸರಿಸಿದಷ್ಟೇ ರೋಚಕವಾಗಿ ಸಂಗತಿಗಳು ಈ ಪುಸ್ತಕದ ಒಡಲಲ್ಲಿ ಕುಳಿತು ಬಂದಿವೆ. ಒಟ್ಟು 12 ಅಧ್ಯಾಯಗಳನ್ನು ಹೊಂದಿರುವ ಈ ಪುಸ್ತಕದಲ್ಲಿ ಕ್ರಿ.ಶ. 602 ರಿಂದ ಕ್ರಿ.ಶ. 664 ರವರೆಗೆ ಅಂದರೆ ತ್ಸಾಂಗನ ಜೀವಿತಾವಧಿಯ ಎಲ್ಲ ವಿವರಗಳೂ ಚಿತ್ರಿತವಾಗಿವೆ. `ಆಧುನಿಕ ಯುಗ ಕಂಡುಕೊಂಡ ಆತ್ಮಹತ್ಯಾ ಮಾರ್ಗಗಳಲ್ಲಿ ಪ್ರವಾಸವು ಪ್ರಧಾನವಾದದ್ದು.’ ಎನ್ನುವ ಡಾ. ಡಿ.ಆರ್. ನಾಗರಾಜ ಅವರ ಮಾತು ಪ್ರವಾಸವು ತ್ಸಾಂಗನ ಕಾಲದಲ್ಲೂ ಅಷ್ಟು ವ್ಯಾಪಕವಾಗಿ ಅಲ್ಲದಿದ್ದರೂ ಕನಿಷ್ಠ ಪಕ್ಷ ತ್ಸಾಂಗನಂತಹ ಸಾಹಸಿಗಳಲ್ಲಾದರೂ ಪ್ರಚಲಿತದಲ್ಲಿತ್ತು ಎಂಬುದು ಈ ಪುಸ್ತಕದಿಂದ ತಿಳಿದುಬರುತ್ತದೆ. ಆಧುನಿಕ ಜಗತ್ತಿನಲ್ಲಿ ಪ್ರವಾಸ ಒಂದು ಉದ್ಯಮವಾಗಿ ಬೆಳೆದಿದೆ. ಪ್ರವಾಸಕ್ಕೆ ವಿಭಿನ್ನ ಆಯಾಮಗಳಿವೆ. ಪ್ರತಿಯೊಂದು ದೇಶಗಳು ತಮ್ಮ ಭೌತಿಕ-ಅಭೌತಿಕ ಪರಂಪರೆಯ ಎಲ್ಲ ಮಜುಲುಗಳನ್ನು ಪ್ರದರ್ಶನದ ವಸ್ತುವಾಗಿ ಮಾರ್ಪಡಿಸಿ ಅದರಿಂದ ಆದಾಯವನ್ನು ನಿರೀಕ್ಷಿಸುತ್ತವೆ. ಆದರೆ ಬಹುತರವಾಗಿ ಪ್ರವಾಸ ಹಣವಿದ್ದವರು ಮೋಜು ಮಾಡಲು ಕಂಡುಕೊಂಡ ಹಾದಿಗಳಾಗಿರುತ್ತವೆ. ಶೈಕ್ಷಣಿಕ ಉದ್ದೇಶದ ಪ್ರವಾಸಗಳು ವಿಶ್ವವಿದ್ಯಾಲಯಗಳು ಪ್ರಾಯೋಜನೆಯಿಂದ ನಡೆಯುವ ವಿದ್ಯಮಾನಗಳಾಗಿ ಗ್ರಂಥಾಲಯದ ಪುಸ್ತಕಗಳ ನಡುವೆ ಹೂತುಹೋಗುವ ಸಂಭವವೇ ಹೆಚ್ಚು. ಅತ್ಯಾಧುನಿಕ ಚಿತ್ರೀಕರಣ ತಂತ್ರಜ್ಞಾನದ ಸೌಲಭ್ಯವಿರುವ ಈ ಕಾಲದಲ್ಲಿ ಕ್ಯಾಮರಾಗಳು ನಮ್ಮನ್ನು ತಾವಿರುವ ಜಾಗಕ್ಕೇ ವೀಕ್ಷಕರನ್ನು ಕರೆದುಕೊಂಡು ಹೋಗುತ್ತವೆ.

ಆದರೆ ಕ್ರಿ.ಶ. 6-7 ನೆಯ ಶತಮಾನದ ತ್ಸಾಂಗನ ಕಾಲದಲ್ಲಿ ಪ್ರವಾಸವು ಆತ್ಮಹತ್ಯೆಯ ಪರೋಕ್ಷ ವಿಧಾನವೇ ಆಗಿತ್ತು. ಅದರಲ್ಲೂ ಧರ್ಮಜಿಜ್ಞಾಸುವಾದ ಅವನ ಪಾಲಿಗೆ ಭಾರತದ ಯಾತ್ರೆಯು ಒಂದು ಜ್ಞಾನತೀರ್ಥ ಯಾತ್ರೆಯೇ ಆಗಿತ್ತು. ಭಾರತ ಯಾತ್ರೆಯ ನಂತರ ತರ್ಜುಮೆಕಾರನಾಗಿ ತ್ಸಾಂಗನೊಂದಿಗೆ ಕೆಲಸ ಮಾಡಿದ ಹುಯಿಲಿ ಎಂಬ ಬೌದ್ಧಭಿಕ್ಷು ತ್ಸಾಂಗನ ಈ ಕಥನವನ್ನು ದಾಖಲಿಸಿದ್ದಾನೆ. ಅಷ್ಟೇನೂ ಸ್ಥಿತಿವಂತವಲ್ಲದ ಧಾರ್ಮಿಕ ಕುಟುಂಬದಲ್ಲಿ ಜನಿಸಿದ ಬಾಲಕ ತ್ಸಾಂಗನಿಗೆ ಇದ್ದ ಬೌದ್ಧಭಿಕ್ಷುವಾಗಬೇಕೆಂಬ ಹಂಬಲದ ದಿನಗಳನ್ನು, ಅವನು ತನ್ನ ಹಂಬಲವನ್ನು ಸಾಕಾರಗೊಳಿಸಿಕೊಂಡು ತನ್ನ 20ನೆಯ ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆದು ಬೌದ್ಧಗ್ರಂಥಗಳು ಪರಿಶುದ್ಧ ಪಾಠವನ್ನು ಸಂಗ್ರಹಿಸಲು ಬುದ್ಧನ ಭೂಮಿಯಾದ ಭಾರತಕ್ಕೆ ಪ್ರವಾಸ ಮಾಡಬೇಕೆಂಬ ಮಹತ್ವಾಕಾಂಕ್ಷೆಯ ಯಾತ್ರೆಯನ್ನು ಪ್ರಾರಂಭಿಸಿದ ಕತೆಯನ್ನು ಹೃದ್ಯವಾಗಿ ವಿವರಿಸಲಾಗಿದೆ. ಬುದ್ಧನ ಪ್ರೇಮದ ನುಡಿಗಳನ್ನು, ಶಾಖಾನುಶಾಖೆಯಲ್ಲಿ ಬೆಳೆದಿದ್ದ ಬೌದ್ಧ ವಾಙ್ಮಯವನ್ನು ಪರಿಶುದ್ಧ ರೂಪದಲ್ಲಿ ತನ್ನ ನಾಡಿಗೆ ಉಣಬಡಿಸಬೇಕೆಂಬ ಹಂಬಲವೊಂದು ಅವನನ್ನು ಹೀಗೊಂದು ಬಂಡವಾಳವಿಲ್ಲದ, ಕನಿಷ್ಠ ತನ್ನ ಆಳರಸರ ಅಧಿಕೃತ ಅನುಮತಿಯೂ ಇಲ್ಲದ, ಕಳ್ಳನಂತೆ ಗಡಿಯನ್ನು ದಾಟುವ, ಪ್ರಯಾಸಕರ ಪ್ರವಾಸದ ಹುಂಬತನಕ್ಕೆ ಕೈಹಾಕುವಂತೆ ಮಾಡಿತು. ಒಬ್ಬ ಜೋತಿಷಿ ಹೇಳಿದಂತೆ ತ್ಸಾಂಗ ಸಣಕಲು ಕುದುರೆಯೊಂದನ್ನು ಏರಿ ಚೀನಾ ಗಡಿ ದಾಟಿ ಭಾರತದೆಡೆಗೆ ಅಂತೂ ಇಂತೂ ಪ್ರಯಾಣ ಬೆಳೆಸಿದನು. ಬೌದ್ಧ ಧರ್ಮದ ವೈಜ್ಞಾನಿಕ ಚಿಂತನೆಯ ಜೊತೆಗೆ ಸಮಕಾಲೀನ ಚೀನಿ ನಂಬಿಕೆಗಳಂತೆ ತ್ಸಾಂಗ ತನ್ನ ಕನಸುಗಳನ್ನು, ಭವಿಷ್ಯಕಾರರನ್ನು, ಆತ್ಮ, ಪುನರ್ಜನ್ಮ, ದೆವ್ವ-ಪಿಶಾಚಿಗಳನ್ನು ನಂಬುತ್ತಿದ್ದುದು ಕಂಡುಬರುತ್ತದೆ. ಇಡೀ ಯಾತ್ರೆಯ ಉದ್ದೇಶ ಬೌದ್ಧಧರ್ಮ ಅಧ್ಯಯನವಾಗಿತ್ತು. ಅದರಲ್ಲೂ ವಿಶೇಷವಾಗಿ ಅಸಂಗ-ವಸುಬಂಧು ಪ್ರತಿಪಾದಿಸಿದ `ಯೋಗಾಚಾರದ’ ಶುದ್ಧರೂಪವನ್ನು ಸಂಗ್ರಹಿಸುವದಾಗಿತ್ತು. ಚಾಲ್ತಿಯಲ್ಲಿದ್ದ ಚೀನಿ ಪಾಠಗಳು ಪ್ರತಿಪಾದಿಸಿದ `ಯೋಗಾಚಾರದ’ ಶುದ್ಧರೂಪವನ್ನು ಸಂಗ್ರಹಿಸುವದಾಗಿತ್ತು. ಚಾಲ್ತಿಯಲ್ಲಿಯಲ್ಲಿದ್ದ ಚೀನಿ ಪಾಠಗಳು ಅವನಿಗೆ ತೃಪ್ತಿ ತಂದಿರಲಿಲ್ಲ. ಇಲ್ಲೊಂದು ಮಜಕೂರಿನ ವಿಷಯ ನೋಡಿ ! `ಬಾಹ್ಯ ಪ್ರಪಂಚವೆಂಬುದು ಇಲ್ಲ ಈ ಲೌಕಿಕ ಪ್ರಪಂಚವೆಲ್ಲವೂ ನಮ್ಮ ನಮ್ಮ ಜಾಗೃತ ಮನಸ್ಸಿನ ಅರಿವಿನ ಕಲ್ಪನೆ!’ ಎಂಬುದು ಯೋಗಾಚಾರದ ತಿರುಳು. ಅದರಲ್ಲಿ ಆಸಕ್ತನಾದ ತ್ಸಾಂಗ ಬಾಹ್ಯಪ್ರಪಂಚವನ್ನು ಸುತ್ತಿ ಶೋಧನೆಗೆ ತೊಡಗುತ್ತಾನೆ.

ಹುಯೆನ್ ತ್ಸಾಂಗ್ ವಾಸಿಸಿದ್ದ ಚೀನಾದ ಹೆನಾನ್ ಪ್ರಾಂತ್ಯದ ಲೂಯಂಗ್ ಬಳಿಯ ಚೆನ್ ಹೆ ಗ್ರಾಮದ ಮನೆ.

ತ್ಸಾಂಗ ತನ್ನ ಇಡೀ ಆಯಸ್ಸನ್ನು ಸನ್ಯಾಸಿಯಾಗಿ ಕಳೆದನಲ್ಲದೆ ಅನೇಕ ಪದವಿಗಳನ್ನು ಸವಿನಯದಿಂದ ತಿರಸ್ಕರಿಸಿ ನಿಜ ಅರ್ಥದಲ್ಲಿ ಬೌದ್ಧ ಭಿಕ್ಷುವಾಗಿಯೇ ಜೀವನ ಕಳೆದನು. ಬುದ್ಧನು ನಡೆದಾಡಿದ ನೆಲದಲ್ಲೆಲ್ಲ ಅಡ್ಡಾಡಿ ಅವನ ಚೇತನದಲ್ಲಿ ಒಂದಾಗಿ ಧನ್ಯತಾಭಾವ ತಾಳಿದನು. ಬೋಧಿವೃಕ್ಷದ ಕೆಳಗೆ ನಿಂತು ತಾನು ಬುದ್ಧನ ಕಾಲದಲ್ಲಿ ಹುಟ್ಟದಿರಲು ತಾನು ಮಾಡಿದ ಪಾಪಕರ್ಮಗಳೆ ಕಾರಣವಾಗಿರಬೇಕು ಎಂದು ಅವನು ಕಣ್ಣೀರಿಡುವುದು, ನಗರಹಾರದ ಗವಿಯಲ್ಲಿ ಬುದ್ಧನ ಬಣ್ಣದ ನೆರಳನ್ನು ಹಟದಿಂದ ಧ್ಯಾನಿಸಿ ಕಾಣುವುದು, ಮಕ್ಕಳಂತೆ ಬುದ್ಧನ ತರತರದ ಭಂಗಿಯ ವಿಗ್ರಹಗಳನ್ನು ಸಂಗ್ರಹಿಸುವುದು, ಬುದ್ಧನು ನೀರು ಕುಡಿದ ಬಾವಿಯನ್ನು, ಪವಾಡಗಳನ್ನು ಮಾಡಿದ ವಿವಿಧ ಸ್ಥಳಗಳನ್ನು ಸಂದರ್ಶಿಸುವುದು, ಅರಮನೆಯ ಅವಶೇಷಗಳಲ್ಲಿ ಬುದ್ಧನು ಜನಿಸಿದ ಸ್ಥಳವನ್ನು ಭಕ್ತಿಯಿಂದ ನೋಡುವುದು ಇವೆಲ್ಲ ಪ್ರಸಂಗಗಳು ಓದುಗರಲ್ಲಿ ಪುಳಕ ಹುಟ್ಟಿಸುತ್ತವೆ. ಹೆಜ್ಜೆಹೆಜ್ಜೆಗೂ ಕನಸುಗಳ ಪ್ರತಿಮೆಗಳು ನೀಡುವ ಸೂಚನೆಗಳಂತೆ ಆಶಾವಾದಿಯಾಗಿ ತ್ಸಾಂಗ ತನ್ನ ಪ್ರಯಾಣವನ್ನು ಮುಂದುವರಿಸುವುದು ಬಾಹ್ಯ ಪ್ರಪಂಚ ಹಾಗೂ ಅವನ ಅಂತರಂಗದ ನಡುವಿನ ಸಾಮರಸ್ಯಕ್ಕೆ ಹಿಡಿದ ಕನ್ನಡಿಯಂತಿದೆ.

ಭಾರತೀಯರ ಬಗ್ಗೆ ತ್ಸಾಂಗನ ವಿಚಾರಗಳನ್ನು ಲೇಖಕರು ತತ್ವನಿಷ್ಠವಾಗಿ ನೋಡದೆ ವಿಜೃಂಭಿಸಿದ್ದಾರೆ ಎನಿಸುತ್ತದೆ. ಅವನು ಭಾರತೀಯರ ಬಗ್ಗೆ ಹೇಳಿರುವ ಋಣಾತ್ಮಕ ಗುಣಗಳನ್ನು ಅವರು ಪುಷ್ಟೀಕರಿಸಿದ್ದಾರೆ. ಇದಕ್ಕೆ ಅವರು ಅನಿವಾಸಿ ಭಾರತೀಯರಾಗಿ ತಾವು ವಾಸ ಮಾಡುವ ದೇಶದ ವಾತಾವರಣವನ್ನು ಇಲ್ಲಿಯೂ ನೋಡಬಯಸಿದಾಗ ಈ ರೀತಿಯ ಹೇವರಿಕೆಗಳು ಸಹಜ. ವಾಸ್ತವವಾಗಿ ಒಂದು ಪ್ರದೇಶದ ಜನರನ್ನು ಇವರು ಹೀಗೆಯೆ ಎಂದು ಸಾಮಾನ್ಯೀಕರಿಸುವುದೇ ಒಂದು ರೀತಿಯಲ್ಲಿ ಜನಗಣತಿಯ ಮಾದರಿಯ ಅಪರಿಪೂರ್ಣ ಮಾಪನ. ಒಂದು ಅಪರಿಚಿತ ಪ್ರದೇಶದಲ್ಲಿ ವ್ಯಕ್ತಿಯೊಬ್ಬನಿಗೆ ಸಹಜ ಅನುಮಾನ, ಅಪನಂಬಿಕೆಗಳು ಇದ್ದೇ ಇರುತ್ತವೆ. ತನ್ನ ಮೂಗಿನ ನೇರಕ್ಕೆ ಎಲ್ಲ ಸಂಗತಿಗಳನ್ನು ಬಯಸುವುದು ಮನುಷ್ಯ ಸ್ವಭಾವವಾಗಿರುವುದರಿಂದ ತ್ಸಾಂಗನೂ ಇದಕ್ಕೆ ಹೊರತಾಗಿಲ್ಲ ಎನ್ನಬಹುದು. ವೈರಿರಾಷ್ಟ್ರ ಎಂದರೆ ಪಾಕಿಸ್ತಾನದ ಪ್ರಜೆ ಕೂಡ ವೈರಿ ಎಂದರೆ ಭಾರತವನ್ನೇ ನೆನೆಯುತ್ತಾನೆ. ಇಂತಹ ಉದಾಹರಣೆಗಳು ಜಗತ್ತಿನ ತುಂಬ ಸಿಗುತ್ತವೆ. ದೇಶ ಎಂಬ ಪರಿಕಲ್ಪನಾತ್ಮಕ ಪ್ರದೇಶದಲ್ಲಿ ಎಲ್ಲರೂ ನನ್ನವರೆಂದು ಅಂದುಕೊಂಡು ಮನುಷ್ಯ ಬದುಕಿದ್ದರೆ ದೇಶದ ಒಳಗಿನ ಅಪರಾಧದ ಪ್ರಮಾಣ ಇಷ್ಟು ಎತ್ತರದಲ್ಲಿ ಏಕಿರಬೇಕಿತ್ತು? ತ್ಸಾಂಗ ಕೂಡ ಬೌದ್ಧಧರ್ಮ ಹಸಿರಾಗಿರುವ ಪ್ರದೇಶಗಳನ್ನು ದುಪ್ಪಟ್ಟು ಹುಮ್ಮಸ್ಸಿನಿಂದ ವರ್ಣಿಸಿರುವುದಕ್ಕೂ ಎಷ್ಟೇ ದೊಡ್ಡ ವಿದ್ವಾಂಸನಾದರೂ ಅವನು ಕೂಡ ಮನುಷ್ಯ ಸ್ವಭಾವವನ್ನು ಮೀರಿದವನಲ್ಲ ಎಂಬುದು ಕಾರಣ. ಅದಲ್ಲದೆ ಭಾರತದ ನಳಂದದಲ್ಲಿ ತನ್ನ ಅಧ್ಯಯನ ಮುಗಿಸಿ ಮರಳಿ ತಾಯ್ನಾಡಿಗೆ ಹೋಗುವ ಆತುರವನ್ನು ತ್ಸಾಂಗ ತೋರಿದಾಗ “ಜ್ಞಾನ, ಪಾಂಡಿತ್ಯವಿಲ್ಲದ, ಅಧರ್ಮಿಗಳ, ಶುದ್ಧ ಒರಟು, ಕಪಟ ಜನಗಳ ಹೀನಾಯ ದೇಶ ಚೀನಾ. ಅದು ನಿನಗೆ ತಕ್ಕುದಲ್ಲ. ಇಲ್ಲಿಯೇ ಬುದ್ಧನ ನಾಡಿನಲ್ಲಿದ್ದು ಸೇವೆಯಲ್ಲಿ ತೊಡಗು’’ ಎಂದು ಅವನ ಸಹಪಾಠಿಗಳು ಹೇಳುತ್ತಾರೆಂದು ಲೇಖಕರು ಉಲ್ಲೇಖಿಸಿದ್ದಾರೆ. ಇಲ್ಲಿ ಮಾತ್ರ ಲೇಖಕರು `ಇಲ್ಲಿಯ ಜನರಿಗೆ ಚೀನಾದ ಬಗ್ಗೆ ಅರಿವಿರಲಿಲ್ಲ’ ಎಂದಿರುವುದನ್ನು ನೋಡಿ ನಗು ಬರುತ್ತದೆ. ವಿವಿಧ ದೇಶಗಳನ್ನು ಕುರಿತ ಪ್ರೇಮ, ಮೋಹ ಮತ್ತದರೊಳಗಿನ ಗುಪ್ತ ಪ್ರೇಮ-ದ್ವೇಷಗಳ ಬಗ್ಗೆ ಎಷ್ಟು ವಿಚಿತ್ರವಲ್ಲವೆ! ಜಾತಿ, ಧರ್ಮ, ದೇಶ, ಭಾಷೆ ಹೀಗೆ ಮನುಷ್ಯನನ್ನು ಮನುಷ್ಯನನ್ನಾಗಿ ನೋಡಲು ಮನುಷ್ಯನಿಗೆ ಏನೆಲ್ಲ ತೊಡಕುಗಳಿವೆಯಲ್ಲವೆ!

ಭಾರತದ ದಕ್ಷಿಣ ಭಾಗವನ್ನು ಸಂದರ್ಶಿಸಿ ವೀರಪುಲಿಕೇಶಿಯ ಆಡಳಿತವನ್ನು ವರ್ಣಿಸಿದ್ದನ್ನು ನಾವು ಈಗಾಗಲೇ ಇತಿಹಾಸದಲ್ಲಿ ಓದಿದ್ದೇವೆ. ಅಲ್ಲಿಂದ ಸೌರಾಷ್ಟ್ರದ ಮೂಲಕ ತ್ಸಾಂಗ ಕಾಥಿಯಾವಾಡದ ಹತ್ತಿರದ ಮುಲ್ತಾನಿನ ಸೂರ್ಯಮಂದಿರದ ಭವ್ಯತೆಯನ್ನು ವರ್ಣಿಸಿದ್ದಾನೆ. ಐದು ಭಾರತಗಳ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯ) ಆಳರಸರು ಈ ಸೂರ್ಯಮಂದಿರಕ್ಕೆ ಪ್ರತಿ ವರ್ಷ ಹರಕೆ ಸಲ್ಲಿಸಿ ಬಲಿಯನ್ನು ಕೊಡುತ್ತಿದ್ದುದು ಭಾರತದಲ್ಲಿ ಸೂರ್ಯೋಪಾಸನೆ ಕೂಡ ಇತ್ತೆಂದು ಸೂಚಿಸುತ್ತದೆ. ಮತ್ತೆ ನಳಂದಾಕ್ಕೆ ಬಂದು ಜಯಸೇನನ ಶಿಷ್ಯನಾಗಿ 2 ವರ್ಷ ಅಭ್ಯಾಸ ಮುಂದುವರಿಸುತ್ತಾನೆ. ಮುಂದೆ ತ್ಸಾಂಗನಿಗೆ ಅಸ್ಸಾಂ ರಾಜಕುಮಾರ ಹಾಗೂ ಹರ್ಷ ಚಕ್ರವರ್ತಿಯ ಆತಿಥ್ಯ ದೊರಕುತ್ತದೆ. ಹರ್ಷನು ತ್ಸಾಂಗನ ಶಾಸ್ತ್ರದ ವಿನಾಶಗಳು ಪ್ರಬಂಧಧ ಬಗ್ಗೆ ಹೆಚ್ಚು ಉತ್ಸುಕನಾಗಿದ್ದನಲ್ಲದೆ ಗಂಗಾತೀರದಲ್ಲಿ ಧರ್ಮಚರ್ಚೆ ಏರ್ಪಡಿಸಿ, ತ್ಸಾಂಗನು ಅಲ್ಲಿ ಮಂಡಿಸಿದ ವಿಚಾರಗಳಿಂದ ಸಂಮ್ಮೋಹಿತನಾಗಿ ಇವನನ್ನೇ ವಿಜಯಿಯೆಂದು ಘೋಷಿಸುತ್ತಾನೆ. ಈ ಘಟನೆ ಹೊಗೆಯಂತೆ ಹಬ್ಬಿ ಶೈವ, ಜೈನ ಪಂಥಗಳ ಪಂಡಿತರಲ್ಲಿ ಅಸಮಾಧಾನವನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲದೆ ಕ್ರಿ.ಶ. 642ರಲ್ಲಿ ಇದಕ್ಕೆ ಹೊಂದಿಕೊಂಡು ನಡೆದ ಧಾರ್ಮಿಕ ಪಂದ್ಯಾವಳಿಯು ಧಾರ್ಮಿಕ ಅಸಹಿಷ್ಣುತೆಗೆ ಸಾಕ್ಷಿಯಾಗುತ್ತದೆ. 5 ನೆಯ ದಿನಕ್ಕೆ ಚರ್ಚೆ ಹಿಂಸೆಗೆ ತಿರುಗಿ ಹರ್ಷನ, ತ್ಸಾಂಗನ ಕೊಲೆ ಯತ್ನಗಳು ನಡೆದದ್ದು ಈ ಘಟನೆ ಎಷ್ಟೊಂದು ಪ್ರಮುಖವಾಗಿದ್ದರು ಭಾರತದ ಚರಿತ್ರೆಯಲ್ಲಿ ಇದನ್ನು ಗೌಣವಾಗಿಸಿದ್ದು ಕೂಡ ಅಸಹಿಷ್ಣುತೆಯ ಉದಾಹರಣೆಯಾಗಿದೆ.

ಭಾರತದ ಭೂಮಿಯಲ್ಲಿ ಏಷ್ಯಾದ ಬೆಳಕು ಎಂದು ವರ್ಣಿತನಾದ ಬುದ್ಧನ ತತ್ವಗಳನ್ನು ಅದೇ ನೆಲದಲ್ಲಿ ಸ್ವೀಕರಿಸಲಾಗದ್ದು ಒಂದು ದುರಂತವೇ ಸರಿ. ಹರ್ಷ ಎಲ್ಲ ಧರ್ಮಗಳನ್ನು ಪಾಲಿಸಿದ್ದು ಸಮಾನ ಗೌರವಗಳನ್ನು ನೀಡಿದರೂ ಇಂದಿನ ರಾಜಕಾರಣಿಗಳಂತೆ ಅವನಿಗೂ ಕೂಡ ಧಾರ್ಮಿಕ ಅಲ್ಪ-ಬಹುಸಂಖ್ಯಾತ ಅಂಕಿಅಂಶಗಳನ್ನು ಕಡೆಗಣಿಸಿದ್ದಕ್ಕೆ, ಬುದ್ಧನ ವೈಜ್ಞಾನಿಕ ತತ್ವಗಳಿಗೆ ಮನಸೋತದ್ದು ದುಬಾರಿ ಬೆಲೆಯನ್ನು ತೆರುವಂತೆ ಬೌದ್ಧಭಿಕ್ಷುಗಳ ಕೊಲೆ, ಧಾರ್ಮಿಕ ನೆಲೆಗಳ ಆಕ್ರಮಣ ನಡೆದಿದ್ದು ಸ್ವತಃ ತ್ಸಾಂಗನಿಗೆ ಪಶ್ಚಾತ್ತಾಪ ಮೂಡಿ ಅವನು ಎಲ್ಲ ಸ್ಪರ್ಧಿಗಳಿಗೆ  ಕ್ಷಮೆ ಕೋರಿ ಪತ್ರ ಬರೆಯಬೇಕಾಗುತ್ತದೆ. ಪಂದ್ಯಾವಳಿಯಲ್ಲಿ ತ್ಸಾಂಗ ವಿಜಯಿಯಾದರೂ ಇದು ಹರ್ಷ ಹಾಗೂ ತ್ಸಾಂಗನಿಗೆ ಹರ್ಷದಾಯಕವಾಗುವುದಿಲ್ಲ. ಇಲ್ಲಿಂದ ಮುಂದೆ ಹರ್ಷನ ಅವಸಾನ ಆರಂಭವಾಗುವುದೆಂಬ ಸೂಚನೆ ದೊರೆತು ತ್ಸಾಂಗ ಮರಳಿ ಚೀನಾ ಪ್ರಯಾಣ ಆರಂಭಿಸುತ್ತಾನೆ. ಭಾರತದಲ್ಲಿ ಸಂಗ್ರಹಿಸಿದ ಅಪರೂಪದ ವಿಗ್ರಹಗಳು, ಗ್ರಂಥಗಳು, ಕಾಣಿಕೆಗಳನ್ನು ಹೊತ್ತು ತ್ಸಾಂಗ ತಾಯ್ನಾಡಿಗೆ ಮರಳುತ್ತಾನೆ. ಕಳ್ಳನಂತೆ ಚೀನಾ ಗಡಿ ದಾಟಿ ಹೋಗಿದ್ದ ತ್ಸಾಂಗನಿಗೆ ಹಚ್ಚಡ ಹಾಸಿ ಸ್ವಾಗತ ನೀಡಲಾಗುತ್ತದೆ. ತ್ಸಾಂಗ ಬಹು ಮುತ್ಸದ್ದಿತನದಿಂದ ಚಕ್ರವರ್ತಿ ಟೈಜಾಂಗ್ ಮನಸ್ಸನ್ನು ಗೆಲ್ಲುತ್ತಾನೆ. ಚಕ್ರವರ್ತಿಯು ಅವನಿಗೆ ಕೊಡಬಯಸಿದ ಅಧಿಕಾರಗಳನ್ನು ವಿನಯದಿಂದ ನಿರಾಕರಿಸಿ `ಪಶ್ಚಿಮ ದೇಶಗಳ ದಸ್ತಾವೇಜು’ ಪುಸ್ತಕದ ಬರವಣಿಗೆ, ಭಾರತದಿಂದ ಸಂಗ್ರಹಿಸಿ ತಂದ ಬೌದ್ಧ ಗ್ರಂಗಳ ತರ್ಜುಮೆ ಕಾರ್ಯದಲ್ಲಿ ತೊಡಗುತ್ತಾನೆ. ಈ ಕಾರ್ಯದಲ್ಲಿ ಅವನಿಗೆ ನೆರವಾಗಲು ರಾಜನಿಂದ ಆಯ್ದ 12 ಜನ ಬೌದ್ಧ ಭಿಕ್ಷುಗಳು, 6 ಜನ ವ್ಯಾಕರಣ ಪಂಡಿತರು, ಲಿಪಿಕಾರರು ಹಾಗೂ ಪರಿಚಾರಕರ ಸೇವೆ ದೊರೆಯುತ್ತದೆ. ತ್ಸಾಂಗನ ಜೀವನಚರಿತ್ರೆಯನ್ನು ಬರೆದ ಹುಯಿಲಿಯು ಆ 12 ಜನ ಬೌದ್ಧಭಿಕ್ಷುಗಳಲ್ಲಿ ಒಬ್ಬನಾಗಿರುತ್ತಾನೆ.

ಹುಯೆನ್ ತ್ಯಾಂಗ್ ಯಾತ್ರೆ ಕೈಗೊಂಡ ಭಾರತ ಮತ್ತು ಈಗಿ‌ನ ಬಾಂಗ್ಲಾ ಪ್ರದೇಶಗಳ ನಕ್ಷೆ.

ಕ್ರಿ.ಶ. 649ರಲ್ಲಿ ತನ್ನ 46 ನೆಯ ವಯಸ್ಸಿನಲ್ಲಿ ಚಕ್ರವರ್ತಿ ಟೈಜಾಂಗ ಅಸುನೀಗಿದಾಗ ಮುಂದೆ ಅಧಿಕಾರಕ್ಕೆ ಬಂದ ಅವನ ಮಗನಿಗೆ ತ್ಸಾಂಗನ ಬಗ್ಗೆ ಗೌರವವಿದ್ದರೂ ಅವನು ಕನ್‌ಫ್ಯೂಸಿಯಸ್ ಧರ್ಮಪರಂಪರೆಗೆ ಹೆಚ್ಚಿಗೆ ಪ್ರಾಧಾನ್ಯ ನೀಡುತ್ತಾನೆ. ಎಲ್ಲ ಬೌದ್ಧ ಜ್ಞಾನ ಗ್ರಂಥಗಳನ್ನು ಸಂಗ್ರಹಿಸಿಡಲು ಒಂದು ಭವ್ಯ ಪಗೋಡವನ್ನು ನಿರ್ಮಿಸುವ ಕೆಲಸವನ್ನು ತ್ಸಾಂಗನಿಗಾಗಿ ಮಾಡುತ್ತಾನೆ. ಈ ನಡುವೆ ಏಕಾಏಕಿ ತ್ಸಾಂಗನಿಗೆ ತನ್ನ ಹುಟ್ಟೂರಿನ, ತಂದೆ-ತಾಯಿಗಳ ನೆನಪಾಗುತ್ತದೆ. ಮಹತ್ವಾಕಾಂಕ್ಷೆಯ ಭರದಲ್ಲಿ ತಂದೆ-ತಾಯಿಯರಿಗೆ ಅಂತ್ಯ ಕಾಲದಲ್ಲಿ ತಾನು ಒದಗಲಿಲ್ಲ ಎಂಬುದು ಅವನ ದುಃಖಕ್ಕೆ ಕಾರಣವಾಗಿರುತ್ತದೆ. ತಾನೇ ಅವರ ಸಮಾಧಿಗಳನ್ನು ಸ್ವಚ್ಛಗೊಳಿಸಿ, ಧರ್ಮಕಾರ್ಯಗಳನ್ನು ಕೈಗೊಳ್ಳುವುದು ಅವನು ಸನ್ಯಾಸಿಯಾದರೂ ಸಾಮಾನ್ಯನಂತೆ ಮೋಹಕ್ಕೊಳಗಾಗಿದ್ದು ವಿಚಿತ್ರವೆನಿಸುತ್ತದೆ. ಜ್ಞಾನಿಯಾದ ಅವನಿಗೆ ತನ್ನ ಮರಣ ಕಾಲ ಸನ್ನಿಹಿತವಾದದ್ದು ತಿಳಿಯುತ್ತದೆ. ದೇಹದಲ್ಲಿ ಚೈತನ್ಯವಿರುವವರೆಗೂ ತರ್ಜುಮೆ ಕಾರ್ಯದಲ್ಲಿ ತೊಡಗಿ ಅಂತ್ಯಕಾಲದಲ್ಲಿ ಹೃದಯಸೂತ್ರದ ಮಿಥ್ಯಾಶ್ಲೋಕವನ್ನು ಬಡಬಡಿಸುತ್ತ ಕ್ರಿ.ಶ. 664 ರಲ್ಲಿ ಜೀವ ಬಿಡುತ್ತಾನೆ. ಅವನ ಅಂತಿಮ ಇಚ್ಛೆಯಂತೆ ಬೆಟ್ಟದ ತಪ್ಪಲಿನ ಪ್ರಶಾಂತ ಮೂಲೆಯೊಂದರಲ್ಲಿ ಅವನ ಪಾರ್ಥೀವ ಶರೀರವನ್ನು ಹೂಳಲಾಗುತ್ತದೆ. ಮುಂದೆ ಅವಶೇಷಗಳನ್ನು ನಗರಕ್ಕೆ ಕೊಂಡೊಯ್ದು ಬೌದ್ಧವಿಹಾರದಲ್ಲಿ ಪ್ರತಿಷ್ಠಾಪಿಸಿ, ಸ್ಮಾರಕ ದೇವಾಲಯವನ್ನು ಕಟ್ಟಿಸಲಾಗುತ್ತದೆ ಎಂದು ಪುಸ್ತಕ ತಿಳಿಸುತ್ತದೆ.

ಕೃತಿಯ ಬರಹಗಾರ ರವಿ ಹಂಜ್ .

ಒಟ್ಟಿನಲ್ಲಿ ಭಾರತದ ಚರಿತ್ರೆಯನ್ನು ಸ್ಪಷ್ಟವಾಗಿ ಕಲ್ಪಿಸಿಕೊಳ್ಳಲು ಒಂದು ಅಮೂಲ್ಯ ಕೃತಿಯನ್ನು ರವಿ ಹಂಜ್ ಅವರು ಕನ್ನಡಕ್ಕೆ ನೀಡಿದ್ದಾರೆ. ಆದರೆ ಏಕಕಾಲದಲ್ಲಿ ಹುಯಿಲಿ ಹಾಗೂ ಬೇರೆ ಇಂಗ್ಲೀಷ್ ಲೇಖಕರ ಪುಸ್ತಕಗಳನ್ನು ಅವಲೋಕಿಸಿರುವ ಲೇಖಕರು ಬೇರೆ ಬೇರೆ ಲೇಖಕರ ವಿಚಾರಗಳನ್ನು ಕಲಸುಮೇಲೋಗರ ಮಾಡಿ ರೋಚಕವಾಗಿ ಹೇಳಿಬಿಡುತ್ತಾರೆ. ತ್ಸಾಂಗನ ನಿರಾಸಕ್ತಿಯೋ ಅಥವಾ ಲೇಖಕರ ಉದಾಸೀನವೋ ಅವನ ಮಹಾಪಯಣದಲ್ಲಿ ಬರುವ ಬೆರಳೆಣಿಕೆಯ ರಾಜರ ಹೆಸರುಗಳನ್ನು ಬಿಟ್ಟು ಉಳಿದವರೆಲ್ಲ ಅನಾಮಿಕರಾಗಿಬಿಟ್ಟಿದ್ದಾರೆ. ಇದು ಇತಿಹಾಸದ ಪಠ್ಯವೆಂದು  ನಾವು ಗಂಭೀರವಾಗಿ ಓದುತ್ತಿರಬೇಕಾದರೆ ಲೇಖಕರಿಗೆ ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ರೋಚಕವಾಗಿ ಉಣಬಡಿಸಬೇಕೆಂಬ ಕಡೆಯೇ ಹೆಚ್ಚು ಉತ್ಸಾಹ ಇದ್ದಂತೆ ತೋರುತ್ತದೆ. ಅಡಿಟಿಪ್ಪಣಿಗಳ ಶಿಸ್ತಂತೂ ಕಾಣಸಿಗುವುದೇ ಇಲ್ಲ. ಹೀಗಾಗಿ ಈ ಪುಸ್ತಕವನ್ನು ತ್ಸಾಂಗನ ಸಾಹಸಗಳನ್ನು ಆಸ್ವಾದಿಸುತ್ತ ಓದುಗ ತೃಪ್ತನಾಗಬೇಕಾಗುತ್ತದೆ. ತ್ಸಾಂಗನ ಸಾಹಸಕ್ಕೆ ಮೆಚ್ಚುಗೆಯನ್ನು ಇಟ್ಟುಕೊಂಡಿರುವ ಲೇಖಕರು ಇತಿಹಾಸಕಾರನ ನಿಷ್ಪಕ್ಷ ಧೋರಣೆಯನ್ನು ಕಡೆಗಣಿಸಿ ಅವನ ಅಭಿಪ್ರಾಯಗಳನ್ನು ಭಾವಾವೇಶಕ್ಕೊಳಗಾದವರಂತೆ ಪುಷ್ಟೀಕರಿಸುತ್ತ ಹೋಗುತ್ತಾರೆ. ಈ ಕೃತಿಯು ಅನುವಾದ, ಸಂಶೋಧನೆ, ಪ್ರವಾಸ ಕಥನಗಳ ಮಿಶ್ರಣವಾಗಿ ಮೂಡಿಬಂದಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles