-ಶೌರ್ಯ ಡೆಸ್ಕ್
ಮನೆಯಲ್ಲಿ ನೈಸರ್ಗಿಕ ಪದಾರ್ಥಗಳನ್ನು ಬಳಿಸಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಹೇಗೆ? ಕೆಳಗೆ ಓದಿ.

ತಲೆಹೊಟ್ಟಿನ ಸಮಸ್ಯೆ ಯಾರಿಗೇ ಆದರೂ ಕಿರಿಕಿರಿ ತರುತ್ತದೆ. ಕೆಲವರು ಪರಿಹಾರ ಕಾಣದೇ ಬೇಸತ್ತಿರುತ್ತಾರೆ. ಇದಕ್ಕೆ ಮನೆಯಲ್ಲೇ ಮದ್ದುಗಳಿವೆ. ತಲೆಹೊಟ್ಟನ್ನು ನಿವಾರಿಸಿಕೊಳ್ಳುವುದಕ್ಕಾಗಿ ಶ್ಯಾಂಪೂಗಳನ್ನು ಬಳಸಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು ಅನ್ನುವವರು ಇದ್ದಾರೆ. ಇಂತವರಿಗೆ ಈ ಲೇಖನ.
ಮನೆಯಲ್ಲಿ ನೈಸರ್ಗಿಕ ಪದಾರ್ಥಗಳನ್ನು ಬಳಿಸಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಹೇಗೆ? ಕೆಳಗೆ ಓದಿ.
1. ಅಲೋವೆರಾ: ಅಲೋವೆರಾ (Aloevera) ತಲೆಯನ್ನು ತಂಪಾಗಿಡುವುದು ಮಾತ್ರವಲ್ಲದೆ ನೆತ್ತಿಯಲ್ಲಿನ ಹೊಟ್ಟನ್ನು ಹೊರಹಾಕುತ್ತದೆ. ಅಲೋವೆರಾದಿಂದ ತೆಗೆದ ಜೆಲ್ಲನ್ನು ನೆತ್ತಿಗೆ ಹಚ್ಚಿಕೊಳ್ಳಿ. ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಲೆ ತೊಳೆದುಕೊಳ್ಳಿ.
2. ಶುದ್ಧ ತೆಂಗಿನ ಎಣ್ಣೆ: ಪರಿಶುದ್ಧ ತೆಂಗಿನೆಣ್ಣೆ ( Coconut oil) ತಲೆಹೊಟ್ಟಿಗೆ ರಾಮಬಾಣ. ತೆಂಗಿನ ಎಣ್ಣೆ ಯಲ್ಲಿರುವ ಉತ್ಕರ್ಷಣ ನಿರೋಧಕಗಳು ತಲೆಹೊಟ್ಟು (Dandruff) ಸಮಸ್ಯೆಯನ್ನು ನಿವಾರಿಸುತ್ತವೆ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗೆ ತೆಂಗಿನ ಎಣ್ಣೆಯನ್ನು ಕಾಯಿಸಿ ತಲೆಗೆ ಹಚ್ಚಿಕೊಂಡು ಮಲಗಿ, ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡುವುದರಿಂದ ಹೊಟ್ಟು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆಯನ್ನ ನಿವಾರಿಸಿಕೊಳ್ಳಬಹುದು. ಆದರೆ ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಬ್ರಾಂಡ್ ಎಣ್ಣೆಗಿಂತ ನಾವೇ ಕೊಬ್ಬರಿಯನ್ನು ಗಾಣದಲ್ಲಿ ಆರೆಸಿದ ಸಾವಯವ ಎಣ್ಣೆ ಶ್ರೇಷ್ಠ. (Organic Coconut oil) ಈಗಂತೂ ನಗರ ಪಟ್ಟಣಗಳಲ್ಲೂ ಹೊಸ ಯಂತ್ರಗಾಣಗಳು ಇರುವುದರಿಂದ ಅಂತಹ ಎಣ್ಣೆ ತಯಾರಿಸಿ ಬಳಸಿದರೆ ತಲೆಹೊಟ್ಟು ಸಂಪೂರ್ಣ ನಿವಾರಣೆ ಸಾಧ್ಯ.

3. ಬೇವು ಮತ್ತು ಮೊಸರು : ಬೇವಿನ ಎಲೆಯಲ್ಲಿ ಆಂಟಿ ಫಂಗಲ್ ಗುಣಲಕ್ಷಣ ಇರುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಬೇವಿನ ಎಲೆಯನ್ನು ತೆಗೆದುಕೊಂಡು ರುಬ್ಬಿ ಇದಕ್ಕೆ ಒಂದು ಕಪ್ ಮೊಸರು ಸೇರಿಸಿನಂತರ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳಿ.
4. ಬೆಳ್ಳುಳ್ಳಿ: ತಲೆಹೊಟ್ಟು ನಿವಾರಣೆಗೆ ಅಡುಗೆಮನೆಯ ಔಷಧಿ ಬೆಳ್ಳುಳ್ಳಿ (Garlic) ಯನ್ನು ಸಹ ಬಳಸಬಹುದು. ಮೊದಲಿಗೆ, ಒಂದು ಅಥವಾ ಎರಡು ಬೆಳ್ಳುಳ್ಳಿಗಳನ್ನು ಪುಡಿಮಾಡಿ ನಂತರ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಕೆಲ ಹೊತ್ತಿನ ಬಳಿಕ ತಲೆ ಸ್ನಾನ ಮಾಡಿದರೆ ತಲೆಹೊಟ್ಟು ತಹಬದಿಗೆ ಬರುತ್ತದೆ.

5 ಮೆಂತ್ಯೆ ಬೀಜ: ಮೆಂತ್ಯೆ ಬೀಜವನ್ನು ಅರೆದು ಪೇಸ್ಟ್ ಮಾಡಿ ತಲೆಕೂದಲಿಗೆ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುವುದು. ಕೊಬ್ಬರಿಯೆಣ್ಣೆಯಲ್ಲಿ ಮೆಂತೆಯ ಬೀಜಗಳನ್ನು ನೆನೆಯಿಸಿ ಅದನ್ನು ತಲೆಗೆ ಬಳಸಿದರೆ ಅದರ ಔಷಧೀಯ ಗುಣದಿಂದ ತಲೆಗೆ ತಂಪು ಕೊಡುವುದರ ಜೊತೆಗೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ರಾಮಬಾಣವಾಗಿದೆ.
6. ಶುಂಠಿ ಮತ್ತು ಆಲಿವ್ ಎಣ್ಣೆ: ಶುಂಠಿಯನ್ನು ಆಲಿವ್ ಎಣ್ಣೆಗೆ ಸೇರಿಸಿ ಬಿಸಿ ಮಾಡಿ ಸ್ನಾನಕ್ಕೆ ಹೋಗುವ ಕೆಲವು ನಿಮಿಷಗಳ ಮುನ್ನ ತಲೆಗೆ ಹಚ್ಚಿ ಮಸಾಜ್ ಮಾಡಿಕೊಂಡು 5 ನಿಮಿಷದ ನಂತರ ಸ್ನಾನ ಮಾಡಿದರೆ ಬೇಗನೆ ತಲೆಹೊಟ್ಟು ತೊಲಗುತ್ತದೆ.

7. ನಿಂಬೆ ಮತ್ತು ಮೊಸರು: ಮುಕ್ಕಾಲು ಕಪ್ ಮೊಸರಿಗೆ ನಿಂಬೆರಸ ಹಿಂಡಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ನಿಮ್ಮ ತಲೆ ಕೂದಲು ಶೈನಿಂಗ್ ಜೊತೆ ಹೊಟ್ಟಿನ ನಿವಾರಣೆ ಕೂಡಾ ಆಗುತ್ತದೆ. ಇದು ಅತಿ ಸುಲಭವಾದ ನೈಸರ್ಗಿಕ ವಿಧಾನವಾಗಿದೆ.
8. ಮೊಟ್ಟೆಯ ಬಿಳಿ ಭಾಗ: ಮೊಟ್ಟೆಯ ಬಿಳಿ ಭಾಗವನ್ನು ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಬೇಕು. ಇದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.