ನಿಜಕ್ಕೂ ನಡೆಯುತ್ತಾ ಸಿಂಹ-ಪ್ರಿಯಾ ಮದುವೆ?
-ಜಿ. ಅರುಣ್‌ಕುಮಾರ್
ಸಿನಿಮಾದವರು ಅಂತಲ್ಲ ಯಾರದ್ದೇ ಬದುಕಾಗಲಿ, ಹಿಂದೆ ಏನೇನು ನಡೆದಿತ್ತು ಅನ್ನೋದಕ್ಕಿಂತಾ ಮುಂದೆ ಹೇಗೆ ಬಾಳುತ್ತಾರೆ ಅನ್ನೋದು ಮುಖ್ಯ. ವಸಿಷ್ಠ ಕೂಡಾ ವಿದ್ಯಾವಂತ, ಪ್ರಜ್ಞಾವಂತ ನಟ. ಕನ್ನಡ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ಹೊಂದಿರುವವರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಇಲ್ಲಿ ತಾರಾ ಜೋಡಿಗಳು ಯಶಸ್ವಿಯಾಗಿ ಲೈಫ್ ಲೀಡ್ ಮಾಡುತ್ತಿರುವ ಉದಾಹರಣೆಯೂ ಇದೆ. ವಸಿಷ್ಠ ಮತ್ತು ಹರಿಪ್ರಿಯಾ ಕೂಡಾ ಅದೇ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಲಿ. ಒಂದಷ್ಟು ಜನರಿಗೆ ಇವರ ಪ್ರೀತಿ ಮತ್ತು ಬದುಕಿನ ರೀತಿ ಮಾದರಿಯಾಗಲಿ.

ಸದ್ಯ ಇರೋದರಲ್ಲಿ ಹಿರಿಯ ನಾಯಕನಟಿ ಅನ್ನಿಸಿಕೊಂಡಿರುವವರು ಹರಿಪ್ರಿಯಾ. ಸಿನಿಮಾರಂಗಕ್ಕೆ ಬಂದು ಹತ್ತು ವರ್ಷ ಕಳೆಯೋದರೊಳಗೆ ನಟಿಯರು ಮದುವೆಯಾಗಿ ಮನೆ ಸೇರಿಬಿಡುತ್ತಾರೆ. ಈ ನಿಟ್ಟಿನಲ್ಲಿ ಹರಿಪ್ರಿಯಾ ಒಂದಾದ ನಂತರ ಒಂದು ಇನ್ನಿಂಗ್ಸ್ ಮುಂದುವರೆಸುತ್ತಲೇ ಇದ್ದಾರೆ. ಇನ್ನು ಹರಿಪ್ರಿಯಾ ಕ್ರೇಜ್ ಮುಗೀತು ಅಂದುಕೊಳ್ಳೋ ಹೊತ್ತಿಗೆ ಈ ನಟಿ ಯಾವುದಾದರೂ ವಿಶೇಷ ಸಿನಿಮಾವೊಂದರ ಮೂಲಕ ಸದ್ದು ಮಾಡುತ್ತಾರೆ. ಕಮರ್ಷಿಯಲ್ ಸಿನಿಮಾಗಳ ಮೂಲಕ ಹೆಸರು ಮಾಡಿದ ಹರಿಪ್ರಿಯಾ ಅದರ ಜೊತೆಜೊತೆಗೇ ಕಲಾತ್ಮಕ ಚಿತ್ರಗಳು, ವಿಶೇಷ ಪಾತ್ರಗಳನ್ನೂ ನಿಭಾಯಿಸುತ್ತಾ ಬಂದವರು. ಮತ್ತೆ ಮತ್ತೆ ಹೊಸ ಅವತಾರಗಳನ್ನೆತ್ತಿ ಎಲ್ಲರನ್ನೂ ಅಚ್ಚರಿಗೀಡುಮಾಡಿದವರು.
ಇಂಥ ಹರಿಪ್ರಿಯಾಗೆ ಪದೇ ಪದೇ ಎದುರಾಗುತ್ತಿದ್ದ ಪ್ರಶ್ನೆ ಯಾವಾಗ ಮದುವೆ? ಅನ್ನೋದು. ಆರಂಭದ ದಿನಗಳಲ್ಲಿ ಹರಿಪ್ರಿಯಾ ಹೆಸರು ಕೆಲವಾರು ನಟರು ಮತ್ತು ರಾಜಕಾರಣಿಗಳ ಮಕ್ಕಳ ಜೊತೆ ತಳುಕುಹಾಕಿಕೊಂಡಿದ್ದು ನಿಜ. ನಂತರದ ದಿನಗಳಲ್ಲಿ ಹರಿಪ್ರಿಯಾ ಇಂಥಾ ಗಾಸಿಪ್ಪುಗಳಿಂದ ದೂರವೇ ಉಳಿದರು. ತೀರಾ ಎಚ್ಚರ ವಹಿಸಿ, ತಮ್ಮ ಕುರಿತ ಸುದ್ದಿಗಳು ಹೊರಹೋಗದಂತೆ ನೋಡಿಕೊಂಡರು. ಇವೆಲ್ಲದರ ನಡುವೆ ಈಗ ಹರಿಪ್ರಿಯಾ ಯಾರನ್ನು ಮದುವೆಯಾಗುತ್ತಾರೆ? ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ.

ಹರಿ–ಕತೆ!
ಹರಿಪ್ರಿಯಾ ಸಿನಿಮಾದ ಯಾವುದೇ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದವರು. ದೊಡ್ಡಬಳ್ಳಾಪುರದಲ್ಲಿ ಇವರ ತಂದೆ ಸಣ್ಣದೊಂದು ಬೇಕರಿ ನಡೆಸಿಕೊಂಡಿದ್ದವರು. `ಮಗಳ ಚೆಂದವಿದ್ದಾಳೆ ಸಿನಿಮಾದಲ್ಲಿ ನಟಿಸಬೋದಲ್ವಾ’ಅಂತಾ ಜನ ಮಾತಾಡಿಕೊಳ್ಳುತ್ತಿದ್ದಂತೇ ಥ್ರಿಲ್‌ಗೊಳಗಾದ ಆಕೆಯ ತಾಯಿ ಸೀದಾ ಮಗಳ ಸಮೇತ ಬಂದುನಿಂತಿದ್ದು ಗಾಂಧಿನಗರವೆಂಬ ಗಟಾರಕ್ಕೆ. ಆಗಿನ್ನೂ ಹರಿಪ್ರಿಯಾ ಮತ್ತಾಕೆಯ ತಾಯಿ ಚಿತ್ರರಂಗದ ಒಳಸುಳಿಗಳನ್ನು ಅರಿತಿರಲಿಲ್ಲ. ಫೋಟೋ ಶೂಟು, ಸ್ಕ್ರೀನ್ ಟೆಸ್ಟು ಇತ್ಯಾದಿಗಳ ಹೆಸರಲ್ಲಿ ಉಚಿತವಾಗಿ ತಡವಿಕೊಳ್ಳಲು ನೋಡಿದ್ದರು ಇಲ್ಲಿನ ಜನ. ಆದರೆ ಅವಕಾಶವನ್ನು ಮಾತ್ರ ಯಾರೊಬ್ಬರೂ ಕೊಡಲಿಲ್ಲ. ಹೀಗಿರುವಾಗ ಹರಿಪ್ರಿಯಾಳ ತಾಯಿಗೆ ಕೋ ಆರ್ಡಿನೇಟರ್ ಒಬ್ಬನ ದೆಸೆಯಿಂದ ಕೇರಳದ ನಂಟು ಬೆಸೆದುಕೊಂಡಿತ್ತು. ಆ ಕೋ ಆರ್ಡಿನೇಟರ್ ಶಿವು ಇವತ್ತಿಗೂ ಕನ್ನಡದ ಸ್ಟಾರ್ ವರ್ಚಸ್ಸು ಪಡೆದಿರೋ ವ್ಯಕ್ತಿ. ಸ್ವತಃ ಶಿವು ಹೇಳುವಂತೆ, ಹರಿಪ್ರಿಯಾ ಮತ್ತು ಆಕೆಯ ತಾಯಿ ಬರಿಗೈಲಿ ಬೆಂಗಳೂರಿಗೆ ಬಂದು ನಿಂತಾಗ ಹಾಕಿಕೊಳ್ಳಲು ನೆಟ್ಟಗೆ ಬಟ್ಟೆಯೂ ಇರಲಿಲ್ಲವಂತೆ. ಸಾವಿರಾರು ರುಪಾಯಿ ಖರ್ಚು ಮಾಡಿ ಬಟ್ಟೆ ಬರೆ ಕೊಡಿಸಿ, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅವಕಾಶ ಕೊಡಿಸಿದ್ದರಂತೆ. ಶಿವು ಅನ್ನೋ ವ್ಯಕ್ತಿ ಹರಿಪ್ರಿಯಾ ಮೇಲೆ ಇಷ್ಟೆಲ್ಲಾ ಇನ್‌ವೆಸ್ಟ್ ಮಾಡಿದ್ದು ಆಕೆ ನಟಿಯಾಗಿ ಹೊರಹೊಮ್ಮಿದರೆ ತನಗೊಂದಿಷ್ಟು ಕಮಿಷನ್ ಬರಬಹುದು ಅನ್ನೋ ಲೆಕ್ಕಾಚಾರದಿಂದ. ಆದರೆ ಹರಿಪ್ರಿಯಾ ಮತ್ತಾಕೆಯ ತಾಯಿ ಸಿನಿಮಾಗಳು ಕೈಗೆಟುಕುತ್ತಿದ್ದಂತೇ ಆತನಿಗೇ ಕೈಕೊಟ್ಟು ಸುಮ್ಮನಾಗಿದ್ದರು.

ವರ್ಣಕಾಸಿಕ್ಕಳ್ ಮತ್ತು ರಸಿಕನ್ ಅನ್ನೋ ಎರಡು ಥರ್ಢ್ ಗ್ರೇಡ್ ಸಿನಿಮಾಗಳಲ್ಲಿ ಹರಿಪ್ರಿಯಾಗೆ ಛಾನ್ಸು ಸಿಕ್ಕಿತ್ತು. ಈ ನಡುವೆ `ಬಡಿ’ ಎನ್ನುವ ತುಳು ಸಿನಿಮಾದಲ್ಲೂ ನಟಿಸಿದಳು. ಈ ಹೊತ್ತಿಗೆ ಯೂ-2 ಅನ್ನೋ ಚಾನೆಲ್ಲಿನಲ್ಲಿ ನಿರೂಪಕನಾಗಿದ್ದ ಆನಂದ ಎನ್ನುವ ಮಹಾನುಭಾವ ಹೀರೋ ಆಗುವ ತಯಾರಿಯಲ್ಲಿದ್ದ. ಉದ್ದನೆ ಮೂತಿಯ ಈ ಆನಂದನನ್ನು ಮಂಜು ಮಸ್ಕಲ್ ಮಟ್ಟಿ ಅನ್ನೋ ನಿರ್ದೇಶಕ ಹೀರೋ ಮಾಡಲು ಹೊರಟಿದ್ದ. ಆಗ ಆ ಚಿತ್ರಕ್ಕೆ ಇದೇ ಹರಿಪ್ರಿಯಾಳನ್ನು ನಾಯಕಿಯಾಗಿ ಹಾಕಿಕೊಂಡ. ಅಲ್ಲಿಗೆ ಕನ್ನಡ ಸಿನೆಮಾವೊಂದರಲ್ಲಿ ನಟಿಸುವ ಮೂಲಕ ಹರಿಪ್ರಿಯಾ ಖಾತೆ ತೆರೆದಳು. 2008 ರ ಸುಮಾರಿಗೆ ರಿಲೀಸಾದ ಮನಸುಗಳ ಮಾತು ಮಧುರ ನಾಲ್ಕು ದಿನ ಕೂಡಾ ನೆಟ್ಟಗೆ ಥಿಯೇಟರಿನಲ್ಲಿ ಕೂರಲಿಲ್ಲ. ಆದರೂ ಹರಿಪ್ರಿಯಾಗೆ ಮಾತ್ರ ಒಂದೊಂದಾಗಿ ಛಾನ್ಸು ದೊರೆಯಲು ಶುರುವಾಯಿತು. ವಸಂತ ಕಾಲ, ಈ ಸಂಭಾಷಣೆ, ಮಳೆ ಬರಲಿ ಮಂಜು ಇರಲಿ ಮುಂತಾದ ಸಿನಿಮಾಗಳಲ್ಲಿ ನಟಿಸಿದಳು. ಈ ಸಂಭಾಷಣೆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ರಾಜಶೇಖರ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಕೊಡಬಾರದ ಯಾತನೆ ಕೊಟ್ಟ ಹರಿಪ್ರಿಯಾ ದೊಡ್ಡ ಸುದ್ದಿಯಾದಳು. ಹಾಗೆ ನೆಗೆಟೀವ್ ಸುದ್ದಿಯ ಮೂಲಕ ಸಣ್ಣಮಟ್ಟದ ಪ್ರಚಾರವನ್ನೂ ಪಡೆದ ಹರಿಪ್ರಿಯಾ ನಂತರ ಕಳ್ಳರ ಸಂತೆ, ಚೆಲುವೆಯೇ ನಿನ್ನ ನೋಡಲು ಎಂಬ ಎರಡು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಪಡೆದಳು. ಆದರೆ ಕನ್ನಡ ಚಿತ್ರರಂಗದಲ್ಲಿ ಹರಿಪ್ರಿಯಾಳ ಲಕ್ಕು ಕುದುರಲೇ ಇಲ್ಲ. ಮೇಲಿಂದ ಮೇಲೆ ಸಿನಿಮಾಗಳಲ್ಲಿ ನಟಿಸಿದರೂ ಹೇಳಿಕೊಳ್ಳಲಿಕ್ಕಾದರೂ ಒಂದು ಸಿನೆಮಾ ಹಿಟ್ ಆಗಲಿಲ್ಲ.

ಈ ನಡುವೆ ಪತ್ರಕರ್ತ ರವಿ ಬೆಳಗೆರೆ ಮೊದಲ ಬಾರಿಗೆ ನಿರ್ದೇಶಿಸಿದ್ದ `ಮುಖ್ಯಮಂತ್ರಿ ಐ ಲವ್ ಯೂ’ ಸಿನಿಮಾದಲ್ಲೂ ನಟಿಸಿದ್ದಳಾದರೂ ಆ ಸಿನೆಮಾ ಡಬ್ಬದಿಂದ ಹೊರಕ್ಕೆ ಬರಲೇ ಇಲ್ಲ. ಕನ್ನಡದ ಮೊದಲ ಬಿಗ್ ಬಜೆಟ್ ಚಿತ್ರ `ಚೆಲುವೆ ನಿನ್ನ ನೋಡಲು’ ಚಿತ್ರ ಕೂಡಾ ಬಾಕ್ಸ್ ಆಫೀಸ್‌ನಲ್ಲಿ ಶೋಚನೀಯ ಸೋಲು ಕಂಡಿತ್ತು. ಎಲ್ಲಾ ಅಂದುಕೊಂಡಂತೇ ನಡೆದಿದ್ದರೆ ಯೋಗರಾಜ್ ಭಟ್ ನಿರ್ದೇಶನದ `ಪಂಚರಂಗಿ’ಯಲ್ಲಿ ದಿಗಂತನೊಂದಿಗೆ ಇದೇ ಹರಿಪ್ರಿಯಾ ನಟಿಸಬೇಕಿತ್ತು. ಆದರೆ ಈಕೆ ದುರಾದೃಷ್ಟವೋ ಏನೋ ಈಕೆ ನಟಿಸ ಬೇಕಿದ್ದ ಪಾತ್ರಕ್ಕೆ ಭಟ್ಟರು ನಿಧಿ ಸುಬ್ಬಯ್ಯಳನ್ನು ಹಾಕಿಕೊಂಡರು. ಈಕೆ ನಟಿಸಿದ ಸಿನಿಮಾಗಳು ಹಿಟ್ ಆಗದಿದ್ದರೇನಂತೆ, ಹರಿಪ್ರಿಯಾ ಅನ್ನೋ ಎಳೇ ಸುಂದರಿಗೆ ಆಗಿನ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನ ಮಗ ವಿಜಯೇಂದ್ರನೊಂದಿಗೆ ಮಜಬೂತದ ಸ್ನೇಹ ಕುದುರಿತ್ತು. ಈ ವಿಚಾರವನ್ನು ಆಗ “ಗೌರಿ ಲಂಕೇಶ್” ಪತ್ರಿಕೆ ಸವಿವರವಾಗಿ ವರದಿ ಮಾಡಿತ್ತು.

ಥೇಟು ನಟಿ ರಾಧಿಕಾಳ ಬದುಕಿನಂತೇ ಹರಿಪ್ರಿಯಾಳ ಲೈಫಲ್ಲೂ ಒಂದು ಟ್ವಿಸ್ಟ್ ಸಿಕ್ಕಿತ್ತು. ಸಿನಿಮಾದಲ್ಲಿ ಸಿಕ್ಕ ದುಡ್ಡಿಗಿಂತ ಹತ್ತು ಪಟ್ಟು ದುಡ್ಡು ಒಮ್ಮೆಲೇ ಸಿಕ್ಕಂತಾಗಿತ್ತು. ಜೊತೆಗೆ ಮನೆ, ಕಾರು, ವಿಲಾಸೀ ಬದುಕಿಗೆ ಬೇಕಾದ ಅಷ್ಟೂ ಸವಲತ್ತುಗಳೂ ಕೈಗೆಟುಕಿದ್ದವು. `ವಿಜಯೇಂದ್ರ ವಿಲಾಸ’ದ ಬಗೆಗಿನ ಬಣ್ಣಬಣ್ಣದ ಕಥೆಗಳು ಅಂದಿನ ವಾರಪತ್ರಿಕೆಗಳಲ್ಲಿ ವರದಿಯಾಗಿದ್ದವು.
ಬೇರೆ ಯಾರೇ ನಟಿಯರಾಗಿದ್ದರೆ ಬಹುಶಃ ದಿಢೀರನೆ ಸಿಕ್ಕ ಶ್ರೀಮಂತಿಕೆಯ ಅಮಲಿನಲ್ಲಿ ಮೈಮರೆತು ಕುಂತುಬಿಡುತ್ತಿದ್ದರೇನೋ. ಆದರೆ ಹರಿಪ್ರಿಯಾ ಹಾಗೆ ಮಾಡಲಿಲ್ಲ. ಅದಾಗಲೇ ಒಂದೆರಡು ತಮಿಳು ಚಿತ್ರಗಳಲ್ಲಿ ನಟಿಸಿ ಬಂದಿದ್ದ ಹರಿಪ್ರಿಯಾ `ಕನಗವೇಲ್ ಕಾಕ್ಕಾ’ ಮೂಲಕ ತಮಿಳಿನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾದಳು.

ಆ ಕಾಲಕ್ಕೆ ಹರಿಪ್ರಿಯಾ ಸುದ್ದಿ ಮಾಡಿದ್ದು ವಿವಾದ ಮತ್ತು ಗಾಸಿಪ್‌ಗಳಿಂದ ಮಾತ್ರ. ಆದರೆ ನೆರೆಯ ತಮಿಳುನಾಡಿನಲ್ಲಿ ಅರ್ಜುನ್ ಸರ್ಜಾ ಜೊತೆ ಒಂದು ಚಿತ್ರ ಮುಗಿಸಿದ್ದ ಹರಿಪ್ರಿಯಾ ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಚೇರನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದಳು. ಈ ಹಿಂದೆ ಚೇರನ್ ನಿರ್ದೇಶಿಸಿದ್ದ ‘ಪೊರ್ಕಾಲಂ’, ‘ಭಾರತಿ ಕಣ್ಣಮ್ಮ’, ‘ವೆಟ್ರಿ ಕೊಡಿಕಟ್ಟು’, ‘ಆಟೋಗ್ರಾಫ್’, ‘ತವಮೇ ತವಮಾಯಿರ್ದ್’, ‘ಮಾಯಾಕನ್ನಡಿ’… ಮೊದಲಾದ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಇದರಲ್ಲಿ ‘ಆಟೋಗ್ರಾಫ್’ ಕನ್ನಡಕ್ಕೆ ರಿಮೇಕ್ ಆಗಿ ‘ಮೈ ಆಟೋಗ್ರಾಫ್’ ಎಂದು ಇಲ್ಲೂ ಯಶಸ್ಸು ಕಂಡಿತ್ತು. ಅಷ್ಟೇ ಅಲ್ಲ, ಆತನ ಕೆಲವು ಚಿತ್ರಗಳ ಹಕ್ಕನ್ನು ಕನ್ನಡದ ನಿರ್ಮಾಪಕರು ಖರೀದಿಸಿ ಇಲ್ಲಿ ರಿಮೇಕ್ ಮಾಡಲು ತುದಿಗಾಲಲ್ಲಿ ನಿಂತುಕೊಂಡಿದ್ದರು. ಹೀಗೆ ಚೇರನ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಸಂದರ್ಭದಲ್ಲೇ ತನ್ನ ಚಿತ್ರಕ್ಕೆ ಹರಿಪ್ರಿಯಾಳನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಆಕೆಯ ನಸೀಬನ್ನೇ ಬದಲಿಸಿತ್ತು.

ಕನ್ನಡ ನಿರ್ಮಾಪಕ ಮತ್ತು ನಿರ್ದೇಶಕರು ರಿಮೇಕ್ ಹಕ್ಕಿಗಾಗಿ ಚೇರನ್ ಗಮನ ಸೆಳೆಯುತ್ತಿದ್ದರೆ ಕನ್ನಡ ಹುಡುಗಿಯೊಬ್ಬಳು ಆತನ ಗಮನ ಸೆಳೆದು ಆತನ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಎಲ್ಲರ ಗಮನ ಸೆಳೆದಳು. ಆನಂತರ ಹರಿಪ್ರಿಯಾ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಒಂದರ ಹಿಂದೊಂದು ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ನಟಿಸುತ್ತಾ ಬಂದಳು. ಒಂದು ಮಟ್ಟದ ಹೆಸರೂ ಪ್ರಾಪ್ತವಾಗಿತ್ತು. ಇಂಥ ಸಂದರ್ಭದಲ್ಲೇ ಹರಿಪ್ರಿಯಾ ಎಂದೋ ನಟಿಸಿ ಹೋಗಿದ್ದ `ನೀನು ನಾನು’ ಅನ್ನೋ ಚಿತ್ರ ಸ್ವಲ್ಪ ತಡವಾದರೂ `ಉಗ್ರಂ’ಹೆಸರಿನಲ್ಲಿ ರಿಲೀಸಾಯ್ತು ನೋಡಿ, ಹರಿಪ್ರಿಯಾಗೆ ಕನ್ನಡದಲ್ಲಿ ದೊಡ್ಡ ಮಟ್ಟದ ಸ್ವಾಗತ ದೊರೆಯಿತು. ಸುದೀಪ್ ಜೊತೆ ರನ್ನ, ಶರಣ್ ಜೊತೆ ಬುಲೆಟ್ ಬಸ್ಯಾ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿದಳು. ದರ್ಶನ್, ಸುದೀಪ್ ಸೇರಿದಂತೆ ಕನ್ನಡದ ಬಹುತೇಕ ಸೂಪರ್ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡಳು. ನೀರ್‌ದೋಸೆ ಎನ್ನುವ ಸಿನಿಮಾದ ಗ್ಲಾಮರಸ್ ಪಾತ್ರ, ಬೋಲ್ಡ್ ನಟನೆ ಹರಿಪ್ರಿಯಾಗೆ ಬೇರೆಯದ್ದೇ ಲೆವೆಲ್ಲಿನ ಜನಪ್ರಿಯತೆ ತಂದುಕೊಟ್ಟಿದ್ದು ನಿಜ. ಇದರ ಜೊತೆಗೆ ಬರಗೂರು ರಾಮಚಂದ್ರಪ್ಪನವರ ಸಿನಿಮಾದಲ್ಲೂ ನಟನೆ ಮಾಡಿ ಭಾರತ ಸೇರಿದಂತೆ ಯಾವ್ಯಾವುದೋ ದೇಶದ ಹೆಸರಾಂತ ಅವಾರ್ಡುಗಳನ್ನೆಲ್ಲಾ ಬಾಚಿಕೊಂಡಳು. ಈಗ ವಸಿಷ್ಠನ ಮನಸ್ಸನ್ನೂ ಗೆದ್ದಿದ್ದಾಳೆ.

ಸಿಂಹ ಜೊತೆಯಾಗಿದ್ದು ಎಲ್ಲಿ?
ತೆಲುಗಿನ “ಎವರು”ಚಿತ್ರ ಕನ್ನಡಕ್ಕೆ ರಿಮೇಕ್ ಆಗುತ್ತಿದೆಯಲ್ಲಾ? ಅದರಲ್ಲಿ ವಸಿಷ್ಠ ಸಿಂಹ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಹರಿಪ್ರಿಯಾ ನಾಯಕಿ. ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ವಿಮಾನ ನಿಲ್ದಾಣದಲ್ಲಿ ಒಟ್ಟಿಗೇ ಕೈ ಕೈ ಹಿಡಿದು ಹೋಗುತ್ತಿರುವ ಫೋಟೋವೊಂದು ಲೀಕ್ ಆಗಿ ವೈರಲ್ ಆಗಿತ್ತು. ಇನ್ನು ವಿಚಾರವನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ ಅಂತಾ ಸ್ವತಃ ಹರಿಪ್ರಿಯಾಗೆ ಅನ್ನಿಸಿತೋ ಏನೋ? ತಾವೇ ಇಬ್ಬರ ಫೋಟೋವೊಂದನ್ನು ಬಿಟ್ಟು ಅದಕ್ಕೆ `ಸಿಂಹಪ್ರಿಯಾ’ ಅಂತಾ ಟೈಟಲ್ ಕೊಟ್ಟಿದ್ದಾರೆ. ಸಿಂಹವೊಂದು ಸುಂದರವಾದ ಮಗು ಎತ್ತಿಕೊಂಡಿರುವ ಚಿತ್ರ ಹಾಕಿ ‘ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು’ ಅಂತ ಟೈಟಲ್ ಕೊಟ್ಟು ವಶಿಷ್ಠ ಸಿಂಹ ತೋಳಿನಲ್ಲಿ ನಾನು ಬಂಧಿಯಾಗಿದ್ದೇನೆ ಅನ್ನೋ ಸಂದೇಶ ಕೊಟ್ಟಿದ್ದಾರೆ.

ಸಿನಿಮಾದವರು ಅಂತಲ್ಲ ಯಾರದ್ದೇ ಬದುಕಾಗಲಿ, ಹಿಂದೆ ಏನೇನು ನಡೆದಿತ್ತು ಅನ್ನೋದಕ್ಕಿಂತಾ ಮುಂದೆ ಹೇಗೆ ಬಾಳುತ್ತಾರೆ ಅನ್ನೋದು ಮುಖ್ಯ. ವಸಿಷ್ಠ ಕೂಡಾ ವಿದ್ಯಾವಂತ, ಪ್ರಜ್ಞಾವಂತ ನಟ. ಕನ್ನಡ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ಹೊಂದಿರುವವರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಇಲ್ಲಿ ತಾರಾ ಜೋಡಿಗಳು ಯಶಸ್ವಿಯಾಗಿ ಲೈಫ್ ಲೀಡ್ ಮಾಡುತ್ತಿರುವ ಉದಾಹರಣೆಯೂ ಇದೆ. ವಸಿಷ್ಠ ಮತ್ತು ಹರಿಪ್ರಿಯಾ ಕೂಡಾ ಅದೇ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಲಿ. ಒಂದಷ್ಟು ಜನರಿಗೆ ಇವರ ಪ್ರೀತಿ ಮತ್ತು ಬದುಕಿನ ರೀತಿ ಮಾದರಿಯಾಗಲಿ.
ಬೇಗ ಮದುವೆಯಾಗಿಬಿಡಿ!

ಸಿನಿಮಾ ತಾರೆಯರು ಪ್ರೀತಿಸೋದು, ಜೊತೆ ಜೊತೆಗೆ ಓಡಾಡೋದು ಹೊಸ ವಿಷಯವೇನಲ್ಲ. ಆದರೆ, ತೀರಾ ಯಡವಟ್ಟಾಗುವ ತನಕ ಕಾಯುವುದು ಸರಿಯಲ್ಲ. ಅಂಬರೀಶ್, ಉಪೇಂದ್ರ ಮುಂತಾದ ಜೋಡಿಗಳ ಥರ `ಅನಿವಾರ್ಯ’ದ ಪರಿಸ್ಥಿತಿ ಎದುರಾಗಿ `ಅವಸರ’ದಲ್ಲಿ ಯಾಕೆ ಮದುವೆಯಾಗಬೇಕು? ಸ್ವಲ್ಪ ಬೇಗ ಪ್ಲಾನ್ ಮಾಡಿಕೊಂಡು ಯಾವುದೇ ಆತಂಕ, ತರಾತುರಿ ಇಲ್ಲದೇ ಎಲ್ಲರ ಸಮ್ಮುಖದಲ್ಲಿ ಮದುವೆಯಾಗೋದು ಒಳ್ಳೇದು!ಏನಂತೀರಿ ಸಿಂಹ-ಪ್ರಿಯಾ?!