–ಶೌರ್ಯ ಡೆಸ್ಕ್
ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಹೊರಟ ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ಪಕ್ಷ ಸಹಕರಿಸಬೇಕು. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ನಾನು ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಹಗರಣಗಳ ಒಂದು ಸ್ಯಾಂಪಲ್ ಮಾತ್ರ. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದು ಮಾಜಿ ಮುಖ್ಯಮಂತ್ರಿಗಳು ಕುಮಾರಸ್ವಾಮಿ ಅವರು ಗುಡುಗಿದ್ದಾರೆ.

ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರದ ಆಸ್ತಿಯನ್ನು ನುಂಗುವ ಮಹಾ ಹುನ್ನಾರದ ಬಗ್ಗೆ ಸ್ಫೋಟಕ ಮಾಹಿತಿ ನೀಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು; ರಾಜ್ಯ ಸರಕಾರದ ಅತಿದೊಡ್ಡ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡುವುದಾಗಿ ಘೋಷಿಸಿದ್ದಾರೆ.
ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಡಿ, ದಾಖಲೆಗಳನ್ನು ಕೊಡಿ ಎಂದು ಪದೇಪದೆ ನನ್ನನ್ನು ಕೆಣಕಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಹೊರಟ ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ಪಕ್ಷ ಸಹಕರಿಸಬೇಕು. ಈ ಸರಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ನಾನು ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಹಗರಣಗಳ ಒಂದು ಸ್ಯಾಂಪಲ್ ಮಾತ್ರ. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ಸದನದ ಸಮಯ ಹಾಳು ಮಾಡಲಾರೆ: ನಾನು ಸುಖಾಸುಮ್ಮನೆ ಸದನ ಸಮಯವನ್ನು ಹಾಳು ಮಾಡಲಾರೆ. ಇವತ್ತಿನ ಜೆಡಿಎಲ್ ಪಿ ಸಭೆಯಲ್ಲಿಯೂ ಈ ವಿಷಯದ ಸೇರಿ ಹಲವಾರು ವಿಚಾರವಾಗಿ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಇತ್ತಿಚೆಗೆ ಬೆಂಗಳೂರು ನಗರ ಸೇರಿ 22 ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರಿಂದ ದೊಡ್ಡ ಮಟ್ಟದ ನಷ್ಟವಾಗಿದೆ. ಬೆಳೆ ಹಾನಿ, ಮನೆ ಕುಸಿತವೂ ಆಗಿದೆ. ಈ ಬಗ್ಗೆ ಸದನದಲ್ಲಿ ವಿವರವಾಗಿ ಚರ್ಚೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಪರ್ಸೆಂಟೇಜ್ ಬಗ್ಗೆ ರಾಜ್ಯದ ಉದ್ದಗಲಕ್ಕೂ ಬೀದಿಲಿ ಚರ್ಚೆ ನಡೆಯುತ್ತಿದೆ. ಅಧಿಕೃತ ವಿರೋಧ ಪಕ್ಷ, ಆಳುವ ಪಕ್ಷಗಳ ನಡುವೆ ರಾಜ್ಯದಲ್ಲಿ ನಡೆಯುತ್ತಿರುವ ಲೂಟಿ ಬಗ್ಗೆ ಬರೀ ಮಾತಿನಲ್ಲಿ ಪೈಪೋಟಿ ನಡೆಯುತ್ತಿದೆ. ನಿಖರವಾಗಿ ದಾಖಲೆಗಳು ಇದ್ದರೆ ಚರ್ಚೆ ಮಾಡಿ ಎಂದು ನಾನು ನಮ್ಮ ಶಾಸಕರಿಗೆ ತಿಳಿಸಿದ್ದೇನೆ. ನಾನು ಕೂಡ ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ಸುಖಾಸುಮ್ಮನೆ ಸದನದಲ್ಲಿ ಸಂತೆ ಭಾಷಣ ಮಾಡಿದರೆ ಪ್ರಯೋಜನವಿಲ್ಲ. ಸದನದ ಅಮೂಲ್ಯ ಅಮೂಲ್ಯ ಸಮಯ ಸದುಪಯೋಗ ಮಾಡಿಕೊಳ್ಳುವಂತೆ ಶಾಸಕರಿಗೆ ಸಲಹೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.