-ಶೌರ್ಯ ಡೆಸ್ಕ್
ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿ ಎರಡು ಕೂಡ ಮಾಲಿನ್ಯ ಉಂಟು ಮಾಡುತ್ತವೆ. ಆದರೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇಕಡಾ 30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕವನ್ನು ಹೊರಸೂಸುತ್ತವೆ. ಹಸಿರು ಪಟಾಕಿಗಳು ಮಾಲಿನ್ಯಕಾರಕ ಹೊಗೆ ಹೊರಸೂಸುವುದನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಧೂಳನ್ನು ಹೀರಿಕೊಳ್ಳುತ್ತದೆ. ಅಲ್ಲದೇ ಬೇರಿಯಮ್ ನೈಟ್ರೇಟ್ನಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವುದಿಲ್ಲ.

ವಿಶ್ವವೇ ವಾಯುಮಾಲಿನ್ಯದಿಂದ ತತ್ತರಿಸಿದೆ. ಜಾಗತಿಕ ತಾಪಮಾನದ ಕರಿನೆರಳಿನಲ್ಲಿ ಮನುಕುಲ ಬದುಕುವಂತಾಗಿದೆ. ಈ ಹಿನ್ನೆಲೆ ಮಾಲಿನ್ಯ ನಿಯಂತ್ರಣ ಸಾಧಿಸಲು ಪರಿಸರಕ್ಕೆ ಮಾರಕವಾಗುವ ಯಾವುದೇ ಕಾರ್ಯ ಮಾಡಬಾರದು. ಹೀಗಾಗಿ ಪಟಾಕಿ ಹೊಡೆಯುವುದೂ ಸರಿಯಲ್ಲ. ಆದರೆ ದೀಪಾವಳಿ ಭಾರತೀಯರ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಹಬ್ಬವಾಗಿರುವುದರಿಂದ ಈ ಹಬ್ಬದ ಭಾಗವಾದ ಪಟಾಕಿ ಸಿಡಿಸುವುದು ನಡೆದೇ ಇದೆ. ಆದರೆ ಕಡಿಮೆ ಮಾಲಿನ್ಯದ ಹಸಿರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ ಹಬ್ಬವೂ ಆಚರಣೆಯಾಯಿತು ಪರಿಸರಕ್ಕೂ ಹೆಚ್ಚು ಧಕ್ಕೆಯಾಗಲಿಲ್ಲ ಎಂಬ ಸಾರ್ಥಕತೆ ಮೂಡಬಹುದು. ಈ ಹಿನ್ನೆಲೆ ಎಲ್ಲರೂ ಹಸಿರು ಪಟಾಕಿ ಸಿಡಿಸುವುದು ಆದಷ್ಟು ಕಡಿಮೆ ಪಟಾಕಿ ಸಿಡಿಸುವುದು ಒಳ್ಳೆಯದು.

ಹಸಿರು ಪಟಾಕಿಗೆ ಎಂದರೇನು?
ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿ ಎರಡು ಕೂಡ ಮಾಲಿನ್ಯ ಉಂಟು ಮಾಡುತ್ತವೆ. ಆದರೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇಕಡಾ 30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕವನ್ನು ಹೊರಸೂಸುತ್ತವೆ. ಹಸಿರು ಪಟಾಕಿಗಳು ಮಾಲಿನ್ಯಕಾರಕ ಹೊಗೆ ಹೊರಸೂಸುವುದನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಧೂಳನ್ನು ಹೀರಿಕೊಳ್ಳುತ್ತದೆ. ಅಲ್ಲದೇ ಬೇರಿಯಮ್ ನೈಟ್ರೇಟ್ನಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವುದಿಲ್ಲ. ಸಾಮಾನ್ಯ ಪಟಾಕಿಗಳಲ್ಲಿನ ವಿಷಕಾರಿ ಲೋಹಗಳನ್ನು ಕಡಿಮೆ ಅಪಾಯಕಾರಿ ಸಂಯುಕ್ತಗಳೊಂದಿಗೆ ಬದಲಾಯಿಸಲಾಗುತ್ತದೆ. ಸಾಮಾನ್ಯ ಪಟಾಕಿಗಳಂತೆ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲಾಗಿ ನೀರಿನ ಆವಿಯನ್ನು ಬಿಡುಗಡೆ ಮಾಡುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಕಾರ, ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಕಳಪೆಯಾಗಿರುವ ನಗರಗಳು ಮತ್ತು ಪಟ್ಟಣಗಳಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಅನುಮತಿಸಲಾಗಿದೆ.
ಹಸಿರು ಪಟಾಕಿ ಎಲ್ಲಿ ಸಿಗುತ್ತೆ?

ಹಸಿರು ಪಟಾಕಿ ಸರಿ. ಅವನ್ನು ಖರೀದಿಸುವುದು ಹೇಗೆ? ಎಲ್ಲಿ ಸಿಗುತ್ತವೆ ಎಂಬ ಪ್ರಶ್ನೆ ನಿಮ್ಮದಾ?
ಇಲ್ಲಿ ಕೇಳಿ. ಹಸಿರು ಪಟಾಕಿಗಳನ್ನು ಉತ್ತೇಜಿಸಲು ಅವುಗಳ ಉತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದೇಶದ 230 ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಸಿರು ಪಟಾಕಿಗಳ ಲಭ್ಯತೆ ಹಾಗೂ ಅವುಗಳನ್ನು ಗುರುತಿಸುವ ಬಗ್ಗೆ ಜನರಲ್ಲಿ ಗೊಂದಲ ಇದೆ. ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಗಿ ಪಡೆದಿರುವ ಮಳಿಗೆಗಳಿಗಷ್ಟೇ ಮಾರಾಟಕ್ಕೆ ಅನುಮತಿ ನೀಡಿರುತ್ತದೆ.

ಗ್ರಾಹಕರು ತಾವು ಖರೀದಿಸುವ ಪಟಾಕಿಗಳು ಹಸಿರು ಪಟಾಕಿ ಹೌದೆ? ಅಥವಾ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಲು, ಪಟಾಕಿ ಪ್ಯಾಕ್ ಮೇಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಮೂಲಕ ಸಹ ಹಸಿರು ಪಟಾಕಿಗಳನ್ನು ಗುರುತಿಸಬಹುದಾಗಿದೆ. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಸಿರು ಪಟಾಕಿಗಳು ಸಿಗುತ್ತವೆ. ಇವನ್ನು CSIR ಅಭಿವೃದ್ಧಿಪಡಿಸಿದೆ.
SIR NEERI ಗ್ರೀನ್ ಕ್ಯೂಆರ್ ಕೋಡ್ ಅಪ್ಲಿಕೇಶನ್

ಹಸಿರು ಪಟಾಕಿಗಳು ಹೂ ಕುಂಡ, ಸುರುಸುರು ಬತ್ತಿ ರೀತಿ ಇರುತ್ತವೆ. ನಕಲಿ ಉತ್ಪನ್ನಗಳ ಮಾರಾಟ ತಪ್ಪಿಸಲು ಹಸಿರು ಪಟಾಕಿಗಳ ಮೇಲೆ ಕ್ಯೂಆರ್ ಕೋಡ್ ವ್ಯವಸ್ಥೆ ಇರುತ್ತದೆ. ಹಸಿರು ಪಟಾಕಿಗಳು ಶೆಲ್ ಗಾತ್ರಕ್ಕಿಂತಲೂ ಕಡಿಮೆ ಗಾತ್ರದಲ್ಲಿ ಮಾಡಲಾಗಿರುತ್ತದೆ. ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿಗಳನ್ನು ಖರೀದಿಸಬಾರದು. ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಗೂಗಲ್ ಪ್ಲೇಸ್ಟೋರ್ನಿಂದ CSIR NEERI ಗ್ರೀನ್ ಕ್ಯೂಆರ್ ಕೋಡ್ ಅಪ್ಲಿಕೇಶನ್ ಬಳಸಿ ಸ್ಕ್ಯಾನರ್ ಅನ್ನು ಡೌನ್ಲೋಡ್ ಮಾಡಿ ಅದರ ಮೂಲಕ ಗ್ರಾಹಕರು ಹಸಿರು ಪಟಾಕಿಗಳನ್ನು ಗುರುತಿಸಬಹುದು.
ಸಿಡಿಸುವಾಗ ಇರಲಿ ಎಚ್ಚರ..

ಹಸಿರು ಪಟಾಕಿಗಳನ್ನು ಸಿಡಿಸುವಾಗ ಪಟಾಕಿ ಹಾಗೂ ನಿಮ್ಮ ನಡುವಿನ ಅಂತರ ಹೆಚ್ಚಿರಬೇಕು. ಕೈಯನ್ನು ನೇರವಾಗಿ ಇರಿಸಿ ಪಟಾಕಿಗೆ ಕಿಡಿ ತಾಗಿಸಬೇಕು. ಪಟಾಕಿಗಳನ್ನು ಸಿಡಿಸುವಾಗ ಬೂಟುಗಳನ್ನು ಧರಿಸುವುದು ಉತ್ತಮ. ಆಟದ ಮೈದಾನಗಳಂತಹ ತೆರೆದ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುವುದು ಒಳಿತು. ಹಸಿರು ಪಟಾಕಿಗಳನ್ನು ಬೆಳಗಿಸುವ ಸಂದರ್ಭದಲ್ಲಿ ಒಂದೆರಡು ಬಕೆಟ್ಗಳಷ್ಟು ನೀರನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು. ಪಟಾಕಿ ಸಿಡಿಸುವವರು ಉದ್ದವಾದ, ಸಡಿಲವಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.