-ರಾಧಿಕಾ ವಿಟ್ಲ
ನಂಬಿದರೆ ನಂಬಿ, ನಿಜಕ್ಕೂ ಇಲ್ಲಿ ಕಳೆದು ಹೋಗಬೇಕೆಂಬ ಮನಸ್ಥಿತಿಯಿದ್ದರೆ ಧ್ಯಾನಸ್ಥ ಮನಕ್ಕೊಂದು ಭರಪೂರ ವಾತಾವರಣ ಕಲ್ಪಿಸಿಕೊಡುವ ಏಕಾಂತವಿದೆ. ಯಾರಿಗ್ಗೊತ್ತು, ಇಲ್ಲಿಯಾರ ಹಂಗೂ ಇಲ್ಲದೆ, ನಿಮಿಷಕ್ಕೆ ಹತ್ತು ಬಾರಿ ಸದ್ದು ಮಾಡುವ ಫೋನ್ ಉಸಾಬರಿಯಿಲ್ಲದೆ, ದಿನದ 24 ಗಂಟೆ ಇಷ್ಟು ಅಗಾಧವಾಗಿದೆ ಎಂಬ ಜ್ಞಾನೋದಯವೂ ನಿಮಗೆ ಆಗಬಹುದು. ಇಷ್ಟು ಅಗಾಧವಾಗಿ ಕಾಣುವ ದಿನವನ್ನು ನಾವು ಸಾಧಾರಣವಾಗಿ ಹೇಗೆಲ್ಲ ಕಳೆದುಬಿಡುತ್ತೇವಲ್ಲ ಎಂಬ ಆತ್ಮಾವಲೋಕನಕ್ಕೂ ಇದೇ ವೇದಿಕೆಯೂ ಆಗಬಹುದು. ಅಥವಾ ಇರುವ ಒಂದೇ ಒಂದು ಅಮೂಲ್ಯ ಬದುಕನ್ನು ನಾವು ಇಂಥ ಯಾವ ಅನುಭವವನ್ನೂ ದಕ್ಕಿಸಿಕೊಳ್ಳದೆ ನೀರಸವಾಗಿ ಕಳೆದುಬಿಡುತ್ತಿದ್ದೆವಲ್ಲ ಎಂಬ ಚಿಂತನೆ ಇಲ್ಲಿಂದಲೇ ಹುಟ್ಟಿ ಇದು ನಿಮ್ಮ ಬದುಕಿನ ಹೊಸತೊಂದು ಅಧ್ಯಾಯಕ್ಕೂ ಮುನ್ನುಡಿ ಬರೆಯಬಹುದು.

ಕಣ್ಣು ಹಾಯಿಸಿದೆತ್ತರಕ್ಕೆ ಕಾಣುವ ಹಿಮಚ್ಛಾದಿತ ಬೆಟ್ಟ, ಸುತ್ತಲೂ ಮುಗಿಲೆತ್ತರದ ಬೆಟ್ಟ ಕಣಿವೆಗಳು, ಅಲ್ಲಲ್ಲಿ ಕಾಡ ಮಧ್ಯೆ ಇಣುಕುವ ನಯವಾಗಿ ಕಾಣುವ ಹಸಿರು ಹುಲ್ಲುಗಾವಲು, ಜುಳುಜುಳು ನಿನಾದ, ಹಕ್ಕಿಪಕ್ಷಿಗಳ ಗಾಯನ, ಅಲ್ಲಲ್ಲಿ ಮನಸ್ಸಿಗೆ ಖುಷಿ ನೀಡುವ ಮರದ ತೊಲೆಗಳಿಂದ ಮಾಡಿದ ಮನೆಗಳು, ಪ್ರಪಂಚದಲ್ಲಿ ಏನೇ ಆಗಲಿ, ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಬೆಟ ಗುಡ್ಡಕಾಡುಗಳಲ್ಲಿ ತಾವಾಯಿತು ತಮ್ಮ ನಿತ್ಯದ ಕೆಲಸವಾಯಿತು ಎಂಬಂತೆ ಕಳೆದುಹೋಗುವ ಇಲ್ಲಿನ ಹುಲು ಮಾನವರು! ನಮ್ಮ ಸುಪ್ತ ಮನಸ್ಸಿಗೆ, ಕನಸಿಗೆ ಯಾವಾಗಲೂ ಕಾಣುವ ಸುಂದರ ಜಾಗವೆಂದರೆ ಹೀಗೆ! ನಾವೇ ಕನಸಿನಲ್ಲಿ ಬಿಡಿಸಿದ ಚಿತ್ರದಂತೆ! ಪ್ರಪಂಚದ ಎಲ್ಲ ದುಃಖಗಳನ್ನು ಮರೆತು ಯಾರ ಕೈಗೂ ಸಿಗದಂತೆ ಒಂದಿಷ್ಟು ದಿನ ಪ್ರಕೃತಿಯಲ್ಲಿ ಕಳೆದುಹೋಗಲು ಜಾಗವೊಂದು ಬೇಕು ಎಂದು ಬಯಸುವ ಪ್ರತಿಯೊಂದು ಜೀವವೂ ಕೂಡಾ ಖಂಡಿತವಾಗಿ ಇಷ್ಟಪಡುವ ಜಾಗವೊಂದಿದ್ದರೆ ಅದು ಗ್ರಹಣ್.
ಗ್ರಹಣ್! ತನ್ನ ವಿಶಿಷ್ಟ ಹೆಸರಿನಂತೆ ಅಕ್ಷರಶಃ ಗ್ರಹಣವೇ! ಯಾರ ಕೈಗೂ ಎಟುಕದಂತೆ ಇರುವ ಬಹುದೂರದ ಹಳ್ಳಿ. ಅನ್ಯಗ್ರಹದಲ್ಲಿರುವ ಜಾಗದಂತೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆವ ಚುಂಬಕ ಶಕ್ತಿ.
ಹಿಮಾಚಲ ಪ್ರದೇಶದ ಬಹು ಸುಂದರ ಕಣಿವೆಗಳಲ್ಲಿ ಪಾರ್ವತಿ ಕಣಿವೆಯೂ ಒಂದು. ನಡೆದಷ್ಟೂ ಮುಗಿಯದ ದೇವದಾರು ಮರಗಳ ನಡುವಿನ ತಂಪಿನ ಹಸಿರು ಹಾದಿ, ನಡೆವ ಹಾದಿಯುದ್ದಕ್ಕೂ ಕೇಳುವ ಸ್ಪಟಿಕ ಶುದ್ಧ ಜಲಧಾರೆಯ ನಾದ, ಹಕ್ಕಿಗಳಿಂಚರ, ರಾತ್ರಿಯಾದರೆ ಬ್ರಹ್ಮಾಂಡವನ್ನೇ ತೆರೆದಿಟ್ಟಂತೆ ಕಾಣುವ ನಕ್ಷತ್ರಲೋಕ ಎಲ್ಲವೂ ಫುಲ್ ಪ್ಯಾಕೇಜಿನಲ್ಲಿ ಈ ಕಣಿವೆಯಲ್ಲಿ ಸಿಗುತ್ತದೆ.

ಹಿಮಾಚಲ ಪ್ರದೇಶದ ಕುಲ್ಲುವಿಗೆ ತಾಗಿಕೊಂಡಿರುವ ಪಾರ್ವತಿ ನದಿ ದಂಡೆಯ ಮೇಲಿರುವ ಕಸೋಲ್ ಎಂಬ ಪುಟ್ಟ ಊರು ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿರುತ್ತದೆ. ದಿಲ್ಲಿಯಲ್ಲಿ ವಾರಾಂತ್ಯ ಬಂದಕೂಡಲೇ ಕಾರು ತೆಗೆದುಕೊಂಡು ಎಲ್ಲಿಗಾದರೂ ಡ್ರೈವ್ ಮಾಡಿಕೊಂಡು ಹೋಗಿ ಇದ್ದು, ತಿಂದು, ಕುಡಿದು, ಹುಕ್ಕಾ ಎಳೆದು ಹೊಗೆ ಬಿಟ್ಟು ಮಜಾ ಮಾಡಿಕೊಂಡು ಹೋಗಬೇಕೆಂಬ ಮನಸ್ಥಿತಿಯ ಯುವಕ-ಯುವತಿಯರಿಂದ ಮೊದಲ್ಗೊಂಡು, ನದಿಯ ಜುಳುಜುಳು ನಾದ ಕೇಳುತ್ತಾ ಆನ್‌ಲೈನ್‌ನಲ್ಲೇ ಮೀಟಿಂಗು, ಕೆಲಸ ಮಾಡಿಕೊಂಡು ಕೆಲದಿನ ʻವರ್ಕ್ ಫ್ರಂ ಮೌಂಟೇನ್ʼ ಎನ್ನುತ್ತಾ ಲ್ಯಾಪ್‌ಟಾಪ್ ಹಿಡಿದುಕೊಂಡು ಕೂರುವ ಮಂದಿಯೂ, ತಿಂಗಳಾನುಗಟ್ಟಲೆ ಕೆಲಸ, ಮನೆ ಯಾವುದರ ಯೋಚನೆಯೂ ಇಲ್ಲದೆ ಎಲ್ಲ ಬಿಟ್ಟು ಸನ್ಯಾಸ ಸ್ವೀಕರಿಸಿದವರಂತೆ ಬದುಕನ್ನು ಸುಮ್ಮನೆ ಹೀಗೆ ಬೆಟ್ಟಗುಡ್ಡಗಳಲ್ಲಿ ಅಲೆದಾಡಿಕೊಂಡೇ ಕಳೆದುಬಿಡಬೇಕು ಎಂದು ಬಯಸುವಂಥ ಮಂದಿಯೂ, ಐದಾರು ದಿನ ರಜೆ ಹಾಕಿ, ಇದ್ದಷ್ಟು ರಜೆಯ ಲವಲೇಶವೂ ಮಿಸ್ಸಾಗದಂತೆ ಸಮಯ ಹೊಂದಿಸಿಕೊಂಡು ಚಾರಣಕ್ಕೆಂದು ಬಂದು ತಂಗುವವರವರೆಗೆ ಪ್ರವಾಸದ ನಾನಾ ಪರಿಕಲ್ಪನೆಯ ಮಂದಿ ಇಲ್ಲಿ ಸಿಗುತ್ತಾರೆ.
ದಿಲ್ಲಿಯಿಂದ ಆರಾಮವಾಗಿ 520 ಕಿ.ಮೀ. ಪ್ರಯಾಣ ಮಾಡಿಕೊಂಡು ಬಸ್ಸಿನಲ್ಲೋ, ಟ್ಯಾಕ್ಸಿಯಲ್ಲೋ, ಬೈಕು ಚಲಾಯಿಸಿಕೊಂಡೋ ತಲುಪಬಹುದಾದ, ಜಗತ್ತಿನ ಎಲ್ಲ ಸಾಮಾನ್ಯ ಸೌಲಭ್ಯಗಳೂ ಸಿಗಬಹುದಾದಂತಹ ಬೇಸಗೆಯೇನೆಂಬುದೇ ತಿಳಿಯದ ತಂಪಿನೂರು ಕಸೋಲ್. ಚಳಿಗಾಲದಲ್ಲಿ ಹಿಮ ಸುರಿವ, ಮಳೆಗಾಲದಲ್ಲಿ ಮಳೆ ಸುರಿವ ಈ ಪುಟ್ಟ ಪಟ್ಟಣವನ್ನು ಬಿಟ್ಟು ಕೊಂಚ ಆಚೀಚೆ ಕಾಲಿಟ್ಟರೆ ಹಿಮಾಲಯದ ಹಳ್ಳಿಗಳ ದಿಗ್ದರ್ಶನ ಮಾಡಿಸುವಂಥ ಜಾಗಗಳು ಬೇಕಾದಷ್ಟಿವೆ. ತೋಷ್, ಮಲಾನಾ, ರಸೋಲ್, ಚಲಾಲ್, ಕಲ್ಗ, ಪುಲ್ಗ, ಗ್ರಹಣ್ ಹೀಗೆ ನಡೆದಷ್ಟೂ ಮುಗಿಯದ ಹಳ್ಳಿಗಳಿಗೆ ಕಸೋಲ್‌ನಿಂದಲೇ ಹೊರಡಬೇಕು. ಹೀಗೆ ಮೈಲುಗಟ್ಟಲೆ ಪಾರ್ವತಿ ಕಣಿವೆಯಲ್ಲಿ ದೇವಲೋಕ ಸ್ಪರ್ಶಿಸುವ ದೇವದಾರು ಮರಗಳ ನೀಲಿ ಹಸುರುಗತ್ತಲ ಬೆಳಕಿನಲ್ಲಿ ನಡೆದುದಕ್ಕುವ ಇಂಥ ಸ್ವರ್ಗಸದೃಶ ಹಳ್ಳಿಗಳ ಆಕರ್ಷಣೆ ಒಂದೆಡೆಯಾದರೆ, ಇನ್ನೂ ಗಂಭೀರ ಚಾರಣಗಳಾದ ಖೀರ್‌ಗಂಗಾ, ಚಂದ್ರಕೇಣಿ, ರುದ್ರನಾಗ್, ಸರ್‌ಪಾಸ್, ಪಿನ್ ಪಾರ್ವತೀ ಕಣಿವೆಗಳ ಆಕರ್ಷಣೆ ಇನ್ನೊಂದೆಡೆ. ಇವೆಲ್ಲವುಗಳಿಗೆ ಕಸೋಲ್ ಎಂಬ ಪುಟ್ಟ ಪೇಟೆಯೇ ಮಡಿಲು.

ಅದೇ ನಗರ, ಅದೇ ಆಫೀಸು, ಅದೇ ಮನೆ, ಅವವೇ ಮಾರ್ಗಗಳು, ಬದುಕಿನ ನಾಗಾಲೋಟದಲ್ಲಿ ಸಾಗುವ ವೃತ್ತಿ ಜೀವನದಲ್ಲೊಮ್ಮೆ ಸೀದಾ ಎದ್ದು ಲ್ಯಾಪ್‌ಟಾಪ್ ಹೆಗಲಿಗೇರಿಸಿ ಎಲ್ಲ ಮರೆತು ಇಂಥದ್ದೊಂದು ಊರಿನಲ್ಲಿ ಯಾರ ಕೈಗೂ ಸಿಗದಂತೆ, ಬೆಳಗಿನಿಂದ ಸಂಜೆಯವರೆಗೆ ಕೆಲಸ ಮಾಡಿ ಮೆಲುದನಿಯ ಸಂಗೀತ ಕೇಳುತ್ತಾ, ಶುದ್ಧ ಗಾಳಿ ಹೀರುತ್ತಾ ಪ್ರಪಂಚದ ಯಾವ ಜಂಜಡಗಳಿಗೂ ನಮಗೂ ಯಾವ ಸಂಬಂಧವೂ ಇಲ್ಲ ಎಂಬಂತೆ ಸಂಜೆಗಳನ್ನು ನದಿ ದಂಡೆಗಳಲ್ಲಿ ಕಳೆಯುವಂತಿದ್ದರೆ ಎಂದು ಒಮ್ಮೆ ಯೋಚನೆ ಬಂದರೂ ಸಾಕು, ಎದ್ದು ಹೊರಟು ಬಿಡೋಣ ಎಂದು ಅನಿಸಿಬಿಡುವಷ್ಟು ಆಕರ್ಷಣೆ ಈ ಜಾಗಕ್ಕಿದೆ. ಒಮ್ಮೆ ಇದರ ರುಚಿ ನೋಡಿದರೆ ವರ್ಷಕ್ಕೊಮ್ಮೆಯಾದರೂ ಹೀಗೂ ಕೆಲಸ ಮಾಡುವ ಸ್ವಾತಂತ್ರ್ಯ ಬೇಕು ಅನಿಸದೆ ಇರದು. ಅದಕ್ಕೋ ಏನೋ, ಇಲ್ಲಿ ಎಡತಾಕುವ ಅಷ್ಟೂ ಕೆಫೆಗಳಲ್ಲಿ, ಹೋಂಸ್ಟೇಗಳಲ್ಲಿ ಲ್ಯಾಪ್‌ಟಾಪ್ ತೆರೆದಿಟ್ಟು ಗಹನವಾಗಿ ವಾರಪೂರ್ತಿ ಕೆಲಸ ಮಾಡುವ, ವೈಫೈ ಬೇಡವೆನಿಸುವ ವಾರಾಂತ್ಯಗಳಲ್ಲಿ ಎದ್ದು ಬ್ಯಾಗು ಹೆಗಲಿಗೇರಿಸಿ ಗುಡ್ಡ ಬೆಟ್ಟಗಳಲ್ಲಿ ಅಲೆದಾಡಿ ಈ ಹಳ್ಳಿಗಳಲ್ಲಿ ತಿಂದುಂಡು ಆನಂದವಾಗಿ ಕಳೆಯುವ ಜೀವಗಳು ಸಿಕ್ಕುತ್ತವೆ.
ಕಸೋಲ್‌ನಿಂದ ಸುಮಾರು 12 ಕಿ.ಮೀ.ಚಾರಣ ಮಾಡಿಕೊಂಡೇ ಹೋಗಬೇಕಾದ ಗ್ರಹಣ್ ಎಂಬ ಹಳ್ಳಿ ಇಂದಿಗೂ ಬಹಳಷ್ಟು ಸೌಲಭ್ಯಗಳಿಂದ ವಂಚಿತವೇ. ಇಂದಿಗೂ ಮೊಬೈಲ್ ಸಿಗ್ನಲ್ಲು ಸಿಗದ, ಸ್ಥಿರ ದೂರವಾಣಿಯನ್ನೇ ನಂಬಿಕೊಂಡಿರುವಂಥ ಹಳ್ಳಿಯಿದು. ಪ್ರವಾಸಿಗರಿಗೆ ಸಿಗುವ ಎಲ್ಲ ಸವಲತ್ತು, ಊಟ ಉಪಚಾರಗಳೂ ಕೂಡಾ ಕೆಳಗಿನ ಕಸೋಲ್‌ನಿಂದ ಈ ಹಳ್ಳಿಯ ಶ್ರಮಜೀವಿಗಳ ಬೆನ್ನ ಮೇಲೆಯೋ, ಪೋನಿ, ಕತ್ತೆಗಳ ಮೇಲೆಯೋ ಸವಾರಿ ಮಾಡಿಯೇ ಬರಬೇಕು. ಒಂದಿಷ್ಟು ದಿನಗಳಿಗೆಂದು ನಗರದಿಂದ ಬರುವ ಮಂದಿಯ ಎಲ್ಲ ಐಷಾರಾಮಿ ಇಷ್ಛಗಳನ್ನೂ ಪೂರೈಸುವ ಈ ಹಳ್ಳಿಗರು ಇಂದಿಗೂ ಈ ತಮ್ಮ ವ್ಯವಸಾಯವೆಂಬ ಹೊಟ್ಟೆಪಾಡಿನ ಜೊತೆಗೆ ಪ್ರವಾಸೋದ್ಯಮವನ್ನೂ ನೆಚ್ಚಿಕೊಂಡು ಬದುಕು ಸಾಗಿಸುತ್ತಾರೆ.
ಕಸೋಲ್‌ನಿಂದ ಸುಮಾರು ಏಳು ಕಿ.ಮೀ.ವರೆಗೆ ವಾಹನ ಸಂಚರಿಸಬಹುದಾದ ರಸ್ತೆಯ ಸಂಪರ್ಕವಿದ್ದರೂ ಗುಂಡಿಗೆಗಟ್ಟಿ ಇದ್ದವರಷ್ಟೇ ವಾಹನ ಚಾಲನೆ ಮಾಡಬಹುದು. ಕಲ್ಲು ಬಂಡೆಗಳ ಏರು ಹಾದಿಯಲ್ಲಿ ವಾಹನ ಚಾಲನೆ ಮಾಡುವ ಚಾಕಚಕ್ಯತೆ ಇದ್ದವರು ಇಲ್ಲಿ ಡ್ರೆöÊವ್ ಮಾಡಬಹುದು. ಉಳಿದ ಹಾದಿಗೆ ಯಾವುದೇ ಸುಲಭೋಪಾಯಗಳಿಲ್ಲ. ಕಾಡು, ನದಿ, ಬೆಟ್ಟಗಳ ಮಧ್ಯದಲ್ಲಿ ಹಾದುಹೋಗುವ ಕಿರುದಾರಿಯಲ್ಲಿ ಪ್ರಕೃತಿಯೊಂದಿಗೆ ಒಂದಾಗುತ್ತಾ ನಡೆದೇ ಸಾಗಬೇಕು.
ಈ ಗ್ರಹಣ್, ಮ್ಯಾಜಿಕ್ ಹನಿ ವಿಲೇಜ್ ಎಂದೂ ಪ್ರಸಿದ್ಧಿ ಪಡೆದಿದೆ. ಈ ಹೆಸರು ಬರಲು ಕಾರಣ ಇಲ್ಲಿ ಸಿಗುವ ಔಷಧೀಯ ಗುಣಗಳುಳ್ಳ ಅಪರೂಪದ ಜೇನು. ಇಲ್ಲಿನ ಕಾಡುಗಳ ವಿಶೇಷ ಗಿಡಮೂಲಿಕೆಗಳ ಹೂವುಗಳ ಮಕರಂದದ ಜೇನು ಇದಾಗಿದ್ದು ಒಂದು ಕೆ.ಜಿ.ಜೇನಿಗೆ ಎರಡು ಸಾವಿರ ರೂಪಾಯಿಗಳವರೆಗೂ ದರವಿದೆ. ಇದರ ನಿಯಮಿತ ಸೇವನೆಯಿಂದ ಮಂಡಿನೋವು, ಬೆನ್ನುನೋವು, ಶೀತ, ಕಫ ನೆಗಡಿಗಳಂತಹ ತೊಂದರೆಗಳಿಂದ ಬಿಡುಗಡೆ ಪಡೆಯಬಹುದು ಎಂದು ಹೇಳಲಾಗುತ್ತದೆ.
ಹಾಗೆ ನೋಡಿದರೆ ಗ್ರಹಣದ ಚಾರಣ ಕಷ್ಟವೇನಲ್ಲ. ಸುಮಾರು ಐದಾರು ಗಂಟೆ ನಿಧಾನವಾಗಿ ಆರಾಮವಾಗಿ ಗೆಳೆಯರ ಗುಂಪಿದ್ದರೆ ಹರಟೆ ಹೊಡೆಯುತ್ತಾ ಮಾಡಬಹುದಾದ ಚಾರಣ. ಇದಕ್ಕೆ ಗೈಡ್‌ಗಳ ನೆರವಿನ ಅಗತ್ಯವೂ ಇಲ್ಲ. ಗುಂಪಿದ್ದರೆ, ಈಗಾಗಲೇ ನಡೆದು ನಡೆದು ಗುರುತಾಗಿರುವ ಕಿರುಹಾದಿಯಲ್ಲಿ ನಡೆಯುತ್ತಿದ್ದರೆ ಅದು ಸೀದಾ ಗ್ರಹಣಕ್ಕೇ ಹೋಗಿ ತಲುಪುತ್ತದೆ. ಅಲ್ಲಲ್ಲಿ ಹಾದಿ ಮಧ್ಯೆ, ಗ್ರಹಣಕ್ಕೆ ಹೋಗುವ ದಾರಿ ಎಂಬ ಫಲಕಗಳೂ ನೀವು ಗೊಂಡಾರಣ್ಯದಲ್ಲಿ ಹಾದಿ ತಪ್ಪದಂತೆ ನೋಡಿಕೊಳ್ಳುತ್ತವೆ.
ವಿಷಯವೇನೋ ಸರಿ, ಆದರೆ, ಗ್ರಹಣಕ್ಕೆ ಹೋಗಿ ಮಾಡುವುದಾದರೂ ಏನು? ಸಿಗ್ನಲ್ಲು ಸಿಗದ ಈ ಹಳ್ಳಿಯಲ್ಲಿ ನಿಜಕ್ಕೂ ಕಳೆದು ಹೋಗಲು ಸಾಧ್ಯವಾ ಅಂತ ಬಹುತೇಕರಿಗೆ ಅನಿಸಬಹುದು. ಒಂದೆರಡೆ ದಿನಗಳಲ್ಲಿ ಫೋನ್ ಕಾಲಿಲ್ಲದೆ, ಮೆಸೇಜಿಲ್ಲದೆ, ಸಾಮಾಜಿಕ ಜಾಲತಾಣಗಳಿಲ್ಲದೆ, ಏನೋ ಕಳೆದುಕೊಂಡಂತೆ ಆಗಬಹುದು. ಆದರೆ ನಂಬಿದರೆ ನಂಬಿ, ನಿಜಕ್ಕೂ ಇಲ್ಲಿ ಕಳೆದುಹೋಗಬೇಕೆಂಬ ಮನಸ್ಥಿತಿಯಿದ್ದರೆ ಧ್ಯಾನಸ್ಥ ಮನಕ್ಕೊಂದು ಭರಪೂರ ವಾತಾವರಣ ಕಲ್ಪಿಸಿಕೊಡುವ ಏಕಾಂತವಿದೆ. ಯಾರಿಗ್ಗೊತ್ತು, ಇಲ್ಲಿ ಯಾರ ಹಂಗೂ ಇಲ್ಲದೆ, ನಿಮಿಷಕ್ಕೆ ಹತ್ತು ಬಾರಿ ಸದ್ದು ಮಾಡುವ ಫೋನ್ ಉಸಾಬರಿಯಿಲ್ಲದೆ, ದಿನದ 24 ಗಂಟೆ ಇಷ್ಟು ಅಗಾಧವಾಗಿದೆ ಎಂಬ ಜ್ಞಾನೋದಯವೂ ನಿಮಗೆ ಆಗಬಹುದು. ಇಷ್ಟು ಅಗಾಧವಾಗಿ ಕಾಣುವ ದಿನವನ್ನು ನಾವು ಸಾಧಾರಣವಾಗಿ ಹೇಗೆಲ್ಲ ಕಳೆದುಬಿಡುತ್ತೇವಲ್ಲ ಎಂಬ ಆತ್ಮಾವಲೋಕನಕ್ಕೂ ಇದೇ ವೇದಿಕೆಯೂ ಆಗಬಹುದು. ಅಥವಾ ಇರುವ ಒಂದೇ ಒಂದು ಅಮೂಲ್ಯ ಬದುಕನ್ನು ನಾವು ಇಂಥ ಯಾವ ಅನುಭವವನ್ನೂ ದಕ್ಕಿಸಿಕೊಳ್ಳದೆ ನೀರಸವಾಗಿ ಕಳೆದುಬಿಡುತ್ತಿದ್ದೆವಲ್ಲ ಎಂಬ ಚಿಂತನೆ ಇಲ್ಲಿಂದಲೇ ಹುಟ್ಟಿ ಇದು ನಿಮ್ಮ ಬದುಕಿನ ಹೊಸತೊಂದು ಅಧ್ಯಾಯಕ್ಕೂ ಮುನ್ನುಡಿ ಬರೆಯಬಹುದು.

ಹಾಗೆ ನೋಡಿದರೆ ನೀವು ಕಾಡು, ಮೌನವನ್ನು ಪ್ರೀತಿಸುವ ಮಂದಿಯಾಗಿದ್ದರೆ, ಗ್ರಹಣದಲ್ಲಿ ಸುತ್ತಾಡಲೂ ಬಹಳ ಜಾಗಗಳಿವೆ. ಗ್ರಹಣಕ್ಕೆ ತಲುಪಿ ಒಂದು ರಾತ್ರಿ ತಂಗಿ ನಿಧಾನವಾಗಿ ಎದ್ದು ಈ ಹಳ್ಳಿಯ ಉದ್ದಗಲ ಒಂದು ಸುತ್ತು ಹಾಕಿ ಬಂದರೆ ಬಹಳಷ್ಟು ಹೊಸ ವಿಷಯಗಳು ನಿಮ್ಮ ಕಣ್ತೆರೆಸುತ್ತದೆ. ಈ ಹಳ್ಳಿಗರ ಜೊತೆ ಕೂತು ಅವರ ಜೀವನಕ್ರಮ, ಗುಡ್ಡಗಾಡಿನಲ್ಲಿ ಎದುರಾಗುವ ಸವಾಲುಗಳು, ಬದುಕಿನ ಕಷ್ಟನಷ್ಟಗಳು, ಅವರ ಆಹಾರ ವೈವಿಧ್ಯ, ಜನಪದ, ಸಂಸ್ಕೃತಿ ಹೀಗೆ ಹತ್ತು ಹಲವು ವಿಚಾರಗಳನ್ನು ಮಾತಾಡಬಹುದು. ಅವರ ಕತೆಗಳಿಗೆ ಕಿವಿಯಾಗಬಹುದು. ಅಲ್ಲಿನ ಕೆಫೆಗಳಲ್ಲಿ ಕಾಲು ಚಾಚಿಕೂತು ಪಿಜ್ಜಾ ಆರ್ಡರ್ ಮಾಡುವ ಬದಲು, ಅವರಜೊತೆ ಬೆರೆತುಅವರ ಮನೆಯಲ್ಲಿಯೇ ಅವರದೇ ಆಹಾರ ತಂದೂಕಿನ ರುಚಿ ನೋಡಬಹುದು. ಅಲ್ಲಿನ ಮಂದಿ ಬೆಳಗಾದರೆ ಎದ್ದು ಹೋಗುವ ಗದ್ದೆ ಕೆಲಸಕ್ಕೆ ಅವರ ಜೊತೆಗೂಡಿ ಹೋಗಬಹುದು. ಅವರ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಲು ಹೋಗುವಾಗ ಅವರ ಜೊತೆ ಕಾಡು ಸುತ್ತಬಹುದು. ಇವೆಲ್ಲವೂ ನೀಡುವ ಬದುಕಿನ ಪಾಠಗಳು ಯಾವ ಶಾಲೆಯಲ್ಲೂ ಕಲಿಸುವುದಿಲ್ಲ. ಮಕ್ಕಳಿಗೆ ಭಾರತದ ಹಳ್ಳಿಗಳ ನಿಜವಾದ ಸ್ವರೂಪ ತೋರಿಸಿ, ಬದುಕುವುದೆಂದರೆ ಇದೂ ಹೌದು ಎಂಬುದರ ಅರಿವನ್ನು ಎಳವೆಯಲ್ಲಿಯೇ ಮೂಡಿಸಬಹುದು. ಆ ಮೂಲಕ ಬದುಕಿನ ನಿಜವಾದ ಅರ್ಥಗಳನ್ನು ಕಣ್ಣೆದುರಿಗೇ ತೋರಿಸಬಹುದು.
ಕೇವಲ ೫೦ ಮನೆಗಳಿರುವ ಬೆಟ್ಟದ ಮೇಲಿನ ಈ ಪುಟ್ಟ ಹಳ್ಳಿಯಲ್ಲಿ ಸುತ್ತಾಡಿ ಮುಗಿದರೆ, ಹಳ್ಳಿಯಿಂದ ಕಾಡು ಹಾದಿ ಬಳಸಿ ಜಲಪಾತಗಳೆಡೆಗೂ ಚಾರಣ ಹೋಗಬಹುದು. ಎರಡು ಮೂರುಗಂಟೆ ನಡೆವ ಮನಸ್ಸಿದ್ದರೆ, ಕಾಡ ಹಾದಿಯಲ್ಲಿ ಸಿಗುವ ಮೂರು ಜಲಪಾತಗಳ ಥರಗುಟ್ಟುವ ಚಳಿಯ ಸ್ಫಟಿಕ ಶುದ್ಧ ನೀರಿನಲ್ಲಿ ಮೀಯಬಹುದು. ಹಾಗೆ ಬಗ್ಗಿ ಬೊಗಸೆ ತುಂಬ ನೀರನ್ನು ಬಾಚಿ ಬಾಚಿ ಕುಡಿಯಬಹುದು. ಪರ್ವತದ ಹಾದಿಯಾಗಿ ಹರಿದು ಬರುವ ಈ ನೀರಿಗೆ ಕೇವಲ ಬಾಯಾರಿಕೆ ಇಂಗಿಸುವ ತಾಕತ್ತಲ್ಲ, ಹೊಟ್ಟೆ ತುಂಬಿಸುವ ರುಚಿಯೂ ಇದೆ ಎಂದು ಇಲ್ಲೇ ನಿಮಗೆ ಅರಿವಾಗಬಹುದು. ಕುಡಿದಷ್ಟೂ ಮತ್ತೂ ಕುಡಿಯಬೇಕೆನಿಸುವ ಸಮೃದ್ಧ ಸಿಹಿನೀರಿನ ಅನುಭವಯಾವ ದುಡ್ಡಿಗೂ ದಕ್ಕುವ ಅನುಭವವಲ್ಲ.

ಹಳ್ಳಿಗಳನ್ನು ಪ್ರೀತಿಸುವ ಪ್ರಕೃತಿಯಲ್ಲಿ ಕಳೆದು ಹೋಗಲಿಚ್ಛಿಸುವ, ಈ ಹಳ್ಳಿಗಳ ಪಾವಿತ್ರತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ಜವಾಬ್ದಾರಿಯುತ ಪ್ರವಾಸಿಗರು ಚಾರಣಿಗರು ಈ ಹಳ್ಳಿಗೆ ಹೋಗುವ ಇಚ್ಛೆಯಿದ್ದರೆ, ವರ್ಷಪೂರ್ತಿ ಹೋಗಬಹುದು. ಆದರೆ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳುಗಳು ಹಿಮ ಸುರಿಯುವುದರಿಂದ ಹಾಗೂ ಕಾಲುಗಳು ಹೂತು ಹೋಗುವಷ್ಟು ಹಿಮದ ಹಾದಿಯಲ್ಲೇ ನಡೆದು ಸಾಗಬೇಕಾಗುವುದರಿಂದ ಸಾಕಷ್ಟು ತಯಾರಿ ನಡೆಸಿಯೇ ಹೋಗಬಹುದು. ಇನ್ನುಳಿದ ತಿಂಗಳುಗಳಲ್ಲಿ ಮಳೆಗಾಲ ಕೊಂಚ ಯಾತನಾಮಯವಾಗಿ ಅನಿಸಿದರೂ, ಏಪ್ರಿಲ್, ಮೇ, ಜೂನ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳು ಗ್ರಹಣದ ಚಾರಣಕ್ಕೆ ಪ್ರಶಸ್ತ.
ಮೋಜು ಮಸ್ತಿಯ ಪ್ರವಾಸವೆಂಬ ಕ್ಷಣಿಕ ಮನರಂಜನೆಯ ಬೆನ್ನು ಹತ್ತದೆ ನಡೆದು ಸಾಗುವ ಇಂತಹ ಹಾದಿಗಳು ಹೊತ್ತು ತರುವ ಅಚ್ಚರಿಗಳು ಜೀವನ ಪ್ರೀತಿಗೆ ಸದಾ ನೀರೆರೆಯುತ್ತವೆ. ಮೌನವನ್ನು ಪ್ರೀತಿಸದ, ಕೇವಲ ಮೋಜು ಮಸ್ತಿಯೇ ಪ್ರವಾಸ ಎಂದುಕೊಳ್ಳುವ ಆತ್ಮಗಳೆಲ್ಲ ಇಂಥ ಹಳ್ಳಿಗಳ ದಾರಿ ಹಿಡಿಯದೆ ಕಸೋಲ್‌ನಲ್ಲೇ ಉಳಿದುಕೊಳ್ಳುವುದು ಉತ್ತಮ. ಅಷ್ಟರ ಮಟ್ಟಿಗಾದರೂ ಇಂಥ ಹಳ್ಳಿಗಳು ತನ್ನತನವನ್ನು ಉಳಿಸಿಕೊಂಡಾವು.