-ಶೌರ್ಯ ಡೆಸ್ಕ್
ರಾಜಕೀಯ ಒಳಮನೆಗಳಲ್ಲಿ, ವಿಧಾನಸಭೆ ಮೊಗಸಾಲೆಯಲ್ಲಿ ಅಧಿಕಾರಸ್ಥ ರಾಜಕಾರಣಿಗಳ ಜತೆ ‘ಕೂತಾಗ’ ಸದಾ ಅವರ ಕಿವಿಯಲ್ಲಿ ಏನನ್ನೋ ಉಸುರುತ್ತ ಅಲ್ಲಿರುವ ಇತರೆ ಪತ್ರಕರ್ತರ ಮುಂದೆ ಈ ರಾಜಕಾರಣಿಗೆ ನಾನೆಷ್ಟು ಕ್ಲೋಸು ಎಂಬುದನ್ನು ತೋರ್ಪಡಿಸುತ್ತ ಪೋಸ್ ನೀಡುವ ‘ಟಾಕುಠೀಕು’ ಪತ್ರಕರ್ತರೊಬ್ಬರು ಇಬ್ಬರ ಗಿಫ್ಟ್ ಒಬ್ಬರೇ ಹೊಡೆದುಕೊಂಡು ಹೋದರು ಎಂಬ ಗುಸುಗುಸು ಕೇಳಿಬರುತ್ತಿದ್ದು ನಗೆಪಾಟಲಿಗೀಡಾಗಿದೆ. ಬೃಹಸ್ಪತಿಯಂತೆ ಪೋಸ್ ಕೊಡುವ ಹಿರಿಯ ಪತ್ರಕರ್ತರು ಗಿಫ್ಟ್ ಲಂಚಕ್ಕಾಗಿ ಹತ್ತತ್ತು ಸಲ ಸಿಎಂ ಕಚೇರಿ ಸಿಬ್ಬಂದಿಗೆ ಪೋನ್ ಮಾಡಿದ್ದರಂತೆ. ಒಂದು ಪತ್ರಿಕೆಯ ಆಯಕಟ್ಟಿನ ಜಾಗದಲ್ಲಿ ಕೂತವರು ತಮ್ಮ ರಾಜಕೀಯ ವರದಿಗಾರನ ಮೂಲಕ ಇದ್ದಲ್ಲಿಗೆ ಸಿಹಿ ಮತ್ತು ಲಕ್ಷ್ಮಮ್ಮನನ್ನು ತರಿಸಿಕೊಂಡರಂತೆ…ಹೀಗೆ ತರಹೇವಾರಿ ಸುದ್ದಿಗಳು ಹಬ್ಬಿವೆ.

ಮುಖ್ಯವಾಹಿನಿ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕೆಲ ಪತ್ರಕರ್ತರ ಮುಖಗಳು ದೀಪಾವಳಿ ತಂದ ಬೆಳಕಿನಲ್ಲಿ ಲಕಲಕ ಹೊಳೆಯಲಾರಂಭಿಸಿವೆಯಂತೆ. ‘ಲಕ್ಷ್ಮೀ’ ಕಟಾಕ್ಷ ಸಿಕ್ಕ ಕಾರಣಕ್ಕೆ ಅವರ ಮುಖಾರವಿಂದಗಳು ರಂಗೇರಿರುವುದಂತೆ. ಜೇಬಿಗೆ ಹಿಡಿಸಲಾರದಷ್ಟು ಕಂತೆಕಂತೆ ಹಣದ ಜೊತೆಗೆ ಕೆಲವರಿಗೆ ಫಳಫಳ ಹೊಳೆಯುವ ದುಬಾರಿ ಮೊಬೈಲುಗಳೂ ಬಂದಿವೆಯಂತೆ. ರಾಜಧಾನಿ ಪತ್ರಕರ್ತರ ವಲಯದಲ್ಲಿ ಈ ಮಾತುಗಳು ಜೋರಾಗಿ ಕೇಳಿಬರುತ್ತಲೇ ‘ಗಿಫ್ಟ್ ಲಂಚ’ ವನ್ನು ವಾಪಸ್ ಬಿಸಾಕಿ ಬಂದರು ಎನ್ನಲಾದ ಪ್ರಾಮಾಣಿಕ ಪತ್ರಕರ್ತರು ಇದರ ಬಗ್ಗೆ ಅಸಹ್ಯಿಸಿಕೊಂಡು ಮಾತನಾಡತೊಡಗಿದ್ದಾರೆ.

ಈ ನಡುವೆ “ಕರ್ನಾಟಕದ ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿತಿಂಡಿಗಳ ಜೊತೆಗೆ ತಲಾ 2.5 ಲಕ್ಷ ರೂಗಳನ್ನು ಗಿಫ್ಟ್ ರೂಪದಲ್ಲಿ ಲಂಚ ನೀಡಿರುವ ಆರೋಪದ ಆಘಾತಕಾರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ” ಎಂದು “ನಾನು ಗೌರಿ.ಕಾಂ” ವೆಬ್ ಪೋರ್ಟಲ್ ವರದಿ ಮಾಡಿದೆ.
“ದೀಪಾವಳಿಯ ಸಂದರ್ಭದಲ್ಲಿ, ಕರ್ನಾಟಕದ ಬಹುತೇಕ ಎಲ್ಲಾ ಪತ್ರಕರ್ತರು ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿತಿಂಡಿಗಳು ಮತ್ತು ತಲಾ 2.5 ಲಕ್ಷ ನಗದು ಉಡುಗೊರೆ ಪಡೆದಿದ್ದಾರೆ. ದಯವಿಟ್ಟು ಚುನಾವಣೆಯವರೆಗೂ ಮಾಧ್ಯಮಗಳಿಂದ ಸರ್ಕಾರದ ವಿರೋಧಿ ಸುದ್ದಿಗಳನ್ನು ನಿರೀಕ್ಷಿಸಬೇಡಿ” ಎಂಬ ವೈರಲ್ ವಾಟ್ಸಾಪ್ ಸಂದೇಶದ ಜಾಡು ಹಿಡಿದು ಹೊರಟಾಗ ಸರ್ಕಾರದ ಬೃಹತ್ ಭ್ರಷ್ಟಾಚಾರ ಬಯಲಿಗೆ ಬಂದಿದೆ ಎಂದು ಗೌರಿ.ಕಾಂ ವರದಿ ಹೇಳಿದೆ.

ಕೆಲ ಪತ್ರಕರ್ತರು ಸಿಹಿ ತಿಂಡಿಯ ಪೊಟ್ಟಣದ ಜೊತೆ ನೋಟಿನ ಕಂತೆ ನೋಡಿದ ಕೂಡಲೇ ಗಿಫ್ಟ್ ರೂಪದ ಲಂಚ ಖಂಡಿಸಿ ಸಿಎಂ ಕಚೇರಿಗೆ ವಾಪಸ್ ನೀಡಿ ಬಂದಿದ್ದಾರೆ. ಇದೊಂದು ರೀತಿ ಭ್ರಷ್ಟಾಚಾರ ಎಂದು ಈ ಬೆಳವಣಿಗೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಕೆಲವು ಟಿವಿ ಚಾನೆಲ್ ನಿರೂಪಕರಿಗೆ ಮತ್ತು ರಾಜಕೀಯ ವಿಷಯಗಳನ್ನು ಕವರ್ ಮಾಡುವವರಿಗೆ ಸಹ 5 ಲಕ್ಷ ರೂಗಳ ವರೆಗೆ ಹಣ ನೀಡಿರುವುದನ್ನು ಮೂಲಗಳು ಖಚಿತಪಡಿಸಿವೆ ಎಂದು ಸುದ್ದಿ ಪೋರ್ಟಲ್ ಹೇಳಿದೆ.
ಅದೇ ಸಂದರ್ಭದಲ್ಲಿ ಕೆಲ ಪತ್ರಿಕೆಗಳಿಗೆ ಕೇವಲ ಸಿಹಿ ತಿಂಡಿಗಳ ಪೊಟ್ಟಣಗಳನ್ನು ನೀಡಲಾಗಿದೆ. ಈ ಕುರಿತು ಪ್ರಮುಖ ದಿನಪತ್ರಿಕೆಗೆ ಕರೆ ಮಾಡಿದಾಗ, “ಸಾರಿ, ನೋ ಕಮೆಂಟ್”ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಿಎಂ ಕಚೇರಿಯ ಮಾಧ್ಯಮ ಕಾರ್ಯದರ್ಶಿ ಮೋಹನ್ ಕೃಷ್ಣರವರನ್ನು ನಾನುಗೌರಿ.ಕಾಂ ವತಿಯಿಂದ ಸಂಪರ್ಕಿಸಲಾಯಿತು. ಅವರು, “ನಾನು ಯಾರಿಗೂ ಹಣ ಕೊಟ್ಟಿಲ್ಲ, ಹುಷಾರಿಲ್ಲದ ಕಾರಣದಿಂದ 15 ದಿನದಿಂದ ಕಚೇರಿಗೆ ನಾನು ಹೋಗಿಲ್ಲ, ಹಾಗಾಗಿ ಈ ಬಗ್ಗೆ ನನಗೆ ತಿಳಿದಿಲ್ಲ” ಎಂದರು ಅಂತ ನಾನು ಗೌರಿ.ಕಾಂ ವರದಿಯಲ್ಲಿ ಹೇಳಲಾಗಿದೆ.
ಈ ಕುರಿತು ಸ್ಪಷ್ಟೀಕರಣ ಪಡೆಯಲು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರನ್ನು ಸಂಪರ್ಕಿಸಲು ಯತ್ನಿಸಲಾದರೂ ಅವರು ಕರೆಗೆ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.

ಹಣ ಪಡೆದವರ ಪಟ್ಟಿ ಔಟ್
ಈ ನಡುವೆ ಹಣ ಪಡೆದ ಪತ್ರಕರ್ತರು ಯಾವ ಮಾಧ್ಯಮದವರು? ಅವರ ವಿವರವೇನು? ಎಂಬ ಪ್ರಶ್ನೆ ಮೂಡಿದ್ದು ಪತ್ರಕರ್ತರ ವಲಯದ ಪ್ರಕಾರ ‘ತುತ್ತೂರಿ’ ಊದುವ 3 ಸುದ್ದಿವಾಹಿನಿಗಳ ರಾಜಕೀಯ ಬೀಟ್ ನ ಎಲ್ಲಾ ಪತ್ರಕರ್ತರಿಗೂ ‘ಗಿಫ್ಟ್’ ರೊಕ್ಕ ಸಂದಾಯವಾಗಿದೆ. ಈ ಪೈಕಿ ಕೆಲವರು ವೈಯಕ್ತಿಕವಾಗಿಯೂ ಸರ್ಕಾರವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥಿಸಿಕೊಳ್ಳುವ ಮಂದಿ. ಇನ್ನು 2-3 ಪತ್ರಿಕೆಗಳ ರಾಜಕೀಯ ವರದಿಗಾರಿಕೆ ಮಾಡುವವರಿಗೂ ಕಂತೆಗಳು ಸಿಕ್ಕಿವೆ. ಕಚೇರಿಯಲ್ಲಿ ಕುಳಿತ ಸುದ್ದಿ ಸಂಪಾದಕರು, ರಾಜಕೀಯ ವಿಭಾಗ ಮುಖ್ಯಸ್ಥರು, ಪ್ರಮುಖ ಅ್ಯಂಕರ್ ಗಳಿಗೂ ಗಿಫ್ಟ್ ಲಂಚ ಹೋಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ರಾಜಕೀಯ ಓಳಮನೆಗಳಲ್ಲಿ, ವಿಧಾನಸಭೆ ಮೊಗಸಾಲೆಯಲ್ಲಿ ಅಧಿಕಾರಸ್ಥ ರಾಜಕಾರಣಿಗಳ ಜೊತೆ ‘ಕೂತಾಗ’ ಸದಾ ಅವರ ಕಿವಿಯಲ್ಲಿ ಏನನ್ನೋ ಉಸುರುತ್ತ ಅಲ್ಲಿರುವ ಇತರೆ ಪತ್ರಕರ್ತರ ಮುಂದೆ ಆ ರಾಜಕಾರಣಿ ನಾನಗೆಷ್ಟು ಕ್ಲೋಸು ಎಂಬುದನ್ನು ತೋರ್ಪಡಿಸುತ್ತಾ ಪೋಸು ನೀಡುವ ‘ಟಾಕುಠೀಕು’ ಪತ್ರಕರ್ತರೊಬ್ಬರು ಇಬ್ಬರ ಗಿಫ್ಟ್ ಒಬ್ಬರೇ ಹೊಡೆದುಕೊಂಡು ಹೋದರು ಎಂಬ ಗುಸುಗುಸು ಕೇಳಿಬರುತ್ತಿದ್ದು ನಗೆಪಾಟಲಿಗೀಡಾಗಿದೆ. ಬೃಹಸ್ಪತಿಯಂತೆ ಪೋಸ್ ಕೊಡುವ ಹಿರಿಯ ಪತ್ರಕರ್ತರು ಗಿಫ್ಟ್ ಲಂಚಕ್ಕಾಗಿ ಹತ್ತತ್ತೂ ಸಲ ಸಿಎಂ ಕಚೇರಿ ಸಿಬ್ಬಂದಿಗೆ ಪೋನ್ ಮಾಡಿದ್ದರಂತೆ. ಒಂದು ಪತ್ರಿಕೆಯ ಆಯಕಟ್ಟಿನ ಜಾಗದಲ್ಲಿ ಕೂತವರು ತಮ್ಮ ರಾಜಕೀಯ ವರದಿಗಾರನ ಮೂಲಕ ಇದ್ದಲ್ಲಿಗೆ ಸಿಹಿ ಮತ್ತು ಲಕ್ಷ್ಮಮ್ಮನನ್ನು ತರಿಸಿಕೊಂಡರಂತೆ…ಹೀಗೆ ತರಹೇವಾರಿ ಸುದ್ದಿಗಳು ಹಬ್ಬಿವೆ.
ಈ ಸುದ್ದಿಗಳು ಎಷ್ಟು ನಿಜವೋ ಸಿಎಂ ಕಚೇರಿಯೇ ಹೇಳಬೇಕು.