-ಶೌರ್ಯ ಸಂಗ್ರಹ
ನೋಡಲು ಪುಟ್ಟದಾದ ಎಲೆಗಳನ್ನು ಹೊಂದಿರುವ ಗರಿಕೆ ಗಣಪತಿಗೆ ಮಾತ್ರ ಪವಿತ್ರವಲ್ಲ. ಬದಲಾಗಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿವೆ. ಹಲವು ರೋಗಗಳಿಗೆ ಗರಿಕೆ ಮನೆಮದ್ದಾಗಿದೆ.

ಜ್ವರದ ಲಕ್ಷಣಗಳಿದ್ದರೆ ದೇಹದಲ್ಲಿ ಮೈಕೈ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಮೈಕೈ ನೋವನ್ನು ನಿವಾರಿಸಲು ಗರಿಕೆಯ ಕಷಾಯ ಉತ್ತಮವಾಗಿ ಕೆಲಸ ಮಾಡುತ್ತದೆ. ಗರಿಕೆ ಹುಲ್ಲು ಮತ್ತು ತುಳಸಿ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಅದನ್ನು ಬೆಳಗ್ಗೆ ಹಾಗೂ ರಾತ್ರಿ ಕುಡಿದರೆ ಮೈಕೈ ನೋವು ನಿವಾರಣೆಯಾಗುತ್ತದೆ. ಇದಲ್ಲದೇ ಹೊಟ್ಟೆಯೊಳಗಿನ ಜ್ವರವನ್ನು ಸಹ ಈ ಗರಿಕೆ ಕಷಾಯ ವಾಸಿ ಮಾಡಬಲ್ಲದು. ದೇಹದ ಹೊರಭಾಗದಲ್ಲಿ ಮೈ ಬಿಸಿಯಾಗುವುದಿಲ್ಲ, ಆದರೆ ಆಂತರಿಕವಾಗಿ ಸುಸ್ತು, ಪದೇ ಪದೇ ತಲೆ ಸುತ್ತಿದ ಅನುಭವವಾಗುತ್ತದೆ ಇದು ಒಳ ಜ್ವರದ ಲಕ್ಷಣವಾಗಿದೆ. ಇದಕ್ಕೆ ಗರಿಕೆ ಹುಲ್ಲಿನ ಕಷಾಯ ಉತ್ತಮ ಮನೆಮದ್ದಾಗಿದೆ. ಗರಿಕೆ ಹುಲ್ಲು, ಒಂದೆಲಗ, ಜೀರಿಗೆಯನ್ನು ಸೇರಿಸಿ ಕುದಿಸಿ ದಿನನಿತ್ಯ ಸೇವಿಸುತ್ತಾ ಬಂದರೆ ಒಳ ಜ್ವರ ನಿವಾರಣೆಯಾಗುತ್ತದೆ.

ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಸಿ ಹೊಂದಿರುವ ಗರಿಕೆಯನ್ನು ಅನಾದಿ ಕಾಲದಿಂದಲೂ ರಕ್ತ ಸೋರಿಕೆ ತಡೆಗಟ್ಟಲು ಬಳಕೆ ಮಾಡುವುದಿದೆ. ಹಸಿರು, ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ. ಎಲೆಗಳು ಉದ್ದವಾಗಿ, ಕಾಂಡಗಳು ದಪ್ಪವಾಗಿರುವ ಗಂಡದೂರ್ವಾ ಎಂಬ ಇನ್ನೊಂದು ಬಗೆ ಗರಿಕೆ ಕೂಡ ಇದೆ. ರಕ್ತ ಸೋರಿಕೆ ತಡೆಗಟ್ಟಲು, ಅಜೀರ್ಣ ನಿವಾರಣೆಗೆ, ಚರ್ಮ ವ್ಯಾಧಿಗೆ, ಮಧುಮೇಹ, ಸರ್ಪಸುತ್ತು, ಮೂತ್ರ ಸಂಬಂಧಿ ಕಾಯಿಲೆ ನಿವಾರಣೆಗೆ ಗರಿಕೆ ಬಳಕೆಯಾಗುತ್ತದೆ.
ಉಪಯೋಗಗಳು
ಅರಿಶಿನ, ಸುಣ್ಣ ಮತ್ತು ಗರಿಕೆ ಹುಲ್ಲನ್ನು ಚೆನ್ನಾಗಿ ಹಿಚುಕಿ ಉಗುರು ಸುತ್ತಿಗೆ ಪಟ್ಟು ಹಾಕಿದರೆ ಗುಣವಾಗುತ್ತದೆ. ಒಂದು ಚಮಚದಷ್ಟು ಸಕ್ಕರೆ ಪಾಕಕ್ಕೆ ಒಂದು ಚಮಚದಷ್ಟು ಗರಿಕೆ ಹುಲ್ಲಿನ ರಸವನ್ನು ಬೆರೆಸಿ 3 ಬಾರಿ ಕುಡಿದರೆ ಶೀತಭೇದಿ ಗುಣವಾಗುತ್ತದೆ.

ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸಲು, ಒಂದು ಹಿಡಿಯಷ್ಟು ಗರಿಕೆ ಹುಲ್ಲನ್ನು ಒಂದು ಬಟ್ಟಲಷ್ಟು ನೀರಿನ ಜೊತೆ ಬೆರೆಸಿ ಮಿಕ್ಸಿಗೆ ಹಾಕಿ ಅರೆಯಿರಿ. ನಂತರ ರಸವನ್ನು ಸೋಸಿಕೊಂಡು ಕುಡಿಯಿರಿ. ಇದೇ ರೀತಿ ಸುಮಾರು 40-45 ದಿನಗಳ ಕಾಲ ಕುಡಿದರೆ ರಕ್ತ ಶುದ್ಧೀಕರಣಗೊಂಡು ರೋಗಗಳು ದೂರಾಗುತ್ತವೆ.
ಮೈಕೈ ನೋವು ನಿವಾರಣೆಗೆ, ತೊಳೆದ ಗರಿಕೆ ಹುಲ್ಲನ್ನು ಎರಡು ಲೋಟ ಪ್ರಮಾಣದ ನೀರಿಗೆ ಹಾಕಿ ಒಲೆಯ ಮೇಲಿಟ್ಟು ಕುದಿಸಿರಿ. ಕಾದ ನೀರನ್ನು ಸ್ನಾನದ ನೀರಿನೊಡನೆ ಸೇರಿಸಿ ಸ್ನಾನ ಮಾಡಿ.
ಶೀತ ಹೋಗಲಾಡಿಸಲು, ಒಂದು ಹಿಡಿಯಷ್ಟು ತುಳಸಿ ಮತ್ತು ಒಂದು ಹಿಡಿಯಷ್ಟು ಗರಿಕೆ ಹುಲ್ಲನ್ನು ನೀರಿಗೆ ಹಾಕಿ ಕಾಯಿಸಿರಿ. ರಾತ್ರಿ ಕಾಯಿಸಿಟ್ಟ ನೀರನ್ನು ಬೆಳಗ್ಗೆ ಸೋಸಿ 3 ಬಾರಿ ಕುಡಿದರೆ ಶೀತ ಮಾಯ. ಕೆಲವೊಮ್ಮೆ ಗರಿಕೆ ರಸವನ್ನು ಮೂಗಿನ ಹೊಳ್ಳೆಗೆ ನೇರವಾಗಿ ಬಿಡುವುದುಂಟು. ಆದರೆ, ಸ್ವಯಂಚಿಕಿತ್ಸೆ ಮಾಡಲು ಮುಂದಾಗಿ ರಸದ ಪ್ರಮಾಣ ಹೆಚ್ಚು ಕಮ್ಮಿಯಾದರೆ ಅಪಾಯ.

ಬಿದ್ದ ಗಾಯಕ್ಕೆ ಮುಲಾಮು
ಗರಿಕೆ ಹುಲ್ಲನ್ನು ಚೆನ್ನಾಗಿ ನೀರಿನಲ್ಲಿ ತೊಳೆದು, ಅರೆದಾಗ ಬರುವ ರಸವನ್ನು ಅಥವಾ ನುಣ್ಣಗಾದ ಗರಿಕೆ ಪೇಸ್ಟನ್ನು ಬಿದ್ದ ಗಾಯಕ್ಕೆ ಹಚ್ಚಿದರೆ ರಕ್ತಸ್ರಾವ ನಿಲ್ಲುತ್ತದೆ.
1-2 ಚಮಚ ಶುಚಿಗೊಳಿಸಿದ ಗರಿಕೆ ರಸವನ್ನು ಸಮಪ್ರಮಾಣದ ಜೇನುತುಪ್ಪ ಅಥವಾ ಸಕ್ಕರೆ ಜತೆ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದರೆ ರಕ್ತಸ್ರಾವ, ಮೊಳೆರೋಗ, ಇತರ ಉರಿಗಳನ್ನು ತಡೆಗಟ್ಟಬಹುದು.