19.9 C
Bengaluru
Friday, March 17, 2023
spot_img

ವಗ್ಗರಣೆಯೆಂಬ ಬದ್ಮಾಶ್ ಮಾಯಾವಿ.. ನಾಲಿಗೆಯೆಂಬ ಮಾನಗೇಡಿ…

-ಕೇಶವರೆಡ್ಡಿ ಹಂದ್ರಾಳ

ನಮ್ಮ ಮನೆಗಳಲ್ಲಿ ಸಾರು ರುಚಿಯಾಗಿರಲು ಕಾರಣವಾಗುತ್ತಿದ್ದದ್ದು  ಮನೆಯಲ್ಲೇ ಮಾಡುತ್ತಿದ್ದ ಕಾರದಪುಡಿ, ಮಸಾಲೆಪುಡಿ ಮತ್ತು ಮೆಣಸಿನ ಪುಡಿಗಳಿಂದಾಗಿ. ನನಗೆ ತಿಳಿದಂತೆ ದಿನದಲ್ಲಿ ಒಬ್ಬರಾದರೂ ಬಂದು “ಯಂಗ್ಟಮ್ಮ ಹೆಣ್ಣು ನೋಡೋರು ಬರ್ತಾರೆ ಒಂದೆರ್ಡ ಚಮಚ ಕಾರದಪುಡಿ ಕೊಡು”, “ಅಯ್ಯೊ ನಮ್ಮೆಜ್ಮಾನ ಯಾಕೊ ಬಾಯ್ ಕೆಟ್ಟೈತೆ ಅಂತಾನೆ ಒಂದಿಷ್ಟು ಮಸಾಲೆಪುಡಿ ಕೊಡು ಯಂಗಟ್ರೋಣಕ್ಕ, ಮನೇಲಿ ಸಾಕಿರೊ ಕೋಳಿ ಒಂದೈತೆ, ಕೊಯ್ದು ಬಡಿತಿನಿ”..  “ನಮ್ಮನೇಲಿ ಕಾರದಪುಡಿ ಮುಗ್ದು ಎರಡು ದಿನ ಆಯ್ತು ಒಂದು ಸೌಟು ಕೊಟ್ಟಿರಮ್ಮಯ್ಯ, ಮುಂದಿನ ವಾರ ಪುಡಿ ಮಾಡ್ತೀವಿ..” ಮುಂತಾಗಿ ಕೇರಿಯ ಹೆಂಗಸರು ಬರುತ್ತಿದ್ದುದ್ದನ್ನು ನಾನು ಕಂಡಿದ್ದೇನೆ. ನಮ್ಮ ಮನೆಯಲ್ಲಿ ನಮ್ಮ ಪುಟ್ಟಮ್ಮ ಸಿಗಮ್ಮ  ಮೆಣಸಿನಕಾಯಿ, ಕೊತ್ತಂಬರಿ ಬೀಜ ಮುಂತಾಗಿ ಕಾರದಪುಡಿ ಹಾಗೂ ಮಸಾಲೆ ಪುಡಿ ಪದಾರ್ಥಗಳನ್ನು ಹದವಾಗಿ ಹುರಿಯುವುದರಲ್ಲಿ ಎಕ್ಸ್ಫರ್ಟ್ ಆಗಿದ್ದಳು. ಪುಟ್ಟಮ್ಮ ಸಿಗಮ್ಮ ಮಾಡಿದ ಸಾರಿನ ಪುಡಿಗಳು ವರ್ಷವಾದರೂ ಒಂದಿಷ್ಟೂ ಕೆಡುತ್ತಿರಲಿಲ್ಲ. ಹೀಗೀಗ ಹಳ್ಳಿಗಳ ಕಡೆ ಕೂಡ ಯಾರೂ ಮನೆಗಳಲ್ಲಿ ಸಾರಿನ ಪುಡಿಗಳನ್ನು ಮಾಡುವುದಿಲ್ಲ. ಅಂಗಡಿಗಳಲ್ಲಿ ಈಗ  ಥರಾವರಿ ಸಾರಿನ ಪುಡಿಗಳು ಲಭ್ಯವಾಗುತ್ತವೆ, ದುಡ್ಡೊಂದಿದ್ದರೆ ಸಾಕು. ಹಳ್ಳಿಗಾಡಿನ ಕಷ್ಟದ ಬದುಕಲ್ಲೂ  ಸಂಭವಿಸುತ್ತಿದ್ದ ಮಧುರ ಸ್ಮರಣೀಯ ಘಟನೆಗಳು ಇಂದು ಎಲ್ಲಾ ಕಡೆಯೂ ಮರೆಯಾಗುತ್ತಿವೆ. ಅಂದಿನ ಅನನ್ಯ ಸಹಜೀವನವನ್ನು ಇಂದಿನ ಅಖಂಡ ಸ್ವಾರ್ಥದ ಬದುಕು ಆವರಿಸಿದೆ. ಇಂಥ ಸಮಯದಲ್ಲಿ ನೆನಪುಗಳು ಇನ್ನಿಲ್ಲದ ಮನೋಲ್ಲಾಸವನ್ನು ತುಂಬುತ್ತವೆ.

ಒಂದು ಮಧ್ಯಾಹ್ನ ಊಟಕ್ಕೆ ಹೆಂಡತಿ ಬಿಸಿಬಿಸಿ ಮುದ್ದೆ ಮಸ್ಸೊಪ್ಪು ಮಾಡಿ ಗಂಗಾಳಾಕ್ಕೆ ಬಡಿಸಿದ್ದಳು. ಒಂದು ಹಿಡಿ ಕಡಲೇಬೀಜ ಪಕ್ಕದಲ್ಲಿಟ್ಟುಕೊಂಡು ಊಟಕ್ಕೆ ಕುಳಿತಿದ್ದೆ. ಬೇಳೆ ಸಾರು, ತರಕಾರಿ ಸಾರು ಮತ್ತು ಮಸ್ಸೊಪ್ಪುಗಳಿಗೆ ನಂಜಲು ನನಗೆ ಕಡ್ಲೆಬೀಜ ಮತ್ತು ಹುರುಳಿ ಹಪ್ಪಳ ಸೆಟ್ಟಾದಂಗೆ ಬೇರೆ ಏನೂ ಸೆಟ್ಟಾಗಲ್ಲ. ಸೀಕು ಸುಟ್ಟು ಕಡ್ಲೆಬೀಜದ ಜೊತೆ ನಂಜಿಕೊಂಡು ತಿಂದರಂತೂ ಸ್ವರ್ಗಕ್ಕೆ ಮೂರೇ ಗೇಣು ನನಗೆ. ಅದಿರಲಿ, ಗಂಗಾಳಾ  ಇಡುತ್ತಿದ್ದಂತೆ ಬಾಯಲ್ಲಿ ಜೊಲ್ಲು ಸುರಿಯುವುದರೊಂದಿಗೆ ನಾನು ಮುದ್ದೆ ಮುರಿದು ಸಾರಲ್ಲಿ ಅದ್ದಿ ಬಾಯಿಗಿಟ್ಟುಕೊಂಡಿದ್ದೆ. ಅರೆ, ಏಕೋ ಮಾಮೂಲಿ ರುಚಿಯಿಲ್ಲ. ಏನೋ ಯಡವಟ್ಟಾಗಿದೆಯಲ್ಲ ಎಂದುಕೊಳ್ಳುತ್ತಿರುವಾಗ ಹೆಂಡತಿ “ಅಯ್ಯಯ್ಯೊ ವಗ್ಗರಣೆ ಹಾಕೋದೆ ಮರೆತುಬಿಟ್ಟೆ, ಒಂದ್ನಿಮಿಷ ಇರಪ್ಪ ಹಾಕ್ಬಿಡ್ತೀನಿ” ಎಂದು ಸೌಟನ್ನು ಸ್ಟೌವ್ ಮೇಲೆ ಇಟ್ಟಿದ್ದಳು.

ಬಾಲ್ಯದಲ್ಲಿ ನಮ್ಮ ಬಯಲು ಸೀಮೆಯ ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಮೂರೊತ್ತೂ ಮಾಡುತ್ತಿದ್ದ ಅಡುಗೆಯೆಂದರೆ ರಾಗಿಮುದ್ದೆ ಮತ್ತು ಸಾರು. ಗದ್ದೆಯಿದ್ದು ಭತ್ತ ಬೆಳೆಯುತ್ತಿದ್ದವರು ಮಾತ್ರ ಅನ್ನವನ್ನೂ ಮಾಡುತ್ತಿದ್ದರು. ರಾಗಿಮುದ್ದೆಗೆ ಅವರವರ ಯೋಗ್ಯತೆಗನುಸಾರವಾಗಿ ತರಾವರಿ ಸಾರುಗಳನ್ನು ಮಾಡುತ್ತಿದ್ದರು. ಮಳೆಗಾಲದಲ್ಲಿ ಹೆಚ್ಚಾಗಿ ಸೊಪ್ಪಿನ ಸಾರು ಮಾಡಿದರೆ ಬೇಸಿಗೆಯಲ್ಲಿ ಒಣ ಕಾಳು ಮತ್ತು ಬೇಳೆಕಾಳುಗಳ ಸಾರುಗಳನ್ನು ಮಾಡುತ್ತಿದ್ದರು. ಇನ್ನು ಸುಗ್ಗಿಯ ಕಾಲದಲ್ಲಿ ಹಸಿ ಹಲಸಂದೆ ಕಾಳು, ಹಸಿ ಅವರೆ ಕಾಳು, ಹಸಿ ತೊಗರಿಕಾಳುಗಳ ಸಾರುಗಳು ಎಲ್ಲರ ಮನೆಗಳ  ಪಾತ್ರೆಗಳನ್ನು ಅಲಂಕರಿಸುತ್ತಿದ್ದವು. ಆದರೆ ಅತ್ಯಂತ ಹೆಚ್ಚಾಗಿ ಬಳಸುತ್ತಿದ್ದ ಧಾನ್ಯವೆಂದರೆ ಹುರುಳಿಕಾಳು. ಸಾಮಾನ್ಯವಾಗಿ ಊರಿನಲ್ಲಿ ಎಂಥ ಬಡವರ ಮನೆಗಳಲ್ಲೂ ಒಂದಿಷ್ಟಾದರೂ ಹುರುಳಿಕಾಳು ಸ್ಟಾಕ್ ಇರುತ್ತಿತ್ತು. ಹುರುಳಿಕಾಳನ್ನು ನೆನೆಸಿ, ಮೊಳಕೆ ಬರೆಸಿ ಒಣಗಿಹಾಕಿದರೆ ಬೇಳೆಯಾಗುತ್ತಿತ್ತು. ಇಂಥ ಬೇಳೆಯನ್ನು  ಕೆಡದಂತೆ ಗುಡಾಣಗಳಲ್ಲಿಟ್ಟು ತಿಂಗಳಾನುಗಟ್ಟಲೆ ದಾಸ್ತಾನು ಮಾಡಿ ಸೊಪ್ಪು, ತರಕಾರಿಗಳ ಜೊತೆಗೆ ಹಾಕಿ ಸಾರು ಮಾಡುತ್ತಿದ್ದರು. ಬರಿ ಇಂಥ ಬೇಳೆಯಲ್ಲಿ ಬಸ್ಸಾರು ಮಾಡಿದರಂತೂ ನಾಲಿಗೆಯಲ್ಲಿ ಲೊಟ್ಟಿಗೆಗಳು ಹೇಳದೆ ಕೇಳದೆ ಎದ್ದುಬಿಡುತ್ತಿದ್ದವು. ಬೆಂದ ಹುರುಳಿಕಟ್ಟಿಗೆ ಸುಟ್ಟ ಹಸಿಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು ಹಿಸುಕಿ ಅದರಲ್ಲಿ ಮುದ್ದೆ ತಿಂದರಂತೂ ಸ್ವರ್ಗಕ್ಕೆ ಮೂರೇ ಗೇಣು. ಮತ್ತು ಹುರುಳಿ ಕಾಳು ಗ್ಯಾಸ್ ಇಲ್ಲದ ಅತ್ಯಂತ ಪೌಷ್ಟಿಕವಾದ ಧಾನ್ಯ. ನಮ್ಮ ಕಡೆ ದುಡಿಯುವ ಎತ್ತುಗಳಿಗೆ ಪ್ರತಿದಿನ ಸಂಜೆ ಹುರುಳಿನುಚ್ಚು ಕೊಡುತ್ತಿದ್ದೆವು. ಹುರುಳಿನುಚ್ಚು ತಿಂದ ಎತ್ತುಗಳು ಚನ್ನಾಗಿ ಮೈಕಟ್ಟುತ್ತಿದ್ದವಲ್ಲದೆ ಎಂಥ ಕೆಲಸಗಳಿಗೆ ನೊಗ ಕಟ್ಟಿದರೂ ಸರಾಗವಾಗಿ ನಡೆಯುತ್ತಿದ್ದವು. ನಾವು ಚಿಕ್ಕಮಕ್ಕಳಾಗಿದ್ದಾಗ ಸಂಜೆ ಹೊತ್ತು ಎತ್ತುಗಳಿಗೆ ಹುರುಳಿನುಚ್ಚು ಇಡುವಾಗ ನಮಗೂ ಒಂದಿಷ್ಟಿಷ್ಟು ತಿನ್ನಿಸುತ್ತಿದ್ದರು. ಮನೆಯಲ್ಲಿ ತಿನ್ನಲು ಕಡ್ಲೆಕಾಯಿ, ಬೆಲ್ಲ ಏನೂ ಸಿಗದಿದ್ದಾಗ ಹುರುಳಿಕಾಳು  ಹುರಿದು ನಮ್ಮ ಜೇಬುಗಳಿಗೆ ತುಂಬುತ್ತಿದ್ದರು. ನಮ್ಮ ಬಯಲು ಸೀಮೆಯ ಹಳ್ಳಿ ಮನೆಗಳಲ್ಲಿ ಸಾಮಾನ್ಯವಾಗಿ ಸಾರುಗಳಿಗೆ ವಗ್ಗರಣೆಯನ್ನು ಇಡುತ್ತಿರಲಿಲ್ಲ. ಕೆಲವರ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಎಣ್ಣೆ ಇಲ್ಲದೆಯೇ ಸಾರು ಮಾಡುತ್ತಿದ್ದರು.

ನಮ್ಮ ಮನೆಯಲ್ಲಿ ಸದಾ ಕರೆಯುವ ಎರಡು ಎಮ್ಮೆಗಳಿರುತ್ತಿದ್ದುದ್ದರಿಂದ  ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪಗಳಿಗೆ ಬರವಿರುತ್ತಿರಲಿಲ್ಲ. ನಾವು ಮಕ್ಕಳು ರೊಟ್ಟಿಗಳನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿಟ್ಟಿರುತ್ತಿದ್ದ ಬೆಣ್ಣೆ ಮುದ್ದೆಯಲ್ಲೋ, ತುಪ್ಪದಲ್ಲೋ ಅದ್ದಿಕೊಂಡು ತಿನ್ನುತ್ತಿದ್ದೆವು. ನಮ್ಮ ಅಂಗಿ ಮತ್ತು ನಿಕ್ಕರ್ ಜೇಬುಗಳು ಇಂಥ ಘನಕಾರ್ಯಗಳಿಂದಾಗಿ ಸದಾ ಜಿಡ್ಡುಗಟ್ಟಿರುತ್ತಿದ್ದವು. ನಮ್ಮಮ್ಮ ಮತ್ತು ದೊಡ್ಡಮ್ಮಂದಿರು ಸಾರಿಗೆ ಬೆಣ್ಣೆ ಅಥವಾ ತುಪ್ಪದಲ್ಲಿ ವಗ್ಗರಣೆ ಹಾಕುತ್ತಿದ್ದರು. ವಗ್ಗರಣೆ ಹಾಕಿದಾಗ ಚುರ್ ಎನ್ನುತ್ತಿದ್ದ ಸದ್ದು ಕೇರಿಯ ಬೀದಿಗೆ ಕೇಳಿಸುತ್ತಿತ್ತಲ್ಲದೆ ವಗ್ಗರಣೆಯ ವಾಸನೆ ಇಡೀ  ಕೇರಿಯನ್ನು ಸುತ್ತಿಕೊಳ್ಳುತ್ತಿತ್ತು. ನಮ್ಮ ಕೇರಿಯ ಬೊಬ್ಬಿಲಿ ಗೋವಿಂದಪ್ಪ “ಆಹಾ, ನಮ್ಮ ಯಂಗಟ್ರೋಣಕ್ಕ ಆಗ್ಲೆ ಇಟ್ಲಮ್ಮ ವಗ್ಗರಣೆ. ಹೋಗ್ ಭಾಗ್ ಶಾಲಿ ಒಂದೆರರ್ಡ್ ಸೌಟ್ ಬಿಡುಸ್ಕೊ ಬಾ..” ಎಂದು ಹೆಂಡತಿ ರಂಗಮ್ಮನಿಗೆ ಹೇಳುತ್ತಾ ಬಾಯಲ್ಲಿ ನೀರೂರಿಸಿಕೊಳ್ಳುತ್ತಿದ್ದ. ನಮ್ಮ ಕೇರಿಯ ಅಖಂಡ ಬ್ರಹ್ಮಚಾರಿ ಪುವ್ವಲ ಕೊಂಡಪ್ಪ “ಎಲ್ಲಮ್ಮಯ್ಯ ಯಂಗ್ಟಮ್ಮ ಒಂದು ಸೌಟು ಸಾರ್ ಬಿಡು, ಯಾಕೋ ಬಾಯಿ ಕೆಟ್ಟಂಗೈತೆ…” ಎಂದು  ಬೊಪ್ಪಿಯನ್ನು (ಸಣ್ಣ ಸ್ಟೀಲ್ ಪಾತ್ರೆಯಂಥ ಮಣ್ಣಿನ ಮಡಿಕೆ) ಹಿಡಿದು ನಡುಮನೆಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ. ನಮ್ಮ ಚಿಗಮ್ಮ ಪುಟ್ಟನುಮಕ್ಕ, ನಮ್ಮ ದೊಡ್ಡಮ್ಮ ಅಚ್ಚಮ್ಮ ವಗ್ಗರಣೆ ಹಾಕುವುದರಲ್ಲಿ ತುಂಬಾ ಫೇಮಸ್ ಆಗಿದ್ದರು. ಹಾಗೆಯೇ ತರಾವರಿ ಸಾರುಗಳನ್ನು ಮಾಡುವುದರಲ್ಲೂ ನಿಸ್ಸೀಮರಾಗಿದ್ದರು. ಬೆಣ್ಣೆ, ತುಪ್ಪಗಳಿಲ್ಲದಾಗ, ಸಾಸಿವೆ ಕಾಳು ಇಲ್ಲದಾಗ ತಿಂಗಳಿಗೆ ಮೂರ್ನಾಲ್ಕು ಸಾರಿಯಾದರೂ ಮನೆಯಲ್ಲಿ ಸಾರಿಗೆ ವಗ್ಗರಣೆ ತಪ್ಪಿಹೋಗುತ್ತಿತ್ತು. ಈ ಬಗ್ಗೆ ಯಾರು ಬಾಯಿ ಬಿಚ್ಚದಿದ್ದರೂ ನಮ್ಮ ದೊಡ್ಡಪ್ಪ ಹನುಮಂತರೆಡ್ಡಿ ಮಾತ್ರ ಮಕ್ಕಳ ಕಡೆ ನೋಡಿ  ಮುನಿಸಿನಿಂದ “ಯಾವೊಳೋ ಸಾರು ಮಾಡಿದ್ದು, ಬಾಯ್ಗೆ ಇಕ್ದಂಗೈತೆ. ನಾನು ಗೊಜ್ ಹಿಸ್ಕೊಂಡ್ ತಿನ್ತೀನಿ” ಎನ್ನುತ್ತಿದ್ದ. “ಅಯ್ಯೋ ಬೆಣ್ಣೆ ತುಪ್ಪ ಎರಡೂ ಮುಗ್ದೋಗಿತ್ತು ಅದುಕ್ಕೆ ಸಾರಿಗೆ ವಗ್ಗರಣೆ ಮಾಡ್ಲಿಲ್ಲ ಭಾವ, ಒಂದೈದು ನಿಮಿಷ ಇರ್ರಿ..” ಎಂದು ಹೆಂಗಸರು ಹತ್ತನ್ನೆರಡು ನಿಮಿಷದಲ್ಲಿ ತೆಂಗಿನಕಾಯಿ ಚಟ್ನಿಯನ್ನೋ, ಕಡ್ಲೆಬೀಜದ ಚಟ್ನಿಯನ್ನೋ ರುಬ್ಬಿ ತಣಿಗೆಗೆ ಬಡಿಸುತ್ತಿದ್ದರು. ನಮ್ಮಪ್ಪ ಸಾರು ರುಚಿಸದಿದ್ದರೆ ಮೊಸರಿಗೆ ಒಂದೆರಡು ಕಲ್ಲು ಉಪ್ಪು, ಒಂದೆರಡು ಹಸಿಮೆಣಸಿನ ಕಾಯಿ ಹಿಸುಕಿಕೊಂಡು ಹಿಟ್ಟನ್ನು ಅದರಲ್ಲೆ ಅದ್ದಿಕೊಂಡು ತಿನ್ನುತ್ತಾ ಲೊಟ್ಟಿಗೆ ಹಾಕುತ್ತಿದ್ದ. ಮಜ್ಜಿಗೆಯಂತೂ ಪ್ರತಿಯೊಬ್ಬರ ತಣಿಗೆಯಲ್ಲೂ  ಕಂಪಲ್ಸರಿಯಾಗಿ ಅಲೆಯೆಬ್ಬಿಸುತ್ತಿತ್ತು. ಬೇಸಿಗೆಯಲ್ಲಿ ಕೆಲವರು ಹೊಟ್ಟೆ ತಂಪಾಗಿರುತ್ತದೆಂದು ರಾಗಿಮುದ್ದೆಯನ್ನೂ ಮಜ್ಜಿಗೆಯಲ್ಲಿ ನುಣ್ಣಗೆ ಕಲೆಸಿಕೊಂಡು ಜೂರುತ್ತಿದ್ದರು. ಸೂಲಗಿತ್ತಿ ತಿಮ್ಮಕ್ಕಜ್ಜಿಯಿದ್ದಾಗ ನಮ್ಮಪ್ಪನೇನಾದರೂ ಸಾರು ಚನ್ನಾಗಿಲ್ಲ ಎಂದರೆ ಒಂದು ಪ್ಲೇಟಿಗೆ ಸಾರನ್ನು ಹಾಕಿಕೊಂಡು ನೆಕ್ಕಿ ಎಲೆಡಿಕೆ ಕಡ್ಡಿಪುಡಿ ನಮಿಲಿ ನಮಿಲಿ ಕೆಂಪಾಗಿದ್ದ ಹಲ್ಲುಗಳನ್ನು ಪ್ರದರ್ಶಿಸುತ್ತಾ “ಸಾರಿಗೇನಾಗೈತೆ ದೆಂಗ್ಲು ಪಸಂದಾಗೆ ಐತೆ, ಬ್ಯಾಲ್ಯದ ಆ ಪಾಪಚ್ಚಿ ಹೋಟ್ಲಲ್ಲಿ ಅದೂ ಇದೂ ನೆಕ್ಕಿ ನೆಕ್ಕಿ ನಾಲ್ಗೆ ಕೆಟ್ಟೋಗಿರ್ಬೇಕು, ಒಂದಿಷ್ಟು ಗೊಡ್ಕಾರ ಮಾಡಿಸ್ಕಂಡು ತಿನ್ ಸಂಜೀವ ರೆಡ್ಡಿ. ದಿನವೂ ಹದಿನೈದಿಪ್ಪತ್ತು ಜನಕ್ಕೆ ಬೇಸಿ ಬೇಸಿ ಹೆಂಗಸರು ಕೈಗ್ಳು ರೋಸೋಗಿ ಒಂದೊಂದಪ ಉಪ್ಪು ಖಾರ ಹೆಚ್ಚುಕಮ್ಮಿ ಮಾಡ್ತಾವೆ. ಒಂದಿಷ್ಟು ಅನುಸರಿಸ್ಕಂಡು ಹೋಗ್ಬೇಕು..” ಎಂದು ನಗುತ್ತಿದ್ದಳು. ನಾನು ಕಂಡಂತೆ ಎಂಥ ಕಷ್ಟದ ಕೆಲಸವನ್ನಾದರೂ ನೀರು ಕುಡಿದಂತೆ ಮಾಡುತ್ತಿದ್ದ ಮಾದಿಗರ ಸೊಟ್ಟ ಕದರಪ್ಪನಂತೂ ಮೆಣಸಿನ ಗಿಡದಲ್ಲಿ ಒಂದಿಡಿ ಹಸಿಮೆಣಸಿನ ಕಾಯನ್ನು ಕಿತ್ತು ಬನೀನ್ ಜೇಬಿನಲ್ಲಿಟ್ಟುಕೊಂಡಿರುತ್ತಿದ್ದ. ಹಿಟ್ನೊತ್ತಿಗೆ ಹಿಟ್ಟು ಬಂದಾಗ ಪ್ರತಿ ತುತ್ತಿನ ಜೊತೆಗೂ ಹಸಿಮೆಣಸಿನ ಕಾಯನ್ನು ಕಡಿದುಕೊಂಡು ನಂಚಿಕೊಳ್ಳುತ್ತಿದ್ದ! “ಹಂಗೆ ಹಸಿಮೆಣಸಿನ ಕಾಯಿ ತಿನ್ನೋದ್ರಿಂದ್ಲೇ ಸೊಟ್ಟಕದರಪ್ಪ ಕೆಲಸದ ಮೇಲೆ ಅಷ್ಟೊಂದು ಪೌರುಷ ತೋರ್ಸೋದು. ಅಯ್ಯಯ್ಯಪ್ಪ ಅವನಂಗೆ ಖಾರ ತಿಂದ್ರೆ ಅಷ್ಟೆ, ತಿಕದಾಗೆ ಬೆಂಕಿ ಬಿದ್ದು ಪುಟ್ಗೋಸಿನಾಗೆ ಊದ್ರ ಕಿತ್ಕಂಬ್ತೈತೆ “ಎಂದು ಸೊಟ್ಟ ಕದುರಪ್ಪನ ಖಾಸಾ ದೋಸ್ತು ಯರ್ರಿ ಕುಕ್ಲಪ್ಪ ಎಲ್ಲಿ ಕೆಲಸಕ್ಕೋದರಲ್ಲಿ ಸೊಟ್ಟಕದುರಪ್ಪನ ಪ್ರತಾಪವನ್ನು ಉಲ್ಲೇಖಿಸುತ್ತಿದ್ದ.

ನಮ್ಮ ಅಜ್ಜಿ, ಅಂದರೆ ನಮ್ಮಪ್ಪನ ಅಮ್ಮ 101 ವರ್ಷ ಬದುಕಿ ನಾನು ಏಳನೆಯ ತರಗತಿಯಲ್ಲಿದ್ದಾಗ ಸ್ವಾತಂತ್ರ್ಯ ದಿನಾಚರಣೆಯ ದಿನ ಮರಣಹೊಂದಿದ್ದು. ತಲೆ ತುಂಬಾ ಕತ್ತಾಳೆ ನಾರಿನಂತೆ ದಟ್ಟವಾದ ಕೂದಲು, ಕಣ್ಣು ದೃಷ್ಟಿ ಕಳೆದುಕೊಂಡಿರಲಿಲ್ಲ. ಒಂದೇ ಒಂದು ಹಲ್ಲು ಉದುರಿರಲಿಲ್ಲ. ಕೋಲೂರಿಕೊಂಡು ಅಜ್ಜಿ ನಡೆದದ್ದನ್ನು ನಾನು ನೋಡಿರಲಿಲ್ಲ. ಎರಡು ಕಾಲರ ಮತ್ತು ಒಂದು ಪ್ಲೇಗ್ ಕಾಯಿಲೆಗಳನ್ನು ಕಂಡಿದ್ದಳಂತೆ. ಅಜ್ಜಿ ಬದುಕಿರುವವರೆಗೂ ಪ್ರತಿದಿನ ಮನೆಯಲ್ಲಿ ಏನು ಸಾರು ಮಾಡಬೇಕೆಂದು ತೀರ್ಮಾನಿಸುತ್ತಿದ್ದದ್ದು ಆಕೆಯೇ. ಬೆರಕೆ ಸೊಪ್ಪು, ಹಾಗಲಕಾಯಿ, ನುಗ್ಗೆ ಕಾಯಿ, ಬೆಂಡೆಕಾಯಿ, ಪಡುವಲಕಾಯಿ, ಹುಣಿಸೆ ಚಿಗುರು ಅಜ್ಜಿಗೆ ತುಂಬಾ ಇಷ್ಟವಾದವುಗಳಾಗಿದ್ದವು. ಹಾಗಲಕಾಯಿ ತಿನ್ನಬೇಕೆಂದು ಎಲ್ಲರಿಗೂ ರೋಪ್ ಹಾಕುತ್ತಿದ್ದಳು. ಹಂದಿ ಕೊಯ್ದರೆ ಹದಿನೈದು ದಿನಗಳವರೆಗೂ ಹುರಿದಿಟ್ಟುಕೊಂಡು ತಿನ್ನುತ್ತಿದ್ದಳು. ಹಾಗಲಕಾಯಿ, ನುಗ್ಗೆ ಸೊಪ್ಪು, ಹುಣಸೆ ಚಿಗುರು ಇತ್ಯಾದಿ ಕೆಲವು ಸಾರುಗಳು ಮಾಡಿದಾಗ ಅಜ್ಜಿಯನ್ನು ಬೈದುಕೊಳ್ಳುತ್ತಿದ್ದೆವು. ಆದರೆ ಅವೇ ಇವೊತ್ತಿನ ದಿನದ ನನ್ನ ಪ್ರೀತಿಯ ಸಾರುಗಳಾಗಿವೆ. ಹಸಿಕಾಳಿನ ಕಾಲದಲ್ಲಂತೂ ಊರಿನ ಎಲ್ಲರ ಮನೆಯಲ್ಲೂ ಎರಡು ಮೂರು ತಿಂಗಳ ಕಾಲ ಗಡದ್ದಾಗಿ ಕಾಳು ಸಾರು ಮಾಡುತ್ತಿದ್ದರು. ಎಲ್ಲಿ ನೋಡಿದರೂ ಢರ್ ಬುರ್ ಸದ್ದೇ ಸದ್ದು ! ನಮ್ಮ ಎದುರು ಮನೆಯ ಈರಪ್ಪಜ್ಜನ ಮನೆಯಲ್ಲಿ ಹದಿನೆಂಟು ಜನ ಇದ್ದರು. ಒಂದೊಂದು ದಿನ ಈರಪ್ಪಜ್ಜ “ಬಾಂಚೋದ್ ನಾಳೆಯಿಂದ ಹಸಿಕಾಳಿನ ಸಾರು ಕಡಿಮೆ ಮಾಡ್ರಮ್ಮಯ್ಯ, ಲಮ್ಡಿಕೆ ರಾತ್ರಿಯಲ್ಲೆ ಎಮ್ಮೆ ಎತ್ತುಗ್ಳ ಹುಡ್ರಿಕೆನ ಕೇಳಿ ಕೇಳಿ ನಿದ್ದೇನೆ ಹಾಳಾಗೋಯ್ತು…” ಎಂದು ಹಟ್ಟಿ ಮುಂದೆ ತೊಳೆದ ಹಸಿಹುಲ್ಲನ್ನು  ಹಾರಾಕುತ್ತಾ ಎಲಡಿಕೆಯ ಜೊಲ್ಲನ್ನು ಶರ್ಟಿನಿಂದ ಒರೆಸಿಕೊಳ್ಳುತ್ತಿದ್ದ. ನಮ್ಮ ಕೇರಿಯ ಗುಲ್ಲೀರಣ್ಣ ಹೊಲಗದ್ದೆಗಳಲ್ಲಿ ಕೆಲಸಕ್ಕೆಂದು ಕೂಲಿಯವರು ಬಂದ ದಿನ ಸಾರಿಗೆ ವಗ್ಗರಣೆ ಇಡಬೇಡಿರೆಂದು ಮನೆಯಲ್ಲಿ ಹೆಂಗಸರಿಗೆ ಎಚ್ಚರಿಕೆ ಕೊಡುತ್ತಿದ್ದ. “ಸಾರಿಗೆ ವಗ್ಗರಣೆ ಇಟ್ರೆ ಒಂದೊಂದ್ ಮುದ್ದೆ ಜಾಸ್ತಿ ಅಮುರ್ಸ್ಬಿಡ್ತಾರೆ. ಹೊಟ್ಟೆ ಭಾರ ಆಗಿ ಕೆಲ್ಸ ಸಾಗಲ್ಲ” ಎಂದು ಪಿಸುಗುಡುತ್ತಿದ್ದ. ಇಂಥ ಮಾತುಗಳು ಕಿವಿಗೆ ಬಿದ್ದಾಗ ಎದುರು ಮನೆಯ ನಿಂಗಮ್ಮಜ್ಜಿ “ಆಹಾ ಎಂಥ ಅನ್ನೆಕಾರ್ ಪ್ಲಾನೋ ಗುಲ್ಲೀರಣ್ಣ ನಿಂದು. ಪಲ್ಲಗಟ್ಲೆ ರಾಗಿ ಬೆಳಿತಿಯ ಅದ್ರಾಗೊಂದ್ ಮುದ್ದೆ ಜಾಸ್ತಿ ತಿಂದ್ರೆ ನಿನ್ ಗಂಟು ಏನೋಗ್ತೈತೆ.  ಒಂದು ಮುದ್ದೆ ಜಾಸ್ತಿ ಉಂಡ್ರೆ ಕೆಲ್ಸದಲ್ಲಿ ಒಂದ್ ಕೈ ಮುಂದಿರ್ತಾರೆ ತಿಳ್ಕ..” ಎಂದು ತಗುಲಿಕೊಳ್ಳುತ್ತಿದ್ದಳು.

ಕೆಲವರು ಮುದ್ದೆಯನ್ನು ಸಾರಿನಲ್ಲಿ ಹಿಸುಕಿಕೊಂಡು ಜೂರುತ್ತಿದ್ದರು. ಇನ್ನು ಕೆಲವರಂತೂ ಸಾರನ್ನು ನೆಕ್ಕುತ್ತಿದ್ದರು. ಇನ್ನೂ ಕೆಲವರು ಸಾರನ್ನು  ಕುಡಿಯುತ್ತಿದ್ದರು. ನಾನು ಎಂ.ಎ ಓದುವಾಗ ಕೂಡಾ ಹೊಲಕ್ಕೆ ಊಟ ತೆಗೆದುಕೊಂಡು ಹೋದರೆ ಮಿಕ್ಕ ಸಾರನ್ನು ಮನೆಗೆ ಹಿಂದಕ್ಕೆ ತರದೆ ಕುಡಿದು ಬಿಡುತ್ತಿದ್ದೆ. ಹಾಗಾಗಿ ನನಗೆ “ಶಾರ್ಲೋನು” ಎಂಬ ಅಡ್ಡೆಸರು ಬಿದ್ದಿತ್ತು. ತೆಲುಗಿನಲ್ಲಿ ಸಾರಿಗೆ ಶಾರು ಎಂದು ಕರೆಯುತ್ತಾರೆ. ಆಲೆಮನೆಯಲ್ಲಂತೂ  ಆಳುಗಳು ನಿದ್ದೆಗೆಡುತ್ತಿದ್ದರಿಂದ ಸಖತ್ತಾಗಿ ಮುದ್ದೆ ಜಡಿಯುತ್ತಿದ್ದರು. ಆಲೆಮನೆಯ ಕೊಪ್ಪರಿಗೆ ಒಲೆಗೆ ಬೆಂಕಿ ಹಾಕುತ್ತಿದ್ದ ಹೊಲೆಯರ ವೆಂಕಟ್ರೋರಣಪ್ಪನಂತೂ “ಇಗೋ ಸಂಜೀವರೆಡ್ಡಿ ಬೆಂಕಿ ಮುಂದೆ ಕುಂತು ಕುಂತು ಹೊಟ್ಟೆ ಉರಿ ಕಿತ್ತಂಬ್ತೈತೆ. ವಾರಕ್ಕೆರಡು ದಪನಾದ್ರೂ ಬ್ರಾಂಬ್ರು ಸರಸ್ವತಮ್ಮನೋರತ್ರ ಮಜ್ಜಿಗೆ ಹುಳಿ ಮಾಡಿಸ್ಕಂಡು ಬಾ, ಹೊಟ್ಟೆ ತಂಪಾಗ್ತೈತೆ..” ಎಂದು ಮಂಡಿಗೆ ಬೀಳುತ್ತಿದ್ದ. ಸರಸ್ವತಮ್ಮ ಮಜ್ಜಿಗೆ ಹುಳಿ ಮಾಡೋದ್ರಲ್ಲಿ ತುಂಬಾ ಫೇಮಸ್ ಆಗಿದ್ದರು. ಆಲೆಮನೆ ಮುಗಿಯೋದರೊಳಗೆ ಹಂಗೂ ಹಿಂಗೂ ಮಾಡಿ ಮೂರ್ನಾಲ್ಕು ಸಾರಿ ಸರಸ್ವತಮ್ಮನೋರ ಕೈಲಿ ನಮ್ಮಪ್ಪ ಮಜ್ಜಿಗೆ ಹುಳಿ ಮಾಡಿಸ್ಕಂಡು ಬರುತ್ತಿದ್ದ. ಅವೊತ್ತು ಮುದ್ದೆ ಬದಲಾಗಿ ಅನ್ನ ಮಾಡಲಾಗುತ್ತಿತ್ತು. ಹಿಂದೆ ಉಣ್ಣುವವರಿಗೆ ಗ್ಯಾರಂಟಿಒಂದಿಬ್ಬರಿಗಾದರೂ ಮಜ್ಜಿಗೆ ಹುಳಿ ಸಾಲದೆ ಬರುತ್ತಿತ್ತು. ಸಾಲದೆ ಬಂದವರು “ಎಂಥ ಬರ್ಗೆಟ್ ಜನುಗ್ಳಲೇ ನೀವು, ಮೊದ್ಲುನೋರೆಲ್ಲ  ಮುಕ್ಳಿತುಂಬಾ ಹೊಯ್ಕೊಂಡ್ರೆ ಹಿಂದಿನೋರೇನು ನಿಮ್ಮ ಶಾಟ ತರ್ಕೊಳ್ಳೋದ…” ಎಂದು ಎಂಜಲು ನುಂಗಿಕೊಂಡು ಹಾರಾಡುತ್ತಿದ್ದರು. ನಮ್ಮಪ್ಪ ಕೂಡಾ ಸರಸ್ವತಮ್ಮನವರ ಮಜ್ಜಿಗೆ ಹುಳಿಯ ದೊಡ್ಡ ಫ್ಯಾನ್ ಆಗಿದ್ದ! ನಮ್ಮ ಮನೆಗಳಲ್ಲಿ ಸಾರು ರುಚಿಯಾಗಿರಲು ಕಾರಣವಾಗುತ್ತಿದ್ದದ್ದು  ಮನೆಯಲ್ಲೇ ಮಾಡುತ್ತಿದ್ದ ಕಾರದಪುಡಿ, ಮಸಾಲೆಪುಡಿ ಮತ್ತು ಮೆಣಸಿನ ಪುಡಿಗಳಿಂದಾಗಿ. ನನಗೆ ತಿಳಿದಂತೆ ದಿನದಲ್ಲಿ ಒಬ್ಬರಾದರೂ ಬಂದು “ಯಂಗ್ಟಮ್ಮ ಹೆಣ್ಣು ನೋಡೋರು ಬರ್ತಾರೆ ಒಂದೆರ್ಡ ಚಮಚ ಕಾರದಪುಡಿ ಕೊಡು”, “ಅಯ್ಯೊ ನಮ್ಮೆಜ್ಮಾನ ಯಾಕೊ ಬಾಯ್ ಕೆಟ್ತೈತೆ ಅಂತಾನೆ ಒಂದಿಷ್ಟು ಮಸಾಲೆಪುಡಿ ಕೊಡು ಯಂಗಟ್ರೋಣಕ್ಕ, ಮನೇಲಿ ಸಾಕಿರೊ ಕೋಳಿ ಒಂದೈತೆ, ಕೊಯ್ದು ಬಡಿತಿನಿ”..  “ನಮ್ಮನೇಲಿ ಕಾರದಪುಡಿ ಮುಗ್ದು ಎರಡು ದಿನ ಆಯ್ತು ಒಂದು ಸೌಟು ಕೊಟ್ಟಿರಮ್ಮಯ್ಯ, ಮುಂದಿನ ವಾರ ಪುಡಿ ಮಾಡ್ತೀವಿ…” ಮುಂತಾಗಿ ಕೇರಿಯ ಹೆಂಗಸರು ಬರುತ್ತಿದ್ದುದ್ದನ್ನು ನಾನು ಕಂಡಿದ್ದೇನೆ.

ನಮ್ಮ ಮನೆಯಲ್ಲಿ ನಮ್ಮ ಪುಟ್ಟಮ್ಮ ಸಿಗಮ್ಮ  ಮೆಣಸಿನಕಾಯಿ, ಕೊತ್ತಂಬರಿ ಬೀಜ ಮುಂತಾಗಿ ಕಾರದಪುಡಿ ಹಾಗೂ ಮಸಾಲೆ ಪುಡಿ ಪದಾರ್ಥಗಳನ್ನು ಹದವಾಗಿ ಹುರಿಯುವುದರಲ್ಲಿ ಎಕ್ಸ್ಫರ್ಟ್ ಆಗಿದ್ದಳು. ಪುಟ್ಟಮ್ಮ ಸಿಗಮ್ಮ ಮಾಡಿದ ಸಾರಿನ ಪುಡಿಗಳು ವರ್ಷವಾದರೂ ಒಂದಿಷ್ಟೂ ಕೆಡುತ್ತಿರಲಿಲ್ಲ. ಹೀಗೀಗ ಹಳ್ಳಿಗಳ ಕಡೆ ಕೂಡ ಯಾರೂ ಮನೆಗಳಲ್ಲಿ ಸಾರಿನ ಪುಡಿಗಳನ್ನು ಮಾಡುವುದಿಲ್ಲ. ಅಂಗಡಿಗಳಲ್ಲಿ ಈಗ  ಥರಾವರಿ ಸಾರಿನ ಪುಡಿಗಳು ಲಭ್ಯವಾಗುತ್ತವೆ, ದುಡ್ಡೊಂದಿದ್ದರೆ ಸಾಕು. ಹಳ್ಳಿಗಾಡಿನ ಕಷ್ಟದ ಬದುಕಲ್ಲೂ  ಸಂಭವಿಸುತ್ತಿದ್ದ ಮಧುರ ಸ್ಮರಣೀಯ ಘಟನೆಗಳು ಇಂದು ಎಲ್ಲಾ ಕಡೆಯೂ ಮರೆಯಾಗುತ್ತಿವೆ. ಅಂದಿನ ಅನನ್ಯ ಸಹಜೀವನವನ್ನು ಇಂದಿನ ಅಖಂಡ ಸ್ವಾರ್ಥದ ಬದುಕು ಆವರಿಸಿದೆ. ಇಂಥ ಸಮಯದಲ್ಲಿ ನೆನಪುಗಳು ಇನ್ನಿಲ್ಲದ ಮನೋಲ್ಲಾಸವನ್ನು ತುಂಬುತ್ತವೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles