20.9 C
Bengaluru
Wednesday, March 15, 2023
spot_img

ದೇವಲೋಕದ ಪುಷ್ಪವೊಂದರ ಹಿಂದೆ ಬಿದ್ದು!

-ರಾಧಿಕಾ ವಿಟ್ಲ

ಭಾರತದಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡದ ಕೆಲವೇ ಚಾರಣಗಳಲ್ಲಿ ಅಪರೂಪದ ಬ್ರಹ್ಮಕಮಲವನ್ನು ನೋಡಬಹುದು. ಅದು ಬಿಟ್ಟರೆ ಮಂಗೋಲಿಯಾ, ನೈರುತ್ಯ ಚೀನಾ, ಉತ್ತರ ಬರ್ಮಾದ ಕೆಲ ಭಾಗಗಳಲ್ಲಿ ಮಾತ್ರ ಈ ಹೂವು ಕಾಣಸಿಗುತ್ತದೆಯಂತೆ. ವರ್ಷದಲ್ಲಿ ಒಮ್ಮೆ ಮಾತ್ರ ಅಂದರೆ, ಜುಲೈ-ಆಗಸ್ಟ್ ತಿಂಗಳಲ್ಲಿ ಮಾತ್ರ ಅರಳುತ್ತದೆ. ಔಷಧೀಯ ಗುಣವನ್ನೂ ಹೊಂದಿರುವ ಇದು ಹಿಮಾಲಯದ ತಪ್ಪಲ ದೇವಾಲಯಗಳಲ್ಲೆಲ್ಲ ದೇವರಿಗೆ ಯಥೇಚ್ಛವಾಗಿ ಅರ್ಪಣೆಯಾಗುವ ವಿಶೇಷ ಹೂವು. ಅಂಗೈ ಅಗಲದಷ್ಟು ದೊಡ್ಡದಾಗಿರುವ ಈ ಹೂವು ಕೆಲವೇ ಗಂಟೆಗಳಿಗೆ ಮಾತ್ರ ಅರಳುತ್ತದೆಯೆಂದೂ, ಇದು ಅದೃಷ್ಟದ ಸಂಕೇತವೆಂದೂ ಭಾವಿಸಲಾಗುತ್ತದೆ. ಈ ಹೂವಿನ ಬೆನ್ನು ಹತ್ತಿ ಹಿಮಾಲಯಕ್ಕೆ ಹೊರಟ ಲೇಖಕರ ಅನುಭವ-ಸಾಹಸಗಳು ಇಲ್ಲಿ ಅನಾವರಣವಾಗಿವೆ.

ಜೋರು ಮಳೆ. ಎಂಥಾ ಮಳೆ ಎಂದರೆ ಹಿಂದೆಲ್ಲ ಮಲೆನಾಡಿನಲ್ಲಿ ದಿನಗಟ್ಟಲೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಹಾಗೆ, ಧೋ… ಎಂದು ಎಡೆಬಿಡದೆ ಸುರಿಯುತ್ತಿತ್ತು. ಉತ್ತರಾಖಂಡದ ಮಳೆಯೇ ಹಾಗೆ, ಆಕಾಶವೂ ಭೂಮಿಯೂ ಒಂದಾಗಿಬಿಡುತ್ತದೆ. ನಾವಿರುವ ನೆಲ ಬಿಟ್ಟು ಬೇರೇನೂ ಕಾಣದ ಹಾಗೆ, ನಾವೆಲ್ಲೋ ತುಂಡುಭೂಮಿಯಲ್ಲಿ ನಿಂತು ನಿಜಭೂಮಿಯ ಸಂಪರ್ಕವೇ ಕಡಿದುಕೊಂಡ ಹಾಗೆ ಅನಿಸಿಬಿಡುತ್ತದೆ. ಇಂಥ ಮಳೆಯಲ್ಲಿ ಆ ಹೂಗಳ ರಾಶಿಯ ಸ್ವರ್ಗಕ್ಕೆ ಕಾಲಿಟ್ಟಿದ್ದೆ.

ಹೂಕಣಿವೆ ಜೀವಮಾನದಲ್ಲೊಮ್ಮೆ ನೋಡಬೇಕು ಎಂದರೆ ಇದಕ್ಕೆಲ್ಲ ತಯಾರಿರಲೇಬೇಕು. ಬರೀ ಮಳೆಯಷ್ಟೇ ಅಲ್ಲ, ಮಳೆ ಸೃಷ್ಟಿಸುವ ಅವಾಂತರಗಳಿಗೆಲ್ಲ ತಯಾರಾಗಿ ಹೊರಡಬೇಕು. ಅದೂ ಅಲ್ಲದೆ, ನಡೆಯಲಾರದೆ, ಸಾಮಾನು ಹೊರಲಾರದೆ ಅಥವಾ ಹೋಗುವ ಮಂದಿಯ ವ್ಯವಸ್ಥೆಗೆಂದು ಸಾಗುವ ಪೋನಿಗಳೆಂಬ ಏಕೈಕ ಸಂಚಾರ ಸೌಲಭ್ಯ ಲಭ್ಯವಿರುವ ಅಂಥ ಜಾಗದಲ್ಲಿ, ದಾರಿ ತುಂಬ ಬಿದ್ದಿರುವ ಇವುಗಳ ಲದ್ದಿ ತಚಪಚನೆ ತುಳಿಯುತ್ತಾ, ಜಾರುವಲ್ಲಿ ಜಾರಿ, ಏರುವಲ್ಲಿ ಏರಿ, ದಾಟುವಲ್ಲಿ ದಾಟಿ, ಜಾರಿದರೆ ಬಿದ್ದು ಎದ್ದು ಸಾಗಬೇಕು ಅಷ್ಟೇ. ಇವಕ್ಕೆಲ್ಲ ಸರಿಯಾದ ತಯಾರಿಯಿಲ್ಲದೆ ಹೊರಟರೆ ಕತೆ ಮುಗಿದಂತೆಯೇ. ಒದ್ದೆ, ವಾಸನೆ ಎಂದೆಲ್ಲ ಹೇಸಿಗೆ ಪಟ್ಟುಕೊಳ್ಳುವವರೆಲ್ಲ ಗೂಗಲ್ ಸರ್ಚ್ ತೋರಿಸಿದ ಹೂಕಣಿವೆಯ ಸೊಬಗಿಗೆ ಮಾರುಹೋಗಿ ಇದು ಹೂವಿನ ಹಾಸಿಗೆಯೆಂದು ತಿಳಿದು ಹೊರಟರೆ ಖಂಡಿತ ಈ ಹಾದಿ ನರಕವೇ ಆಗಿಬಿಡುತ್ತದೆ.

ಹೌದು. ಈಗ ನಾನು ಹೇಳಹೊರಟಿರುವುದು ಉತ್ತರಾಖಂಡದ ಹೂಕಣಿವೆಯ ಚಾರಣದ ಕುರಿತಾದುದೇ. ಭಾರತದೊಳಗಿನ ಪ್ರಸಿದ್ದ ಚಾರಣಗಳಲ್ಲೆಲ್ಲ ಟಾಪ್ 10 ರೊಳಗೆ ಬರುವ ಈ ಹೂಕಣಿವೆ ಎಲ್ಲರ ಬಕೆಟ್ ಲಿಸ್ಟಿನಲ್ಲಿರುವಂಥದ್ದೇ. ಆದರೆ ಇಲ್ಲೊಂದು ಸಣ್ಣ ಟ್ವಿಸ್ಟು. ಹೂಕಣಿವೆಯೊಳಗಿನ ನೂರಾರು ಹೂಗಳ ಪೈಕಿಯ ಅನಭಿಷಿಕ್ತ ದೊರೆಯ ಬಗ್ಗೆಯಷ್ಟೇ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನ. ಅದು ದೇವಲೋಕದಿಂದಲೇ ಧರೆಗಿಳಿದ ಪುಷ್ಪ. ಬ್ರಹ್ಮಕಮಲ.

ಬಹುತೇಕರು ಬ್ರಹ್ಮಕಮಲವೆಂದಾಗ ಊರಲ್ಲಿ ರಾತ್ರಿ ಅರಳುವ ಬೆಳ್ಳನೆಯ ಹೂವೆಂದು (ಕಳ್ಳಿ ಜಾತಿಯ ಹೂಗಿಡ) ಅಪಾರ್ಥ ಮಾಡಿಕೊಳ್ಳುವುದುಂಟು. ಅದಕ್ಕೂ ಸಾಮಾನ್ಯ ಬಳಕೆಯಲ್ಲಿ ಬ್ರಹ್ಮಕಮಲವೆಂಬ ಹೆಸರಿರೋದು ನಿಜವೇ. ನನಗೂ ಸಣ್ಣವಳಿದ್ದಾಗ ಅವರಿವರ ಮನೆಯಿಂದ ಎಲೆ ಚಿವುಟಿ ತಂದು ನೆಟ್ಟು ಬೆಳೆಸಿ, ಅದು ಬೆಳೆದು ದೊಡ್ಡವಾಗಿ, ಮೊಗ್ಗಾಗಿ, ಬೆಳದಿಂಗಳ ಬೆಳಕಿಗೆ ಅದು ಅರಳುವುದನ್ನೇ ಕಾದು ಕೂತಿದ್ದೆಲ್ಲ ನೆನಪಿದೆ. ಆದರೆ, ಈಗ ನಾನು ಹೇಳಲು ಹೊರಟಿರುವುದು ಅಂತಿಂಥ ಬ್ರಹ್ಮಕಮಲವಲ್ಲ. ಪುರಾಣಗಳಲ್ಲಿ ಉಲ್ಲೇಖವಿರುವ ಹಿಮಾಲಯದ ಹೂವು. ದೇವಲೋಕದ ಪುಷ್ಪ. ನಿಂಬೆಯಂಥ ತಿಳಿ ಹೊಂಬಣ್ಣದ ಕಮಲದ ಮೊಗ್ಗಿನಂಥ ಅಪರೂಪದ ಹೂವು. ಒಳಗೆ ಕಪ್ಪು ಬಣ್ಣದ ಕುಸುಮ. ಭಯಂಕರವೆಂದರೆ ಭಯಂಕರ ಪರಿಮಳ. ಕೆಲವರಿಗೆ ತಲೆನೋವು ಬರುವ ಘಾಟೂ ಆಗಬಹುದು. ರಾತ್ರಿ ಅರಳುವ ಇದು ಬ್ರಹ್ಮನ ಕೈಲಿರುವ ಕಮಲದಂಥ ಹೂವು, ಭೀಮ ದ್ರೌಪದಿಗೆಂದು ಹುಡುಕಿಕೊಂಡು ಹೋದ ಹೂವು, ಶಿವ ಮಗನ ತಲೆ ಕಡಿದಾಗ ಮತ್ತೆ ಆನೆ ತಲೆ ಸೇರಿಸಿ ಜೀವ ಕೊಡುವಾಗ ಬಳಸಿದ ಹೂವು, ಸಂಜೀವಿನಿಯಿಂದ ಲಕ್ಷö್ಮಣ ಬದುಕಿದಾಗ ದೇವರುಗಳು ಸ್ವರ್ಗದಿಂದ ಪುಷ್ಪವೃಷ್ಟಿಗೈದಾಗ ಭೂಲೋಕಕ್ಕೆ ಬಿದ್ದು ಹುಟ್ಟಿದ ಗಿಡ… ಹೀಗೆ ಹುಡುಕ ಹೊರಟರೆ ಕತೆಗಳು ಬಹಳಷ್ಟು ಒಂದೊಂದಾಗಿ ತೆರೆದುಕೊಳ್ಳುತ್ತದೆ.

ಆ ವಿಷಯ ಹಾಗಿರಲಿ, ಕೆಲ ವರ್ಷಗಳ ಮೊದಲು ಹಿಮಾಚಲದ ಮೂಲೆಯೊಂದರ ಚಂದ್ರನಹಾನದ ಚಾರಣದಲ್ಲಿ ಹರಟೆ ಹೊಡೆಯುತ್ತಾ ನಮ್ಮ ಗೈಡ್ ಭಜನ್ ಶಾಂತೋ, ಜುಲೈ ಆಗಸ್ಟಿನಲ್ಲಿ ಬನ್ನಿ, ಈ ಹಿಮ ಪರ್ವತಗಳೆಲ್ಲ ಹಸಿರಾಗಿ ಬ್ರಹ್ಮಕಮಲ ತುಂಬಿರುತ್ತದೆ ಎಂದಿದ್ದ. ಜೊತೆಗೆ ಮೊಬೈಲಿನಲ್ಲಿ ಹುಡುಕಿ ಬ್ರಹ್ಮಕಮಲದೊಂದಿಗಿನ ಸೆಲ್ಫಿಯನ್ನೂ ತೋರಿಸಿದ್ದ. ಛೇ, ಒಮ್ಮೆ ನೋಡಬೇಕಲ್ಲಾ ಇದನ್ನು ಅಂದುಕೊಂಡಿದ್ದೆವು.

ಅದಾಗಿ ಹತ್ತಿರ ಹತ್ತಿರ ವರ್ಷವೊಂದು ಕಳೆದಿತ್ತು. ಜುಲೈ ಬಂದಾಗ ಮತ್ತೆ ಬ್ರಹ್ಮಕಮಲದ ನೆನಪಾಯಿತು. ಬ್ರಹ್ಮಕಮಲ ಬೆಟ್ಟದ ತುಂಬ ಸಾಲು ಸಾಲು ಅರಳಿರುವ ಕನಸು ಕಾಣುತ್ತಾ ಅದನ್ನು ಹುಡುಕಿಕೊಂಡು ಮತ್ತೆ ಅದೇ ಜಾಗಕ್ಕೆ ಹೋಗಬೇಕು ಅನಿಸಿದಾಗ ಈ ಹೂಕಣಿವೆ ನೆನಪಾಯಿತು. ಚಾರಣ, ತಿರುಗಾಟಗಳಲ್ಲಿ ಆಸಕ್ತಿ ಇರುವ ಯಾರಿಗೇ ಆದರೂ ಒಮ್ಮೆ ಹೂಕಣಿವೆಯನ್ನು ನೋಡಿಕೊಂಡು ಬರಬೇಕೆಂಬ ಆಸೆ ಇರದೇ ಇರುವುದಿಲ್ಲ. ಹಾಗೆ, ಬ್ರಹ್ಮಕಮಲದ ಹಿಂದೆ ಬಿದ್ದು ನಮ್ಮ ಹೂಕಣಿವೆ ಚಾರಣದ ಕನಸು ಮತ್ತೆ ಗರಿಬಿಚ್ಚಿತು.

ಹೂಕಣಿವೆಯ ಬಗ್ಗೆ ಆಸಕ್ತಿಯಿಂದ ಹುಡುಕಹೊರಟರೆ, ಗೂಗಲ್ಲು ಭರಪೂರ ಔತಣ ಒದಗಿಸುತ್ತದೆ. ನೂರಾನು ಚಾರಣ ಸಂಸ್ಥೆಗಳೂ ಸಹ ಥರಹೇವಾರಿ ಚಾರಣಿಗರ ಮನಸ್ಥಿತಿಗನುಗುಣವಾಗಿ, ದರದಲ್ಲಿ, ವ್ಯವಸ್ಥೆಯಲ್ಲಿ ಸಾಕಷ್ಟು ಆಯ್ಕೆಗಳನ್ನು ಹರವಿಡುತ್ತವೆ. ಆದರೆ, ಹೂಕಣಿವೆಗೆ ಹೋಗುವ ಪ್ರತಿಯೊಬ್ಬರೂ, ಅಲ್ಲಿನ ಹೂವುಗಳ ವಿಶೇಷತೆಯನ್ನು ಖಂಡಿತ ತಿಳಿದಿರುವುದಿಲ್ಲ. ಸೆಲ್ಫಿ, ರೀಲು, ಫೋಟೋಗಳಲ್ಲೇ ಚಾರಣ ಮುಗಿದು ಅತ್ಯಪೂರ್ವ ಪುಷ್ಪಗಳ ಬಗೆಗಿನ ಮಾಹಿತಿಯೇ ತಿಳಿಯದೆ, ಹುಡುಕಲೂ ಹೋಗದೆ ಮರಳುತ್ತಾರೆ. ಅಂಥದ್ದರಲ್ಲಿ, ಹೋಗುವ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಪುಷ್ಪವೊಂದರ ಹಿಂದೆ ಬಿದ್ದು ಹೋದ ಕತೆಯಿದು.

ಹೂಕಣಿವೆ ಚಾರಣಕ್ಕೆ ಕಡಿಮೆಯೆಂದರೂ ನಾಲ್ಕು ದಿನ ಬೇಕು. ಪ್ರತಿದಿನವೂ ಸುಮಾರು 10 ಕಿ.ಮೀ. ನಡೆಯಬೇಕು. ಮೊದಲ ದಿನದ ಚಾರಣ ಶುರುವಾಗುವುದು ಗೋವಿಂದಘಾಟಿನಿಂದ. ಗೋವಿಂದಘಾಟಿನಿಂದ ಘಂಘರಿಯಾಕ್ಕೆ ಸುಮಾರು 10 ಕಿ.ಮೀ. ಚಾರಣ. ಘಂಘರಿಯಾದಲ್ಲಿ ಉಳಿದುಕೊಂಡರೆ, ಮತ್ತೆ ಅಲ್ಲಿಂದ ಹೂಕಣಿವೆಗೆ ಒಂದು ದಿನ ಚಾರಣ ಮಾಡಿ ಮತ್ತೆ ಘಂಘರಿಯಾಕ್ಕೆ ಮರಳುವುದು, ಮತ್ತೆ ಮರುದಿನ ಘಂಘರಿಯಾದಿಂದ ಹೇಮಕುಂಡ ಸಾಹೇಬ್ ಎಂಬ ಸಿಖ್ಖರ ಪವಿತ್ರ ಗುರುದ್ವಾರದ ಕಡೆಗೆ ಚಾರಣ ಮಾಡಿ ಬರಬಹುದು. ಹೂಕಣಿವೆಯೊಳಗೆ ಇರುವ ಹೇಮಕುಂಡದ ದಾರಿಯೂ ಕೂಡಾ ಸಮೃದ್ಧವಾಗಿ ಅರಳಿರುವ ಹೂಗಳ ಭರಪೂರ ದರ್ಶನ ಮಾಡಿಸುತ್ತದೆ. ಹಾಗಾಗಿ ಹೂಕಣಿವೆಯ ಚಾರಣಕ್ಕೆ ಬಂದ ಪ್ರತಿಯೊಬ್ಬರೂ ಹೇಮಕುಂಡವನ್ನು ತಪ್ಪಿಸುವುದಿಲ್ಲ. ಹೇಮಕುಂಡದಿಂದ ಇಳಿದರೆ, ಮತ್ತೆ ಘಂಘರಿಯಾಕ್ಕೆ ಮರಳಿ, ಮರುದಿನ ಗೋವಿಂದಘಾಟಿಗೆ ಮರಳಬಹುದು. ನಾವು ಮಾಡಿದ್ದೂ ಇದನ್ನೇ.

ಬ್ರಹ್ಮಕಮಲ ಮನಸ್ಸಿನಲ್ಲಿ ಅರಳಿದಾಗಿನಿಂದ ಅದನ್ನೊಮ್ಮೆ ನೋಡಬೇಕು ಎಂಬ ಕುತೂಹಲ ಮೂಡಿದ ಮೇಲೆ ಹೇಗೆ ಬಿಡಲಾದೀತು. ಎರಡನೇ ದಿನದ ಚಾರಣದಲ್ಲಿ ಮಳೆಯಿಲ್ಲದೆ, ಸೂರ್ಯ ನಮಗೆ ಸಾಥಿಯಾಗಿ ನಡೆದು, ಹೂಕಣಿವೆಯ ಅತ್ಯಪೂರ್ವ ಸೊಬಗನ್ನು ಸವಿಯಲು ಸಾಕಷ್ಟು ಸಮಯವನ್ನೇನೋ ಕೊಟ್ಟಿದ್ದ. ಆದರೆ, ಬ್ರಹ್ಮಕಮಲದ ದರ್ಶನವನ್ನಂತೂ ಮಾಡಿಸಿರಲಿಲ್ಲ. ನೂರಕ್ಕೆ 95 ಪ್ರತಿಶತ ಸಿಗುವುದೂ ಇಲ್ಲ ಎಂಬುದೂ ಗೊತ್ತಿತ್ತು. ಸುಮಾರು 3000 ದಿಂದ 4800 ಮೀಟರ್ ಎತ್ತರದ ಹಿಮ ಪರ್ವತಗಳಲ್ಲಿ (ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರ), ಅದೂ ಹೇಮಕುಂಡದ ದಾರಿಯಲ್ಲಿ, ಅಲ್ಲಿನ ಸರೋವರದ ಸುತ್ತಮುತ್ತ ಈ ಹೂ ಸಿಗೋದು ಪಕ್ಕಾ. ಅದೂ, ಅದೃಷ್ಟವಿದ್ದವರಿಗೆ. ಸ್ವಲ್ಪ ಹೋಂವರ್ಕು ಮಾಡಿ ಹೋದವರಿಗೆ ಈ ವಿಚಾರ ತಿಳಿದಿರುತ್ತದೆ.

ಅಂತೆಯೇ, ಹೂಕಣಿವೆ ಮುಗಿಸಿ ಮರುದಿನ ಹೇಮಕುಂಡಕ್ಕೆ ಹತ್ತಿದ್ದಾಗಿತ್ತು. ಆದರೆ, ನಮ್ಮ ದುರದೃಷ್ಟಕ್ಕೆ, ಆ ದಿನ ಎಂಥಾ ಮಳೆ ಎಂದರೆ, ಒಂದೈವತ್ತು ಮೀಟರ್ ಮುಂದಿದ್ದ ಯಾವುದೂ ಕಾಣಿಸುತ್ತಿರಲಿಲ್ಲ. ಎಷ್ಟು ಹತ್ತಿದ್ದೇವೆ, ಎಷ್ಟು ಹತ್ತಲು ಬಾಕಿ ಇದೆ ಎಂದು ಗೊತ್ತಾಗದ ಸ್ಥಿತಿ. ಮಂಜಿನೆಡೆಯ ಕಿರುದಾರಿಯಷ್ಟೇ ವರ್ತಮಾನ. ಭೂತ, ಭವಿಷ್ಯ ಯಾವುದೂ ಗೊತ್ತಿಲ್ಲದ ಪರಿಸ್ಥಿತಿ. ಜೊತೆಗೆ ಜಾರುವ ಕಲ್ಲು ಹಾದಿ. ಇಂಥ ಪರಿಸ್ಥಿತಿಯಲ್ಲಿ ಪೋನಿಯ ಲದ್ದಿಯೂ ಸೇರಿ ದಾರಿ ಜಾರುಬಂಡಿಯೇ ಆಗಿತ್ತು. ಅಂಥಾ ಮಳೆಯಲ್ಲಿ, ನಡು ಮಧ್ಯಾಹ್ನದಲ್ಲಿ ಹೇಮಕುಂಡದ ಥರಥರ ನಡುಗುವ ಚಳಿಯಲ್ಲಿ ಶೂ ಕಳಚಿಟ್ಟು (ಗುರುದ್ವಾರವಿರುವುದರಿಂದ ಆ ಪರಿಸರದಲ್ಲಿ ಶೂ ಧರಿಸುವಂತಿಲ್ಲ) ಬರಿಗಾಲಲ್ಲಿ ಸರೋವರದ ಅಕ್ಕಪಕ್ಕ ಸುಳಿದಾಡಿದರೂ ನಮಗೆ ಬ್ರಹ್ಮಕಮಲ ಸಿಗಲಿಲ್ಲ. ಕೆಲವಕ್ಕೆ ನಿಜಕ್ಕೂ ಅದೃಷ್ಟವೂ ಬೇಕು ನಿಜ ಅಂತ ಆಗ ಪಕ್ಕಾ ಅನಿಸಿತ್ತು.

ಇಳಿಯಲು ಹೊರಟಾಗ ಪುಣ್ಯಕ್ಕೆ ಮಳೆ ಮೆಲ್ಲಗೆ ಒಂದು ಬ್ರೇಕ್ ತೆಗೆದುಕೊಂಡಿತು. ಅಷ್ಟರವರೆಗೆ, ರೈನ್ ಕವರಿಗೊಳಗೆ ಬ್ಯಾಗಿನೊಳಗೆ ಬಂಧಿಯಾಗಿದ್ದ ನನ್ನ ಕ್ಯಾಮರಾ ಕೂಡಾ ಮೆಲ್ಲ ಹೊರಬಂತು. ಅದೇ ಸಮಯಕ್ಕೆ ಸರಿಯಾಗಿ ಅದೇನೋ ಅದೃಷ್ಟದ ಬಾಗಿಲು ತೆರೆದಂತೆ ಪಕ್ಕನೆ ನನ್ನ ಕಣ್ಣಿಗೆ ದೂರದಲ್ಲಿ ಬ್ರಹ್ಮಕಮಲವೂ ಕಂಡಿತು, ಬಹಳ ಎತ್ತರದಲ್ಲಿ. ನನ್ನ ಲೆನ್ಸಿಗೆ ಯಾವ ಆಂಗಲ್ಲಿನಲ್ಲೂ ಸಿಗುತ್ತಿರಲಿಲ್ಲ. ಕೈಗೆ ಸಿಕ್ಕಿದ್ದೂ ಬಾಯಿಗೆ ಬರಲಿಲ್ಲವಲ್ಲಾ, ಈಗ ಹತ್ತೋದು ಹೇಗಪ್ಪಾ ಅಲ್ಲಿಗೆ ಎಂದು ಯೋಚನೆ ಶುರುವಾಯಿತು. ವಿಪರೀತ ಮಳೆಯ ಕಾರಣದಿಂದ ಜಾರುವ ಕರಿಬಂಡೆ, ಎತ್ತರದಲ್ಲಿ ಮೂಲೆಯಲ್ಲಿದ್ದ ಹೂವು, ಮತ್ತೆ ಮೆಲ್ಲನೆ ಪಿರಿಪಿರಿ ಹನಿಯತೊಡಗಿದ ಮಳೆ, ಎಲ್ಲವೂ ಸೇರಿ ಹತ್ತುವುದು ದುಸ್ಸಾಹಸ ಎನಿಸತೊಡಗಿತು. ಕೈಗೆ ಸಿಕ್ಕಿದ್ದು ಬಾಯಿಗೆ ಬರಲಿಲ್ಲ ಅನ್ನುವಂತಾದೀತೇ ಎಂಬ ಸಂಕಟದೊಂದಿಗೆ ಮೆಲ್ಲನೆ ಆಗಿದ್ದಾಗಲಿ ಹತ್ತೋದೇ ಎಂದು ಹೊರಟರೆ, ‘ಕಾಲಿಟ್ಟರೆ ಖಂಡಿತ ಜಾರಿ ಬೀಳುತ್ತಿ, ರಿಸ್ಕು ತೆಗೋಬೇಡ ಮಾರಾಯ್ತಿ’ ಎಂದು ಕಾಲು ಉಳುಕಿಸಿಕೊಂಡಿದ್ದ ಮಹೇಶ ಒಂದೆಡೆಯಿಂದ ಕಿರುಚಿದರೆ, ‘ಅಮ್ಮಾ ನನ್ನನ್ನೂ ಹತ್ತಿಸು’ ಎಂಬ ಮಗರಾಯನ ಅಳಲು.

ಛೇ, ಇದನ್ನು ಬಿಟ್ಟು ಬರಿಗೈಯಲ್ಲಿ ಹೋಗೋ ಪ್ರಶ್ನೆಯೇ ಇಲ್ಲ ಅನಿಸಿ, ಸುಮ್ಮನೆ ಹಾಗೇ ನಿಂತು ನೋಡುತ್ತಿದ್ದರೆ, ಮೊದಲ ದಿನವಷ್ಟೆ ಹೂಕಣಿವೆಯ ಹಾದಿಯಲ್ಲಿ ಪರಿಚಯವಾಗಿದ್ದ ದೆಹಲಿಯ ಮಹೇಶ್ ಕಂಡರು. `ಅರೆ, ಯಾಕೆ ನಿಂತಿದ್ದೀರಿ ಏನಾಯ್ತು?’ ಅಂತ ಹತ್ತಿರ ಬಂದರು. “ಬ್ರಹ್ಮ ಕಮಲ ಕಂಡ್ಹಿಡಿದು ಬಿಟ್ಟಿದೀನಿ ಗೊತ್ತಾ? ಆದರೆ ಹತ್ತೋದೇ ಸಮಸ್ಯೆ” ಅಂದೆ ಉತ್ಸಾಹದಿಂದ. “ಹೌದಾ? ಎಲ್ಲಿ ನೋಡುವ” ಅಂತ, ಸಿಕ್ಕಿದ ಗಿಡಗಂಟೆ ಮುಳ್ಳು ಪೊದರುಗಳಲ್ಲಿ ಕೈಯಿಟ್ಟು ಹೆಂಗೋ ಮಾಡಿ ಹತ್ತೇ ಬಿಟ್ಟರು. “ಅರೆ, ನಾ ಬಾಕಿ. ನೀವೊಂದು ಕೆಲ್ಸ ಮಾಡಿ, ನಿಮ್ಮಷ್ಟುದ್ದದ ಕಾಲಿಲ್ಲ ನಂಗೆ, ಅದಕ್ಕೇ ಹತ್ತಲು ಕಷ್ಟ, ಒಂದು ಕೈಕೊಡಿ” ಅಂದೆ. “ಕೈಕೊಟ್ಟರೆ ನಾನೇ ಕೆಳಗೆ ಬಿದ್ದರೆ” ಅಂದರು. ಅವರು ಹೇಳಿದ್ದೂ ಸರಿಯಿತ್ತೆನ್ನಿ. “ಕ್ಯಾಮೆರಾ ಕೊಡಿ ನಾನೇ ಫೋಟೋ ತೆಕ್ಕೊಡ್ತೀನಿ” ಅಂದರು. “ಫೊಟೋ ಮಾತ್ರ ನಾನೇ ತೆಗೀಬೇಕಪ್ಪಾ” ಅಂದೆ. ಕೊನೆಗೂ ನನ್ನ ಹಠಕ್ಕೆ ಸೋತು, ಜಾರುವ ಬಂಡೆಯನ್ನೇ ನಂಬಿ ಒಂದು ಕೈಯನ್ನೂರಿ, ಇನ್ನೊಂದು ಕೈಯನ್ನು ಕೊಟ್ಟರು, ಬಿಡಲಿಲ್ಲ. ಪುಣ್ಯಕ್ಕೆ ಪಾಸ್. ಮಗರಾಯನನ್ನೂ ಮೇಲೆ ಬೆಕ್ಕಿನ ಮರಿಯಂತೆ ಎತ್ತಿ ಹೂ ತೋರಿಸಿದ್ದಾಯ್ತು. ಅಷ್ಟರಲ್ಲಿ ಇನ್ನೂ ಒಂದಿಷ್ಟು ಚಾರಣಿಗರು ಕುತೂಹಲದಿಂದ ಏನಿದೆ ಏನಿದೆ ಎಂದು ನೆರೆಯತೊಡಗಿದರು. “ಏನಿಲ್ಲ. ಒಂದು ಹೂವು, ಬ್ರಹ್ಮಕಮಲ ಅಷ್ಟೇ” ಎಂದು ನಕ್ಕೆವು, “ಓಹೋ ಅಷ್ಟೇಯಾ” ಅನ್ನುತ್ತಾ ಗುಂಪಿನಲ್ಲಿ ಗೋವಿಂದವಾಗಿ ಮುಂದುವರಿದರು. ಆದರೆ, ಹೂಕಣಿವೆಯ ಮಜಾ ಇರುವುದೇ ಈ ವಿಶೇಷ ದೇವಲೋಕದ ಪುಷ್ಪದಲ್ಲಿ ಅನ್ನೋ ಸತ್ಯ ಅವರಿಗೆ ಗೊತ್ತೇ ಇರಲಿಲ್ಲ.

ಹತ್ತೋದೇನೋ ಹತ್ತಿಬಿಟ್ಟಿದ್ದೆ, ಇಳಿದದ್ದು ಇನ್ನೊಂದು ಕತೆ, ಪುಣ್ಯವಶಾತ್ ಪ್ಯಾಂಟ್ ಹರಿಯಲಿಲ್ಲ ಅನ್ನೋದಷ್ಟೇ ಆ ಕ್ಷಣದ ದೊಡ್ಡ ಸಾಹಸ ಎಂದಷ್ಟೇ ಹೇಳಬಲ್ಲೆ.

ಅಂದಹಾಗೆ, ಭಾರತದಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡದ ಕೆಲವೇ ಚಾರಣಗಳಲ್ಲಿ ಈ ಬ್ರಹ್ಮಕಮಲವನ್ನು ನೋಡಬಹುದು. ಅದು ಬಿಟ್ಟರೆ ಮಂಗೋಲಿಯಾ, ನೈರುತ್ಯ ಚೀನಾ, ಉತ್ತರ ಬರ್ಮಾದ ಕೆಲ ಭಾಗಗಳಲ್ಲಿ ಮಾತ್ರ ಈ ಅಪರೂಪದ ಹೂವು ಕಾಣಸಿಗುತ್ತದೆಯಂತೆ. ವರ್ಷದಲ್ಲಿ ಒಮ್ಮೆ ಮಾತ್ರ ಅಂದರೆ, ಜುಲೈ-ಆಗಸ್ಟ್ ತಿಂಗಳಲ್ಲಿ ಮಾತ್ರ ಅರಳುತ್ತದೆ. ಔಷಧೀಯ ಗುಣವನ್ನೂ ಹೊಂದಿರುವ ಇದು ಹಿಮಾಲಯದ ತಪ್ಪಲ ದೇವಾಲಯಗಳಲ್ಲೆಲ್ಲ ದೇವರಿಗೆ ಯಥೇಚ್ಛವಾಗಿ ಅರ್ಪಣೆಯಾಗುವ ವಿಶೇಷ ಹೂವು.

ಅಂಗೈ ಅಗಲದಷ್ಟು ದೊಡ್ಡದಾಗಿರುವ ಈ ಹೂವು ಕೆಲವೇ ಗಂಟೆಗಳಿಗೆ ಮಾತ್ರ ಅರಳುತ್ತದೆಯೆಂದೂ, ಇದು ಅದೃಷ್ಟದ ಸಂಕೇತವೆಂದೂ ಭಾವಿಸಲಾಗುತ್ತದೆ. ಹೂವರಳಿದ ಮೇಲೆ ಕೆಲ ಕಾಲದ ನಂತರ ಈ ಗಿಡವೂ ಸತ್ತಂತೆ ಇದ್ದು ಮತ್ತೆ ಏಪ್ರಿಲ್ ತಿಂಗಳ ಸುಮಾರಿಗೆ ಹಿಮ ಕರಗಿದ ಮೇಲೆ ಮೆಲ್ಲನೆ ಕೊಡವಿಕೊಂಡು ನೆಲದಿಂದ ಫೀನಿಕ್ಸಿನಂತೆ ಎದ್ದು ಬರುತ್ತದೆ. ಜುಲೈ ಕಳೆದು ಆಗಸ್ಟ್ ತಿಂಗಳು ಬಂತೆಂದರೆ, ಹಿಮಾಚಲ ಉತ್ತರಾಖಂಡವೆಂಬ ಅವಳಿ ದೇವಭೂಮಿಯ ಹಿಮಾಲಯ ಶ್ರೇಣಿಗಳ ತುದಿಯಲ್ಲಿ ಸಾಲುಸಾಲಾಗಿ ಅರಳಿ ನಿಲ್ಲುತ್ತವೆ. ಇಂಥ ದೇವಭೂಮಿಯ ಹಿಮಬೆಟ್ಟಗಳಲ್ಲೆಲ್ಲ ನಡೆದಾಡಿದರೆ, ಹೀಗೆ ಇದ್ದಕ್ಕಿದ್ದಂತೆ ಜೀವತಳೆವ ಈ ಪ್ರಕೃತಿ ವಿಸ್ಮಯಗಳ ಸಾಲು ಸಾಲು ಉದಾಹರಣೆಗಳು ಕಣ್ಣ ಮುಂದೆ ನಿಲ್ಲುತ್ತವೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles