-ಶೌರ್ಯ ಡೆಸ್ಕ್
ಭಾರೀ ಸ್ಫೋಟ ಸಂಭವಿಸಿದ್ದರಿಂದ ಬೆಂಕಿಗೆ ಇಬ್ಬರು ಆಹುತಿಯಾಗಿದ್ದಾರೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಸತ್ತವರನ್ನು ವಿಜಯವಾಡದ ನಿವಾಸಿಗಳಾದ ಕಾಶಿ ಮತ್ತು ಸಾಂಬಾ ಎಂದು ಗುರುತಿಸಲಾಗಿದೆ. ಕೆಲವರು ಗಾಯಗೊಂಡಿದ್ದಾರೆ.

ದೀಪಾವಳಿಗೆ ಮುನ್ನವೇ ಪಟಾಕಿ ಅವಘಡಗಳು ವರದಿಯಾಗಲಾರಂಭಿಸಿವೆ. ಪಟಾಕಿ ಅಂಗಡಿಗಳಿಗೆ ಬೆಂಕಿ ತಗುಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಜೀವ ದಹನಗೊಂಡಿರುವ ಘಟನೆ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ-ವಿಜಯವಾಡದಲ್ಲಿ ಭಾನುವಾರ ನಡೆದಿದೆ.
ವಿಜಯವಾಡ ಗಾಂಧಿನಗರದ ಜಿಮಖಾನಾ ಮೈದಾನದಲ್ಲಿ ವ್ಯಾಪಾರಿಗಳು ಪಟಾಕಿ ಅಂಗಡಿಗಳನ್ನು ತೆರದಿದ್ದರು.
ಭಾನುವಾರ ಈ ಅಂಗಡಿಗಳಿಗೆ ಬೆಂಕಿ ತಗುಲಿ ದುರ್ಘಟನೆ ನಡೆದಿದೆ. ಸ್ಥಳದಲ್ಲಿದ್ದ 19 ಅಂಗಡಿಗಳ ಪೈಕಿ 4 ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿವೆ. ಭಾರೀ ಸ್ಫೋಟ ಸಂಭವಿಸಿದ್ದರಿಂದ ಬೆಂಕಿಗೆ ಇಬ್ಬರು ಆಹುತಿಯಾಗಿದ್ದಾರೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಸತ್ತವರನ್ನು ವಿಜಯವಾಡದ ನಿವಾಸಿಗಳಾದ ಕಾಶಿ ಮತ್ತು ಸಾಂಬಾ ಎಂದು ಗುರುತಿಸಲಾಗಿದೆ. ಕೆಲವರು ಗಾಯಗೊಂಡಿದ್ದಾರೆ.
ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಇತರ 6 ಮಂದಿ ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿವೆ.

ಘಟನಾ ಸ್ಥಳಕ್ಕೆ ಶಾಸಕ ಮಲ್ಲಾಡಿ ವಿಷ್ಣು, ವಿಜಯವಾಡ ಪೊಲೀಸ್ ಆಯುಕ್ತ ಕಾಂತಿ ರಾಣಾ ಟಾಟಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.
ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗಳು ಬೆಂಕಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಭಾರೀ ಸ್ಫೋಟ ಉಂಟಾಗಿದ್ದರಿಂದ ನಮಗೆ ಭೂಮಿಯೇ ನಡುಗಿದಂತಾಯಿತು ಎಂದು ಮೈದಾನದ ಸುತ್ತಮುತ್ತಲಿನ ನಿವಾಸಿಗಳು ಹೇಳಿದ್ದಾರೆ.
ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬರುವ ದೃಶ್ಯಗಳು ಮತ್ತು ಸ್ಫೋಟದ ಸ್ಥಳದ ದೃಶ್ಯಗಳನ್ನು ತೆಲುಗು ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಪೆಟ್ರೋಲ್ ಬಂಕ್ ಹತ್ತಿರ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.