ಎಲ್ಲೆಲ್ಲೂ ವಿದ್ಯುತ್ ಅಭಾವ: ಥಂಡಿ ಭೀತಿಗೇ ಗಡಗಡ…
-ವಿಜಯ್ ದಾರಿಹೋಕ
ಯೂರೋಪಿನಲ್ಲಿ ವಿದ್ಯುತ್ ಅಭಾವ ತಲೆದೋರಿದೆ. ಮತ್ತು ಅದು ಹಿಂದೆಂದಿಗಿಂತಲೂ ಗಂಭೀರವಾಗಿದೆ. ಚಳಿಗಾಲ ಬರುತ್ತಿದ್ದಂತೆ, ಮನೆ, ಅಂಗಡಿ, ಮುಂಗಟ್ಟುಗಳನ್ನು ಬಿಸಿಯಾಗಿಡಲು ಹೀಟರ್‌ಗಳನ್ನು ತಿಂಗಳುಗಟ್ಟಲೆ ಉರಿಸಬೇಕಾಗುತ್ತದೆ. ಚಳಿಗಾಲದಲ್ಲಿ ಕತ್ತಲೆ ದೀರ್ಘವಾಗಿರುವುದರಿಂದ ದೀಪಗಳ ಬಳಕೆ ದುಪ್ಪಟ್ಟಾಗಲಿದೆ. ಹೀಗಿರುವಾಗ ವಿದ್ಯುತ್ ಹಾಗೂ ನೈಸರ್ಗಿಕ ಅನಿಲ ಪ್ರತಿ ಯೂನಿಟ್ ಬೆಲೆ ನಾಲ್ಕು ಪಟ್ಟು ಹೆಚ್ಚಿ, ತಿಂಗಳ ಬಿಲ್ ದರಗಳು ತಾರಕಕ್ಕೇರಿವೆ. ಗ್ರಾಹಕರು ಹಾಗೂ ಉದ್ದಿಮೆಗಳಿಗೆ ಇದರ ನೇರ ಬಿಸಿ ತಗುಲಿದ್ದು, 1970ರ ನಂತರದಲ್ಲಿ ಮೊದಲ ಬಾರಿಗೆ ಯುರೋಪ್‌ನಲ್ಲಿ ಹಣದುಬ್ಬರ ಹತ್ತು ಪ್ರತಿಶತ ದಾಟಿ ಹೋಗಿದೆ. ಚಳಿಗಾಲದಲ್ಲಿ ಯುರೋಪ್ ರಾಷ್ಟ್ರಗಳು ವಿದ್ಯುತ್ ಶಕ್ತಿಯ ಅಭಾವದಿಂದ ಇನ್ನಷ್ಟು ತತ್ತರಿಸಿ, ತನ್ನ ಬಳಿ ತೈಲ ಹಾಗೂ ಅನಿಲ ಖರೀದಿಗೆ ಬಂದೇ ಬರುತ್ತವೆ ಎಂಬ ನಿರೀಕ್ಷೆಯನ್ನು ಪುಟಿನ್ ಇಟ್ಟುಕೊಂಡಿದ್ದಾನೆ. ಆಗ, ತನ್ನ ಕರೆನ್ಸಿ ರೂಬಲ್‌ನಲ್ಲಿಯೇ ವಹಿವಾಟು ನಡೆಸಿ, ತನ್ನ ಆರ್ಥಿಕತೆಯನ್ನು ಭದ್ರಗೊಳಿಸುವ ಹುನ್ನಾರ ಪುಟಿನ್‌ನದ್ದು. ಅಂತೆಯೇ, ಯುರೋಪ್‌ನ ರಾಷ್ಟ್ರಗಳು, ಎಷ್ಟೇ ಕಷ್ಟ ಬಂದರೂ ರಷ್ಯಾಗೆ ಮಣೆ ಹಾಕದೇ, ಶಕ್ತಿ ಬಿಕ್ಕಟ್ಟನ್ನು ತಾವಾಗಿಯೇ ನಿರ್ವಹಿಸುವ ಯೋಚನೆಯಲ್ಲಿವೆ.

ಯೂರೋಪಿನಲ್ಲಿ ಈ ಬಾರಿಯ ಚಳಿಗಾಲ ಎಂದಿಗಿಂತ ಹೆಚ್ಚು ತಣ್ಣಗಿರಲಿದೆಯಾ? ದೊಡ್ಡ ದೊಡ್ಡ ಚರ್ಚುಗಳ ಒಳಗೆ ಈ ಬಾರಿ ತುಸು ಹೆಚ್ಚೇ ಚಳಿ ಇದೆ ಅನ್ನಿಸಲಿದೆಯಾ? ಪ್ಯಾರಿಸ್‌ನ ವಿಶ್ವ ಪ್ರಸಿದ್ಧ ಐಫೆಲ್ ಗೋಪುರದಲ್ಲಿ ಒಂದು ಗಂಟೆ ಮೊದಲೇ ದೀಪಾಲಂಕಾರ ಆರಿಸಲ್ಪಡುತ್ತಿವೆಯೇಕೆ? ಯೂರೋಪಿನ ರೆಸ್ಟೋರೆಂಟ್‌ಗಳಲ್ಲಿ ಒಲೆಗಳು ಹೊತ್ತಿಕೊಳ್ಳಲು ಇಷ್ಟು ಮೀನಾಮೇಷ ಎಣಿಸುತ್ತಿರುವುದು ಏಕೆ? ಇವಕ್ಕೆಲ್ಲ ಕಾರಣ ಒಂದೇ. ಯುರೋಪಿನಲ್ಲಿ ಈಗಾಗಲೇ ಸೃಷ್ಟಿಯಾಗಿರುವ ಶಕ್ತಿ ಪೂರೈಕೆಯಲ್ಲಿನ ಮಹಾ ಬಿಕ್ಕಟ್ಟು…
ಹೌದು ಯೂರೋಪಿನಲ್ಲಿ ವಿದ್ಯುತ್ ಅಭಾವ ತಲೆದೋರಿದೆ. ಮತ್ತು ಅದು ಹಿಂದೆಂದಿಗಿಂತಲೂ ಗಂಭೀರವಾಗಿದೆ. ಚಳಿಗಾಲ ಬರುತ್ತಿದ್ದಂತೆ, ಮನೆ, ಅಂಗಡಿ, ಮುಂಗಟ್ಟುಗಳನ್ನು ಬಿಸಿಯಾಗಿಡಲು ಹೀಟರ್‌ಗಳನ್ನು ತಿಂಗಳುಗಟ್ಟಲೆ ಉರಿಸಬೇಕಾಗುತ್ತದೆ. ಚಳಿಗಾಲದಲ್ಲಿ ಕತ್ತಲೆ ದೀರ್ಘವಾಗಿರುವುದರಿಂದ ದೀಪಗಳ ಬಳಕೆ ದುಪ್ಪಟ್ಟಾಗಲಿದೆ. ಹೀಗಿರುವಾಗ ವಿದ್ಯುತ್ ಹಾಗೂ ನೈಸರ್ಗಿಕ ಅನಿಲ ಪ್ರತಿ ಯೂನಿಟ್ ಬೆಲೆ ನಾಲ್ಕು ಪಟ್ಟು ಹೆಚ್ಚಿ, ತಿಂಗಳ ಬಿಲ್ ದರಗಳು ತಾರಕಕ್ಕೇರಿವೆ. ಗ್ರಾಹಕರು ಹಾಗೂ ಉದ್ದಿಮೆಗಳಿಗೆ ಇದರ ನೇರ ಬಿಸಿ ತಗುಲಿದ್ದು , 1970ರ ನಂತರದಲ್ಲಿ ಮೊದಲ ಬಾರಿಗೆ ಯುರೋಪ್‌ನಲ್ಲಿ ಹಣದುಬ್ಬರ ಹತ್ತು ಪ್ರತಿಶತ ದಾಟಿ ಹೋಗಿದೆ. ಕೆಲ ದೇಶಗಳಲ್ಲಿ ಜನತೆ ಬೀದಿಗಿಳಿದು ಪ್ರತಿಭಟಿಸಿದ ಸುದ್ದಿಯೂ ಕೇಳಿ ಬಂದಿದೆ. ಈ ಪರಿಸ್ಥಿತಿ ಉಂಟಾಗಲು ಕಾರಣಗಳೇನು ಎಂದು ತಿಳಿದು ಕೊಳ್ಳುವುದರ ಮುಂಚೆ ಯುರೋಪಿನ ಶಕ್ತಿ ಮೂಲದ ಮುಖ್ಯ ಮೂಲಗಳ ಬಗ್ಗೆ ತಿಳಿದುಕೊಳ್ಳೋಣ.
ಒಟ್ಟಾರೆ ಯುರೋಪಿನಲ್ಲಿ 35 ಪ್ರತಿಶತ ಪೆಟ್ರೋಲಿಯಂ ಮತ್ತು ಕಚ್ಚಾ ತೈಲ ಉತ್ಪನ್ನಗಳಿಂದ, 24 ಪ್ರತಿಶತ ನೈಸರ್ಗಿಕ ಅನಿಲಗಳಿಂದ, 18 ಪ್ರತಿಶತ ನವೀಕರಿಸಬಹುದಾದ ಮೂಲಗಳಿಂದ, 13 ಪ್ರತಿಶತ ಅಣು ಸ್ಥಾವರಗಳಿಂದ ಹಾಗೂ ಉಳಿದ 10 ಪ್ರತಿಶತ ಕಲ್ಲಿದ್ದಲುಗಳಿಂದ ವಿದ್ಯುತ್ ಶಕ್ತಿ ಪೂರೈಕೆಯಾಗುತ್ತವೆ. ಹಾಗೆಂದು ಈ ಅನುಪಾತಗಳು ಯೂರೋಪ್ ನ ರಾಷ್ಟ್ರಗಳಲ್ಲಿ ಏಕರೂಪವಾಗಿಲ್ಲ. ಉದಾಹರಣೆಗೆ ಸೈಪ್ರಸ್, ಮಾಲ್ಟಾ ಅಂತಹ ದೇಶಗಳಲ್ಲಿ 80 ಪ್ರತಿಶತ ಪೆಟ್ರೋಲಿಯಂ, ಕಚ್ಚಾ ತೈಲಗಳೇ ಮೂಲ ಆಕರಗಳಾದರೆ, ಇಟಲಿ, ನೆದರ್ಲ್ಯಾಂಡ್, ಕ್ರೊಯೇಶಿಯಾ , ರೊಮಾನಿಯ, ಬೆಲ್ಗಿಯಂ, ಜರ್ಮನಿಗಳಲ್ಲಿ ಇಪ್ಪತ್ತರರಿಂದ ನಲವತ್ತು ಪ್ರತಿಶತದಷ್ಟು ಶಕ್ತಿಯ ಮೂಲ ನೈಸರ್ಗಿಕ ಅನಿಲಗಳ ಮೇಲೆ ಅವಲಂಬಿತವಾಗಿದೆ.

ಯೂರೋಪಿನ ವಿದ್ಯುತ್ ಶಕ್ತಿಯ ಆಕರಗಳು
ಯೂರೋಪಿನ ರಾಷ್ಟ್ರಗಳು ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ ಪೂರೈಕೆಯ 30% ಪ್ರತಿಶತದಷ್ಟು ರಷ್ಯಾದಿಂದ, 9 ಪ್ರತಿಶತ ಯುಎಸ್, 8 ಪ್ರತಿಶತ ನಾರ್ವೆ ಹಾಗೂ ಉಳಿದ ಭಾಗ ಇತರ ಆರು ದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ.
ಮನೆಗಳನ್ನು ಬೆಚ್ಚಗಿಡುವ, ಬಿಸಿ ನೀರಿನ ಹೀಟರ್‌ಗಳಿಂದ ಹಿಡಿದು, ವಿದ್ಯುಚ್ಚಕ್ತಿ ಉತ್ಪಾದನೆಗಳಿಗಾಗಿ ಕೂಡ ನೈಸರ್ಗಿಕ ಅನಿಲವನ್ನು ಬಳಸಲಾಗುತ್ತದೆ. ಇನ್ನು ನೈಸರ್ಗಿಕ ಅನಿಲದ ವಿಷಯಕ್ಕೆ ಬಂದರೆ, ಅಲ್ಲಿ ಕೂಡ 45 ಪ್ರತಿಶತ ರಷ್ಯಾ, 21 ಪ್ರತಿಶತ ನಾರ್ವೆ, 8 ಪ್ರತಿಶತ ಅಲ್ಗಿರಿಯಾ ದೇಶಗಳಿಂದ ಆಮದು ಮಾಡಲಾಗುತ್ತದೆ. ಇವೆಲ್ಲವುದರುಗಳಲ್ಲಿ ರಷ್ಯಾದ ಶಕ್ತಿ ಮೀಸಲು ಹೇರಳವಾಗಿರುದಷ್ಟೇ ಅಲ್ಲದೇ, ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಅಗ್ಗ ಕೂಡ. ಆದರೆ, ಈ ವರ್ಷಾರಂಭದಲ್ಲಿ ರಷ್ಯಾ ಯುಕ್ರೈನ್ ಮೇಲೆ ಆಕ್ರಮಣ ನಡೆಸಿದ್ದಕ್ಕೆ ಪ್ರತೀಕಾರವಾಗಿ ಯೂರೋಪಿನ ರಾಷ್ಟ್ರಗಳು, ರಷ್ಯಾದ ಮೇಲೆ ಅರ್ಥಿಕ ದಿಗ್ಬಂಧನವನ್ನು ಹೇರಿದವು. ಹಾಗಾಗಿ ರಷ್ಯಾದಿಂದ ಆಮದಾಗುತ್ತಿದ್ದ ಶಕ್ತಿ ಪೂರೈಕೆಯಲ್ಲಿ ಸುಮಾರು ಎಪ್ಪತ್ತು ಪ್ರತಿಶತ ಕಡಿತಗೊಂಡಿತು. ಇಂದಿಗೂ ಕೂಡ ರಷ್ಯಾ ಯುಕ್ರೈನ್ ಯುದ್ಧ ಮುಂದುವರೆದಿದ್ದು, ಅದೇ ಕಾಲದಲ್ಲಿ ಕೋವಿಡ್ ನಂತರದ ಚಟುವಟಿಕೆಗಳು ಹೆಚ್ಚಾಗಿ, ಶಕ್ತಿಯ ಬೇಡಿಕೆ ಹೆಚ್ಚುತ್ತಿದ್ದಂತೆ ಪೂರೈಕೆ ಕಮ್ಮಿಯಾಗಿ, ವಿದ್ಯುತ್ ಆಭಾವ ಮಿತಿಮೀರಿದೆ. ಕರೆಂಟ್ ಪೂರೈಕೆಗೆ ದುಬಾರಿ ಬೆಲೆ ತೆರಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರ ಬೆನ್ನಿನಲ್ಲೇ, ಯುರೋಪಿನಲ್ಲಿ ಈ ಬಾರಿಯ ಬಿರು ಬೇಸಿಗೆಯಿಂದಾಗಿ ನದಿಗಳು ಬತ್ತಿಹೋಗಿ ಜಲ ವಿದ್ಯುತ್ ಹಾಗೂ ಹವಾಮಾನ ವೈಪರೀತ್ಯಗಳಿಂದ ಪವನ ಶಕ್ತಿಗಳ ಉತ್ಪಾದನೆಗಳು ಕುಂಠಿತಗೊಂಡಿದ್ದು ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ. ಇಷ್ಟಾದ ಮೇಲೆ ಚಳಿಗಾಲ ಬಂದ ಮೇಲೆ ಅಭಾವ ಇನ್ನಷ್ಟು ಹೆಚ್ಚಾಗುವುದು ಖಂಡಿತ. ಯೂರೋಪಿನ ಸರ್ಕಾರಗಳು ಬೊಕ್ಕಸದಿಂದ ಧನರಾಶಿಯನ್ನು ಸಬ್ಸಿಡಿಗಾಗಿ ಹೆಚ್ಚು ವಿನಿಯೋಗಿಸಬೇಕಾದ ಪರಿಸ್ಥಿತಿ ಬಂದಿದೆ.

ನಾರ್ಡ್ ಸ್ಟ್ರೀಮ್ ಪೈಪ್ ಸ್ಫೋಟ
ಕೆಲವು ದಿನಗಳ ಹಿಂದೆ ಬಾಲ್ಟಿಕ್ ಸಮುದ್ರದಲ್ಲಿ ಮಿಥೇನ್ ಅನಿಲದ ಬೃಹತ್ ಗುಳ್ಳೆಗಳು ಹೊರಬರುವುದನ್ನು ಕಂಡ ಸ್ವೀಡನ್ ಕಡಲು ಕಾವಲು ಪಡೆ ಒಂದು ಅಚ್ಚರಿಯ ಸುದ್ದಿಯನ್ನು ಹೊರಹಾಕಿತ್ತು. ಒಟ್ಟು ನಾಲ್ಕು ಬೇರೆ ಬೇರೆ ಭಾಗಗಳಲ್ಲಿ ನಾರ್ಡ್ ಸ್ಟ್ರೀಮ್ ಪೈಪುಗಳಿಂದ ಗ್ಯಾಸ್ ಲೀಕ್ ಆಗುತ್ತಿರುವ ವಿಷಯ ಜಗತ್ತನ್ನೇ ಬೆಚ್ಚಿ ಬೀಳಿಸಿತು. ಅಂದ ಹಾಗೆ ನಾರ್ಡ್ ಸ್ಟ್ರೀಮ್ ಎಂಬುದು ಯುದ್ಧದ ಪೂರ್ವ ಕಾಲದಲ್ಲಿ, ರಷ್ಯಾದಿಂದ ಜರ್ಮನಿಗೆ ಅನಿಲ ಪೂರೈಸುವ ನಿಟ್ಟಿನಲ್ಲಿ ನಿರ್ಮಿತವಾದ ಸಮುದ್ರದಾಳದೊಳಗಿನ ಹೊಸ ಪೈಪ್ ಲೈನ್ ವ್ಯವಸ್ಥೆ. ಯುದ್ಧ ಆರಂಭವಾದ ಮೇಲೆ ಜರ್ಮನಿ ಆ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು. ಆದಾಗ್ಯೂ ಕೂಡ ಪೈಪಿನಲ್ಲಿ ಇನ್ನೂ ಅನಿಲ ಇದ್ದುದರಿಂದ ಸೋರಿಕೆ ಉಂಟಾಗಿದೆ. ಇಂದೊಂದು ಉದ್ದೇಶಪೂರ್ವಕವಾಗಿ ಸ್ಫೋಟಗೊಳಿಸಿ ಉಂಟಾದ ಘಟನೆ ಎಂಬುದು ನಿಚ್ಚಳವಾದರೂ ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ. ಅದರ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ಆರಂಭವಾಗಿದೆ. ಅಮೇರಿಕಾ ಇದಕ್ಕೆ ರಷ್ಯಾವನ್ನು ಹೊಣೆಯಾಗಿಸಿದರೆ, ಪುಟಿನ್ ಇದನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆ ಎಂದು ಕರೆದು, ಇಲ್ಲಿ ಅಮೇರಿಕಾದ ನೇರ ಕೈವಾಡ ಇದೆಯೆಂದು ಆರೋಪಿಸುತ್ತಾನೆ.

ಈ ಘಟನೆಯ ಬಳಿಕ ಯೂರೋಪಿನಲ್ಲಿ, ಸಮುದ್ರದೊಳಗಿನ ಅಂತರ್ಜಾಲ ಕೇಬಲ್ ಸೇರಿದಂತೆ ಅನೇಕ ವ್ಯವಸ್ಥೆಗಳಿಗೆ ಕೂಡ ಅಪಾಯ ಕಾದಿದೆಯೇ ಎಂಬ ಹೊಸ ಕಳವಳ ಹುಟ್ಟಿಕೊಂಡಿದೆ. ವಿದ್ಯುತ್ ಪೂರೈಕೆ ಜಾಲದ ಮೇಲೂ ಪ್ರಭಾವ ಬೀರಿದೆ. ಆಧುನಿಕ ಜಗತ್ತಿನ ಯುದ್ಧದ ವರಸೆಗಳು, ಆಕ್ರಮಣಗಳು ಕೇವಲ ಯುದ್ಧ ವಿಮಾನ ಹಾಗೂ ಬಾಂಬ್‌ಗಳ ಹೊರತಾಗಿಯೂ ನಡೆಯುತ್ತದೆ ಎಂಬುದಕ್ಕೆ ಇಂತಹ ಘಟನೆಗಳು ಸಾಕ್ಷಿಯಾಗುತ್ತವೆ.
ಯೂರೋಪಿನ ಮುಂದಿರುವ ಸವಾಲುಗಳು
ಅತ್ತ ಯುಕ್ರೈನ್ ನ ಕೆಲ ಭಾಗಗಳನ್ನು ರಷ್ಯಾ ಅನಧಿಕೃತವಾಗಿ ಸೇರ್ಪಡೆ ಮಾಡಿಕೊಂಡಿದೆ. ಚಳಿಗಾಲದಲ್ಲಿ ಯುರೋಪ್ ರಾಷ್ಟ್ರಗಳು ವಿದ್ಯುತ್ ಶಕ್ತಿಯ ಅಭಾವದಿಂದ ಇನ್ನಷ್ಟು ತತ್ತರಿಸಿ, ತನ್ನ ಬಳಿ ತೈಲ ಹಾಗೂ ಅನಿಲ ಖರೀದಿಗೆ ಬಂದೇ ಬರುತ್ತವೆ ಎಂಬ ನಿರೀಕ್ಷೆಯನ್ನು ಪುಟಿನ್ ಇಟ್ಟುಕೊಂಡಿದ್ದಾನೆ. ಆಗ, ತನ್ನ ಕರೆನ್ಸಿ ರೂಬಲ್‌ನಲ್ಲಿಯೇ ವಹಿವಾಟು ನಡೆಸಿ, ತನ್ನ ಆರ್ಥಿಕತೆಯನ್ನು ಭದ್ರಗೊಳಿಸುವ ಹುನ್ನಾರ ಪುಟಿನ್‌ನದ್ದು. ಅಂತೆಯೇ, ಯುರೋಪ್‌ನ ರಾಷ್ಟ್ರಗಳು, ಎಷ್ಟೇ ಕಷ್ಟ ಬಂದರೂ ರಷ್ಯಾಗೆ ಮಣೆ ಹಾಕದೇ, ಶಕ್ತಿ ಬಿಕ್ಕಟ್ಟನ್ನು ತಾವಾಗಿಯೇ ನಿರ್ವಹಿಸುವ ಯೋಚನೆಯಲ್ಲಿವೆ. ಈ ನಿಟ್ಟಿನಲ್ಲಿ ಉದಾಹರಣೆಯಾಗಿ, ನಾರ್ವೆಯಿಂದ ಪೋಲೆಂಡ್‌ಗೆ ಬಾಲ್ಟಿಕ್ ಸ್ಟ್ರೀಮ್ ಪೈಪ್ ಲೈನ್ ಇತ್ತೀಚಿಗೆ ಆರಂಭಿಸಲಾಗಿದೆ. ಇತರ ಚಿಕ್ಕ ಪುಟ್ಟ ಆಕರಗಳಿಂದ ಉಂಟಾಗಿರುವ ಶಕ್ತಿ ಬಿಕ್ಕಟ್ಟನ್ನು ಪರಿಹರಿಸುವುದಷ್ಟೇ ಅಲ್ಲದೇ, ದೀರ್ಘ ಕಾಲದಲ್ಲಿ, ರಷ್ಯಾದ ಅವಲಂಬನೆಯಿಂದ ಹೊರ ಬರುವ ಕಾರ್ಯ ಯೋಜನೆಯನ್ನು ರೂಪಿಸುವ ಪ್ರಯತ್ನದಲ್ಲಿದೆ ಯುರೋಪ್. ಅಣು ಸ್ಥಾವರಗಳನ್ನು ತೆಗೆದು ಹಾಕಿ, ಸೋಲಾರ್ ಸೇರಿದಂತೆ ಹೆಚ್ಚೆಚ್ಚು ನವೀಕರಿಸಬಹುದಾದ, ಕಾರ್ಬನ್ ರಹಿತ ಇಂಧನಗಳ ಉತ್ಪಾದನೆಗೆ ಹಾಗೂ ಬಳಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದ್ದು, 2050 ರವರೆಗೆ 55% ಕಾರ್ಬನ್ ಸೂಸುವಿಕೆಯನ್ನು ತಗ್ಗಿಸುವುದು ಹಾಗೂ 2050 ರವರೆಗೆ ಸಂಪೂರ್ಣವಾಗಿ ಶೂನ್ಯ ಕಾರ್ಬನ್ ಹೊರ ಸೂಸುವಿಕೆಯ ಮಟ್ಟವನ್ನು ತಲುಪುವ ಗುರಿ ಕೂಡ ಇರುವುದು ಈ ನಿಟ್ಟಿನಲ್ಲಿ ಯೋಜನೆಗಳು ಇನ್ನಷ್ಟೇ ಚುರುಕುಗೊಳ್ಳಬೇಕಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಯೂರೋಪಿನ ಶಕ್ತಿ ಬಿಕ್ಕಟ್ಟು ಪರಿಹರಿಸುವುದು ಅಲ್ಪ ಕಾಲಾವಧಿಯಲ್ಲಿ ಅಷ್ಟು ಸುಲಭವಲ್ಲ ಹಾಗೂ ಅಲ್ಲಿಯವರೆಗೆ ಒಂದು ವರ್ಷದ ಕಾಲ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ಕೂಡ ತಳ್ಳಿ ಹಾಕುವಂತಿಲ್ಲ. ಮುಂದುವರೆದ ಯುರೋಪಿನ ರಾಷ್ಟ್ರಗಳಲ್ಲಿ ಆರ್ಥಿಕತೆ ಮಂದವಾದರೆ ಅದು ವಿಶ್ವದ ಇತರ ಭಾಗಗಳಲ್ಲೂ ಪರಿಣಾಮ ಬೀರಲಿದೆ. ಈ ಎಲ್ಲ ನಿಟ್ಟಿನಲ್ಲಿ ಕೂಡ ಯೋಚಿಸುವುದಾದರೆ, ನಿಜಕ್ಕೂ ಪುಟಿನ್ ಇಂಥ ಸಮಯದಲ್ಲಿ ಯುದ್ಧಕ್ಕೆ ಕೈ ಹಾಕಬೇಕಿತ್ತೇ ಎನ್ನುವ ಬಗ್ಗೆ ವಿಷಾದ ಮೂಡುತ್ತದೆ. ಹಾಗೂ ಇದೇ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ಮೋದಿ ಕೂಡ ಇತ್ತೀಚಿಗೆ ಪುಟಿನ್‌ನ ಸಮ್ಮುಖದಲ್ಲಿ ನೇರವಾಗಿ ದಿಸ್ ಇಸ್ ನೊ ಟೈಮ್ ಫಾರ್ ವಾರ್ ಎಂದು ಕಿವಿಮಾತು ಹೇಳಿದ್ದು ನೆನಪಿಸಿಕೊಂಡರೆ ಸಮಂಜಸ ಅನಿಸುತ್ತದೆ.
ಪವರ್ ಕಟ್ ನಂತಹ ಪರಿಸ್ಥಿತಿ ಇಲ್ಲದಿದ್ದರೂ, ವಿದ್ಯುಚ್ಚಕ್ತಿಯನ್ನು ವ್ಯರ್ಥ ಮಾಡದೇ ಆದಷ್ಟು ಕಮ್ಮಿ ಉಪಯೋಗಿಸಿ, ಬಿಲ್ ಉಳಿಸುವ ಇರಾದೆಯ ಜೊತೆಗೆ ಚಳಿಗಾಲದಲ್ಲಿ ಅನಾನುಕೂಲ ಆಗದಿರಲಿ ಎಂಬ ಆಶಯದೊಂದಿಗೆ ಯುರೋಪ್ ಮುಂಬರುವ ದಿನಗಳನ್ನು ಎದುರಿಸಲು ಸಜ್ಜಾಗುತ್ತಿದೆ. ಇಂಧನ ಕೊರತೆ ಇಂದ ಉಂಟಾದ ವಿದ್ಯುತ್ ಅಭಾವವನ್ನು ಚಳಿಗಾಲದಲ್ಲಿ ಯೂರೋಪ್ ಹೇಗೆ ಎದುರಿಸಲಿದೆ ಎಂಬುದನ್ನು ಜಗತ್ತು ನೆಟ್ಟ ಕಂಗಳಲ್ಲೇ ನೋಡುತ್ತಿದೆ. ಈ ಚಳಿಗಾಲ ಇದೇ ಕಾರಣಕ್ಕಾಗಿ ಯೂರೋಪಿಯನ್ ದೇಶಗಳಿಗೆ ಅಗ್ನಿಪರೀಕ್ಷೆಯ ಕಾಲ ಎನ್ನಬಹುದು.