-ಅವನಿರಾವ್
ಬಹುತೇಕ ಸಿನಿಮಾಗಳು ಮನರಂಜನೆಯ ಉದ್ದೇಶವನ್ನೇ ಹೊಂದಿದ್ದರೆ, ಸಾಕ್ಷ್ಯಚಿತ್ರಗಳು ಸಮಾಜ ಮತ್ತು ಬದುಕಿನ ಕೈಗನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ.

ಮನರಂಜನೆಗಾಗಿ ಜನರು ಸಿನಿಮಾಗಳನ್ನು ನೆಚ್ಚಿಕೊಳ್ಳುವುದು ಸಾಮಾನ್ಯ. ಆದರೆ, ನೈಜ ವಿಷಯಗಳನ್ನು ಹೇಳಬೇಕಾದರೆ ಸಿನಿಮಾದ ಮೂಲಕವೇ ಎಲ್ಲವನ್ನೂ ಹೇಳುವುದು ಸಾಧ್ಯವಿಲ್ಲ ಹಾಗೂ ಮಾಹಿತಿ, ಜ್ಞಾನವನ್ನು ಪಡೆಯಬೇಕೆಂಬ ಹಂಬಲ ಉಂಟಾದಾಗ ಅದಕ್ಕಾಗಿ ಹುಟ್ಟಿಕೊಂಡ ಮಾಧ್ಯಮವೇ ಸಾಕ್ಷ್ಯಚಿತ್ರಗಳು. ಇವತ್ತಿಗೂ ಸಾಕ್ಷ್ಯಚಿತ್ರಗಳಿಗೆ ಬೇಡಿಕೆ ಹೆಚ್ಚಿದೆ. ಯುವಕರಿಂದ ಹಿಡಿದು ವಯಸ್ಸಾದವರ ತನಕ ಸಾಕ್ಷ್ಯಚಿತ್ರಗಳು ಅಥವಾ ಡಾಕ್ಯುಮೆಂಟರಿಗಳನ್ನು ನೋಡುವ ಮಂದಿ ಇದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ಒಟಿಟಿ ಪ್ಲಾಟ್‌ಫಾರಂಗಳು ಮುನ್ನೆಲೆಗೆ ಬಂದ ನಂತರದಲ್ಲಿ ಅವುಗಳಲ್ಲಿ ಸಿನಿಮಾಗಳಿಗೆ, ವೆಬ್‌ಸೀರಿಸ್‌ಗಳಿಗೆ ಪ್ರತ್ಯೇಕ ವಿಭಾಗ ಇದ್ದಂತೆಯೇ ಸಾಕ್ಷ್ಯಚಿತ್ರಗಳಿಗಾಗಿಯೇ ಪ್ರತ್ಯೇಕ ವಿಭಾಗಗಳನ್ನು ಮೀಸಲಿರಿಸಲಾಗಿದೆ. ಅಲ್ಲಿ ಇತಿಹಾಸ, ಪರಿಸರ, ಶಿಕ್ಷಣ, ಸಾಮಾಜಿಕ, ಸಂಗೀತ, ಸಾಂಸ್ಕೃತಿಕ, ಅಪರಾಧ ಹೀಗೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಅತ್ಯಾದ್ಭುತವಾದ ಸಾಕ್ಷ್ಯಚಿತ್ರಗಳನ್ನು ನೋಡಬಹುದಾಗಿದೆ. ನೀಲ್ ಆರ್ಮಸ್ಟ್ರಾಂಗ್, ಕಲ್ಪನಾ ಚಾವ್ಲಾ ಅವರ ಬಾಹ್ಯಾಕಾಶ ಪ್ರಯಾಣದಿಂದ ಹಿಡಿದು ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಹತ್ಯೆ, ಉಗ್ರ ಬಿನ್‌ಲಾಡೆನ್ ಹತ್ಯೆ, ರಾಣಿ ಡಯಾನ ಸಾವು…ಹೀಗೆ ಈ ವಿಷಯಗಳ ಹಿಂದಿನ ಎಲ್ಲಾ ವಿಚಾರಗಳನ್ನು ಜನರ ಮುಂದಿಡುವ ಸಾಕ್ಷ್ಯಚಿತ್ರಗಳು ಬಂದಿವೆ.
ನೈಜತೆಗೆ ಆದ್ಯತೆ

ಸಾಕ್ಷ್ಯಚಿತ್ರಗಳಲ್ಲಿ ಕಲ್ಪನೆಗಿಂತ ನೈಜತೆಗೆ ಆದ್ಯತೆ. ನೈಜ ವಿಷಯಗಳನ್ನು ಆಧರಿಸಿ ಅತ್ಯಂತ ಆಳವಾಗಿ ಮಾಹಿತಿಗಳನ್ನು ಸಂಗ್ರಹಿಸಿ ಮತ್ತು ಅವುಗಳ ಬಗ್ಗೆ ಆಳವಾದ ಅಧ್ಯಯನ/ಸಂಶೋಧನೆ ಮಾಡಿ ಚಿತ್ರಗಳನ್ನು ಸಿದ್ಧಪಡಿಸಲಾಗುತ್ತದೆ. ವಿಷಯಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಅಥವಾ ಪೂರಕವಾದ ಹೇಳಿಕೆಗಳು ಅಥವಾ ಸುತ್ತಮುತ್ತಲಿನ ಪರಿಸರ ಅಂಶಗಳು ಎಲ್ಲವೂ ಸೇರಿ ಒಂದು ಸಾಕ್ಷ್ಯಚಿತ್ರವಾಗುತ್ತದೆ. ಡೇವಿಡ್ ಅಟನ್‌ಬರ್ಗ್ ಹೆಸರು ನೀವು ಕೇಳಿರಬಹುದು. ಜೀವಶಾಸ್ತ್ರಜ್ಞ, ಲೇಖಕ, ಇತಿಹಾಸಕಾರನೂ ಆಗಿರುವ ಅಟನ್‌ಬರ್ಗ್ “ಲೈಫ್ ಕಲೆಕ್ಷನ್” ಎನ್ನುವ ಹೆಸರಿನಲ್ಲಿ ಪರಿಸರ ಇತಿಹಾಸಕ್ಕೆ ಸಂಬಂಧಿಸಿದ್ದೇ ಒಂಬತ್ತು ಸಾಕ್ಷ್ಯಚಿತ್ರಗಳನ್ನು ತಂದಿದ್ದಾರೆ. ಇದರಲ್ಲಿ ಭೂಮಿ ಮೇಲಿನ ಪ್ರಾಣಿ ಜಗತ್ತು ಮತ್ತು ಮರಗಿಡಗಳ ಬದುಕು ಹೇಗಿರುತ್ತದೆ ಎಂಬುದರ ವಿವರಣೆ ನೀಡುತ್ತಾರೆ. ವಿಶೇಷವೆಂದರೆ ಡೇವಿಡ್ ಅಟನ್‌ಬರ್ಗ್ ಚಿಕ್ಕವರಿರುವಾಗ ಪರಿಸರಕ್ಕೆ ಸಂಬಂಧಿಸಿದ ಹಲವಾರು ವೀಡಿಯೋಗಳನ್ನು ಕೂಡ ಮಾಡಿ ಸಂಗ್ರಹಿಸಿಟ್ಟುಕೊಂಡವರು. ಸಾಕ್ಷ್ಯಚಿತ್ರದಲ್ಲಿ ಈ ವೀಡಿಯೋಗಳನ್ನು ತೋರಿಸುತ್ತಲೇ ಅಲ್ಲಿನ ಪರಿಸರದ ಬಗ್ಗೆ ಹೇಳುತ್ತಾ ಹಿಂದೆ ಮತ್ತು ಈವಾಗಿನ ಪರಿಸರ, ಸ್ಥಳದ ಬಗ್ಗೆ ತುಲನೆ ಮಾಡುತ್ತಾ ಹೋಗುತ್ತಾರೆ. ಅಂದರೆ: ನಮ್ಮಪರಿಸರ ಅದೆಷ್ಟು ಬೇಗ ಬದಲಾಗುತ್ತಾ ಹೋಗುತ್ತದೆ ಎನ್ನುವುದು ನಮಗರಿವಾಗುತ್ತದೆ. ಬಿಬಿಸಿಯಲ್ಲಿ ಪರಿಸರ ಇತಿಹಾಸ ವಿಭಾಗದಲ್ಲಿದ್ದ ಅಟೆನ್‌ಬರ್ಗ್ಗೆ ಈಗ 95 ವರ್ಷ. ಶತಮಾನದ ಹೊಸ್ತಿಲಲ್ಲಿರುವ ಅವರು ಏಳೆಂಟು ದಶಕಗಳ ಹಿಂದೆ ಜಗತ್ತು ಹೇಗಿತ್ತು ಮತ್ತು ಈಗ ಹೇಗಾಗಿದೆ ಎಂದು ಹೋಲಿಕೆ ಮಾಡಿ ಹೇಳುವ ಪರಿಯೇ ಅದ್ಭುತ ಮತ್ತು ಮುಂದಿನ ತಲೆಮಾರಿಗೆ ಅದೊಂದು ಅದ್ಭುತ ದಾಖಲೆಯಾಗುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಕನ್ನಡಿಗರೇ ಆಗಿರುವ ಕೃಪಾಕರ-ಸೇನಾನಿ ಕಾಡುನಾಯಿಗಳ ಬಗ್ಗೆ ಮಾಡಿರುವ “ದಿ ಪ್ಯಾಕ್” ವಿಶ್ವಮಟ್ಟದಲ್ಲಿ ಹೆಸರು ಗಳಿಸಿದ ಸಾಕ್ಷ್ಯಚಿತ್ರ.

ಕೊರೊನಾ ನಂತರದಲ್ಲಿ ಸಿನಿಮಾ, ವೆಬ್‌ಸೀರಿಸ್ ಜೊತೆಗೆ ಸಾಕ್ಷ್ಯಚಿತ್ರಗಳನ್ನು ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕೋವಿಡ್ ನಂತರದಲ್ಲಿ ಬಂದ “ಸೋಷಿಯಲ್ ಡಿಲೆಮಾ” ಎಂಬ ಸಾಕ್ಷ್ಯಚಿತ್ರ ಸಾಮಾಜಿಕ ಜಾಲತಾಣಗಳ ನಿಜಬಣ್ಣವನ್ನು ಜನರಿಗೆ ಅರಿವಾಗಿಸಿತು. ಇತ್ತೀಚೆಗೆ ಬಂದ “ದಿ ಟಿಂಡರ್ ಸ್ವಿಂಡ್ಲರ್” ಡೇಟಿಂಗ್ ಆಪ್‌ಗಳ ಮೋಸದಾಟಗಳನ್ನು ಪರಿಚಯಿಸಿತು. ಹೀಗೆ ಸಾಮಾಜಿಕ ಸಮಸ್ಯೆಗಳ ಅರಿವಾಗಿಸುವ ಸಾಕ್ಷ್ಯಚಿತ್ರಗಳು ಒಂದೆಡೆಯಾದರೆ ಸಾಮುದಾಯಿಕ ಬದುಕು, ಜನಜೀವನ, ಸಾಧನೆ ಎಲ್ಲವನ್ನೂ ಕಟ್ಟಿಕೊಡುವಂಥ ಹಲವಾರು ಸಾಕ್ಷ್ಯಚಿತ್ರಗಳು ಬಂದಿವೆ. ಹದಿನೈದು ವರ್ಷಗಳ ಹಿಂದೆ ಬಿಬಿಸಿ ಮಾಡಿರುವ “ದಿ ಸ್ಟೋರಿ ಆಫ್ ಇಂಡಿಯಾ” ಭಾರತದ ವಿವಿಧತೆಯಲ್ಲಿ ಏಕತೆ ಸಂಸ್ಕೃತಿಯನ್ನು ಪರಿಚಯಿಸಿದರೆ, 1995ರಲ್ಲಿ ನ್ಯಾಷನಲ್ ಜಿಯಾಗ್ರಫಿಯವರು ಮಾಡಿರುವ “ಗ್ರೇಟ್ ಇಂಡಿಯನ್ ರೈಲ್ವೆ” ಸಾಕ್ಷ್ಯಚಿತ್ರ ಮುಂದಿನ ತಲೆತಲಾಂತರಗಳಿಗೂ ಅಪೂರ್ವ ದಾಖಲೆಯೇ. ಹಾಗೆ ನೋಡಿದರೆ ಭಾರತದ ಮಟ್ಟಿಗೆ ಸಾಕ್ಷ್ಯಚಿತ್ರ ಅಷ್ಟೊಂದು ಆಶಾದಾಯಕ ಬೆಳವಣಿಗೆಯನ್ನು ಮೂಡಿಸಿಲ್ಲ, ಭಾರತದ ಸಂಸ್ಕೃತಿ, ಇಲ್ಲಿನ ಜನಜೀವನ, ಜೀವನಶೈಲಿ ಇವುಗಳ ಬಗ್ಗೆ ನಮ್ಮವರಿಗಿಂತ ವಿದೇಶಿಗರೇ ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದು ಹೆಚ್ಚು. ನಮ್ಮಲ್ಲಿ ಸಾಕ್ಷ್ಯಚಿತ್ರಗಳ ಮೇಲೆ ಅಂಥ ಒಲವು ಮೂಡಿರುವುದು ಕೂಡ ಕಂಡುಬರುವುದಿಲ್ಲ, ಆದರೆ, ಇಲ್ಲಿ ವೀಕ್ಷಕರಿಗಂತೂ ಯಾವತ್ತೂ ಕೊರತೆಯಾಗಿಲ್ಲ.

ಪರಿಸರ ಮತ್ತು ಮಾನವ ಬದುಕಿನ ಅನುಬಂಧ
ಇಷ್ಟೆಲ್ಲಾ ಮಾತಾಡಬೇಕಾದರೆ “ಹನಿಲ್ಯಾಂಡ್”ಎಂಬ ಪರಿಸರ ಮತ್ತು ಮನುಷ್ಯ ಬದುಕಿನ ಅನುಬಂಧವನ್ನು ತಿಳಿಸುವ ಸಾಕ್ಷ್ಯಚಿತ್ರದ ಬಗ್ಗೆ ಹೇಳಲೇಬೇಕು. ಇವತ್ತಿಗೂ ಎಷ್ಟೋ ಬುಡಕಟ್ಟು ಜನರ ಬದುಕು ಕಾಡು ಮತ್ತು ಅಲ್ಲಿ ಸಿಗುವ ಉತ್ಪನ್ನಗಳ ಮೇಲೆ ಅವಲಂಬಿಸಿರುತ್ತದೆ. ಬದುಕು, ಜೀವನಶೈಲಿ, ಯೋಚನೆಗಳು ಎಷ್ಟೇ ಬದಲಾದರೂ ಜಗತ್ತಿನ ವಿವಿಧ ಮೂಲೆಗಳಲ್ಲಿ ಬುಡಕಟ್ಟು ಜನರು ಅವರದೇ ಆದ ಜೀವನಕ್ರಮವನ್ನು ಅನುಸರಿಸಿಕೊಂಡು ಬದುಕುವುದನ್ನು ನೋಡಬಹುದು.
ಉತ್ತರ ಮರ್ಸಿಡೋನಿಯಾದ ಪರ್ವತ ಪ್ರದೇಶವೊಂದರಲ್ಲಿ ಹತೀಝ ಮುರತೋವಾ ಎಂಬ ಮಹಿಳೆಯ ವಾಸವಾಗಿರುತ್ತಾಳೆ. ಜೇನು ಸಾಕಣೆ ಆಕೆಯ ಕುಲಕಸುಬು ಮತ್ತು ಪಾರಂಪರಿಕವಾಗಿ ಈ ಜೇನು ಸಾಕಣೆ ಮಾಡಿಕೊಂಡು ಬಂದಿರುವ ಕಟ್ಟಕಡೆಯ ಮಹಿಳೆ ಆಕೆ. ಇಡೀ ಯುರೋಪ್‌ನಲ್ಲಿ ಜೇನುಸಾಕಣೆ ಮಾಡುವುದರಲ್ಲಿ ಈಕೆ ಕೊನೆಯವಳೆಂದು ಹೇಳಲಾಗುತ್ತಿದೆ. ಈಕೆಯ ಇಡೀ “ಜೇನು-ಬದುಕಿನ” ಬಗ್ಗೆ ತೆಗೆದ ಸಾಕ್ಷ್ಯಚಿತ್ರವೇ ಹನಿಲ್ಯಾಂಡ್. ಈ ಸಾಕ್ಷ್ಯಚಿತ್ರದಲ್ಲಿ ಯಾವುದೂ ಕಾಲ್ಪನಿಕವಲ್ಲ, ಎಲ್ಲವೂ ನೈಜವೇ. ಆಕೆ ಜೇನು ತೆಗೆಯುವುದು, ಜೇನು ಸಾಕಣೆಗೆ ನೆರೆಹೊರೆಯವರು ತೊಂದರೆ ಕೊಡುವುದು ಅದನ್ನು ಲೆಕ್ಕಿಸದೆಯೇ ಆಕೆ ಪ್ರೀತಿಯಿಂದ ತನ್ನ ಪರಂಪರೆಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದನ್ನು ಈ ಸಾಕ್ಷ್ಯಚಿತ್ರದಲ್ಲಿ ಅತ್ಯಂತ ಸಹಜವಾಗಿ ತೋರಿಸಲಾಗಿದೆ. ಆ ಗುಡ್ಡಗಾಡು ಪ್ರದೇಶದಲ್ಲಿ ಚಳಿಗಾಲ ಬಂತೆಂದರೆ ರಾಶಿ ರಾಶಿ ಹಿಮದ ಗಡ್ಡೆಗಳು, ಅದರ ನಡುವೆಯೇ ಬದುಕು, ಇಡೀ ಪರಿಸರವೇ ಬದಲಾಗುತ್ತದೆ. ಅಂಥ ಪರಿಸರದಲ್ಲಿ ಹತೀಝ ಹಾಸಿಗೆ ಹಿಡಿದ ಅಮ್ಮನೊಂದಿಗೆ ಬದುಕು ನಡೆಸುತ್ತಿರುತ್ತಾಳೆ, ಜೊತೆಗೆ ಒಂದು ನಾಯಿ. ಜೇನು ಸಾಕಣೆಯೇ ಜೀವನಾಧಾರ.

ಅಮ್ಮನ ಆರೋಗ್ಯಕ್ಕಾಗಿ ಆಕೆ ನಿದ್ದೆಗೆಡುವುದೂ ಉಂಟು. ಜೇನು ಸಾಕಣೆಯಲ್ಲಿ ಬಂದ ದುಡ್ಡಿನಲ್ಲಿ ಅಮ್ಮನಿಗೆ ಬಾಳೆಹಣ್ಣು, ತಿಂಡಿ ಎಲ್ಲವನ್ನೂ ತಂದು ಕೈಯಾರೆ ತಾನೇ ತಿನ್ನಿಸುತ್ತಾಳೆ. ಅಲ್ಲಿ ಅಮ್ಮನಿಗೆ ಮಗಳೇ ಅಮ್ಮ! ಬದುಕು ಹೀಗೆ ಸಾಗುತ್ತಿರುವಾಗ ಒಂದು ಚಳಿಗಾಲದಲ್ಲಿ ಅಮ್ಮ ಸಾವನ್ನಪ್ಪುತ್ತಾಳೆ. ಆ ಹಿಮಮಳೆಯಲ್ಲೇ ಅಮ್ಮನ ಕಾರ್ಯ ಮುಗಿಸುತ್ತಾಳೆ ಹತೀಝಾ. ಅಮ್ಮ ಹೋದಮೇಲೆ ಅವಳು ಒಂಟಿ, ನಾಯಿಯೊಂದು ಜತೆ. ಮಾನವನ ಸಂಪರ್ಕವೇ ಇಲ್ಲದ ಆ ಗುಡ್ಡಪ್ರದೇಶದಲ್ಲಿ ಆಕೆಯ ಬದುಕು ಸಾಗುತ್ತಿರುತ್ತದೆ.
ಬರೀ ಒಂದೂವರೆ ಗಂಟೆಯ ಈ ಸಾಕ್ಷ್ಯಚಿತ್ರ ಮಾಡಲು ಚಿತ್ರತಂಡಕ್ಕೆ ಸುಮಾರು ನಾಲ್ಕು ವರ್ಷ ಹಿಡಿಯಿತಂತೆ. ಆ ಗುಡ್ಡಗಾಡು ಪ್ರದೇಶದಲ್ಲಿ ಬದಲಾಗುವ ಹವಾಮಾನಕ್ಕೆ ಒಗ್ಗಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಆಶ್ಚರ್ಯ ಎಂದರೆ ಈ ಸಾಕ್ಷ್ಯಚಿತ್ರದಲ್ಲಿ ಅಮ್ಮನ ಸಾವನ್ನು ಕೂಡ ನೈಜವಾಗಿ ಚಿತ್ರೀಕರಿಸಲಾಗಿದೆ. ಇಬ್ಬರು ನಿರ್ದೇಶಕರು ಸೇರಿದಂತೆ ಆರು ಮಂದಿ ಮೂರುವರ್ಷ ನಿರಂತರವಾಗಿ ಗ್ರಾಮಕ್ಕೆ ಭೇಟಿ ನೀಡಿ ಸುಮಾರು 400 ಗಂಟೆ ಚಿತ್ರೀಕರಿಸಿದ್ದಾರೆಂದು ಅವರೇ ಹೇಳಿಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರ ಸಾಕಷ್ಟು ಗೌರವಗಳನ್ನೂ ಪಡೆದಿದೆ. ಇದು ಆಸ್ಕರ್‌ಗೂ ನಾಮ ನಿರ್ದೇಶನಗೊಂಡ ಪರಿಣಾಮ ಹತೀಝ ಬದುಕು ಬದಲಾಯಿತು. ಆಕೆ ಇದ್ದ ಕುಗ್ರಾಮದಿಂದ ನಗರದ ಹೃದಯಭಾಗ ಮರ್ಸಿಡೋನಿಯಾದ ಡೋರ್‌ಫುಲ್ ಎಂಬ ಗ್ರಾಮದಲ್ಲಿ ನೆಲೆಸಿದ್ದಾಳಂತೆ! ಭಾವನಾತ್ಮಕವಾಗಿ ಬಹಳ ಕಾಡುವ ಈ ಸಾಕ್ಷ್ಯಚಿತ್ರದಲ್ಲಿ ಎಲ್ಲವನ್ನೂ ಸಹಜವಾಗೇ ತೋರಿಸಲಾಗಿದೆ. ಹನಿಲ್ಯಾಂಡ್‌ನಲ್ಲಿ ಬದುಕು-ಪರಿಸರ ಎಲ್ಲವನ್ನೂ ಸಮಗ್ರವಾಗಿ ಪರಿಚಯಿಸಲಾಗಿದೆ.
ಮೈನವಿರೇಳಿಸುವಂತೆ ಮಾಡುವ `ಮ್ಯಾನ್ ಆನ್ ದಿ ವಯರ್’
ಎಲ್ಲೂ ಬೋರ್ ಹೊಡೆಸದೆ ಪ್ರತಿ ಕ್ಷಣ ಕ್ಷಣವೂ ಮೈನವಿರೇಳಿಸುವಂತೆ ಮಾಡುವ ಇನ್ನೊಂದು ಸಾಕ್ಷ್ಯಚಿತ್ರ “ಮ್ಯಾನ್ ಆನ್ ದಿ ವಯರ್”. ಅಮೆರಿಕದ ವಿಶ್ವವಾಣಿಜ್ಯ ಕಟ್ಟಡದ ಅವಳಿ ಗೋಪುರಗಳ ನಡುವೆ ತಂತಿ ಕಟ್ಟಿ ನಡೆಯಬೇಕೆಂದು ಕನಸು ಕಂಡವರು ಫ್ರಾನ್ಸ್ನ ಫಿಲಿಪ್ ಪೆಟಿಟ್. ಚಿಕ್ಕಂದಿನಿಂದಲೇ ಇವರಿಗೆ ಹೈ ವಯರ್ ಆರ್ಟಿಸ್ಟ್ ಆಗಬೇಕೆಂಬ ಹಠ. ಎಲ್ಲಿ ಹೋದರೂ ತಂತಿ ಕಟ್ಟಿಯಾದರೂ ನಡೆಯುವ ತರಲೆ ಸಾಹಸ ಮಾಡುತ್ತಿದ್ದ ಅವರು, ಅದಕ್ಕಾಗಿ ನಿರಂತರ ಪ್ರಯತ್ನದಲ್ಲಿದ್ದರು. ಒಮ್ಮೆ ಪತ್ರಿಕೆಯೊಂದು ಅವಳಿ ಗೋಪುರಗಳ ನಿರ್ಮಾಣದ ಜಾಹೀರಾತನ್ನು ಪ್ರಕಟಿಸಿರುತ್ತದೆ. ಅದನ್ನು ನೋಡಿಯೇ ನಾನು ಆ ಗೋಪುರಗಳ ಮೇಲೆ ತಂತಿ ಕಟ್ಟಿ ನಡೆಯಬೇಕೆಂದು ನಿರ್ಧರಿಸುತ್ತಾರೆ. ಅದು ಕಾನೂನು ಬದ್ಧವಾದುದು ಅಲ್ಲವಾದರೂ, ನಾನು ಸಾಹಸ ಮಾಡಲೇಬೇಕೆಂಬ ಹಠಕ್ಕೆ ಬೀಳುತ್ತಾರೆ ಫಿಲಿಪ್.

ಇಂಥ ವಿಚಿತ್ರ ಕನಸು ಕಂಡಾಗ ಫಿಲಿಪ್‌ಗೆ ಹದಿನೆಂಟು, ಆ ಕನಸು ನನಸಾದಾಗ ಅವರಿಗೆ 23 ವರ್ಷ. 1974ರ ಆಗಸ್ಟ್ 7 ರಂದು `ಭೂಮಿಯಿಂದ 1350 ಅಡಿ ಎತ್ತರದಲ್ಲಿದ್ದ ಅವಳಿ ಗೋಪುರಗಳ ನಡುವೆ ತಂತಿ ಕಟ್ಟಿ 45 ನಿಮಿಷ ನಡೆದು ವಿಶ್ವವನ್ನೇ ಬೆರಗಾಗಿಸಿದ್ದರು ಪೆಟಿಟ್. ಇವರ ಸಾಹಸಮಯ ಬದುಕನ್ನು ಚಿತ್ರಿಸಿದ ಡಾಕ್ಯುಮೆಂಟರಿ `ಮ್ಯಾನ್ ಆನ್ ದಿ ವಯರ್’ ಇದೇ ಕತೆ `ದ ವಾಕ್’ ಹೆಸರಿನಲ್ಲಿ ಚಲನಚಿತ್ರವಾಗಿಯೂ ಬಂದಿದೆ. ಇಂಥ ಕನಸುಗಾರ ಫಿಲಿಪ್ ಈಗಲೂ ಬದುಕಿದ್ದಾರೆ, ಅವರಿಗೀಗ 72 ವರ್ಷ.
ಸಾಹಸಮಯ “ಫ್ರೀ ಸೋಲೋ”
ಇದೇ ರೀತಿ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವ ಮತ್ತೊಂದು ಸಾಹಸಮಯ ಸಾಕ್ಷ್ಯಚಿತ್ರ “ಫ್ರೀ ಸೋಲೋ”. ಸಾಮಾನ್ಯವಾಗಿ ಸಾಹಸಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮತ್ತು ಅವುಗಳನ್ನು ಇಷ್ಟಪಡುವಂಥ ಮನಸುಗಳಿದ್ದರೆ ಈ ಸಾಕ್ಷ್ಯಚಿತ್ರವನ್ನು ತಪ್ಪದೆ ನೋಡಬೇಕು. ಇದು ಕೂಡ ನೈಜವಾಗಿ ಮಾಡಿರುವಂಥ ಸಾಕ್ಷ್ಯಚಿತ್ರ. ಅಲೆಕ್ಸ್ ಹೊನಾಲ್ಡ್ ಎಂಬ ಅಮೆರಿಕದ ಪರ್ವತಾರೋಹಿಯ ಪರ್ವತಾರೋಹಣದ ಕತೆಯನ್ನು ಇದರಲ್ಲಿ ಚಿತ್ರರೂಪಕ್ಕಿಳಿಸಲಾಗಿದೆ. ಅಲೆಕ್ಸ್ ಅವರ ನಿತ್ಯದ ಬದುಕಿನಿಂದಲೇ ಚಿತ್ರ ಶುರುವಾಗುತ್ತದೆ. 5 ವರ್ಷದ ಮಗುವಾಗಿದ್ದಾಗಲೇ ಸಾಹಸಗಳಿಗೆ ತೆರೆದುಕೊಂಡಿದ್ದ ಹುಡುಗ ಅಲೆಕ್ಸ್, 10 ವರ್ಷ ಆಗುವಷ್ಟರಲ್ಲಿಯೇ ಅದ್ಭುತ ಪರ್ವತಾರೋಹಿ ಆಗುವ ಭರವಸೆ ಮೂಡಿಸಿದ್ದ!! ಆದರೆ, ಆತನ ಸಾಧನೆಯ ಹಸಿವು ಅಲ್ಲಿಗೇ ನಿಲ್ಲುವುದಿಲ್ಲ. ಅಮೆರಿಕದ ಯೊಸಾಮಿಟ್ಟೆ ನ್ಯಾಷನಲ್ ಪಾರ್ಕ್ನಲ್ಲಿರುವ ಅತ್ಯಂತ ಅಪಾಯಕಾರಿ “ಎಲ್ ಕ್ಯಾಪಿಟನ್” ಶೃಂಗವನ್ನು ಅನ್ನು ಹತ್ತಬೇಕು ಎನ್ನುವ ಕನಸು ಕಾಣುತ್ತಾನೆ.

“ಎಲ್ ಕ್ಯಾಪಿಟನ್” ನೇರವಾಗಿ ನಿಂತಿರುವ ಕಲ್ಲುಬಂಡೆ. ಇದರ ಎತ್ತರ ಸಮುದ್ರಮಟ್ಟದಿಂದ 2,307 ಮೀಟರ್. ಆದರೆ ಈ ಪ್ರಯತ್ನ ಮಾಡಿದ 20ಕ್ಕೂ ಹೆಚ್ಚು ಬದುಕಿ ಬರಲೇ ಇಲ್ಲ.! ಈತನ ಸ್ನೇಹಿತರೇ ಈ ಸಾಹಸಕ್ಕಿಳಿದು ಸಾವಿಗೀಡಾದರು! ಆದರೆ ಕಣ್ಣೆದುರಲ್ಲೇ ಸತ್ತವರ ಕತೆಗಳು ಕೂಡ ಅಲೆಕ್ಸ್ನನ್ನು ಧೃತಿಗೆಡಿಸಲಿಲ್ಲ. ಅದಕ್ಕಾಗಿ ನಿರಂತರ ಪ್ರಯತ್ನ ನಡೆಸುತ್ತಲೇ ಇರುತ್ತಾನೆ. ಕೊನೆಗೆ ಒಂದು ದಿನ ಹತ್ತಲೇಬೇಕು ಎಂದು ಬೆಳ್ಳಂಬೆಳಿಗ್ಗೆ ಎದ್ದು ನಡೆಯುತ್ತಾನೆ. ಅಲ್ಲಿ ತನಕ ಹತ್ತಿದವ ಸುತ್ತಮುತ್ತ ಜನರು ನೋಡುತ್ತಿರುವುದನ್ನು ಮತ್ತು ಕ್ಯಾಮರಾಗಳು ಶೂಟ್ ಮಾಡುತ್ತಿರುವುದನ್ನು ಗಮನಿಸಿ `ನನ್ನ ಕೈಲಾಗುತ್ತಿಲ್ಲ. ಕ್ಯಾಮರಾಗಳು ನನ್ನ ಕಟ್ಟಿಹಾಕ್ತವೆ’ ಎಂದು ವಾಪಸಾಗುತ್ತಾನೆ. ಆದರೆ ಮನಸ್ಸು ಕೇಳಬೇಕೇ? ಮೂರು ತಿಂಗಳ ನಂತರ ಮತ್ತೆ ಹೋಗುತ್ತಾನೆ. ಕ್ಯಾಮರಾಗಳು ಅವನ ಹಿಂಬಾಲಿಸುತ್ತವೆ. ಮೂರು ಗಂಟೆ 56 ನಿಮಿಷದಲ್ಲಿ ಎಲ್ ಕ್ಯಾಪ್ ತುದಿಗೆ ತಲುಪುತ್ತಾನೆ. ಫ್ರೀ ಸೋಲೋ ಆಗಿ ಪ್ರಪ್ರಥಮ ಬಾರಿಗೆ “ಎಲ್ ಕ್ಯಾಪಿಟನ್” ಹತ್ತಿದ ಇತಿಹಾಸ ನಿರ್ಮಿಸುತ್ತಾನೆ ಅಲೆಕ್ಸ್ ಹೊನ್ನಾಲ್ಡ್. ಈ ಘಟನೆ ನಡೆದಿದ್ದು 2017ರ ಜೂನ್‌ನಲ್ಲಿ, ಆಗ ಅವನಿಗೆ 33 ವರ್ಷ. ನ್ಯಾಷನಲ್ ಜಿಯಾಗ್ರಫಿಯವರು ಅಲೆಕ್ಸ್ ಹಿಂದೆ ಬಿದ್ದು ಅಲೆಕ್ಸ್ ಶೃಂಗ ಹತ್ತುವ ಸಾಹಸವನ್ನು ಅದ್ಭುತವಾಗಿ ಸೆರೆಹಿಡಿದು ಸಾಕ್ಷ್ಯಚಿತ್ರದ ರೂಪಕ್ಕಿಳಿಸಿದ್ದಾರೆ. ಹಾಗೆಯೇ ನ್ಯಾಷನಲ್ ಜಿಯಾಗ್ರಫಿಯವರು ಇತ್ತೀಚೆಗೆ ತಂದಿರುವ ಇನ್ನೊಂದು ಸಾಕ್ಷ್ಯಚಿತ್ರ “ರೆಸ್ಕ್ಯೂ” ಥೈಲೆಂಡ್‌ನ ಗುಹೆಯಲ್ಲಿ ಸಿಕ್ಕಿಹಾಕಿಕೊಂಡ 12 ಮಂದಿ ಕಿರಿಯ ಫುಟ್ಬಾಲ್ ಆಟಗಾರರು ಮತ್ತು ಅವರ ಕೋಚನ್ನು ಹೇಗೆ ರಕ್ಷಿಸಲಾಯಿತು ಎನ್ನುವಂಥ ಇಡೀ ಕಾರ್ಯಾಚರಣೆಯ ಇಂಚಿಂಚನ್ನು ಅಲ್ಲೇ ಇದ್ದು ನೈಜವಾಗಿ ಚಿತ್ರೀಕರಣ ಮಾಡಿದ್ದಾರೆ.
ಇಲ್ಲಿ ಆಲೂಗಡ್ಡೆಯೇ ಕರೆನ್ಸಿ!

ಸಾಕ್ಷ್ಯಚಿತ್ರಗಳು ಕೆಲವು ಅರ್ಧ ಗಂಟೆ, ಇನ್ನು ಕೆಲವು ಒಂದು ಅಥವಾ ಎರಡು ಗಂಟೆಯ ಅವಧಿಯನ್ನೂ ಹೊಂದಿರಬಹುದು. ಉದಾಹರಣೆಗೆ 2018ರಲ್ಲಿ ಜಾರ್ಜಿಯಾದ ಗ್ರಾಮೀಣ ಪ್ರದೇಶದ ಬಡಬದುಕನ್ನು ಕಟ್ಟಿಕೊಡುವ 23 ನಿಮಿಷದ “ದಿ ಟ್ರೇಡರ್” ಎಂಬ ಸಾಕ್ಷ್ಯಚಿತ್ರ ಬಿಡುಗಡೆಯಾಗಿತ್ತು. ಅಚ್ಚರಿ ಎಂದರೆ, ಆ ಪ್ರದೇಶದಲ್ಲಿ ಹಣದ ಚಲಾವಣೆಯೇ ಇಲ್ಲ, ಅಲ್ಲಿ ಕರೆನ್ಸಿ ಎಂದರೆ ಆಲೂಗಡ್ಡೆ. ಜನರು ಯಾವುದೇ ವಸ್ತುಗಳನ್ನು ಖರೀದಿಸಬೇಕಾದರೂ ದುಡ್ಡಿನ ಬದಲು ಆಲೂಗಡ್ಡೆಯನ್ನು ನೀಡಿ ವಸ್ತುಗಳನ್ನು ಖರೀದಿಸುತ್ತಾರೆ. ನಗರದಿಂದ ವ್ಯಾಪಾರಿಯೊಬ್ಬ ಅಲ್ಲಿ ಹೋಗಿ ವ್ಯಾಪಾರ ಮಾಡಿ ಬರುತ್ತಾನೆ. ಸಂದರ್ಶಕರು ಅಲ್ಲಿನ ಮಕ್ಕಳಿಗೆ “ಮುಂದೇನಾಗುತ್ತೀರಿ?” ಎಂದು ಪ್ರಶ್ನೆ ಮಾಡಿದಾಗಲೂ ಅವರ ಕಣ್ಣೆದುರು ಆಲೂಗಡ್ಡೆ ಹೊರತಾಗಿ ಇನ್ನಾವ ಕನಸುಗಳೂ ಮೂಡುವುದಿಲ್ಲ! ಕೇವಲ 23 ನಿಮಿಷದಲ್ಲಿ ಆ ಪ್ರದೇಶದ ಜನರ ಸಂಪೂರ್ಣ ಬದುಕು ಅನಾವರಣಗೊಳ್ಳುತ್ತದೆ…. ಹೀಗೆ ಸಮಾಜ-ಮನುಷ್ಯ-ಬದುಕನ್ನು ತೆರೆದಿಡುವ ಸಾಕ್ಷ್ಯಚಿತ್ರಗಳು ಒಂದು ಮಟ್ಟಿಗೆ ಸಮಾಜದ ಸಾಕ್ಷಿಪ್ರಜ್ಞೆಗಳೇ ಸರಿ! ಬಹುತೇಕ ಸಿನಿಮಾಗಳು ಬರೀ ಮನರಂಜನೆಗೆ ಸೀಮಿತವಾದರೆ ಸಾಕ್ಷ್ಯಚಿತ್ರಗಳು ಸಮಾಜ ಮತ್ತು ಬದುಕಿನ ಕೈಗನ್ನಡಿಯಂತೆ ಕೆಲಸ ಮಾಡುತ್ತವೆ.