ಛೇ… ದರ್ಶನ್ ಯಾಕೆ ಹೀಗೆ?
-ಜಿ. ಅರುಣ್‌ಕುಮಾರ್
ತಪ್ಪು ಯಾರು ಮಾಡಿದರೂ ತಪ್ಪೇ. ದೊಡ್ಡವರೆನಿಸಿಕೊಂಡವರು, ಅಗಣಿತ ಅಭಿಮಾನಿಗಳನ್ನು ಹೊಂದಿರುವವರು ಪಬ್ಲಿಕ್ಕಾಗಿ ಮಾತಾಡುವಾಗ ಎಚ್ಚರ ವಹಿಸಬೇಕು. ಸದ್ಯ ನಟ ದರ್ಶನ್ ತೂಗುದೀಪ ದೇವತೆ ಬಗ್ಗೆ ಹಗುರವಾಗಿ ಮಾತಾಡಿ. ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಕುರಿತು ‘ಶೌರ್ಯ’ ತನ್ನ ಪ್ರಾಮಾಣಿಕ ನಿಲುವನ್ನು ಅಷ್ಟೇ ನೇರವಾಗಿ ಇಲ್ಲಿ ಪ್ರಕಟಿಸಿದೆ. ವಾಸ್ತವವನ್ನಷ್ಟೇ ಇಲ್ಲಿ ಚರ್ಚಿಸಲಾಗಿದೆ.

ಕ್ರಾಂತಿಗೆ ಸಂಬಂಧಿಸಿದ ಸಂದರ್ಶನಗಳಲ್ಲಿ ದರ್ಶನ್ ಆಡಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಅದೃಷ್ಟ ದೇವತೆ ಬಾಗಿಲು ತಟ್ಟಿದಾಗ ಹಿಡಿದು ಬಟ್ಟೆ ಬಿಚ್ಚಿ ಬೆಡ್ ರೂಮಿಗೆ ಹಾಕೋಬೇಕು ಎನ್ನುವ ರೀತಿಯಲ್ಲಿ ಮಾತಾಡಿಬಿಟ್ಟಿದ್ದಾರೆ. ಇದು ಸ್ವತಃ ದರ್ಶನ್ ಅವರ ಅಭಿಮಾನಿಗಳಿಗೂ ಬೇಸರ ತರಿಸಿದೆ.
ನಿಜ. ದರ್ಶನ್ ತುಂಬಾನೇ ಬದಲಾಗಿದ್ದಾರೆ. ಅದಕ್ಕೆ ಕಾರಣ ಬಹುಶಃ ಅವರ ಸುತ್ತಲಿನ ವಾತಾವರಣವೂ ಇರಬಹುದು. ದರ್ಶನ್ ಥರದ ಜನಪ್ರಿಯ ನಟ ಮಾತಾಡುವ ಮುಂಚೆ ಒಂದಿಷ್ಟು ಯೋಚಿಸಬೇಕು. ಅಥವಾ ಏನು ಮಾತಾಡಬೇಕು? ಹೇಗೆ ಮಾತಾಡಬೇಕು ಅನ್ನೋದನ್ನು ತಿಳಿಸಿ ಹೇಳುವ ಜನರನ್ನಾದರೂ ಜೊತೆಗಿಟ್ಟುಕೊಳ್ಳಬೇಕು. `ನೀವು ಮಾತಾಡಿದ್ದೇ ವೇದವಾಕ್ಯ. ನೀವು ಹೇಳಿದ್ದೆಲ್ಲಾ ಸರಿ’ ಅನ್ನುವ ಹೊಗಳುಭಟರೇ ಇದ್ದಾಗ ಇಂಥವೇ ಯಡವಟ್ಟುಗಳು ಸಂಭವಿಸುತ್ತವೆ.

ದುಡ್ಡು ಕೊಟ್ಟರೆ ಕಾಚದಲ್ಲಿ ಬೇಕಾದರೂ ನಟಿಸುತ್ತೀನಿ ಅಂತಾ ಹೇಳಿಕೆ ಕೊಟ್ಟು ತುಂಬಾ ಹಿಂದೆಯೇ ಕಾಂಟ್ರವರ್ಸಿ ಕ್ರಿಯೇಟ್ ಮಾಡಿಕೊಂಡಿದ್ದರು. ಯಾರಿಗೇ ಆಗಲಿ ಕೆಲಾ, ಸಂಪಾದನೆ, ದುಡ್ಡು ಮುಖ್ಯ ನಿಜ. ಹಾಗಂತಾ ಎಲ್ಲವನ್ನೂ ದುಡ್ಡಿನ ಮಾನದಂಡದಲ್ಲಿ ಅಳೆಯುವುದು ಎಷ್ಟು ಸರಿ?
ದರ್ಶನ್ ಎಷ್ಟು ಪ್ರಬುದ್ದರಂತೆ ವರ್ತಿಸುತ್ತಾರೋ ಕೆಲವೊಮ್ಮೆ ಅಷ್ಟೇ ವ್ಯವಧಾನ ಕಳೆದುಕೊಂಡವರಂತೆ ಮಾತಾಡಿಬಿಡುತ್ತಾರೆ. ಎದುರಿಗಿದ್ದವರ ಪೂರ್ತಿ ಪ್ರಶ್ನೆಯನ್ನೇ ಕೇಳಿಸಿಕೊಳ್ಳದೆ ಉತ್ತರಿಸುವ ಧಾವಂತ ತೋರುತ್ತಾರೆ. ತಮಗಿಷ್ಟವಾದ ಪ್ರಶ್ನೆಯನ್ನೇ ಕೇಳಬೇಕು ಅಂತಾ ಬಯಸುತ್ತಾರೆ. ತಾವು ತಿಳಿದಿರುವುದೇ ಸತ್ಯ ಅಂತಾ ವಾದಿಸುತ್ತಾರೆ. ಎಷ್ಟೇ ದೊಡ್ಡವರಾಗಲಿ, ಜನಪ್ರಿಯತೆ ಪಡೆದವರಾಗಲಿ ಯಾರೂ ಪ್ರಶ್ನಾತೀತರಲ್ಲ. ತಪ್ಪು ಎಲ್ಲರಿಂದಲೂ ನಡೆಯುತ್ತವೆ. ಆದರೆ ಅದು ಪದೇ ಪದೇ ರಿಪೀಟ್ ಆಗಬಾರದು. ಈಗ ದರ್ಶನ್ ಒಂದೇ ಮಾತನ್ನು ಎರಡು ಕಡೆ ಪುನರುಚ್ಚರಿಸಿದ್ದಾರೆ.

ಅದೃಷ್ಟ ದೇವತೆ ಅಂದರೆ ಲಕ್ಷ್ಮಿ ಅನ್ನೋದು ಎಲ್ಲರಿಗೂ ಗೊತ್ತು. ಈ ದೇವರನ್ನು ಜನ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಧರ್ಮ ಮೀರಿ ಗೌರವಿಸುತ್ತಾರೆ. ಅವರವರ ನಂಬಿಕೆ ಅವರವರಿಗೆ. ಯಾರ ನಂಬಿಕೆಗೂ ಚ್ಯುತಿ ಬಾರದಂತೆ ಮಾತಾಡಬೇಕು.
ದರ್ಶನ್ ಇನ್ನಾದರೂ ಬುದ್ದಿ ಕಲಿಯುತ್ತಾರಾ?