ದಿ ಟೇಸ್ಟ್ ಆಫ್ ಇಂಡಿಯಾ!
-ಸೋಮಶೇಖರ್ ಪಡುಕರೆ
ಸಾಂಕ್ರಾಮಿಕ ರೋಗ ಜಗತ್ತನ್ನೇ ಆವರಿಸಿರಲಿ, ಸಾವೇ ಬಂದು ಕದ ತಟ್ಟುತ್ತಿರಲಿ, ಕ್ರೀಡಾಂಗಣದ ಬಾಗಿಲು ಮುಚ್ಚಿಕೊಂಡಾದರೂ ಕ್ರಿಕೆಟ್ ನಡೆಯುತ್ತದೆ. ನೀವು ಪಂದ್ಯ ನೋಡಿ ಖುಷಿಪಡಲಿ ಎಂದು ತಿಳಿದುಕೊಂಡಿದ್ದರೆ ನಿಮ್ಮಂಥ ದಡ್ಡರು ಬೇರೆ ಯಾರೂ ಇಲ್ಲ. ಅದು ಬೆಟ್ಟಿಂಗ್ ಹಣದ ಬಿಸಿನೆಸ್. ಭಾರತದಲ್ಲಿ ವರ್ಷಕ್ಕೆ 8 ಲಕ್ಷ ಕೋಟಿ ರೂ. ಕಾನೂನು ಬಾಹಿರ ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ. ಅದರಲ್ಲಿ ಕ್ರಿಕೆಟ್ ಭಾಗ ಸಿಂಹಪಾಲು. ಕೊರೋನಾದ ಭಯದಲ್ಲಿ ಬೇರೆ ಕ್ರೀಡೆಗಳು ನಡೆಯಲೇ ಇಲ್ಲ, ಕ್ರಿಕೆಟ್ ಮಾತ್ರ ಕೊಲ್ಲಿ ರಾಷ್ಟ್ರದಲ್ಲಿ ನಡೆಯಿತು ಯಾಕೆ ಎಂದು ಈಗಲಾದರೂ ಗೊತ್ತಾಯಿತಾ?

2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪಂದ್ಯಗಳು ಆರಂಭವಾಗುವುದಕ್ಕೆ ಮೊದಲೇ ಇದು ಕ್ರಿಕೆಟ್, ಸಮಾಜ ಹಾಗೂ ಇತರ ಕ್ರೀಡೆಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಬರೆದಾಗ ಆ ಲೇಖನ ತಿರಸ್ಕೃತಗೊಂಡಿತ್ತು. ಕಾರಣ ಹೊಸತೇನಾದರೂ ಆರಂಭವಾಗುತ್ತಿರುವಾಗ ನಕಾರಾತ್ಮಕವಾಗಿ ಯೋಚನೆ ಮಾಡಬಾರದೆಂದು ಸಂಪಾದಕರು ಅದನ್ನು ಕಸದ ಬುಟ್ಟಿಗೆ ಎಸೆದಿದ್ದರು. ಆ ಹೊತ್ತಿಗೆ ನನಗೆ ಅದು ಸರಿಯೂ ಎನಿಸಿತ್ತು. ಯಾಕೆ ನಕಾರಾತ್ಮಕವಾಗಿ ಯೋಚನೆ ಮಾಡಬೇಕು ಎಂದು. ಆದರೆ ಆ ನಂತರದ ವರ್ಷಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಉದ್ಭವಿಸಿದ ಸಮಸ್ಯೆಗಳು ಹಾಗೂ ದುರಂತಗಳನ್ನು ಗಮನಿಸಿದಾಗ ಮೊದಲ ವರ್ಷದ ಆರಂಭದಲ್ಲಿ ಪ್ರಕಟಗೊಳ್ಳದ ಆ ಲೇಖನ ಪ್ರಕಟಗೊಳ್ಳಬೇಕಿತ್ತು ಎಂದೆನಿಸಿತು. ಆಟಗಾರರು ಆಟ ಆಡಿದರು, ಪ್ರೇಕ್ಷಕರು ಪಂದ್ಯ ನೋಡಿ ಖುಷಿ ಪಟ್ಟರು. ಇವೆರಡೇ ನಡೆದಿರುತ್ತಿದ್ದರೆ ಎಲ್ಲರೂ ನೆಮ್ಮದಿಯಾಗಿ ಇರುತ್ತಿದ್ದರು, ಆದರೆ ಎಲ್ಲಿ ಹಣದ ಹೊಳೆ ಹರಿಯಲಾರಂಭಿಸಿತೋ ಅಲ್ಲಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಎನ್ನುವುದು ಇಂಡಿಯನ್ ಪ್ರಾಬ್ಲಂ ಲೀಗ್ ಆಗಿ ಪರಿವರ್ತನೆಗೊಂಡಿತು.
ಅದೊಂದು ಪುಟ್ಟ ಊರು, ಚಿಕ್ಕ ಸಂಸಾರ, ಪುಟ್ಟ ಅಂಗಡಿ, ಊರಲ್ಲಿ ಏನೇ ನಡೆದರೂ ಅಲ್ಲಿ ಚರ್ಚೆಯಾಗುತ್ತದೆ, ಊರಿನ ಹಿರಿಯರು ಬಂದರೆ ಸ್ವಲ್ಪ ಹೊತ್ತು ಆ ಅಂಗಡಿಯಲ್ಲಿ ಕುಳಿತು ದಣಿವಾರಿಸಿಕೊಂಡು ಹೋಗುವರು. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಅಲ್ಲಿ ವಯಸ್ಸಾದವರು ಬರುವುದು ಕಡಿಮೆಯಾಯಿತು, ಯುವಕರು ಪ್ರವೇಶ ನೀಡಲಾರಂಭಿಸಿದರು, ಊರಿನ ಆಗುಹೋಗುಗಳ ಬಗ್ಗೆ ನಡೆಯುತ್ತಿದ್ದ ಚರ್ಚೆ ಐಪಿಎಲ್ ಕ್ರಿಕೆಟ್ ಪಂದ್ಯಗಳ ಕಡೆಗೆ ತಿರುಗಿತು. ಅಂಗಡಿಯಲ್ಲಿದ್ದ ಹುಡುಗನಿಗೆ ಇದ್ದಕ್ಕಿದಂತೆ ಕುತೂಹಲ. ಗಲ್ಲಪೆಟ್ಟಿಗೆಯಲ್ಲಿದ್ದ ಹಣ ಈಗ ಕ್ರಿಕೆಟ್ ಬೆಟ್ಟಿಂಗ್ ಕಡೆಗೆ ತಿರುಗ ತೊಡಗಿತು. ಕುಟುಂಬವನ್ನು ನೋಡಿಕೊಳ್ಳುತ್ತಿದ್ದ ಅಂಗಡಿಯ ವ್ಯಾಪಾರ ಈಗ ಯಾವುದಕ್ಕೂ ಸಾಲದಾಯಿತು. ಅಂಗಡಿಗೆ ಸಾಮಾನು ತುಂಬಲು ಹೋಲ್‌ಸೇಲ್ ಗುತ್ತಿಗೆದಾರರಲ್ಲಿ ಸಾಲ ಮಾಡದ ಹುಡುಗ ಈಗ ಎಲ್ಲಕಡೆಯೂ ಸಾಲ. ಮನೆಯಲ್ಲಿನ ಮಕ್ಕಳು, ಅಮ್ಮ, ತಮ್ಮ ಇವರಿಗಿಂತ ಕ್ರಿಕೆಟ್ ಬೆಟ್ಟಿಂಗ್ ದೊಡ್ಡದೆನಿಸಿತು. ಬಂದ ಹಣಕ್ಕಿಂತ ಕಳೆದುಕೊಂಡ ಹಣವೇ ಹೆಚ್ಚಾಯಿತು. ಐಪಿಎಲ್‌ನ ಒಂದೇ ಋತುವಿನಲ್ಲಿ ಅಂಗಡಿಯ ಮಾಲೀಕನನ್ನು ಸಾಲದ ಸುಳಿಯಲ್ಲಿ ಸಿಲುಕಿಸಿತು. ಸಾಲ ತೀರಿಸಲಾಗದೆ ಊರು ಬಿಟ್ಟ ಆ ಯುವಕ ಮತ್ತೆ ಬಾರಲೇ ಇಲ್ಲ.…ಇದು ಒಂದು ಚಿಕ್ಕಘಟನೆ. ಆದರೆ ನೆಮ್ಮದಿಯಾಗಿದ್ದ ಕುಟುಂಬವೊಂದು ಕ್ರಿಕೆಟ್ ಬೆಟ್ಟಿಂಗ್‌ನಿಂದ ಹೇಗೆ ಸಂಕಷ್ಟಕ್ಕೆ ಸಿಲುಕಿತು ಎಂಬುದು ಸ್ಪಷ್ಟವಾಗುತ್ತದೆ.

2008 ರಿಂದ ಐಪಿಎಲ್ ಮೂಲಕ ಭಾರತಕ್ಕೆ ಬಂದ ಕ್ರಿಕೆಟ್ ಬೆಟ್ಟಿಂಗ್ ಈಗ ಕ್ರಿಕೆಟ್‌ನಲ್ಲಿ ರಕ್ತವಾಗಿ ಹರಿಯುತ್ತಿದೆ. ಆಟಗಾರರೂ ಸೇರಿಕೊಂಡು ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಂತಹ ಪ್ರಕರಣಗಳು ಹೆಚ್ಚಾದವು, ಭಾರತದಲ್ಲಿ ಇದಕ್ಕೂ ಮುನ್ನ ಅಧಿಕೃತವಾಗಿ ಜೂಜು (ಬೆಟ್ಟಿಂಗ್) ಇದ್ದದ್ದು ಕುದುರೆ ರೇಸ್‌ಗಳಲ್ಲಿ ಮಾತ್ರ. ಬೇರೆ ಯಾವುದೇ ಬೆಟ್ಟಿಂಗ್ ನಡೆದರೂ ಅದು ಕಾನೂನು ಬಾಹಿರ ಎನಿಸಿಕೊಳ್ಳುತ್ತದೆ. ಪ್ರತಿ ವರ್ಷವೂ ದೇಶದಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಸಾವಿರಾರು ಜನರನ್ನು ಬಂಧಿಸುತ್ತಾರೆ, ನೂರಾರು ಮಂದಿ ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಕ್ರಿಕೆಟ್ ಬೆಟ್ಟಿಂಗ್ ಅವ್ಯಾಹತವಾಗಿ ನಡೆಯುತ್ತಿದೆ.
ಮೊಹಮ್ಮದ್ ಅಜರುದ್ದೀನ್, ಅಜಯ್ ಜಡೇಜಾ, ಮನೋಜ್ ಪ್ರಭಾಕರ್, ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೋನಿಯೇ, ಪಾಕಿಸ್ತಾನದ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್, ಮೊಹಮ್ಮದ್ ಅಮೀರ್ ಸೇರಿದಂತೆ ಅನೇಕ ಆಟಗಾರರು ಬೆಟ್ಟಿಂಗ್‌ಗೆ ಪೂರಕವಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿ ಜೈಲು ಹಾಗೂ ಮನೆ ಸೇರಿದ ಅಂತಾ ರಾಷ್ಟ್ರೀಯ ಆಟಗಾರರು. ಐಪಿಎಲ್‌ಗೂ ಮುಂದುವರಿದ ಬೆಟ್ಟಿಂಗ್‌ನಿಂದಾಗ ಅಲ್ಲಿಯೂ ಮ್ಯಾಚ್ ಫಿಕ್ಸಿಂಗ್ ಆಗಮಿಸಿತು. 2013ರಲ್ಲಿ ರಾಜಸ್ತಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್‌ನ ನಿಜವಾದ ಬಣ್ಣ ಬಯಲಾಯಿತು. ಎಸ್. ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚೌಹಾಣ್ ಮೊದಲಾದ ಆಟಗಾರರನ್ನು ಬಂಧಿಸಿ, ಶಿಕ್ಷೆ ವಿಧಿಸಲಾಗಿದ್ದು ಇತಿಹಾಸ.…
ಈಗ ಬೆಟ್ಟಿಂಗೇ ಕ್ರಿಕೆಟನ್ನು ಆಳುತ್ತಿದೆ
ಬೆಟ್ಟಿಂಗ್ ದಂಧೆಯಲ್ಲಿ ತೊಡಗಿ, ಸಾಲ ಮಾಡಿ, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದ್ದರೂ ಇಂಡಿಯನ್ ಪ್ರೀಮಿಯರ್ ಲೀಗ್‌ನ ತಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದ ಕಂಪೆನಿಗಳೇ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಮಾಲೀಕರಾಗಿರುವುದುದುರಂತ, ಭಾರತದಲ್ಲಿ ಈಗ ಆನ್‌ಲೈನ್ ಬೆಟ್ಟಿಂಗ್ ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ನಾವು ಬೆಟ್ಟಿಂಗ್ ಕಂಪೆನಿಗಳಲ್ಲ, ಬುದ್ಧಿಯನ್ನು ಒರೆಗೆ ಹಚ್ಚುವಂತೆ ಮಾಡುವ ಆಟದ ಕಂಪೆನಿಗಳು, ಆದ್ದರಿಂದ ನಾವು ಕ್ರಿಕೆಟ್‌ಗೆ ಪ್ರಾಯೋಜಕತ್ವ ನೀಡಬಹುದು ಎಂದು ಕೋರ್ಟ್ ಮೂಲಕವೇ ಗ್ರೀನ್ ಸಿಗ್ನಲ್ ತಂದಿವೆ. ಬೆಟ್ಟಿಂಗ್ ಬ್ರಾಂಡುಗಳೇ ಇಂದು ಭಾರತ ಕ್ರಿಕೆಟ್ ತಂಡದ ಜೆರ್ಸಿಗಳಲ್ಲಿ ರಾರಾಜಿಸುತ್ತಿವೆ. ಹಾಲಿ, ಮಾಜಿ ಆಟಗಾರರೆಲ್ಲ ಈ ದಂಧೆಯಲ್ಲಿ ಹಣತೊಡಗಿಸಿ ತಮ್ಮ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಡಿ ಎಂದು ಯುವಕರಿಗೆ ಕರೆ ನೀಡುತ್ತಿದ್ದಾರೆ. ಹೀಗಿರುವಾಗ ಸಮಸ್ಯೆಗಳನ್ನು ಯಾರಿಗೆ ಹೇಳುವುದು.

ಪ್ರಸಕ್ತ ಸಾಲಿನ ಐಪಿಎಲ್ ಫ್ರಾಂಚೈಸಿಗಳ ಬಿಡ್ಡಿಂಗ್ ಪ್ರಕ್ರಿಯೆ ಮುಗಿದ ನಂತರ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, “ಬೆಟ್ಟಿಂಗ್ ಕಂಪೆನಿಗಳೂ ಐಪಿಎಲ್ ತಂಡಗಳನ್ನು ಖರೀದಿಸಬಹುದು” ಎಂದು ಮಾಡಿರುವ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಕಾರಣವೂ ಇದೆ, 7090 ಕೋಟಿ ರೂ. ಮೊತ್ತಕ್ಕೆ ಲಕ್ನೋ ಫ್ರಾಂಚೈಸಿಯನ್ನು ಆರ್‌ಪಿಎಸ್‌ಜಿ ವೆಂಚರ್ಸ್ ಲಿ. ಖರೀದಿಸಿದರೆ, ಸಿವಿಸಿ ಕ್ಯಾಪಿಟಲ್ಸ್ 5900 ಕೋಟಿ ರೂ.ಗಳಿಗೆ ಅಹಮದಾಬಾದ್ ಫ್ರಾಂಚೈಸಿಯನ್ನು ಖರೀದಿಸಿತ್ತು. ಸಿವಿಸಿ ಕ್ಯಾಪಿಟಲ್ಸ್ಗೆ ಬೆಟ್ಟಿಂಗ್ ಕಂಪೆನಿಗಳ ಜೊತೆ ಸಂಬಂಧ ಹೊಂದಿರುವುದನ್ನು ಮಾಧ್ಯಮಗಳು ಪ್ರಕಟಿಸಿದ್ದವು. ಇದರ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬಿಸಿಸಿಐ ಹೇಳಿಕೆ ನೀಡಿತ್ತು. ಆದರೆ ತನ್ನೊಳಗೆ ತಾನೇ ವಿಚಾರಣೆ ನಡೆಸಿದ ಬಿಸಿಸಿಐ, ಸಿವಿಸಿ ಕ್ಯಾಪಿಟಲ್ಸ್ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಈಗ ಗುಜರಾತ್ ಟೈಟಾನ್ಸ್ ನೆಮ್ಮದಿಯಾಗಿ ಐಪಿಎಲ್ ಆಡುತ್ತಿದೆ.

ತಂಡದ ಮಾಲೀಕರೇ ಬೆಟ್ಟಿಂಗ್ ದಂಧೆಯ ಪಾಲುದಾರರು
ನಿಮ್ಮಲ್ಲಿ ಹಣ ಇದೆ ಎಂದರೆ ಸಾಕು, ಬಿಸಿಸಿಐ ಅದಕ್ಕೊಂದುದಾರಿ ತೋರಿಸುತ್ತದೆ ಎನ್ನುವಷ್ಟರ ಮಟ್ಟಿಗೆ ಬಿಸಿಸಿಐ ಬೆಳೆದು ನಿಂತಿದೆ. ಸಿವಿಸಿ ಕ್ಯಾಪಿಟಲ್ಸ್ ಬಗ್ಗೆ ಎಲ್ಲರಿಗೂ ಗೊತ್ತಿದೆ ಅದೊಂದು ಬೆಟ್ಟಿಂಗ್ ಕಂಪೆನಿಯಲ್ಲಿ ಪಾಲುದಾರಿಕೆಯನ್ನು ಹೊಂದಿರುವ ಕಂಪೆನಿ ಎಂದು. ಇಂಗ್ಲೆಂಡಿನ ಸ್ಕೈ ಬೆಟ್ ಕಂಪೆನಿಯಲ್ಲಿ ಶೇ.80ರಷ್ಟು ಪಾಲುದಾರಿಕೆಯನ್ನು ಹೊಂದಿರುವ ಸಿವಿಸಿ ಕ್ಯಾಪಿಟಲ್ಸ್ ಬೆಟ್ಟಿಂಗ್ ಕಂಪೆನಿಯಲ್ಲ ಎಂಬುದನ್ನು ಬಿಸಿಸಿಐ ಒಪ್ಪಿಕೊಂಡಿದೆ. ಸ್ಕೈ ಬೆಟ್ ಗ್ರೂಪ್ ಜಗತ್ತಿನ ಹಲವಾರು ಬೆಟ್ಟಿಂಗ್ ಕಂಪೆನಿಗಳಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಈ ರೀತಿಯ ಬೆಟ್ಟಿಂಗ್ ಕಂಪೆನಿಯೊಂದಿಗೆ ಪಾಲು ಹೊಂದಿರುವ ಸಿವಿಸಿ ಕ್ಯಾಪಿಟಲ್ಸ್ ಮಾಲೀಕತ್ವ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾಗಿಯೂ ನಂಬಿಕೆ ಇರಲು ಸಾಧ್ಯವೇ, ಮಾಲೀಕರ ಲಾಭಕ್ಕಾಗಿ ಆಡುವ ಕ್ರಿಕೆಟಿಗರಿಗೆ ಜನರ ಬಗ್ಗೆ ಕಾಳಜಿ ಇರುತ್ತದೆ ಅಥವಾ ಕ್ರಿಕೆಟ್‌ನ ಸಿದ್ಧಾಂತಗಳನ್ನು ಕಾಯ್ದುಕೊಳ್ಳಬೇಕೆಂಬ ಹಂಬಲ ಇರುತ್ತದೆ ಎಂದು ಹೇಳಲಾಗದು. ಕೇವಲ ಟಿಕೆಟ್ ಮತ್ತು ಜಾಹೀರಾತಿನಿಂದ ಹಣ ಗಳಿಸುವ ಗುರಿ ಹೊಂದಿ ಸಿವಿಸಿ ಕ್ಯಾಪಿಟಲ್ಸ್ ಮಾಲೀಕರು 5900 ಕೋಟಿ ರೂ. ವ್ಯಯ ಮಾಡಿದ್ದಾರೆ ಎಂದರೆ ಯಾರೂ ನಂಬಲಾರರು. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನೇರವಾಗಿ ಫ್ರಾಂಚೈಸಿ ಮಾಲೀಕರು ಪಾಲುದಾರರಾಗಿರುವಾಗ ಇನ್ನು ಆ ತಂಡದ ಸ್ಥಿತಿ ಹೇಗಿರಬಹುದು ಎಂಬುದನ್ನು ಗಮನಿಸಿ.

ಎಂಪಿಎಲ್, ಡ್ರೀಮ್ ಇಲೆವೆನ್ ಬಿಸಿಸಿಐಗೆ ಪ್ರಾಯೋಜಕರು. ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದರೂ ಅಲ್ಲಿ ಜಯ ಆಗಿದೆ ಎಂದರೆ ಕ್ರಿಕೆಟ್ ಯಾವ ಹಂತವನ್ನು ತಲುಪಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಭಾರತ ಕ್ರಿಕೆಟ್ ತಂಡದ ಹಾಲಿ ಮತ್ತು ಮಾಜಿ ಆಟಗಾರರು, ನಾಯಕರೇ ಡ್ರೀಮ್ ಇಲೆವೆನ್ ಹಾಗೂ ಇತರ ಬೆಟ್ಟಿಂಗ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಸ್ವತಃ ತಾವೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದೆಲ್ಲ ಭೂಗತ ದೊರೆ ದಾವೂದ್ ಇಬ್ರಾಹಿಂ ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸುತ್ತಿದ್ದ ಎಂದು ಹೇಳಿ ಸುಮ್ಮನಾಗುತ್ತಿದ್ದರು. ಆದರೆ ಈಗ ನಮ್ಮವರೇ ಅಧಿಕೃತವಾಗಿ ಕ್ರಿಕೆಟ್ ಜೂಜಿನಲ್ಲಿ ಆಡಿ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಭೂಗತ ಜಗತ್ತು ಈಗ ಭೂಮಿಯ ಮೇಲೆಯೇ ಇದೆ. ಈ ಆಟವನ್ನು ಆಡುವುದರಿಂದ ಆಗುವ ಅನಾಹುತಗಳನ್ನು ಒಂದು ಸೆಕೆಂಡಿನಲ್ಲಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ವೇಗವಾಗಿ ಹೇಳಿ ಮುಗಿಸುತ್ತಾರೆ.
2013 ರಲ್ಲಿ ನಡೆದ ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಹಗರಣಗಳ ಕುರಿತು ತನಿಖೆ ಮಾಡಿದ ಜಸ್ಟೀಸ್ ಮುಕುಲ್ ಮುದ್ಗಲ್ ಸಮಿತಿಯು ಲೋಧಾ ಸಮಿತಿಗೆ ವರದಿಯೊಂದನ್ನು ಒಪ್ಪಿಸಿತ್ತು. ಅದರಲ್ಲಿ 13ಕ್ಕೂ ಹೆಚ್ಚು ಆಟಗಾರರ ಮತ್ತು ಬುಕ್ಕಿಗಳ ಹೆಸರು ಇತ್ತೆಂದು ತಿಳಿದು ಬಂದಿತ್ತು. ಆದರೆ ಆ ಬಗ್ಗೆ ಏನಾಯಿತು, ಆ 13 ಆಟಗಾರರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಲೋಧಾ ಸಮಿತಿಯ ಶಿಫಾರಸ್ಸುಗಳಲ್ಲಿ ಹೆಚ್ಚಿನವು ಏನಾದವುಎಂಬುದರ ಬಗ್ಗೆ ಬಿಸಿಸಿಐ ಇನ್ನೂ ಬಹಿರಂಗಪಡಿಸಿಲ್ಲ. ಈ ನಡುವೆ ಮುಕುಲ್ ಮುದ್ಗಲ್ ಅವರು ಭಾರತದಲ್ಲಿ ಬೆಟ್ಟಿಂಗ್ ದಂಧೆಯನ್ನು ಕಾನೂನುಬದ್ಧಗೊಳಿಸುವುದೇ ಸೂಕ್ತ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದರು. ಕಪ್ಪು ಹಣವನ್ನು ನಿಯಂತ್ರಿಸಲು ಇದು ಸಾಧ್ಯವಾಗುತ್ತದೆ ಎಂದೂ ಸೂಚಿಸಿದ್ದರು. ಆದರೆ ಕಾರ್ಯರೂಪಕ್ಕೆ ತರುವುದು ಯಾರು ಎಂಬ ಪ್ರಶ್ನೆ ಬಂದಾಗ ಎಲ್ಲರೂ ಮೌನಕ್ಕೆ ಶರಣಾಗುತ್ತಾರೆ.
8 ಲಕ್ಷ ಕೋಟಿ ರೂ. ಬೆಟ್ಟಿಂಗ್ ವ್ಯವಹಾರ
ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಮೊಬೈಲ್ ಬಳಸುವವರಲ್ಲಿ ಶೇ.40 ರಷ್ಟು ಜನರು ಬೆಟ್ಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಬೆಟ್ಟಿಂಗ್ ಕಾನೂನು ಬಾಹಿರ. ಕ್ರಿಕೆಟ್ ಬೆಟ್ಟಿಂಗ್‌ಗೆ “ಕೌಶಲ್ಯ ಮತ್ತು ಕಾಲ್ಪನಿಕ ಆಟ” ಎಂದು ಕೈತೊಳೆದುಕೊಂಡು ಬಿಡಲಾಗಿದೆ. ಇದರಿಂದ ವರ್ಷಕ್ಕೆ ವಿವಿಧ ಬೆಟ್ಟಿಂಗ್‌ಗಳಲ್ಲಿ ವಾರ್ಷಿಕ ವಹಿವಾಟು 8 ಲಕ್ಷ ಕೋಟಿ ಎಂದು ಹೇಳಲಾಗುತ್ತಿದೆ. ಇದರಲ್ಲಿ ಶೇ.80 ಭಾಗ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಬರುತ್ತಿದೆ. ಇದಕ್ಕೆ ಬಳಸು ಹಣದಲ್ಲಿ ಶೇ.60 ಭಾಗ ಕಪ್ಪು ಹಣ ಎಂದು ತಿಳಿದು ಬಂದಿದೆ. ಬಾಕಿ 40 ಶೇ. ಹಣ ಗಳಿಸುವ ಆಸೆಯಿಂದ ಆಡುವವರು ಮತ್ತು ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವವರು. ಭಾರತದಲ್ಲಿಕನಿಷ್ಠ 150000 ಬುಕ್ಕಿಗಳು ಇದ್ದಾರೆಂದು ತಿಳಿದುಬಂದಿದೆ. ಇದು ಬಹಳ ಹಿಂದಿನ ಅಂಕಿ ಅಂಶ, ಇದಲ್ಲದೆ ವಿದೇಶದ ಬುಕ್ಕಿಗಳೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರ ಇವೆಲ್ಲವನ್ನೂ ನೋಡಿಕೊಂಡು ಸುಮ್ಮನಿದೆ. ಕಳೆದುಕೊಳ್ಳುವವರು ಕಳೆದುಕೊಳ್ಳುತ್ತಲೇ ಇದ್ದಾರೆ, ಗಳಿಸುವವರು ಗಳಿಸುತ್ತಲೇ ಇದ್ದಾರೆ. ಬೆಟ್ಟಿಂಗ್ ದಂಧೆಯನ್ನೂ ಕಾನೂನು ವ್ಯಾಪ್ತಿಯಲಿ ತರುವುದರಿಂದ ಸರ್ಕಾರಕ್ಕೂ ಲಾಭವಿದೆ. ಬೆಟ್ಟಿಂಗ್ ಶುಲ್ಕವನ್ನು ಸಂಗ್ರಹಿಸಿದರೆ ಸರ್ಕಾರಕ್ಕೂ ಲಾಭವಾಗುತ್ತದೆ.

ಕ್ರಿಕೆಟ್‌ನಲ್ಲಿ ವೃತ್ತಿಪರತೆ ಇದೆ ನಿಜ, ಆದರೆ ಹಣದ ಹೊಳೆ ಹರಿಯುತ್ತಿರುವುದು ಯುವಕರು ಬೇರೆ ಕ್ರೀಡೆಗಳ ಕಡೆಗೆ ಗಮನ ಹರಿಸದಂತೆ ಮಾಡಿದೆ. ಚಿಕ್ಕ ಮಕ್ಕಳನ್ನು ಕೇಳಿದರೆ, ಸಚಿನ್ ಆಗಬೇಕು, ಧೋನಿ ಆಗಬೇಕು, ವಿರಾಟ್‌ರೀತಿ ಆಗಬೇಕು ಅನ್ನುತ್ತಾರೆ ವಿನಾ ನೀರಜ್ ಚೋಪ್ರಾ ಅವರಂತೆ ಆಗಬೇಕು ಎಂದು ಹೇಳುವವರ ಸಂಖ್ಯೆ ಕಡಿಮೆ. ಕ್ರಿಕೆಟ್ ಆ ರೀತಿಯಲ್ಲಿ ದೇಶದ ಕ್ರೀಡೆಯನ್ನು ಆವರಿಸಿದೆ. ಐಪಿಎಲ್ ಆರಂಭವಾಯಿತೆಂದರೆ ಡ್ರೀಮ್ ಇಲೆವೆನ್ ಆಡಿಕೊಂಡೊ, ಇಲ್ಲ ಸ್ಥಳೀಯ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡು ಯುವ ಜನಾಂಗ ಹಾದಿ ತಪ್ಪುತ್ತಿದೆ. ಇನ್ನಷ್ಟು ದುರಂತಗಳು ಸಂಭವಿಸುವುದಕ್ಕೆ ಮುನ್ನ ಈ ಬೆಟ್ಟಿಂಗ್ ದಂಧೆಯನ್ನು ಕಾನೂನು ವ್ಯಾಪ್ತಿಯಲ್ಲಿ ತರುವುದೇ ಸೂಕ್ತ. ಇಲ್ಲವಾದಲ್ಲಿ ಸರ್ಕಾರ ಬಿಸಿಸಿಐ ಹೇಳಿದಂತೆ ಬಿದ್ದುಕೊಂಡಿರಬೇಕಾಗುತ್ತದೆ.