29.2 C
Bengaluru
Sunday, March 19, 2023
spot_img

ಮಾಧುಸ್ವಾಮಿ ಸೋಲಿಸಲು ಕೈ ತಂತ್ರ: ಧನಂಜಯಸ್ತ್ರ ಪ್ರಯೋಗ ಖಚಿತ!!

-ನೀರಕಲ್ಲು ಶಿವಕುಮಾರ್

ಈಗ 37 ವರ್ಷಗಳ ನಂತರ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಕೈ ನಾಯಕರು ದೃಢ ಸಂಕಲ್ಪ ಮಾಡಿದ್ದು ಚಿಕ್ಕನಾಯಕನಹಳ್ಳಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕುರುಬ ಸಮುದಾಯದ ಸಿ.ಎಂ.ಧನಂಜಯ ಎಂಬುವವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಭಾರತ್ ಜೋಡೋ ಪಾದಯಾತ್ರೆ  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ. ಪುರದ ಮುಂದೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ರಾಹುಲ್ ಗಾಂಧಿ ಅವರನ್ನು ಅಲ್ಲಿನ ಸಾವಯವ ಕೃಷಿಕ ಶಿವನಂಜಯ್ಯ ಬಾಳೆಕಾಯಿ ಅವರ ಮನೆಗೆ ಕರೆತಂದು ಮುಖಂಡರು ಅಲ್ಲಿ ಅರ್ಧ ಘಂಟೆ ತಂಗಿ ಮಾತುಕತೆ ನಡೆಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಏಕೆಂದರೆ ಇದು ಸಚಿವ ಮಾಧುಸ್ವಾಮಿ ಅವರ ಸ್ವಗ್ರಾಮ.

ವಿಧಾನಸಭೆಯಲ್ಲಿ ಮಾಧುಸ್ವಾಮಿ-ಸಿದ್ದರಾಮಯ್ಯ ಜಟಾಪಟಿ.

ವಿಧಾನಮಂಡಲ ಕಲಾಪ ಸೇರಿದಂತೆ ಸದನದ ಹೊರಗೂ ಒಳಗೂ ಕಾಂಗ್ರೆಸ್ ಪಕ್ಷದ ಟೀಕೆ, ಆರೋಪಗಳನ್ನು ಹಿಮ್ಮೆಟ್ಟಿಸುವ ಮತ್ತು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಮುಗಿಬೀಳುವ, ಕೆಲವೊಮ್ಮೆ ವೈಯಕ್ತಿಕ ಮಟ್ಟದಲ್ಲಿ ದಾಳಿಗಿಳಿಯುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಶತಾಯಗತಾಯ ಸೋಲಿಸಲು ಕೈ ನಾಯಕರು ಭರ್ಜರಿ ತಂತ್ರಗಾರಿಕೆ ನಡೆಸಿದ್ದು ಈ ಸಲ ಸಮರ್ಥ ಅಭ್ಯರ್ಥಿಯನ್ನು ಹೂಡಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಹೊರಟಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಾಗಲೆಲ್ಲ ಮಾಧುಸ್ವಾಮಿ ಏರಿದ ಧ್ವನಿಯಲ್ಲಿ ತಿರುಗೇಟು ನೀಡುತ್ತಿದ್ದರು. ಇಷ್ಟೇ ಮಾಡಿದ್ದರೆ ಸಮಸ್ಯೆ ಇರಲಿಲ್ಲ. ಕಳೆದ ಬಜೆಟ್ ಅಧಿವೇಶನದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಸಲ್ಲದ ವಿಚಾರಗಳನ್ನು ಪ್ರಸ್ತಾಪಿಸಿ “ನಾನು ಶಾಸಕನಾಗಿ ವಿಧಾನಸಭೆಗೆ ಬಂದಾಗ ನೀನೂ ಬಂದೆ. ನನ್ನ ಆಸ್ತಿ ಎಷ್ಟಿದೆ, ನಿನ್ನ ಎಷ್ಟಿದೆ ಮೌಲ್ಯಮಾಪನ ಮಾಡಿಸೋಣ ಬಾ. ಅಡ್ಡ ಹಾದಿಯಲ್ಲಿ ದುಡ್ಡು ಮಾಡಿರೋದು ಜಗತ್ತಿಗೆ ಗೊತ್ತಿದೆ” ಎಂದು ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದರು. ಇದು ಸ್ಯಾಂಪಲ್ ಅಷ್ಟೇ. ಇದೇ ರೀತಿ ಡಿಕೆಶಿ ಮತ್ತು ಸಿದ್ದರಾಮಯ್ಯ ವಿರುದ್ಧ ಅನೇಕ ಸಲ ಏರಿ ಹೋಗುತ್ತಿದ್ದರು. ಕಾಂಗ್ರೆಸ್ ಪಕ್ಷವನ್ನು ಹೀನಾಮಾನವಾಗಿ ಜರಿಯುತ್ತಿದ್ದರು. ಇದರಿಂದ ಕಾಂಗ್ರೆಸ್ ಸದಸ್ಯರು ಕೆರಳಿದ್ದೂ ಉಂಟು. ಈ ಹಿನ್ನೆಲೆ ಮಾಧುಸ್ವಾಮಿ ಮಣಿಸಲು ಮತ್ತು ಈ ಬಾರಿ ನಾಲ್ಕು ದಶಕಗಳಿಂದ ಕೈ ತಪ್ಪಿರುವ ಚಿಕ್ಕನಾಯಕನಹಳ್ಳಿ ಕ್ಷೇತ್ರವನ್ನು ಮರುವಶ ಮಾಡಿಕೊಳ್ಳಲು, ಪ್ರಮುಖವಾಗಿ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಭಾಗವಾಗಿ ಸಿದ್ದರಾಮಯ್ಯ, ಡಿಕೆಶಿ ಮತ್ತು ಡಾ.ಜಿ.ಪರಮೇಶ್ವರ್ ಜತೆಗೂಡಿ ತಂತ್ರ ರೂಪಿಸಿ ಇದಕ್ಕಾಗಿ ಸಮರ್ಥ ಅಭ್ಯರ್ಥಿಯನ್ನು ಸಜ್ಜುಗೊಳಿಸಿದ್ದಾರೆ.

ಸಿ.ಎಂ.ಧನಂಜಯ ಕಣಕ್ಕಿಳಿಸಲು ತೀರ್ಮಾನ

ಸ್ವಾತಂತ್ರ್ಯ ನಂತರ ತನ್ನ ಭದ್ರಕೋಟೆಯಾಗಿದ್ದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರವನ್ನು 37 ವರ್ಷಗಳ ಹಿಂದೆ ಕಾಂಗ್ರೆಸ್ ಕಳೆದುಕೊಂಡಿದ್ದು ಈವರೆಗೂ ಮತ್ತೆ ಗೆಲ್ಲಲಾಗಿಲ್ಲ. 1985 ರಲ್ಲಿ ಬಿ.ಲಕ್ಕಪ್ಪ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದೇ ಕೊನೆ ಅಲ್ಲಿಂದ ಈವರೆಗೂ ಜನತಾಪರಿವಾರದ ಪಕ್ಷಗಳು ಗೆಲ್ಲುತ್ತಾ ಬಂದಿದ್ದವು. ಮಾಧುಸ್ವಾಮಿ 1989 ರಲ್ಲಿ ಜನತಾ ದಳ, 1997ರ ಉಪಚುನಾವಣೆಯಲ್ಲಿ ಪಕ್ಷೇತರ, 2004 ರಲ್ಲಿ ಜೆಡಿಯು, 2008 ರಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. ಈ ಮಧ್ಯೆ 1999, 2008, 2013 ರಲ್ಲಿ ಜೆಡಿಎಸ್ ಪಕ್ಷದ ಸಿ.ಬಿ.ಸುರೇಶ್‌ಬಾಬು ಆಯ್ಕೆಯಾಗಿದ್ದಾರೆ. 1994 ರಲ್ಲಿ ಸುರೇಶ್ ಬಾಬು ತಂದೆ ಬಸವಯ್ಯನವರು ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಈಗ 37 ವರ್ಷಗಳ ನಂತರ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಕೈ ನಾಯಕರು ದೃಢ ಸಂಕಲ್ಪ ಮಾಡಿದ್ದು ಚಿಕ್ಕನಾಯಕನಹಳ್ಳಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕುರುಬ ಸಮುದಾಯದ ಸಿ.ಎಂ.ಧನಂಜಯ ಎಂಬುವವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ ಮಾಹಿತಿ ದೊರೆತಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ಕನಕಭವನದ ಬಳಿ ಸಿ.ಎಂ.ಧನಂಜಯ ಅವರು ಸ್ಥಳೀಯ ಮುಖಂಡರೊಂದಿಗೆ ರಾಹುಲ್ ಗಾಂಧಿ ಸ್ವಾಗತಿಸಿರುವ ಚಿತ್ರ.

ಧನಂಜಯ ಹಿಂದೆ ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷರಾಗಿ ಮತ್ತು ಪಕ್ಷದ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಇವರು ಸಮರ್ಥ ಸಂಘಟಕರಾಗಿದ್ದು ಮಾಧುಸ್ವಾಮಿ ಅವರನ್ನು ಹಿಮ್ಮೆಟ್ಟಿಸಬಲ್ಲ ರಾಜಕೀಯ ಪಟ್ಟುಗಳು, ಜನರೊಂದಿಗಿನ ಸಂಪರ್ಕ, ಸಂಪನ್ಮೂಲ, ಜನಸ್ನೇಹಿ ಗುಣಗಳನ್ನು ಹೊಂದಿದ್ದವರಾಗಿದ್ದಾರೆ. ಮಿಗಿಲಾಗಿ ಸಿದ್ದರಾಮಯ್ಯ, ಡಿಕೆಶಿ ಮತ್ತು ಪರಮೇಶ್ವರ್ ಅವರ ನಿಕಟವರ್ತಿಯಾಗಿದ್ದಾರೆ. ಕೊಟ್ಟ ಟಾಸ್ಕ್ ಬೆನ್ನತ್ತಿ ಗುರಿ ಸಾಧಿಸುವ `ಎಲ್ಲಾ ರೀತಿ’ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇವರೇ ಸೂಕ್ತ ಎಂದು ತ್ರಿಮೂರ್ತಿ ಟಾಪ್ ನಾಯಕರು ನಿರ್ಧರಿಸಿ ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ ಸೇರಿ ಜಿಲ್ಲಾ ಮುಖಂಡರೊಂದಿಗೆ ಚರ್ಚಿಸಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮೊನ್ನೆಯ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ವೇಳೆ ಧನಂಜಯ ಅವರಿಗೆ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಚಿಕ್ಕನಾಯಕನಹಳ್ಳಿ ನಗರದ ಕನಕ ಭವನದ ಬಳಿ ಬಂದಾಗ ರಾಹುಲ್ ಅವರಿಗೆ ಕರಿಕಂಬಳಿ ಹೊದೆಸಿ ಸ್ವಾಗತ ಮಾಡಿದ ಧನಂಜಯ ಅವರನ್ನು ರಾಹುಲ್ ಅವರಿಗೆ ಪರಿಚಯಿಸಿದ ಡಿ.ಕೆ.ಶಿವಕುಮಾರ್ “ಇವರೇ ಇಲ್ಲಿನ ಮುಂದಿನ ಕಾಂಗ್ರೆಸ್ ಅಭ್ಯರ್ಥಿ” ಎಂದು ಹೇಳಿದ್ದನ್ನು ಅಲ್ಲಿನ ಸ್ಥಳೀಯ ಮುಖಂಡರು ಕೇಳಿಸಿಕೊಂಡಿದ್ದಾರೆ. ಈ ಸಂಬಂಧದ ವಿಡಿಯೋ ಮತ್ತು ಪೊಟೋಗಳು ವೈರಲ್ ಆಗಿವೆ.

ಧನಂಜಯ ಅವರು 2013 ರ ಚುನಾವಣೆಯಿಂದಲೂ ಚಿಕ್ಕನಾಯಕನಹಳ್ಳಿ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿದ್ದು ಪಕ್ಷದ ಸಂಘಟನಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದಲ್ಲದೆ ಚಿಕ್ಕನಾಯಕನಹಳ್ಳಿ ಮನೆ ಮಾಡಿ ವಾಸಿಸುತ್ತಿದ್ದರು. ಕಳೆದ ಚುನಾವಣೆಯಲ್ಲಿ ಅದೇ ಮನೆಯನ್ನು ಧನಂಜಯ ಅವರಿಂದ ಪಡೆದುಕೊಂಡಿದ್ದ ಕಾಂಗ್ರೆಸ್ ಆಭ್ಯರ್ಥಿ ಸಂತೋಷ್ ಅಲ್ಲಿಯೇ ವಾಸ್ತವ್ಯ ಹೂಡಿ ಪ್ರಚಾರ ಕಾರ್ಯ ನಡೆಸಿದ್ದರು ಎನ್ನಲಾಗಿದೆ.

ಕಾರ್ಯಕರ್ತರಲ್ಲಿ ಉತ್ಸಾಹ

ರಾಹುಲ್ ಪಾದಯಾತ್ರೆ ನಂತರ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕೈ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದ್ದು ಧನಂಜಯ ಅವರಿಗೆ ಟಿಕೆಟ್ ಸಿಗುವ ಮಾತುಗಳು ಕೇಳಿಬರುತ್ತಿದ್ದಂತೆಯೇ ಉತ್ಸಾಹದ ಅಲೆಯಲ್ಲಿ ತೇಲುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ತಂದ ಸಂತೋಷ್ ಜಯಚಂದ್ರ ಅವರಿಗೆ 46 ಸಾವಿರ ಮತ ತಂದಿದ್ದೆವು. ಈ ಸಲ ನಮ್ಮದೇ ಗೆಲುವು ಎಂದು ಹೇಳಿಕೊಳ್ಳುತ್ತಿದ್ದಾರೆ.

ಮಾಧುಸ್ವಾಮಿ ಸ್ವಗ್ರಾಮದ ಕೃಷಿಕನ ಮನೆಗೆ ರಾಹುಲ್!

ಭಾರತ್ ಜೋಡೋ ಪಾದಯಾತ್ರೆ  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ. ಪುರದ ಮುಂದೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ರಾಹುಲ್ ಗಾಂಧಿ ಅವರನ್ನು ಅಲ್ಲಿನ ಸಾವಯವ ಕೃಷಿಕ ಶಿವನಂಜಯ್ಯ ಬಾಳೆಕಾಯಿ ಅವರ ಮನೆಗೆ ಕರೆತಂದು ಮುಖಂಡರು ಅಲ್ಲಿ ಅರ್ಧ ಘಂಟೆ ತಂಗಿ ಮಾತುಕತೆ ನಡೆಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಏಕೆಂದರೆ ಇದು ಸಚಿವ ಮಾಧುಸ್ವಾಮಿ ಅವರ ಸ್ವಗ್ರಾಮ.

ಸಚಿವ ಮಾಧುಸ್ವಾಮಿ ಅವರ ಸ್ವಗ್ರಾಮ ಜೆ.ಸಿ.ಪುರ ಗ್ರಾಮದ ಕೃಷಿಕ ಶಿವನಂಜಯ್ಯ ಬಾಳೆಕಾಯಿ ಅವರ ಮನೆಗೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ ಕುಟುಂಬಸ್ಥರೊಂದಿಗೆ ಪೋಟೋಗೆ ಪೋಸ್ ನೀಡಿದ್ದಾರೆ.

ಶಿವನಂಜಯ್ಯ ಮನೆ ಮುಂದಿನ ಅಂಗಳದ ಹಸಿರು ಹುಲ್ಲಿನ ಮೇಲೆ ಕುಳಿತ ರಾಹುಲ್ ರೈತನಿಂದ ಸಹಜ ಕೃಷಿ ಅನುಭವಗಳನ್ನು ಆಲಿಸಿ. ಕುತೂಹಲದಿಂದ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತ ಕೃಷಿಕನ ವಿವರಣೆಯ ಆಳಕ್ಕೆ ಜಾರಿದ್ದರು. ಆದರೆ ಜತೆಯಲ್ಲಿದ್ದ ಸಿದ್ದರಾಮಯ್ಯ, ಡಿಕೆಶಿ ಮತ್ತಿತರರು ಮನದಲ್ಲಿ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ತೊಡಗಿದ್ದರು.

ಜೆ.ಸಿ.ಪುರ ಮಾಧುಸ್ವಾಮಿ ಅವರಿಗೆ ಅತಿಹೆಚ್ಚು ಮತ ತಂದುಕೊಡುವ ಹೋಬಳಿಯಾಗಿದ್ದು ಅದೇ ಕಾರಣಕ್ಕೇ ರಾಹುಲ್ ಮೂಲಕ ಕಾಂಗ್ರೆಸ್ ಹವಾ ಎಬ್ಬಿಸಿದ್ದಾರೆ ಎನ್ನಲಾಗಿದೆ.

ಜೆ.ಸಿ‌.ಪುರ ಗ್ರಾಮದ ಶಿವನಂಜಯ್ಯ ಅವರ ಮನೆ ಆವರಣದಲ್ಲಿ ಸಿದ್ದರಾಮಯ್ಯ ಮತ್ತಿತರ ನಾಯಕರೊಂದಿಗೆ ರಾಹುಲ್ ಮಾತುಕತೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles