-ಕೇಶವರೆಡ್ಡಿ ಹಂದ್ರಾಳ
ಅನೇಕ ಅಭ್ಯರ್ಥಿಗಳು ತಮಗೆ ಮೀಸಲಾದ ಪ್ರಯತ್ನಗಳ ಅವಕಾಶ ಮುಗಿದರೂ ಗುರಿ ಮುಟ್ಟುವಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಅಂಥವರಲ್ಲಿ ಬಹುತೇಕರು ಮಾನಸಿಕ ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಒಳಗಾಗುತ್ತಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ಇಂಥವರಿಗೆ ತಂದೆ – ತಾಯಿಗಳು, ಹಿತೈಷಿಗಳು, ಸ್ನೇಹಿತರು ಧೈರ್ಯ ತುಂಬುವ ಕೆಲಸ ಮಾಡಬೇಕು. ಏಕೆಂದರೆ, ಈ ಅಧಿಕಾರಿಶಾಹಿಗಿಂತಲೂ ಉತ್ತಮವಾಗಿ ಬದುಕುವ ಅನೇಕ ಮಾರ್ಗೋಪಾಯಗಳು ಯುವ ಜನತೆಯ ಮುಂದೆ ಇವೆ. ಇಂದು ಭಾರತದಲ್ಲಿ ಈ ಅಧಿಕಾರಿಶಾಹಿ ಭ್ರಷ್ಟತೆಯ ಕೂಪದಲ್ಲಿ ಮುಳುಗಿಬಿಟ್ಟಿದೆ ಮತ್ತು ರಾಜಕಾರಣಕ್ಕೆ ಶರಣಾಗತವಾಗಿ ತನ್ನ ತನವನ್ನು ಕಳೆದುಕೊಂಡಿದೆ. ಅಧಿಕಾರಿಶಾಹಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಭ್ರಷ್ಟ ರಾಜಕಾರಣ ಬಿಡುತ್ತಿಲ್ಲ. ರಾಜಕಾರಣ ಮತ್ತು ಅಧಿಕಾರಿಶಾಹಿ ಸ್ವಚ್ಛಗೊಂಡಾಗ ಮಾತ್ರ ದೇಶದ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಸಿಗಬಹುದೇನೋ… ಅಲ್ಲಿಯವರೆಗೂ ಈ ದೇಶದಲ್ಲಿ ಸಾಮಾಜಿಕ ನ್ಯಾಯ ಮರೀಚಿಕೆಯೇ ಸರಿ. ಹಾಗಿರುವಾಗ ಸ್ಪರ್ಧಾತ್ಮಕ ಪರೀಕ್ಷೆಗಳು ತಯಾರು ಮಾಡುತ್ತಿರುವುದು ಭ್ರಷ್ಟಾಚಾರದ ಪಡೆಯನ್ನ. ಒಂದು ವೇಳೆ ಈ ಮೂಲಕ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಆರಿಸಿ ಬಂದರೂ ಭ್ರಷ್ಟ ವ್ಯವಸ್ಥೆ ಅವರನ್ನು ಅಸಹಾಯಕರನ್ನಾಗಿ, ನಿರ್ವೀರ್ಯರನ್ನಾಗಿ ಮಾಡಿಬಿಡುತ್ತದೆ.

“ವಿಪರೀತ ಮತ್ತು ನಿರಂತರವಾದ ಕೈಗಾರಿಕಾಭಿವೃದ್ದಿಯಿಂದಾಗಿ ಎಲ್ಲಾ ಉತ್ಪಾದನಾ ಕ್ಷೇತ್ರಗಳಲ್ಲೂ ಯಂತ್ರೋಪಕರಣಗಳ ಉಪಯೋಗ ಅಧಿಕವಾಗಿ ಮಾನವ ಶ್ರಮ ಬಳಕೆ ಕಡಿಮೆಯಾಗುತ್ತದೆ. ಇದು ಆರ್ಥಿಕ ವ್ಯವಸ್ಥೆಯ ಮೇಲೆ ಅಡ್ಡಪರಿಣಾಮಗಳನ್ನು ಬೀರುವುದಲ್ಲದೆ ವಿಪರೀತ ಆರ್ಥಿಕ ಅಸಮಾನತೆಗೆ ಕಾರಣವಾಗುತ್ತದೆ. ಹಾಗಾಗಿ ಇಡೀ ಜಗತ್ತು ವಾಸಿಯಾಗಲಾರದ ವ್ರಣದಿಂದ ನರಳುವ ರೋಗಿಯಂತೆ ಬದುಕುತ್ತಿರುತ್ತದೆ..”
– ಮೋಹನದಾಸ ಕರಮಚಂದ ಗಾಂಧಿ
ಪ್ರಸ್ತುತ ಭಾರತ ಸ್ಪರ್ಧಾತ್ಮಕ ಯುಗವಾಗಿ ರೂಪಾಂತರಗೊಂಡಿದೆ. ಜನಸಂಖ್ಯೆ ವಿಪರೀತ ಬೆಳೆಯುತ್ತಿರುವುದರ ಜೊತೆ ಜೊತೆಗೆ ದೇಶವನ್ನು ಭೀಕರವಾದ ನಿರುದ್ಯೋಗ ಸಮಸ್ಯೆ ಇನ್ನಿಲ್ಲದಂತೆ ಕಾಡತೊಡಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಜನಸಂಖ್ಯೆ ಮುವತ್ತಮೂರು ಕೋಟಿಯಷ್ಟಿತ್ತು. ಆಗಲೂ ದೇಶವನ್ನು ನಿರುದ್ಯೋಗ ಸಮಸ್ಯೆ ಕಾಡುತ್ತಿತ್ತು. ಪ್ರಸ್ತುತ ಜನಸಂಖ್ಯೆ ನೂರಾ ಮುವತ್ತು ಕೋಟಿಯನ್ನು ಮೀರುತ್ತಿರುವಾಗ ನಿರುದ್ಯೋಗದ ಸಂಖ್ಯೆ ಮತ್ತು ಸಾಂದ್ರತೆ ಎಷ್ಟಿರಬೇಡ ? ವಿಜ್ಞಾನ, ತಂತ್ರಜ್ಞಾನ ವಿಸ್ತಾರಗೊಳ್ಳುತ್ತಿರುವುದರೊಂದಿಗೆ ಸಾಫ್ಟ್ವೇರ್ ಮತ್ತು ಎಲ್ಲಾ ಕೈಗಾರಿಕಾ ವಲಯಗಳು ಹಿಂದೆಂದಿಗಿಂತಲೂ ಬಿರುಸಾಗಿ ಮತ್ತು ವೇಗವಾಗಿ ಅಭಿವೃದ್ಧಿಯಾಗುತ್ತಿದ್ದರೂ ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗವನ್ನು ಹೇಳಿಕೊಳ್ಳುವ ಮಟ್ಟಕ್ಕೆ ನಿವಾರಿಸಲು ಸಾಧ್ಯವಾಗುತ್ತಿಲ್ಲ. ನಗರಗಳಲ್ಲಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ನಿರುದ್ಯೋಗ ಸಮಸ್ಯೆ ಪೆಡಂಭೂತದಂತೆ ಬೆಳೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸ್ವಾತಂತ್ರ್ಯಪೂರ್ವದ ಬ್ರಿಟಿಷ್ ಆಡಳಿತ ಹಾಗೂ ಸ್ವಾತಂತ್ರ್ಯ ನಂತರದ ನಮ್ಮವೇ ಸರ್ಕಾರಗಳ ಆಡಳಿತ ವೈಫಲ್ಯವೇ ಆಗಿದೆ. ಅತಿ ಮುಖ್ಯವಾಗಿ ಸ್ವಾತಂತ್ರ್ಯ ನಂತರದ ನಮ್ಮವೇ ಸರ್ಕಾರಗಳ ಬೇಜವಾಬ್ಧಾರಿತನಗಳಿಂದಾಗಿ ದೇಶದ ಜನರ ಜೀವನಮಟ್ಟವನ್ನು ಸುಧಾರಿಸಲು ಸರಿಯಾದ ಅರ್ಥಿಕ ಯೋಜನೆಗಳನ್ನು ರೂಪಿಸದಿದ್ದದ್ದು ಮತ್ತು ರೂಪಿಸಿದ ಯೋಜನೆಗಳನ್ನೂ ಸಮರ್ಥವಾಗಿ ಅನುಷ್ಠಾನಗೊಳಿಸದಿದ್ದದ್ದು. ಕೈಗಾರಿಕಾಭಿವೃದ್ದಿಗೆ ಪಂಚವಾರ್ಷಿಕ ಯೋಜನೆಗಳಲ್ಲಿ ಹೆಚ್ಚಿನ ಮಹತ್ವವನ್ನು ಕೊಡತೊಡಗಿ ದೇಶದ ಪ್ರಮುಖ ಆರ್ಥಿಕ ಆಸರೆಯಾದ ಕೃಷಿ ವಲಯವನ್ನು ನಿರ್ಲಕ್ಷಿಸಲಾಯಿತು. ಹಾಗಾಗಿ ಈ ಕಡೆ ಕೈಗಾರಿಕಾ ವಲಯವಾಗಲೀ, ಆ ಕಡೆ ಕೃಷಿ ವಲಯವಾಗಲೀ ಅಭಿವೃದ್ಧಿಯಲ್ಲಿ ಒಂದು ನಿರ್ಧಿಷ್ಟ ವೇಗವನ್ನು ಇಂದಿಗೂ ಪಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಇಂದಿನ ಯುವ ಸಮುದಾಯ ಸ್ವಂತ ಉದ್ದಿಮೆಗಳನ್ನು ನಡೆಸುವುದಕ್ಕಿಂತಲೂ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಬಂಡವಾಳದ ಕೊರತೆ ಮತ್ತು ಉತ್ಪಾದನಾ ವಸ್ತುಗಳಿಗಳಿಗಿರುವ ನಿರಂತರ ಅಸಮತೋಲನ ಹಾಗೂ ಕೊರತೆ ಮಾರುಕಟ್ಟೆ. ಈ ಕಾರಣಗಳಿಂದಾಗಿ ಬಹುತೇಕ ಉದ್ದಿಮೆದಾರರು ಸ್ವಂತ ಉದ್ದಿಮೆಗಳನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿಯೇ ಯುವ ಜನಾಂಗ ತಿಂಗಳಿಗೊಮ್ಮೆ ವೇತನ ಸಿಗುವ ಕೆಲಸ/ ಹುದ್ದೆ/ ಉದ್ಯೋಗಗಳನ್ನು ಇಷ್ಟಪಡುತ್ತಾರೆ. ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಓದಿದವರು ಇಂದು ಪ್ರಪಂಚದ ಯಾವುದೇ ಜಾಗಕ್ಕಾದರೂ ಹೋಗಿ ದುಡಿಯಲು ರೆಡಿಯಾಗಿದ್ದಾರೆ. ಭಾರತದ ಲಕ್ಷಾಂತರ ಯುವ ಪ್ರತಿಭೆಗಳು ಇಂದು ವಿದೇಶಗಳಲ್ಲಿ ಜೀವನೋಪಾಯಕ್ಕಾಗಿ ನೆಲೆ ನಿಂತಿದ್ದಾರೆ. ಮತ್ತು ಅಂಥ ರಾಷ್ಟ್ರಗಳಲ್ಲಿಯೇ ಶಾಶ್ವತ ಪೌರತ್ವವನ್ನು ಪಡೆದು ದೇಶದಿಂದಲೇ ದೂರವಾಗಿಬಿಡುತ್ತಾರೆ. ನಿರುದ್ಯೋಗ ಸಮಸ್ಯೆ ಜಟಿಲವಾದ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೂ ಕಾರಣವಾಗಿಬಿಡುತ್ತದೆ. ಹಾಗಾಗಿ ನಿರುದ್ಯೋಗ ನಿವಾರಣೆ ಮಾಡುವ ಯೋಜನೆಗಳನ್ನು ಸರ್ಕಾರಗಳು ನಿರಂತರವಾಗಿ, ವೇಗವಾಗಿ ಮತ್ತು ಪ್ರಾಮಾಣಿಕವಾಗಿ ಕೈಗೊಳ್ಳಬೇಕಾಗಿದೆ.

ಇನ್ನು ಮುಖ್ಯ ವಿಷಯಕ್ಕೆ ಬರೋಣ. ಇವೊತ್ತಿನ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಪರೀತವಾದ ಪೈಪೋಟಿ ನಡೆಯುತ್ತಿದೆ. ಇದಕ್ಕೆ ಕಾರಣವೇನೆಂದರೆ ಈ ಹುದ್ದೆಗಳು ಪವರ್ ಸೆಂಟರ್‌ಗೆ ತೀರಾ ಹತ್ತಿರದವುಗಳಾಗಿರುತ್ತವಲ್ಲದೆ ಇವುಗಳು ಲಾಭದಾಯಕ ಹುದ್ದೆಗಳೆಂದೂ ನಿರೂಪಿತಗೊಂಡಿವೆ. ಏಕೆಂದರೆ, ಆಡಳಿತಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಮತ್ತು ಅವುಗಳನ್ನು ಅನುಷ್ಠಾನಕ್ಕೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಈ ಹುದ್ದೆಗಳು ಹೊಂದಿರುತ್ತವೆ. ಹಾಗಾಗಿ ಈ ಹುದ್ದೆಗಳಿಗೆ ಏರಲು ಪ್ರಭಲವಾದ ಪೈಪೋಟಿಯೂ ಇರುತ್ತದೆ. ಇಂಥ ಹುದ್ದೆಗಳನ್ನು ನಿರ್ವಹಿಸುವವರು ಆಡಳಿತಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ತೀಕ್ಷ್ಣಮತಿಗಳು ಮತ್ತು ಜ್ಞಾನವುಳ್ಳವರೂ ಆಗಿರಬೇಕಾಗುತ್ತದೆ. ಹಾಗಾಗಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮತ್ತು ಸಂದರ್ಶನಗಳನ್ನು ಮಾಡಿ ಹಾಗೂ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ ಅತ್ಯಂತ ಯೋಗ್ಯರನ್ನು ಹುದ್ದೆಗಳಿಗೆ ಆರಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಸಂಯುಕ್ತ ರಾಷ್ಟ್ರವಾದ ಭಾರತದಲ್ಲಿ ಆಯಾ ರಾಜ್ಯಗಳಲ್ಲಿ ರಾಜ್ಯ ಆಡಳಿತ ಸೇವೆಗಾಗಿ ಹುದ್ದೆಗಳನ್ನು ಆಯ್ಕೆ ಮಾಡಲು state administrative service commission ಗಳನ್ನು ಸ್ಥಾಪಿಸಲಾಗಿದೆ. ಇವು ರಾಜ್ಯ ಆಡಳಿತ ಸೇವಾ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ಕರ್ನಾಟಕದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಇಂಥ ಕಾರ್ಯವನ್ನು ನಿರ್ವಹಿಸುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗದ ಭ್ರಷ್ಟಾಚಾರದ ಕರ್ಮಕಾಂಡಗಳನ್ನು ಅನೇಕ ವರ್ಷಗಳಿಂದ ನಾವು ಕಾಣುತ್ತಾ ಬಂದಿದ್ದೇವೆ. ಇಲ್ಲಿ ಕೇಂದ್ರ ಲೋಕಸೇವಾ ಆಯೋಗದಂತೆ ಒಮ್ಮೆಯಾದರೂ ಸಲೀಸಾಗಿ, ಪ್ರಾಮಾಣಿಕವಾಗಿ ಮತ್ತು ನ್ಯಾಯಬದ್ದವಾಗಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಉದಾಹರಣೆಯೇ ಕಾಣುತ್ತಿಲ್ಲವೆಂದು ಹೇಳಬಹುದು. ರೆವಿನ್ಯೂ ಅಸಿಸ್ಟೆಂಟ್ ಕಮಿಷನರ್, ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್, ತಹಶೀಲ್ದಾರ್, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಮತ್ತು ಅಸಿಸ್ಟೆಂಟ್ ಕಮಿಷನರ್, ಟ್ರೆಜರಿ ಅಧಿಕಾರಿಗಳು ಹೀಗೆ ಆಡಳಿತದ ಬಹು ಮುಖ್ಯ ಇಲಾಖೆಗಳಿಗೆ ಇಲ್ಲಿ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹುದ್ದೆಗಳನ್ನೂ ಕರ್ನಾಟಕ ಲೋಕಸೇವಾ ಆಯೋಗದ ಮೂಲಕವೇ ಆಯ್ಕೆ ಮಾಡಲಾಗುವುದು. ಈ ಆಯೋಗದ ಸದಸ್ಯರನ್ನು ಆಯಾ ಸರ್ಕಾರಗಳು ನೇಮಿಸುತ್ತವೆ. ರಾಜ್ಯಮಟ್ಟದಲ್ಲಿ ಆಯೋಗದ ಸದಸ್ಯರನ್ನು ನೇಮಿಸುವಾಗ ಜಾತಿ ಮತ್ತು ಲಂಚದ ಲೆಕ್ಕಾಚಾರಗಳು ನಡೆಯುತ್ತವೆಂಬ ಸಂಗತಿಯಂತೂ ಜಗಜ್ಜಾಹೀರಾಗಿದೆ. ಹೀಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತೀಯತೆ ಮತ್ತು ಲಂಚ ಎರಡೂ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನದಿಂದ ಹಿಡಿದು ಸಂದರ್ಶನದ ವೇಳೆ ಅಂಕಗಳನ್ನು ನೀಡುವವರೆಗೂ ವಾಮ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಉದಾಹರಣೆಗೆ ಒಂದೇ ವರ್ಗಕ್ಕೆ ಸೇರಿದ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬ 800 ಅಂಕಗಳನ್ನು ಪಡೆದುಕೊಂಡು ಇನ್ನೊಬ್ಬ 825 ಅಂಕಗಳನ್ನು ಪಡೆದು ಸಂದರ್ಶನಕ್ಕೆ ಅರ್ಹರಾಗುತ್ತಾರೆ ಎಂದಿಟ್ಟುಕೊಳ್ಳಿ. ಸಂದರ್ಶನಕ್ಕೆ ಅಂಕಗಳನ್ನು 200 ಎಂದು ನಿಗದಿಪಡಿಸಿದ್ದರೆ ೮೦೦ ಅಂಕಗಳನ್ನು ಗಳಿಸಿದ ಅಭ್ಯರ್ಥಿ ಜಾತಿ, ರಾಜಕೀಯ ಪ್ರಭಾವ ಮತ್ತು ಲಂಚ ಮೂರರಲ್ಲೂ ಬಲಾಢ್ಯನಾಗಿದ್ದರೆ ಆತನಿಗೆ ಸಂದರ್ಶನದಲ್ಲಿ 140 ಅಂಗಳನ್ನು ನೀಡಿ 825 ಅಂಕಗಳನ್ನು ಪಡೆದ ಅಭ್ಯರ್ಥಿಗೆ 100 ಅಂಕಗಳನ್ನು ನೀಡಲಾಗುತ್ತದೆ ! ಇಂಥ ಕರ್ಮಕಾಂಡಗಳು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಲವತ್ತು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ಇಂಥ ವಿಷಯಗಳು ಕೋರ್ಟ್ ಕಚೇರಿ ಮೆಟ್ಟಿಲು ಏರಿ ತೀರ್ಮಾನ ಆಗಿ ಹುದ್ದೆಗಳಿಗೆ ಆದೇಶ ಬರುವಷ್ಟರಲ್ಲಿ ಎಷ್ಟೋ ಜನರ ವಯೋಮಿತಿ ಕೂಡಾ ಮೀರಿರುತ್ತದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸಿ ರಾಜಕಾರಣಿಗಳು ಮತ್ತು ಶ್ರೀಮಂತರು ತಮ್ಮ ಮಕ್ಕಳನ್ನು ಕೊಟ್ಟು ಮದುವೆ ಮಾಡಿದ ಪ್ರಸಂಗಗಳಿಗೂ ಕಡಿಮೆಯೇನಿಲ್ಲ. ಲಕ್ಷಾಂತರ ರೂಪಾಯಿ ಲಂಚ ಕೊಟ್ಟು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸೇವಾವಧಿಯಲ್ಲಿ ಹೇಗೆ ಪ್ರಾಮಾಣಿಕರಾಗಿರಲು ಸಾಧ್ಯ. ಎಲ್ಲಾ ಹುದ್ದೆಗಳಲ್ಲೂ ಇಂಥ ಭ್ರಷ್ಟಾಚಾರ ನಡೆಯುತ್ತದೆಂದು ಹೇಳಲಾಗದು. ಶೇಕಡಾ ಮುವತ್ತು ಪರ್ಸೆಂಟ್ ಪ್ರಕರಣಗಳಲ್ಲಿ ನಡೆಯುತ್ತದೆ. ಬಹುಶಃ ಕರ್ನಾಟಕ ಲೋಕಸೇವಾ ಆಯೋಗದಂತೆಯೇ ಬೇರೆ ರಾಜ್ಯಗಳ ಲೋಕಸೇವಾ ಆಯೋಗಗಳೂ ಇರಬಹುದೇನೋ..! ಏಕೆಂದರೆ ಇಂಥ ಆಯೋಗಗಳಲ್ಲಿ ಸದಸ್ಯರು ಸ್ಥಳೀಯರಾಗಿರುತ್ತಾರಲ್ಲದೆ ಪ್ರಭಾವ ಬೀರುವ ರಾಜಕಾರಣಿಗಳು, ಪ್ರಭಾವಕ್ಕೊಳಗಾಗುವ ಅಭ್ಯರ್ಥಿಗಳೂ ಸ್ಥಳೀಯರೇ ಆಗಿರುತ್ತಾರೆ.

ಈಗ ಕೇಂದ್ರ ಲೋಕಸೇವಾ ಆಯೋಗದ ವಿಷಯಕ್ಕೆ ಬರೋಣ. ಇದನ್ನು ಯುಪಿಎಸ್ಸಿ ಎಂದು ಕರೆಯಲಾಗುತ್ತದೆ. ಅಂದರೆ Union public service commission. ಕೇಂದ್ರ ಸರ್ಕಾರದ ಹುದ್ದೆಗಳಾದ ಐ.ಎ.ಎಸ್, ಐ.ಪಿ.ಎಸ್, ಐ.ಆರ್.ಎಸ್ ಮುಂತಾದ ಕೇಂದ್ರ ಸರ್ಕಾರದ ಗ್ರೇಡ್ ಒನ್ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೇಂದ್ರ ಸರ್ಕಾರದ ಸಂಸ್ಥೆ ಇದಾಗಿದೆ. ಇಲ್ಲೂ ಕೂಡ ಮೊದಲು ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಾವಿರ ಹುದ್ದೆಗಳಿದ್ದರೆ ಪೂರ್ವಭಾವಿ ಪರೀಕ್ಷೆಯಲ್ಲಿ ಹತ್ತು ಲಕ್ಷದಿಂದ ಹಿಡಿದು ಹನ್ನೆರಡು ಲಕ್ಷ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದರಲ್ಲಿ ಮುಖ್ಯ ಪರೀಕ್ಷೆಗೆ ಆಯ್ಕೆಯಾಗುವವರು ಹತ್ತರಿಂದ ಹದಿಮೂರು ಸಾವಿರ ಅಭ್ಯರ್ಥಿಗಳು. ಇನ್ನು ಸಂದರ್ಶನಕ್ಕೆ ಆಯ್ಕೆಯಾಗುವವರು ಎರಡೂವರೆಯಿಂದ ಮೂರು ಸಾವಿರ ಅಭ್ಯರ್ಥಿಗಳು. ಸಂದರ್ಶನ ಮುಗಿಸಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳ ಸಂಖ್ಯೆ ಒಂದು ಸಾವಿರ. ಗಳಿಸುವ ಡಿಚಿಟಿಞ ಗಳಿಗೆ ಅನುಗುಣವಾಗಿ ಹುದ್ದೆ ಮತ್ತು ಸೇವಾ ರಾಜ್ಯಗಳ ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ಈ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಹುದ್ದೆಗೆ ಆಯ್ಕೆಯಾಗಲು ವಿಸ್ತಾರವಾದ ಓದು ಮತ್ತು ಸಾಮಾನ್ಯ ಜ್ಞಾನ ಅನಿವಾರ್ಯವೂ, ಅತ್ಯವಶ್ಯಕವೂ ಆಗಿರುತ್ತದೆ. ಮತ್ತು ಆಯ್ಕೆ ವಿಧಾನ ಅತ್ಯಂತ ವ್ಯವಸ್ಥೆವಾಗಿಯೂ, ಪ್ರಾಮಾಣಿಕವಾಗಿಯೂ ಇರುವುದರಿಂದ ಭ್ರಷ್ಟಾಚಾರಕ್ಕೆ ಒಂದಿಷ್ಟೂ ಆಸ್ಪದ ಇರುವುದಿಲ್ಲ. ಯಾವ ಅಭ್ಯರ್ಥಿ ಯಾವ rank ಗೆ ಸಂದರ್ಶನಕ್ಕೆ ಹಾಜರಾಗಬೇಕೆಂಬ ವಿಷಯ ಸಂದರ್ಶನ ಇನ್ನೇನು ಒಂದು ಗಂಟೆಯಲ್ಲಿ ಪ್ರಾರಂಭವಾಗುತ್ತದೆ ಎನ್ನುವಾಗಲೆ ಗೊತ್ತಾಗುವುದು. ಪ್ರಿಲಿಮ್ಸ್ ಪರೀಕ್ಷೆಯ ಅಂಕಗಳಾಗಲೀ, ಮುಖ್ಯ ಪರೀಕ್ಷೆಯ ಅಂಕಗಳಾಗಲೀ ಯಾರಿಗೂ ತಿಳಿಯದಂತೆ ಕಟ್ಟುನಿಟ್ಟಾಗಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ಹಾಗಾಗಿ ಯುಪಿಎಸ್ಸಿ ಸೆಲೆಕ್ಷನ್‌ಗಳಲ್ಲಿ ಯಾವ ರೀತಿಯ ಪ್ರಭಾವವೂ ನಡೆಯುವುದಿಲ್ಲ. ಆದರೆ ಒಂದೇ ಒಂದು ನ್ಯೂನತೆ ಎಂದರೆ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇರುವುದರಿಂದ ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳಿಗೆ ಕಷ್ಟಕರವಾಗಿ ಪರಿಣಮಿಸುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು ಅತ್ಯಂತ ಕ್ಲಿಷ್ಟಕರವೂ ಮತ್ತು ವಿಮಾರ್ಶಾತ್ಮಕ ಉತ್ತರಗಳನ್ನು ಬಯಸುವಂಥವೂ ಆಗಿರುತ್ತವಾದ್ದರಿಂದ ಹಳ್ಳಿಗಾಡಿನ ವಿದ್ಯಾರ್ಥಿ/ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಕಷ್ಟಕರವಾಗಿ ಪರಿಣಮಿಸುತ್ತದೆ. ಹಾಗಾಗಿಯೇ ಉತ್ತರ ಭಾರತದ ಅಭ್ಯರ್ಥಿಗಳೇ ಹೆಚ್ಚು ಹೆಚ್ಚಾಗಿ ಆಯ್ಕೆಯಾಗುವುದರೊಂದಿಗೆ ಆದ್ಯತೆಯ panel ಗಳು ಕೂಡಾ ಅವರ ಪಾಲಾಗುತ್ತವೆ. ಅಲ್ಲದೆ ಮೀಸಲಾತಿಯನ್ನು ಒಳಗೊಂಡಿದ್ದರೂ ನಗರವಾಸಿ ಮತ್ತು ಎಲ್ಲಾ ಸೌಲಭ್ಯಗಳೊಂದಿಗೆ ಶಿಕ್ಷಣ ಪಡೆದ ಅಭ್ಯರ್ಥಿಗಳೊಂದಿಗೆ ಹಳ್ಳಿಗಾಡಿನ ಅಭ್ಯರ್ಥಿಗಳು ಮತ್ತು ಸೌಲಭ್ಯಗಳಿಂದ ವಂಚಿತರಾದ ಅಭ್ಯರ್ಥಿಗಳು ಪೈಪೋಟಿ ನಡೆಸಬೇಕಾದ್ದರಿಂದ ಅಂತಿಮವಾಗಿ ಎಲ್ಲಾ ಜಾತಿ, ಸಮುದಾಯಗಳ ಕ್ರೀಮೀಲೇಯರ್ ವರ್ಗಕ್ಕೆ ಲಾಭದಾಯಕವಾಗಿ ಪರಿಣಮಿಸುವುದು. ಸಂವಿಧಾನದ ಅಡಿಯಲ್ಲಿ ಹಳ್ಳಿಗಾಡಿನ ಮತ್ತು ಬಡ ವರ್ಗದ ಜನರಿಗೆ ಅನುಕೂಲವಾಗುವಂತೆ ಸರಿಯಾದ, ನ್ಯಾಯಬದ್ದ ಮಾರ್ಗೋಪಾಯಗಳನ್ನು ನಮ್ಮನ್ನಾಳುವ ಜನಪ್ರತಿನಿಧಿಗಳು ಮತ್ತು ಆಡಳಿತಗಾರರು ಕಾನೂನು ಬದ್ಧವಾಗಿ ರಚಿಸಿ ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸುವ ಕೆಲಸಗಳಿಗೆ ಮುಂದಾಗಬೇಕು. ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ ಶ್ರಮದ ಜೊತೆಗೆ ಅದೃಷ್ಟವೂ ಜೊತೆಯಿರಬೇಕು ಎಂದು ಹೇಳಲಾಗುತ್ತದೆ.
ಅಭ್ಯರ್ಥಿಯೊಬ್ಬನಿಗೆ ತಾನು ಅಧ್ಯಯನ ಮಾಡಿದ ವಿಷಯಗಳ ಪ್ರಶ್ನೆಗಳು ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಬಂದರೆ ಮತ್ತು ಅವುಗಳನ್ನು ಉತ್ತರಿಸುವ ಕೌಶಲ್ಯವನ್ನು ಸರಿಯಾಗಿ ನಿರ್ವಹಿಸಿದರೆ ಆತ ಖಂಡಿತವಾಗಿಯೂ ಯಶಸ್ಸು ಗಳಿಸುತ್ತಾನೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸುವವರಿಗೆ ಬಹುಶಃ ಇಂಥ ಅದೃಷ್ಟ ಒಲಿದಿರುತ್ತದೆ ಅನ್ನಿಸುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕೆಂಬ ಉಮೇದು ಇತ್ತೀಚೆಗೆ ಸಿಕ್ಕಾಪಟ್ಟೆ ಅಧಿಕವಾಗುತ್ತಿದೆ. ಪರೀಕ್ಷೆಗಳು ಮತ್ತು ಸಂದರ್ಶನಗಳು ಸಂಕೀರ್ಣವೂ, ಜಟಿಲವೂ ಆಗಿರುವುದರಿಂದ ಪರೀಕ್ಷೆಗೆ ವ್ಯವಸ್ಥಿತವಾದ ಸಿದ್ದತೆಯನ್ನು ಹಾಜರಾಗುವ ಅಭ್ಯರ್ಥಿಗಳು ಮಾಡಿಕೊಳ್ಳಬೇಕಾಗುತ್ತದೆ. ಮೊದಲೇ ತಿಳಿಸಿದಂತೆ ಇಂಥ ಸಿದ್ದತೆಗೆ ವಿಸ್ತಾರವಾದ ಅಧ್ಯಯನದ ಅವಶ್ಯಕತೆಯಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಲಕ್ಷಾಂತರ ಆಕಾಂಕ್ಷಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲೋಸುಗವೇ ದೇಶಾದ್ಯಂತ ಸಾವಿರಾರು ತರಬೇತಿ ಸಂಸ್ಥೆಗಳು ನಾಯಿಕೊಡೆಗಳಂತೆ ಹಬ್ಬಿನಿಂತಿವೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆಗಳಿಗೆ ಮತ್ತು ಸಂದರ್ಶನಗಳಿಗೆ ತರಬೇತಿ ನೀಡಲು ಇಂಥ ತರಬೇತಿ ಸಂಸ್ಥೆಗಳು ಲಕ್ಷಾಂತರ ರೂಪಾಯಿ ಫೀಜನ್ನು ನಿಗದಿಪಡಿಸುತ್ತವೆ. ದೇಶದ ರಾಜಧಾನಿ ದೆಹಲಿಯು ಯುಪಿಎಸ್ಸಿ ತರಬೇತಿ ಸಂಸ್ಥೆಗಳ ಅತಿ ದೊಡ್ಡ ಕೇಂದ್ರ (hub) ಎನಿಸಿದೆ. ಇಂಥ ತರಬೇತಿ ಸಂಸ್ಥೆಗಳ ಒಂದು ವರ್ಷದ ವಹಿವಾಟಿನ ಮೊತ್ತ ಮೂರು ಸಾವಿರ ಕೋಟಿಯಿಂದ ನಾಲ್ಕು ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಇನ್ನು ದೇಶದ ಬೇರೆ ಬೇರೆ ರಾಜ್ಯಗಳ ರಾಜಧಾನಿಗಳಲ್ಲೂ ಇತ್ತೀಚೆಗೆ ತರಬೇತಿ ಸಂಸ್ಥೆಗಳು ಅತಿ ವೇಗವಾಗಿ ಹುಟ್ಟಿಕೊಳ್ಳುತ್ತಿವೆ. ಯುಪಿಎಸ್ಸಿಯಲ್ಲಿ ಎಷ್ಟು ಪ್ರಯತ್ನ ಪಟ್ಟರೂ ತೇರ್ಗಡೆಯಾಗದ ಅನೇಕರು ಇಂಥ ತರಬೇತಿ ಸಂಸ್ಥೆಗಳನ್ನು ಹುಟ್ಟು ಹಾಕಿ ಯಥೇಚ್ಛವಾಗಿ ಹಣ ಗಳಿಸುವಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಬೆಂಗಳೂರಿನಲ್ಲೂ ಸಹ ಇಂಥ ತರಬೇತಿ ಸಂಸ್ಥೆಗಳು ಬೇಕಾದಷ್ಟು ಹುಟ್ಟಿಕೊಂಡಿವೆ. ಆಳದಲ್ಲಿ ಯಾವ ಸಂಸ್ಥೆಗಳೂ ಸೇವಾ ಮನೋಭಾವದಿಂದ ತರಬೇತಿಗಳನ್ನು ನೀಡುವುದಿಲ್ಲ. ಎಲ್ಲಾ ತರಬೇತಿ ಸಂಸ್ಥೆಗಳ hidden agenda ಹಣ ಗಳಿಸುವುದೇ ಆಗಿರುತ್ತದೆ. ಅನೇಕ ಅಭ್ಯರ್ಥಿಗಳು ತಮಗೆ ಮೀಸಲಾದ ಪ್ರಯತ್ನಗಳ ಅವಕಾಶ ಮುಗಿದರೂ ಗುರಿ ಮುಟ್ಟುವಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಅಂಥವರಲ್ಲಿ ಬಹುತೇಕರು ಮಾನಸಿಕ ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಒಳಗಾಗುತ್ತಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ಇಂಥವರಿಗೆ ತಂದೆ – ತಾಯಿಗಳು, ಹಿತೈಷಿಗಳು, ಸ್ನೇಹಿತರು ಧೈರ್ಯ ತುಂಬುವ ಕೆಲಸ ಮಾಡಬೇಕು. ಏಕೆಂದರೆ, ಈ ಅಧಿಕಾರಿಶಾಹಿಗಿಂತಲೂ ಉತ್ತಮವಾಗಿ ಬದುಕುವ ಅನೇಕ ಮಾರ್ಗೋಪಾಯಗಳು ಯುವ ಜನತೆಯ ಮುಂದೆ ಇವೆ. ಇಂದು ಭಾರತದಲ್ಲಿ ಈ ಅಧಿಕಾರಿಶಾಹಿ ಭ್ರಷ್ಟತೆಯ ಕೂಪದಲ್ಲಿ ಮುಳುಗಿಬಿಟ್ಟಿದೆ ಮತ್ತು ರಾಜಕಾರಣಕ್ಕೆ ಶರಣಾಗತವಾಗಿ ತನ್ನ ತನವನ್ನು ಕಳೆದುಕೊಂಡಿದೆ. ಅಧಿಕಾರಿಶಾಹಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಭ್ರಷ್ಟ ರಾಜಕಾರಣ ಬಿಡುತ್ತಿಲ್ಲ. ರಾಜಕಾರಣ ಮತ್ತು ಅಧಿಕಾರಿಶಾಹಿ ಸ್ವಚ್ಛಗೊಂಡಾಗ ಮಾತ್ರ ದೇಶದ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಸಿಗಬಹುದೇನೋ… ಅಲ್ಲಿಯವರೆಗೂ ಈ ದೇಶದಲ್ಲಿ ಸಾಮಾಜಿಕ ನ್ಯಾಯ ಮರೀಚಿಕೆಯೇ ಸರಿ. ಹಾಗಿರುವಾಗ ಸ್ಪರ್ಧಾತ್ಮಕ ಪರೀಕ್ಷೆಗಳು ತಯಾರು ಮಾಡುತ್ತಿರುವುದು ಭ್ರಷ್ಟಾಚಾರದ ಪಡೆಯನ್ನ. ಒಂದು ವೇಳೆ ಈ ಮೂಲಕ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಆರಿಸಿ ಬಂದರೂ ಭ್ರಷ್ಟ ವ್ಯವಸ್ಥೆ ಅವರನ್ನು ಅಸಹಾಯಕರನ್ನಾಗಿ, ನಿರ್ವೀರ್ಯರನ್ನಾಗಿ ಮಾಡಿಬಿಡುತ್ತದೆ. ಯಾವುದೇ ಕ್ಷೇತ್ರದಲ್ಲಿಂದು ತೆಗೆದುಕೊಳ್ಳಿ ಪ್ರಾಮಾಣಿಕ ಅಧಿಕಾರಿಗಳನ್ನು ಸತ್ವಯುತವಲ್ಲದ, ಕೆಲಸಕ್ಕೆ ಬಾರದ ಸ್ಥಾನಗಳಲ್ಲಿ ವರ್ಷಗಟ್ಟಲೇ ಕೂರಿಸಿಬಿಡಲಾಗುತ್ತದೆ. ಅಪರೂಪಕ್ಕೆ ಯಾರಾದರೂ ಒಳ್ಳೆಯ ರಾಜಕಾರಣಿಗಳು ಅಧಿಕಾರಕ್ಕೆ ಬಂದಾಗ ಇಂಥವರನ್ನು ಶಕ್ತಿಯುತವಾದ ಜಾಗಗಳಲ್ಲಿ ಕೂರಿಸಲಾಗುತ್ತದೆ. ಆ ವೇಳೆಗೆ ಅವರು ಕೆಲಸದಲ್ಲಿ ಉತ್ಸಾಹ, ಚೈತನ್ಯಗಳನ್ನೇ ಕಳೆದುಕೊಂಡುಬಿಟ್ಟಿರುತ್ತಾರೆ. ಇದು ಈ ದೇಶದ ನೈಜ ಅಧಿಕಾರಿಶಾಹಿಯ ಚಿತ್ರಣ.