-ಆರ್.ಟಿ. ವಿಠ್ಠಲಮೂರ್ತಿ
2023ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮರಳಿ ಅಧಿಕಾರ ಹಿಡಿಯುವಂತಾದರೆ ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತಹ ನಾಯಕರ ಸಾಲಿಗೆ ತಾವು ಸೇರಬಹುದು ಎಂಬುದು ಬೊಮ್ಮಾಯಿ ಕನಸು. ಅವರ ಈ ಕನಸಿಗೆ ಪೂರಕವಾದ ವಾತಾವರಣವೇನೋ ಸದ್ಯಕ್ಕೆ ಕಾಣುತ್ತಿಲ್ಲ. ಯಾಕೆಂದರೆ ಪ್ರಧಾನಿ ಮೋದಿಯವರ ಇಮೇಜು ಮೊದಲಿನಂತಿಲ್ಲ. ಯಡಿಯೂರಪ್ಪ ಅವರಿಗೂ ಈ ಹಿಂದಿದ್ದ ಶಕ್ತಿ ಕಾಣುತ್ತಿಲ್ಲ. ಈ ಮಧ್ಯೆ ಸ್ವಪಕ್ಷದ ಶಾಸಕರೇ ಬೊಮ್ಮಾಯಿ ಆಡಳಿತದ ಬಗ್ಗೆ ಸಮಾಧಾನದಿಂದಿಲ್ಲ. ರಾಜ್ಯದ ಮತದಾರರಲ್ಲೂ ನೆಮ್ಮದಿ ಕಾಣುತ್ತಿಲ್ಲ. ಹೀಗಾಗಿ ಪ್ರತಿಪಕ್ಷ ಕಾಂಗ್ರೆಸ್ಸಿನ ಇಮೇಜು ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆ ಭಾಸವಾಗುತ್ತಿದೆ. ಹೀಗಿದ್ದರೂ ಮುಂದಿನ ಚುನಾವಣೆಯಲ್ಲಿ ಗೆದ್ದು ಮರಳಿ ಅಧಿಕಾರ ಹಿಡಿಯುವ ಕನಸು ಬೊಮ್ಮಾಯಿ ಅವರಲ್ಲಿ ಗಟ್ಟಿಯಾಗಿದೆ. ಪ್ರತಿಕೂಲ ಸ್ಥಿತಿಯಲ್ಲೂ ಹೀಗೆ ಹಿತವಾದ ಕನಸು ಕಾಣುವುದು ಒಳ್ಳೆಯದೇ ಅಲ್ಲವೇ?

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಬಲ ಹಿಗ್ಗುತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಸ್ವಯಂಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂತ ನಂಬಿರುವುದು ಕುತೂಹಲಕಾರಿಯಾಗಿದೆ. ಹಾಗೆ ನೋಡಿದರೆ ದಾವಣಗೆರೆಯಲ್ಲಿ ನಡೆದ ಸಿದ್ದು ಡೇ ಸಮಾವೇಶದ ನಂತರ ಕಾಂಗ್ರೆಸ್ ತಲೆ ಎತ್ತಿ ನಿಂತಿರುವುದು ನಿಜ. ಅದೇ ರೀತಿ ಸಿಎಂ ಹುದ್ದೆಯ ವಿಷಯದಲ್ಲಿ ಆಸೆ ಇದ್ದರೂ ಸಿದ್ದರಾಮಯ್ಯ ಮತ್ತು ಡಿಕೆಶಿ ಅದನ್ನು ತೋರ್ಪಡಿಸದೆ ಪಕ್ಷ ಸಂಘಟನೆಗೆ ಆದ್ಯತೆ ನೀಡಿರುವುದೂ ನಿಜ.
ಹೀಗಾಗಿಯೇ ಬಿಜೆಪಿಯ ಒಂದೊಂದು ಆಟಕ್ಕೂ ತಕ್ಷಣ ತಿರುಗೇಟು ನೀಡುವ ವಿಷಯದಲ್ಲಿ ಕಾಂಗ್ರೆಸ್ ಯಶಸ್ವಿಯಾಗುತ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರದ ಜಿಎಸ್‌ಟಿ ನೀತಿ ದಿನನಿತ್ಯದ ಜೀವನ ದುಬಾರಿಯಾಗುವಂತೆ ಮಾಡಿರುವುದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿರುವುದು ಸ್ಪಷ್ಟ. ಅದೇ ರೀತಿ ರಾಜ್ಯ ಬಿಜೆಪಿ ಸರ್ಕಾರದ ಇಮೇಜು ವೃದ್ಧಿಯಾಗುವಂತಹ ಯಾವ ಬೆಳವಣಿಗೆಗಳೂ ಕಾಣುತ್ತಿಲ್ಲ.
ಆದರೆ ಪರಿಸ್ಥಿತಿ ಇಷ್ಟು ಪ್ರತಿಕೂಲವಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ, ನಾವು ಮರಳಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಅಂತ ನಂಬಿದ್ದಾರೆ.
* * * *
ಅಂದ ಹಾಗೆ ಬಸವರಾಜ ಬೊಮ್ಮಾಯಿ ಅವರಿಗೆ ಇಂತಹ ನಂಬಿಕೆ ಬರಲು ಅವರ ಅಕ್ಕಪಕ್ಕ ಇರುವ ಫೋರ್‌ಮ್ಯಾನ್ ಆರ್ಮಿ ಕಾರಣ. ಈ ಆರ್ಮಿಯಲ್ಲಿ ಸಚಿವರಾದ ಆರ್. ಅಶೋಕ್, ಡಾ. ಅಶ್ವತ್ಥನಾರಾಯಣ, ಡಾ. ಸುಧಾಕರ್ ಮತ್ತು ಮುನಿರತ್ನ ಇದ್ದಾರೆ. ಈ ನಾಲ್ಕು ಮಂದಿಯ ಲೇಟೆಸ್ಟು ಭರವಸೆ ಎಂದರೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಿನಿಮಮ್ ಮೂವತ್ತು ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವಂತೆ ಮಾಡುತ್ತೇವೆ ಎಂಬುದು.
ಹಾಗಂತ ಇಲ್ಲೆಲ್ಲ ಬಿಜೆಪಿಯ ಬಗ್ಗೆ ಜನರ ಒಲವು ಹೆಚ್ಚಾಗಿದೆ ಅಂತಲ್ಲ. ಆದರೆ ಪಕ್ಷದ ವರ್ಚಸ್ಸಿನ ಕತೆ ಏನೇ ಇರಲಿ, ನಮ್ಮ ಕೆಪಾಸಿಟಿಯ ಮೇಲೆ ಪಾರ್ಟಿಗೆ ಇಷ್ಟು ಸೀಟುಗಳು ದಕ್ಕುವಂತೆ ಮಾಡುತ್ತೇವೆ ಅಂತ ಈ ಟೀಮು ಕೊಟ್ಟ ಭರವಸೆ ಬೊಮ್ಮಾಯಿ ಮುಖದಲ್ಲಿ ಹರ್ಷ ಮೂಡಿಸಿದೆ. ಈ ಟೀಮು ಸ್ವಂತ ಕೆಪಾಸಿಟಿಯ ಮೇಲೆ ಮೂವತ್ತು ಸೀಟುಗಳನ್ನು ಗೆಲ್ಲಿಸುವ ಯೋಚನೆಯಲ್ಲಿದೆ ಎಂದರೆ ಮುಂದಿನ ಚುನಾವಣೆಯಲ್ಲಿ ಮನಾಮನಿಯಾಗಿ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತದೆ ಎಂದೇ ಅರ್ಥ. ಕುತೂಹಲದ ಸಂಗತಿ ಎಂದರೆ ಈ ಟೀಮು ಬೇರೆ ಪಕ್ಷದ ಹಿಡಿತದಲ್ಲಿರುವ ಕೆಲವೊಂದು ಕ್ಷೇತ್ರಗಳನ್ನು ಹೇಗೆ ವಶಪಡಿಸಿಕೊಳ್ಳುತ್ತೇವೆ ಅಂತಲೂ ಬೊಮ್ಮಾಯಿ ಅವರಿಗೆ ವಿವರಿಸಿದೆ.
ಕಾಂಗ್ರೆಸ್ ಹಿಡಿತದಲ್ಲಿರುವ ಜಯನಗರ, ಚಾಮರಾಜಪೇಟೆ, ಹೆಬ್ಬಾಳ ಮತ್ತು ಜೆಡಿಎಸ್ ಹಿಡಿತದಲ್ಲಿರುವ ದಾಸರಹಳ್ಳಿ ಕ್ಷೇತ್ರಗಳು ಬಿಜೆಪಿ ವಶಕ್ಕೆ ಬರಲಿವೆ ಎಂಬುದೂ ಈ ಟೀಮಿನ ವಿಶ್ವಾಸ. ಜಯನಗರ ಕ್ಷೇತ್ರದಲ್ಲಿ ಶಾಸಕಿ ಸೌಮ್ಯರೆಡ್ಡಿ ಜನಪ್ರಿಯತೆ ಕಳೆದುಕೊಂಡಿದ್ದರೆ, ಚಾಮರಾಜಪೇಟೆಯಲ್ಲಿ ಹಿಂದೂ ಮತದಾರರನ್ನು ಒಗ್ಗೂಡಿಸಲು ಪಕ್ಷ ಯಶಸ್ವಿಯಾಗಿರುವುದು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ.
ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ದಾಸರಹಳ್ಳಿ ಕ್ಷೇತ್ರದಲ್ಲಿ ಮುನಿರಾಜು ಈ ಸಲ ಗೆಲ್ಲುವುದು ಗ್ಯಾರಂಟಿ ಅನ್ನುವುದು ಅದರ ಕಾನ್ಪಿಡೆನ್ಸು. ಹೀಗೆ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೂವತ್ತು ಸೀಟು ಗೆಲ್ಲಿಸಿಕೊಡುತ್ತೇವೆ ಅಂತ ಫೋರ್‌ಮ್ಯಾನ್ ಆರ್ಮಿ ಹೇಳಿರುವುದು ಬೊಮ್ಮಾಯಿ ಅವರಿಗೆ ನಂಬಿಕೆ ಮೂಡಿಸಿದೆ.

* * * *
ಹೀಗೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಗಳಿಕೆ ಇಷ್ಟಾದರೆ ಹಳೆ ಮೈಸೂರು ಭಾಗದ ಮತ್ತಿತರ ಜಿಲ್ಲೆಗಳಲ್ಲಿ, ಮಧ್ಯ ಕರ್ನಾಟಕದಲ್ಲಿ, ಮುಂಬೈ ಕರ್ನಾಟಕ ಮತ್ತು ಕರಾವಳಿ ಭಾಗಗಳಲ್ಲಿ ಮಿನಿಮಮ್ ಎಂಭತ್ತು ಸೀಟುಗಳನ್ನು ಗೆಲ್ಲಬಹುದು ಎಂಬುದು ಬೊಮ್ಮಾಯಿ ಅವರಿಗಿರುವ ಫೀಡ್ ಬ್ಯಾಕು. ಆದರೆ ಈ ಎಂಭತ್ತು ಸೀಟುಗಳನ್ನು ಗೆಲ್ಲಿಸಿಕೊಡುವಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಲ ದೊಡ್ಡದು ಅನ್ನುವುದು ಅವರ ನಂಬಿಕೆ. ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಮಾಡಲಿರುವ ಜಾದೂ ಪಕ್ಷ ಮರಳಿ ಅಧಿಕಾರ ಹಿಡಿಯಲು ನೆರವು ನೀಡಲಿದೆ ಎಂಬುದು ಅವರ ಕಾನ್ಫಿಡೆನ್ಸು.
ಅಂದ ಹಾಗೆ ಸೆಪ್ಟೆಂಬರ್ ಎರಡರಂದು ಮಂಗಳೂರಿನ ರ‍್ಯಾಲಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವತ್ತೇ ನಡೆದ ಕೋರ್ ಕಮಿಟಿ ಸಭೆಯಲ್ಲಿ ಒಂದು ಟಾಸ್ಕು ನೀಡಿದ್ದಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ನಾವು ಗೆಲುವು ಗಳಿಸಲು ಮಹಿಳಾ ಮತದಾರರ ವಿಶೇಷ ಒಲವು ಕಾರಣ. ಅಲ್ಲಿ ಮಹಿಳೆಯರನ್ನು ಸಂಘಟಿಸುವ ವಿಷಯದಲ್ಲಿ ಪಕ್ಷ ಯಶಸ್ವಿಯಾಯಿತು. ಹೀಗಾಗಿ ಕರ್ನಾಟಕದಲ್ಲೂ ಮಹಿಳೆಯರ ಪವರ್ ಪಕ್ಷಕ್ಕೆ ದಕ್ಕುವಂತೆ ನೋಡಿಕೊಳ್ಳಿ. ಅವರಲ್ಲಿ ವಿಶ್ವಾಸ ಮೂಡಿಸುವ ಕಾರ್ಯಕ್ರಮಗಳನ್ನು ಘೋಷಿಸಿ ಅಂತ ಮೋದಿಯವರು ಕೊಟ್ಟಿರುವ ಟಾಸ್ಕು ಬೊಮ್ಮಾಯಿಯವರಿಗೆ ತುಂಬ ಹಿಡಿಸಿದೆ.
ಹೀಗಾಗಿ ಸೆಪ್ಟೆಂಬರ್ ಎಂಟರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನೋತ್ಸವ ಕಾರ್ಯಕ್ರಮದಲ್ಲೇ ಹೊಸ ಯೋಜನೆಗಳನ್ನು ಪ್ರಕಟಿಸಲು ಅವರು ಯೋಚಿಸಿದ್ದಾರಂತೆ. ಆದರೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸುವ ಮುನ್ನ ಹಣಕಾಸಿನ ಲಭ್ಯತೆಯನ್ನು ಗಮನಿಸಬೇಕಲ್ಲ? ಸುಖಾಸುಮ್ಮನೆ ಕಾರ್ಯಕ್ರಮಗಳನ್ನು ಘೋಷಿಸಿ, ಅದಕ್ಕೆ ಹಣದ ಮೂಲ ಫಿಕ್ಸು ಮಾಡದಿದ್ದರೆ ಅದರ ಲಾಭ ಜನರಿಗೆ ಸಿಗುವುದಿಲ್ಲ. ವಿಧಾನಸಭಾ ಚುನಾವಣೆಗಳು ಹತ್ತಿರವಾಗಿರುವ ಕಾಲದಲ್ಲಿ ಹೀಗೇನಾದರೂ ಆದರೆ ಇದು ಹುಸಿ ಭರವಸೆಗಳ ಸರ್ಕಾರ ಎಂಬ ಆಪಾದನೆ ಬರುತ್ತದೆ.
ಹೀಗೆ ಅಪವಾದ ಹೊರುವುದು ಬಸವರಾಜ ಬೊಮ್ಮಾಯಿ ಅವರಿಗೆ ಬೇಕಿಲ್ಲ. ಹೀಗಾಗಿ ಜನೋತ್ಸವದ ಸಂದರ್ಭದಲ್ಲಿ, ತಪ್ಪಿದರೆ ಇದೇ ತಿಂಗಳ 12ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಮಹಿಳಾ ಮತದಾರರಿಗೆ ಬೊಮ್ಮಾಯಿ ವಿಶೇಷ ಗಿಪ್ಟು ನೀಡಬಹುದು.
* * * *
ಈ ಮಧ್ಯೆ ಕೇಂದ್ರ ಸಂಸದೀಯ ಮಂಡಳಿಗೆ ನೇಮಕಗೊಂಡ ನಂತರ ಮಾಜಿ ಸಿಎಂ ಯಡಿಯೂರಪ್ಪ ಪಕ್ಷಕ್ಕಾಗಿ ತಮ್ಮೆಲ್ಲ ಶ್ರಮ ಹಾಕುತ್ತಾರೆ ಎಂಬುದು ಬೊಮ್ಮಾಯಿ ಅವರ ನಂಬಿಕೆ. ರಾಜಕಾರಣದಲ್ಲಿ ಶ್ರಮ ವಹಿಸುವುದು ಎಂದರೆ ಬರೀ ಮೈ ಬೆವರಿಳಿಸುವುದಲ್ಲ, ಬದಲಿಗೆ ಮತದಾರರನ್ನು ಸೆಳೆಯಲು ವಿಶೇಷ ಕಾರ್ಯತಂತ್ರ ರೂಪಿಸುವುದು ಎಂದರ್ಥ.
ಇಂತಹ ಕಾರ್ಯತಂತ್ರಗಳನ್ನು ರೂಪಿಸುವ ವಿಷಯದಲ್ಲಿ ಯಡಿಯೂರಪ್ಪ ಮಾಸ್ಟರ್. ಅವರು ಪ್ರಬಲ ಲಿಂಗಾಯತ ಸಮುದಾಯದ ಮತಗಳನ್ನಷ್ಟೇ ಅಲ್ಲ, ಇತರ ಸಮುದಾಯಗಳ ಮತ ಬ್ಯಾಂಕ್ ಮೇಲೆ ಪ್ರಭಾವ ಬೀರಬಲ್ಲರು. ಉದಾಹರಣೆಗೆ ಅಲ್ಪಸಂಖ್ಯಾತ ಮತ ಬ್ಯಾಂಕ್ ಅನ್ನೇ ತೆಗೆದುಕೊಳ್ಳಿ. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ರೂಪಿಸಿದ ತಂತ್ರಗಾರಿಕೆಯಿಂದ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಕ್ಯಾಂಡಿಡೇಟುಗಳು ಈ ಮತ ಬ್ಯಾಂಕಿನ ಲಾಭ ಪಡೆದಿದ್ದರು. ಆದರೆ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ನಂತರ ಹಿಜಾಬು, ಹಲಾಲು, ಆಜಾನು ಗಲಭೆ ಶುರುವಾಯಿತಲ್ಲ? ಇದಾದ ನಂತರ ಸ್ಥಳೀಯವಾಗಿ ಮುಸ್ಲಿಂ ಪ್ರಮುಖರು ಬಿಜೆಪಿಯ ಜತೆ ನಿಂತ ತಮ್ಮವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ನೀವು ಮಾಡಿದ ಕೆಲಸದಿಂದ ನಮ್ಮವರು ಹಿಂಸೆ ಅನುಭವಿಸಬೇಕಾಗಿದೆ. ಇನ್ನು ಮುಂದೆ ಯಾವುದೇ ಕಾರಣ ನೀಡಿ ಬಿಜೆಪಿ ಕ್ಯಾಂಡಿಡೇಟುಗಳಿಗೆ ವೋಟು ಹಾಕಿ ಅಂತ ಪ್ರಭಾವ ಬೀರಿದರೆ ನೆಟ್ಟಗಿರುವುದಿಲ್ಲ ಅಂತ ಎಚ್ಚರಿಸುತ್ತಿದ್ದಾರೆ. ಇದು ಸದ್ಯದ ಪರಿಸ್ಥಿತಿಯಾದರೂ ಸಮಯ ಬಂದಾಗ ಯಡಿಯೂರಪ್ಪ ರೂಪಿಸುವ ಕಾರ್ಯತಂತ್ರ ಯಾವ್ಯಾವ ಮತ ಬ್ಯಾಂಕುಗಳ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿದೆ ಅಂತ ಬೊಮ್ಮಾಯಿ ಅವರಿಗೆ ಗೊತ್ತು. ಆದರೆ ಈ ವಿಷಯದಲ್ಲಿ ಯಡಿಯೂರಪ್ಪ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರೆ ಅವರ ಒಂದು ಆಸೆ ಈಡೇರುವಂತಾಗಬೇಕು ಅಂತ ಅವರಿಗೆ ಅನ್ನಿಸುತ್ತಿದೆ.
ಅದೆಂದರೆ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುವುದು. ಹಾಗೆ ನೋಡಿದರೆ ಇತ್ತೀಚಿನವರೆಗೆ ವಿಜಯೇಂದ್ರ ಅವರನ್ನು ತಮ್ಮ ಸಂಪುಟಕ್ಕೆ ತೆಗೆದುಕೊಳ್ಳುವ ವಿಷಯದಲ್ಲಿ ಬೊಮ್ಮಾಯಿ ಅವರಿಗೆ ಆಸಕ್ತಿ ಇರಲಿಲ್ಲ.
ಇದಕ್ಕೆ ಕಾರಣವೆಂದರೆ, ಸಂಪುಟಕ್ಕೆ ಸೇರ್ಪಡೆಯಾದರೆ ವಿಜಯೇಂದ್ರ ಪರ್ಯಾಯ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಬಹುದು ಅಂತ ಆಪ್ತರು ನೀಡಿದ ಸಲಹೆ. ಹೀಗಾಗಿ ಸಂಪುಟ ಪುನಾರಚನೆ ಇರಲಿ, ವಿಸ್ತರಣೆಯೇ ಇರಲಿ, ಬೊಮ್ಮಾಯಿ ಆಸಕ್ತಿ ತೋರುತ್ತಲೇ ಇರಲಿಲ್ಲ. ತೀರಾ ಒತ್ತಡ ಬಿದ್ದರೆ ದೆಹಲಿ ಯಾತ್ರೆ ಮಾಡಿ, ಏನೂ ಗಿಟ್ಟಲಿಲ್ಲ ಅಂತ ಕೈಯ್ಯಾಡಿಸಿ ಬಿಡುತ್ತಿದ್ದರು.
ಆದರೆ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿಜಯೇಂದ್ರ ಸಂಪುಟಕ್ಕೆ ಬಂದರೆ ತಪ್ಪೇನು? ಎಂಬ ಯೋಚನೆ ಅವರಲ್ಲಿ ಮೊಳೆತಿದೆ. ಯಾಕೆಂದರೆ ಈಗ ವಿಜಯೇಂದ್ರ ಮಂತ್ರಿಯಾದರೆ ಯಡಿಯೂರಪ್ಪ ಖುಷಿಯಾಗುತ್ತಾರೆ. ಅಷ್ಟೇ ಅಲ್ಲ, 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಗರಿಷ್ಟ ಶ್ರಮ ಹಾಕುತ್ತಾರೆ. ಈ ಮಧ್ಯೆ ವಿಜಯೇಂದ್ರ ಸಂಪುಟಕ್ಕೆ ಬಂದರೂ ಮುಂದಿನ ಚುನಾವಣೆಯ ಕಡೆ ಅವರು ಗಮನ ಹರಿಸಬೇಕಾಗುತ್ತದೆಯೇ ಹೊರತು ತಮಗೆ ಪರ್ಯಾಯವಾಗುವ ಕಡೆ ಯೋಚಿಸಲಾಗುವುದಿಲ್ಲ ಎಂಬುದು ಬೊಮ್ಮಾಯಿ ಯೋಚನೆ.
ಹಾಗಂತ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಎದುರು ಇದನ್ನು ಹೇಳುವುದು ಕಷ್ಟ. ಹೀಗಾಗಿ ಜನೋತ್ಸವ ಕಾರ್ಯಕ್ರಮಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬರುತ್ತಾರಲ್ಲ? ಆ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದು ಬೊಮ್ಮಾಯಿ ಇರಾದೆ. ಹೀಗೆ ಪಕ್ಷ ಮರಳಿ ಅಧಿಕಾರಕ್ಕೆ ಬರಲು ಏನು ಬೇಕೋ ಅದನ್ನು ಮಾಡುತ್ತಿದ್ದೇನೆ ಎಂಬ ಸಮಾಧಾನದಲ್ಲಿರುವ ಬೊಮ್ಮಾಯಿ ಅವರಿಗೆ ಇದೊಂದೇ ಜಪ ಅನ್ನುವುದು ಸುಳ್ಳಲ್ಲ. ಯಾಕೆಂದರೆ 1985ರ ನಂತರ ಕರ್ನಾಟಕದ ಇತಿಹಾಸದಲ್ಲಿ ಯಾವ ಆಡಳಿತಾರೂಢ ಪಕ್ಷವೂ ಮರಳಿ ಗೆದ್ದ ಉದಾಹರಣೆ ಇಲ್ಲ. 2023ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮರಳಿ ಅಧಿಕಾರ ಹಿಡಿಯುವಂತಾದರೆ ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತಹ ನಾಯಕರ ಸಾಲಿಗೆ ತಾವು ಸೇರಬಹುದು ಎಂಬುದು ಬೊಮ್ಮಾಯಿ ಕನಸು.
ಅವರ ಈ ಕನಸಿಗೆ ಪೂರಕವಾದ ವಾತಾವರಣವೇನೋ ಸದ್ಯಕ್ಕೆ ಕಾಣುತ್ತಿಲ್ಲ. ಯಾಕೆಂದರೆ ಪ್ರಧಾನಿ ಮೋದಿಯವರ ಇಮೇಜು ಮೊದಲಿನಂತಿಲ್ಲ. ಯಡಿಯೂರಪ್ಪ ಅವರಿಗೂ ಈ ಹಿಂದಿದ್ದ ಶಕ್ತಿ ಕಾಣುತ್ತಿಲ್ಲ. ಈ ಮಧ್ಯೆ ಸ್ವಪಕ್ಷದ ಶಾಸಕರೇ ಬೊಮ್ಮಾಯಿ ಆಡಳಿತದ ಬಗ್ಗೆ ಸಮಾಧಾನದಿಂದಿಲ್ಲ. ರಾಜ್ಯದ ಮತದಾರರಲ್ಲೂ ನೆಮ್ಮದಿ ಕಾಣುತ್ತಿಲ್ಲ.
ಹೀಗಾಗಿ ಪ್ರತಿ ಪಕ್ಷ ಕಾಂಗ್ರೆಸ್ಸಿನ ಇಮೇಜು ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆ ಭಾಸವಾಗುತ್ತಿದೆ. ಹೀಗಿದ್ದರೂ ಮುಂದಿನ ಚುನಾವಣೆಯಲ್ಲಿ ಗೆದ್ದು ಮರಳಿ ಅಧಿಕಾರ ಹಿಡಿಯುವ ಕನಸು ಬೊಮ್ಮಾಯಿ ಅವರಲ್ಲಿ ಗಟ್ಟಿಯಾಗಿದೆ. ಪ್ರತಿಕೂಲ ಸ್ಥಿತಿಯಲ್ಲೂ ಹೀಗೆ ಹಿತವಾದ ಕನಸು ಕಾಣುವುದು ಒಳ್ಳೆಯದೇ ಅಲ್ಲವೇ?