28.5 C
Bengaluru
Wednesday, March 15, 2023
spot_img

ಇದೇ ಬಜೆಟ್‌ನಲ್ಲಿ ಕ್ಷತ್ರಿಯ ಸಮುದಾಯದ ಬೇಡಿಕೆಗಳ ಈಡೇರಿಕೆ: ಮುಖ್ಯಮಂತ್ರಿ ಬೊಮ್ಮಾಯಿ

-ಶೌರ್ಯ ಡೆಸ್ಕ್

ಕ್ಷತ್ರಿಯ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸಿದ್ಧವಿದೆ. ಇದೇ ಬಜೆಟ್‌ನಲ್ಲಿ ಕ್ಷತ್ರಿಯರಿಗೆ ವಿಶೇಷ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕರ್ನಾಟಕ ಕ್ಷತ್ರಿಯ ಒಕ್ಕೂಟ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕ್ಷತ್ರಿಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷತ್ರಿಯ ಒಕ್ಕೂಟದಡಿ 38 ಒಳಪಂಗಡಗಳು ಒಗ್ಗಟ್ಟಾಗಿ ಸಲ್ಲಿಸಿದ ಹಕ್ಕೊತ್ತಾಯ ಪತ್ರವನ್ನು ಸ್ವೀಕರಿಸಿದ ಅವರು ಕ್ಷತ್ರಿಯ ಸಮುದಾಯಕ್ಕೆ ಮುಂಬರುವ ಬಜೆಟ್‌ನಲ್ಲಿ ಆದ್ಯತೆ ನೀಡುವುದಾಗಿ ಪ್ರಕಟಿಸಿದರು.

`ಕ್ಷತ್ರಿಯ ಸಮಾಜಕ್ಕೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕೆ ಪೂರಕವಾದ ಯೋಜನೆಗಳನ್ನು ಪ್ರಕಟಿಸಲಾಗುವುದು. ಈ ಸಮುದಾಯಗಳ ಕುಲ ಕಸುಬುಗಳನ್ನು ಅಭಿವೃದ್ಧಿಪಡಿಸಲು ವಿಶೇಷ ನೆರವು ನೀಡಲಾಗುವುದು. ಕ್ಷತ್ರಿಯ ಸಮಾಜದ ಸಣ್ಣ ಸಣ್ಣ ಒಳಪಂಗಡಗಳು ತಮ್ಮ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು ಇಂತಹವರಿಗಾಗಿ ಕಾರ್ಯಕ್ರಮ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಕ್ಷತ್ರಿಯ ಸಮಾಜದ ಸಭಾಭವನ ನಿರ್ಮಾಣಕ್ಕೆ ಜಮೀನು ಮತ್ತು ಅನುದಾನ ಒದಗಿಸಬೇಕೆಂಬ ಬೇಡಿಕೆ ಇಟ್ಟಿದ್ದೀರಿ. ಅದನ್ನು ಈಡೇರಿಸಲಾಗುವುದು. ವಿವಿಧ ಸಮುದಾಯಗಳ ಸಂಘ ಸಂಸ್ಥೆಗಳಿಗೆ ಬೆಂಗಳೂರಿನ 65 ಎಕರೆ ಜಮೀನು ಹಂಚಿಕೆ ಮಾಡಲಾಗಿತ್ತು. ಅದಕ್ಕೆ ಕಾನೂನು ತೊಡಕು ಎದುರಾಗಿದೆ. ಶೀಘ್ರದಲ್ಲಿ ಸಮಸ್ಯೆ ಪರಿಹರಿಸಿ ಕ್ಷತ್ರಿಯ ಸಮಾಜ ಸೇರಿದಂತೆ ಎಲ್ಲ ಸಮುದಾಯಗಳಿಗೆ ಜಮೀನು ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು.

ಕ್ಷತ್ರಿಯರು ದೇಶಪ್ರೇಮಕ್ಕೆ ಹೆಸರಾದವರು. ಶ್ರೀರಾಮ, ಕೃಷ್ಣ ಎಲ್ಲರೂ ಕ್ಷತ್ರಿಯ ವಂಶಕ್ಕೆ ಸೇರಿದವರು. ಸ್ವಾಮಿ ವಿವೇಕಾನಂದ ಕೂಡ ಕ್ಷತ್ರಿಯರು. ಖಡ್ಗ ಮತ್ತು ಜ್ಞಾನದ ಖಡ್ಗ ಎರಡನ್ನೂ ಈ ಸಮಾಜ ಹಿಡಿಯಬಲ್ಲದು ಎಂಬುದಕ್ಕೆ ಇದು ಉದಾಹರಣೆ ಎಂದು ಬೊಮ್ಮಾಯಿ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾತನಾಡಿ, `ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರುವವರೇ ಕ್ಷತ್ರಿಯರು. ಈ ಸಮಾಜದ ತ್ಯಾಗದ ಫಲವಾಗಿ ದೇಶ ಸುಭದ್ರವಾಗಿದೆ’ ಎಂದರು.

ಶ್ರೀರಾಮ ಕ್ಷತ್ರಿಯ ಕುಲದ ಆದರ್ಶ. 2014 ರವರೆಗೂ ದೇಶದಲ್ಲಿ ಭಾರತೀಯ ಸಂಸ್ಕೃತಿ ಆದರ್ಶ ಪುರುಷನ ಬಗ್ಗೆ ಅವಗಣನೆ ಇತ್ತು. ಆದರೆ, 2014ರ ನಂತರ ಪರಿಸ್ಥಿತಿ ಬದಲಾಗಿದೆ. ಅಯೋಧ್ಯೆ ರಾಮ ಜನ್ಮಭೂಮಿ ಸಂಬಂಧಿಸಿದ ಪ್ರಕರಣದ ವಿಚಾರಣೆ ತ್ವರಿತವಾಗಿ ಪೂರ್ಣಗೊಂಡು ತೀರ್ಪು ಪ್ರಕಟವಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣದ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.

`ಕ್ಷತ್ರಿಯರ ಹಿತ ಕಾಯಲು ನಾವು ಬದ್ಧ. ಯಾವುದೇ ಸಮಯಕ್ಕೆ ನಿಮ್ಮೊಂದಿಗೆ ಬರಲು ಸಿದ್ಧ’ ಎಂದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ಅರವಿಂದ ಲಿಂಬಾವಳಿ, ಸಂಸದ ಪಿ.ಸಿ. ಮೋಹನ್, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ರಾವ್ ಮುಳೆ, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ರುದ್ರಪ್ಪ ಲಮಾಣಿ, ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್, ಕ್ಷತ್ರಿಯ ಸಮುದಾಯಗಳ ಮಠಾಧೀಶರು ವೇದಿಕೆಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles