-ಶೌರ್ಯ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ಪ್ರತಿಭಾನ್ವಿತ ನಟ ಪ್ರಮೋದ್ ನಟನೆಯ ಬಹು ನಿರೀಕ್ಷಿತ ಚಿತ್ರ ಬಾಂಡ್ ರವಿ. ಟೀಸರ್ ಮೂಲಕ ಎಲ್ಲರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿರುವ ಈ ಚಿತ್ರದ ಮೇಲೆ ಸಿನಿರಸಿಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಕೆಲಸ ಮುಗಿಸಿ ಬಿಡುಗಡೆಗೆ ಎದುರು ನೋಡುತ್ತಿರುವ ಚಿತ್ರತಂಡ ಚಿತ್ರದ ಮೊದಲ ಸಾಂಗ್ ಬಿಡುಗಡೆ ಮಾಡಿದೆ.

ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಅರಳಿರುವ ‘ಮಜಾ ಮಜಾ ಮಾಡು ಬಾ’ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ದನಿಯಾಗಿದ್ದು, ಮನೋಮೂರ್ತಿ ಸಂಗೀತ ಹಾಡಿಗಿದೆ. ಜೋಶ್ ಜೊತೆಗೆ ಒಂದೊಳ್ಳೆ ಮೋರಲ್ ಇರುವ ಸಾಂಗ್ ಇದಾಗಿದೆ. ಜೈಲಿನಲ್ಲಿ ನಡೆಯುವ ಸಾಂಗ್ ಇದಾಗಿದ್ದು ಜೈಲಿನಲ್ಲಿರುವ ಅಪರಾಧಿಗಳಿಗೆ ಧೈರ್ಯ ತುಂಬುವ ಈ ಸಾಂಗ್ ಗೆ ಸಖತ್ ಜೋಶ್ ನಲ್ಲಿ ಎಲ್ಲರೊಂದಿಗೆ ನಾಯಕ ಪ್ರಮೋದ್ ಹೆಜ್ಜೆ ಹಾಕಿದ್ದಾರೆ.

‘ಗೀತಾ ಬ್ಯಾಂಗಲ್ ಸ್ಟೋರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಪ್ರಮೋದ್ ‘ಮತ್ತೆ ಉದ್ಭವ’, ‘ಪ್ರೀಮಿಯರ್ ಪದ್ಮಿನಿ’ ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಬಾಂಡ್ ರವಿ’ ಮೂಲಕ ಮಾಸ್ ಅವತಾರದಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.