-ಶೌರ್ಯ ಡೆಸ್ಕ್
ಬಿಜೆಪಿ, ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಕಾರ್ಯ ಮಾಡುತ್ತಿದೆ. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಕೊಡುವವರು ಮತ್ತು ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ರೌಡಿ ಸೈಲೆಂಟ್ ಸುನಿಲ್ ಜೊತೆ ಬಿಜೆಪಿ ಸಂಸದರು, ಶಾಸಕರು ವೇದಿಕೆ ಹಂಚಿಕೊಂಡು ಸುನಿಲ್ ಬಿಜೆಪಿಗೆ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬ ಮಾತಿಗೆ ಪುಷ್ಟಿ ಸಿಗುತ್ತಲೇ ವಿರೋಧ ಪಕ್ಷಗಳ ನಾಯಕರು ಬಿಜೆಪಿ ರೌಡಿಗಳು, ರಕ್ತಪಿಪಾಸುಗಳ ಪಕ್ಷ ಎಂದು ಟೀಕಿಸುತ್ತಲೇ ಎಚ್ಚೆತ್ತಿರುವ ಬಿಜೆಪಿ ಸೈಲೆಂಟ್ ಸುನಿಲನ ವಿಚಾರದಲ್ಲಿ ಸ್ಪಷ್ಟನೆ ನೀಡಿದೆ.
ಸೈಲೆಂಟ್ ಸುನಿಲನ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ ಎಂದು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಿ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಜೊತೆಗೆ ಆತನೊಂದಿಗೆ ವೇದಿಕೆ ಹಂಚಿಕೊಂಡ ನಾಯಕರಿಗೆ ವಿವರಣೆ ಕೇಳಿ ನೋಟಿಸ್ ನೀಡಲು ಮುಂದಾಗಿದೆ.

ಸೈಲೆಂಟ್ ಸುನಿಲ್ ನನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸುವುದಿಲ್ಲ. ಸೈಲೆಂಟ್ ಸುನಿಲ್ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕೆಲವು ಪ್ರಮುಖರು ಭಾಗವಹಿಸಿದ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖಂಡರಿಂದ ವಿವರಣೆ ಕೇಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪಕ್ಷದ ಪ್ರಮುಖರು ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಎಲ್ಲ ವಿಚಾರಗಳನ್ನು ಪಕ್ಷದ ಗಮನಕ್ಕೆ ತರಬೇಕು ಎಂದು ಅವರು ಸೂಚಿಸಿದ್ದಾರೆ.

ಬಿಜೆಪಿ, ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಕಾರ್ಯ ಮಾಡುತ್ತಿದೆ. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಕೊಡುವವರು ಮತ್ತು ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಟೀಕೆ
ಸೈಲೆಂಟ್ ಸುನಿಲ್ ಒಬ್ಬ ಕುಖ್ಯಾತ ರೌಡಿ. ಇಬ್ಬರು ಎಂಪಿಗಳು, ಬಿಜೆಪಿ ನಾಯಕರು ಅವನ ಜೊತೆ ಇದ್ದಾರೆ.
ಸುನಿಲ್ ಒಬ್ಬ ಸರ್ಚ್ ವಾರೆಂಟ್ ನಲ್ಲಿ ಇರೋ ರೌಡಿ. ಅಂತಹವನ ಜೊತೆ ವೇದಿಕೆ ಹಂಚಿಕೊಳ್ಳುವುದು ಸರಿನಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರೌಡಿಗಳ ಸೇರ್ಪಡೆ ವಿಚಾರ ಎತ್ತಿದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಇದೊಂದು ಬಿಜೆಪಿಯವರ ಅಂಟು ರೋಗ. ಅದರಲ್ಲೂ ಬಸವರಾಜ ಬೊಮ್ಮಾಯಿಗೆ ಆ ರೋಗ ಜಾಸ್ತಿ. ಹಿಂದಿನ ಅಧಿಕಾರದಲ್ಲಿ… ಕಾಂಗ್ರೆಸ್ಸಿನಲ್ಲಿ ಅಂತಾ ಎಲ್ಲದಕ್ಕೂ ಬೊಟ್ಟು ಮಾಡ್ತಾರೆ. ನಿಮ್ಮ ತಪ್ಪುಗಳ ಹೇಳ್ರಯ್ಯ ಮೊದಲು. ನೀವೇನು ಮಾಡಿದ್ರಿ, ನಿಮ್ಮ ತಪ್ಪೇನು ಅಂತಾ ಹೇಳಿ. ನೀವು ಅನೈತಿಕವಾಗಿ ಅಧಿಕಾರಕ್ಕೆ ಬಂದಿದ್ದೀರಲ್ಲ. ಏನ್ಮಾಡಿದ್ದೀರಿ ಹೇಳಬೇಕು ಅಲ್ವಾ?

ರೌಡಿಗಳ ಜೊತೆ ವೇದಿಕೆ ಹಂಚಿಕೊಂಡು, ಕಾಂಗ್ರೆಸ್ಸಿಗರು ಇರಲಿಲ್ಲವ ಅಂದ್ರೆ? ಎಂದು ಸಿದ್ದರಾಮಯ್ಯ ಕಿಡಿಕಾರಿ, ಅಶಾಂತಿ ನಿರ್ಮಾಣ ಮಾಡಲು ಇಂತಹವರು ಬೇಕಲ್ಲ ಅವರಿಗೆ ಎಂದರು.
ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದವರು ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ,
ಅಮಿತ್ ಶಾ ಎಲ್ಲೋಗಿದ್ರು? ಅಮಿತ್ ಶಾ ಏನು ಮಾವನ ಮನೆಗೆ ಹೋಗಿದ್ರ?
ಗಡಿಪಾರು ಮಾಡಿದ್ರು ಅವರನ್ನ.. ಈ ದೇಶದ ಹೋಂ ಮಿನಿಸ್ಟರ್ ಗೆ 3 ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು…
ಅಂತಹವರೇ ಈ ದೇಶದ ಹೋಂ ಮಿನಿಸ್ಟರ್ ಆಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಿರಲಿಲ್ಲವ?
ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಆಗಿತ್ತು ಅಷ್ಟೇ. ನಲಪಾಡ್ ರೌಡಿ ಅಲ್ಲ, ರೌಡಿ ಶೇಖರ್ ಕೂಡ ಅಲ್ಲ.
ಕೇಸ್ ಪ್ರೂವ್ ಆಗಿ ಶಿಕ್ಷೆ ಆಗಿದ್ರೆ ಓಕೆ. ಬಿಜೆಪಿಯವರದ್ದು ಮೊಂಡತನ, ಭಂಡತನ. ಮಾನ ಮರ್ಯಾದೆ ಇಲ್ದೆ ಇರೋರಿಗೆ ಹಿಂಗೇ ಆಗೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಕ್ತಪಿಪಾಸುಗಳ ಪಕ್ಷ: ಹೆಚ್.ಡಿ.ಕೆ

ಜೆಡಿಎಸ್ ಬಗೆಗಿನ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ, ರೌಡಿ ಶೀಟರ್ ಸೈಲೆಂಟ್ ಸುನಿಲನ ಪಕ್ಷ ಸೇರ್ಪಡೆ ವಿಚಾರಕ್ಕೆ ದೇವನಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, “ನಿನ್ನೆ ಉನ್ನತ ಶಿಕ್ಷಣ ಸಚಿವರು ಒಂದು ಮಾತು ಹೇಳಿದ್ದಾರೆ. ಅದು ಯಾರ ಬಗ್ಗೆ ಹೇಳಿದ್ರೋ ಗೊತ್ತಿಲ್ಲ. ನಮಗೆ ಅಷ್ಟು ತಿಳುವಳಿಕೆ ಇಲ್ಲ ಸಚಿವರು ರಕ್ತ ಪೀಪಾಸುಗಳು ಅಂತಾ ಹೇಳಿದ್ದಾರೆ. ನೆನ್ನೆ ಅವರ ಪಕ್ಷಕ್ಕೆ ಯಾರನ್ನೋ ಸೇರಿಸಿ ಕೊಳ್ತಾ ಇದ್ರಲ್ಲ. ಅವರ ಇತಿಹಾಸ ತೆಗೆದು ನೋಡಿದ್ರೆ ಗೊತ್ತಾಗುತ್ತೆ. ಯಾರು ರಕ್ತ ಹೀರುತ್ತಾ ಇದ್ದರು? ಯಾರು ರಕ್ತಪಿಪಾಸುಗಳು ಅಂತಾ” ಎಂದು ಟಾಂಗ್ ನೀಡಿದ್ದಾರೆ.
ನಿನ್ನೆ ಪಕ್ಷಕ್ಕೆ ಸೇರಿಸಿಕೊಂಡವರನ್ನ ನೋಡಿದ್ರೆ ಎಷ್ಟು ರಸ್ತ ಕುಡಿದಿದ್ದಾರೆ ಅನ್ನೋದು ಗೊತ್ತಾಗುತ್ತೆ.
ತಲೆ ಒಡೆದು ಬಂದವರು ಅವರನ್ನು ಸೇರಿಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.