20.8 C
Bengaluru
Sunday, March 19, 2023
spot_img

ಆಪರೇಷನ್ ತ್ರೀ ಸ್ಟಾರ್‌ಗೆ ಬಿಜೆಪಿ ಸಿದ್ಧ

-ಆರ್.ಟಿ.ವಿಠ್ಠಲಮೂರ್ತಿ

ಬಿಜೆಪಿ ಪಾಳೆಯದ ಕಣ್ಣು ಕಿಸುರಾಗುವಂತೆ ಮಾಡಿರುವ ಈ ಮೂವರು ನಾಯಕರು ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿರುವವರು. ಮೊದಲನೆಯವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ. ಎರಡನೆಯವರು ಪ್ರತಿಪಕ್ಷ ನಾಯಕರಾದ ಸಿದ್ಧರಾಮಯ್ಯ, ಮೂರನೆಯವರು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್. ಇವತ್ತು ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಕಾಂಗ್ರೆಸ್ ಸೈನ್ಯ ಈ ಮೂವರ ಮೇಲೆ ಅವಲಂಬಿತವಾಗಿದೆ ಎಂಬುದೇ ಆಪರೇಷನ್ ತ್ರೀ ಸ್ಟಾರ್ ಯೋಜನೆಯ ಮೂಲ. ಯುದ್ಧದಲ್ಲಿ ಎದುರಾಳಿ ಸೈನ್ಯದೆದುರು ಕಾದಾಡುವುದು ಸಹಜ. ಆದರೆ ಈ ಯುದ್ಧದಲ್ಲಿ ಗೆಲುವು ಸಿಗಬೇಕೆಂದರೆ ಸೈನ್ಯ ಮುನ್ನಡೆಸುವ ದಂಡನಾಯಕರನ್ನು ಸೆರೆ ಹಿಡಿಯಬೇಕು. ಇದೇ ರೀತಿ ಖರ್ಗೆ, ಸಿದ್ಧರಾಮಯ್ಯ, ಡಿಕೆಶಿ ಎಂಬ ತ್ರಿಮೂರ್ತಿಗಳನ್ನು ಕಟ್ಟಿ ಹಾಕುವುದು ಆಪರೇಷನ್ ತ್ರಿ ಸ್ಟಾರ್ ಉದ್ದೇಶ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸೈನ್ಯ ಕರ್ನಾಟಕದ ಕಡೆ ಮುಖ ಮಾಡುತ್ತಿದ್ದಂತೆಯೇ ಬಿಜೆಪಿ ಪಾಳೆಯದಲ್ಲಿ ಆಪರೇಷನ್ ತ್ರೀ ಸ್ಟಾರ್   ಯೋಜನೆ ಸಿದ್ಧವಾಗಿದೆ. ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರಲು ಅಡ್ಡಿಯಾಗಿರುವ ಮೂವರು ನಾಯಕರನ್ನು ಕಟ್ಟಿ ಹಾಕುವುದು ಈ ಯೋಜನೆಯ ಉದ್ದೇಶ.

ಅಂದ ಹಾಗೆ ಈ ರೀತಿ ಬಿಜೆಪಿ ಪಾಳೆಯದ ಕಣ್ಣು ಕಿಸುರಾಗುವಂತೆ ಮಾಡಿರುವ ಈ ಮೂವರು ನಾಯಕರು ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿರುವವರು. ಮೊದಲನೆಯವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ. ಎರಡನೆಯವರು ಪ್ರತಿಪಕ್ಷ ನಾಯಕರಾದ ಸಿದ್ಧರಾಮಯ್ಯ, ಮೂರನೆಯವರು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್.

ಇವತ್ತು ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಕಾಂಗ್ರೆಸ್ ಸೈನ್ಯ ಈ ಮೂವರ ಮೇಲೆ ಅವಲಂಬಿತವಾಗಿದೆ ಎಂಬುದೇ ಆಪರೇಷನ್ ತ್ರೀ ಸ್ಟಾರ್ ಯೋಜನೆಯ ಮೂಲ.

ಯುದ್ಧದಲ್ಲಿ ಎದುರಾಳಿ ಸೈನ್ಯದೆದುರು ಕಾದಾಡುವುದು ಸಹಜ. ಆದರೆ ಈ ಯುದ್ಧದಲ್ಲಿ ಗೆಲುವು ಸಿಗಬೇಕೆಂದರೆ ಸೈನ್ಯ ಮುನ್ನಡೆಸುವ ದಂಡನಾಯಕರನ್ನು ಸೆರೆ ಹಿಡಿಯಬೇಕು. ಇದೇ ರೀತಿ ಖರ್ಗೆ, ಸಿದ್ಧರಾಮಯ್ಯ, ಡಿಕೆಶಿ ಎಂಬ ತ್ರಿಮೂರ್ತಿಗಳನ್ನು ಕಟ್ಟಿ ಹಾಕುವುದು ಆಪರೇಷನ್ ತ್ರಿ ಸ್ಟಾರ್ ಉದ್ದೇಶ.

ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕಟ್ಟಿ ಹಾಕುವ ವಿಷಯದಲ್ಲಿ ರಾಜ್ಯ ಬಿಜೆಪಿ ನಾಯಕರಿಗಿಂತ ಹೆಚ್ಚಿನ ಆಸಕ್ತಿ ಇರುವುದು ಕೇಂದ್ರದ ಬಿಜೆಪಿ ನಾಯಕರಿಗೆ. ಎಷ್ಟೇ ಆದರೂ ಖರ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಹಜವಾಗಿಯೇ ಖರ್ಗೆ ಅವರ ಹೆಗಲ ಮೇಲೆ ಅಪವಾದ ಕೂರುತ್ತದೆ.

ಸ್ವಂತ ರಾಜ್ಯದಲ್ಲೇ ಪಕ್ಷವನ್ನು ಅಧಿಕಾರಕ್ಕೆ ತರಲಾರದವರು ದೇಶದ ಬೇರೆ ರಾಜ್ಯಗಳ  ಮೇಲೆ ಯಾವ ಪ್ರಭಾವ ಬೀರಲು ಸಾಧ್ಯ? ಅಂತ ಖರ್ಗೆಯವರ ಮೇಲೆ ದೋಷ ಕೂರಿಸಿದರೆ ಸಹಜವಾಗಿಯೇ ಕೈ ಪಾಳೆಯದ ಆತ್ಮವಿಶ್ವಾಸ ಕಡಿಮೆಯಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ  ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸೋನಿಯಾ, ರಾಹುಲ್ ಗಾಂಧಿ ಅವರಿಗಿಂತ ಪರಿಣಾಮಕಾರಿಯಾಗಿ ಖರ್ಗೆ ದಾಳಿ ಮಾಡುತ್ತಾರೆ. ಹೀಗೆ ದಾಳಿ ಮಾಡುವ ಖರ್ಗೆಯವರನ್ನು ಸ್ವಂತ  ರಾಜ್ಯ ಕರ್ನಾಟಕದಲ್ಲೇ ಬಡಿದು ಹಾಕುವುದು ಮೋದಿಯವರ ಯೋಚನೆ.

ಅವರ ಈ ಯೋಚನೆಯ ಹಿನ್ನೆಲೆಯಲ್ಲಿ ಗುಲ್ಬರ್ಗದ ಸಂಸದ ಉಮೇಶ್ ಜಾಧವ್ ಅವರ ಗ್ರಾಫು ಮೇಲಕ್ಕೇರಿದೆ. ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಉಮೇಶ್ ಜಾಧವ್ ಅವರ ಶಕ್ತಿ ಹೆಚ್ಚಿಸಲು, ಆ ಮೂಲಕ ಖರ್ಗೆಯವರ ಪ್ರಭಾವ ಕಡಿಮೆಯಾಗುವಂತೆ ಮಾಡುವುದು ವರಿಷ್ಟರ ಯೋಚನೆ.

ಅಂದ ಹಾಗೆ ಹೈದ್ರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಲು ಖರ್ಗೆ ಶ್ರಮಿಸಿದ್ದರು. ಆದರೆ ಅದರಡಿ ಆ ಭಾಗದ ಜನರ ಕೆಲಸಗಳಾಗಬೇಕಲ್ಲ? ಉದ್ಯೋಗದಿಂದ ಹಿಡಿದು ಅಭಿವೃದ್ಧಿಯವರೆಗೆ ಯಾವುದೇ ಕೆಲಸ ಹಿಡಿದುಕೊಂಡು ಉಮೇಶ್ ಜಾಧವ್ ಹೋಗಲಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಗೌರವ ಸಿಗುತ್ತಿದೆ. ಹೀಗೆ ಹೈದ್ರಾಬಾದ್-ಕರ್ನಾಟಕದಲ್ಲಿ ಬಿಜೆಪಿಯ ಗ್ರಾಫು ಏರಿದರೆ ಖರ್ಗೆ ಸುಸ್ತಾಗುತ್ತಾ ಹೋಗುತ್ತಾರೆ ಎಂಬುದು ವರಿಷ್ಟರ ಯೋಚನೆ.

ಇನ್ನು ಆಪರೇಷನ್ ತ್ರೀ ಸ್ಟಾರ್ ಯೋಜನೆಯಡಿ ಬಿಜೆಪಿಯ ದಾಳಿಗೆ ಗುರಿಯಾಗಲಿರುವ ಎರಡನೇ ನಾಯಕ ಸಿದ್ಧರಾಮಯ್ಯ. ಆದರೆ ಅವರನ್ನು ಎದುರಿಸಬೇಕೆಂದರೆ ಮೊದಲು ಹಿಂದೂ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಬೇಕು ಅಂತ ಬಿಜೆಪಿ ಪಾಳೆಯ ತೀರ್ಮಾನಿಸಿದೆ.

ಸಿದ್ಧರಾಮಯ್ಯ ಅವರು  ಸದಾ ಕಾಲ ಮುಸ್ಲಿಂ ಪಕ್ಷಪಾತಿ ಅಂತ ದೂರುತ್ತಾ ಹೋದರೆ ಹಿಂದೂ ಮತದಾರರ ಮೇಲೆ ಅದು ಪ್ರಭಾವ ಬೀರುತ್ತದೆ. ಹೀಗಾಗಿ ರಾಜ್ಯಾದ್ಯಂತ ಮುಲ್ಲಾ, ಮುಲ್ಲಾ, ಸಿದ್ರಾಮುಲ್ಲಾ ಅನ್ನುವ ಘೋಷ ವಾಕ್ಯವನ್ನು ಜನಪ್ರಿಯಗೊಳಿಸುವುದು ಬಿಜೆಪಿಯ ಯೋಚನೆ.

ಇದು ಹೇಗಿರಬೇಕೆಂದರೆ ಭಾರತ್ ಮಾತಾ ಕೀ ಜೈ ಎಂಬ ಘೋಷ ವಾಕ್ಯಕ್ಕೆ ಪರ್ಯಾಯವಾಗಿರಬೇಕು ಎಂಬುದು ಅದರ ಉದ್ದೇಶ. ಹಾಗಾದಾಗ ಅದರ ಎಫೆಕ್ಟು ಜಾಸ್ತಿ ಅನ್ನುವುದು ಬಿಜೆಪಿ ಪಾಳೆಯದ ಹಾರ್ಡ್ ಕೋರ್ ಹಿಂದೂ ನಾಯಕರ ಯೋಚನೆ.

ಇನ್ನು ಆಪರೇಷನ್ ತ್ರೀ ಸ್ಟಾರ್ ಯೋಜನೆಯಡಿ ಬಿಜೆಪಿ ಪಾಳೆಯ ಟಾರ್ಗೆಟ್ ಮಾಡುವ ಮೂರನೇ ನಾಯಕ ಡಿಕೆಶಿ.

ಮೇಲಿಂದ ಮೇಲೆ ಅವರು ಆರೋಪಗಳ ಹೊರೆ ಹೊತ್ತು ದಿಲ್ಲಿಯ  ಕಡೆ ಓಡುವಂತೆ ಮಾಡಿದರೆ, ಸಹಜವಾಗಿ ಅವರ ವೇಗ ಕಡಿಮೆಯಾಗುತ್ತದೆ. ಅಲ್ಲಿಗೆ ಆಪರೇಷನ್ ತ್ರೀ ಸ್ಟಾರ್‌ನ ಉದ್ದೇಶ ಈಡೇರುತ್ತದೆ ಅನ್ನುವುದು ಕಮಲ ಪಾಳೆಯದ ಲೆಕ್ಕಾಚಾರ.

ಸಂಪುಟ ವಿಸ್ತರಣೆ ಕಷ್ಟ

ಗುಜರಾತ್ ವಿಧಾನಸಭಾ ಚುನಾವಣೆ ಮುಗಿದ ತಕ್ಷಣ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಚನೆಗೆ ಇದುವರೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲವಂತೆ.

ಸಣ್ಣ ಪ್ರಮಾಣದಲ್ಲಾದರೂ ವಿಸ್ತರಣೆ ಮಾಡಿ, ಖಾಲಿ ಇರುವ ಆರು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ತುಂಬುವುದು ಬೊಮ್ಮಾಯಿ ಅವರ ಯೋಚನೆ.

ಹಿರಿಯ ನಾಯಕ ಕೆ.ಎಸ್. ಈಶ್ಚರಪ್ಪ, ಬೆಳಗಾಂ ಜಿಲ್ಲೆಯ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ಬೊಮ್ಮಾಯಿ ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದರು. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯ ರಾಜಕೀಯ ಬಿಜೆಪಿಗೆ ಹೊಡೆತ ಕೊಡಬಹುದು ಎಂಬ ಆತಂಕವೂ ಬೊಮ್ಮಾಯಿ ಅವರಿಗಿತ್ತು. ಬೆಳಗಾವಿಯ ರಮೇಶ್ ಜಾರಕಿಹೊಳಿ ಮಂತ್ರಿಗಿರಿಗೆ ರಾಜೀನಾಮೆ ನೀಡಿದ್ದಾರೆ. ಮಂತ್ರಿಯಾಗಬೇಕಿದ್ದ ಅಭಯ ಪಾಟೀಲರಿಗೆ ಮಂತ್ರಿಗಿರಿ ಸಿಕ್ಕಿಲ್ಲ.

ಇದೇ ರೀತಿ ತಮ್ಮನ್ನು ಪಕ್ಷ ನಿರ್ಲಕ್ಷಿಸಿದೆ ಅಂತ ಹಿರಿಯ ನಾಯಕ ಪ್ರಭಾಕರ ಕೋರೆ ಕುದಿಯುತ್ತಿದ್ದಾರೆ. ಉಮೇಶ್ ಕತ್ತಿ ನಿಧನರಾಗಿ ತಿಂಗಳುಗಳೇ ಕಳೆದಿವೆ.

ಇಂತಹ ಕಾಲದಲ್ಲಿ ಜಾರಕಿಹೊಳಿ ಬ್ರದರ್ಸ್ ಆಡುವ ಆಟ ಜಿಲ್ಲೆಯಲ್ಲಿ ಪಕ್ಷಕ್ಕೆ ಹಾನಿ ಮಾಡಬಹುದು ಅಂತ ಬೊಮ್ಮಾಯಿ ಯೋಚಿಸಿದ್ದರು. ಆದರೆ ಈಗ ಬರುತ್ತಿರುವ ವರ್ತಮಾನವೆಂದರೆ ಸಣ್ಣ ಸೈಜಿನ ಸಂಪುಟ ವಿಸ್ತರಣೆಯ ಬಗ್ಗೆಯೂ ವರಿಷ್ಟರಿಗೆ ಒಲವಿಲ್ಲ.

ಬೆಳಗಾವಿ ಜಿಲ್ಲೆಯ ಅಸಮಾಧಾನಿತರ ಪೈಕಿ ಒಬ್ಬರಾದ ಶಾಸಕ ಅಭಯ ಪಾಟೀಲ್ ಜೈನ ಸಮುದಾಯದವರು. ಅದೇ ಸಮುದಾಯದವರಾದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರನ್ನು ಪಕ್ಷ ರಾಜ್ಯಸಭೆಗೆ ಕಳಿಸಿರುವುದರಿಂದ ರಾಜ್ಯದ ಜೈನ ಸಮುದಾಯ ಹರ್ಷದಲ್ಲಿದೆ. ಹೀಗಾಗಿ ಅಭಯ ಪಾಟೀಲರ ಅಸಮಾಧಾನ ಪಕ್ಷಕ್ಕೆ ಹೊಡೆತ ನೀಡುವುದಿಲ್ಲ. ರಮೇಶ್ ಜಾರಕಿಹೊಳಿ ಎಪಿಸೋಡು ನಾಯಕ ಮತಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಲಕ್ಷಣ ಕಡಿಮೆ.

ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಬಿಜೆಪಿ ಸರ್ಕಾರದ ಕ್ರಮ ಅದಕ್ಕೆ ಸಮಾಧಾನ ತಂದಿದೆ. ಗುಲ್ಬರ್ಗದಲ್ಲಿ ಇತ್ತೀಚೆಗೆ ನಡೆದ ಸಮಾವೇಶ ಕೂಡಾ ಅಂತಹ ನಂಬಿಕೆಗೆ ಪುಷ್ಟಿ ನೀಡುವಂತಿದೆ.

ಆದ್ದರಿಂದ ರಮೇಶ್ ಜಾರಕಿಹೊಳಿ ಎಪಿಸೋಡು ಬಿಜೆಪಿಗೆ ಹಾನಿ ಮಾಡುವ ಸಂಭವ ಕಡಿಮೆ ಎಂಬುದು ವರಿಷ್ಟರಿಗೆ ತಲುಪಿರುವ ಫೀಡ್ ಬ್ಯಾಕು. ಇನ್ನು ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಮಂತ್ರಿಗಿರಿ ನೀಡದಿದ್ದರೆ ಅವರೇನೂ ಬಂಡಾಯ ಏಳುವವರಲ್ಲ. ಹೀಗಾಗಿ ಸಂಪುಟ ವಿಸ್ತರಣೆಯ ಗೋಜಿಗೆ ಕೈ ಹಾಕುವ ಅಗತ್ಯವೇನಿಲ್ಲ ಎಂಬುದು ವರಿಷ್ಟರ ಯೋಚನೆ.

ಅರ್ಥಾತ್, ಬೊಮ್ಮಾಯಿ ಅವರ ಸಂಪುಟ ವಿಸ್ತರಣೆ ಕನಸಿಗೆ ಈ ಕ್ಷಣದವರೆಗೆ ಪುಷ್ಟಿ ಸಿಕ್ಕಿಲ್ಲ.

ಸಿದ್ದುಡಿಕೆ ಹೊಸ ಪ್ಲಾನು

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೊಸ ಪ್ಲಾನು ಮಾಡಿದ್ದಾರಂತೆ. ವಾರಕ್ಕೊಂದು ಸಲ ಇಬ್ಬರೇ ಸೇರಿ ಚರ್ಚಿಸುವುದು ಮತ್ತು ಇದರ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ಬಿಕ್ಕಟ್ಟಿಲ್ಲ ಎಂಬ ಸಂದೇಶ ರವಾನೆಯಾಗುವಂತೆ ಮಾಡುವುದು ಇದರ ಉದ್ದೇಶ.

ಅದರನುಸಾರ ಡಿಕೆಶಿ ಒಮ್ಮೆ ಸಿದ್ಧರಾಮಯ್ಯ ನಿವಾಸಕ್ಕೆ ಹೋಗಿ ಚರ್ಚಿಸಿದರೆ, ಮತ್ತೊಮ್ಮೆ ಪಕ್ಷದ ಕಚೇರಿಯಲ್ಲಿ ಉಭಯ ನಾಯಕರು ಬಾಗಿಲು ಹಾಕಿಕೊಂಡು ಚರ್ಚಿಸಿದ್ದಾರೆ.

ಹೀಗೆ ಇಬ್ಬರೇ ರಹಸ್ಯ ಮಾತುಕತೆ ನಡೆಸಿದರೆ ಏನರ್ಥ? ಇಬ್ಬರ ನಡುವೆ ನಾಯಕತ್ವಕ್ಕೆ ಜಂಗಿ ಕುಸ್ತಿ ನಡೆಯುತ್ತಿಲ್ಲ ಅಂತ ತಾನೇ?

ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವದ ವಿಷಯಕ್ಕೆ ಕಾವು ಕೊಡುವುದು ಬೆಂಬಲಿಗರು. ಅದವರ ವೈಯಕ್ತಿಕ ಇಚ್ಚೆ. ಆದರೆ ಈ ಇಚ್ಚೆ ಪಕ್ಷದ ಹಿತಕ್ಕೆ ಧಕ್ಕೆ ತರುತ್ತಿರುವುದು ನಿಜ ಅಂತ ರಹಸ್ಯ ಚರ್ಚೆಯ ಸಂದರ್ಭದಲ್ಲಿ ಸಿದ್ಧು-ಡಿಕೆಶಿ ಮಾತನಾಡಿಕೊಂಡಿದ್ದಾರಂತೆ.

ಮುಂದೆ ಇದೇ ರೀತಿ ಮೇಲಿಂದ ಮೇಲೆ ಸಭೆ ಸೇರಿ ಚರ್ಚಿಸುವುದು, ಆ ಮೂಲಕ ಸಿಎಂ ಗಿರಿಗೆ ಮಾರಾಮಾರಿ ಎಂಬ ಮಾತನ್ನು ಸುಳ್ಳಾಗಿಸುವುದು ಈ ಇಬ್ಬರ ಯೋಚನೆ.

ಇದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಅನ್ನುವುದನ್ನು ಕಾದು ನೋಡಬೇಕು.

ಗಮನಿಸಬೇಕಾದ ವಿಷಯವೆಂದರೆ, ಸಿದ್ಧರಾಮಯ್ಯ ಮತ್ತು ಡಿಕೆಶಿ ನಡುವಣ ಕದನಕ್ಕೆ ಬ್ರೇಕ್ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ಸೂತ್ರ ರಚಿಸಿದ್ದಾರಂತೆ. ಪಕ್ಷ ಅಧಿಕಾರಕ್ಕೆ ಬಂದರೆ ತಾನೇ ಸಿಎಂ ಗಿರಿ? ಹೀಗಾಗಿ ಮೊದಲು ಒಗ್ಗಟ್ಟಿನಿಂದ ಹೋರಾಡೋಣ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಪಕ್ಷಕ್ಕೆ ದೊಡ್ಡ ಗೆಲುವಿನ ಅಗತ್ಯವಿದೆ.

ಒಂದರ್ಥದಲ್ಲಿ 2023 ರ ವಿಧಾನಸಭಾ ಚುನಾವಣೆ  2024 ರ ಲೋಕಸಭಾ ಚುನಾವಣೆಗೂ ಮುನ್ನಿನ ಸೆಮಿಫೈನಲ್. ಇಲ್ಲಿ ಎಡವಿದರೆ ಫೈನಲ್‌ನಲ್ಲಿ ಹೋರಾಡುವ ನಮ್ಮ ಶಕ್ತಿ ಕುಗ್ಗಿ ಹೋಗುತ್ತದೆ. ಹೀಗಾಗಿ ನಮ್ಮಲ್ಲಿ ಐಕ್ಯತೆ ಇಲ್ಲ ಎಂಬ ಮೆಸೇಜು ಹೋಗುವುದು ಬೇಡ. ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅವರವರ ದುಡಿಮೆಯ ಫಲ ಸಿಕ್ಕೇ ಸಿಗುತ್ತದೆ ಎಂಬ ಖರ್ಗೆ ಮಾತು ಡಿಕೆಶಿ ಮತ್ತು ಸಿದ್ಧರಾಮಯ್ಯ ಅವರಿಗೆ ತಲುಪಿದೆ. ಅದರ ಬೆನ್ನಲ್ಲಿ ಉಭಯ ನಾಯಕರ ಮಧ್ಯೆ ನಡೆಯುತ್ತಿರುವ ರಹಸ್ಯ ಚರ್ಚೆ ಫಲಪ್ರದವಾಗುತ್ತದೆ ಎಂಬುದು ಹಲವರ ನಿರೀಕ್ಷೆ.

ಅವರ ಪ್ರಕಾರ, ಇಂತಹ ಬೆಳವಣಿಗೆ ಶುರುವಾಗುತ್ತಿದ್ದಂತೆಯೇ ಕೈ ಪಾಳೆಯದಿಂದ ಬೇರೆ ಕಡೆ ವಲಸೆ ಹೋಗಲು ಬಯಸಿದ್ದ ಹಲವರು ಈಗ ಇಲ್ಲೇ ಉಳಿಯಲು ನಿರ್ಧರಿಸಿದ್ದಾರಂತೆ.

ಆದರೆ ಇದೆಷ್ಟು ಕಾಲ? ಅನ್ನುವುದಕ್ಕೆ ಮುಂದಿನ ದಿನಗಳು ಉತ್ತರ ನೀಡಲಿವೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles