29.2 C
Bengaluru
Sunday, March 19, 2023
spot_img

ದಕ್ಷಿಣ ಗೆಲ್ಲಲು ಬಿಜೆಪಿಯ ಗೇಮ್‌ ಚೇಂಜ್!

-ನವರಂಗ್‌ಕೊಬ್ಬೆ

ಹೇಳಿ ಕೇಳಿ ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಶಕ್ತಿ. ಇಲ್ಲಿ ಬಿಜೆಪಿ ತಳವೂರಲು ಅಡ್ಡಿಯಾಗಿರುವುದು ಪ್ರಾದೇಶಿಕ ಪಕ್ಷಗಳು ಮಾತ್ರ. ಕರ್ನಾಟಕ ಹೊರತುಪಡಿಸಿ ಉಳಿದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಳೆಯ ಶಕ್ತಿ ಉಳಿಸಿಕೊಂಡಿಲ್ಲ. ಹೀಗಿರುವಾಗ ಬಿಜೆಪಿಗೆ ನೇರ ಎದುರಾಳಿಗಳು ಪ್ರಾದೇಶಿಕ ಪಕ್ಷದ ನಾಯಕರು. ಈ ನಾಯಕರು ಆಯಾ ರಾಜ್ಯಗಳಲ್ಲಿ ಪ್ರಬಲ ಜಾತಿ, ಸಮುದಾಯಗಳ ನಾಯಕರೂ ಆಗಿರುವುದರಿಂದ ಮತ್ತು ಅವರ ಕುಟುಂಬಗಳಿಗೆ ರಾಜಕೀಯ ಹಿಡಿತ ಇರುವುದರಿಂದ ಹಿಂದುತ್ವದ ಅಜೆಂಡಾ ವೋಟು ತರುತ್ತಿಲ್ಲ ಎಂಬ ಭಾವನೆ ಬಿಜೆಪಿ ಥಿಂಕ್‌ಟ್ಯಾಂಕ್‌ನಲ್ಲಿ ಮೂಡಿತ್ತು. ಹೀಗಾಗಿ ಉತ್ತರ ಭಾರತದ ರಾಜಕೀಯ ತಂತ್ರಗಳನ್ನು ಬದಿಗಿಟ್ಟು ದಕ್ಷಿಣ ದಂಡಯಾತ್ರೆಗೆ ಈ ಸಲ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ತಂತ್ರ ಇದಾಗಿದೆ.

ದೇಶದಲ್ಲಿ ಭಾರತೀಯ ಜನತಾ ಪಕ್ಷದ ವೈಭವದ ಶಕೆ ಆರಂಭವಾಗಿ ಎಂಟು ವರ್ಷಗಳು ಕಳೆದರೂ ದಕ್ಷಿಣ ಭಾರತದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಆಗಿಲ್ಲ. ಮೋದಿ-ಅಮಿತ್ ಷಾ ಜೋಡಿ ದಕ್ಷಿಣದಲ್ಲಿ ಕಮಲ ಅರಳಿಸಲು 2014ರಿಂದಲೇ ಪ್ರಯತ್ನಪಟ್ಟರೂ ಫಲ ಸಿಕ್ಕಿಲ್ಲ. ಹೀಗಿರುವಾಗ ಈ ಸಲ ದಕ್ಷಿಣ ದಂಡಯಾತ್ರೆಯನ್ನು ವಿಜಯಯಾತ್ರೆಯನ್ನಾಗಿ ಮಾಡಲು ಮತ್ತೆ ಕೇಸರಿ ಪಾಳೆಯ ರಣವ್ಯೂಹ ಬದಲಿಸಿಕೊಂಡು ಅಖಾಡಕ್ಕಿಳಿದಿದೆ. ಹೈದರಾಬಾದ್‌ನಲ್ಲಿ ನಡೆದ  ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ `ಆಪರೇಷನ್ ದಕ್ಷಿಣ್’ ಕಾರ್ಯ ಯೋಜನೆಗೆ ಶ್ರೀಕಾರ ಹಾಕಲಾಗಿದೆ. ಮುಂದಿನ ವರ್ಷ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಇರುವ ಅಧಿಕಾರ ಉಳಿಸಿಕೊಳ್ಳುವುದು, ತೆಲಂಗಾಣದಲ್ಲಿ ಅಧಿಕಾರ ಕಸಿಯುವ ಮೂಲಕ ದಕ್ಷಿಣದಲ್ಲಿ ಭದ್ರವಾಗಿ ನೆಲೆಯೂರುವುದು ಬಿಜೆಪಿಯ ಕಾರ್ಯ ಯೋಜನೆಯಾಗಿದೆ.

2014ರ ಲೋಕಸಭಾ ಚುನಾವಣೆಯು ಉತ್ತರ ಭಾರತದಲ್ಲಿ ಬಿಜೆಪಿಯ ಬೇರುಗಳನ್ನು ಹಿಂದೆಂದಿಗಿಂತಲೂ ಬಲಿಷ್ಟಗೊಳಿಸಿತ್ತು. ಪಶ್ಚಿಮ ಮತ್ತು ಮಧ್ಯ ಭಾರತದವರೆಗೂ ಈ ಬೇರುಗಳನ್ನು ಹಬ್ಬಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ವ ರಾಜ್ಯಗಳಲ್ಲೂ ನೆಲೆ ಗಟ್ಟಿಗೊಳಿಸಿಕೊಂಡಿತ್ತು. ಆದರೆ ದಕ್ಷಿಣ ಭಾರತದಲ್ಲಿ 130 ಸ್ಥಾನಗಳಿಗೆ ಕೇವಲ 26 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಅದರಲ್ಲೂ 25 ಗೆದ್ದಿದ್ದು ಕರ್ನಾಟಕದಲ್ಲಿ. ಉಳಿದ ನಾಲ್ಕು ಸ್ಥಾನ ತೆಲಂಗಾಣದಿಂದ ಬಂದಿದ್ದವು. ಹೀಗಾಗಿ ಮುಂದಿನ ವರ್ಷದ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದಕ್ಷಿಣದಲ್ಲಿ ಕಮಲ ಅರಳಿಸಲು ಹೊಸ ಕಾರ್ಯತಂತ್ರ ಹೆಣೆಯಲಾಗಿದೆ.

ಏನಿದು ಹೊಸ ತಂತ್ರ

ಹಿಂದಿ ಹಾರ್ಟ್ಲ್ಯಾಂಡ್ ಆಗಿರುವ ಉತ್ತರ ಭಾರತದಲ್ಲಿ ಬಿಜೆಪಿ ಪ್ರಖರ ಹಿಂದುತ್ವವನ್ನು ಪ್ರತಿಪಾದಿಸಿ ಭಾವನಾತ್ಮಕ ವಿಚಾರಗಳ ಮೂಲಕ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಂಡಿದೆ. 2014 ರಿಂದೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಇದು ಸಾಬೀತುಗೊಂಡಿದೆ. ಆದರೆ ಇದೇ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಹಿಂದುತ್ವದ ಅಜೆಂಡಾದ ಮೂಲಕ ಅಧಿಕಾರ ಹಿಡಿಯುವ ಬಿಜೆಪಿ ಪ್ರಯತ್ನಗಳು ನೆಲಕಚ್ಚಿವೆ. ಕರ್ನಾಟಕದಲ್ಲೂ 2014ರ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಹಿಂದು ಮತ ಬ್ಯಾಂಕ್ ಧ್ರುವೀಕರಣದಿಂದಲ್ಲ. ಸ್ಥಳೀಯ ನಾಯಕತ್ವದ ವರ್ಚಸ್ಸು, ಪ್ರಭಾವ ಮತ್ತು ಆಡಳಿತ ವಿರೋಧಿ ಅಲೆಯಿಂದ ಎಂಬುದು ಕೇಸರಿ ಕಲಿಗಳಿಗೆ ಗೊತ್ತಿದೆ. ತೆಲಂಗಾಣದಲ್ಲಿ ತಕ್ಕಮಟ್ಟಿಗೆ ಹಿಂದುತ್ವ ಜಪ ಯಶಸ್ವಿಯಾದರೂ ಅಲ್ಲಿ ಭದ್ರವಾಗಿ ಬಿಜೆಪಿ ಬೇರೂರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ದಕ್ಷಿಣ ಭಾರತವನ್ನು ಗೆಲ್ಲಲು ಸ್ಥಳೀಯ ವಿಚಾರಗಳು, ನಾಯಕತ್ವ ಮತ್ತು ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುವ `ಸ್ನೇಹಯಾತ್ರೆ’ ಕಾರ್ಯತಂತ್ರ ರಚಿಸಲಾಗಿದೆ. ದಕ್ಷಿಣ ಭಾರತ ರಾಜ್ಯಗಳ ರಾಜಕಾರಣವನ್ನು ನಿಯಂತ್ರಿಸುತ್ತಿರುವ `ಕುಟುಂಬ’ ನಿಯಂತ್ರಿತ ಪ್ರಾದೇಶಿಕ ಪಕ್ಷಗಳನ್ನು ಬಲಹೀನಗೊಳಿಸುವ ಘೋಷಣೆ ಹಾಕಲಾಗಿದೆ.

ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಮುಖವಾಗಿ ಚರ್ಚೆಯಾಗಿರುವುದು ಬಿಜೆಪಿಯ `ನವ ಜಾತ್ಯಾತೀತ’ ತತ್ವದ ಕುರಿತು ಹಾಗೂ ದಕ್ಷಿಣ ರಾಜ್ಯಗಳ ಕುಟುಂಬ ರಾಜಕಾರಣದ ಬಗ್ಗೆ. `ಈಗ ನಾವು ಪ್ರತಿಪಕ್ಷದ ಸ್ಥಾನದಲ್ಲಿಲ್ಲ. ಆಡಳಿತ ಪಕ್ಷದ ಸ್ಥಾನದಲ್ಲಿದ್ದೇವೆ. ಹಾಗಾಗಿ ಇದು ಸಂಘರ್ಷ ಯಾತ್ರೆ ನಡೆಸುವ ಸಮಯವಲ್ಲ. ಬದಲಿಗೆ ಸ್ನೇಹಯಾತ್ರೆ ನಡೆಸಿ ಸಮಾಜದ ಎಲ್ಲಾ ವರ್ಗಗಳನ್ನು ತಲುಪುವ ಸಮಯ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಹೊಸ ಸಂದೇಶವನ್ನು ಇಲ್ಲಿಂದಲೇ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಗಣಕ್ಕೆ ರವಾನಿಸಿದ್ದಾರೆ.

`ಹಿಂದುಗಳು ಮಾತ್ರವಲ್ಲದೆ ಇತರ ಸಮುದಾಯದ ಬಡ, ತುಳಿತಕ್ಕೊಳಗಾದ ವರ್ಗಗಳನ್ನು ತಲುಪಬೇಕು. ಅವರಿಗಾಗಿ ಕೆಲಸ ಮಾಡಬೇಕು’ ಎಂದೂ ಮೋದಿ ಸಲಹೆ ನೀಡಿದ್ದಾರೆ. ಜೊತೆಗೆ ಕಾರ್ಯಕಾರಿಣಿಯಲ್ಲಿ `ಪರಿವಾರವಾದಿ’ ರಾಜಕೀಯ ಪಕ್ಷಗಳು ಕೇವಲ ರಾಜಕೀಯ ಸಮಸ್ಯೆ ಮಾತ್ರವಲ್ಲ. ಅದು ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಯುವಕರ ಅತಿದೊಡ್ಡ ಶತ್ರು ಎಂದು ಕೂಡಾ ಮೋದಿ ಹರಿಹಾಯುವ ಮೂಲಕ ದಕ್ಷಿಣ ಭಾರತದಲ್ಲಿ ಆಡಳಿತದಲ್ಲಿರುವ ಟಿಆರ್‌ಎಸ್, ವೈಎಸ್‌ಆರ್‌ಸಿಪಿ, ಡಿಎಂಕೆ ಹಾಗೂ ಪ್ರತಿಪಕ್ಷಗಳ ಸ್ಥಾನದಲ್ಲಿರುವ ತೆಲುಗುದೇಶಂ, ಜೆಡಿಎಸ್ ಪಕ್ಷಗಳೇ ನಮ್ಮ ರಾಜಕೀಯ ವಿರೋಧಿಗಳು ಎಂದು ಬೊಟ್ಟು ಮಾಡಿದ್ದಾರೆ.

ಹೇಳಿಕೇಳಿ ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಶಕ್ತಿ. ಇಲ್ಲಿ ಬಿಜೆಪಿ ತಳವೂರಲು ಅಡ್ಡಿಯಾಗಿರುವುದು ಪ್ರಾದೇಶಿಕ ಪಕ್ಷಗಳು ಮಾತ್ರ. ಕರ್ನಾಟಕ ಹೊರತುಪಡಿಸಿ ಉಳಿದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಳೆಯ ಶಕ್ತಿ ಉಳಿಸಿಕೊಂಡಿಲ್ಲ. ಹೀಗಿರುವಾಗ ಬಿಜೆಪಿಗೆ ನೇರ ಎದುರಾಳಿಗಳು ಪ್ರಾದೇಶಿಕ ಪಕ್ಷದ ನಾಯಕರು. ಈ ನಾಯಕರು ಆಯಾರಾಜ್ಯಗಳಲ್ಲಿ ಪ್ರಬಲ ಜಾತಿ, ಸಮುದಾಯಗಳ ನಾಯಕರೂ ಆಗಿರುವುದರಿಂದ ಮತ್ತು ಅವರ ಕುಟುಂಬಗಳಿಗೆ ರಾಜಕೀಯ ಹಿಡಿತ ಇರುವುದರಿಂದ ಹಿಂದುತ್ವದ ಅಜೆಂಡಾ ವೋಟು ತರುತ್ತಿಲ್ಲ ಎಂಬ ಭಾವನೆ ಬಿಜೆಪಿ ಥಿಂಕ್‌ಟ್ಯಾಂಕ್‌ನಲ್ಲಿ ಮೂಡಿತ್ತು. ಹೀಗಾಗಿ ಉತ್ತರ ಭಾರತದ ರಾಜಕೀಯ ತಂತ್ರಗಳನ್ನು ಬದಿಗಿಟ್ಟು ದಕ್ಷಿಣದಂಡಯಾತ್ರೆಗೆ ಈ ಸಲ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಎಲ್ಲರನ್ನೂ ಒಳಗೊಳ್ಳುವ ರಾಜಕೀಯತಂತ್ರ ಇದಾಗಿದೆ.

ಫಲ ಕೊಡುವುದೇ ಬಿಜೆಪಿ ರಣವ್ಯೂಹ

ಈವರೆಗೂ ದಕ್ಷಿಣ ಭಾರತ ಗೆಲ್ಲಲು ಬಿಜೆಪಿ ನಡೆಸಿದ ಪ್ರಯತ್ನಗಳು ವಿಫಲವಾಗಿರುವುದರಿಂದಲೇ ಹೊಸ ಪ್ರಯೋಗಗಳಿಗೆ ಆ ಪಕ್ಷ ಮುಂದಾಗಿದೆ. ಹಾಗಾದರೆ ಬಿಜೆಪಿಯ ಬದಲಾದ ರಾಜಕೀಯ ತಂತ್ರ ಫಲ ಕೊಡುವುದೇ ಎಂದರೆ ಉತ್ತರ ನೀಡುವುದು ಕಷ್ಟ. ಏಕೆಂದರೆ ಬಿಜೆಪಿಗೆ ಬೂತ್ ಮಟ್ಟದಲ್ಲಿ ಮಜುಬೂತಾದ ಕಾರ್ಯಕರ್ತರ ಪಡೆ ಇರುವುದು ಕರ್ನಾಟಕದಲ್ಲಿ ಮಾತ್ರ. ಆದಾಗ್ಯೂ ರಾಜ್ಯದ ದಕ್ಷಿಣಭಾಗದಲ್ಲಿ ಪಕ್ಷ ಸದೃಢಗೊಳಿಸುವ ಯಾವುದೇ ಪ್ರಯತ್ನಗಳು ಸಾಧ್ಯವಾಗದಿರುವುದರಿಂದ ಬಹುಮತದ ಮೂಲಕ ಅಧಿಕಾರ ಹಿಡಿಯುವ ಕನಸು ನನಸಾಗಿಲ್ಲ.

ಇನ್ನು ಹೊಸದಾಗಿ ಹುಟ್ಟಿದ ತೆಲಂಗಾಣದಲ್ಲಿ ಚಂದ್ರಶೇಖರರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ರಾಷ್ಟ್ರೀಯ ಪಕ್ಷಗಳನ್ನು ಬಲಗೊಳ್ಳಲು ಬಿಟ್ಟಿಲ್ಲ. ಬಿಜೆಪಿ ಸಾಧನೆ ಕಳೆದ ಎರಡು ಚುನಾವಣೆಗಳಲ್ಲಿಯೂ ಗಣನೀಯವಾಗೇನು ಇಲ್ಲ. 2014ರಲ್ಲಿ ಬಿಜೆಪಿ ಒಂದು ಲೋಕಸಭಾ ಸ್ಥಾನ ಗೆದ್ದು ಐದು ವಿಧಾನಸಭಾ ಸ್ಥಾನ ಗಳಿಸಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಇದು ಮೂರು ಸ್ಥಾನಕ್ಕೆ ಕುಸಿದಿತ್ತು. ಮರು ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾತ್ರ ನಾಲ್ಕು ಸ್ಥಾನ ಗಳಿಸಿದ್ದೇ ಇಲ್ಲಿಯವರೆಗಿನ ಅತಿ ಹೆಚ್ಚು ಸಾಧನೆ.ಇನ್ನು ಆಂಧ್ರ ಪ್ರದೇಶದಲ್ಲಿ ಬಿಜೆಪಿಯದು ಶೂನ್ಯ ಸಾಧನೆ. ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೂ ಗಳಿಸಿದ್ದು ನಾಲ್ಕೇ ಸ್ಥಾನ. ಕೇರಳದಲ್ಲಿ ಶೂನ್ಯ ಸಾಧನೆ. ಹೀಗಿರುವಾಗ ಬಿಜೆಪಿ ದಕ್ಷಿಣ ಭಾರತದ ಬಾಗಿಲು ತೆರೆಯಲು ನಡೆಸುತ್ತಿರುವ ಪ್ರಯತ್ನ ಎಷ್ಟರಮಟ್ಟಿಗೆ ಸಫಲವಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಬೇಕು.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles