ಮೋದಿ ನಾಡಿನ ಮೇಲೆ ದಂಡೆತ್ತಿ ಹೋದ ಕೇಜ್ರಿವಾಲ್‌ಗೆ ಕಷ್ಟ ಕಷ್ಟ…
-ಮೇರಾಜ್ ಡೇ
ಅರವಿಂದ ಕೇಜ್ರಿವಾಲ್ ಮೋದಿ ವಿರುದ್ಧ ಪರ್ಯಾಯ ನಾಯಕ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದರ ನಡುವೆಯೇ ನಿಧಾನವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ತಾವೂ ಒಂದು ಕೈ ನೋಡಲು ಸಿದ್ಧರಾಗಿದ್ದಾರೆ. ಬಿಜೆಪಿಯ ಮೈತ್ರಿಯಿಂದ ಹೊರಬಂದು ಆರ್‌ಜೆಡಿ, ಕಾಂಗ್ರೆಸ್ ಬೆಂಬಲದಿಂದ ಮತ್ತೆ ಮುಖ್ಯಮಂತ್ರಿಯಾಗಿದ್ದ ಅವರು ಪ್ರತಿಪಕ್ಷಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿಯಾಗುತ್ತಾ ತಂಡ ಕಟ್ಟಲು ಹೊರಟಿದ್ದಾರೆ. ಅರವಿಂದ ಕೇಜ್ರಿವಾಲ್ ಅವರದು ಸ್ವಚ್ಛ ರಾಜಕಾರಣ. ಅಭಿವೃದ್ಧಿಯ ಸ್ಲೋಗನ್ ಆದರೆ, ನಿತೀಶ್ ಅವರದು ಹಳೆಯ ಜನತಾ ಪರಿವಾರವನ್ನು ಒಂದುಗೂಡಿಸಬೇಕು. ಮೋದಿಗೆ ಸೆಡ್ಡು ಹೊಡೆದು ದೇಶ ರಕ್ಷಿಸಬೇಕು ಎಂಬ ಅದೇ ಹಳಸಲು ಡೈಲಾಗ್ ಆಗಿದೆ. ಕೇಜ್ರಿ-ನಿತೀಶ್ ನಿಜಕ್ಕೂ ಮೋದಿಯವರನ್ನು ಹಿಮ್ಮೆಟ್ಟಿಸುವ ಶಕ್ತಿ ಗಳಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕು.

2024ಕ್ಕೆ ಹೊಸ ಮುಖ ನೋಡಲು ಜನ ಬಯಸುತ್ತಿದ್ದಾರೆ. ಇದಾಗಲೇ ಬದಲಾಗದ ಭ್ರಷ್ಟಾಚಾರ ವ್ಯವಸ್ಥೆ, ಬಡತನ ರೇಖೆ, ನಿವಾರಣೆಯಾಗದ ನಿರುದ್ಯೋಗ, ಮೇಲಕ್ಕೇರದ ರೂಪಾಯಿ ಮೌಲ್ಯದಿಂದಾಗಿ ಜನ ರೋಸಿ ಹೋಗಿದ್ದಾರೆ ಎಂಬುದು ದೇಶದ ವಿಪಕ್ಷಗಳ ಆರೋಪ ಮತ್ತು ಪ್ರತಿಪಾದನೆ. ದೇಶಪ್ರೇಮ, ಧರ್ಮ ದಂಗಲ್ ಆಡಳಿತದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಮತ್ತೆ ಬದಲಾವಣೆ ಬಯಸಿದ್ದಾರೆ. ಮೋದಿ ಬಿಟ್ಟು ಯಾರು, ಮೋದಿಯನ್ನು ಮೆಟ್ಟಿ ನಿಲ್ಲೋ ಶಕ್ತಿ ಯಾರಿಗಿದೆ? ಎಂದು ಹುಡುಕಾಟ ನಡೆಸಿದ್ದಾರೆ ಎಂಬುದು ಒಂದು ವರ್ಗದ ರಾಜಕೀಯ ವಿಶ್ಲೇಷಕರ ಅಭಿಮತ. ಇದೇ ವಿಶ್ಲೇಷಕರು ಈಗ ಮೋದಿಗೆ ಅಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಸರಿಸಾಟಿ ಎನ್ನತೊಡಗಿದ್ದಾರೆ.
ಹೌದು. ಇದೀಗ ನಾನಾ ಬ್ರಹ್ಮಾಸ್ತ್ರಗಳನ್ನು ಹಿಡಿದು ಆಪ್ ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವುದು ನೋಡಿದರೆ ಹೀಗೆ ಅನಿಸತೊಡಗಿರುವುದರಲ್ಲಿ ಅಸಹಜವೇನು ಇಲ್ಲ ಎಂಬಂತೆಯೇ ತೋರುತ್ತದೆ. ಅದರಲ್ಲೂ ಒಂದೊಂದೇ ರಾಜ್ಯದಲ್ಲಿ ತನ್ನ ಅಧಿಕಾರ ಸ್ಥಾಪಿಸಿ ಬರುತ್ತಿರುವ ಆಪ್ ಇದೀಗ ಮೋದಿ ತವರು ಗುಜರಾತ್‌ನಲ್ಲೇ ಸೆಟೆದು ನಿಂತು ಅಖಾಡಕ್ಕೆ ಧುಮುಕಿದೆ. ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಖಾತೆ ತೆರೆಯಲು ನೋಡುತ್ತಿದೆ. ಒಂದು ವೇಳೆ ಗುಜರಾತ್‌ನಲ್ಲಿ ಖಾತೆ ತೆರೆದರೆ ಅಲ್ಲಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದೊರೆತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಳಿಯೋದು ನಿಶ್ಚಿತವಾಗಿದೆ. ಅಷ್ಟೇ ಅಲ್ಲ ಮಮತಾ ಬ್ಯಾನರ್ಜಿ, ನಿತೀಶ್‌ಕುಮಾರ್, ಕೆಸಿಆರ್ ಇವರೆಲ್ಲರನ್ನೂ ಹಿಂದಿಕ್ಕಿ ಅರವಿಂದ್ ಕೇಜ್ರಿವಾಲ್ ಮುಂದಿನ ಸ್ಥಾನದಲ್ಲಿ ನಿಂತಿದ್ದಾರೆ. ಆದರೆ ಇವತ್ತು ಅರವಿಂದ್ ಕೇಜ್ರಿವಾಲ್ ಅವರ ಇಮೇಜ್ ಹೆಚ್ಚೋಕೆ ದಾರಿ ಮಾಡಿರೋದೇ ಬಿಜೆಪಿ ಎಂದರೆ ತಪ್ಪಾಗಲಾರದು.
ಅಸಲಿಗೆ ಮೊನ್ನೆ ಮೊನ್ನೆವರೆಗೂ ಏನೇನೂ ಅಲ್ಲದ ಅರವಿಂದ್ ಕೇಜ್ರಿವಾಲ್ ಅವರನ್ನು ಇದೀಗ ಪ್ರಧಾನಿಯ ಪ್ರತಿಸ್ಪರ್ಧಿಯಾಗಿ ಜನ ನೋಡಲು ಬಯಸುತ್ತಿದ್ದಾರೆ. ಮೊದಲೇ ಹೇಳಿದಂತೆ ಇದಕ್ಕೆ ಕಾರಣ ಬಿಜೆಪಿಯೇ. ಇದಾಗಲೇ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅದೆಷ್ಟು ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆದು ಸರ್ಕಾರಗಳು ಉರುಳಿಹೋಗಿದೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಬಿಹಾರದಲ್ಲಿ ನಿತೀಶ್ ಜಂಟಿ ಸರ್ಕಾರ ಮಾಡಿದ್ದ ಬಿಜೆಪಿಗೆ ಯಾವ ಭ್ರಷ್ಟಾಚಾರವೂ ಕಾಣಲಿಲ್ಲ, ಯಾವ ತಕರಾರು ಇರಲಿಲ್ಲ. ಆದರೆ ಅದ್ಯಾವಾಗ ನಿತೀಶ್ ಬಿಜೆಪಿ ಕೈ ಬಿಟ್ಟು ರಾಷ್ಟ್ರೀಯ ಜನತಾದಳ ಜೊತೆ ಕೈ ಜೋಡಿಸಿದರೋ ಇದೀಗ ಅಲ್ಲೂ ಕೂಡ ಸರ್ಕಾರ ಉರುಳಿಸುವ ಬಿಜೆಪಿಯ ಕಾರ್ಯಾಚರಣೆ ಶುರುವಾಗಿದೆ. ಹೀಗೆ ಎಲ್ಲಾ ಕಡೆ ಸಿಬಿಐ ಐಟಿ ದಾಳಿಗಳ ಮೂಲಕ ಹೆದರಿಸಿ ಬೆದರಿಸಿ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಉರುಳಿಸುವ ಪ್ಲಾನ್ ಆಪ್ ವಿಚಾರದಲ್ಲಿ ಉಲ್ಟಾ ಹೊಡೆದುಬಿಟ್ಟಿದೆ. ಅಷ್ಟೇ ಅಲ್ಲ ಬಿಜೆಪಿ ತನ್ನ ಕೈಯ್ಯಾರೆ ಆಪ್ ಪಕ್ಷದ ಸಾಚಾತನವನ್ನು ದೇಶದ ಮುಂದೆ ಬಹಿರಂಗಗೊಳಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೇಜ್ರಿವಾಲ್ ಇದೀಗ ಬಿಜೆಪಿಯನ್ನು ಕಠಿಣಾತಿ ಕಠಿಣ ಮಾತುಗಳಿಂದ ನಿಂದಿಸೋ ಮೂಲಕ ಆರೋಪಗಳ ಸುರಿಮಳೆ ಸುರಿಸುವ ಮೂಲಕ ಮೋದಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ನೇರ ವಿಷಯಕ್ಕೆ ಬರೋದಾದರೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ವಿರೋಧಿ ಸರ್ಕಾರವನ್ನು ಕಿತ್ತೊಗೆದು ತನ್ನ ಸರ್ಕಾರವನ್ನು ಸ್ಥಾಪಿಸಿಕೊಂಡು ಬರುತ್ತಿರುವ ಬಿಜೆಪಿಗೆ ಖುದ್ದು ಕೇಂದ್ರಾಡಳಿತ ಇರುವ ದೆಹಲಿಯಲ್ಲೇ ಇನ್ನೂ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ದಿನೇ ದಿನೇ ಆಪ್ ಪಕ್ಷದ ವರ್ಚಸ್ಸು ಹೆಚ್ಚುತ್ತಿರುವುದು ಹಾಗೂ ಒಂದೊಂದೇ ರಾಜ್ಯಗಳಲ್ಲಿ ಪಕ್ಷ ವಿಸ್ತರಣೆ ಆಗುತ್ತಿರುವುದು ಬಿಜೆಪಿಯ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಇದಲ್ಲದೇ ಯಾವಾಗ ವಿಶ್ವದ ಪ್ರಮುಖ ಪತ್ರಿಕೆಗಳಲ್ಲಿ ಆಪ್ ಪಕ್ಷವನ್ನು ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಗಿರುವ ಸುಧಾರಣೆಗಾಗಿ ಉಪ ಮುಖ್ಯಮಂತ್ರಿ ಸಿಸೋಡಿಯಾರನ್ನು ಹೊಗಳಲಾಯಿತೋ ಆಗ ಬಿಜೆಪಿಯ ಕಣ್ಣು ಇನ್ನಷ್ಟು ಕೆಂಪಗಾಗಿದೆ. ಹಾಗಾಗಿ ನೂತನ ಅಬಕಾರಿ ನೀತಿ ವಿಚಾರದಲ್ಲಿ ತಗಾದೆ ತೆಗೆದು ಸಿಬಿಐ ದಾಳಿ ನಡೆಸುವುದರ ಜೊತೆಗೆ ಒಳಗೊಳಗೇ ಆಪ್ ಪಕ್ಷದ ಶಾಸಕರನ್ನು ಖರೀದಿ ಮಾಡಿ ಕೇಜ್ರಿವಾಲ್ ಪಕ್ಷವನ್ನು ಕಿತ್ತೊಗೆಯೋಕೆ ಮುಂದಾದ ಬಿಜೆಪಿಗೆ ಗರ್ವಭಂಗವಾಗಿದೆ. ಅಷ್ಟೇ ಅಲ್ಲ ಬಿಜೆಪಿಯ ಈ ಪ್ರಯತ್ನದಿಂದಾಗಿ ಆಪ್ ಸರ್ಕಾರದ್ದು ಮಾತ್ರವಲ್ಲ ದೇಶದಲ್ಲೇ ಪಕ್ಷದ ಇಮೇಜ್ ಹೆಚ್ಚಿಸೋಕೆ ಕಾರಣವಾಗಿಬಿಟ್ಟಿದೆ ಎನ್ನುತ್ತಿದ್ದಾರೆ ಎಡಬದಿಯ ರಾಜಕೀಯ ಚಿಂತಕರು.
`ಕ್ಲೀನ್’ ಎಂದು ಸಾಬೀತುಪಡಿಸಿಕೊಂಡ ಆಪ್!!
ದೆಹಲಿಯಲ್ಲಿ ಆಪ್ ಸರ್ಕಾರ ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿಗೆ ತಂದ ನೂತನ ಅಬಕಾರಿ ನೀತಿಗೆ ಸಂಬಂಧಿಸಿದಂತೆ ತನಿಖಾಸಂಸ್ಥೆ ಭ್ರಷ್ಟಾಚಾರದ ಆರೋಪದಡಿ ಸ್ವಯಂ ದೂರು ದಾಖಲಿಸಿಕೊಂಡು ಕಳೆದ ತಿಂಗಳು ಏಕಾಏಕಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮನೆ ಸಿಬಿಐ ದಾಳಿ ನಡೆಸಿತ್ತು. ಈ ಮೂಲಕ ಬಿಜೆಪಿ ಆಪ್ ಪಕ್ಷವನ್ನು ಭ್ರಷ್ಟ ಸರ್ಕಾರ ಎಂದು ಬಿಂಬಿಸಲು ಹೋಗಿ ಇದೀಗ ಕ್ಲೀನ್ ಇಮೇಜ್ ದೊರೆಯುವಂತೆ ಮಾಡಿದೆ. ಸಿಸೋಡಿಯಾ ಮನೆ ಹಾಗೂ ಬ್ಯಾಂಕರ್ ಸೇರಿ 31 ಸ್ಥಳಗಳಲ್ಲಿ ದಾಳಿ ನಡೆಸಿರುವ ಸಿಸಿಬಿಗೆ ಏನೆಂದರೆ ಏನೂ ಸಿಕ್ಕಿಲ್ಲ. ಇದರಿಂದ ಸಿಸಿಬಿಗಷ್ಟೇ ಅಲ್ಲ ಬಿಜೆಪಿಗೂ ತೀವ್ರತರವಾಗಿ ಮುಖಭಂಗ ಉಂಟಾಗಿದ್ದಲ್ಲದೇ ತಮ್ಮ ಕೈಯ್ಯಾರೆ ಅಮ್ ಆದ್ಮಿ ಪಕ್ಷದ ಸಾಚಾತನವನ್ನು ಪ್ರದರ್ಶಿಸುವಂತಾಗಿತ್ತು. ಪ್ರತಿ ಬಾರಿಯೂ ಸಿಸಿಬಿ ಹಾಗೂ ಐಟಿ ದಾಳಿಗಳ ಮೂಲಕ ಎದುರಾಳಿಗಳ ಜಂಘಾಬಲವನ್ನೇ ಉಡುಗುವಂತೆ ಮಾಡುತ್ತಿದ್ದ ಮೋದಿಯ ಪ್ಲಾನ್ ಆಪ್ ವಿಚಾರದಲ್ಲಿ ಎಲ್ಲವೂ ತಲೆಕೆಳಕಾಗಿದೆ.

ಹೀಗೆ ಭ್ರಷ್ಟಾಚಾರದ ಆರೋಪ ಹೊರೆಸಿದ್ದ ಬೆನ್ನಲ್ಲೇ ಆಪ್ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ನೋಡಿತ್ತು. ಅತ್ತ ಸಿಬಿಐ ದಾಳಿ ತೋರಿಸಿ ಹೆದರಿಸಿ ಇತ್ತ ಆಪ್‌ನ 4 ಶಾಸಕರಿಗೆ 20 ಕೋಟಿ ರೂಪಾಯಿಯ ಆಮಿಷವೊಡ್ಡಿ ಸೆಳೆಯಲು ಮುಂದಾಗಿತ್ತು. ಇತರರನ್ನೂ ಬಿಜೆಪಿಗೆ ಕರೆದು ಸರ್ಕಾರ ರಚಿಸುವ ತಂತ್ರ ಹೂಡಿತ್ತು. ತಕ್ಷಣವೇ ಎಚ್ಚೆತ್ತಿದ್ದ ಅರವಿಂದ್ ಕೇಜ್ರಿವಾಲ್ ಸಿಬಿಐ ಕತ್ತಿ ತಲೆ ಮೇಲೆ ತೂಗುತ್ತಿದ್ದರೂ ಏಕಾಏಕಿ ಬಿಜೆಪಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಲೇ ಬಹಿರಂಗ ಸಮರ ಘೋಷಿಸಿದರು. `ಸಿಬಿಐ ದಾಳಿ ಮೂಲಕ ಮನೀಷ್ ಸಿಸೋಡಿಯಾರನ್ನು ಹೆದರಿಸಿದ್ದು ಸಾಕಾಗದೇ ಇದೀಗ ಶಾಸಕರ ಖರೀದಿಗೆ ಇಳಿದಿದ್ದೀರಾ. ಸರ್ಕಾರ ಉರುಳಿಸಲು ನೋಡ್ತಿದ್ದೀರಾ. ನಿಮ್ಮ ಆಟ ನಡೆಯದು. ನಮಗೂ ರಣತಂತ್ರಗಳು ಗೊತ್ತಿದೆ’ ಎಂದು ಹೇಳಿ ಏಕಾಏಕಿ ವಿಶ್ವಾಸ ಮತ ಸಾಬೀತು ಮಾಡಿಬಿಟಿದ್ದಾರೆ. ಇನ್ನಾರು ತಿಂಗಳು ಬಿಜೆಪಿ ತಮ್ಮ ಸರ್ಕಾರವನ್ನು ಟಚ್ ಮಾಡದಂತೆ ಲಕ್ಷ್ಮಣ ರೇಖೆ ಎಳೆದುಬಿಟ್ಟಿದ್ದಾರೆ.
ಇನ್ನು ಯಾವೆಲ್ಲಾ ಆಪ್ ಶಾಸಕರಿಗೆ ಆಮಿಷವೊಡ್ಡಲಾಗಿತ್ತೋ ಅವರನ್ನೆಲ್ಲಾ ಒಟ್ಟಿಗೆ ಕೂರಿಸಿಕೊಂಡು ಪತ್ರಿಕಾಗೊಷ್ಠಿ ನಡೆಸಿ ಕೇಜ್ರಿವಾಲ್ ಬಿಜೆಪಿಯ ಕುತಂತ್ರವನ್ನು ಬಹಿರಂಗಪಡಿಸಿದ್ದೂ ಅಲ್ಲದೇ `ಬಿಜೆಪಿಯೇತರ ಸರ್ಕಾರ ಉರುಳಿಸಲು 6,300 ಕೋಟಿ ರೂ. ಖರ್ಚು ಮಾಡಲಾಗಿದೆ. ಮೋದಿ ಪಟ್ಟಣದಲ್ಲಿರುವ ಸೀರಿಯಲ್ ಕಿಲ್ಲರ್’ ಎಂದು ಬಹಳ ಕಠಿಣವಾಗಿಯೇ ಹರಿಹಾಯ್ದಿದ್ದಾರೆ. ನಮ್ಮವರು ಯಾರೂ ಭ್ರಷ್ಟರಲ್ಲ ಎಂದು ಸಮರ್ಥಿಸಿಕೊಳ್ಳುವ ಮೂಲಕ ತಾವೇ ವಿಶ್ವಾಸಮತ ಸಾಬೀತಿಗೆ ಮುಂದಾಗಿ ಅದರಲ್ಲೂ ಗೆದ್ದು ತಮ್ಮ ಸರ್ಕಾರದ ಬಲಿಷ್ಠತೆಯನ್ನು ಸಾಬೀತುಪಡಿಸಿಕೊಂಡಿದ್ದಾರೆ. ಅತ್ತ ಬಿಜೆಪಿಯ ಸಿಬಿಐ ದಾಳಿಯ ತಂತ್ರವೂ ಫಲಿಸಲಿಲ್ಲ. ಇತ್ತ ಆಪರೇಷನ್ ಕಮಲದ ಕುತಂತ್ರವೂ ನಡೆಯಲಿಲ್ಲ ಎನ್ನುವಂತಾಗಿದೆ ಎಂದು ಕೇಜ್ರಿವಾಲ್ ಹೇಳಿಕೊಳ್ಳುತ್ತಿದ್ದಾರೆ.
ಇಮೇಜ್ ಹೆಚ್ಚಿಸಿಕೊಂಡ ಕೇಜ್ರಿವಾಲ್!!
ಕಳೆದ ತಿಂಗಳಾಂತ್ಯದಲ್ಲಿ ನಡೆದ ಸಿಬಿಐ ದಾಳಿಯ ಹೈಡ್ರಾಮಾದಿಂದ ಬಿಜೆಪಿಗೆ ಮುಜುಗರವಾಗಿರುವುದು ನಿಜ. ಆದರೆ ಕೇಜ್ರಿವಾಲ್ ಇಮೇಜ್ ಹೆಚ್ಚಳವಾಗಿದೆ. ಇದಾಗಲೇ 2024ರ ಲೋಕಸಭಾ ಚುನಾವಣೆಗೆ ಕೇಜ್ರಿವಾಲ್ ಹಂತ ಹಂತವಾಗಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಅವರು ತಂದ ಶೈಕ್ಷಣಿಕ ಯೋಜನೆ ಸೇರಿದಂತೆ ಜನಪ್ರಿಯ ಯೋಜನೆಗಳು ಉನ್ನತ ವಿದೇಶ ಪತ್ರಿಕೆಗಳಲ್ಲಿ ಮೊದಲ ಪುಟದಲ್ಲೇ ವರದಿಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ಇಡೀ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಸಲೆಂದೇ ಬಿಜೆಪಿ ಮಾದರಿಯಲ್ಲೇ ಸೋಷಿಯಲ್ ಮೀಡಿಯಾವನ್ನು ಹೊರಗಿನವರ ಕೈಯ್ಯಲ್ಲಿ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಇಷ್ಟೆಲ್ಲಾ ಬಿಜೆಪಿ ಸರ್ಕಾರದ ರದ್ಧಾಂತದ ನಡುವೆ ಸರ್ಕಾರದಿಂದಲೇ ಬಾರ್ ನಡೆಸೋಕೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲ ಗಣೇಶ ಹಬ್ಬದ ದಿನವೇ ದೇಶದ ಮೊದಲ ವರ್ಚುಯಲ್ ಶಾಲೆ ಆರಂಭಿಸಿದ್ದಾರೆ. ಮೋದಿಯಂತೆಯೇ ದೇಶಪ್ರೇಮದ ಹೆಸರಿನಲ್ಲೇ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಪ್ರತಿಯೊಬ್ಬ ಮಗುವಿಗೂ ಮೂಲ ಶಿಕ್ಷಣ ದೊರೆಯದೇ ಭಾರತ ವಿಶ್ವದಲ್ಲಿ ನಂ. 1 ರಾಷ್ಟ್ರ ಆಗುವುದಿಲ್ಲ ಅನ್ನುವ ಹೇಳಿಕೆಯೇ ಇದಕ್ಕೆ ಸಾಕ್ಷಿಯಾಗಿದೆ.
ಹೀಗೆ ನಾನಾ ಜನಪ್ರಿಯ ಯೋಜನೆಗಳ ಮೂಲಕ ಇಮೇಜ್ ಹೆಚ್ಚಿಸಿಕೊಳ್ಳುತ್ತಿರುವ ಕೇಜ್ರಿವಾಲ್ ಮೋದಿಯ ತವರಿನಲ್ಲೇ ಸೆಟೆದು ನಿಂತಿದ್ದಾರೆ. ಮೋದಿಯ ಆಪರೇಷನ್ ಕಮಲ, ಶಾಸಕರ ಖರೀದಿಗೆ ಬಳಸುತ್ತಿರುವ ಹಣದ ಮೂಲಗಳನ್ನು ಕೆದಕುತ್ತಲೇ ಇದೀಗ ಮೋದಿ ವಿರುದ್ಧ ತೊಡೆ ತಟ್ಟಿ ಅಖಾಡಕ್ಕಿಳಿದಿದ್ದಾರೆ. ಮತ್ತೊಂದು ಕಡೆ ಮಹಾಘಟಬಂಧನ್ ಮೂಲಕ ನಾನಾ ನಾಯಕರು ಮೋದಿಗೆ ಪ್ರತಿಸ್ಪರ್ಧಿ ಆಗಲು ಸಜ್ಜಾಗಿದ್ದರೂ ಅವರೆಲ್ಲರಿಗಿಂತ ಒಂದು ಕೈ ಮೇಲೆ ಎನ್ನುವಂತೆ ತಮ್ಮನ್ನು ತಾವು ಬಿಂಬಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಆಪರೇಷನ್ ಕಮಲಕ್ಕೆ ನಾನಾ ರಾಜ್ಯಗಳ ಸರ್ಕಾರಗಳು ಉರುಳಿ ಹೋಗಿದ್ದರೂ ಆಪ್ ಸರ್ಕಾರ ದಿಟ್ಟವಾಗಿ ನಿಂತಿರುವುದು ಕೇಜ್ರಿವಾಲ್ ಅವರ ಮೈಲೇಜ್ ಹೆಚ್ಚುವಂತೆ ಮಾಡಿದೆ. ಹಾಗಾಗಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಅವರಿಗೆ ಸೆಡ್ಡೊಡೆಯುವ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದು ಪರ್ಯಾಯ ನಾಯಕನಾಗುವತ್ತ ಹೆಜ್ಜೆ ಇರಿಸಿದ್ದಾರೆ. ಇಷ್ಟು ದಿನ ಮೋದಿಗೆ ಸರಿಸಮನಾರಿದ್ದಾರೆ ಎಂದು ಕೇಳಿಕೊಳ್ಳುತ್ತಿದ್ದ ಜನರಿಗೆ ಈಗ ಉತ್ತರವಾಗಿದ್ದಾರೆ. ಆದರೂ ಗುಜರಾತ್ ಚುನಾವಣೆಯಲ್ಲಿ ಆಪ್ ಪಕ್ಷದ ಸಾಧನೆಯ ಮೇಲೆ ಅರವಿಂದ್ ಕೇಜ್ರಿವಾಲ್ ಅವರ ಮುಂದಿನ ಭವಿಷ್ಯ ಅಡಗಿರೋದಂತೂ ಸುಳ್ಳಲ್ಲ. ಆದರೆ ಇವತ್ತಿನ ಆಪ್ ಸರ್ಕಾರದ ಮೈಲೇಜ್ ಹೆಚ್ಚಾಗೋಕೆ ಬಿಜೆಪಿಯೇ ಕಾರಣವಾಗಿದ್ದು ಮಾತ್ರ ನಿಜಕ್ಕೂ ಖೇದನೀಯ ಎನ್ನುತ್ತಿದ್ದಾರೆ ಕೆಲ ದೆಹಲಿ ಪತ್ರಕರ್ತರು.
ರೇಸ್‌ನಲ್ಲಿ ನಿತೀಶ್‌ಕುಮಾರ್

ಅರವಿಂದ ಕೇಜ್ರಿವಾಲ್ ಮೋದಿ ವಿರುದ್ಧ ಪರ್ಯಾಯ ನಾಯಕ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದರ ನಡುವೆಯೇ ನಿಧಾನವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ತಾವೂ ಒಂದು ಕೈ ನೋಡಲು ಸಿದ್ಧರಾಗಿದ್ದಾರೆ. ಬಿಜೆಪಿಯ ಮೈತ್ರಿಯಿಂದ ಹೊರಬಂದು ಆರ್‌ಜೆಡಿ, ಕಾಂಗ್ರೆಸ್ ಬೆಂಬಲದಿಂದ ಮತ್ತೆ ಮುಖ್ಯಮಂತ್ರಿಯಾಗಿದ್ದ ಅವರು ಪ್ರತಿಪಕ್ಷಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿಯಾಗುತ್ತಾ ತಂಡ ಕಟ್ಟಲು ಹೊರಟಿದ್ದಾರೆ. ಅರವಿಂದ ಕೇಜ್ರಿವಾಲ್ ಅವರದು ಸ್ವಚ್ಛ ರಾಜಕಾರಣ. ಅಭಿವೃದ್ಧಿಯ ಸ್ಲೋಗನ್ ಆದರೆ, ನಿತೀಶ್ ಅವರದು ಹಳೆಯ ಜನತಾ ಪರಿವಾರವನ್ನು ಒಂದುಗೂಡಿಸಬೇಕು. ಮೋದಿಗೆ ಸೆಡ್ಡು ಹೊಡೆದು ದೇಶ ರಕ್ಷಿಸಬೇಕು ಎಂಬ ಅದೇ ಹಳಸಲು ಡೈಲಾಗ್ ಆಗಿದೆ. ಕೇಜ್ರಿ-ನಿತೀಶ್ ನಿಜಕ್ಕೂ ಮೋದಿಯವರನ್ನು ಹಿಮ್ಮೆಟ್ಟಿಸುವ ಶಕ್ತಿ ಗಳಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕು.