-ಶೌರ್ಯ ಡೆಸ್ಕ್
ಸಾಮಾಜಿಕ ಕಾರ್ಯಕರ್ತೆ, ಉತ್ತರ ಕರ್ನಾಟಕ ನೆಲದ ಸೊಗಡಿನ ಬರಹಗಾರ್ತಿ ಶೋಭಾ ಗುನ್ನಾಪೂರ ಅವರ ಚೊಚ್ಚಲ ಕಥಾ ಸಂಕಲನ `ಭೂಮಿಯ ಋಣ’ ಅಚ್ಚಿನ ಮನೆ ತಲುಪಿ ಓದುಗರ ಕೈ ತಲುಪಲು ಸಿದ್ಧಗೊಂಡಿದೆ. ಇದೇ ಅಕ್ಟೋಬರ್ 16 ರಂದು ಭಾನುವಾರ ಬೆಳಿಗ್ಗೆ 10:30 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ.

ವೈಷ್ಣವಿ ಪ್ರಕಾಶನ ಹೊರತಂದಿರುವ `ಭೂಮಿಯ ಋಣ’ ಕಥಾಸಂಕಲನ ಸಾಮಾಜಿಕ ನ್ಯಾಯಕ್ಕಾಗಿ ವಕೀಲರು, ಕರ್ನಾಟಕ ಸಹಯೋಗದಲ್ಲಿ ಬಿಡುಗಡೆಯಾಗಲಿದೆ. ಹಿರಿಯ ಸಾಹಿತಿ, ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಖ್ಯಾತ ಲೇಖಕ ಡಾ. ನಟರಾಜ ಹುಳಿಯಾರ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಎಂ.ಎಸ್. ಆಶಾದೇವಿ ಅವರು ಭಾಗವಹಿಸಲಿದ್ದು ಕೃತಿ ಕುರಿತು ಮಾತನಾಡಲಿದ್ದಾರೆ. ವೈಷ್ಣವಿ ಪ್ರಕಾಶನದ ಮುದಿರಾಜ್ ಬಾಣದ್ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಸಂಪರ್ಕಕ್ಕೆ: ಸುನಿಲ್ ಗುನ್ನಾಪೂರ, ವಕೀಲರು, ಬೆಂಗಳೂರು 7411752587, ಅನಿಲ್ ಗುನ್ನಾಪೂರ 7406481629
ಲೇಖಕಿ ಪರಿಚಯ

ಶೋಭಾ ಗುನ್ನಾಪೂರ ಊರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ. 1969ರಲ್ಲಿ ಜನನ. ಕೃಷಿ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಬರವಣಿಗೆಗೆ ತೊಡಗಿಸಿಕೊಂಡಿದ್ದು ಇತ್ತೀಚೆಗೆ. ಓದಿದ್ದು ಒಂಬತ್ತನೇ ತರಗತಿಯ ತನಕ.
ಹಿರೇಮಸಳಿ ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘಗಳು ಅಭಿವೃದ್ಧಿ ಹೊಂದುವಲ್ಲಿ ಮಹತ್ವದ ಪಾತ್ರ ವಹಿಸಿದ ಇವರಿಗೆ 2019 ರಲ್ಲಿ ಪಂಜಾಬಿನ ಸಾಮಾಜಿಕ ಹೋರಾಟಗಾರ್ತಿ ಹಾಗೂ ಆಧ್ಯಾತ್ಮಿಕ ರಂಗದಲ್ಲಿ ಸಾಧನೆಗೈದ ‘ಮಾತಾ ಖೀವಿ’ ಹೆಸರಿನಲ್ಲಿ ನೀಡುವ ‘ಮಾತಾ ಖೀವಿ ಪ್ರಶಸ್ತಿ’ ಲಭಿಸಿದೆ. ಸಂಯುಕ್ತ ಕರ್ನಾಟಕ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ.
ಸೋಬಾನೆ ಪದ, ಜಾನಪದ ಮತ್ತು ತೊಟ್ಟಿಲು ಕಾರ್ಯಕ್ರಮದ ಹಾಡುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ.
‘ಭೂಮಿಯ ಋಣ‘ ಇವರ ಚೊಚ್ಚಲ ಕಥಾಸಂಕಲನ.