ಮಹಾನಗರಗಳ ದೈತ್ಯಾಕಾರ ಜನರ ಬದುಕು ವಿಕಾರ
-ಕೇಶವರೆಡ್ಡಿ ಹಂದ್ರಾಳ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ಆಡಳಿತ ವ್ಯವಸ್ಥೆ ಅತ್ಯಂತ ಗಂಭೀರವಾಗಿ ಈ ಬಗ್ಗೆ ಸಮಾಲೋಚನೆ ನಡೆಸಿ ಶೀಘ್ರವಾಗಿ ಆ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕು. ಇಲ್ಲವಾದಲ್ಲಿ ಬೆಂಗಳೂರು ಅತ್ಯಂತ ಕೆಟ್ಟ ಪರಿಣಾಮಗಳನ್ನು ಎದುರಿಸುವ ದಿನಗಳು ದೂರದಲ್ಲಿಲ್ಲ. ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಮತ್ತು ಅಗತ್ಯ ಬಿದ್ದರೆ ಕೇಂದ್ರ ಸರ್ಕಾರದ ಇಲಾಖೆಗಳಾದ ರೈಲ್ವೆ ಮತ್ತು ಸೇನಾ ಇಲಾಖೆಗಳು ಅತ್ಯಂತ ಸಾಮರಸ್ಯದಿಂದ ಸಮಸ್ಯೆಗಳನ್ನು ಅಧ್ಯಯನ ನಡೆಸಿ ಅಂಥ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುನ್ನಡೆಯಬೇಕಾಗಿದೆ. ಮುಂಬೈ, ದೆಹಲಿ, ನಾಗಪುರಗಳಲ್ಲಿ ಅಭಿವೃದ್ಧಿಪಡಿಸಿದಂತೆ ಇಲ್ಲಿಯೂ ಮೆಟ್ರೋ ರೈಲು ವ್ಯವಸ್ಥೆಯನ್ನು ಬೆಂಗಳೂರಿನ ಉದ್ದಗಲಕ್ಕೂ ವಿಸ್ತರಿಸಬೇಕಾಗಿದೆ. ಮೆಟ್ರೋ ರೈಲು ಸಂಚಾರ ಸೇವೆಯನ್ನು ಬೆಂಗಳೂರಿನಲ್ಲಿ ವಿಸ್ತೃತವಾಗಿ ಅಭಿವೃದ್ಧಿಪಡಿಸಬೇಕಾದರೆ ದೀರ್ಘಾವಧಿ ಸಮಯವನ್ನು ತೆಗೆದುಕೊಂಡರೂ ಮುಂದಿನ ದಿನಗಳಲ್ಲಿ ಅದು ಬೆಂಗಳೂರಿನ ಜನತೆಗೆ ಒಂದು ವರವಾಗಿ ಪರಿಣಮಿಸುವುದರಲ್ಲಿ ಖಂಡಿತವಾಗಿಯೂ ಸಂಶಯವಿಲ್ಲ. ಇದಕ್ಕೆ ಬೇಕಾಗುವ ಪೂರ್ವ ಸಿದ್ಧತೆಗಳನ್ನು ಸರ್ಕಾರ ಆದಷ್ಟು ಶೀಘ್ರವಾಗಿ ಮಾಡಿಕೊಳ್ಳಬೇಕಾಗಿದೆ. ಇನ್ನು ಅಲ್ಪಾವಧಿಯ ಕ್ರಮಗಳೆಂದರೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಮತ್ತು ನಿಷ್ಠೆಯಿಂದ ಸನ್ನದ್ಧರಾಗಬೇಕು. ಕಾಲಕಾಲಕ್ಕೆ ಪೊಲೀಸ್ ಮೇಲಾಧಿಕಾರಿಗಳು ಜನಸಂದಣಿ ಅಧಿಕವಾಗಿರುವ ಪ್ರದೇಶಗಳಲ್ಲಿ ತಿರುಗಾಡಿ ಸಮಸ್ಯೆಗಳನ್ನು ತಿಳಿಗೊಳಿಸಲು ಪ್ರಯತ್ನಿಸಬೇಕು. ಈಗಿರುವ ಬಸ್ ಸ್ಟಾಪ್‌ಗಳನ್ನು ಸಿಗ್ನಲ್ ಮತ್ತು ವೃತ್ತಗಳಿಂದ ಮುಕ್ತಿಗೊಳಿಸಬೇಕು. ಮೇಲ್ಸೇತುವೆಗಳ ಸಂಪರ್ಕಗಳನ್ನು ಸರಿಪಡಿಸಿ ಸಂಚಾರವನ್ನು ಸುಗಮಗೊಳಿಸುವುದು ಇಂದಿನ ತುರ್ತಾಗಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳೂ ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ.

“ಸಾರಿ ಬರ್ತಾ ಇದ್ದೀನಿ ಇನ್ನೊಂದರ್ಧ ಗಂಟೆ, ಇಲ್ಲಿ ಟ್ರಾಫಿಕ್‌ನಲ್ಲಿ ಸಿಗಾಕ್ಕೊಂಡಿದ್ದೀನಿ”. “ಥೂ ಎಂಥಾ ದರಿದ್ರ ಟ್ರಾಫಿಕ್ ಆಗೋಯ್ತು, ಆಗ್ಲೆ ಮುಕ್ಕಾಲು ಗಂಟೆ ಲೇಟಾಗಿದೆ. ಆಫೀಸರ್ ಯಂಗಂದ್ರಂಗೆ ಮುಖದ ಮೇಲೆ ಉಗೀತಾನೆ. ಏನಾದರೂ ಹೇಳಿದರೆ ದಿನಾ ಸಾಯೋರಿಗೆ ಅಳೋಳ್ಯಾರು ಅಂತಾರೆ.”
“ಅರೆ, ಸ್ಕೂಲು ನಾಲ್ಕು ಗಂಟೆಗೆ ಬಿಟ್ಟಿದೆ. ಇಲ್ನೋಡಿದರೆ ಇಷ್ಟೊಂದು ಟ್ರಾಫಿಕ್‌ನಲ್ಲಿ ಸಿಗಾಕ್ಕೊಂಡಿದ್ದೀನಿ. ಮಗು ಎಷ್ಟು ಗಾಬರಿ ಬೀಳ್ತದೋ ಏನೋ”. “ಬರ್ತಿನಿರು ಬಡ್ಕೊಬೇಡ ಯಾವೋಳ್ ಜೊತೇನೂ ಓಡಿ ಹೋಗ್ತಾ ಇಲ್ಲ. ರೀಸಸ್‌ಗೂ ಹೋಗೋಕಾಗದೆ ಟ್ರಾಫಿಕ್‌ನಲ್ಲಿ ಸಾಯ್ತಾ ಇದೀನಿ.”
“ದಿನವೂ ಇದೇ ಗೋಳಾಯ್ತು. ಟ್ರಾಫಿಕ್ಕು, ಟ್ರಾಫಿಕ್ಕು ತಲೆ ಚಿಟ್ಟಿಡ್ದೋಯ್ತು.”
“ಡೆಲ್ಲಿಗೆ ಹೊರಟಿದ್ದೇ ಯಲಹಂಕ ಹತ್ರ ಒಂದು ಗಂಟೆ ಜಾಮ್ ಆಗಿ ಫ್ಲೈಟೇ ಮಿಸ್ ಆಯ್ತು. ಇನ್ನೊಂದು ಫ್ಲೈಟ್ ಹಿಡಿದು ಹತ್ತು ಸಾವಿರ ಕಕ್ಕಿ ಹೋಗಿದ್ದಾಯ್ತು.’’ “ಟ್ರಾಫಿಕ್ ಜಾಮ್ ಆಗಿ ಟ್ರೈನ್ ಮಿಸ್ಸಾಯ್ತು. ಯಾರನ್ನ ಕೇಳೋದು. ನಾಳೆ ಬರ್ತೀನಿ. ಎರಡು ಗಂಟೆ ಮೊದಲು ಬಿಟ್ಟರೂ ಯಿಂಗಾಗೋಯ್ತು.” “ಅಯ್ಯೋ ಟ್ರಾಫಿಕ್‌ನಿಂದಾಗಿ ಅಂಬ್ಯುಲೆನ್ಸ್ ರಸ್ತೇಲಿ ಸಿಗಾಕ್ಕೊಂಡು ಪೇಷೆಂಟ್ ಆಸ್ಪತ್ರೆಗೆ ಹೋಗೋ ಮೊದಲೇ ಪ್ರಾಣ ಹೋಯ್ತಂತೆ.” “ಸಾಕಪ್ಪ ಸಾಕು ಟ್ರಾಫಿಕ್‌ನಲ್ಲಿ ನಿಂತೂ ನಿಂತೂ ತಲೆ ನೋವು ಬಂದು ಬಿಡ್ತು.” “ಟ್ರಾಫಿಕ್‌ನಲ್ಲಿ ಒಂದು ಗಂಟೆ ಸತ್ತು ಬರೋವತ್ಗೆ ಇಷ್ಟೊತ್ತಾಯ್ತು ನೋಡು, ಥೂ ಅದೇನ್ ಕೊಂಪೆ ಆಗೋಯ್ತೋ ಈ ಬೆಂಗ್ಳೂರು.”
“ಅಯ್ಯಯ್ಯಪ್ಪ ಬಸ್ ಸ್ಟಾಂಡಿನಿಂದ ಬರೋವತ್ಗೆ ಹುಚ್ಚು ಹಿಡಿದ್ಬಿಡ್ತಲೇ. ಅದೇನು ಟ್ರಾಫಿಕ್ಕೊ ದೇವರೆ”.
ಬೆಂಗಳೂರಿನ ಯಾವುದೇ ಭಾಗದಲ್ಲೂ ಪ್ರತಿ ಕ್ಷಣ ಕೇಳಿಬರುವಂಥ ಮಾತುಗಳು ಇವು. ಜಗತ್ತಿನ ಯಾವುದೇ ಬೃಹತ್ ನಗರ ಟ್ರಾಫಿಕ್ ಸಮಸ್ಯೆಗಳನ್ನು ಎದುರಿಸುವುದು ಸಹಜವಾದರೂ ಅಂಥ ಸಮಸ್ಯೆಗಳಿಗೆ ಪರಿಹಾರವನ್ನು ಬೇಗನೆ ಕಂಡುಕೊಳ್ಳುವುದು ಆ ನಗರದ ಆಡಳಿತ ವ್ಯವಸ್ಥೆಯ ಆದ್ಯ ಕರ್ತವ್ಯವಾಗಿರುತ್ತದೆ. ಹಾಗೆ ನೋಡಿದರೆ ಪಾಶ್ಚಿಮಾತ್ಯ ದೇಶಗಳ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಗಳು ಅಷ್ಟಾಗಿ ಕಾಣುವುದಿಲ್ಲ. ಇಂಥ ನಗರಗಳು ವ್ಯವಸ್ಥಿತವಾಗಿ ನಿರ್ಮಾಣವಾಗಿರುವುದರಿಂದ ಮತ್ತು ಮೂಲ ಸೌಕರ್ಯಗಳಿಗೆ ಈ ದೇಶಗಳಲ್ಲಿ ಹೆಚ್ಚಿನ ಮಹತ್ವ ಕೊಡುವುದರಿಂದ ಟ್ರಾಫಿಕ್, ಕಸ ಇತ್ಯಾದಿಗಳ ನಿರ್ವಹಣೆ ಕಟ್ಟುನಿಟ್ಟಾಗಿರುವುದರಿಂದ ಅಂಥ ಸಮಸ್ಯೆಗಳಿರುವುದಿಲ್ಲ. ಇದ್ದರೂ ಕನಿಷ್ಠ ಮಟ್ಟದಲ್ಲಿರುವುದರಿಂದ ಸಮಸ್ಯೆಗಳನ್ನು ಬೇಗ ನಿರ್ಮೂಲನೆ ಮಾಡಬಹುದು ಕೂಡಾ. ಭಾರತದ ನಗರಗಳು ತಮ್ಮ ವಿಪರೀತ ಜನಸಂಖ್ಯೆ ಕಾರಣದಿಂದಾಗಿಯೂ, ರಾಜಕಾರಣ ಮತ್ತು ಆಡಳಿತಗಳ ಭ್ರಷ್ಟಾಚಾರ ದೋಷಗಳ ಕಾರಣದಿಂದಾಗಿಯೂ ಬಹು ಸಮಸ್ಯೆಗಳ ಆಗರಗಳಾಗಿವೆಯೆಂದೇ ಹೇಳಬಹುದು. ಇತ್ತೀಚೆಗೆ ಬೆಂಗಳೂರಿನ ಅತಿ ದೊಡ್ಡ ಸಮಸ್ಯೆಯೆಂದರೆ ಸಂಚಾರದಟ್ಟಣೆ. ಇದಕ್ಕೆ ದಶಕಗಳಿಂದಲೂ ಬೆಂಗಳೂರಿನ ಬೆಳವಣಿಗೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ಕಾರ್ಪೊರೇಷನ್, ಸಾರಿಗೆ ಸಂಸ್ಥೆ, ವಸತಿ ಇಲಾಖೆ ಮುಂತಾದವುಗಳು ನಗರದ ಮೂಲಸೌಕರ್ಯಗಳಿಗೆ ಆದ್ಯತೆಯನ್ನು ನೀಡದಿರುವುದೇ ಆಗಿದೆ. 1970 ರಲ್ಲಿ ಹದಿನೇಳು ಲಕ್ಷ ಜನಸಂಖ್ಯೆಯನ್ನು (ಪ್ಲೋಟಿಂಗ್ ಜನಸಂಖ್ಯೆಯನ್ನು ಸೇರಿ) ಹೊಂದಿದ್ದ ಬೆಂಗಳೂರು ನಗರ ಇಂದು ಒಂದು ಕೋಟಿ ಮೂವತ್ತೊಂದು ಲಕ್ಷ ಜನಸಂಖ್ಯೆಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ. ನಗರಗಳಲ್ಲಿ ಕೈಗಾರಿಕಾಭಿವೃದ್ಧಿಯ ಫಲವಾಗಿ, ಉದ್ಯೋಗ ಸೌಕರ್ಯಗಳ ಹೆಚ್ಚಳದಿಂದಾಗಿ ಗ್ರಾಮೀಣ ಪ್ರದೇಶಗಳ ಜನಸಂಖ್ಯೆ ನಗರಗಳ ಕಡೆ ವಲಸೆ ಪ್ರಾರಂಭವಾಗಿ ಅದು ನಿರಂತರ ಸ್ವರೂಪ ಪಡೆದುಕೊಂಡ ನಂತರ ನಗರಗಳು ಬೃಹದಾಕಾರವಾಗಿ ಬೆಳೆಯತೊಡಗಿದವು. ದೆಹಲಿ (3.1 ಕೋಟಿ), ಮುಂಬೈ (2 ಕೋಟಿ), ಕೋಲ್ಕತ್ತಾ (1.5 ಕೋಟಿ), ಚೆನ್ನೈ (1.15 ಕೋಟಿ), ಹೈದರಾಬಾದ್ (1 ಕೋಟಿ) ಮುಂತಾದ ನಗರಗಳಲ್ಲದೆ ತಾಲೂಕು ಕೇಂದ್ರಗಲೂ ಕೂಡಾ ಜನಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ಎಲ್ಲಾ ವಿಧದಲ್ಲೂ ಬೆಳೆಯತೊಡಗಿದವು. ಏಕಮುಖ ನಗರೀಕರಣದತ್ತ ಭಾರತ ಸಾಗುವಂತಾಯಿತು.
ಇಂಥ ಪಕ್ರಿಯೆ ನಗರಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡಿ ನಗರ ಬದುಕಿನಲ್ಲಿ ವಿಪರೀತ ಸಮಸ್ಯೆಗಳನ್ನು ತಂದೊಡ್ಡಿತು. ವಸತಿ, ನೀರು, ಕಸ, ಟ್ರಾಫಿಕ್ ಇತ್ಯಾದಿ ಜ್ವಲಂತ ಸಮಸ್ಯೆಗಳನ್ನು ನಗರ ಜನತೆ ನಿರಂತರವಾಗಿ ಎದುರಿಸಬೇಕಾಗಿದೆ.

ಸದ್ಯಕ್ಕೆ ಬೇರೆಲ್ಲ ಸಮಸ್ಯೆಗಳಿಗಿಂತಲೂ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಬೃಹದಾಕಾರ ಪಡೆದುಕೊಂಡಿದೆ. ಸಮಸ್ಯೆಯನ್ನು ನಗರ ಬೆಳವಣಿಗೆಯ ಮೇಲೆ ಹಾಕಿ ಜನಪ್ರತಿನಿಧಿಗಳು ಮತ್ತು ಆಡಳಿತಗಾರರು ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ. ನಮ್ಮ ರಾಜಕಾರಣಿಗಳಿಗೆ ಮತ್ತು ಆಡಳಿತಶಾಹಿಗೆ ಟ್ರಾಫಿಕ್ ಎನ್ನುವುದು ಒಂದು ಸಮಸ್ಯೆಯೇ ಅಲ್ಲ. ಬೆಂಗಳೂರಿನಲ್ಲಿ ಲಕ್ಷಾಂತರ ಜನ ಬೆಳಗಿನಿಂದ ಸಂಜೆಯವರೆಗೂ ಟ್ರಾಫಿಕ್ ಜಾಮ್‌ಗಳಲ್ಲಿ ಬಸವಳಿದು ಹೋಗುತ್ತಾರೆ. ಟ್ರಾಫಿಕ್ ಜಾಮ್ ತಲೆ ನೋವು, ಮಾನಸಿಕ ಬಳಲಿಕೆ, ಸುಸ್ತು, ಚಡಪಡಿಕೆ ಮುಂತಾದ ವ್ಯಾಧಿಗಳನ್ನು ತಂದೊಡ್ಡುವುದಲ್ಲದೆ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಪ್ರತಿನಿತ್ಯ ಟ್ರಾಫಿಕ್ ಜಾಮ್‌ನಿಂದಾಗಿ ಎಷ್ಟೋ ರೋಗಿಗಳು ಅಂಬ್ಯುಲೆನ್ಸ್ ವಾಹನಗಳಲ್ಲೇ ಪ್ರಾಣ ಬಿಡುತ್ತಾರೆ. ಲೆಕ್ಕವಿಲ್ಲದಷ್ಟು ಜನರು ಸಮಯಕ್ಕೆ ಸರಿಯಾಗಿ ಬಸ್ಸು, ರೈಲು, ವಿಮಾನ ಹಿಡಿಯಲು ಸೋಲುತ್ತಾರೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ನೌಕರರು ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ಹಾಜರಾಗದೆ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತಾರೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೂ ಟ್ರಾಫಿಕ್ ಜಾಮ್ ತೊಂದರೆ ತಪ್ಪಿದ್ದಲ್ಲ. ಸಮಯಕ್ಕೆ ಸರಿಯಾಗಿ ಯಾವುದೇ ವ್ಯಕ್ತಿ ನಿಗದಿಪಡಿಸಿದ ಸ್ಥಳಕ್ಕೆ ಸೇರದಿದ್ದರೆ ಸಹಜವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಹೀಗೆ ಪ್ರತಿ ದಿನ ಬೆಂಗಳೂರು ನಗರದಲ್ಲಿ ಓಡಾಡುವ ಲಕ್ಷಾಂತರ ಜನ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇಂಥ ಟ್ರಾಫಿಕ್ ಜಾಮ್ ವಿಪರೀತ ವಾಯು ಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನಲ್ಲಿ ಎಂಬತ್ತು ಪರ್ಸೆಂಟ್ ಉಸಿರಾಟದ ತೊಂದರೆ ವಾಯುಮಾಲಿನ್ಯದಿಂದಲೇ ಎಂಬ ಸತ್ಯ ಸಾಬೀತಾಗಿದೆ. ಒಂದಾನೊಂದು ಕಾಲದಲ್ಲಿ ಬೆಂಗಳೂರು ಮಾಲಿನ್ಯ ರಹಿತ ನಗರವಾಗಿತ್ತಲ್ಲದೆ ಶುಭ್ರವಾದ ನಗರವೆಂದು ಹೆಸರುವಾಸಿಯಾಗಿತ್ತು. ಯಾವಾಗ ಕೈಗಾರಿಕಾ ನಗರವಾಗಿ ಬೆಳೆಯಲಾರಂಭಿಸಿತೋ, ಜನಸಂಖ್ಯೆ ವಿಪರೀತವಾಗಿ ಬೆಳೆಯತೊಡಗಿತೋ ಬೆಂಗಳೂರು ಕಸದ ಗುಂಡಿಯಾಗಿ ರೂಪಾಂತರಗೊಂಡಿದೆ. ಇಷ್ಟೆಲ್ಲ ವರ್ಷಗಳಲ್ಲೂ ಬೆಂಗಳೂರು ಆಡಳಿತ ಒಂದು ವೈಜ್ಞಾನಿಕ ರೀತಿಯ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳದಿರುವುದು ವಿಷಾದಕರ ಸಂಗತಿಯೇ. ಕಸ ವಿಲೇವಾರಿಯಲ್ಲಿ ನಿರಂತರ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣವೆಂದರೆ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಷ್ಟೇ ವೇಗದಲ್ಲಿ ಹೆಚ್ಚುತ್ತಿರುವ ದ್ವಿಚಕ್ರ ವಾಹನ ಮತ್ತು ಕಾರುಗಳ ಸಂಖ್ಯೆ. ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ರಸ್ತೆಗಳು ಸಂಜೆ ಏಳು-ಎಂಟು ಗಂಟೆಗೆಲ್ಲ ನಿರ್ಜನವಾಗಿರುತ್ತಿದ್ದವು. ಇಂದು ಬೆಂಗಳೂರಿನ ಮೂಲೆ ಮೂಲೆಗಳಲ್ಲೂ ಹಗಲು-ರಾತ್ರಿಗಳೆಂಬ ವ್ಯತ್ಯಾಸವಿಲ್ಲದೆ ಜನ ಮತ್ತು ವಾಹನಗಳ ಓಡಾಟವನ್ನು ಕಾಣಬಹುದು. ಆ ಸಂದರ್ಭದಲ್ಲಿ ಬೆಂಗಳೂರಿನ ಮನೆಗಳಲ್ಲಿ ದ್ವಿಚಕ್ರ ವಾಹನಗಳೇ ಅಪರೂಪವಾಗಿದ್ದವು. ಇಂದು ಪ್ರತಿಯೊಂದು ಮನೆಯಲ್ಲೂ ತಲಾ ಒಬ್ಬೊಬ್ಬರಿಗೆ ದ್ವಿಚಕ್ರ ವಾಹನವೋ, ಕಾರೋ ಇರುವುದು ಸಹಜವಾಗಿದೆ. ಕೆಲವರ ಮನೆಗಳಲ್ಲಿ ಮೂರು ನಾಲ್ಕಕ್ಕಿಂತ ಹೆಚ್ಚಿನ ವಾಹನಗಳಿರುವುದು ಬೆಂಗಳೂರಿನಲ್ಲಿ ಸಾಮಾನ್ಯವಾಗಿದೆ. ಪ್ರತಿನಿತ್ಯವೂ ಏನಿಲ್ಲವೆಂದರೂ 1700 ವಾಹನಗಳು ಬೆಂಗಳೂರು ನಗರದಲ್ಲಿ ರಿಜಿಸ್ಟರ್ ಆಗಿ ಬೀದಿಗಿಳಿಯುತ್ತವಂತೆ. ಸುಮಾರು 22 ಲಕ್ಷ ಕಾರುಗಳು ಹಾಗೂ 70 ಲಕ್ಷ ದ್ವಿಚಕ್ರ ವಾಹನಗಳು ಬೆಂಗಳೂರಿನಲ್ಲಿ ಇದುವರೆಗೂ ರಿಜಿಸ್ಟರ್ ಆಗಿರುವುದೆಂದರೆ ಊಹಿಸಿ ನೋಡಿ. ವಾಹನ ಮತ್ತು ಜನಸಂಖ್ಯೆ ಹೆಚ್ಚಾದಂತೆ ರಸ್ತೆಗಳೇನೂ ಅಗಲವಾಗುವುದಿಲ್ಲವಲ್ಲ. ಮನುಷ್ಯ ದೇಹದ ರಕ್ತನಾಳಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ರಕ್ತ ಸಂಚರಿಸಿದರೆ ಏನಾಗುತ್ತದೆ? ನಮ್ಮ ರಸ್ತೆಗಳಿಗೂ ಅದೇ ಪರಿಸ್ಥಿತಿ ಒದಗಿದೆ ಈಗ. ಯಾವ ಸರ್ಕಾರಗಳೂ ಈ ಬಗ್ಗೆ ದೃಢವಾದ ಮತ್ತು ವೈಜ್ಞಾನಿಕವಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿಲ್ಲ.
ಇನ್ನು ಬೆಂಗಳೂರಿನ ಕಳಪೆ ರಸ್ತೆಗಳು ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣ. ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಿದ್ದು ಪ್ರತಿನಿತ್ಯ ಜನ ಜೀವ ಕಳೆದುಕೊಳ್ಳುವ ವಿಷಯಗಳು ಕಾಫಿ ಕುಡಿದಷ್ಟೇ, ತಿಂಡಿ ತಿಂದಷ್ಟೇ ಸಾಮಾನ್ಯವಾಗಿಬಿಟ್ಟಿವೆ. ರಸ್ತೆಗಳು ಸಮತಟ್ಟಾಗಿ ಚೆನ್ನಾಗಿದ್ದರೆ ವಾಹನಗಳು ಸುರಕ್ಷಿತವಾಗಿ ಮತ್ತು ವೇಗವಾಗಿ ಚಲಿಸಬಹುದು. ಆದರೆ ಬೆಂಗಳೂರಿನ ಪ್ರತಿಯೊಂದು ಪ್ರದೇಶದಲ್ಲೂ ರಸ್ತೆಗಳು ಕೆಟ್ಟು ಕೆರ ಹಿಡಿದ ಪರಿಸ್ಥಿತಿಯಲ್ಲಿರುವುದು ಬೆಂಗಳೂರು ಬೃಹತ್ ನಗರ ಪಾಲಿಕೆಯೆ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಮಳೆ ಬಂದರಂತೂ ಬೆಂಗಳೂರಿಗರ ಗೋಳು ಹೇಳತಿರದಂತಾಗಿಬಿಡುತ್ತದೆ. ಅಧಿಕ ಪ್ಲಾಸ್ಟಿಕ್ ಕಸ ಚರಂಡಿ ಮತ್ತು ಒಳಚರಂಡಿಗಳಲ್ಲಿ ತುಂಬಿಕೊಂಡಿರುವುದರಿಂದ ಮಳೆಯ ನೀರಿಗೆ ಒಳಹರಿವಿನ ಮಾರ್ಗಗಳು ರದ್ದಾಗಿ ನೀರು ರಸ್ತೆಗಳಲ್ಲಿ ಕೆರೆ ಕಾಲುವೆಯ ರೂಪವನ್ನು ಪಡೆದುಕೊಳ್ಳುವುದರಿಂದ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ನರಕಕ್ಕೆ ತಳ್ಳಲ್ಪಡುತ್ತಾರೆ.
ಬೆಂಗಳೂರು ಕಾರ್ಪೊರೇಷನ್ ಅಲ್ಲದೆಯೇ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವೂ ಕೂಡಾ ಬೆಂಗಳೂರಿನ ರಸ್ತೆ ನಿರ್ಮಾಣಕ್ಕೆ ಮತ್ತು ರಿಪೇರಿಗೆ ಪ್ರತಿ ವರ್ಷ ನೂರಾರು ಕೋಟಿಗಳನ್ನು ಖರ್ಚು ಮಾಡಿದರೂ ರಸ್ತೆಗಳನ್ನು ಒಂದಿಷ್ಟೂ ಸುಧಾರಿಸಲು ಸಾಧ್ಯವಾಗಿಲ್ಲ. ಮಂತ್ರಿಗಳಿಗೆ, ಎಂಎಲ್‌ಎಗಳಿಗೆ, ಕಾರ್ಪೊರೇಟರ್‌ಗಳಿಗೆ, ಕಾರ್ಪೊರೇಷನ್ ಅಧಿಕಾರಿ-ಇಂಜಿನಿಯರ್‌ಗಳಿಗೆ, ಕಾಂಟ್ರಾಕ್ಟರುದಾರರಿಗೆ ಕಾರ್ಪೊರೇಷನ್ ದುಡ್ಡು ಗಳಿಸುವ ಒಂದು ದೊಡ್ಡ ಮತ್ತು ಭ್ರಷ್ಟ ಅಕ್ಷಯಪಾತ್ರೆಯೇ ಸರಿ. ಇತ್ತೀಚೆಗೆ ಕಾಂಟ್ರಾಕ್ಟುದಾರರ ಸಂಘದ ಕೆಂಪಣ್ಣ ಸರ್ಕಾರದ ಮಟ್ಟದಲ್ಲಿ ನಲವತ್ತು ಪರ್ಸೆಂಟ್ ಲಂಚ ನೀಡಬೇಕೆಂದು ಹೇಳಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಕೆಲವು ತಜ್ಞರು ಹೇಳುವ ಪ್ರಕಾರ ಯಾವುದಾದರೊಂದು ಯೋಜನೆಗೆ ಒಂದು ರೂಪಾಯಿ ಹಂಚಿಕೆಯಾದರೆ ನಿಜವಾಗಿಯೂ ಕೆಲಸವಾಗುವುದು ಅಥವಾ ಯೋಜನೆಗೆ ನೈಜವಾಗಿ ಬಳಕೆಯಾಗುವುದು 25ರಿಂದ 30 ಪೈಸೆ ಮಾತ್ರವಂತೆ. ಇನ್ನು ಎಪ್ಪತ್ತು ಪೈಸೆ ಭ್ರಷ್ಟ ಬಕಾಸುರರ ಬೊಕ್ಕಸಕ್ಕೆ! ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಹೈಕೋರ್ಟ್ ಕಾರ್ಪೊರೇಷನ್ ಕಮೀಷನರರಿಂದ ಹಿಡಿದು ಇಂಜಿನಿಯರ್‌ಗಳವರೆಗೂ ಅದೆಷ್ಟೊಂದು ಸಾರಿ ಛೀಮಾರಿ ಹಾಕಿದೆಯೋ ಲೆಕ್ಕವಿಲ್ಲ. ಆದರೆ ನಮ್ಮ ಅಧಿಕಾರಿಗಳು ಉಗುಳನ್ನೇ ತೀರ್ಥ-ಪ್ರಸಾದಗಳೆಂದು ಸ್ವೀಕರಿಸುವ ಉದಾರ ಮನೋಭಾವ ಹೊಂದಿದವರು. ಬಹುಶಃ ಭಾರತದ ಬಹುತೇಕ ಎಲ್ಲಾ ಬೃಹತ್ ನಗರಗಳ ಕಾರ್ಪೊರೇಷನ್‌ಗಳೂ ಭ್ರಷ್ಟಾಚಾರದ ಕೂಪಗಳಾಗಿ ಬೆಳೆದುಬಿಟ್ಟಿವೆ. ಏಕೆಂದರೆ ಮೂಲಸೌಕರ್ಯಗಳನ್ನು ಒದಗಿಸುವ ಸಂಸ್ಥೆ ಇದಾಗಿರುವುದರಿಂದಲೂ, ಜನರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕಾತುರರಾಗಿರುವುದರಿಂದಲೂ ಸುಲಭವಾಗಿ ದುಡ್ಡು ಹೊಡೆಯುವ ನಾನಾ ಮಾರ್ಗಗಳು ಇಲ್ಲಿ ತೆರೆದುಕೊಂಡಿರುತ್ತವೆ. ಮತ್ತು ಇಲ್ಲಿ ಜನಪ್ರತಿನಿಧಿಗಳ, ಅಧಿಕಾರಶಾಹಿಯ, ದಳ್ಳಾಳಿಗಳ ದೊಡ್ಡ ವಿಷದ ಚಕ್ರವ್ಯೂಹವೇ ನಿರ್ಮಾಣವಾಗಿರುತ್ತದೆ. ಇಂಥ ಚಕ್ರವ್ಯೂಹದಲ್ಲಿ ಸಿಲುಕಿ ಬಹುಸಂಖ್ಯಾತ ಸಾಮಾನ್ಯ ಮತ್ತು ಬಡ ವರ್ಗದ ಜನ ನಿತ್ಯವೂ ನರಳುತ್ತಿರುತ್ತಾರೆ. ಮೆಟ್ರೋ ರೈಲು ಸಂಚಾರವನ್ನು ಪ್ರಾರಂಭಿಸಿದ ನಂತರ ಲಕ್ಷಾಂತರ ಜನ ಇಂಥ ಟ್ರಾಫಿಕ್ ಜಾಮ್‌ನಿಂದ ಪಾರಾಗಿದ್ದರು ಅಂಥ ಜನಸಂಖ್ಯೆಯ ಪರ್ಸೆಂಟೇಜ್ ಅತ್ಯಂತ ಕನಿಷ್ಠದ್ದಾಗಿದೆ. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ರೆವಿನ್ಯೂ, ಪೊಲೀಸ್, ಸಾರಿಗೆ, ರೈಲ್ವೆ, ಡಿಫೆನ್ಸ್, ಪಿಡಬ್ಲೂಡಿ ಮುಂತಾದ ಇಲಾಖೆಗಳ ನಡುವಿನ ಸೌಹಾರ್ದತೆ ಮತ್ತು ಸಾಮರಸ್ಯಗಳ ಕೊರತೆ ಕೂಡಾ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಬಹಳಷ್ಟು ಕಾರಣವಾಗಿದೆ. ಬೆಂಗಳೂರಿನ ಅನೇಕ ಭಾಗಗಳಲ್ಲಿ ರಸ್ತೆ ನಿರ್ಮಾಣಕ್ಕೆ ಅಥವಾ ಅಗಲೀಕರಣಕ್ಕೆ ಮತ್ತು ಓವರ್ ಬ್ರಿಡ್ಜ್, ಅಂಡರ್ ಬ್ರಿಡ್ಜ್ಗಳ ನಿರ್ಮಾಣ ಮತ್ತು ನಿರ್ವಹಣೆಗೆ ರಾಜ್ಯ ಸರ್ಕಾರದ ಇಲಾಖೆ ನಾನಾ ಇಲಾಖೆಗಳ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಾದ ರೈಲ್ವೆ ಮತ್ತು ಸೇನೆ ಇಲಾಖೆಗಳ ನಡುವೆ ಜಮೀನು ಅಥವಾ ಜಾಗ ಬಿಟ್ಟುಕೊಡುವುದರಲ್ಲಿ ವಿಪರೀತ ತಕರಾರುಗಳು ಉಂಟಾಗಿ ಯೋಜನೆಗಳು ನೆನೆಗುದಿಗೆ ಬಿದ್ದು ಅಂಥ ಕಡೆಗಳಲ್ಲೆಲ್ಲ ಟ್ರಾಫಿಕ್ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಬೆಂಗಳೂರಿನ ಬಹುತೇಕ ಕಡೆ ಸಿಗ್ನಲ್ ಮತ್ತು ವೃತ್ತಗಳ ಬಳಿಯೇ ಬಿಟಿಎಸ್ ಬಸ್ ಸ್ಟಾಪ್‌ಗಳನ್ನು ನಿರ್ಮಿಸಲಾಗಿದೆ. ಇವು ಬಲವಾದ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದ್ದರೂ, ಅದು ಸ್ಪಷ್ಟವಾಗಿ ಅರಿವಾಗುತ್ತಿದ್ದರೂ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಾಗಲೀ ಸಾರಿಗೆ ವ್ಯವಸ್ಥೆಯ ಮೇಲಾಧಿಕಾರಿಗಳಾಗಲೀ ಒಂದಿಷ್ಟೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನು ಬೆಂಗಳೂರಿನ ಮುಕ್ಕಾಲು ಪಾಲು ರಸ್ತೆಗಳಲ್ಲಿ ಫುಟ್‌ಪಾತ್‌ಗಳೇ ಮಾಯಾವಾಗಿವೆ. ಚಿಕ್ಕಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನ ಮತ್ತು ವಾಹನಗಳು ಜೊತೆ ಜೊತೆಯಲ್ಲಿ ರಸ್ತೆಗಳಲ್ಲಿ ಸಂಚರಿಸುವುದನ್ನು ಕಾಣಬಹುದು.

ಮೆಜೆಸ್ಟಿಕ್, ಗಾಂಧಿನಗರ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಕೆಎಸ್‌ಆರ್‌ಟಿಸಿ ಇಲಾಖೆಗಳಿಗೆ ತಿಳಿದಂತೆಯೇ ಖಾಸಗಿ ಟ್ರಾವೆಲ್ಸ್ ಬಸ್ಸುಗಳು ರಸ್ತೆಗಳನ್ನು ಪೂರ್ಣವಾಗಿ ಆವರಿಸಿಕೊಂಡಿರುತ್ತವೆ. ಇಂಥ ಟ್ರಾವೆಲ್ಸ್ನವರಿಂದ ಪೊಲೀಸ್ ಇಲಾಖೆಗೆ ಕೋಟ್ಯಂತರ ರೂಪಾಯಿ ಮಂಥ್ಲಿ ಫಿಕ್ಸ್ ಆಗಿರುತ್ತದಂತೆ ಮತ್ತು ಅಂಥ ಏರಿಯಾಗಳ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳು ಎಷ್ಟು ಬೇಕಾದರೂ ಲಂಚ ಕೊಟ್ಟು ಹೋಗಲು ತಯಾರಿರುತ್ತಾರಂತೆ. ಬೆಂಗಳೂರಿನ ಸಿಲ್ಕ್ ಬೋರ್ಡ್, ಕಾರ್ಪೊರೇಷನ್ ಸರ್ಕಲ್, ಬಿಟಿಎಂ ಫ್ಲೈಓವರ್, ಯಶವಂತಪುರ, ಗೊರಗುಂಟೆಪಾಳ್ಯ, ಮಾರತ್‌ಹಳ್ಳಿ ಬ್ರಿಡ್ಜ್, ಜೆ.ಸಿ, ರಸ್ತೆ, ಹೆಬ್ಬಾಳ ಫ್ಲೈಓವರ್, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್. ಪುರಂ ಬ್ರಿಡ್ಜ್, ಬಾಣಸವಾಡಿ, ಬಳ್ಳಾರಿ ರಸ್ತೆ, ಔಟರ್ ರಿಂಗ್ ರೋಡ್ ಬೆಂಗಳೂರಿನಲ್ಲಿ ಪ್ರತಿನಿತ್ಯ ಅತ್ಯಂತ ಟ್ರಾಫಿಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರದೇಶಗಳಾಗಿವೆ. ಇವುಗಳನ್ನು `ಬಾರಾ ಜಾಮ್ಸ್’ ಎಂದೇ ಕರೆಯಲಾಗುತ್ತದೆ. ಹೋದ ಸಾರಿ ಪ್ರಧಾನಮಂತ್ರಿಗಳು ಬೆಂಗಳೂರಿಗೆ ಭೇಟಿ ನೀಡಿದಾಗ ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಕಂಡು ಅಚ್ಚರಿಪಟ್ಟಿರುವುದಲ್ಲದೆ ಪ್ರಧಾನಿ ಕಚೇರಿಯಿಂದ ಈ ಬಗ್ಗೆ ವರದಿಯನ್ನು ಕೇಳಲಾಗಿದೆಯಂತೆ.
ರಾಜ್ಯ ಸರ್ಕಾರ ಈ ಬಗ್ಗೆ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಗೆ ಅಧ್ಯಯನ ಮಾಡಲು ವಹಿಸಿದೆಯಂತೆ. ಈ ಬಗ್ಗೆ ಸಂಸ್ಥೆಯ ಪ್ರೊಫೆಸರ್‌ಗಳು ಅಧ್ಯಯನ ಮಾಡಲೋಸುಗ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದಾಗ “ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ವಿವಿಧ ಇಲಾಖೆಗಳ ನಡುವಿನ ಕೋ- ಆರ್ಡಿನೇಷನ್ ಕೊರತೆಯೇ ಪ್ರಮುಖ ಕಾರಣ” ಎಂದು ಉನ್ನತಾಧಿಕಾರಿಯೊಬ್ಬರು ಉಚ್ಚರಿಸಿರುವರಂತೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ಆಡಳಿತ ವ್ಯವಸ್ಥೆ ಅತ್ಯಂತ ಗಂಭೀರವಾಗಿ ಈ ಬಗ್ಗೆ ಸಮಾಲೋಚನೆ ನಡೆಸಿ ಶೀಘ್ರವಾಗಿ ಆ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕು. ಇಲ್ಲವಾದಲ್ಲಿ ಬೆಂಗಳೂರು ಅತ್ಯಂತ ಕೆಟ್ಟ ಪರಿಣಾಮಗಳನ್ನು ಎದುರಿಸುವ ದಿನಗಳು ದೂರದಲ್ಲಿಲ್ಲ. ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಮತ್ತು ಅಗತ್ಯ ಬಿದ್ದರೆ ಕೇಂದ್ರ ಸರ್ಕಾರದ ಇಲಾಖೆಗಳಾದ ರೈಲ್ವೆ ಮತ್ತು ಸೇನಾ ಇಲಾಖೆಗಳು ಅತ್ಯಂತ ಸಾಮರಸ್ಯದಿಂದ ಸಮಸ್ಯೆಗಳನ್ನು ಅಧ್ಯಯನ ನಡೆಸಿ ಅಂಥ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುನ್ನಡೆಯಬೇಕಾಗಿದೆ. ಮುಂಬೈ, ದೆಹಲಿ, ನಾಗಪುರಗಳಲ್ಲಿ ಅಭಿವೃದ್ಧಿಪಡಿಸಿದಂತೆ ಇಲ್ಲಿಯೂ ಮೆಟ್ರೋ ರೈಲು ವ್ಯವಸ್ಥೆಯನ್ನು ಬೆಂಗಳೂರಿನ ಉದ್ದಗಲಕ್ಕೂ ವಿಸ್ತರಿಸಬೇಕಾಗಿದೆ. ಮೆಟ್ರೋ ರೈಲು ಸಂಚಾರ ಸೇವೆಯನ್ನು ಬೆಂಗಳೂರಿನಲ್ಲಿ ವಿಸ್ತೃತವಾಗಿ ಅಭಿವೃದ್ಧಿಪಡಿಸಬೇಕಾದರೆ ದೀರ್ಘಾವಧಿ ಸಮಯವನ್ನು ತೆಗೆದುಕೊಂಡರೂ ಮುಂದಿನ ದಿನಗಳಲ್ಲಿ ಅದು ಬೆಂಗಳೂರಿನ ಜನತೆಗೆ ಒಂದು ವರವಾಗಿ ಪರಿಣಮಿಸುವುದರಲ್ಲಿ ಖಂಡಿತವಾಗಿಯೂ ಸಂಶಯವಿಲ್ಲ. ಇದಕ್ಕೆ ಬೇಕಾಗುವ ಪೂರ್ವ ಸಿದ್ಧತೆಗಳನ್ನು ಸರ್ಕಾರ ಆದಷ್ಟು ಶೀಘ್ರವಾಗಿ ಮಾಡಿಕೊಳ್ಳಬೇಕಾಗಿದೆ. ಇನ್ನು ಅಲ್ಪಾವಧಿಯ ಕ್ರಮಗಳೆಂದರೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಮತ್ತು ನಿಷ್ಠೆಯಿಂದ ಸನ್ನದ್ಧರಾಗಬೇಕು. ಕಾಲಕಾಲಕ್ಕೆ ಪೊಲೀಸ್ ಮೇಲಾಧಿಕಾರಿಗಳು ಜನಸಂದಣಿ ಅಧಿಕವಾಗಿರುವ ಪ್ರದೇಶಗಳಲ್ಲಿ ತಿರುಗಾಡಿ ಸಮಸ್ಯೆಗಳನ್ನು ತಿಳಿಗೊಳಿಸಲು ಪ್ರಯತ್ನಿಸಬೇಕು. ಈಗಿರುವ ಬಸ್ ಸ್ಟಾಪ್‌ಗಳನ್ನು ಸಿಗ್ನಲ್ ಮತ್ತು ವೃತ್ತಗಳಿಂದ ಮುಕ್ತಿಗೊಳಿಸಬೇಕು. ಮೇಲ್ಸೇತುವೆಗಳ ಸಂಪರ್ಕಗಳನ್ನು ಸರಿಪಡಿಸಿ ಸಂಚಾರವನ್ನು ಸುಗಮಗೊಳಿಸುವುದು ಇಂದಿನ ತುರ್ತಾಗಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳೂ ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ. ಟ್ರಾಫಿಕ್ ಸಮಸ್ಯೆ ಕೂಡಾ ಬೇರೆಲ್ಲ ಸಮಸ್ಯೆಗಳಂತೆ ಗಂಭೀರ ಸಮಸ್ಯೆಗಳಂತೆ ಸರ್ಕಾರಗಳು, ಇಲಾಖೆಗಳು ಪರಿಭಾವಿಸಿ ಈ ನಿಟ್ಟಿನಲ್ಲಿ ಸಾಗಿದರೆ ಟ್ರಾಫಿಕ್ ಸಮಸ್ಯೆ ಒಂದು ಮಟ್ಟಕ್ಕೆ ನಿಯಂತ್ರಿಸಬಹುದು. ಇಲ್ಲದಿದ್ದಲ್ಲಿ ಬೆಂಗಳೂರಿನ ಜನ ದಿಕ್ಕೆಡುವ ದಿನಗಳು ದೂರವಿಲ್ಲ. ಸಾರ್ವಜನಿಕರು ಕೂಡಾ ಸರ್ಕಾರ ಮತ್ತು ಇಲಾಖೆಗಳೊಂದಿಗೆ ಸಹಕರಿಸುವುದು ಕೂಡಾ ಈ ನಿಟ್ಟಿನಲ್ಲಿ ಅವಶ್ಯಕವೂ, ಅನಿವಾರ್ಯವೂ ಆಗಿದೆ.