29.8 C
Bengaluru
Thursday, March 16, 2023
spot_img

ಲಿಟ್ಟೂ ಫೆಸ್ಟು–ನನ್ನ ಅನುಭವ

-ರಾಜಾರಾಂ ತಲ್ಲೂರು

ಬೆಂಗಳೂರು ಲಿಟ್‌ಫೆಸ್ಟ್ನಲ್ಲಿ, ಎರಡು ದಿನಗಳಲ್ಲಿ ಒಂದಿಷ್ಟು ಕಾಲ ಪಾಲ್ಗೊಂಡ ಹಿನ್ನೆಲೆಯಲ್ಲಿ, ನಾನು ದಾಖಲಿಸಬಯಸಿರುವ ನನ್ನ ಅನುಭವ ಇದು. ಲಿಟ್ ಫೆಸ್ಟ್ಗಳಿಗೆ ಹಾಜರಾತಿ, “ಜಿಲೇಬಿ” ಸಮ್ಮೇಳನಗಳಿಗೆ ಹಾಜರಾತಿಗಳೇ ಗದ್ದಲಗಳಿಗೆ ಕಾರಣ ಆಗುವ ದಿನಗಳು. ಸ್ವತಃ ನಾನೇ ಜಿಲೇಬಿ ಸಮ್ಮೇಳನದ ವಿರುದ್ಧ ಮಾತನಾಡಿದ್ದಿದೆ. ಹಾಗಾಗಿ, ತೆಗೆದುಕೊಂಡ ಒಂದು ದಿನದ ಅವಕಾಶದಲ್ಲಿ, ಹಿಂದಿನ ಸಮ್ಮೇಳನಗಳಲ್ಲಿ ಯಾರೆಲ್ಲ ಪಾಲ್ಗೊಂಡಿದ್ದರು ಎಂದು ವಿವರಗಳನ್ನು ನೋಡಿದೆ. ಮೊದಲ ಸಮ್ಮೇಳನದ ವೇಳೆ ಸ್ವಲ್ಪ ಎಡ-ಬಲ ಎಂದು ಗದ್ದಲ ಆದದ್ದು ಬಿಟ್ಟರೆ, ಆ ಬಳಿಕ ಸದ್ರಿ ಫೆಸ್ಟ್ ಸುಖದಿಂದಲೇ ನಡೆದುಬರುತ್ತಿದೆ. ಕನ್ನಡದ ಬಹುತೇಕ ಎಲ್ಲ ಹಿರಿಯರೂ ಪಾಲ್ಗೊಂಡಿದ್ದಾರೆ.

ಬೆಂಗಳೂರು ಲಿಟ್‌ಫೆಸ್ಟ್ನಲ್ಲಿ, ಎರಡು ದಿನಗಳಲ್ಲಿ ಒಂದಿಷ್ಟು ಕಾಲ ಪಾಲ್ಗೊಂಡ ಹಿನ್ನೆಲೆಯಲ್ಲಿ, ನಾನು ದಾಖಲಿಸಬಯಸಿರುವ ನನ್ನ ಅನುಭವ ಇದು. ವೃತ್ತಿಯ ಆರಂಭದ ದಿನಗಳ ತನಕ ಚಾಚೂ ತಪ್ಪದೆ “ಸಾಹಿತ್ಯ ಸೇವೆ” ಎಂಬ ಕಾರಣಕ್ಕೆ ಅವಿಭಜಿತ ದ.ಕ. ಜಿಲ್ಲೆಯ ಬಹುತೇಕ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ವಿದ್ಯಾರ್ಥಿ ನಿಷ್ಠೆಯಿಂದ ಪಾಲ್ಗೊಳ್ಳುತ್ತಿದ್ದೆ. ಆದರೆ, ಆ ಬಳಿಕದ ದಿನಗಳಲ್ಲಿ ನಾನು ಪತ್ರಕರ್ತನಾಗಿ, ಸಾಹಿತ್ಯದ ತೇರು ತಾಲೂಕು ಮಟ್ಟದಲ್ಲೆಲ್ಲ ಓಡಾಡತೊಡಗಿದ (90-91) ಮೇಲೆ ಅದರ ಆಳ-ಅಗಲಗಳೆಲ್ಲ ಸಿಕ್ಕತೊಡಗಿತ್ತು. ಹಾಗಾಗಿ ಆ “ಸಮಾರಾಧನೆ”ಗಳಿಂದ ಬಹುತೇಕ ದೂರವೇ ಇದ್ದೇನೆ.

ನನ್ನ ಅಂದಿನ ಜ್ಞಾನೋದಯದ ಪ್ರಾಯ ಇನ್ನೂ ತಲುಪಿರದ, ಆದರೆ ಬೆಂಗಳೂರಿನಲ್ಲಿ ಓದುತ್ತಿರುವ ನನ್ನ ಮಗಳು ಮೊದಲ ದಿನವಿಡೀ ಅಪ್ಪನ ಕಾರ್ಯಕ್ರಮ ಇದೆ ಎಂಬ ಕಾರಣಕ್ಕೆ ಜೊತೆಗಿದ್ದಳು. ಆ ಪ್ರಾಯಕ್ಕೆ ನನಗಿಂತ ಹೆಚ್ಚಿನ ಓದು ಕೂಡ ಇರುವ ಆಕೆಯಲ್ಲಿ, ಸಂಜೆ ಹೊಟೇಲು ಕೋಣೆಗೆ ಹಿಂದಿರುಗಿದ ಬಳಿಕ “ಪ್ರೋಗ್ರಾಂ ಹೇಗಿತ್ತು ಬಾಬೂ?” ಎಂದೆ. “Very pretentious gathering” ಎಂದು ಪ್ರಶ್ನೆಯನ್ನು ಸೀಳುವಂತೆ ಬಂತು ಉತ್ತರ. “ಅಂದ್ರೆ?” ಎಂದು ಅರ್ಥ ಆಗದವನಂತೆ ಮತ್ತೆ ಪ್ರಶ್ನಿಸಿದರೆ, “Oh… Everybody wants to show that they like literature. Most of them Weekend crowd enjoying the fest.” ಎಂದು ಬಂತು, ವಿವರಣೆ. ಖುಷಿ ಆಯ್ತು.

ಕಳೆದ ವರ್ಷ, ಕುಂದಾಪುರ ಕನ್ನಡ ಡಿಕ್ಷನರಿಯ ಕಾರಣಕ್ಕಾಗಿ ನನಗೆ ಫೆಸ್ಟ್ ಗೆ ಆಹ್ವಾನ ಬಂದಿತ್ತು. ನಾನು ಪರಿಣತ ಅಲ್ಲ ಎಂಬ ಕಾರಣಕ್ಕೆ ಬರುವುದಿಲ್ಲ ಎಂದಿದ್ದೆ, ಮತ್ತು ನಾವು ಪ್ರಕಟಿಸಿದ ಡಿಕ್ಷನರಿಯ ಸಂಪಾದಕರಾದ ಪಂಜು ಅವರನ್ನು ಸೂಚಿಸಿದ್ದೆ, ಅವರು ಹೋಗಿಬಂದಿದ್ದರು. ಆದರೆ, ಈ ಬಾರಿ, ಕೋವಿಡ್ ಕಾಲದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ, ಬರ್ಖಾದತ್ ಅವರ “ಹ್ಯೂಮನ್ಸ್ ಆಫ್ ಕೋವಿಡ್” ಪುಸ್ತಕ ಇದೆ, ಅವರು ಬರ್ತಾರೆ. ಕನ್ನಡದಲ್ಲಿ ನಿಮ್ಮ “ಕರಿಡಬ್ಬಿ”ತುಂಬಾ ಚೆನ್ನಾಗಿದೆ ಎಂದು ಗೆಳೆಯರೊಬ್ಬರು ಹೇಳಿದರು. ಹಲವು ಮಂದಿ ಅದನ್ನು ಒಪ್ಪಿದ್ದರಿಂದ ನಿಮ್ಮನ್ನು ಕರೆಯಬಯಸಿದ್ದೇವೆ ಎಂದರು. ತೀರ್ಮಾನಿಸಲು, ಒಂದು ದಿನದ ಅವಕಾಶ ಕೇಳಿದೆ.

ಇಂದು ಲಿಟ್ ಫೆಸ್ಟ್ಗಳಿಗೆ ಹಾಜರಾತಿ, “ಜಿಲೇಬಿ” ಸಮ್ಮೇಳನಗಳಿಗೆ ಹಾಜರಾತಿಗಳೇ ಗದ್ದಲಗಳಿಗೆ ಕಾರಣ ಆಗುವ ದಿನಗಳು. ಸ್ವತಃ ನಾನೇ ಜಿಲೇಬಿ ಸಮ್ಮೇಳನದ ವಿರುದ್ಧ ಮಾತನಾಡಿದ್ದಿದೆ. ಹಾಗಾಗಿ, ತೆಗೆದುಕೊಂಡ ಒಂದು ದಿನದ ಅವಕಾಶದಲ್ಲಿ, ಹಿಂದಿನ ಸಮ್ಮೇಳನಗಳಲ್ಲಿ ಯಾರೆಲ್ಲ ಪಾಲ್ಗೊಂಡಿದ್ದರು ಎಂದು ವಿವರಗಳನ್ನು ನೋಡಿದೆ. ಮೊದಲ ಸಮ್ಮೇಳನದ ವೇಳೆ ಸ್ವಲ್ಪ ಎಡ-ಬಲ ಎಂದು ಗದ್ದಲ ಆದದ್ದು ಬಿಟ್ಟರೆ, ಆ ಬಳಿಕ ಸದ್ರಿ ಫೆಸ್ಟ್ ಸುಖದಿಂದಲೇ ನಡೆದುಬರುತ್ತಿದೆ. ಕನ್ನಡದ ಬಹುತೇಕ ಎಲ್ಲ ಹಿರಿಯರೂ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯ ನನ್ನ ಮೊದಲ ಅನುಭವ ಆಗಿರುವ ಕಾರಣಕ್ಕೆ ಒಂದಿಬ್ಬರು ಗೆಳೆಯರಲ್ಲೂ ಚರ್ಚಿಸಿದೆ. ಸಂಘಟಕರಲ್ಲೇ ಚರ್ಚಿಸಿದೆ. ಅವರು ತಮ್ಮದು “ನ್ಯೂಟ್ರಲ್” ವೇದಿಕೆ ಎಂದರು. ಇಷ್ಟೆಲ್ಲ ಹೋಂವರ್ಕ್ ಆದ ಬಳಿಕ, ಬರುವೆ ಎಂದೆ. ಇಲ್ಲಿ ಸ್ವಲ್ಪ ಸ್ವಾರ್ಥವೂ ಇದೆ. ಕರಿಡಬ್ಬಿ ಪುಸ್ತಕದ ಬಗ್ಗೆ ಇದು ಮೊದಲ ಸಾರ್ವಜನಿಕ ಕಾರ್ಯಕ್ರಮ.

ಮೊದಲಿಗೆ ಒಂದಿಷ್ಟು ಒಳ್ಳೆಯ ಅಂಶಗಳು:

>>ಕಾರ್ಯಕ್ರಮ ಸಂಘಟನೆಯ ಮಟ್ಟಿಗೆ, ಸವಿವರವಾದ, ಸೂಕ್ಷ್ಮ ವಿವರಗಳಿಗೂ ಗಮನ ಕೊಡುವ ವ್ಯವಸ್ಥೆ. 150 ಕ್ಕೂ ಮಿಕ್ಕಿ ಅತಿಥಿಗಳು, ಅದರಲ್ಲೂ ಹಲವರು ಸೆಲೆಬ್ರಿಟಿಗಳು. ಅವರನ್ನೆಲ್ಲ ನಿಭಾಯಿಸಲು ಸಣ್ಣದೊಂದು ತಂಡದ ಈ ಪ್ರಯತ್ನ ಶ್ಲಾಘನೀಯ.

>> ಕನ್ನಡ ಸಾಹಿತ್ಯದ ರಥ ಎಳೆಯಲು ಸರ್ಕಾರಿ ಬಳ್ಳಿ ಯಾವಾಗ ಬರುತ್ತದೆ ಎಂದು ಕಾಯುವವರ ನಡುವೆ, ಪುಸ್ತಕ ಮಾರಾಟಗಾರರು ಮತ್ತು ಆಸಕ್ತರ ಖಾಸಗಿ ತಂಡವೊಂದು ಇಂಗ್ಲಿಷ್ ಪಬ್ಲಿಷರ್ಸ್ ಗಳು ಮತ್ತು ಕಾರ್ಪೋರೇಟ್‌ಗಳ ನೆರವು ಪಡೆದು, ಪ್ರಿಮಿಯಂ ಹೊಟೇಲಿನಲ್ಲಿ ಏರ್ಪಡಿಸುತ್ತಾ ಬಂದಿರುವ ಈ ಹಬ್ಬಕ್ಕೆ ಖರ್ಚು ದೊಡ್ಡದಿದೆ. ಅದನ್ನು ಬಹಳ ಶಿಸ್ತುಬದ್ಧವಾಗಿ ನಿಭಾಯಿಸಿದ್ದಾರೆ.

>>ಇಲ್ಲಿಯ ತನಕ ನಾನು ಕಂಡ ಸಾಹಿತ್ಯದ ಭಾಷಣಗಳೆಂದರೆ, ಕವಿಗೋಷ್ಠಿಗಳೆಂದರೆ, ಕೊಟ್ಟ ಅವಧಿ ಮೀರುವ ತನಕವೂ ಪರಾಕು ಪಟ್ಟಿ ಊದಿ, ಎಕ್ಸ್ಟ್ರಾ ಟೈಮಿನಲ್ಲಿ “ಕಂಟೆಂಟ್” ಕೊಡುವ ಭಾಷಣಗಳೇ ಹೆಚ್ಚು. ಇಲ್ಲಿ ಎಲ್ಲರಿಗೂ ಅರ್ಧ/ಮುಕ್ಕಾಲು ಗಂಟೆ. ಅದರೊಳಗೆ ಎಲ್ಲವೂ ಮುಗಿಯಬೇಕು. ಹಾಗಾಗಿ ಯಾವುದೇ ಗೋಷ್ಠಿಗಳಲ್ಲಿ ಯಾವುದೇ “ಫ್ರಿಲ್” ಇರುವುದಿಲ್ಲ. ಈ ಮಾದರಿಯ ಅತ್ಯುತ್ತಮ ಗೋಷ್ಠಿ ಉದಾಹರಣೆ, ಅರ್ಧಗಂಟೆಯ ಟಾಕ್ ಕಾರ್ಯಕ್ರಮಗಳ ಅನುಭವೀ ಪತ್ರಕರ್ತೆ ಬರ್ಖಾ ದತ್ ಅವರದು. ರಾಮ್ಜೀ ಚಂದನ್ ಅವರ ಪ್ರಶ್ನೆಗಳೂ ಕ್ರಿಸ್ಪ್; ಬರ್ಖಾ ಉತ್ತರಗಳೂ ಪ್ರಿಸೈಸ್. ಬಹುತೇಕ ಟಿವಿ ಟಾಕ್ ಕಾರ್ಯಕ್ರಮವೊಂದನ್ನು ಜಾಹೀರಾತು ಇಲ್ಲದೆ ನೋಡಿದ ಅನುಭವ!

>>ನಾಲ್ಕು ವೇದಿಕೆಗಳಲ್ಲಿ ಗೋಷ್ಠಿಗಳಾದರೆ, ಎರಡೂ ಮಕ್ಕಳ ವೇದಿಕೆಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳು. ಎಲ್ಲ ವೇದಿಕೆಗಳಲ್ಲೂ ಎರಡೂ ದಿನ ಪೂರ್ತಿ ಸತತ ಕಾರ್ಯಕ್ರಮಗಳು. ಸಮಯ ವಿಳಂಬ ಆಗದಂತೆ ನೋಡಿಕೊಳ್ಳಲು ಪ್ರತೀ ವೇದಿಕೆಗೆ ಒಬ್ಬರು ಮಾಡರೇಟರ್. ಒಂದು ಪುಸ್ತಕ ಮಾರಾಟ ಮಳಿಗೆ/ ಖರೀದಿಸಿದವರಿಗೆ ಲೇಖಕರ ಹಸ್ತಾಕ್ಷರ ಪಡೆಯಲು ಅವಕಾಶ. ಇದನ್ನು ಕಂಡ ನಮ್ಮ ತಾಲೂಕು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರು (ಅವರ ಪತ್ನಿ ಫೆಸ್ಟಿನಲ್ಲಿ ಪಾಲ್ಗೊಂಡಿದ್ದರು) “ಬಹಳ ಚಂದ ಆರ್ಗನೈಸ್ ಮಾಡ್ತಾರೆ ಮಾರಾಯ್ರೆ” ಎಂದರು. ಇದರ ಪರಿಣಾಮ, ಉಡುಪಿ ತಾಲೂಕಿನ ಮುಂದಿನ ಸಾಹಿತ್ಯ ಸಮಾರಂಭಗಳಲ್ಲಿ ಆದೀತೇ ಕಾದು ನೋಡೋಣ.

>>ಊಟ-ಉಪಹಾರದ “ಸಮಾರಾಧನೆ”ಗಳಿಗೆ ಹೆಚ್ಚಿನ ಆದ್ಯತೆ ಇರದ, ನಾನು ಕಂಡ ಮೊದಲ ಫೆಸ್ಟ್ ಇದು! ಆ ಕಾರಣಕ್ಕೂ ಇದು ಬಹಳ ಇಷ್ಟ ಆಯಿತು.

ಇನ್ನು ನನಗನ್ನಿಸಿದ್ದು:

>> ನಾನು ಆರಂಭದಲ್ಲಿ ಮಗಳ ಹೇಳಿಕೆ ಉದ್ಧರಿಸಿದ್ದೆನಷ್ಟೇ? ಅದು ನನಗೆ ಬಹಳ ಸತ್ಯ ಎನ್ನಿಸಿತು. ಯಾಕೆಂದರೆ “ರಾಷ್ಟ್ರೀಯ ಅತ್ತೆಮ್ಮನವರ”ಗೋಷ್ಠಿಗೆ ಕಿಕ್ಕಿರಿದು ಜನಸಂದಣಿ, ಗೌಜಿ-ಗದ್ದಲ; ಅದೇ ವೇಳೆಗೆ ಪಕ್ಕದ ವೇದಿಕೆಯಲ್ಲಿ ನಡೆದಿದ್ದ ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಕಾರ್ಯಕ್ರಮದ ವೇದಿಕೆಯಲ್ಲಿ ಕಡಿಮೆ ಜನ. ಸ್ಟಾರ್ ವ್ಯಾಲ್ಯೂ ಇರುವಲ್ಲಿ ಮಾತ್ರ ಸಂದಣಿಯೇ ಎಂದು ಕೇಳಿದರೆ ಹಾಗೂ ಇಲ್ಲ. ನಾನು ಪಾಲ್ಗೊಂಡ ಗೋಷ್ಠಿಗೆ ಮುನ್ನ ನಡೆದ ವೀರಪ್ಪ ಮೋಯಿಲಿಯವರ ಗೋಷ್ಠಿಗೆ ಕೂಡ ಹೆಚ್ಚು ಕಡಿಮೆ ನನ್ನ ಗೋಷ್ಠಿಗೆ ಸೇರಿದಷ್ಟೇ ಜನ! (ಇದು ಇಂಗ್ಲೀಷ್ ಮಯ ಫೆಸ್ಟಿನಲ್ಲಿ ಬೆರಳೆಣಿಕೆಯ ಕನ್ನಡ ಕಾರ್ಯಕ್ರಮಗಳ ಕಾರಣಕ್ಕಾಗಿಯೂ, ಏಕಕಾಲಕ್ಕೆ ನಾಲ್ಕು ಕಾರ್ಯಕ್ರಮಗಳು ನಡೆಯುವುದರಿಂದಲೂ ಇರಬಹುದು!)

>>ಸಾವಿರಾರು ಕಿಲೋಮೇಟರ್ ದೂರದಿಂದ ಬಂದ ಸೆಲೆಬ್ರಿಟಿ ಅತಿಥಿಗಳಿಗೆ ನಾಲ್ಕೈದು ಜನರ ಒಂದು ಗೋಷ್ಠಿ ಅರ್ಧಗಂಟೆಯಲ್ಲಿ ಮುಗಿಸುವುದು ಎಂದರೆ ಒಂದು ಮೀಟರ್ ಬಟ್ಟೆಯಲ್ಲಿ ಐದು ಅಂಗಿ ಹೊಲಿದಂತೆ! ಉದಾಹರಣೆಗೆ ನಾನು ಆಸಕ್ತಿಯಿಂದ ಕಾದು ನೋಡಿದ ಸೈರಸ್ ಮಿಸ್ತ್ರಿ, ಕೆ. ಆರ್. ಮೀರಾ, ಮನು ಜೋಸೆಫ್, ವಿಕ್ರಮ್ ಚಂದ್ರ ಮುಂತಾದವರಿದ್ದ ಗೋಷ್ಠಿ. ಮುಕ್ಕಾಲು ಗಂಟೆಯಲ್ಲಿ ಮುಗಿದ ಗೋಷ್ಠಿಯಲ್ಲಿ ಕಡೆಗೆ ನಿರಾಸೆ ಮಾತ್ರ ಸಿಕ್ಕಿದ್ದು.

>> ನನಗೆ ವೈಯಕ್ತಿಕವಾಗಿ, ಹಲವು ಮಂದಿ ಫೇಸ್ಬುಕ್ ಪರಿಚಿತರನ್ನು ಮುಖತಃ ಕಂಡು ಮಾತನಾಡುವುದು ಸಾಧ್ಯವಾಯಿತು. ಕಥೆಗಾರ ವಸುಧೀಂದ್ರ, ಪತ್ರಕರ್ತ ದಿಲಾವರ್ ನನ್ನ ಗೋಷ್ಠಿಯನ್ನು ಪೂರ್ಣ ಕುಳಿತು ಕೇಳಿದರು. ಇನ್ನೊಬ್ಬ ಕಥೆಗಾರ ವಿವೇಕ ಶಾನುಭೋಗರ ಜೊತೆ ಮಾತನಾಡುತ್ತಿದ್ದಾಗ ಜೊತೆಗಿದ್ದ ಜೋಗಿ ಅವರನ್ನೂ ಪರಿಚಯಿಸಿಕೊಂಡೆ. ಅನಂತಮೂರ್ತಿಯವರ ಪತ್ನಿ ಮಧ್ಯಾಹ್ನ ಊಟದ ವೇಳೆ ಮಾತಿಗೆ ಸಿಕ್ಕರು. ಪುರುಷೋತ್ತಮ ಬಿಳಿಮಲೆ, ಸನತ್ ಕುಮಾರ್ ಬೆಳಗಲಿ ಮೊದಲಾದ ಹಿರಿಯರೆಲ್ಲ ಮಾತಿಗೆ ಸಿಕ್ಕರು.

>>ಗೋಷ್ಠಿಯ ಬಳಿಕ, ಪುಸ್ತಕ ಮಾರಾಟದ ಸ್ಥಳದಲ್ಲಿ ಲೇಖಕರು ಲಭ್ಯವಿದ್ದು ಖರೀದಿಸಿದ ಪ್ರತಿಗಳಿಗೆ ಸಹಿ ಹಾಕಿ ಕೊಡುವುದಿತ್ತು. ನಾನು ಬರುವುದಿಲ್ಲ ಎಂದೆ! ಏಕೆಂದರೆ ನನ್ನ ಕಾರ್ಯಕ್ರಮಕ್ಕಿಂತ ಮೊದಲು ಆ ಜಾಗಕ್ಕೆ ಹೋಗಿದ್ದೆ. ಅಲ್ಲಿ ಸೆಲೆಬ್ರಿಟಿಗಳ ಎದುರು ಉದ್ದನೆಯ ಸ್ಪರ್ಧಿ ಸಾಲು ಇದ್ದರೆ ಉಳಿದ ಇಬ್ಬರು ಮುಖಮುಖ ನೊಡುತ್ತ ಕುಳಿತಿದ್ದರು. ನನಗೆ ಆ ಅನುಭವ ಬೇಡವಿತ್ತು. ಹಾಗಂತ ಪುಸ್ತಕ ಮಾರಾಟ ಆಗಿಯೇ ಇಲ್ಲ ಎಂದಲ್ಲ. ರಾಜೇಂದ್ರ ಒಂದು ಬಾಕ್ಸ್ ಪುಸ್ತಕ ಕಳಿಸಿದ್ದರು. ಅದರಲ್ಲಿ ಎಷ್ಟು ಪುಸ್ತಕಗಳಿವೆ ಎಂಬ ಲೆಕ್ಕ ನನಗಿದೆ. ಹಾಗಾಗಿ ಎರಡನೇ ದಿನ ಮಧ್ಯಾಹ್ನದ ಹೊತ್ತಿಗೆ ಒಟ್ಟು ಒಂದು ಬಾಕ್ಸಿನ ಪುಸ್ತಕಗಳಲ್ಲಿ ಐದೋ ಆರೋ ಕಡಿಮೆ ಇತ್ತು!!

>>ನಾನು ಬೇರೆ ಅತಿಥಿಗಳಂತೆ ವೆನ್ಯೂದಲ್ಲೇ ಉಳಿದುಕೊಳ್ಳದಿದ್ದುದರಿಂದ ಹಲವರನ್ನು ಮಾತನಾಡಿಸುವ ಅವಕಾಶ ತಪ್ಪಿಸಿಕೊಂಡೆ; ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ 150 ಕ್ಕೂ ಮಿಕ್ಕಿ ದೇಶಾದ್ಯಂತದ ಅತಿಥಿಗಳ ಜೊತೆ ಎರಡು ದಿನಗಳ ಒಡನಾಟ ತಪ್ಪಿ ಹೋಯಿತು ಎಂಬುದು ಈ ಫೆಸ್ಟ್ನಿಂದ ಕಲಿತ ಪಾಠ.

>>ಈ ರೀತಿಯ ಫೆಸ್ಟ್ಗಳು ಒಟ್ಟಿನಲ್ಲಿ ಯಾವುದಕ್ಕೆ ಏನೂ ಕೊಡುಗೆ ಕೊಡದಿದ್ದರೂ, ಒಂದಿಷ್ಟು ಹೊಸ ಒಡನಾಟಗಳನ್ನು (ಅಲ್ಲೂ ದೊಡ್ಡವರು/ಸಣ್ಣವರು ಇದ್ದಾರೆ ಬಿಡಿ) ಕೊಡಬಲ್ಲವು. ಅದು ದೇಶವ್ಯಾಪಿ ಗಾತ್ರದ್ದಾಗಿರುವುದರಿಂದ, ಆ ಅನುಭವಕ್ಕೆ ಒಡ್ಡಿಕೊಳ್ಳುವುದು, ಹೆಚ್ಚು ತಿರುಗಾಡದ ನನಗೆ, ಇಡಿಯ ಫೆಸ್ಟ್ನ ಒಳ್ಳೆಯ ಭಾಗ ಅನ್ನಿಸಿತು.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles