-ಎಸ್.ವಿ. ಜ್ಯೋತಿ
ಎಲ್ಲಾ ರೀತಿಯ ದೇಹ ಹೊಂದಿದ ಹೆಣ್ಣುಮಕ್ಕಳಿಗೂ ಬನಾರಸಿ ಸೀರೆ ಚೆನ್ನಾಗಿಯೇ ಕಾಣುತ್ತದೆ. ಆದರೂ ಫ್ಯಾಷನ್ ಬಗ್ಗೆ ಜಾಸ್ತಿ ಒಲವು ಇರುವವರು ಆಯ್ಕೆ ಮಾಡುವಾಗ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಸಪೂರ ಹಾಗೂ ಎತ್ತರವಿವರುವವರು ಗಾಢ ರಂಗಿನ, ಅಗಲವಾದ ವಿನ್ಯಾಸವಿರುವ, ಅಗಲ ಅಂಚಿನ ಸೀರೆ ಉಡಬಹುದು. ದಪ್ಪ ಹಾಗೂ ಎತ್ತರ ಕಮ್ಮಿ ಇರುವವರು ತಿಳಿ ವರ್ಣದ ಸಣ್ಣ ಅಂಚಿನ, ಸಣ್ಣ ವಿನ್ಯಾಸದ ಸೀರೆ ಉಟ್ಟರೆ ಲಾವಣ್ಯಮಯವಾಗಿ ಕಾಣುತ್ತಾರೆ.

ಕೈಮಗ್ಗ ಸೀರೆಗಳ ರಾಣಿ ಎಂದರೆ ಅದು ಬನಾರಸಿ ಸೀರೆ. ಈ ಸೀರೆ ಅನೇಕ ಶತಮಾನಗಳಿಂದಲೂ ಮಹಿಳೆಯರ ಅಚ್ಚುಮೆಚ್ಚಿನ ಸೀರೆಯಾಗಿದೆ. ಆಧುನಿಕ ಕಾಲದಲ್ಲೂ ತನ್ನ ಬೇಡಿಕೆ ಉಳಿಸಿಕೊಂಡಿದೆ. ಅದರಲ್ಲೂ ಶುಭ ಸಮಾರಂಭಗಳಿಗೆ ಎಲ್ಲ ವಯೋಮಾನದ ಮಹಿಳೆಯರು ಬನಾರಸಿ ಸೀರೆ ಖರೀದಿಸುವ ಕನಸು ಹೊಂದಿರುತ್ತಾರೆ. ಮದುವೆ ವಧುವಿಗೂ ಬನಾರಸಿ ಸೀರೆಯೇ ಅಚ್ಚುಮೆಚ್ಚು.
ಗುಣಮಟ್ಟದ ರೇಷ್ಮೆ, ಮನಮೋಹಕ ವಿನ್ಯಾಸ, ಅಪ್ಪಟ ಚಿನ್ನ, ಬೆಳ್ಳಿ ಅಂಶವಿರುವ ಜರಿಯಿಂದ ಮಾಡಿದ ಮೀನಾಕರಿ ಕುಸುರಿ ಕೆಲಸದಿಂದ ಮಿಂಚುವ ಈ ಸೀರೆ ರಾಯಲ್ ಲುಕ್ ನೀಡುತ್ತದೆ. ಮೊಗಲರ ಕಾಲದಿಂದಲೂ ಹಿಂದೂಗಳ ಪವಿತ್ರ ಕ್ಷೇತ್ರ ಉತ್ತರ ಪ್ರದೇಶದ ಕಾಶಿ (ಬನಾರಸ್) ಯಲ್ಲಿ ಕೈಮಗ್ಗದಲ್ಲಿ ತಯಾರಾಗುತ್ತಿದ್ದ ಸೀರೆಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದ್ದರೂ ಅದೇ ಹೊಳಪು, ವಿನ್ಯಾಸ, ಮೃದುತ್ವ ಉಳಿಸಿಕೊಳ್ಳಲಾಗಿದೆ. ಅಪ್ಪಟ ರೇಷ್ಮೆ (ಕತಾನ್), ಆರ್ಗಂಜಾ (ಕೋರಾ), ಜಾರ್ಜೆಟ್, ಶತ್ತಿರ್ ಮೊದಲಾದ ನೂಲಿನಲ್ಲಿ ಹೆಣೆದು ವೈವಿಧ್ಯತೆ ಮೆರೆಯಲಾಗುತ್ತಿದೆ. ಹಾಗೆಯೇ ನೇಯ್ಗೆ ಮತ್ತು ವಿನ್ಯಾಸದ ಮೇಲೆ ಜಾಂಗ್ಲಾ, ತಾಂಚೋಯ್, ಕಟ್‌ವರ್ಕ್, ಬುಟ್ಟಾ ಎಂದು ವಿಂಗಡಿಸಲಾಗಿದೆ.

ಮಾರುಕಟ್ಟೆಯಲ್ಲಿ ವೈವಿಧ್ಯಮಯ ಬನಾರಸಿ ಸೀರೆಗಳ ಸಂಗ್ರಹವೇ ಲಭ್ಯ. ಆದರೆ ಆಯ್ಕೆ ಮಾಡುವಾಗ ಹುಷಾರಾಗಿರಬೇಕು. ಶುದ್ಧ ಬನಾರಸಿ ಸೀರೆ 5600 ನೂಲುಗಳನ್ನು ಹೊಂದಿದ್ದು, ಒಂದೊಂದು ನೂಲೂ ಅಗಲವಾಗಿರುತ್ತದೆ. ಒತ್ತೊತ್ತಾಗಿ ಜರಿಯ ನೇಯ್ಗೆ ಇದ್ದಷ್ಟೂ ಅದರ ಬೆಲೆಯೂ ಹೆಚ್ಚು. ಬನಾರಸಿ ಸೀರೆಯ ಜರಿ ಕೆಲವೊಮ್ಮೆ ಕಪ್ಪಾದರೂ ಪಾಲಿಶ್ ಮಾಡಿಸಿದರೆ ಹೊಳಪನ್ನು ಉಳಿಸಿಕೊಳ್ಳಬಹುದು.

ಎಲ್ಲಾ ರೀತಿಯ ದೇಹ ಹೊಂದಿದ ಹೆಣ್ಣುಮಕ್ಕಳಿಗೂ ಬನಾರಸಿ ಸೀರೆ ಚೆನ್ನಾಗಿಯೇ ಕಾಣುತ್ತದೆ. ಆದರೂ ಫ್ಯಾಷನ್ ಬಗ್ಗೆ ಜಾಸ್ತಿ ಒಲವು ಇರುವವರು ಆಯ್ಕೆ ಮಾಡುವಾಗ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಸಪೂರ ಹಾಗೂ ಎತ್ತರವಿವರುವವರು ಗಾಢ ರಂಗಿನ, ಅಗಲವಾದ ವಿನ್ಯಾಸವಿರುವ, ಅಗಲ ಅಂಚಿನ ಸೀರೆ ಉಡಬಹುದು. ದಪ್ಪ ಹಾಗೂ ಎತ್ತರ ಕಮ್ಮಿ ಇರುವವರು ತಿಳಿ ವರ್ಣದ ಸಣ್ಣ ಅಂಚಿನ, ಸಣ್ಣ ವಿನ್ಯಾಸದ ಸೀರೆ ಉಟ್ಟರೆ ಲಾವಣ್ಯಮಯವಾಗಿ ಕಾಣುತ್ತಾರೆ.

ಮಾಸಲು ಬಣ್ಣದವರು ಗುಲಾಬಿ, ಚಿನ್ನದ ಬಣ್ಣ, ಹಳದಿ, ನೀಲಿ ಅಥವಾ ಪೀಚ್ ರಂಗಿನ ಬನಾರಸಿ ಸೀರೆ ಖರೀದಿಸಿ. ಗೋಧಿ ಬಣ್ಣದ ತ್ವಚೆಗೆ ಕೆಂಪು, ಮೆಂತ್ಯ, ಬಾಟಲ್ ಹಸಿರು, ರಾಯಲ್ ನೀಲಿ, ಕಪ್ಪು ರಂಗಿನ ಸೀರೆ ಹೊಂದಿಕೆಯಾಗುತ್ತದೆ. ಕಂದು ಚರ್ಮಕ್ಕೆ ಇಟ್ಟಿಗೆ ಕೆಂಪು, ಚಿನ್ನ, ಬೆಳ್ಳಿ ಅಥವಾ ಕಂಚಿನ ರಂಗಿನ ಸೀರೆ ಓಕೆ.