-ಡಾ. ರೋಹಿಣಾಕ್ಷ ಶಿರ್ಲಾಲು
ಪರಿಶಿಷ್ಟರ ಮೀಸಲಾತಿಗೆ ಕೆನೆಪದರ ತರುವ ವಿಚಾರ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಸುಪ್ರೀಂಕೋರ್ಟ್ ಕಟಕಟೆಯನ್ನೂ ಹತ್ತಿದೆ. ಏಳು ನ್ಯಾಯಾಧೀಶರ ಪೀಠದಲ್ಲಿ ಪ್ರಸ್ತುತ ವಿಚಾರಣೆ ನಡೆಯುತ್ತಿದೆ. ಎಸ್ಸಿ ಎಸ್ಟಿ ಮೀಸಲಾತಿಯು ಅವರಲ್ಲೇ ಮೇಲೆ ಬಂದವರ ಪಾಲಾಗುತ್ತಿದೆ, ಬಡವರಿಗೆ ತಲುಪದೆ ಬಲಿತವರ ಕಪಿಮುಷ್ಠಿಯಲ್ಲಿದೆ ಎಂಬುದು ಕೆನೆಪದರ ನೀತಿ ಪರ ಇರುವವರ ಅಳಲು. ಈ ವಿಚಾರವನ್ನೇ ಪ್ರತಿಪಾದಿಸುತ್ತ ಕಳೆದ ಮೂರು ದಶಕಗಳಿಂದ ಹೋರಾಟ ನಡೆಸುತ್ತಿರುವ ದಲಿತ ನಾಯಕ ಡಾ.ಚಿ.ನಾ.ರಾಮು ಅವರು ತಮ್ಮ ಪ್ರತಿಪಾದನೆಗೆ ಅಕ್ಷರ ರೂಪ ನೀಡಿ ಪುಸ್ತಕ ರಚಿಸಿದ್ದಾರೆ. ಲೇಖಕ ಡಾ. ರೋಹಿಣಾಕ್ಷ ಶಿರ್ಲಾಲು ಅವರು ಈ ಕೃತಿಯ ಒಳನೋಟವನ್ನು ಓದುಗರಿಗೆ ಕಟ್ಟಿಕೊಟ್ಟಿರುವ ಸಂಗ್ರಹಿತ ಲೇಖನ ಇಲ್ಲಿದೆ.

ಮೀಸಲಾತಿ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ಸಂವಿಧಾನಾತ್ಮಕ ರಕ್ಷಣೆಯೊಂದಿಗೆ ನೀಡಿದ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸ್ವಾತಂತ್ರ್ಯ ನಂತರದ ಏಳು ದಶಕಗಳಲ್ಲಿ ಅವಕಾಶವಂಚಿತ ಸಮುದಾಯಗಳು ಪಡೆದ ಬಿಡುಗಡೆಯ ಬೆಳಕನ್ನು ಕಂಡಾಗ ಮೀಸಲಾತಿಯ ಹರಿಕಾರರ ದೂರದೃಷ್ಟಿಗೆ ಶತ ಶತ ಪ್ರಣಾಮಗಳನ್ನು ಸಲ್ಲಿಸಬೇಕಾಗಿದೆ. ಯಾರ ಪಾಲಿಗೆ ಶಾಲೆಗಳ ಬಾಗಿಲು ಮುಕ್ತವಾಗಿ ತೆರೆದಿರಲಿಲ್ಲವೋ, ಉನ್ನತ ಹುದ್ದೆಗಳ ಕನಸು ಕಾಣುವ ಅವಕಾಶಗಳೂ ಇರಲಿಲ್ಲವೋ, ಅಂಥ ಕಾಲದಿಂದ ಮೇಲೆದ್ದು, ಪಾರ್ಲಿಮೆಂಟ್, ರಾಜಭವನಗಳ ಘನಪೀಠಗಳು ಯಾರ ಯಾರ ಸ್ಪರ್ಶದಿಂದಲೂ ಮೈಲಿಗೆಯಾಗಲಾರದಂತೆ ಮಾಡಿತೋ ಅಂತಹ ಲೋಕೋದ್ಧಾರಕನಿಗೆ ಶತ ಶತ ಪ್ರಣಾಮಗಳು. ಬಾಬಾ ಸಾಹೇಬರ ಕನಸಿದ್ದುದು ಈ ದೇಶದ ಬಡ ದಲಿತರ ಮನೆಯ ಮಕ್ಕಳೂ ದೊಡ್ಡ ಕನಸಿನೊಂದಿಗೆ ಬದುಕು ರೂಪಿಸಿಕೊಳ್ಳಬೇಕು. ಅವರ ಪ್ರತಿಭೆಗೆ ಮೈಲಿಗೆಯ ಭೀತಿ ಇಲ್ಲದೆ, ಆತ್ಮವಿಶ್ವಾಸದಿಂದ ನೆಲದ ಮೇಲೆ ಹೆಜ್ಜೆಯೂರಿ ದಿಗಂತದೆತ್ತರ ತಲೆ ಎತ್ತಿ ನಡೆದಾಡುವಂತೆ ಮಾಡಬೇಕು ಎನ್ನುವುದೇ ಆಗಿತ್ತು. ಹುಟ್ಟಿದ ಜಾತಿಯನ್ನು ಪೂರ್ವಜನ್ಮದ ಕರ್ಮ ಎಂದು ಚಲನಶೀಲತೆಗೆ ಅವಕಾಶವೇ ಇಲ್ಲದಂತೆ ಮಾಡಿ, ಅಸಹ್ಯ ಬದುಕನ್ನು ಜನ್ಮಾಂತರದ ಭಾಗ್ಯವೆಂಬಂತೆ ಬಾಳುವ ರೌರವ ನರಕವನ್ನು ಸೃಷ್ಟಿಸಿದ್ದ ಕಾಲಬಾಹಿರ ಪಿಡುಗಿಗೆ ಮುಕ್ತಿ ನೀಡಬೇಕೆನ್ನುವ ಕನಸು ಭಾರತದ ಸ್ವಾತಂತ್ರ್ಯಯದ ಕನಸಿನೊಂದಿಗೆ ಸಮೀಕರಣಗೊಂಡಿತ್ತು. ಹಾಗಾಗಿ ಸ್ವಾತಂತ್ರ್ಯಯವೆನ್ನುವುದು ಸಮಾನತೆಯ ವೃಕ್ಷದಲ್ಲಿ ಅರಳುವ ಫಲವೆಂದೇ ಭಾವಿಸಲಾಯಿತು. ಸಮಾನತೆಯನ್ನು ಸಾಧಿಸುವ ಮೆಟ್ಟಿಲು ಮೀಸಲಾತಿಯಾಗಿತ್ತು.
ಮೀಸಲಾತಿಯ ಕುರಿತು ಕಾಲಾನುಕ್ರಮದಲ್ಲಿ ಸಾಕಷ್ಟು ಪರ ವಿರುದ್ಧದ ಚರ್ಚೆಗಳು ನಡೆದಿವೆ. ಇಂದು ಮೀಸಲಾತಿ ವಂಚಿತರೆನ್ನುವ ಸಮುದಾಯಗಳಿಗೂ ಮೀಸಲಾತಿಯ ಫಲ ದೊರಕಿದೆ. ಇದರ ನಡುವೆ ಪ್ರಬಲ ಸಮುದಾಯಗಳೂ ಮೀಸಲಾತಿಯ ಫಲ ಉಣ್ಣಲು ಹೋರಾಡುತ್ತಿರುವುದರ ನಡುವೆಯೇ ಏಳು ದಶಕಗಳ ಪರಿಶಿಷ್ಟ ಜಾತಿ ಮೀಸಲಾತಿಯು ಎತ್ತ ಚಲಿಸುತ್ತಿದೆ? ಅದರ ಲಾಭ ಯಾರಿಗೆ ಸಿಗುತ್ತಿದೆ? ಇನ್ನೂ ಪರಿಧಿಯ ಹೊರಗಿರುವವರ ನೋವು, ಹಾಗೆ ತಮ್ಮ ಸಹೋದರ ಸಮಾನರಾದವರೇ ಹೊರಗುಳಿಯಲು ಕಾರಣರಾದ ಬಲಿಷ್ಠರ ಮೋಸದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿಯೊಂದು ಹೋರಾಟದ ಅಂಗಣದಲ್ಲೇ ರೂಪುಗೊಂಡು ಓದುಗರ ಕೈಸೇರಿದೆ. ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಡಾ. ಚಿ.ನಾ. ರಾಮು ಅವರ `ಬಲಿತ ದಲಿತರ ನಡುವೆ ನನ್ನ ಜನ ಅನಾಥ’ ಎನ್ನುವ ಕೃತಿ ಮೀಸಲು ವಂಚಿತ ಕೇರಿ ಅಸ್ಪೃಶ್ಯನ ಆಕ್ರಂದನವಾಗಿ ಪ್ರಕಟವಾಗಿದೆ.
ಈ ಕೃತಿಯು ಮೀಸಲಾತಿಯು ಫಲವನ್ನು ಸಮಾನವಾಗಿ ಹಂಚಿಕೊಳ್ಳಬೇಕಾಗಿದ್ದ ಸಮುದಾಯದಲ್ಲಿ ಬಲಿತರು ಮತ್ತು ಬಡವರು ಎಂಬ ಕಂದಕವನ್ನು ನಿರ್ಮಿಸಿ, ಬಡ ದಲಿತರ ಪಾಲಿಗೆ ಮೀಸಲಾತಿಯ ಲಾಭವನ್ನು ಕೈಗೆಟುಕದಂತೆ ದೂರವಿರಿಸಿದ ಸಂಗತಿಯ ಆತ್ಮಾವಲೋಕನವೂ ಹೌದು. ಮೀಸಲಾತಿಯ ಉದ್ದೇಶ ಗುರಿ ತಲುಪುವ ಮೊದಲೇ ಅದರ ದಿಕ್ಕು ತಪ್ಪಿಸಿದೆ. ಚಲನಶೀಲವಾಗಿರಬೇಕಾಗಿದ್ದ ವ್ಯವಸ್ಥೆಯನ್ನು ಜಡ್ಡುಗಟ್ಟುವಂತೆ ಮಾಡಿದ ಸ್ವಹಿತಾಸಕ್ತಿಯ ಶಕ್ತಿಗಳ ಅನಾವರಣವೂ ಹೌದು. ಇಂದಿಗೂ ಮೀಸಲಾತಿಯ ಸ್ಪರ್ಧೆಯಲ್ಲಿ ಸೆಣಸಾಡುವ ಅರ್ಹತೆ ಹಳ್ಳಿಯ ಬಡ ದಲಿತರ ಮಕ್ಕಳಿಗಿದೆಯೇ? ಕಟ್ಟ ಕಡೆಯ ದಲಿತರ ಮಕ್ಕಳಿಗೂ ಮೀಸಲಾತಿಯ ಲಾಭ ಸಿಗಬೇಡವೇ? ಹೀಗಾಗಲು ಕಾರಣರಾರು? ಇದೇ ಮೊದಲಾದ ಪ್ರಶ್ನೆಗಳಿಗೆ ದಾಖಲೆ-ಅಂಕಿಅಂಶಗಳ ಸಹಿತ ಉತ್ತರವನ್ನು ನೀಡುವ ಕೃತಿ ಇದಾಗಿದೆ. ಮೀಸಲು ವ್ಯವಸ್ಥೆಯ ಒಳಗಿದ್ದರೂ ಅದನ್ನು ಪಡೆಯಲು ಸಾಧ್ಯವಾಗದೇ ಹೋದ ಮೀಸಲು ವಂಚಿತರ ಬಗ್ಗೆ ಮಾತನಾಡುವ, ವಂಚಿತರಾಗಿ ಉಳಿದವರ ಕಣ್ಣಿನಿಂದ ಮೀಸಲು ವ್ಯವಸ್ಥೆಯನ್ನು ನೋಡುವ ಪ್ರಯತ್ನ ಇದು.
ಮೀಸಲಾತಿಯ ಮೂಲಕ ಅಸ್ಪೃಶ್ಯರ ಪಾಲಿಗೆ ಸಮಾನತೆಯ ದಾರಿಯನ್ನು ತೆರೆದ ಕನಸು. ಈ ಕನಸಿನ ಸಾಕಾರದ ದಾರಿಗೆ ಸಂವಿಧಾನದ ರಕ್ಷೆಯನ್ನು ನೀಡಿದ ಅಂಬೇಡ್ಕರ್ ದೂರದೃಷ್ಟಿಗೆ ಸ್ಥಾಪಿತ ಹಿತಾಸಕ್ತಿಗಳು ಅಡ್ಡಗಾಲಾಗಿ ನಿಂತ ನೋವಿನ ವ್ಯಥೆಯನ್ನು ನಿರೂಪಿಸುತ್ತಾರೆ. ಪ್ರಬಲ ಸಮುದಾಯ, ಗುಂಪುಗಳು ವಂಚಿತರಿಂದ ಅವಕಾಶವನ್ನು ಕಸಿದುಕೊಂಡ ಪರಿಣಾಮ, ಮೀಸಲಾತಿಯ ಪ್ರಯೋಜನವನ್ನು ಪಡೆದು ಕೇರಿಯಿಂದ ಮೇಲೆದ್ದು ನಿಲ್ಲಬೇಕಾಗಿದ್ದ ಸಮುದಾಯಗಳು ಕೇರಿಯಲ್ಲೇ ಉಳಿಯುವಂತಾದ ಸ್ಥಿತಿಯ ವಿಮರ್ಶೆಯನ್ನು ಮಾಡುತ್ತಾರೆ. ಕೆಲವೇ ಕುಟುಂಬಗಳು, ಸಮುದಾಯಗಳು ಮತ್ತೆ ಮತ್ತೆ ಮೀಸಲಾತಿಯ ಫಲವುಂಡ ಕಾರಣದಿಂದ ಅವಕಾಶ ವಂಚಿತರು ವ್ಯವಸ್ಥೆಯಿಂದ ದೂರ ಉಳಿದ ಬಗ್ಗೆ ಮಾತನಾಡಬೇಕಾಗಿದ್ದವರ ಮೌನದ ಹಿಂದಿನ ಕಾರಣಗಳನ್ನು ಬಯಲುಗೊಳಿಸುತ್ತಾರೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಬಂದ ಬಲಿಷ್ಠರು ಮತ್ತು ಅಕಡೆಮಿಕ್ ವಲಯದ ಚಿಂತಕರ ಅವಕಾಶವಾದಿತನದಿಂದ ದಲಿತರು ಕೇರಿಯಲ್ಲೇ ಕಳೆದುಹೋಗುತ್ತಿರುವುದರ ಬಗೆಗಿನ ವಿಷಾದಪೂರ್ಣವಾದ ಧ್ವನಿ ಕೃತಿಯುದ್ದಕ್ಕೂ ಸ್ಥಾಪಿಸಿದೆ. ಅಂಬೇಡ್ಕರ್ ಕನಸು ನನಸಾಗದೇ ಉಳಿದುದರ ಕಾರಣದ ಆತ್ಮಾವಲೋಕನಕ್ಕಿದು ಮುನ್ನುಡಿಯಾಗಿದೆ.
ಪರಿಶಿಷ್ಟರ ಮೀಸಲಾತಿಯ ಪಟ್ಟಿಯೊಳಗೆ ಪ್ರಬಲ ಜಾತಿಗಳು ಸೇರಿಕೊಂಡು ಹೇಗೆ ವ್ಯವಸ್ಥಿತವಾಗಿ ಅವಕಾಶಗಳಿಗೆ ಕನ್ನ ಹಾಕುತ್ತಿವೆ ಎನ್ನುವುದನ್ನು ಗುರುತಿಸುತ್ತಾ, ಅಸ್ಪೃಶ್ಯತೆಯ ನೋವನ್ನೇ ಅನುಭವಿಸದ ಜಾತಿಗಳನ್ನು ರಾಜಕೀಯ ಕಾರಣಗಳಿಗಾಗಿ ಅಸ್ಪೃಶ್ಯ ಜಾತಿಗಳ ಪಟ್ಟಿಯೊಳಗೆ ಸೇರಿಸುತ್ತಾ ಸೇರಿಸುತ್ತಾ ವರ್ಷದಿಂದ ವರ್ಷಕ್ಕೆ ಜಾತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಮೀಸಲಾತಿಯ ಪ್ರಮಾಣ ಹೆಚ್ಚಾಗದೇ ಇದ್ದ ಪರಿಣಾಮವಾಗಿ ಮೂಲ ಅಸ್ಪೃಶ್ಯರಿಗೆ, ಸಣ್ಣ ಪುಟ್ಟ ಜನಾಂಗಗಳಿಗೆ ಮೀಸಲಾತಿಯ ಫಲವೇ ಸಿಗದಂತೆ ನಡೆಯುತ್ತಿರುವ ಮಹಾದ್ರೋಹದ ಹುನ್ನಾರಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಮೀಸಲಾತಿ ಪಡೆದ ಮತ್ತು ಪಡೆಯಲಾರದ ದಲಿತರ ನಡುವೆ ಉಂಟಾಗಿರುವ ಕಂದಕದ ಬಗ್ಗೆ ಇದುವರೆಗೆ ಅಧಿಕೃತ ಅಂಕಿ ಅಂಶಗಳ ಸಹಿತ ಯಾರೂ ಮಾತನಾಡದೇ ಇದ್ದ ಸಂದರ್ಭದಲ್ಲಿ ಈ ಕೃತಿ ಮಹತ್ವದ ದಾಖಲೆ ಎನ್ನಬಹುದು. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಅಧಿಕಾರ ಪಡೆದುಕೊಂಡವರ ಮುಂದಿನ ತಲೆಮಾರು ಕೂಡ ಅದೇ ಮೀಸಲಾತಿಯ ಸರದಿಯ ಮೊದಲಿಗರಾಗಿ ನಿಂತ ಪರಿಣಾಮವಾಗಿ ಸಮಾನವಾಗಿ ಹಂಚಿ ತಿನ್ನಿ ಎನ್ನುವ ಅಂಬೇಡ್ಕರ್ ಮಾತು ಅರಣ್ಯರೋದನವಾಗಿ ಉಳಿಯಿತು. ಹಾಗಾದರೆ ಇದರ ಪರಿಹಾರದ ಸೂತ್ರವೇನು? ಈ ಕೃತಿಯ ಕೇಂದ್ರ ಪ್ರತಿಪಾದನೆ ಮೀಸಲು ಮಹಾಮೋಸಕ್ಕೆ ಕೆನೆಪದರವೇ ನ್ಯಾಯ ಎನ್ನುವುದು ಸಬಲರು ಮತ್ತು ದುರ್ಬಲರ ನಡುವಿನ ಕೆನೆಪದರವನ್ನು ಗುರುತಿಸಿದ ಹೊರತು ಮೀಸಲಾತಿಯ ಉದ್ದೇಶ ಸಫಲವಾಗದು. ಉಂಡು ಹೊಟ್ಟೆ ತುಂಬಿ ಬಲಿತವರು ಹಸಿದು ತುಳಿತಕ್ಕೊಳಗಾದವರಿಗೆ ಅವಕಾಶವನ್ನು ನೀಡಲಾರದ ಹೊರತು ಅಂಬೇಡ್ಕರ್ ಕನಸು ಈಡೇರಲಾರದು. ದಲಿತ ಕೆನೆಪದರ ಮೀಸಲಾತಿಯ ಜಾರಿಯ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತಾರೆ.
ಏಳು ದಶಕಗಳ ಮೀಸಲು ಫಲಾನುಭವಿಗಳು ಮೀಸಲು ಸಿಗದೇ ತಳಮಟ್ಟದಲ್ಲಿ ಉಳಿದವರನ್ನು ಮೇಲೆತ್ತಲು ನಡೆಸಿದ ಪ್ರಯತ್ನ ಶೂನ್ಯವಾದ ಕಾರಣದಿಂದ ಅಸ್ಪೃಶ್ಯರ ನಡುವೆ ಮತ್ತೊಂದು ಅಸ್ಪೃಶ್ಯ ವರ್ಗ ಸೃಷ್ಟಿಯಾಗಿದೆ. ರಾಜಕಾರಣದಲ್ಲಿ ಮೀಸಲಾತಿಯು ಒಂದು ಮತಗಳಿಕೆಯ ಅಸ್ತ್ರವಾಯಿತು. ಮೀಸಲಾತಿ ಹೋರಾಟಗಳಿಗೆ ಸರಕಾರಗಳನ್ನೇ ಕೆಡಹುವ ಶಕ್ತಿ ಬಂದ ಕಾರಣ ರಾಜಕಾರಣಿಗಳು ಇದನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಪ್ರಬಲ ಜಾತಿಗಳೂ ಮೀಸಲು ಪಟ್ಟಿಯೊಳಗೆ ವ್ಯವಸ್ಥಿತವಾಗಿ ನುಸುಳಿಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ ಮೀಸಲು ಜೀವಜಲದ ಸ್ಪರ್ಶಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಾ, ಇಂದಿಗೂ ಅಸ್ಪೃಶ್ಯತೆಯ ಕೂಪದಲ್ಲೇ ಸಿಲುಕಿ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದವರ ಧ್ವನಿ ಈ ಕೃತಿಯಾಗಿದೆ. ಮೀಸಲಾತಿಯ ಮುಕ್ತ ಚರ್ಚೆಗಳನ್ನು ಮೀಸಲಾತಿಯನ್ನು ರದ್ದುಗೊಳಿಸುವ ಸಂಚೆಂಬಂತೆ ಬಿಂಬಿಸುತ್ತಾ ಬಂದ ಹುನ್ನಾರವನ್ನು ಎಚ್ಚರದಿಂದ ಗುರುತಿಸುತ್ತಾರೆ. ಅಸಮಾನತೆ, ಅಸ್ಪೃಶ್ಯತೆ ಸಮಾಜದಲ್ಲಿ ಜೀವಂತ ಇರುವವರೆಗೂ ಮೀಸಲಾತಿಯ ರದ್ದು ಸಾಧ್ಯವಿಲ್ಲ ಎಂಬ ಸತ್ಯದ ಅರಿವಿದ್ದೂ, ಮೀಸಲಾತಿಯ ಕುರಿತ ಆರೋಗ್ಯಪೂರ್ಣ ಚರ್ಚೆಗೂ ಅವಕಾಶವಿಲ್ಲದಂತೆ ಮಾಡಿದ ಹುನ್ನಾರದ ಪರಿಣಾಮವಾಗಿ ಮೀಸಲಾತಿಯು ಚಲನೆ ಕಳೆದುಕೊಂಡು ನಿಂತ ನೀರಾಗಿರುವಾಗ ಶುದ್ಧೀಕರಣದ ಅಗತ್ಯವನ್ನು ಪ್ರತಿಪಾದಿಸುವುದು ದ್ರೋಹವಾಗುವುದಿಲ್ಲ.
ಮೀಸಲು ನೀತಿಯ ಇತಿಹಾಸ, ಅದರ ಹಿಂದಿನ ಹೋರಾಟ, ವಿವಿಧ ಆಯೋಗಗಳು ನೀಡಿದ ವರದಿಗಳು, ಶಿಫಾರಸುಗಳು, ಅನುಷ್ಠಾನದ ಸ್ಥಿತಿಗತಿಯ ಬಗ್ಗೆ ನೀಡುವ ವಿವರಗಳು ಅದ್ಭುತವಾದ ಅಧ್ಯಯನ ಸಾಮಗ್ರಿ ಮೀಸಲು ಪಟ್ಟಿಗೆ ಸೇರುವ ಪ್ರಬಲರ ಹೋರಾಟ ಮತ್ತು ರಾಜಕೀಯ ದೂರದೃಷ್ಟಿ ಇಲ್ಲದ ಸರಕಾರಗಳ ನಡವಳಿಕೆಗಳನ್ನು ಪ್ರಶ್ನಿಸುತ್ತಾ, ಹೋರಾಟಗಳ ಹಿಂದಿನ ರಾಜಕೀಯ ಲೆಕ್ಕಾಚಾರಗಳನ್ನು ವಿಶ್ಲೇಷಣಾತ್ಮಕವಾಗಿ ಮಂಡಿಸುತ್ತಾರೆ. ಹಿಂದುಳಿದ ವರ್ಗಗಳ ಮೀಸಲಾತಿಗೆ ಕೆನೆಪದರವನ್ನು ಅನ್ವಯಿಸಿದಂತೆ ಪರಿಶಿಷ್ಟರ ಮೀಸಲಿಗೆ ಕೆನೆಪದರ ಅನ್ವಯಿಸದ ಕಾರಣ ಅವಕಾಶಗಳು ಹೇಗೆ ಪ್ರಬಲರ ಪಾಲಾಗುತ್ತಿವೆ ಎನ್ನುವ ಅಂಗೈ ಹುಣ್ಣಿಗೆ ಕನ್ನಡಿ ಇಲ್ಲದೆ ತೋರಿಸುತ್ತಾರೆ. ಜನಸಂಖ್ಯಾವಾರು ಮೀಸಲಾತಿಯ ಕುರಿತು, ಮೀಸಲು ಕೆನೆಪದರ ಪ್ರಸ್ತಾಪವನ್ನು ಮಾಡಿದ ಸದಾಶಿವ ಆಯೋಗದ ವರದಿಯನ್ನು ಮರೆಮಾಚಿ ಕೇವಲ ಒಳ ಮೀಸಲಿನ ಪ್ರಸ್ತಾಪ, ಶೇ.70 ಮೀಸಲಿನಂತಹ ಭ್ರಮೆಯನ್ನು ಶೋಷಿತರ ನಡುವೆ ಬಿತ್ತುತ್ತಾ, ರಾಜಕೀಯ ಗದ್ದುಗೆಯನ್ನು ಕಾಯಂ ಆಗಿ ಕುಳಿತವರ ಸ್ವಹಿತಾಸಕ್ತಿಯ ಆಳ-ಅಗಲಗಳನ್ನು ಚರ್ಚಿಸುತ್ತಾರೆ. ಸಾಕಷ್ಟು ಪ್ರಾತಿನಿಧ್ಯ ಪಡೆದು ಬಲಿತವರು ಮತ್ತೆ ಮತ್ತೆ ಮೀಸಲಾತಿಯ ಲಾಭ ಪಡೆಯುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಅಪ್ರಸ್ತುತವಲ್ಲ. “ಮಾನವೀಯ ನೆಲೆಯಲ್ಲಿ ಚಿಂತಿಸದ, ಹಳ್ಳಿಯಲ್ಲಿ ಬಡತನ ಹೊದ್ದು ಮಲಗಿದ ತಮ್ಮವರಿಗಾಗಿ ತ್ಯಾಗ ಮಾಡಲು ಸಿದ್ಧರಿಲ್ಲದ ಬಲಿತವರ ಮೀಸಲಾತಿ ಅನ್ಯಾಯಕ್ಕೆ ಕೆನೆಪದರವೇ ನ್ಯಾಯ, ಕೆನೆಪದರ ವ್ಯವಸ್ಥೆ ಮೀಸಲು ನ್ಯಾಯವಂಚಿತರು ಸವಲತ್ತು ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸಿ, ಅಂತಹವರನ್ನು ಬದಿಗೆ ಸರಿಸುವ ಸಾಧನವೇ ಹೊರತು ಮೀಸಲು ಮಣ್ಣುಪಾಲು ಮಾಡುವ ಕೆಟ್ಟ ಉಪಾಯವಲ್ಲ,’’ ಎನ್ನುತ್ತಲೇ, “ಮೀಸಲಾತಿಯ ಪುನರ್ ಪರಿಶೀಲನೆ ಎಂದರೆ ಯಾರಿಗೆ ನ್ಯಾಯ ದೊರಕಿಲ್ಲವೋ ಅವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿಯೇ ಮೀಸಲಾತಿ ನೀತಿಯನ್ನು ಪುನರುತ್ಥಾನಗೊಳಿಸುವುದು.’’ ಎಂಬ ಮಾತು ವರ್ತಮಾನದ ಅಗತ್ಯವನ್ನು ಉದ್ದೇಶಿಸಿದ್ದಾಗಿದೆ.
ಸ್ವಾತಂತ್ರ್ಯ ನಂತರ ಸಿಕ್ಕಿದ ರಾಜಕೀಯ ಮೀಸಲು ಕ್ಷೇತ್ರಗಳು ಹೇಗೆ ವಂಶಪಾರಂಪರ್ಯ ಜಹಗೀರುಗಳಾಗಿವೆ. ಕೆಲವೇ ಬಲಿತವರ ಕೈ ಹಿಡಿತದಲ್ಲೇ ಉಳಿದು ಬಡ ದಲಿತರು ಅಧಿಕಾರದ ಏಣಿ ಏರುವ ಅವಕಾಶದಿಂದ ವಂಚಿತರಾಗಿದ್ದಾರೆ. 1952ರ ಮೊದಲ ಚುನಾವಣೆಯಿಂದ ಈಗಿನವರೆಗಿನ ಮೀಸಲು ಕ್ಷೇತ್ರಗಳು ಯಾರ ಪಾಲಾಗಿವೆ, ಒಂದೊಂದು ರಾಜ್ಯದ ಲೋಕಸಭೆ, ವಿಧಾನಸಭೆಗಳಿಗೆ ಒಬ್ಬರೇ ಅಭ್ಯರ್ಥಿಗಳು ನಾಲ್ಕಾರು ಬಾರಿ ಸ್ಪರ್ಧಿಸಿ ಆಯ್ಕೆಯಾಗುತ್ತಾ ಮೀಸಲು ಕ್ಷೇತ್ರಗಳು ವಂಶಪಾರಂಪರ್ಯ ಪಾಳೆಯಗಳಾಗಿ ಬದಲಾಗಿದೆ ಎನ್ನುವ ಅಂಕಿಅಂಶಗಳು ಬೆರಗು ಹುಟ್ಟಿಸುವಂತಿವೆ. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಬಲ್ಲ ಸಾಮರ್ಥ್ಯವುಳ್ಳುವರೂ ಮೀಸಲು ಕ್ಷೇತ್ರಕ್ಕೆ ಮೀಸಲಾದ ಪರಿಣಾಮ ಪರಿಶಿಷ್ಟ ಸಮುದಾಯಗಳಲ್ಲಿ ಹೊಸ ರಾಜಕೀಯ ನಾಯಕತ್ವ ಬೆಳೆಯದಂತೆ ಹೇಗೆ ತಡೆಯಾಗಿದ್ದಾರೆ? ಸಾಮಾನ್ಯ ಕ್ಷೇತ್ರದಲ್ಲೂ ಸ್ಪರ್ಧಿಸಿ ಗೆದ್ದು ಪರಿಶಿಷ್ಟ ಪ್ರಾತಿನಿಧ್ಯ ಹೆಚ್ಚಿಸಲು ಇದ್ದ ಅವಕಾಶವನ್ನು ಹೇಗೆ ಕೈಚೆಲ್ಲಿದ್ದಾರೆ ಎನ್ನುವುದನ್ನು ವಿಶ್ಲೇಷಿಸುತ್ತಾರೆ. ಉತ್ತರ ಭಾರತದ 11 ರಾಜ್ಯಗಳು, ಮಧ್ಯ ಭಾರತದ 4 ರಾಜ್ಯಗಳು, ದಕ್ಷಿಣ ಭಾರತದ 5 ರಾಜ್ಯಗಳ ದಲಿತರ ಸಮಸ್ಯೆಗಳ ವಿವಿಧ ಆಯಾಮ, ಹೋರಾಟ, ಸ್ಪೃಶ್ಯ-ಅಸ್ಪೃಶ್ಯರ ನಡುವಿನ ಅಂತರ, ಶೈಕ್ಷಣಿಕ ಸ್ಥಿತಿಗತಿ, ಆರ್ಥಿಕ-ರಾಜಕೀಯ ಪರಿಸ್ಥಿತಿ, ಮೀಸಲು ಬಳಕೆ-ದುರ್ಬಳಕೆ ಕುರಿತ ಸಮಗ್ರ ವಾದ ಚಿತ್ರಣ ನೀಡಿರುವುದು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದು ಮುಂದಿನ ಸಂಶೋಧನೆಗೆ ಮಹತ್ತದ ಆಕರವಾಗಬಲ್ಲುದು.
ಬಿಎಎಸ್/ಐಎಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದವರೂ ತಮ್ಮ ಮಕ್ಕಳಿಗೆ ಮತ್ತೆ ಮೀಸಲು ಕೋಟಾದಡಿಯಲ್ಲೇ ಅವಕಾಶ ಕೊಡಿಸುತ್ತಾ ಹೋದ ಪರಿಣಾಮ ಬಡ ದಲಿತ ಮಕ್ಕಳ ಸೋಲಿಗೆ ಹೇಗೆ ಕಾರಣರಾಗಿದ್ದಾರೆ ಎನ್ನುವುದನ್ನು ನಿದರ್ಶನಗಳ ಸಹಿತ ನೀಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ನ್ಯಾಯಯುತವಾದ ಪರಿಹಾರವನ್ನು ದಲಿತ ಸಮುದಾಯಗಳಿಗೆ ಒದಗಿಸಿಕೊಡಲು ಹೋರಾಡಬೇಕಾಗಿದ್ದ ದಲಿತ ಹೋರಾಟ ಸಂಘಟನೆಗಳು ದಾರಿ ತಪ್ಪಿದ್ದು ಹೇಗೆ? ಚಳವಳಿಗಳ ಅವಸಾನಕ್ಕೆ ಕಾರಣರಾರು? ಪೊಳ್ಳು ನಾಯಕರ ಪ್ರಾಯೋಜಿತ ಹೋರಾಟಗಳೇ ದಲಿತ ಹೋರಾಟವೆನ್ನುವ ಭ್ರಮೆಯನ್ನು ಹುಟ್ಟಿಸಿದುದರ ಪರಿಣಾಮವೇನು ಎನ್ನುವುದು ಮನಮುಟ್ಟುವಂತೆ ವಿವರಿಸುತ್ತಾರೆ.
ಇಂಗ್ಲಿಷ್ ಸೇರಿ ಹಲವು ಭಾಷೆಗಳಿಗೆ ಅನುವಾದಗೊಂಡಿರುವ ಕೃತಿ ನಮ್ಮ ಕಾಲದ ಮಹತ್ವದ ಚರ್ಚೆಯೊಂದಕ್ಕೆ ವೇದಿಕೆಯಾಗಿದೆ. ಈ ಚಿಂತನೆ ವಂಚಿತರ ಪಾಲಿಗೆ ಮುಚ್ಚಿದ ಬಾಗಿಲು ತೆರೆಯಲು ಕೀಲಿಕೈಯಾದರೆ ಹೊಸ ಬೆಳಕೊಂದು ಮೂಡಿದಂತಾಗುತ್ತದೆ.
(ಲೇಖಕರು ಕರ್ನಾಟಕ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ, ವಾಗ್ದೇವಿ ಪ್ರಶಸ್ತಿ ಪುರಸ್ಕೃತರು)