-ಕೇಶವರೆಡ್ಡಿ ಹಂದ್ರಾಳ
ನಾನು ಬೆಳೆದಂತೆ ಬೆಂಗಳೂರು, ಮುಂಬೈ, ನಾಗಪುರ, ಕೊಲ್ಕತ್ತಾ ಮುಂತಾದ ಮಹಾನಗರಗಳ ಕೊಳಗೇರಿಗಳನ್ನು ಸುತ್ತುವಾಗ ಪರಿಮಿತಿಗಳಾಚೆಗಿನ ಸತ್ಯಗಳು ವಾಸ್ತವದ ಬದುಕಿನೊಳಗೆ ಹೇಗೆ ಪೊಳ್ಳಾಗಿಬಿಡುತ್ತವೆ ಎಂಬುದನ್ನು ಕಂಡುಕೊಂಡೆ. ಅನ್ನ, ಹಸಿವು, ಪ್ರೀತಿ, ಕಾಮ, ಸಾಮಾಜಿಕ ಸಂಬಂಧಗಳು, ಕೌಟುಂಬಿಕ ಸಂಬಂಧಗಳು ಒಂದರೊಳಗೊಂದು ಹೆಣೆದುಕೊಂಡು ಒಂದರ ನೆರಳಲ್ಲಿ ಇನ್ನೊಂದು, ಇನ್ನೊಂದರ ನೆರಳಲ್ಲಿ ಮತ್ತೊಂದು ಸುರುಳಿ ಸುತ್ತಿಕೊಂಡು ಉಸಿರಾಡುವ ಪರಿ… ದೇಹ ಮತ್ತು ಮನಸ್ಸುಗಳನ್ನು ಅಳೆಯಲು ಮನುಷ್ಯ ಇನ್ನೂ ಒಂದು ನಿಖರವಾದ ಮೌಲ್ಯಮಾಪಕವನ್ನು ಕಂಡು ಹಿಡಿಯಲು ಸಾಧ್ಯವೇ ಆಗಿಲ್ಲ…

ಅಂದು 2006 ರ ಏಪ್ರಿಲ್ ತಿಂಗಳಿನ ಒಂದು ದಿನ ರಾತ್ರಿ ಚೆನ್ನೈನ palmgrove ಹೋಟೆಲಿನ ಎಸಿ ರೂಮಿನಲ್ಲೂ ನಾನು ಬೆವರುತ್ತಿದ್ದರೆ ಆಕೆ ನಗು ಚೆಲ್ಲಿ ಕುಳಿತಿದ್ದಳು. ಅಂಥ ಸಂದರ್ಭವೊಂದು ಒದಗಿಬರುತ್ತದೆಂದು ನಾನ್ಯಾವೊತ್ತಿಗೂ ಊಹಿಸಿರಲಿಲ್ಲ. ಆಕೆ ನನಗಿಂತಲೂ ಐದಾರು ವರ್ಷ ಚಿಕ್ಕವಳಾಗಿದ್ದಳು ಮತ್ತು ನನ್ನ ಅಭಿಮಾನಿಯಾಗಿದ್ದವಳು. ಅವಳ ಒತ್ತಾಯಕ್ಕೆ ಮಣಿದು ನಾನು ವಿಮಾನ ಹತ್ತಿ ಚೆನ್ನೈಗೆ ಬಂದಿದ್ದೆ. ಆಕೆ ಚೆನ್ನೈನ ನೆಂಟರ ಮನೆಗೆಂದು ಬಂದವಳು ಹಾಗೆಯೇ ಭೇಟಿಯಾಗಲು ಪ್ಲಾನ್ ಮಾಡಿಕೊಂಡಿದ್ದಳು. ಅಂದು ಸಂಜೆ ಮಬ್ಬುಗತ್ತಲಲ್ಲಿ ಮರೀನಾ ಬೀಚ್ನಲ್ಲಿ ನಾನು ಕೊಡಿಸಿದ ಮಲ್ಲಿಗೆಯ ಹೂವು ಮುಡಿದು ಐಸ್ಕ್ರೀಮ್ ಸವಿಯುತ್ತಾ ನನ್ನ ಜೊತೆ ಕುಳಿತಿದ್ದಳು, ನಡೆದಿದ್ದಳು, ನಕ್ಕಿದ್ದಳು, ಮಾತನಾಡಿದ್ದಳು, ನಾಚಿದ್ದಳು. ಪಾಮ್ ಗ್ರೋವ್ ಹೋಟೆಲಿನ ರೂಮಿನಲ್ಲಿ ಆಕೆ ನನ್ನ ಕಥನಗಾರಿಕೆಯ ಬಗ್ಗೆ, ಕಥಾ ಪಾತ್ರಗಳ ಬಗ್ಗೆ ಊಟ ಮಾಡುತ್ತಾ ಒಂದು ಗಂಟೆ ಮಾತನಾಡಿದ್ದಳು. ಇಬ್ಬರೂ ಒಂದೇ ಹಾಸಿಗೆಯ ಮೇಲೆ ಮಲಗಿದ್ದೆವು. ಅವಳನ್ನೊಮ್ಮೆ ತಬ್ಬಿ ಮುತ್ತಿಟ್ಟಿದ್ದೆ. ಆಕೆ ಪುಳಕಗೊಂಡು ನನ್ನನ್ನು ಅಪ್ಪಿಕೊಂಡಿದ್ದಳು. ಅಷ್ಟೆ, ನಾನು ವಿಪರೀತವಾಗಿ ಬೆವರತೊಡಗಿದ್ದೆ. ಇನ್ನಿಲ್ಲದಂತೆ ಮೈ ನಡುಕ ಶುರುವಾಗಿತ್ತು ನನಗೆ. ಆಕೆ ಭಯದಿಂದ ಫ್ರಿಜ್ ನೀರು ಬಗ್ಗಿಸಿಕೊಟ್ಟಿದ್ದಳು. ನನ್ನ ಎದೆಯ ಮೇಲೆ ಕೈ ಇಟ್ಟು ಸಂತೈಸಿದ್ದಳು. ನಾನು ತಾಯಿ ಮಡಿಲಿನಲ್ಲಿ ನಿದ್ರಿಸುವ ಮಗುವಂತೆ ನಿದ್ರಿಸಿಬಿಟ್ಟಿದ್ದೆ. ಮಾರನೆಯ ದಿನ ತಿಂಡಿ ತಿಂದು ಆಕೆಯನ್ನು ರೈಲು ನಿಲ್ದಾಣದಲ್ಲಿ ಬಿಟ್ಟ ನಂತರ ನಿರಾಳನಾಗಿದ್ದೆ. ರೈಲು ನಿಲ್ದಾಣದ ಗೇಟು ದಾಟಿ ಒಳಗೆ ಹೋಗುವ ಮೊದಲು ನನ್ನನ್ನು ನೋಡಿ ತುಸು ನಕ್ಕು “ಪುಕ್ಕಲ ನೀನು. ನಿನ್ನ ಕಥೆಗಳ ಅನೇಕ ಪಾತ್ರಗಳು ನಿನ್ನೆದೆಯಲ್ಲಿ ಹೆಪ್ಪುಗಟ್ಟಿ ಕುಳಿತಿವೆ. ನೀನು ಹೆಣ್ಣು ಪಾತ್ರಗಳ ಪರಕಾಯ ಪ್ರವೇಶ ಹೇಗೆ ಮಾಡುತ್ತೀಯೆಂದು ಗೊತ್ತಾಯ್ತು…” ಎಂದು ಕೈಕುಲುಕಿದ್ದಳು. ನನಗೆ ವಿಮಾನ ಮಾರನೆಯ ದಿನ ಬೆಳಗ್ಗೆ ಇದ್ದಿದ್ದರಿಂದ ಚೆನ್ನೈನಲ್ಲಿದ್ದ ನನ್ನ ಆತ್ಮೀಯ ಹಿರಿಯ ಜರ್ನಲಿಸ್ಟ್ ಗೆಳೆಯನೊಂದಿಗೆ ತಿರುಗಾಡಿ, ಅವರೊಂದಿಗೆ ಅಂದು ರಾತ್ರಿ ತಣ್ಣನೆಯ ಬಿಯರ್ ಕುಡಿದು, ಊಟ ಮಾಡಿ ನೆಮ್ಮದಿಯಿಂದ ನಿದ್ದೆ ಮಾಡಿದ್ದೆ. ಅಂದು ಆಕೆ ಬೀಳ್ಕೊಡುಗೆಯ ಸಮಯದಲ್ಲಿ ಕೈ ಕುಲುಕಿದಾಗಿನ ಮಧುರ ಸ್ಪರ್ಶ ಇಂದಿಗೂ ಮರೆಲಾಗುತ್ತಿಲ್ಲ. ತಿಂಗಳ ನಂತರ ಈ ವಿಷಯವನ್ನು ತಡೆಯಲಾರದೆ ನನ್ನ ಹೆಂಡತಿ ಚಂದ್ರಮಳ ಬಳಿ ಹೇಳಿಬಿಟ್ಟಿದ್ದೆ. “ಆಹಾ ಕಳ್ನನ್ಮಗ್ನೆ ಎಂಥ ಶೂರನಪ್ಪ ನೀನು. ಆ ಭಂಗೀತಕ್ಕೆ ವಿಮಾನದಲ್ಲಿ ಚನ್ನೈವರೆಗೂ ಹೋಗಬೇಕಿತ್ತಾ..” ಎಂದು ಮೂದಲಿಸಿ ಮೂರು ನಿಮಿಷ ಮೌನಾಚರಣೆಯನ್ನು ಮಾಡಿದ್ದಳಲ್ಲದೆ ಆಕೆಯನ್ನು ಒಂದು ದಿನ ಮನೆಗೆ ಊಟಕ್ಕೆ ಕರೆಯಲೂ ಹೇಳಿದ್ದಳು. ಮೂರು ವರ್ಷಗಳ ಹಿಂದೆ ಆಕೆ ಕ್ಯಾನ್ಸರ್ ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆಯ ಮೃತ್ಯು ಮಂಚದ ಮೇಲೆ ಮಲಗಿದ್ದಾಗ ಒಮ್ಮೆ ನೋಡಲು ಹೋಗಿದ್ದೆ. ಆಕೆಯ ಕಣ್ಣಾಲಿಗಳಲ್ಲಿ ಅಸಹಾಯಕತೆಯ, ದಯನೀಯತೆಯ ಹನಿಗಳು ಮಡುಗಟ್ಟಿದ್ದವು. ಅದಾದ ಎರಡು ವಾರಗಳಲ್ಲಿ ಆಕೆ ಮರಣ ಹೊಂದಿದಾಗ ನಾನು ನೋಡಲು ಹೋಗಲಿಲ್ಲ. ಈ ನಾಲ್ಕು ತಿಂಗಳ ಹಿಂದೆ ನನ್ನ ಹೆಂಡತಿಯು ಅಪೋಲೋ ಆಸ್ಪತ್ರೆಯ ಎಸಿ ರೂಮಿನ ಹಾಸಿಗೆಯಲ್ಲಿ ಕೊನೆಯುಸಿರೆಳೆದಾಗ ಕ್ಷಣ ಆಕೆ ಮನದಲ್ಲಿ ತೇಲಿ ಹೋಗಿದ್ದಳು. ತಣ್ಣಗಾಗಿದ್ದ ನನ್ನ ಹೆಂಡತಿಯ ದೇಹವನ್ನು ಮುಟ್ಟಿ ಮುಟ್ಟಿ ಕಣ್ಣೀರನ್ನು ಇಂಗಿಸಿಕೊಳ್ಳಲು ಪ್ರಯತ್ನಿಸಿ, ಪ್ರಯತ್ನಿಸಿ ವಿಫಲನಾಗಿದ್ದೆ. ಪ್ರೀತಿಯೆಂಬುದು ಬದುಕಿನ ಬಲುದೊಡ್ಡ ಶಕ್ತಿ. ಪ್ರೀತಿ, ಕಾಮ, ಮೋಹಗಳೆಂಬ ಪಲ್ಲಟಗೊಳ್ಳಬಲ್ಲ ಅಂತಃಶಕ್ತಿಗಳಿಗೆ ಮನುಷ್ಯ ಯಾವೊತ್ತಿಗೂ ಒಂದು ನಿರ್ದಿಷ್ಟವಾದ, ನಿಖರವಾದ ವ್ಯಾಖ್ಯಾನವನ್ನು ಬಹುಶಃ ಕೊಡಲಾರನೇನೋ.

ಇತ್ತೀಚೆಗೆ `ನೆನಪಾದ ನಮ್ಮ ಚಂದ್ರಮ’ ಎಂಬ ಕಾರ್ಯಕ್ರಮದಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ನನ್ನ ಹೆಂಡತಿ ಚಂದ್ರಮ್ಮನ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದೆ. ಸಮಯದ ಅಭಾವದಿಂದಾಗಿ ಮತ್ತು ಭಾವುಕತೆಯ ಹೊಡೆತದಿಂದಾಗಿ ಅನೇಕ ಸಂಗತಿಗಳನ್ನು ಹೇಳಲು ಸಾಧ್ಯವಾಗಲಿಲ್ಲ. ಅದು ನನ್ನ ಹೆಂಡತಿಯ ಹಾಸ್ಯ, ಸಮಯ ಪ್ರಜ್ಞೆ ಮತ್ತು ಧೈರ್ಯದ ಬಗೆಗಿನ ಸಂಗತಿ. 2018 ರಲ್ಲಿ ನನ್ನ ಮಗ ಸಿರಿವೆನ್ನೆಲ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿಯಲ್ಲಿದ್ದ. ನಾನೂ ನನ್ನ ಹೆಂಡತಿ ಅವನನ್ನು ನೋಡಲು ಮಸ್ಸೂರಿಗೆ ಎರಡು ಬಾರಿ ಹೋಗಿ ಬಂದಿದ್ದೆವು. ಎರಡನೇ ಬಾರಿ ಹೋಗಿ ಬರುವಾಗ ಡೆಹರಾಡೂನ್‌ನಲ್ಲಿ ಡೈರೆಕ್ಟ್ ಬೆಂಗಳೂರಿನ ವಿಮಾನ ಹತ್ತಿದ್ದೆವು. ವಿಮಾನ ನಿಲ್ದಾಣದಲ್ಲಿದ್ದ ತಿಂಡಿ ಅಂಥ ರುಚಿಯೇನೂ ಇರಲಿಲ್ಲವಾದ ಕಾರಣ ಬಾಯಿ, ಹೊಟ್ಟೆ ಎರಡೂ ಆಪೋಶಿಸಲು ಹಿಂದೇಟು ಹಾಕಿದ್ದವು. ಪ್ರಯಾಣ ಮೂರು ಕಾಲು ಗಂಟೆಗಳ ಕಾಲ. ನನಗೆ ವಿಮಾನ ಪ್ರಯಾಣವೆಂದರೇನೇ ಒಂಥರಾ ಇರುಸು ಮುರುಸು. ಗಗನದಲ್ಲಿ ಹಾರಾಡುವುದಕ್ಕಿಂತಲೂ ಭೂಮಿಯ ಮೇಲೆ ನಡೆದಾಡುವುದೇ ನನಗೆ ಖುಷಿ ತರುವ ಸಂಗತಿ. ಸರಿ, ವಿಮಾನ ಟೇಕಾಫ್ ಆಗಿ ಅರ್ಧ ಗಂಟೆ ಆಗಿತ್ತು. ವಿಸ್ತಾರ ಎಂಬ ಕಂಪನಿಯ ಆ ವಿಮಾನದಲ್ಲಿ ಪೈಲಟ್ ಇಂದ ಹಿಡಿದು ಎಲ್ಲಾ ಸಿಬ್ಬಂದಿಯೂ ಮಹಿಳೆಯರಾಗಿದ್ದರು. ನನಗೆ ವಿಮಾನ ಓಡಿಸೋರೂ ಹೆಣ್ಣು ಮಕ್ಕಳೆಂದು ತಿಳಿದು ಯತ್ಲ್ ಗ್ರಹಚಾರನಪ್ಪ ಇದು ಎಂದು ಅನ್ನಿಸಿತ್ತಲ್ಲದೆ, ಆ ಅನ್ನಿಸಿಕೆಯ ಭಯದ ಬೆನ್ನಲ್ಲೇ ಒಂದಾ ಕಿತ್ತು ಕೊಂಡಿತ್ತು. ಈ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡಿದ್ದೆನಾದರೂ ಒಂದಾ, ಎರಡಗಳನ್ನು ವಿಮಾನದಲ್ಲೆಂದೂ ಮಾಡಿರಲಿಲ್ಲ. ವಿಷಯವನ್ನು ನನ್ನ ಹೆಂಡತಿಗೆ ತಿಳಿಸಿದೆ. “ಹೋಗ್ಬಾ ಹೋಗಪ್ಪ ಏನೂ ಆಗಲ್ಲ. ಆಮೇಲೆ ಇಲ್ಲೆ ಉಯ್ಕೊಂಡ್ ಗಿಯ್ಕೊಂಡ್ ಬಿಟ್ಟೀಯ” ಎಂದು ನನ್ನ ಹೆಂಡತಿ ಧೈರ್ಯ ತುಂಬಿದ ಮೇಲೆ ಟಾಯ್ಲೆಟನ್ನು ಭಯದಿಂದಲೇ ಪ್ರವೇಶಿಸಿದ್ದೆ. ಜಿಪ್ ಎಳೆಯುತ್ತಿದ್ದಂಗೆ ರೀಸಸ್ ಕಿತ್ತು ಕೊಂಡು ಪ್ಯಾಂಟ್ ತೋಳಿನ ಮೇಲೆ ಮೊಣಕಾಲಿನವರೆಗೂ ನೆನೆದು ಹೋಗಿತ್ತು. ಥೊತ್ತೇರಿಕೆ ಎಂದುಕೊಂಡು ಟಾಯ್ಲೆಟ್ ಬಾಗಿಲು ತೆರದಾಗ ಗಗನ ಸಖಿ ನನ್ನ ಪ್ಯಾಂಟ್ ಕಡೆ ನೋಡಿ ನಕ್ಕಿದ್ದಳು. ನಾನು “ವಾಟರ್, ವಾಟರ್ ಪ್ರಿಂಕಲ್..” ಎಂದು ವಟಗುಟ್ಟಿ ಸೀಟಿನ ಕಡೆ ನಡೆದಿದ್ದೆ. ನನ್ನಂಥ ಗಮಾರರನ್ನು ಆಕೆ ಎಷ್ಟು ಜನರನ್ನು ನೋಡಿರಲಿಕ್ಕಿಲ್ಲ! ನನ್ನ ಬಂಡವಾಳ ನನ್ನ ಹೆಂಡತಿಗೆ ತಿಳಿಯದ್ದೇನು. “ ಏನಪ್ಪಾ ಒಳ್ಳೆ ಚಿಕ್ಕಮಕ್ಕಳ ಥರ ಪ್ಯಾಂಟ್ ಮೇಲೇ ಮಾಡ್ಕೊಂಡಿದ್ದೀರ” ಎಂದು ಮೆಲ್ಲನೆ ಉಸುರಿದ್ದಳು.

ನಾನು ಸೀಟಿನಲ್ಲಿ ಕೂರುವುದಕ್ಕೂ ಪಕ್ಕದ ಆ ಕಡೆ ಸೀಟಿನಲ್ಲಿ ಕುಳಿತಿದ್ದ ದಪ್ಪನೆಯ ವಯಸ್ಸಾದ ವ್ಯಕ್ತಿ ಬ್ಯಾಗಿನಿಂದ ಒಂದು ಪ್ಲಾಸ್ಟಿಕ್ ಕವರ್ ತೆರೆಯುವುದಕ್ಕೂ ಒಂದೇ ಆಗಿತ್ತು. ನೋಡಿದರೆ ಕವರಿನಲ್ಲಿ ಕಾರ ಇಡದ ಹುರಿದ ಕಡ್ಲೆಬೀಜ. ಪದೆ ಪದೆ ಆತ ಏಳೆಂಟು ಕಡ್ಲೆಬೀಜಗಳನ್ನು ಕೈಗೆ ತೆಗೆದುಕೊಂಡು ಬಾಯಿಗೆ ಸುರಿದುಕೊಂಡು ನಮಲಿ ನುಂಗುತ್ತಿದ್ದ. ಆತನ ಆನಂದ ನನ್ನ ಹೊಟ್ಟೆ ಉರಿಸಿತ್ತಲ್ಲದೆ ಹಸಿವಿನ ರಾಕ್ಷಸಿ ನನ್ನ ಹೊಟ್ಟೆಗಿಳಿದುಬಿಟ್ಟಿದ್ದಳು. ಕಡಲೆಕಾಯಿಯನ್ನು ಹತ್ತು ಜನ್ಮಗಳಿಗಾಗುವಷ್ಟು ತಿಂದಿದ್ದರೂ ಈಗಲೂ ಒಂದು ಬುಡ್ಡು ಕಡ್ಲೆಕಾಯಿ ನೋಡಿದರೂ ತಿನ್ನುವ ಆಸೆ ಹೊಟ್ಟೆಯೊಳಗಿಂದ ಭುಗಿಲೆಬ್ಬಿಸುತ್ತದೆ. ಎಷ್ಟೋ ಸಾರಿ, ಬಸ್ ಟ್ರೈನುಗಳಲ್ಲಿ ಪ್ರಯಾಣಿಸುವಾಗ ಕಡ್ಲೆಕಾಯಿ ತಿನ್ನುವವರ ಹತ್ತಿರ ಮಾನ ಮರ್ಯಾದೆ ಬಿಟ್ಟು ಕಡ್ಲೆಕಾಯಿ ಇಸ್ಕೊಂಡು ತಿಂದಿದ್ದೇನೆ. ಮಾಮೂಲಿ ನಾನು ನನ್ನ ಹೆಂಡತಿಯ ಕಿವಿಯಲ್ಲಿ ನನ್ನ ಯಾತನೆಯನ್ನು ಸುರಿದಿದ್ದೆ. “ಸುಮ್ಮನೆ ಇರಿ, ಇನ್ಮೇಲೆ ನಾವೂ ಕಡ್ಲೆಬೀಜ ಹುರ್ಕೊಂಡ್ ಬರಾನ..” ಎಂದು ನನ್ನ ಹೆಂಡತಿ ಆ ವ್ಯಕ್ತಿಯ ಕಡೆಯೇ ನೋಡತೊಡಗಿದಳು. ಆತ ಕಡ್ಲೆಬೀಜಗಳನ್ನು ಸುರಿದುಕೊಂಡು ನನ್ನ ಹೆಂಡತಿಯ ಕಡೆಗೊಮ್ಮೆ ನೋಡುವುದೂ, ಕೂಡಲೆ ಮುಖ ಆ ಕಡೆ ಮಾಡಿಕೊಳ್ಳುವುದೂ ಮಾಡುತ್ತಿದ್ದ. ಆತ ಶೆಟ್ಟರಂತೆ ಕಾಣುತ್ತಿದ್ದ. ಕಡೆಗೊಮ್ಮೆ ಆ ವ್ಯಕ್ತಿ ಈ ಕಡೆ ನೋಡಿದಾಗ ನನ್ನ ಹೆಂಡತಿ ಕೈ ಸ್ವಲ್ಪವೇ ಚಾಚಿ ಕಡ್ಲೆಬೀಜ ಕೊಡುವಂತೆ ಸನ್ನೆಯಲ್ಲೆ ಕೇಳಿಕೊಂಡಿದ್ದಳು. ಅರ್ಧ ಕಡ್ಲೆ ಬೀಜ ಮುಗಿಸಿದ್ದ ಆ ವ್ಯಕ್ತಿ ಕಕರು ಮಕರುಗೊಂಡವನಂತೆ ಪೂರ್ತಿ ಕವರನ್ನು ನನ್ನ ಹೆಂಡತಿಯ ಕೈಯ್ಯಲ್ಲಿ ಇಟ್ಟುಬಿಟ್ಟಿದ್ದ. ಇವಳು ಎರಡು ಹಿಡಿ ಕಡ್ಲೆಬೀಜ ನನ್ನ ಖರ್ಚೀಪಿಗೆ ಸುರಿದು ಮತ್ತೆ ಆ ವ್ಯಕ್ತಿಗೆ ಹಿಂತಿರುಗಿಸಿದ್ದಳು. ನಾನು ಧನ್ಯನಾಗಿದ್ದೆ. ವಿಮಾನ ಲ್ಯಾಂಡ್ ಆಗಿ ಇಳಿಯಲು ಸೀಟಿನಿಂದ ಎದ್ದು ನಿಂತಿದ್ದೆವು. ಮಹಿಳಾ ಪೈಲಟ್ ಗಳು ಪುರುಷರಿಗಿಂತ ಮಿಗಿಲಾಗಿ ವಿಮಾನ ಓಡಿಸಿಕೊಂಡು ಬಂದು ಸಲೀಸಾಗಿ ಇಳಿಸಿದ್ದರು. ಹೆಣ್ಣು ಯಾವ ಕೆಲಸವನ್ನಾದರೂ ಸಮರ್ಥವಾಗಿ ನಿರ್ವಹಿಸಬಲ್ಲ ಛಾತಿಯುಳ್ಳಬಲ್ಲವಳೆಂದು ನನ್ನ ಅನೇಕ ಕಥೆ, ಲೇಖನಗಳಲ್ಲಿ ನಿರೂಪಿಸಿದ್ದೇನೆ. ಕಡ್ಲೆಬೀಜದ ಆ ವ್ಯಕ್ತಿ “ನಿಮ್ದು ಬೆಂಗಳೂರಾ..” ಎಂದು ಕೇಳಿದ್ದರು. ನಾನು “ ಹೌದು, ನಿಮ್ದು..” ಎಂದಿದ್ದೆ. “ನಮ್ದು ಚಿಂತಾಮಣಿ ಸಾರ್…” ಎಂದವನು ನನ್ನ ಹೆಂಡತಿಯ ಕಡೆ ನೋಡುತ್ತಾ. “ಏನೇ ಆಗ್ಲಿ ಹೆಂಡತಿ ಅಂದ್ರೆ ನಿಮ್ಮ ಹೆಂಡತಿ ಥರ ಇರ್ಬೇಕು ಸಾರ್, ತುಂಬಾ ಬುದ್ದಿವಂತೆ ಸಾರ್. ಗಂಡನ್ನ ಚನ್ನಾಗಿ ಸಾಕ್ತಾರೆ..” ಎಂದು ತಮಾಷೆ ಮಾಡಿದ್ದರು. ನನ್ನ ಹೆಂಡತಿ ನಗುತ್ತಾ “ಥ್ಯಾಂಕ್ಯೂ ಸಾರ್, ನಮ್ಮೆಜಮಾನ್ರುಗೂ ನಿಮ್ಮಂಗೆ ಕಡ್ಲೆಕಾಯಿ, ಕಡ್ಲೆಬೀಜ ಅಂದ್ರೆ ಪ್ರಾಣ. ನಾವೂ ಶೆಟ್ರೆ..” ಎಂದು ಮಾತು ಹೊಡೆದಿದ್ದಳು. ಆ ವ್ಯಕ್ತಿ “ಒಳ್ಳೆದಮ್ಮಯ್ಯ..” ಎಂದು ಇನ್ನೂ ಒಂದೆರಡಿಡಿ ಮಿಕ್ಕಿದ್ದ ಕಡ್ಲೆಬೀಜದ ಕವರನ್ನು ನನ್ನ ಹೆಂಡತಿಯ ಕೈಗಿಟ್ಟು ಢರ್ ಎಂದು ಮೆಲ್ಲಗೆ ತೇಗುತ್ತಾ ಲಗೇಜ್ ಕ್ಯಾಬಿನ್ನಿಗೆ ಕೈ ಹಾಕಿದ್ದರು. ಇಂಥ ಎಷ್ಟೋ ಸಂದರ್ಭಗಳಲ್ಲಿ ನನ್ನ ಕಷ್ಟಗಳಿಗೆ ನಗುನಗುತ್ತಾ ಹೆಗಲು ಕೊಡುತ್ತಿದ್ದ ನಮ್ಮ ಚಂದ್ರಮ್ಮನಿಲ್ಲದ್ದು ಈಗ ಒಂದು ರೀತಿಯ ಶೂನ್ಯದಲ್ಲಿ ನನ್ನನ್ನು ನಾನೇ ಮುಳುಗಿಸಿಕೊಂಡಂತಾಗುತ್ತದೆ. ಆದರೆ ಸಮಯ ಮತ್ತು ಪಕೃತಿಯ ಮುಂದೆ ಯಾರು ತಾನೆ ದೊಡ್ಡವರು ?

ನಾನು 1978 ರಲ್ಲಿ ಫೈನಲ್ ಇಯರ್ ಬಿ.ಎ. ಡಿಗ್ರಿಯಲ್ಲಿ ಓದುತ್ತಿದ್ದೆ. ವಿವಿಧ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರೂ ಓದುವುದರಲ್ಲಿ ಕ್ಲಾಸಿನಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದ್ದರಿಂದ ಉಪನ್ಯಾಸಕರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿದ್ದೆ. ಸಮಾಜ ಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಇದ್ದುದ್ದರಿಂದ ಯೂನಿವರ್ಸಿಟಿ ನಡೆಸುತ್ತಿದ್ದ ಸಾಮಾಜಿಕ ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸಲು ನನ್ನನ್ನು ಪ್ರತಿನಿಧಿಯಾಗಿ ನಮ್ಮ ಕಾಲೇಜಿನಿಂದ ಆಯ್ಕೆ ಮಾಡಿ ಕಳುಹಿಸುತ್ತಿದ್ದರು. ಅಂಥ ಒಂದು ಶಿಬಿರದಲ್ಲಿ ಶಿಬಿರದ ನಿರ್ದೇಶಕರು ಶಿಬಿರಾರ್ಥಿಗಳಿಗೆ ಒಂದೊಂದು ಅಧ್ಯಯನದ ಕೆಲಸವನ್ನು ವಹಿಸಿದ್ದರು. ನನಗೆ ಒಂದು ದಿನ ಪೂರ್ತಿ ಇಂದಿರಾನಗರ ಎಂಬ ಕೊಳಗೇರಿಯ (ಬಸವೇಶ್ವರ ನಗರ ಮತ್ತು ರಾಜಾಜಿನಗರ ಕೂಡುವ ಮೋದಿ ಕಣ್ಣಿನ ಆಸ್ಪತ್ರೆಯ ಎದುರಿಗಿರುವ ಇಂದಿರಾನಗರ. ಆ ಕಾಲದಲ್ಲಿ ಹೆಂಚಿನ ಮನೆಗಳು ಮತ್ತು ಗರಿ ಗುಡಿಸಲುಗಳಿಂದ ಕೂಡಿತ್ತು. ಈಗ ಆ ಪ್ರದೇಶ ಚನ್ನಾಗಿ ಅಭಿವೃದ್ಧಿ ಹೊಂದಿದೆ) ಬಡತನ ರೇಖೆಗಿಂತ ಕೆಳಗಿರುವ ಕುಟುಂಬವೊಂದರಲ್ಲಿ ಆ ಕುಟುಂಬದ ಸದಸ್ಯನೊಬ್ಬನಂತೆ ಇದ್ದು ಒಂದು ಪ್ರಬಂಧ ಬರೆಯುವುದಾಗಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಗುಡಿಸಲಿನ ಆ ಕುಟುಂಬವನ್ನು ಪ್ರವೇಶಿಸಿದ್ದೆ. ಗಾರೆ ಕೆಲಸ ಮಾಡುವ ಕುಟುಂಬದ ಸುಮಾರು ನಲವತ್ತು ವರ್ಷ ವಯಸ್ಸಿನ ಯಜಮಾನ ಗೂರಲು ರೋಗದಿಂದ ನರಳುತ್ತಿದ್ದು ಎರಡು ತಿಂಗಳಿಂದ ಕೆಲಸಕ್ಕೆ ಹೋಗದೆ ಮಲಗಿದ್ದ. ಸುಮಾರು ಮುವತ್ತು ವರ್ಷ ವಯಸ್ಸಿನ ಆತನ ಹೆಂಡತಿ ಸುಂದರವಾಗಿಯೇ ಇದ್ದಳು. ಮೂರ್ನಾಲ್ಕು ಮನೆಗಳ ಕೆಲಸ ಮಾಡುತ್ತಿದ್ದಳಂತೆ. ಕೆಲಸ ಮಾಡುತ್ತಿದ್ದವರು ಕೊಡುತ್ತಿದ್ದ ಮಿಕ್ಕಿದ ಊಟವನ್ನು ತಂದು ಗಂಡ ಮತ್ತು ಮಕ್ಕಳನ್ನು ಸಾಕುತ್ತಿದ್ದಳು. ಐದು ಮತ್ತು ಎರಡು ವರ್ಷಗಳ ಇಬ್ಬರು ಹೆಣ್ಣು ಮಕ್ಕಳು. ನಾನು ಯಾವುದೋ ಸರ್ವೆಗೆ ಹೋಗಿರುವೆನೆಂದು ಮತ್ತು ಸರ್ಕಾರದಿಂದ ಸಹಾಯ ಕೊಡಿಸುತ್ತೇನೆಂದು ತಿಳಿದು ಆಕೆ ಮುತುವರ್ಜಿಯಿಂದಲೇ ಮಾತನಾಡಿದ್ದಳು. “ನಮ್ಮಿಬ್ಬರದು ಒಂದೇ ಊರು. ಹದಿನೈದು ವರ್ಷಗಳಿಂದ ಈ ಮೂಳ ಬೆಂಗಳೂರಿನಾಗೆ ಗಾರೆ ಕೆಲಸ ಮಾಡ್ಕಂಡ್ ಅವ್ನೆ. ನಮ್ಮನೇಲಿ ಇವುನ್ ಜೊತೆ ಮದುವೆ ಬೇಡ, ಬೇಡ ಅಂದ್ರೂ ಬೆಂಗಳೂರಲ್ಲಿ ಸ್ವಂತ ಮನೆ ಐತೆ ಅಂಥ ನಾನೇ ಇವುನ್ ಕೂಟೆ ಬಂದ್ ಬಿಟ್ಟೆ. ಟಿ ಬಿ ಇತ್ತು. ವಿಕ್ಟೋರಿಯಾದಾಗೆ ತೋರಿಸಿದ್ವಿ. ಒಂದೊರ್ಷ ಮಾತ್ರೆ ನುಂಗಿದ್ರು. ಟಿ ಬಿಯೇನೋ ಈಗ ಇಲ್ವಂತೆ. ಆದರೆ ಗೂರ್ಲು. ಒಂದು ಗಂಟೆ ಕೆಲಸ ಮಾಡೋಕೆ ಆಗಲ್ಲ. ಸಾರಾಯಿ ಕುಡಿದಿದ್ರೆ ನಿದ್ದೇನೆ ಮಾಡಲ್ಲ. ಏನು ಮಾಡೋದು, ಅವರವರು ಮಾಡಿದ ಕರ್ಮಾನ ಅವರವರೇ ಅನುಭವಿಸಬೇಕು…” ಎಂದು ನೋವನ್ನು ತೋಡಿಕೊಂಡಿದ್ದಳು. “ಓಹೋ ಸುಮ್ನಿರು ಸಾಕಿನ್ನ, ಗಟ್ಟಿಯಾಗಿರೋಗಂಟ ರಾಣಿ ತರ ನೋಡ್ಕೊಳ್ಳಿಲ್ವ. ವಾರಕ್ಕೆರಡು ಸಿನಿಮಾ ತೋರ್ಸ್ತಿದ್ದೆ. ಮೈ ಹುಷಾರಾಗ್ಲಿ ಸುಮ್ನಿರು ನಾನೂ ದುಡ್ಕಂಡ್ ಬರ್ತೀನಿ..” ಎಂದವನು ನನ್ನ ಕಡೆ ನೋಡಿ “ ಸಾರ್ ನಾನು ಒಂಬತ್ತನೇ ಕ್ಲಾಸ್ವರೆಗೂ ಓದಿದ್ದೀನಿ. ಕಾರ್ಪೋರೇಷನ್ನಲ್ಲಿ ಎಂಥದ್ದಾದ್ರೂ ಒಂದು ಕೆಲಸಕ್ಕೆ ರೆಕ್ಮೆಂಡ್ ಮಾಡಿ ಸರ್. ಸಾಯೋಗಂಟ್ಲೂ ನಿಮ್ಮನ್ನ ನೆನಕೊಳ್ತೀವಿ..” ಎಂದಿದ್ದ.

ಅವೊತ್ತು ಸಂಜೆ ಮನೆ ಕೆಲಸಕ್ಕೆ ಹೋದವಳು ಬರುತ್ತಾ ಚಿಕನ್ ತಂದಿದ್ದಳು. ಗಂಡ ಖುಷಿ ಪಟ್ಟಿದ್ದ. ನಾನು Max Weber ನ Economy and Society ಎಂಬ ಸೋಷಿಯಾಲಜಿ ಪುಸ್ತಕವನ್ನು ತೆಗೆದುಕೊಂಡು ಹೋಗಿದ್ದೆ. ನನ್ನ ಹಳ್ಳಿಯಲ್ಲೂ ಯಥೇಚ್ಛವಾಗಿ ಬಡತನವನ್ನು ನೋಡಿದ್ದ ನನಗೆ ನನ್ನ ಹಳ್ಳಿಯ ಮನೆಯೊಂದರಲ್ಲಿರುವಂತೆ ಭಾಸವಾಗಿತ್ತು. ಎಂಟು ಗಂಟೆಗೆಲ್ಲ ಆಕೆ ಅಡುಗೆ ಮಾಡಿದ್ದಳು. ಅನ್ನ ಕೋಳಿಸಾರು ರುಚಿಯಾಗಿಯೇ ಇತ್ತು. ಆತ ಕಾಲು ಗಂಟೆ ಹೊರಗೆ ಹೋಗಿ ಬಂದಿದ್ದ. ಸಾರಾಯಿ ಕುಡಿದು ಬಂದಿರುವ ವಾಸನೆ ಮೂಗಿಗೆ ಬಡಿದಿತ್ತು. ಖುಷಿಯಿಂದ ಇದ್ದ. ಊಟ ಸುಮಾರಾಗಿ ಮಾಡಿ ಮಾತ ಮಾತನಾಡುತ್ತಲೇ ಚಾಪೆಯ ಮೇಲೆ ಉರುಳಿಕೊಂಡು ಗೊರಕೆ ಹೊಡೆಯಲು ಶುರುವಿಟ್ಟುಕೊಂಡಿದ್ದ. ನಾನು ಹಾಳೆಯಲ್ಲಿ ಒಂದಿಷ್ಟು ಪಾಯಿಂಟುಗಳನ್ನು ಗುರುತು ಹಾಕಿಕೊಂಡಿದ್ದೆ. ನನಗೊಂದು ಚಾಪೆ ಮತ್ತು ರಗ್ಗನ್ನು ಕೊಟ್ಟಿದ್ದಳು. ಆಗಸ್ಟ್ ಕೊನೆಯ ವಾರವಾದ್ದರಿಂದ ಚಳಿಯೇನೂ ಆಗುತ್ತಿರಲಿಲ್ಲ. ಒಂಬತ್ತೂವರೆಗೆ ಸೋಷಿಯಾಲಜಿ ಪುಸ್ತಕವನ್ನು ರಗ್ಗಿನೊಂದಿಗೆ ತಲೆಯಡಿ ಇಟ್ಟುಕೊಂಡು ಮಲಗಿದ್ದೆ. ಆಕೆ ಎರಡನೇ ಮಗುವನ್ನು ಮಲಗಿಸುತ್ತಿದ್ದಳು. ನನ್ನ ಅರ್ಧ ಚಾಪೆಯ ಮೇಲೆ ದೊಡ್ಡ ಮಗುವನ್ನು ಮಲಗಿಸಿದ್ದಳು. ನನಗೆ ಮಂಪರು ಹತ್ತಿತ್ತು. ಸ್ವಲ್ಪ ಹೊತ್ತಿಗೆ ಆಕೆ ನನ್ನ ಪಕ್ಕಕ್ಕೆ ಬಂದು ತಬ್ಬಿಕೊಂಡು “ಈ ಮೂಳ ನನ್ನ ಜೊತೆ ಮಲಗಿ ಮೂರು ವರ್ಷಗಳ ಮೇಲಾಯ್ತು. ಇನ್ನು ಬೆಳಿಗ್ಗೆ ತನಕ ಅವುನು ಶವದಂತೆ ಮಲಗಿರ್ತಾನೆ. ನೀವೇನಾದ್ರೂ ಮಾಡ್ಕಳಿ ಕಾರ್ಪೊರೇಷನ್ನಾಗೆ ಇವುನ್ಗೊಂದು ಪೀವೊನ್ ಕೆಲ್ಸ ಕೊಡಿಸ್ಬಿಡಿ. ಇಬ್ಬರು ಹೆಣ್ ಮಕ್ಳು ಏನೋ ಒಂದು ದಾರಿ ಆಗ್ತದೆ. ನಿಮಗೆ ಮನಸ್ಸಿಗೆ ಬಂದಾಗ ನಮ್ಮನೆಗೆ ಬರಬಹುದು. ಬದುಕಿದ ಮನೆ ನನ್ನ ತೌರ್ ಮನೆ. ಕ್ಲೀನ್ ಜನ ನಾವು…” ಎಂದು ಹಿಡಿತವನ್ನು ಬಿಗಿಪಡಿಸತೊಡಗಿದಳು. ನನಗೆ ಉಸಿರು ಕಟ್ಟಿದಂತಾಗಿತ್ತು. ಕಾಮ ಮತ್ತು ಕಮಟು ವಾಸನೆ ಎರಡೂ ದಟ್ಟವಾಗಿ ಅವಳ ದೇಹದಿಂದ ಹೊರಹೊಮ್ಮುತ್ತಿದ್ದವು. ನನಗೆ ಕುತೂಹಲ ಹುಟ್ಟಿಕೊಂಡಿತ್ತಾದರೂ ವಿಪರೀತ ಭಯ ಆವರಿಸಿ ಗಂಟಲು ಒಣಗಿತ್ತು. ರೀಸಸ್ ಮಾಡಬೇಕೆಂದು ಹೇಳಿ ಆಕೆಯಿಂದ ಬಿಡಿಸಿಕೊಂಡು ಬಾಗಿಲು ತೆರೆದು ಹೊರ ಬಂದೆ. ರಾತ್ರಿ ಒಂಬತ್ತು ಮುಕ್ಕಾಲು ಗಂಟೆಯಾಗಿತ್ತು. ಸೀದಾ ಮೈನ್ ರೋಡ್ ಕಡೆ ಓಡತೊಡಗಿದ್ದೆ. ಕಾಲೇಜು ಲೈಬ್ರರಿಯಿಂದ ತಂದಿದ್ದ ಪುಸ್ತಕ ಆ ಗುಡಿಸಲಿನಲ್ಲಿ ಉಳಿದುಕೊಂಡಿತ್ತು. ನಾನು ಆ ಬಗ್ಗೆ ಪ್ರಬಂಧವನ್ನು ಬರೆಯಲಿಲ್ಲ. ಬದಲಾಗಿ ಮುಂದೆ ಕಥೆಗಾರನಾದ ಮೇಲೆ ಈ ಘಟನೆಯನ್ನು ಕಥೆಯಲ್ಲಿ ಬಳಸಿಕೊಂಡಿದ್ದೆ. ಮುಂದೆ ನಾನು ಬೆಳೆದಂತೆ ಬೆಂಗಳೂರು, ಮುಂಬೈ, ನಾಗಪುರ, ಕೊಲ್ಕತ್ತಾ ಮುಂತಾದ ಮಹಾನಗರಗಳ ಕೊಳಗೇರಿಗಳನ್ನು ಸುತ್ತುವಾಗ ಪರಿಮಿತಿಗಳಾಚೆಗಿನ ಸತ್ಯಗಳು ವಾಸ್ತವದ ಬದುಕಿನೊಳಗೆ ಹೇಗೆ ಪೊಳ್ಳಾಗಿಬಿಡುತ್ತವೆ ಎಂಬುದನ್ನು ಕಂಡುಕೊಂಡೆ. ಅನ್ನ, ಹಸಿವು, ಪ್ರೀತಿ, ಕಾಮ, ಸಾಮಾಜಿಕ ಸಂಬಂಧಗಳು, ಕೌಟುಂಬಿಕ ಸಂಬಂಧಗಳು ಒಂದರೊಳಗೊಂದು ಹೆಣೆದುಕೊಂಡು ಒಂದರ ನೆರಳಲ್ಲಿ ಇನ್ನೊಂದು, ಇನ್ನೊಂದರ ನೆರಳಲ್ಲಿ ಮತ್ತೊಂದು ಸುರುಳಿ ಸುತ್ತಿಕೊಂಡು ಉಸಿರಾಡುವ ಪರಿ… ದೇಹ ಮತ್ತು ಮನಸ್ಸುಗಳನ್ನು ಅಳೆಯಲು ಮನುಷ್ಯ ಇನ್ನೂ ಒಂದು ನಿಖರವಾದ ಮೌಲ್ಯಮಾಪಕವನ್ನು ಕಂಡು ಹಿಡಿಯಲು ಸಾಧ್ಯವೇ ಆಗಿಲ್ಲ…