-ಕೇಶವರೆಡ್ಡಿ ಹಂದ್ರಾಳ
ಭೂಮಿಯ ನಿರಂತರ ಬೆಲೆ ಏರಿಕೆಯಿಂದ ಆಗಿರುವ ಸಾಮಾಜಿಕ ಮತ್ತು ಕೌಟುಂಬಿಕ ದುಷ್ಪರಿಣಾಮ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಹದಿನೈದು ಇಪ್ಪತ್ತು ವರ್ಷಗಳಿಂದ ಈಚೆಗೆ ಆಗುತ್ತಿರುವ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ಹತ್ತು ಹದಿನೈದು ವರ್ಷಗಳಿಂದ ಈಚೆಗೆ ಬೆಂಗಳೂರು ಮತ್ತು ಬೆಂಗಳೂರಿನ ಸುತ್ತ ಮುತ್ತ ಜಮೀನುಗಳ ಬೆಲೆ ಇದ್ದಕ್ಕಿದ್ದಂತೆ ಗಗನಕ್ಕೇರಿಬಿಟ್ಟಿತು. ಚಿಕ್ಕಬಳ್ಳಾಪುರ, ದೇವನಹಳ್ಳಿ ದೊಡ್ಡಬಳ್ಳಾಪುರ, ಅತ್ತಿಬೆಲೆ, ಹೊಸಕೋಟೆ, ಬಿಡದಿ ಮುಂತಾದ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಈಗ ಚಿನ್ನದ ಬೆಲೆ ಬಂದಿದೆ. ಎರಡು ಸಾವಿರದ ಇಸವಿಯಲ್ಲಿ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಚದುರಡಿಗೆ 250 ರೂಪಾಯಿ ಇದ್ದ ಸೈಟುಗಳ ಬೆಲೆ ಪ್ರಸ್ತುತ ಸಂದರ್ಭದಲ್ಲಿ ಚದುರಡಿಗೆ 12 ಸಾವಿರದಿಂದ 15 ಸಾವಿರ ರೂಪಾಯಿಗಳಷ್ಟಾಗಿದೆ! ಭೂಮಿಯ ಬೆಲೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಮೀಟ್ರಿಯ ಅನುಪಾತದಲ್ಲಿ ಬೆಳೆಯುತ್ತಿದೆ. ಇದರಿಂದಾಗಿ ಈ ಎಲ್ಲಾ ಪ್ರದೇಶಗಳಲ್ಲಿನ ಕುಟುಂಬಗಳಲ್ಲಿ ಅಣ್ಣ ತಮ್ಮಂದಿರ ಮಧ್ಯೆ, ಸಹೋದರ ಸಹೋದರಿಯರ ಮಧ್ಯೆ, ತಂದೆ ಮಕ್ಕಳ ಮಧ್ಯೆ, ಬಂಧುಗಳ ಮಧ್ಯೆ ಹೊಡೆದಾಟ, ಬಡಿದಾಟಗಳು ಸಾಮಾನ್ಯವಾಗಿಬಿಟ್ಟಿವೆ. ಕೆಲವೊಮ್ಮೆ ಆಸ್ತಿ ಜಗಳಗಳು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯಗೊಂಡಿವೆ. ಇದು ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಕಥೆಯೊಂದೇ ಅಲ್ಲ, ಎಲ್ಲಾ ನಗರಗಳ ಕಥೆಯೂ ಹೌದು.

ಹೆಣ್ಣು, ಹೊನ್ನು ಮತ್ತು ಮಣ್ಣು ಜಾಗತಿಕ ಇತಿಹಾಸದ ವರ್ಣರಂಜಿತ ಪುಟಗಳ ಸೃಷ್ಟಿಮೂಲ. ಈ ಪರಮ ಸತ್ಯವನ್ನು ಜಗತ್ತು ಇದುವರೆಗೂ ಕಂಡ ಪ್ರಸಿದ್ಧ ತತ್ವಜ್ಞಾನಿಗಳೂ ಸಹ ದೃಢೀಕರಿಸಿದ್ದಾರೆ. ಮನುಷ್ಯನ ಸ್ವಾರ್ಥ, ದ್ವೇಷ, ಅಸೂಯೆ, ಕ್ರಿಯಾಶೀಲತೆ, ಸಂಭ್ರಮ, ಖುಷಿ ಮುಂತಾದ ಎಲ್ಲಾ ಮಾನಸಿಕ ಮತ್ತು ದೈಹಿಕವಾದ ನೈಸರ್ಗಿಕ ಪ್ರವೃತ್ತಿಗಳು ಮೇಲಿನ ಸಂಗತಿಗಳೊಂದಿಗೆ ಗಿರಕಿ ಹೊಡೆಯುತ್ತಿರುತ್ತವೆ ಎಂಬುದು ಇಡೀ ಜಗತ್ತಿನಲ್ಲಿ ಪ್ರಕಟಗೊಂಡ ಸತ್ಯವೇ ಆಗಿದೆ. ಜಗತ್ತು ಅನೇಕ ಸಾವಿರ ವರ್ಷಗಳಿಂದ ಕಾಣುತ್ತಿರುವ ಯುದ್ಧ, ಕಣ್ಣೀರು, ಹಸಿವು ಮುಂತಾದವುಗಳು ಕೂಡಾ ಮೇಲಿನ ಮೂರು ಸಂಗತಿಗಳನ್ನು ಪಡೆದುಕೊಳ್ಳುವಲ್ಲಿ ಮನುಷ್ಯ ನಡೆಸುತ್ತಿರುವ ಪೈಪೋಟಿಯ ಫಲಗಳೇ ಆಗಿವೆ. ಇವುಗಳನ್ನು ತನ್ನದನ್ನಾಗಿಸಿಕೊಂಡು ಅದರಿಂದಾಗಿ ಲಭ್ಯವಾಗುವ ತೃಪ್ತಿ ಪಡೆಯಲು ಪ್ರತಿಯೊಬ್ಬ ಮನುಷ್ಯನೂ ಅನೇಕ ಹುನ್ನಾರಗಳನ್ನು ಚರಿತ್ರೆಯ ಉದ್ದಕ್ಕೂ ಮಾಡುತ್ತಲೇ ಬಂದಿದ್ದಾನೆ. ಮನುಷ್ಯ ಅನಾಗರಿಕನಾಗಿದ್ದ ಸಂದರ್ಭದಲ್ಲಿ ಅವನಿಗೆ ಹಸಿವು ಮತ್ತು ಕಾಮಗಳನ್ನು ಇಂಗಿಸಿಕೊಳ್ಳುವ ಇರಾದೆ ಮಾತ್ರ ಇದ್ದುದ್ದರಿಂದ ಹೊನ್ನು ಮತ್ತು ಮಣ್ಣಿಗೆ ಅಂಥ ಮನ್ನಣೆಯೇನೂ ಇರಲಿಲ್ಲ. ಹಸಿವಾದಾಗ ಸಿಕ್ಕ ಆಹಾರ ಮತ್ತು ಪ್ರಾಣಿಗಳನ್ನು ತಿನ್ನುತ್ತಿದ್ದವನು ಕಾಮ ಜಾಗೃತವಾದಾಗ ಪರಸ್ಪರ ವಿರುದ್ದ ಲಿಂಗಿಗಳ ಜೊತೆ ಕೂಡಿ ಕಾಮದ ಹಸಿವನ್ನು ಪೂರೈಸಿಕೊಳ್ಳುತ್ತಿದ್ದ. ಆದರೆ ಕಾಲಕ್ರಮೇಣ ನಾಗರೀಕನಾದಂತೆ, ಜೀವಜಗತ್ತಿನಲ್ಲಿ ಬೇರೆಲ್ಲ ಪ್ರಾಣಿಗಳಿಗಿಂತಲೂ ಬುದ್ಧಿವಂತನಾದಂತೆ ತನಗೆ ಆಹಾರದ ಜೊತೆಗೆ ಸಕಲ ಪ್ರಾಕೃತಿಕ ಸಂಪನ್ಮೂಲಗಳನ್ನು ದಯಪಾಲಿಸುವ ಭೂಮಿಯ ಬೆಲೆ ಬಹಳವಾಗಿ ಗೊತ್ತಾಗತೊಡಗಿತು. ಇದು ಮಣ್ಣಿನ ಮೇಲೆ ವ್ಯಾಮೋಹ ಮೂಡಿಸಿತಲ್ಲದೆ ಅದರ ಒಡೆತನ ಪಡೆಯುವ ಸ್ವಾರ್ಥದ ಹಂಬಲ ಬಲವಾಗತೊಡಗಿತು. ಹೆಣ್ಣು ಮತ್ತು ಹೊನ್ನನ್ನು ಜೊತೆಯಲ್ಲಿ ಒಯ್ಯವಂತೆ ಭೂಮಿಯನ್ನು ಒಯ್ಯಲು ಮನುಷ್ಯನಿಗೆ ಸಾಧ್ಯವಾಗದಿದ್ದದ್ದು ಅದರ ಆಗಾಧತೆಯನ್ನು ಮನವರಿಕೆ ಮಾಡಿಕೊಟ್ಟಿತು. ಹಾಗಾಗಿ ಫಲವತ್ತಾದ ಭೂಮಿಯೊಂದಿಗೆ ನೆಲೆನಿಂತು ಬದುಕಲು ಪ್ರಾರಂಭಿಸಿದ. ಮನುಷ್ಯ ತನ್ನ ಸಮುದಾಯ ಬದುಕನ್ನು ಆರಂಭಿಸಿದ್ದು ಈ ಹಂತದಲ್ಲಿಯೇ. ಪಕೃತಿ ಭೂಮಿಯ ಮೇಲೆ ತನ್ನ ಹುಟ್ಟು ಮತ್ತು ಉಳಿವಿಗಾಗಿ ಏನೆಲ್ಲಾ ವಸ್ತುಗಳನ್ನು ಸೃಷ್ಟಿ ಮಾಡಿ ನಂತರ ತನ್ನನ್ನು ಸೃಷ್ಟಿಸಿತೆಂಬ ಪರಮ ಸತ್ಯವನ್ನು ಸಾವಿರಾರು ವರ್ಷಗಳ ಕಾಲ ಮಾನವ ಮನಗಂಡಿರಲಿಲ್ಲ. ಆಗಾಗ ಸಂಭವಿಸುತ್ತಿದ್ದ ಪ್ರಾಕೃತಿಕ ವಿಕೋಪಗಳು ಮನುಷ್ಯನನ್ನು ಸಮುದಾಯ ಬದುಕಿಗೆ ಅಣಿಗೊಳಿಸುತ್ತಿದ್ದವು. ಕ್ರೂರ ಪ್ರಾಣಿಗಳಿಂದ, ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಮನುಷ್ಯ ಒಗ್ಗೂಡುತ್ತಿದ್ದ ಪರಿಯೇ ಸಮುದಾಯ ಬದುಕಿಗೆ ನಾಂದಿಯಾಯಿತು. ಅದು ಅಲೆಮಾರಿಯಾಗಿದ್ದ ಮನುಷ್ಯನನ್ನು ಅನುಕೂಲಕರವಾದ ಒಂದು ನಿರ್ದಿಷ್ಟ ಪ್ರದೇಶಗಳಲ್ಲಿ ನೆಲೆ ನಿಲ್ಲಲು ಪ್ರೇರಣೆಯಾಯಿತು. ಇಂಥ ಎಲ್ಲಾ ಸಂಗತಿಗಳು ಹಳ್ಳಿಗಳು ಹುಟ್ಟಿಕೊಳ್ಳಲು ನಾಂದಿಯಾಡಿದವು. ನಾಗರಿಕತೆ ಬೆಳೆದೆಂತೆ ಮನುಷ್ಯ ತನ್ನ ಸಮುದಾಯ ಬದುಕಿನಲ್ಲಿ ಹೊಸ ಹೊಸ ಜೀವನ ವಿಧಾನಗಳನ್ನು ಕಂಡುಕೊಂಡನಲ್ಲದೆ ಧರ್ಮ, ಜಾತಿ, ರೂಢಿ-ಸಂಪ್ರದಾಯ, ಅಸಂಖ್ಯಾತ ಅಚರಣೆಗಳು ಆಯಾ ಭೌಗೋಳಿಕ ಸ್ಥಿತಿಗತಿ, ಸಂದರ್ಭಗಳಿಗೆ ತಕ್ಕಂತೆ ಅಸ್ತಿತ್ವಕ್ಕೆ ಬಂದವು. ಇವುಗಳಿಂದಾಗಿ ನಾಗರಿಕತೆ ಹುಟ್ಟಿ ಬೆಳೆಯತೊಡಗಿದ ಪ್ರಾರಂಭದಲ್ಲೇ ಮನುಷ್ಯರ ನಡುವ ಭಿನ್ನತೆಗಳು ಕಾಣಿಸಿಕೊಂಡವು. ಸಮುದಾಯದ ಬದುಕಿನಲ್ಲಿ ತಮ್ಮೆಲ್ಲಾ ಭಿನ್ನತೆಗಳೊಂದಿಗೂ ಮನುಷ್ಯರು ಸಾವಿರಾರು ವರ್ಷಗಳ ಕಾಲ ಕೂಡಿ ಬಾಳಿಕೊಂಡೇ ಬಂದರು. ಮನುಷ್ಯ ಪ್ರಾರಂಭದಲ್ಲಿ ಬಹಳ ಸರಳವಾಗಿದ್ದರಿಂದ ಅವನ ಬಯಕೆಗಳು ಕೂಡಾ ಸರಳವಾಗಿದ್ದವು. ಹಾಗಾಗಿ ಹಸಿವು ಮತ್ತು ಕಾಮವನ್ನು ಈಡೇರಿಸಿಕೊಳ್ಳುವುದು ಮಾತ್ರ ಅವನ ಪರಮ ಗುರಿಯಾಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ಇನ್ನೂ ಕೈವಶವಾಗದಿದ್ದುದ್ದರಿಂದ ಅವನು ನೈಸರ್ಗಿಕ ಸಂಪನ್ಮೂಲಗಳನ್ನು ಅಷ್ಟಾಗಿ ಬಳಸಿಕೊಳ್ಳಲೋ, ಹಾಳುಗೆಡವಲೋ ಹೋಗಿರಲಿಲ್ಲ. ಪ್ರಕೃತಿಯ ತಂಟೆಗೆ ಹೋಗದೆ ಅದು ಕೊಟ್ಟ ಫಲಗಳನ್ನು ಅನುಭವಿಸುತ್ತಾ ಸಾವಿರಾರು ವರ್ಷಗಳ ಸಂತೃಪ್ತನಾಗಿಯೇ ಇದ್ದ.

ವಿಜ್ಞಾನ, ತಂತ್ರಜ್ಞಾನದ ವಿಪರೀತವಾದ ಸಂಶೋಧನೆಗಳು ಮನುಷ್ಯನ ಬದುಕಿನಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಂದೊಡ್ಡಿದವು. ಔದ್ಯೋಗೀಕರಣ ಮತ್ತು ಜಾಗತೀಕರಣಗಳು ಮನುಷ್ಯನ ಮನಸ್ಸು ಮತ್ತು ದೇಹಗಳಲ್ಲಿ ಸಾವಿರಾರು ಬಯಕೆಗಳನ್ನು ಹುಟ್ಟುಹಾಕಿದ್ದರಿಂದ ಸಾವಿರಾರು ಸರಕುಗಳನ್ನು ಉತ್ಪಾದಿಸತೊಡಗಿದ. ಇದು ಅಂತರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳು ವೇಗದಿಂದ ವಿಸ್ತಾರಗೊಳ್ಳಲು ಕಾರಣವಾಯಿತು. ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳು ಇಡೀ ಜಗತ್ತನ್ನು ಒಂದು ಚಿಕ್ಕ ಮಾರುಕಟ್ಟೆಯಂತೆ ಮಾಡಿದವು. ಮನುಷ್ಯ ಅಗತ್ಯವಿಲ್ಲದ ನೂರಾರು ಸರಕುಗಳನ್ನು ಉತ್ಪಾದಿಸಲು ಆರಂಭಿಸಿದ. ಇದು ಪ್ರಾಕೃತಿಕ ಸಂಪನ್ಮೂಲಗಳನ್ನು ಯಡ್ಡಾದಿಡ್ಡಿ ಬಳಸಿಕೊಳ್ಳಲು ಕಾರಣವಾಯಿತು. ಜನಸಂಖ್ಯೆ ವಿಪರೀತವಾಗಿ ಬೆಳೆದು ಭೂಮಿಯನ್ನು ವಸತಿಗಾಗಿ ವ್ಯಾಪಕವಾಗಿ ಬಳಸಿಕೊಳ್ಳಲಾಯಿತು. ಹೀಗಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಭೂಮಿಯ ಬೆಲೆ ನಿರಂತರವಾಗಿ ಏರುಗತಿಯಲ್ಲಿ ಸಾಗಿತು. ಹಳ್ಳಿ ಮತ್ತು ನಗರ ಪ್ರದೇಶಗಳೆರಡರಲ್ಲೂ ಸುಮಾರು ನಲವತ್ತು ವರ್ಷಗಳ ಹಿಂದೆ ಆತ್ಮೀಯವಾದ ಸಂಬಂಧಗಳೊಂದಿಗೆ ಪ್ರೀತಿ, ನಂಬಿಕೆ, ವಿಶ್ವಾಸ, ಸಹಕಾರ ಮುಂತಾದ ಮಾನವೀಯ ಮೌಲ್ಯಗಳು ದಟ್ಟವಾಗಿಯೇ ಉಸಿರಾಡಿಕೊಂಡಿದ್ದವು. ನಾನು ಪ್ರೈಮರಿ ಮತ್ತು ಮಿಡ್ಲಿಸ್ಕೂಲಿನಲ್ಲಿ ಓದುವಾಗ ಮನೆಗೆ ನೆಂಟರು ಬಂದರೆ ಸಂಭ್ರಮ ಹೇಳತೀರದಾಗಿರುತ್ತಿತ್ತು. ನೆಂಟರು ಇರುವಷ್ಟು ಕಾಲವೂ ಬಡತನವೇ ಇರಲಿ ಒಬ್ಬಟ್ಟು, ಕೋಳಿಸಾರುಗಳ ಊಟ ಸಾಮಾನ್ಯವಾಗಿರುತ್ತಿದ್ದವು. ನೆಂಟರು ವಾಪಸ್ಸು ಹೋಗುವಾಗ ಹೇಳತೀರದ ಬೇಸರವಾಗುತ್ತಿತ್ತು. ಆದರೆ ಇವೊತ್ತಿನ ದಿನಮಾನಗಳಲ್ಲಿ ಯಾರಾದರೂ ನೆಂಟರು ಬಂದರೆ ದೊಡ್ಡ ಹೊರೆಯಾದಂತೆ ಭಾವಿಸುತ್ತಾರೆ. ಬಂದ ಕ್ಷಣದಿಂದಲೇ ಎಷ್ಟೊತ್ತಿಗೆ ಜಾಗ ಖಾಲಿ ಮಾಡುತ್ತಾರೋ ಎಂದು ಯೋಚಿಸುತ್ತಿರುತ್ತೇವೆ. ನಗರಗಳಲ್ಲಿ ಕೂಡಾ ಇಂಥವೇ ಸಂಬಂಧಗಳು ನೆಲೆನಿಂತಿದ್ದವು. ನಾನೇ ಕಂಡಂತೆ ನಾನು ಬೆಂಗಳೂರಿಗೆ ಹೈಸ್ಕೂಲು ಓದಲು ಬಂದಾಗಿನ ಎಪ್ಪತ್ತರ ದಶಕದ ಸಂದರ್ಭದಲ್ಲಿ ಹಳ್ಳಿಯಿಂದ ಯಾರಾದರೂ ಬಂದರೆ ಇನ್ನಿಲ್ಲದಷ್ಟು. ಖುಷಿಯಾಗುತ್ತಿತ್ತು. ಬಂದವರಿಗೆ ಬೆಂಗಳೂರು ತೋರಿಸಲು ನಾನು ಕರೆದುಕೊಂಡು ಹೋಗುತ್ತಿದ್ದೆ. ಬರುವವರೂ ಅಷ್ಟೆ, ತರಕಾರಿ, ಕೋಳಿ, ದವಸ ಧಾನ್ಯಗಳನ್ನು ಹಿಡಿದು ಬರುತ್ತಿದ್ದರು. ಅವರನ್ನು ಊರಿನ ಬಸ್ಸು ಹತ್ತಿಸುವಾಗ ಏನೋ ಅಮೂಲ್ಯವಾದದ್ದನ್ನು ಕಳೆದುಕೊಂಡ ಅನುಭವವಾಗುತ್ತಿತ್ತು. ಅಂಥ ಸಂಗತಿಗಳನ್ನು ಈಗ ನಗರ ಪಟ್ಟಣಗಳಲ್ಲಿ ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಮದುವೆ, ಹಬ್ಬ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಜಾತಿಯ, ಧರ್ಮದ ಜನರು ಒಟ್ಟುಗೂಡಿ ಪ್ರೀತಿ, ವಿಶ್ವಾಸ, ಸಹಕಾರಗಳಿಂದ ಸಡಗರ, ಸಂಭ್ರಮಗಳಲ್ಲಿ ಮುಳುಗುತ್ತಿದ್ದರು. ಆದರೆ ಹಳ್ಳಿಗಳಲ್ಲೂ ಸಹ ದ್ವೇಷ, ಅಸೂಯೆ, ಜಾತೀಯತೆಗಳು ತುಂಬಿತುಳುಕಾಡುತ್ತಿವೆ. ಪ್ರತಿಯೊಬ್ಬರೂ ಸ್ವಾರ್ಥ ಮತ್ತು ಲಾಭಕೋರತನದಲ್ಲಿ ಮುಳುಗಿರುರುವುದರಿಂದ ಹಿಂದಿನ ಸುಮಧುರ ಸಂಬಂಧಗಳು ತುಕ್ಕು ಹಿಡಿದು ಕುಳಿತಿವೆ. ಇದೆಲ್ಲಕ್ಕೂ ಮೂಲ ಕಾರಣ ನಗರ, ಪಟ್ಟಣ, ಹಳ್ಳಿಗಳೆನ್ನದೆ ಭೂಮಿಯ ಬೆಲೆ ನಿರಂತರವಾಗಿ ಏರುತ್ತಿರುವುದೇ ಆಗಿದೆ.

ಭೂಮಿಯ ನಿರಂತರ ಬೆಲೆ ಏರಿಕೆಯಿಂದ ಆಗಿರುವ ಸಾಮಾಜಿಕ ಮತ್ತು ಕೌಟುಂಬಿಕ ದುಷ್ಪರಿಣಾಮಗಳನ್ನು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಹದಿನೈದು ಇಪ್ಪತ್ತು ವರ್ಷಗಳಿಂದ ಈಚೆಗೆ ಆಗುತ್ತಿರುವ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ಹತ್ತು ಹದಿನೈದು ವರ್ಷಗಳಿಂದ ಈಚೆಗೆ ಬೆಂಗಳೂರು ಮತ್ತು ಬೆಂಗಳೂರಿನ ಸುತ್ತ ಮುತ್ತ ಜಮೀನುಗಳ ಬೆಲೆ ಇದ್ದಕ್ಕಿದ್ದಂತೆ ಗಗನಕ್ಕೇರಿಬಿಟ್ಟಿತು. ಚಿಕ್ಕಬಳ್ಳಾಪುರ, ದೇವನಹಳ್ಳಿ ದೊಡ್ಡಬಳ್ಳಾಪುರ, ಅತ್ತಿಬೆಲೆ, ಹೊಸಕೋಟೆ, ಬಿಡದಿ ಮುಂತಾದ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಈಗ ಚಿನ್ನದ ಬೆಲೆ ಬಂದಿದೆ. ಎರಡು ಸಾವಿರದ ಇಸವಿಯಲ್ಲಿ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಚದುರಡಿಗೆ 250 ರೂಪಾಯಿ ಇದ್ದ ಸೈಟುಗಳ ಬೆಲೆ ಪ್ರಸ್ತುತ ಸಂದರ್ಭದಲ್ಲಿ ಚದುರಡಿಗೆ 12 ಸಾವಿರದಿಂದ 15 ಸಾವಿರ ರೂಪಾಯಿಗಳಷ್ಟಾಗಿದೆ! ಭೂಮಿಯ ಬೆಲೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಮೀಟ್ರಿಯ ಅನುಪಾತದಲ್ಲಿ ಬೆಳೆಯುತ್ತಿದೆ. ಇದರಿಂದಾಗಿ ಈ ಎಲ್ಲಾ ಪ್ರದೇಶಗಳಲ್ಲಿನ ಕುಟುಂಬಗಳಲ್ಲಿ ಅಣ್ಣ ತಮ್ಮಂದಿರ ಮಧ್ಯೆ, ಸಹೋದರ ಸಹೋದರಿಯರ ಮಧ್ಯೆ, ತಂದೆ ಮಕ್ಕಳ ಮಧ್ಯೆ, ಬಂಧುಗಳ ಮಧ್ಯೆ ಹೊಡೆದಾಟ, ಬಡಿದಾಟಗಳು ಸಾಮಾನ್ಯವಾಗಿಬಿಟ್ಟಿವೆ. ಕೆಲವೊಮ್ಮೆ ಆಸ್ತಿ ಜಗಳಗಳು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯಗೊಂಡಿವೆ. ಇದು ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಕಥೆಯೊಂದೇ ಅಲ್ಲ, ಎಲ್ಲಾ ನಗರಗಳ ಕಥೆಯೂ ಹೌದು. ಭೂಮಿಯ ಬೆಲೆ ಏರಿಕೆಯಿಂದಾಗಿಯೇ ಎಲ್ಲೆಲ್ಲೂ ಭೂಮಾಫಿಯಾ ವ್ಯಾಪಿಸಿಕೊಂಡಿದೆ. ಮತ್ತು ಬೆಂಗಳೂರಿನಲ್ಲಿ ಎಲ್ಲಾ ಗುರುತರವಾದ ಅಪರಾಧಗಳು ಭೂಮಾಫಿಯಾದ ಸುತ್ತಲೇ ಗಿರಕಿ ಹೊಡೆಯುತ್ತಿವೆ.

ಭೂಮಾಫಿಯಾವೇ ಇಂದು ಎಲ್ಲಾ ಪವರ್ ಸೆಂಟರ್‌ಗಳನ್ನು ನಿಯಂತ್ರಿಸುವ ಶಕ್ತಿಯಾಗಿ ಬೆಳೆದು ನಿಂತಿದೆ. ಭೂಮಿಯ ಬೆಲೆಯ ಜಿಗಿತದಿಂದಾಗಿ ನಗರಗಳ ಸುತ್ತಮುತ್ತಲಿನ ರೈತರು ತಮ್ಮ ಜಮೀನುಗಳನ್ನು ಮಾರಿ ವಿಲಾಸಮಯ ಜೀವನಕ್ಕೆ ಬಿದ್ದು, ಬೇಗನೆ ದುಡ್ಡನ್ನು ಕಳೆದುಕೊಂಡು ತಾವು ಜಮೀನು ಮಾರಿದವರ ಜಮೀನುಗಳಲ್ಲೇ ಕೂಲಿಕಾರರಾಗಿ ದುಡಿಯುತ್ತಿರುವ ಎಷ್ಟೋ ಉದಾಹರಣೆಗಳು ಕಾಣಸಿಗುತ್ತವೆ. ಭೂಮಿಯ ಪಾಲಿಗಾಗಿ ಸಾವಿರಾರು ಕುಟುಂಬಗಳು ಕೋರ್ಟಿನ ಮೆಟ್ಟಿಲೇರಿ ವರ್ಷಾನುಗಟ್ಟಲೆ ಅವು ತೀರ್ಮಾನವಾಗದೆ ನೆನೆಗುದಿಗೆ ಬಿದ್ದು ಯಾರೂ ಅನುಭವಿಸದ ಸ್ಥಿತಿಯಲ್ಲಿರುವ ಪ್ರಕರಣಗಳೂ ಕಡಿಮೆಯೇನಿಲ್ಲ. ಇವೊತ್ತಿನ ದಿನ ನಗರ ಪ್ರದೇಶದ ಬಹುತೇಕ ರಾಜಕಾರಣಿಗಳು ಈ ಭೂಮಾಫಿಯಾದೊಂದಿಗೆ ಸಂಬಂಧ ಇಟ್ಟುಕೊಂಡವರೇ ಆಗಿದ್ದಾರೆ. ಹೆಣ್ಣು ಮಕ್ಕಳಿಗೂ ಆಸ್ತಿಯ ಪಾಲಿನ ಹಕ್ಕು ಬಂದ ಮೇಲಂತೂ ನಗರ, ಪಟ್ಟಣಗಳೆರಡರಲ್ಲೂ ಮಾನವೀಯ ಸಂಬಂಧಗಳು ನುಚ್ಚು ನೂರಾಗಿ ಅವುಗಳ ಜಾಗದಲ್ಲಿ ದ್ವೇಷ, ಅಸೂಯೆ, ಕೌಟುಂಬಿಕ ವಿಘಟನೆ, ಜಗಳ, ಹೊಡೆದಾಟ, ಬಡಿದಾಟಗಳು ರಾರಾಜಿಸುತ್ತಿವೆ. ಒಂದೊಂದು ಅಡಿ ಜಮೀನಿಗೂ ಊಹಿಸಲಾರದಂಥ ರಾದ್ಧಾಂತಗಳು ಹುಟ್ಟಿಕೊಂಡು ಕೌಟುಂಬಿಕ ಮತ್ತು ಸಾಮಾಜಿಕ ನೆಮ್ಮದಿಯನ್ನು ಹಾಳುಗೆಡವಿವೆ. ಭೂಕಬಳಿಕೆಯ ಪ್ರಸಂಗಗಳು ಅಚ್ಚರಿ ಹುಟ್ಟಿಸುವಷ್ಟರ ಮಟ್ಟಿಗೆ ಬೆಳೆದಿವೆ. ಇದರಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಶಾಹಿ ಶಾಮೀಲಾಗಿ ಜಮೀನುಗಳನ್ನು ದೋಚುತ್ತಿದ್ದಾರೆ. ಭೂಮಾಫಿಯಾವೇ ಭೂಮಿಯ ಬೆಲೆಯನ್ನು ನಿಯಂತ್ರಿಸುತ್ತಿರುವುದರಿಂದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ವಸತಿ ಸಮಸ್ಯೆಯಿಂದ ಬಸವಳಿದು ಹೋಗಿದ್ದಾರೆ. ಇವೆಲ್ಲವುಗಳನ್ನು ನಿಯಂತ್ರಿಸಲು ಒಂದು ಶಕ್ತಿಯುತ, ಪ್ರಾಮಾಣಿಕ ಆಡಳಿತದ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಅಲ್ಲಿಯವರೆಗೂ ಮನುಷ್ಯರ ನಡುವಿನ ಸಂಬಂಧಗಳು ಕಲುಷಿತವಾಗಿಯೇ ಉಸಿರಾಡಿಕೊಂಡು ಕೊಳಕು ಚರಂಡಿಯಲ್ಲಿನ ಹುಳುಗಳಂತೆ ಜೀವಿಸಿರುತ್ತವೆ.