-ಅವನಿ ರಾವ್
ಪ್ರವಾಸವೆಂದರೆ ಬರೀ ತಿರುಗಾಟವಲ್ಲ, ಅದು ಅಧ್ಯಯನ, ಅರಿವು, ಜ್ಞಾನದ ವಿಸ್ತಾರ. ದಣಿದ ಮನಸುಗಳಿಗೆ ತುಂಬು ರಿಲ್ಯಾಕ್ಸ್, ಹೊಸ ಸಾಹಸಗಳಿಗೆ ಮುನ್ನುಡಿ. ಇಂಥ ಪ್ರವಾಸ ಬಹುಮುಖಗಳ ದರ್ಶನ ಇಲ್ಲಿದೆ.

ಜಗತ್ತು ಒಂದು ಸುಂದರ ಪುಸ್ತಕವಿದ್ದಂತೆ. ಓದಿ ಮುಗಿಸುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೆಲವೊಂದು ಸುಂದರ ಅಧ್ಯಾಯಗಳನ್ನು ನಮ್ಮದಾಗಿಸಿಕೊಳ್ಳಬಹುದು ಅಷ್ಟೆ. ಇಲ್ಲಿ ಓದುವುದು ಎಂದರೆ ಜಗತ್ತಿನ ಎಲ್ಲ ಮುಖಗಳನ್ನು ನೋಡುವುದು, ತಿಳಿಯುವುದು. ಅದಕ್ಕೆ ಪ್ರಯಾಣವೊಂದೇ ಸೂಕ್ತವಾದ ದಾರಿ- ಹೀಗಂದಿದ್ದಾರೆ ತತ್ವಜ್ಞಾನಿ ಸೇಂಟ್ ಆಗಸ್ಟಿನ್. ಜೀವನದಲ್ಲಿ ಒಂದು ಪುಟ್ಟ ಸೂರು, ಸಂಸಾರ, ವೃತ್ತಿ, ಒಂದಿಷ್ಟು ಕನಸುಗಳ ಸಾಧನೆ ಅದರಾಚೆಗೆ ಒಂದಿಷ್ಟು ಕಷ್ಟ-ಸುಖಗಳ ಸುತ್ತಲಷ್ಟೇ ಊರು ಹೊಡೆಯುವ ಬದಲು ಜಗತ್ತು ಸುತ್ತಿದ ಅನನ್ಯ ಅನುಭವವೂ ನಮ್ಮದಾಗಬೇಕು ಎನ್ನುವುದು ಇದರರ್ಥ. ಇದನ್ನೇ ನಮ್ಮಲ್ಲಿ “ದೇಶ ಸುತ್ತು, ಕೋಶ ಓದು’ ಎಂದು ಹೇಳುವುದು. ಈಗ ಪ್ರವಾಸ ಎಂದರೆ ಮೋಜು, ಮಸ್ತಿ, ದುಡಿಯುವ ಮನಸುಗಳಿಗೆ ಒಂದಿಷ್ಟು ವಿಶ್ರಾಂತಿ, ಮನರಂಜನೆ ಹೀಗೆ ಬೇರೆ ಬೇರೆ ಆಯಾಮಗಳಿಂದ ಕರೆಯಲ್ಪಡುತ್ತಿದ್ದರೂ, ಇವತ್ತಿಗೂ ಪ್ರವಾಸವನ್ನು ಜ್ಞಾನದ ವೃದ್ಧಿಗಾಗಿ, ಅರಿವಿನ ವಿಸ್ತಾರಕ್ಕಾಗಿ, ಇಡೀ ಸಮಾಜ-ಸಂಸ್ಕೃತಿಯ ಅಧ್ಯಯನಕ್ಕಾಗಿ ಬಳಸುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ವಿಭಿನ್ನ ಉದ್ದೇಶಗಳ ಪ್ರವಾಸ
ನೂರಾರು ವರ್ಷಗಳ ಹಿಂದೆ ತಿರುಗಿ ನೋಡಿದರೆ ಆಗ ಪ್ರವಾಸ ಅಥವಾ ಪ್ರಯಾಣ ಅಥವಾ ಟೂರ್ ಎನ್ನುವುದು ಚಾಲ್ತಿಯಲ್ಲಿಲ್ಲದ್ದರೂ ಮನುಷ್ಯ ಪ್ರವಾಸದಲ್ಲಿರುತ್ತಿದ್ದ. ಆತನ ಆಹಾರ ಅಥವಾ ಇನ್ನಾವುದೋ ಅವಶ್ಯಕತೆಗಳಿಗಾಗಿ ಹುಡುಕಾಡುತ್ತಾ ಸಾಗುತ್ತಿದ್ದ ಪರಿ ವಲಸೆ ಅಥವಾ ಪ್ರವಾಸವೇ ಆಗಿತ್ತು. ನಾಗರಿಕತೆ ಆರಂಭವಾದಗಿನಿಂದಲೂ ಮನುಷ್ಯ ಒಂದಲ್ಲ ಒಂದು ಉದ್ದೇಶಕ್ಕಾಗಿ ಪ್ರವಾಸಿಗನೇ, ಉದ್ದೇಶಗಳು ಮಾತ್ರ ವಿಭಿನ್ನ ಎನ್ನಬಹುದು. ಉದಾಹರಣೆಗೆ ಕ್ರಿಸ್ಟೋಫರ್ ಕೊಲಂಬಸ್ ಅಥವಾ ಮಾರ್ಕ್ ಪೋಲೋ. ಇವರ ಬಗ್ಗೆ ಹೇಳುವುದಾದರೆ ಇವರೆಲ್ಲರೂ ಬರೀ ಪ್ರವಾಸಿಗರಷ್ಟೇ ಅಷ್ಟೇ ಅಲ್ಲ, ಅವರು ಸಂಶೋಧಕರು, ಅನ್ವೇಷಕರೂ ಆಗಿದ್ದರು. ಸಾರಿಗೆಗಳಿಲ್ಲದ ಆ ಕಾಲದಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅವರು ಸಮುದ್ರ ಮಾರ್ಗಗಳ ಮೂಲಕ ತಲುಪುತ್ತಿದ್ದರು. ಸುಮಾರು 7ನೇ ಶತಮಾನದಲ್ಲಿ ಭಾರತಕ್ಕೆ ಬಂದ ಚೀನಾದ ವಿದ್ವಾಂಸ, ಪ್ರವಾಸಿಗ ಹೂಯೆನ್‌ತ್ಸಾಂಗ್ ಉದ್ದೇಶವೂ ಬುದ್ಧ ಧರ್ಮದ ಅರಿವು ಮತ್ತು ಪ್ರಚಾರವೇ ಆಗಿತ್ತು.

ಹಿಂದೆಯೆಲ್ಲಾ ರೋಮನ್ನರು ಮೆಡಿಟರೇನಿಯನ್ ಸಮುದ್ರ ದಂಡೆಯಲ್ಲಿರುವ ವಿಲ್ಲಾಗಳಲ್ಲಿ ವಿರಮಿಸುತ್ತಿದ್ದರಂತೆ. ಅದೇ ಸಮಯದಲ್ಲಿ ಏಷ್ಯಾದ ಕೆಲವು ಭಾಗಗಳಲ್ಲಿ ಪ್ರವಾಸ ಎನ್ನುವುದು ಸಂಸ್ಕೃತಿಯ ಹುಡುಕಾಟದ ಉದೇಶದಿಂದಲೂ ನಡೆಯುತ್ತಿತ್ತು ಎನ್ನುತ್ತದೆ ಇತಿಹಾಸ. ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಗೆ ಮಾರುಹೋಗಿ ಇಲ್ಲಿಗೆ ಪ್ರವಾಸ ಬಂದು ಅಧ್ಯಯನ ಮಾಡಿದ ಅನೇಕ ವಿದೇಶಿಗರಿದ್ದಾರೆ. ಇನ್ನು ಅಧ್ಯಾತ್ಮಕ್ಕೆ ತೆರೆದುಕೊಂಡ ದೇಶವಾಗಿದ್ದ ಭಾರತದಲ್ಲಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಪರಿಪಾಠ ಮೊದಲಿನಿಂದಲೂ ಇತ್ತು. ನಮ್ಮ ತಾತ ಮುತ್ತಾತರು ನಡೆದುಕೊಂಡೇ ಅಥವಾ ಎತ್ತಿನ ಗಾಡಿ, ಒಂಟೆ ಮೇಲೆ ಕುಳಿತು ತಿರುಪತಿಗೆ ಹೋಗುತ್ತಿದ್ದ ಕತೆಗಳನ್ನು ಕೇಳಿರಬಹುದು. ಅವರು ಅಲ್ಲಿ ಹೋದರೆ ಮರಳಿ ಬರುತ್ತಾರೆನ್ನುವ ಖಚಿತತೆ ಕೂಡ ಇರುತ್ತಿರಲಿಲ್ಲವಂತೆ! ಹೀಗೆ ಹಲವಾರು ಉದ್ದೇಶಗಳಿಂದ ಕೂಡಿರುವ ಪ್ರವಾಸ ಇಂದು ಬದುಕಿನ ಬಹುಮುಖ್ಯ ಭಾಗವಾಗಿದೆ. ವೈಯಕ್ತಿಕ ಅಗತ್ಯವಾಗಿ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಉದ್ಯಮರಂಗವಾಗಿ ವಿಸ್ತಾರತೆಯನ್ನು ಹರವಿಕೊಂಡಿದೆ.
ವೈಭವೋಪೇತ ಪ್ರವಾಸಗಳತ್ತ ಪ್ರವಾಸಿಗ
ಸುಮಾರು 17ನೇ ಶತಮಾನದ ಹೊತ್ತಿಗೆ ಜಗತ್ತು ವೈಭವಪೋತ ಪ್ರವಾಸಗಳಿಗೆ ತೆರೆದುಕೊಂಡಿತ್ತು. ಆಗೆಲ್ಲಾ ಯುರೋಪಿನ ಸುಂದರ ನಗರಗಳಿಗೆ ವಿಶ್ವದ ವಿವಿಧ ಕಡೆಯಿಂದ ಜನರು ಭೇಟಿ ನೀಡಲು ಶುರುಮಾಡಿದ್ದರು. ಲಂಡನ್, ಪ್ಯಾರೀಸ್, ರೋಮ್, ವೆನಿಸ್ ಮೊದಲಾದ ನಗರಗಳಿಗೆ ಹೆಚ್ಚು ಹೆಚ್ಚು ಜನರು ಭೇಟಿ ನೀಡಿ ಅಲ್ಲಿ ವಿರಮಿಸುವುದು ಮಾತ್ರವಲ್ಲ ಅಲ್ಲಿನ ಕಲೆ, ಇತಿಹಾಸ, ವಾಸ್ತುಶಿಲ್ಪದ ಬಗ್ಗೆ ಕಲಿಯಲು ಶುರುಮಾಡಿದರು. 17ನೇ ಶತಮಾನದ ಹೊತ್ತಿಗೆ ಪ್ರವಾಸ ಎನ್ನುವುದು ಸಂಸ್ಕೃತಿಯ ಕಲಿಕೆಯ ಭಾಗವಾಗಿಯೂ ರೂಪುಗೊಂಡಿತ್ತು ಎನ್ನುತ್ತಾರೆ ಈ ಬಗೆಗಿನ ಅಧ್ಯಯನಕಾರರು.

ಇನ್ನು ಆಧುನಿಕ ಪ್ರವಾಸೆನ್ನುವುದು ಶುರುವಾಗಿದ್ದೇ ರೈಲ್ವೆಗಳು ಶುರುವಾದ ಬಳಿಕ, ಅಂದರೆ 19ನೇ ಶತಮಾನದಲ್ಲಿ. ಅಲ್ಲಿಯ ತನಕ ಶ್ರೀಮಂತರಿಗೆ ಮಾತ್ರವೇ ಕೈಗೆಟುಕುತ್ತಿದ್ದ ಪ್ರವಾಸಕ್ಕೆ ಮಧ್ಯಮವರ್ಗದವರೂ ತೆರೆದುಕೊಂಡರು. ಪ್ರವಾಸ ಆಯೋಜಕರು ರೈಲುಗಳ ಮೂಲಕ ಜನರನ್ನು ಪ್ರವಾಸ ಕಳಿಸಲು ಶುರುಮಾಡಿದರು. ಸಾರಿಗೆ ಸೌಲಭ್ಯಗಳು ಅಭಿವೃದ್ಧಿಯಾಗುತ್ತಿದ್ದಂತೆ 19ನೇ ಶತಮಾನದ ಹೊತ್ತಿಗೆ ಪ್ರವಾಸ ಎಲ್ಲರಿಗೂ ಕೈಗುಟುಕುವಂತಾಯಿತು. ಎರಡನೇ ಮಹಾಯುದ್ಧದ ನಂತರವಂತೂ ವಿಮಾನಯಾನಗಳು ಹೆಚ್ಚು ಚಾಲ್ತಿಗೆ ಬಂದವು. ಜನರು ಹೆಚ್ಚು ಹೆಚ್ಚು ಪ್ರವಾಸ ಮಾಡಲು ಶುರುಮಾಡಿದರು. 1960ರ ಹೊತ್ತಿಗೆ ಗುಂಪು ಗುಂಪಾಗಿ ಪ್ರವಾಸ ಹೋಗುವ ಸಂಸ್ಕೃತಿ ಹೆಚ್ಚು ಹೆಚ್ಚು ಬಳಕೆಗೆ ಬಂತು. ಈಗ ಜಗತ್ತು ನಮ್ಮ ಕೈಯಲ್ಲಿದೆ! ಈಗ ಭೂಮಿ ಮೇಲೆ ಮಾತ್ರವಲ್ಲ ಮನುಷ್ಯ ಆಕಾಶಕ್ಕೂ ಪ್ರವಾಸ ಹೋಗುವುದು ಸಾಧ್ಯವಾಗಿದೆ. ವರ್ಜಿನ್ ಕಂಪನಿಯ ರಿಚರ್ಡ್ ಬ್ರಾನ್‌ಸನ್, ಅಮೆಜಾನ್ ಸಂಸ್ಥಾಪಕ ಜೆಫ್ ಬಿಝೊಸ್ ಮೊದಲಾದವರು ಗಗನಕ್ಕೇರುವ ಕನಸನ್ನೂ ನನಸು ಮಾಡುತ್ತಿದ್ದಾರೆ. ವಲಸೆಯಿಂದ ಆರಂಭವಾದ ಪ್ರವಾಸ ಸಮುದ್ರ ಮಾರ್ಗ, ಎತ್ತಿನಗಾಡಿ, ರೈಲು, ವಿಮಾನಗಳ ಮೂಲಕ ಈಗ ಭೂಭಾಗದ ಇಂಚಿಂಚನ್ನೂ ಪ್ರವಾಸ ಮಾಡುವ ಯೋಗ ಬಂದಂತಾಯಿತು!!
ವೈವಿಧ್ಯಮಯ ಪ್ರವಾಸ
ಸಾಹಸಮಯ ಪ್ರವಾಸ: ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ನಲ್ಲಿರುವ ಪ್ರವಾಸವಿದು. ಪರ್ವತಾರೋಹಣ, ಚಾರಣ ಮಾತ್ರವಲ್ಲ ಜಗತ್ತಿಗೆ ಪರಿಚಯವೇ ಇರದ ವಿಶೇಷ ಮತ್ತು ಅಪರಿಚಿತ ಜಾಗಕ್ಕೆ ಭೇಟಿ ನೀಡಿ ಪ್ರವಾಸದನುಭವ ಪಡೆಯುತ್ತಾರೆ. ದೈಹಿಕವಾಗಿ ಶ್ರಮ ಬೇಡುವ ಈ ಪ್ರವಾಸಕ್ಕೆ ಗಂಡು-ಹೆಣ್ಣೆಂಬ ಭೇದವಿಲ್ಲ. ಈಗಿನ ಯುವಜನಾಂಗ ಇಂಥ ಸಾಹಸಮಯ ಪ್ರವೃತ್ತಿಗಳಿಗೆ ಹೆಚ್ಚು ತೆರೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ನಮ್ಮ ದೇಶವೂ ಸೇರಿದಂತೆ ಹಲವಾರು ದೇಶಗಳಲ್ಲಿ ತರಬೇತಿ ನೀಡುವ ಸಂಸ್ಥೆಗಳು ಕೂಡ ಇವೆ.
ಕೃಷಿ ಪ್ರವಾಸ: ಈ ಪ್ರವಾಸಕ್ಕೆ ಭಾರತದಲ್ಲೂ ಉತ್ತೇಜನವಿದೆ. ನಮ್ಮ ರಾಜ್ಯದ/ ದೇಶದ ರೈತರನ್ನು ಚೀನಾ ದೇಶಗಳಿಗೆ ಕೃಷಿ ಅಧ್ಯಯನಕ್ಕಾಗಿ ಕಳಿಸಿರುವ ಬಗ್ಗೆ ನಾವು ಕೇಳುತ್ತೇವೆ. ಕೇರಳ ಸರಕಾರ ಇದೇ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ “ಗ್ರೀನ್ ಫಾರ್ಮ್’ ಎಂಬ ಯೋಜನೆಯನ್ನೇ ರೂಪಿಸಿದೆ. ಇಟಲಿ, ಅಮೆರಿಕ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ.

ಹೆಲ್ತ್ ಟೂರಿಸಂ: ಇದು ಆರೋಗ್ಯಸೇವೆಗಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರವಾಸ ಮಾಡುವಂಥದ್ದು. ನಮ್ಮಲ್ಲಿಂದಲೂ ಸಿಂಗಾಪುರ ಮೊದಲಾದ ಕಡೆ ಚಿಕಿತ್ಸೆಗಾಗಿ ಹೋಗುವುದನ್ನು ಕೇಳಿದ್ದೇವೆ. ಬೇರೆ ದೇಶಗಳಿಂದಲೂ ಇಲ್ಲಿಗೆ ಆಗಮಿಸುತ್ತಾರೆ. ಭಾರತದಲ್ಲಿಹೆಚ್ಚು ಬೇಡಿಕೆಯಿರುವ ಪ್ರವಾಸವಿದು. ಸೌತ್ ಈಸ್ಟ್ ಏಷ್ಯಾ, ಮಧ್ಯ ಏಷ್ಯಾ, ಆಫ್ರಿಕಾ ಮತ್ತು ಸಾರ್ಕ್ ವಲಯದ ದೇಶಗಳಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯಸೇವೆಗಾಗಿ ಭೇಟಿ ನೀಡುತ್ತಾರೆ. 2017ರಲ್ಲಿ ಅಂದಾಜು 5 ಲಕ್ಷದಷ್ಟು ವಿದೇಶಿಗರು ಭಾರತಕ್ಕೆ ಈ ಉದ್ದೇಶದಿಂದ ಭೇಟಿ ನೀಡಿದ್ದಾರೆ. ಕೇರಳದಲ್ಲಿ ಪ್ರಕೃತಿ ಚಿಕಿತ್ಸೆಗಳಿಗಾಗಿ ಬೇರೆ ಬೇರೆ ದೇಶಗಳಿಂದ ಸಾವಿರಾರು ಜನರು ಭೇಟಿ ನೀಡುವುದನ್ನು ಗಮನಿಸಬಹುದು.
ಕಲ್ಚರಲ್ ಟೂರಿಸಂ: ಒಂದು ದೇಶದ ಇಡೀ ಸಾಂಸ್ಕೃತಿಕ ಆಯಾಮಗಳನ್ನು ವೀಕ್ಷಿಸಿ ಅನುಭವ ಪಡೆಯುವಂಥ ವಿಶೇಷ ಪ್ರವಾಸವಿದು. ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ ಕಲೆಯ ಎಲ್ಲಾ ಬಗೆಗಳನ್ನು ಅರಿಯುವ, ಭಾಗವಹಿಸುವ ಉದ್ದೇಶ ಇದರದ್ದು. ಉದಾಹರಣೆಗೆ: ಯಾವುದೋ ದೇಶಗಳಿಂದ ನಮ್ಮ ಹಂಪಿಗೆ, ಶ್ರವಣಬೆಳಗೊಳ, ಮೈಸೂರು ಅರಮನೆಗೆ ಭೇಟಿ ನೀಡಿ ಅಲ್ಲಿಯ ಕಲಾವೈಭವವನ್ನು ಅಧ್ಯಯನ ಮಾಡುವವರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಇಂಥ ಸಾಂಸ್ಕೃತಿಕ ಪ್ರವಾಸದ ಮಹತ್ವ ಹೆಚ್ಚಾಗುತ್ತಿದೆ. ಇಲ್ಲಿನ ರಾಷ್ಟ್ರೀಯ ಮಟ್ಟದ ಉತ್ಸವಗಳಿಗೆ ಜಗತ್ತಿನ ಮೂಲೆಮೂಲೆಗಳಿಂದ ಜನ ಆಗಮಿಸುತ್ತಾರೆ. ಈ ಪ್ರವಾಸವನ್ನು ಉತ್ತೇಜಿಸುವ ಸಲುವಾಗಿ ಭಾರತ ಸರಕಾರ ಕೂಡ “ಇನ್‌ಕ್ರೆಡಿಬಲ್ ಇಂಡಿಯಾ” ಎಂಬ ಯೋಜನೆ ಜಾರಿಮಾಡಿದೆ. ಕಲಾಶ್ರೀಮಂತಿಕೆ ಹೊಂದಿರುವ ರಾಜಸ್ಥಾನ ದೇಶದಲ್ಲಿ ಸಾಂಸ್ಕೃತಿಕ ಪ್ರವಾಸೋದ್ಯಮದ ಮೊದಲ ಸಾಲಿನಲ್ಲಿದೆ. ಇಲ್ಲಿನ ಕ್ಯಾಮೆಲ್ ಫೆಸ್ಟಿವಲ್, ಮಾರ್ವರ್ ಫೆಸ್ಟಿವಲ್, ಪುಷ್ಕರ್ ಹಬ್ಬಕ್ಕೆ ಜಗತ್ತೇ ಆಗಮಿಸುತ್ತದೆ. ಹಾಗೆಯೇ ಪ್ಯಾರೀಸ್, ಲಂಡನ್, ರೋಮ್, ಸಿಂಗಾಪುರ, ದುಬೈ, ಬಾರ್ಸಿಲೋನಾ, ನ್ಯೂಯಾರ್ಕ್, ಚೀನಾದ ಶಾಂಘೈ ನಗರಗಳು ಸಾಂಸ್ಕೃತಿಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಪರ್ಯಾಯ ಪ್ರವಾಸೋದ್ಯಮ (ಆಲ್ಟರ್ನೇಟವ್ ಟೂರಿಸಂ): ಇದು ಒಂದು ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ಮಾಡುವ ಪ್ರವಾಸ. ಯಾವುದೋ ಒಂದು ಸ್ಥಳಕ್ಕೆ ಭೇಟಿ ನೀಡಿ. ಅಲ್ಲಿನ ಸ್ಥಳೀಯ ಸರಕಾರ, ಜನರು, ಸಮುದಾಯಗಳೊಂದಿಗೆ ಸಂವಾದ ನಡೆಸಿ ಪ್ರವಾಸದನುಭವ ಪಡೆಯುವುದು. ಆಯಾ ವ್ಯಕ್ತಿಯ ವೈಯಕ್ತಿಕ ಅಧ್ಯಯನಕ್ಕಾಗಿಯೂ ಇದನ್ನು ಬಳಸಿಕೊಳ್ಳಲಾಗುತ್ತದೆ.
ಅಟಾಮಿಕ್ ಟೂರಿಸಂ: ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸ ಸಂಸ್ಕೃತಿಯಿದು. ಅಟಾಮಿಕ್ ವೆಪನ್‌ಗಳ ಮ್ಯೂಸಿಯಂ, ಸ್ಥಾವರಗಳಿದ್ದ ಸ್ಥಳ ಮೊದಲಾದ ಕಡೆ ಪ್ರವಾಸ ಮಾಡಿ ಅಧ್ಯಯನ ನಡೆಸುವಂಥದ್ದು.
ಬರ್ತ್ ಟೂರಿಸಂ: ಇದು ನಮ್ಮ ದೇಶದಲ್ಲಿ ಅಷ್ಟು ಪ್ರಚಲಿತದಲ್ಲಿಲ್ಲ. ತಾನಿರುವ ದೇಶದಿಂದ ಇನ್ನೊಂದು ಕಡೆ ಹೋಗಿ ಮಗುವಿಗೆ ಜನ್ಮನೀಡುವಂಥದ್ದು. ಅಮೆರಿಕ, ಕೆನಡಾ, ಮೆಕ್ಸಿಕೋ, ಅರ್ಜೆಂಟೀನಾ, ಬ್ರೆಜಿಲ್, ಬೊಲಿವಿಯಾ, ಜಮೈಕಾ, ಉರುಗ್ವೆ ಮೊದಲಾದ ದೇಶಗಳಲ್ಲಿ ಹೀಗೆ ಜನ್ಮನೀಡಿದ್ದಕ್ಕಾಗಿ ವಿಶೇಷ ಆರೋಗ್ಯಸೇವೆ, ಶಿಕ್ಷಣ ಮೊದಲಾದವುಗಳ ಸೌಲಭ್ಯವೂ ಇದೆ.

ಇನ್ನು ಭಾರತದ ಮಟ್ಟಿಗೆ ಧಾರ್ಮಿಕ ಪ್ರವಾಸ ಬಹುಬೇಡಿಕೆ ಪ್ರವಾಸ. ಪುರಿ, ವಾರಣಾಸಿ, ತಿರುಪತಿ, ಶಿರಡಿ ಮೊದಲಾದವುಗಳು ಈ ಪ್ರವಾಸದ ಮೊದಲ ಸ್ಥಾನದಲ್ಲಿವೆ. ಇದಲ್ಲದೆ ಉನ್ನತ ವಿದ್ಯಾಭ್ಯಾಸಕ್ಕಾಗಿ, ಕಾರ್ಪೋರೇಟ್ ಉದ್ಯಮರಂಗದಲ್ಲಿನ ವಿವಿಧ ಬಿಸ್ನೆಸ್, ಫುಡ್ ಟೂರಿಸಂ ಹೀಗೆ ವೈವಿಧ್ಯಮಯ ಪ್ರವಾಸಗಳಿವೆ. ಆಹಾರ ಪ್ರವಾಸೋದ್ಯಮದ ವಿಷಯಕ್ಕೆ ಬಂದರೆ ದಿಲ್ಲಿ ಮತ್ತು ರಾಜಸ್ಥಾನಗಳು ಇದರಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಅಲ್ಲಿನ ವೈವಿಧ್ಯಮಯ ಆಹಾರ ಸವಿಯಲೆಂದೇ ಪ್ರವಾಸಿಗರು ಆಗಮಿಸುವುದುಂಟು. ಅದರಲ್ಲಿ ಉತ್ತರಭಾರತದ ಆಹಾರಗಳು ವಿದೇಶಿಗರ ಎನೀಟೈಮ್ ಫೇವರಿಟ್. ಶಿಕಾಗೋದಲ್ಲಿ ನಡೆಯುವ ಟೇಸ್ಟ್ ಆಫ್ ಶಿಕಾಗೋ ಆಹಾರೋತ್ಸವದಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಜನ ಭಾಗವಹಿಸುತ್ತಾರೆ! ಸೆಲೆಬ್ರಿಟಿ ಶೆಫ್‌ಗಳ ಮೂಲಕ ಸಿದ್ಧವಾದ ಸುಮಾರು 200ಕ್ಕಿಂತಲೂ ಹೆಚ್ಚು ಬಗೆಯ ಆಹಾರಗಳು ಅಲ್ಲಿರುತ್ತವೆ. ಇನ್ನು ಕೌಟುಂಬಿಕ ಪ್ರವಾಸ ಎಲ್ಲಾ ಕಡೆಯೂ ಸರ್ವೇಸಾಮಾನ್ಯ.
ಇನ್ನೇನು?
ಇತ್ತೀಚಿನ ವರ್ಷಗಳಲ್ಲಿ ಮೋಜು ಮಸ್ತಿಯ ಪ್ರವಾಸಕ್ಕಿಂತ ವಿಶ್ರಾಂತಿ-ವಿಹಾರ ಜೊತೆಗೆ ಅಧ್ಯಯನದ ದೃಷ್ಟಿಯಿಂದಲೂ ಜನರು ದೇಶ ಸುತ್ತುವುದು ಟ್ರೆಂಡ್ ಆಗಿದೆ. ಅದಕ್ಕೊಂದು ಉದಾಹರಣೆ ವಿಯೆಟ್ನಾಂ ದೇಶ. ನದಿ, ಗದ್ದೆ, ಹಸಿರು ಹಸಿರು ಪರಿಸರ, ಬೌದ್ಧ ಸ್ಮಾರಕಗಳು, ಅಲ್ಲಿ ನಡೆದ ಯುದ್ಧಕ್ಕೆ ಸಾಕ್ಷಿಯಾದ ಅವಶೇಷಗಳು, ವಿಯೆಟ್ನಾಂ ಯೋಧರು ಬಳಸುತ್ತಿದ್ದ “ಕು ಚಿ” ಹೆಸರಿನ ಸುರಂಗಗಳನ್ನು ನೋಡಲು ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲಿನ ಜನರು ಬದುಕುವ ಶೈಲಿ, ಹಸಿರನ್ನು ಹೊದ್ದು ನಿಂತಿರುವ ಹಳ್ಳಿಗಳು, ಕೃಷಿ, ಅವರ ಆಹಾರ ಪದ್ಧತಿ ಎಲ್ಲವನ್ನೂ ತಿಳಿಯಲು ಜನರ ಆಗಮಿಸುತ್ತಿದ್ದಾರೆ. ಇಲ್ಲಿ ಹರಿಯುವ ಏಷ್ಯಾದ ಅತೀ ದೊಡ್ಡ ನದಿಯೆಂದೇ ಹೆಗ್ಗಳಿಕೆ ಹೊಂದಿರುವ ಮೀಕಾಂಗ್ ನದಿಯೇ ಇವರ ಬದುಕಿಗೆ ಆಧಾರ. ಚೀನಾದಲ್ಲಿ ಹುಟ್ಟಿ ಪೂರ್ವ ಮತ್ತು ಆಗ್ನೇಯ ಏಷ್ಯಾದ ಎಲ್ಲಾ ಭಾಗಗಳಿಗೆ ಈ ನದಿ ವರ್ಷಪೂರ್ತಿ ಬತ್ತದೆ ಹರಿಯುವುದರಿಂದ ಈ ಭಾಗಗಳಲ್ಲಿನ ಎಲ್ಲಾ ದೇಶಗಳಲ್ಲೂ ಪರಿಸರ ಶ್ರೀಮಂತವಾಗಿದೆ. ಹಾಗಾಗಿ, ಪ್ರವಾಸಿಗರು ಸಹಜವಾಗಿ ಆಕರ್ಷಿತರಾಗುತ್ತಿದ್ದಾರೆ. ವಿಯೆಟ್ನಾಂನಲ್ಲಿರುವ “ಹ ಲಾಂಗ್ ಬೆ” ಯಲ್ಲಿರುವ ಹವಳದ ಬೆಟ್ಟಗಳಂತೂ ಕಣ್ತುಂಬಿಕೊಂಡಷ್ಟೂ ಸಾಲದು.
ಏಳು ಸಹೋದರಿಯರು: ನಮ್ಮ ದೇಶದೊಳಗೇ ಪ್ರವಾಸ ಹೋಗಿ ವಿಭಿನ್ನ ಅನುಭವ ಪಡೆಯುವುದಾದರೆ ನಮ್ಮ ಈಶಾನ್ಯ ರಾಜ್ಯಗಳಿಗೆ ಖಂಡಿತಾ ತೆರಳಬಹುದು. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಝೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ ರಾಜ್ಯಗಳನ್ನು ಏಳು ಸಹೋದರಿಯರು ಎಂದು ಕರೆಯುವುದು ವಾಡಿಕೆ. ನದಿಗಳು, ಹಸಿರು, ವಿಭಿನ್ನವಾದ ಬದುಕಿನ ಸಂಸ್ಕೃತಿ, ವೈವಿಧ್ಯಮಯ ಆಹಾರ, ಕಲೆ, ಅಧ್ಯಯನ, ಎಲ್ಲಾ ರೀತಿಯಿಂದಲೂ ಇದು ಯೋಗ್ಯವಾದ ಪ್ರವಾಸವೇ.

ಆಫ್ರಿಕಾ ದೇಶಗಳ ಪ್ರವಾಸ: ಕಳೆದ ಕೆಲ ವರ್ಷಗಳಿಂದ ಆಫ್ರಿಕಾ ದೇಶಗಳಾದ ಕೀನ್ಯಾ, ತಾಂಜೇನಿಯಾ, ದಕ್ಷಿಣ ಆಫ್ರಿಕಾ, ನಮೀಬಿಯಾ, ರವಾಂಡಾ ಮೊದಲಾದ ದೇಶಗಳು ಪ್ರವಾಸೋದ್ಯಮವನ್ನು ಹೆಚ್ಚು ಉತ್ತೇಜಿಸುತ್ತಿವೆ. ಅಲ್ಲಿನ ದಟ್ಟಾರಣ್ಯ, ಪ್ರಾಣಿ ಸಂಕುಲವನ್ನು ನೋಡಲು ಭಾರತದಿಂದಲೂ ಸಾಕಷ್ಟು ಮಂದಿ ಅಲ್ಲಿಗೆ ಪ್ರಯಾಣಿಸುತ್ತಿದ್ದಾರೆ. ಇಲ್ಲಿ ಭಾರತೀಯ ಉದ್ಯಮಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ದುಬಾರಿ ಎನಿಸಿದರೂ ಕೀನ್ಯಾದ ಮಾಸಾಯ್‌ಮರ, ತಾಂಜೇನಿಯಾದ ಸೆರೆಂಗಿಟಿ, ದಕ್ಷಿಣ ಆಫ್ರಿಕಾದ ಕ್ರುಗೆರ್ ಮೊದಲಾದ ಅಭಯಾರಣ್ಯಗಳಿಗೆ ಜೀವನದಲ್ಲಿ ಒಂದು ಸಲವಾದರೂ ಭೇಟಿಯಾಗಬೇಕು ಎನ್ನುವವರಿದ್ದಾರೆ. ದಕ್ಷಿಣಾ ಆಫ್ರಿಕಾದಲ್ಲಿ ವರ್ಷದ ಜೂನ್‌ನಿಂದ –ಅಕ್ಟೋಬರ್ ತನಕ ನಡೆಯುವ “ಗ್ರೇಟ್ ಮೈಗ್ರೇಶನ್” ಎಂಬ ಪ್ರಾಣಿಗಳ ಮಹಾ ವಲಸೆಯನ್ನು ಕಣ್ಣಾರೆ ಕಾಣಲು ವಿಶ್ವದೆಲ್ಲೆಡೆಯಿಂದ ಪ್ರವಾಸ ಬರುತ್ತಾರೆ. ಹಾಗೇ ದಕ್ಷಿಣ ಆಫ್ರಿಕಾದ ವಿಕ್ಟೋರಿಯಾ ಜಲಪಾತವೂ ಪ್ರವಾಸಿಗರ ಆಕರ್ಷಣೆ. ಇಲ್ಲಿನಡೆಯುವ ಭಂಗೀ ಜಂಪಿಂಗ್, ಹೈವೇರ್ ಚಟುವಟಿಕೆಗಳು, ಡೆವಿಲ್ಸ್ ಪೂಲ್ ಮೊದಲಾದವುಗಳಿಗೆ ಪ್ರವಾಸಿಗರು ಮುಗಿಬೀಳುವುದುಂಟು.

ಸೋಲೋ ಟ್ರಾವೆಲಿಂಗ್: ಈಗಿನ ತಲೆಮಾರಿನ ಬಹಳಷ್ಟು ಮಂದಿ ಇಷ್ಟಪಡುವ ಪ್ರವಾಸವಿದು. ಯುವಕರಿಗಿಂತಲೂ ಹೆಚ್ಚು ಹೆಣ್ಣುಮಕ್ಕಳು ಈಗ ಸೋಲೋ ಟ್ರಾವೆಲಿಂಗನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಯಾವ ಅಂಜಿಕೆಯೂ ಇಲ್ಲದೆ ಸಮರ್ಪಕವಾದ ಪೂರ್ವ ತಯಾರಿಯಿಂದ, ಅಷ್ಟೇ ಜವಾಬ್ದಾರಿಯಿಂದ ಈ ಪ್ರವಾಸಕ್ಕೆ ಸಿದ್ಧವಾಗುತ್ತಾರೆ. ತಮ್ಮಿಷ್ಟದ ಪ್ರವಾಸವನ್ನು ತಮ್ಮಿಷ್ಟದಂತೆ ಅನುಭವಿಸಲು ಇದೊಂದು ಉತ್ತಮ ದಾರಿಯೂ ಹೌದು. ಅದರಲ್ಲೂ ಕೊರೊನೋತ್ತರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸೋಲೋ ಟ್ರಾವೆಲ್ ಇನ್ನೂ ಹೆಚ್ಚು ಬಳಕೆಗೆ ಬಂದಿದೆ.