-ಶೌರ್ಯ ಡೆಸ್ಕ್
ಈಗ ಚಿತ್ರೀಕರಣವಾಗಿರುವ ಸಿನಿಮಾ ಶೇ 50 ರಷ್ಟು ಬದಲಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈಗ ಶೂಟಿಂಗ್ ಆಗಿರುವ ಸಿನಿಮಾ ಅದೇ ರೀತಿ ಬಿಡುಗಡೆ ಆಗುವುದಿಲ್ಲ. ಸಂಪೂರ್ಣ ಬದಲಿಸಿ ಮರು ಚಿತ್ರೀಕರಣ, ಮರು ಗ್ರಾಫಿಕ್ಸ್ ನಂತರ ಬಿಡುಗಡೆ ಆಗಲಿದೆ. ಬಿಡುಗಡೆ ಇನ್ನಷ್ಟು ಮುಂದೆ ಹೋದರು ಅಚ್ಚರಿಯಿಲ್ಲ ಅನ್ನಲಾಗುತ್ತಿದೆ.

ಬಹುನಿರೀಕ್ಷಿತ ಆದಿಪುರುಷ್ (Adipurush) ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಈ ಸುದ್ದಿ ಬೆನ್ನಿಗೇ ಈ ಚಿತ್ರ ಬಿಡುಗಡೆಯಾಗುವುದೇ ಡೌಟ್. ತೆರೆಗೆ ಬರುವುದಾದರೆ ಮರುಚಿತ್ರೀಕರಣ ಮತ್ತು ಮರು ಗ್ರಾಫಿಕ್ಸ್ ನಂತರವೇ ಎಂಬ ಸುದ್ದಿ ಬಂದಿದೆ. ಬೇಸರಗೊಂಡಿರುವ ನಿರ್ಮಾಪಕರು ದೊಡ್ಡ ಮೊತ್ತದ ಹಣ ಹೂಡಿ ಇದೆಂಥಾ ಪರಿಸ್ಥಿತಿ ಎಂದು ಚಿಂತಿತರಾಗಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ಇಷ್ಟಕ್ಕೂ ಆದಿಪುರುಷ್ ನ ಈ ಸ್ಥಿತಿಗೆ ಕಾರಣವೇನು? ತಿಳಿಯೋಣ ಬನ್ನಿ.
ಮುಂದಿನ ವರ್ಷ 2023ರ ಜನವರಿಯಲ್ಲಿ ಈ ಚಿತ್ರ ಬಿಡುಗಡೆ ಆಗಬೇಕಿತ್ತು. ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿತ್ತು. ಆದರೀಗ ಬಿಡುಗಡೆ ಮುಂದೂಡಲಾಗಿದೆ ಎಂದು ನಿರ್ದೇಶಕ ಓಂ ರಾವತ್ ಹೇಳಿದ್ದಾರೆ. ಚಿತ್ರವನ್ನು 2023 ಜೂನ್ ತಿಂಗಳಿಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ‘ಆದಿಪುರುಷ್ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ (Prabhas) ರಾಮನ (Rama) ಪಾತ್ರ ಮಾಡುತ್ತಿದ್ದಾರೆ.

ರಾಮಾಯಣದ ಕಥೆ ಆಧಾರಿತ ಚಿತ್ರ
ರಾಮಾಯಣದ ಕಥೆಯನ್ನು ಆಧಾರ ಇಟ್ಟುಕೊಂಡು ಆದಿಪುರುಷ್ ಚಿತ್ರ ಮಾಡಲಾಗಿದೆ. ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯ ಪಾತ್ರವನ್ನು ಕೃತಿ ಸನೋನ್ ಮಾಡಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಏಕೆ ಬಿಡುಗಡೆ ಮುಂದೂಡಿಕೆ?
ಆದಿಪುರುಷ್ ಸಿನಿಮಾವೂ ಪಕ್ಕಾ ಪೌರಾಣಿಕ ಸಿನಿಮಾವಾಗಿದೆ. ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡಲು ಅತ್ಯಾಧುನಿಕ ಗ್ರಾಫಿಕ್ಸ್, ತಂತ್ರಜ್ಞಾನ ಬಳಸಬೇಕಾಗುತ್ತದೆ. ಈ ವಿಚಾರದಲ್ಲಿ ಚಿತ್ರತಂಡ ಎಡವಿದೆ. ಕಳಪೆ ಗ್ರಾಫಿಕ್ಸ್ ಬಳಸಿದ್ದಾರೆ ಎಂಬ ಅಪವಾದ ಪಡೆದಿದೆ. ಅದನ್ನೆಲ್ಲಾ ಸರಿ ಮಾಡುವ ಪ್ರಯತ್ನ ಮಾಡುತ್ತಿರುವುದರಿಂದ ಚಿತ್ರ ತೆರೆಗೆ ಬರುತ್ತಿಲ್ಲ.

ಅಕ್ಟೋಬರ್ 2 ರಂದು ಅದ್ದೂರಿಯಾಗಿ ಅಯೋಧ್ಯೆಯಲ್ಲಿ ‘ಆದಿಪುರುಷ್’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂದು ಚಿತ್ರತಂಡ ಭಾವಿಸಿತ್ತು. ಆದರೆ ಆಗಿದ್ದೇ ಬೇರೆ. ಟೀಸರ್ ನಲ್ಲಿ ಕಳಪೆ ಗ್ರಾಫಿಕ್ಸ್ ಇದೆ ಎಂಬ ಕಾರಣಕ್ಕೆ ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದರು. ಅದರ ಪರಿಣಾಮವಾಗಿ ಚಿತ್ರತಂಡ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ.
‘ಆದಿಪುರುಷ್ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕೃತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ‘ಆದಿಪುರುಷ್’ಚಿತ್ರ ಜೂನ್ 16ರಂದು ರಿಲೀಸ್ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ’ಎಂದು ಓಂ ರಾವತ್ ಟ್ವೀಟ್ ಮಾಡಿದ್ದಾರೆ.

ಚಿತ್ರತಂಡದ ಈ ನಿರ್ಧಾರದಿಂದ ಗ್ರಾಫಿಕ್ಸ್ ದೃಶ್ಯಗಳು ಉತ್ತಮ ಗುಣಮಟ್ಟದಲ್ಲಿ ಮೂಡಿಬರಲಿದೆ ಎಂಬ ಕಾರಣಕ್ಕೆ ಪ್ರಭಾಸ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ, ಇನ್ನೂ ಹಲವು ತಿಂಗಳು ಕಾಯಬೇಕಲ್ಲ ಎಂದು ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಚಿತ್ರಕ್ಕೆ ಭೂಷಣ್ ಕುಮಾರ್ ಮತ್ತು ಕ್ರಿಷನ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.
ಬಿಡುಗಡೆ ಅನುಮಾನ?
ಈಗ ಚಿತ್ರೀಕರಣವಾಗಿರುವ ಸಿನಿಮಾ ಶೇ 50 ರಷ್ಟು ಬದಲಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈಗ ಶೂಟಿಂಗ್ ಆಗಿರುವ ಸಿನಿಮಾ ಅದೇ ರೀತಿ ಬಿಡುಗಡೆ ಆಗುವುದಿಲ್ಲ. ಸಂಪೂರ್ಣ ಬದಲಿಸಿ ಮರು ಚಿತ್ರೀಕರಣ, ಮರು ಗ್ರಾಫಿಕ್ಸ್ ನಂತರ ಬಿಡುಗಡೆ ಆಗಲಿದೆ. ಬಿಡುಗಡೆ ಇನ್ನಷ್ಟು ಮುಂದೆ ಹೋದರು ಅಚ್ಚರಿಯಿಲ್ಲ ಅನ್ನಲಾಗುತ್ತಿದೆ.