30.6 C
Bengaluru
Wednesday, March 15, 2023
spot_img

ಸುಳ್ಳು ಕಥೆಗಳಲ್ಲ… ಒಂಬತ್ತು ಬಗೆಯ ಭಿನ್ನ ಬದುಕು!

ನಿರ್ದೇಶಕರೂ ಸೇರಿದಂತೆ ರಂಗಭೂಮಿ ಒಡನಾಡಿಗಳೇ ಸೇರಿ ರೂಪಿಸಿರುವ ಸಿನಿಮಾ ಇದು. ಮನರಂಜನೆಯೇ ಮೂಲ ಉದ್ದೇಶವಾಗಿದ್ದರೂ ಸಿನಿಮಾ ಮತ್ತು ಡ್ರಾಮಾಗೆ ಸಾಕಷ್ಟು ವ್ಯತ್ಯಾಸಗಳಿವೆ. ನಿರ್ದೇಶಕ ಮಂಜುನಾಥ್ ಅಲ್ಲಲ್ಲಿ ಅದನ್ನು ಮರೆತಿದ್ದಾರೆ ಅನ್ನಿಸುತ್ತದೆ. ಒಂದೇ ಗುಕ್ಕಿನಲ್ಲಿ ಒಂಭತ್ತೂ ರಸಗಳನ್ನೂ ಹೇಳುವ ಅಗತ್ಯವಿರಲಿಲ್ಲ. ಒಂಭತ್ತು ರಸಗಳನ್ನು ವಿಸ್ತ್ರುತವಾಗಿ ವಿವರಿಸುವುದು ನಿರ್ದೇಶಕರ ಕಲ್ಪನೆ ಇರಬಹುದು. ಇದನ್ನವರು ದಾಖಲೆ ಅಂತಲೂ ಪರಿಗಣಿಸಬಹುದು. ಆದರೆ ಸಿನಿಮಾಗೆ ಅದರ ಅಗತ್ಯವಿರಲಿಲ್ಲ. ಒಂದೆರಡು ರಸಗಳನ್ನು ಕಡಿಮೆ ಮಾಡಿ, ಕಾಡುವ ಕತೆಗಳನ್ನಷ್ಟೇ ಜೊತೆಗೂಡಿಸಬಹುದಿತ್ತು.  ಇವೆಲ್ಲೆ ಏನೇ ಆದರೂ ʻಒಂಭತ್ತು ಸುಳ್ಳು ಕಥೆಗಳʼ ಗುಚ್ಚ ಕನ್ನಡದ ಮಟ್ಟಿಗೆ ವಿಶೇಷ ಮತ್ತು ವಿಶಿಷ್ಟ ಪ್ರಯತ್ನ ಅನ್ನೋದು ನಿಜ.

ನಾಲ್ಕು  ದಶಕಗಳ ಹಿಂದೆ ಪುಟ್ಟಣ್ಣನವರು ʻಹಂಗು, ಅಕ್ಕರೆ, ಮುನಿತಾಯಿʼ ಎನ್ನುವ ಮೂರು ಕಥೆಗಳನ್ನು ಒಂದು ಕಡೆ ಸೇರಿಸಿ ಕಥಾಸಂಗಮ ಹೆಸರಿನ ಸಿನಿಮಾ ಮಾಡಿದ್ದರು. ಇತ್ತೀಚೆಗೆ ನಾಲ್ಕಾರು ಕಥೆಗಳನ್ನು ಸೇರಿಸಿ ಒಂದು ಚಿತ್ರ ರೂಪಿಸುವ ಟ್ರೆಂಡ್ ಆರಂಭವಾಗಿದೆ. ರಿಷಬ್ ಶೆಟ್ಟಿ ಕೂಡಾ ಕಥಾ ಸಂಗಮದ ಹೆಸರಿನಲ್ಲಿ ಏಳು ಕಥೆಗಳನ್ನು ಒಟ್ಟು ಸೇರಿಸಿದ್ದರು. ಈಗ ಬದುಕಿನ ಒಂಭತ್ತು ರಸಗಳನ್ನು ಸೇರಿಸಿ ಒಂಭತ್ತು ಭಿನ್ನ ಕಥೆಗಳೊಂದಿಗೆ ತೆರೆಗೆ ಬಂದಿರುವ ಚಿತ್ರ 9 ಸುಳ್ಳು ಕಥೆಗಳು.

ಹುಟ್ಟಿದಾಗಿಂದ ಎದ್ದು ಹೋಗುವವ ವರೆಗೆ ಮನುಷ್ಯ ನಿಂತಲ್ಲಿ ನಿಲ್ಲಲು ಸಾಧ್ಯವಿಲ್ಲ. ಬದುಕಿಗಾಗಿ ನಿರಂತರವಾಗಿ ಓಡುತ್ತಲೇ ಇರಬೇಕು. ಹಾಗೆ ಜೀವನದ ಓಟವನ್ನು ಬಿಂಬಿಸುವ ಕಥೆಯೊಂದು ನಡುನಡುವೆ ಇಣುಕುತ್ತಿರುತ್ತದೆ. ಅದರ ಜೊತೆಗೆ ಇತರ ಎಂಟೂ ಕತೆಗಳು ಒಂದರ ನಂತರ ಒಂದು ತೆರೆದುಕೊಳ್ಳುತ್ತಿರುತ್ತದೆ.  ಶೃಂಗಾರ, ವೀರ ರಸ , ಭೀಭತ್ಸ, ಹಾಸ್ಯ, ಭಯಾನಕ, ರೌದ್ರ ರಸ, ಅದ್ಬುತ , ಶಾಂತ ರಸಗಳ ಪ್ರತೀಕದಂತೆ ಈ ಎಲ್ಲ ಕಿರುಚಿತ್ರಗಳೂ ಬಂದು ಹೋಗುತ್ತವೆ. ಒಂಭತ್ತು ಭಿನ್ನ ಕತೆಗಳೇನೋ ಇವೆ. ಆದರೆ, ಒಂದು ಕತೆಗೂ ಮತ್ತೊಂದು ಕತೆಗೆ ಯಾವ ಲಿಂಕೂ ಇಲ್ಲ. ಎಲ್ಲವೂ ಪ್ರತ್ಯೇಕವಾಗಿ ಬಂದು ಹೋಗುತ್ತವೆ.

ಜೀವನ ಅಂದರೆ ಅಭಿನಯಿಸುವುದಲ್ಲಅನುಭವಿಸುವುದು, ಭಯ ಮತ್ತು ಅಭದ್ರತೆಗಳನ್ನು ಸೃಷ್ಟಿಸಿಕೊಳ್ಳುವುದು ನಾವೇ, ಕಣ್ಣು ಕಣ್ಣು ಒಂದಾಗಿ ಪ್ರೀತಿ ತರಲ್ಲ, ಪಾಪಗಳನ್ನು ತಿರಸ್ಕರಿಸಬೇಕೇ ಹೊರತು ಪಾಪಿಗಳನ್ನಲ್ಲ… ಹೀಗೆ ಪ್ರತೀ ಕತೆಗೂ ಒಂದೊಂದು ತಲೆಬರಹ ನೀಡಿದ್ದಾರೆ. ಸಂಪತ್ ಮೈತ್ರೇಯ ಕಾಣಿಸಿಕೊಂಡಿರುವ ಭಾಗದಲ್ಲಿ ಕರುಣೆಯ ಬಗ್ಗೆ ಹೇಳಿರುವುದು ಮನಸ್ಸಿಗೆ ಹತ್ತಿರವಾಗುತ್ತದೆ. ಇದು ಹೆಚ್ಚೂ ಕಮ್ಮಿ ಕರ್ಮ ಸಿದ್ದಾಂತವನ್ನೂ ಪ್ರತಿನಿಧಿಸಿದಂತಿದೆ. ಯಾರು ಹೇಗಾದರೂ ಬದುಕಲಿ, ನಮ್ಮ ಲೈಫು ನಮ್ಮದು. ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಕ್ಕೂ ನಮಗೂ ಸಂಬಂಧವೇ ಇಲ್ಲ ಅಂತಾ ಬದುಕುವವರನ್ನು ನೋಡಿದ್ದೇವೆ. ಹಾಗೆ ಶುಷ್ಕವಾಗಿದ್ದವನ ಮನಸ್ಸನ್ನು ಘಟನೆಯೊಂದು ಹೇಗೆ ಬದಲಿಸುತ್ತದೆ ಅನ್ನೋ ಕತೆ ಹೆಚ್ಚು ಆಪ್ತವೆನಿಸುತ್ತದೆ. ಆಟೋ ಡ್ರೈವರ್ ಪಾತ್ರದಲ್ಲಿ ಸಂಪತ್ ನಟನೆ ಮನೋಜ್ಞ. ವಿನಾಯಕ್ ಜೋಷಿ ಮತ್ತು ಸುಕೃತಾ ವಾಗ್ಲೆ ಅವರ ಎಪಿಸೋಡು ಚಲಿಸುವ ಆಟೋದಲ್ಲಿದ್ದರೂ ತಟಸ್ಥವಾಯಿತು ಅನ್ನಿಸುತ್ತದೆ. ಆದರೆ, ಕತೆಯ ಕೊನೆಯಲ್ಲಿ ಅದಕ್ಕೆ ಜಸ್ಟಿಫಿಕೇಷನ್ ಕೂಡಾ ಸಿಗುವಂತೆ ಮಾಡಿರುವುದು ನಿರ್ದೇಶಕ ಮಂಜುನಾಥ್ ಮುನಿಯಪ್ಪ ಅವರ ಬುದ್ದಿವಂತಿಕೆ ಅನ್ನಬಹುದು. ಜಯಲಕ್ಷ್ಮೀ ಪಾಟೀಲ್ ಮತ್ತು ಕೃಷ್ಣ ಹೆಬ್ಬಾಲೆ ಅಭಿನಯದ ಕತೆ ಕೂಡಾ ಇಷ್ಟವಾಗುತ್ತದೆ. ಹಾಗಂತ ಇಲ್ಲಿರುವ ಎಲ್ಲ ಕತೆಗಳೂ ಅದ್ಭುತ ಅನ್ನುವಂತಿಲ್ಲ. ಕೆಲವೊಂದು ಕತೆ ಸುಮಾರಾಗಿದೆ ಅನ್ನಿಸಿದರೂ ಪಾತ್ರಧಾರಿಗಳು ಅದ್ಭುತವಾಗಿ ಪರ್ಫಾರ್ಮ್ ಮಾಡಿದ್ದಾರೆ.  ಜಯದೇವ್, ನಂದಗೋಪಾಲ್ ಥರದ ಅದ್ಭುತ ನಟರಿದ್ದರೂ ʻಹಾಸ್ಯʼದ ಕಾನ್ಸೆಪ್ಟು ಅಪಹಾಸ್ಯವಾಗಿದೆ. ಸುಂದರ್ ವೀಣಾ ಓವರ್ ಆಕ್ಟಿಂಗ್ ರೇಜಿಗೆ ಹುಟ್ಟಿಸುತ್ತದೆ. ಕರಿಸುಬ್ಬು ಮತ್ತು ಶ್ರೀನಿವಾಸ ಪ್ರಭು ಪಾಲ್ಗೊಂಡಿರುವ ಭಾಗ ಕೂಡಾ ಮೇಕಿಂಗ್ ಕಾರಣಕ್ಕಾಗಿ ಬೀದಿ ನಾಟಕದ ಫೀಲ್ ಕೊಡುತ್ತದೆ. ಈ ಎರಡು ಎಪಿಸೋಡುಗಳು ಇಡೀ ಸಿನಿಮಾದ ತೂಕವನ್ನು ಕುಗ್ಗಿಸಿರುವುದು ನಿಜ.

ನಿರ್ದೇಶಕರೂ ಸೇರಿದಂತೆ ರಂಗಭೂಮಿ ಒಡನಾಡಿಗಳೇ ಸೇರಿ ರೂಪಿಸಿರುವ ಸಿನಿಮಾ ಇದು. ಮನರಂಜನೆಯೇ ಮೂಲ ಉದ್ದೇಶವಾಗಿದ್ದರೂ ಸಿನಿಮಾ ಮತ್ತು ಡ್ರಾಮಾಗೆ ಸಾಕಷ್ಟು ವ್ಯತ್ಯಾಸಗಳಿವೆ. ನಿರ್ದೇಶಕ ಮಂಜುನಾಥ್ ಅಲ್ಲಲ್ಲಿ ಅದನ್ನು ಮರೆತಿದ್ದಾರೆ ಅನ್ನಿಸುತ್ತದೆ. ಒಂದೇ ಗುಕ್ಕಿನಲ್ಲಿ ಒಂಭತ್ತೂ ರಸಗಳನ್ನೂ ಹೇಳುವ ಅಗತ್ಯವಿರಲಿಲ್ಲ. ಒಂಭತ್ತು ರಸಗಳನ್ನು ವಿಸ್ತ್ರುತವಾಗಿ ವಿವರಿಸುವುದು ನಿರ್ದೇಶಕರ ಕಲ್ಪನೆ ಇರಬಹುದು. ಇದನ್ನವರು ದಾಖಲೆ ಅಂತಲೂ ಪರಿಗಣಿಸಬಹುದು. ಆದರೆ ಸಿನಿಮಾಗೆ ಅದರ ಅಗತ್ಯವಿರಲಿಲ್ಲ. ಒಂದೆರಡು ರಸಗಳನ್ನು ಕಡಿಮೆ ಮಾಡಿ, ಕಾಡುವ ಕತೆಗಳನ್ನಷ್ಟೇ ಜೊತೆಗೂಡಿಸಬಹುದಿತ್ತು.  ಇವೆಲ್ಲೆ ಏನೇ ಆದರೂ ʻಒಂಭತ್ತು ಸುಳ್ಳು ಕಥೆಗಳʼ ಗುಚ್ಚ ಕನ್ನಡದ ಮಟ್ಟಿಗೆ ವಿಶೇಷ ಮತ್ತು ವಿಶಿಷ್ಟ ಪ್ರಯತ್ನ ಅನ್ನೋದು ನಿಜ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles