-ಜಿ. ಅರುಣ್‌ಕುಮಾರ್
ದರ್ಶನ್ ಅಭಿಮಾನಿಗಳು ಮಾತ್ರ ನೋಡಿದರೆ ಕ್ರಾಂತಿಯ ಗೆಲುವು ಸಾಧ್ಯವಿಲ್ಲ. ಡಿ ಬಾಸ್ ಅನುಯಾಯಿಗಳು ಎರಡೆರಡು ಸಲ ಸಿನಿಮಾ ನೋಡಿದರೂ ಹೆಚ್ಚೆಂದರೆ ಒಂದು ವಾರವಷ್ಟೇ ಥೇಟರು ತುಂಬಲಿದೆ. ಮಿಕ್ಕಂತೆ ಕ್ರಾಂತಿ ಬಾಕ್ಸಾಫೀಸಿನಲ್ಲಿ ಗೆಲ್ಲಬೇಕೆಂದರೆ ಮಿಕ್ಕವರೂ ಚಿತ್ರ ವೀಕ್ಷಿಸಬೇಕು. ಸದ್ಯ ದರ್ಶನ್ ಮೇಲೆ ಮಾಧ್ಯಮಗಳೂ ನಿಷೇಧ ಹೇರಿರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವವರಿಗೆ ಮಾತ್ರ ಈ ಚಿತ್ರದ ಕುರಿತ ವಿಚಾರಗಳು ತಲುಪುತ್ತಿವೆ. ಹಿರಿಯ ನಾಗರಿಕರು ಮತ್ತು ಮಹಿಳಾ ಅಭಿಮಾನಿಗಳಿಗೆ ಕ್ರಾಂತಿ ತಲುಪಬೇಕೆಂದರೆ, ಅದು ಮುದ್ರಣ ಮತ್ತು ಎಲೆಕ್ಟಾçನಿಕ್ ಮೀಡಿಯಾಗಳಿಂದ ಮಾತ್ರ ಸಾಧ್ಯ.

ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಕುರಿತಾಗಿ ವಿಪರೀತ ಕುತೂಹಲವಿರುತ್ತವೆ. ಶುರುವಿಗೇ ಒಂದಿಷ್ಟು ಸಿನಿಮಾಗಳು ಗೆದ್ದರೆ, ಇಡೀ ವರ್ಷ ಚಿತ್ರರಂಗದ ಪಾಲಿಗೆ ಲಾಭದಾಯಕವಾಗಿರುತ್ತದೆ ಅನ್ನೋದು ಬಹಳ ಹಿಂದಿನಿಂದಲೂ ಉಳಿದುಕೊಂಡು ಬಂದಿರುವ ನಂಬಿಕೆ. ಅದಕ್ಕೆ ತಕ್ಕಂತೆ ವರ್ಷದ ಕೊನೆಯಲ್ಲಿ ಅಥವಾ ಆರಂಭದಲ್ಲಿ ಬಂದು ಮೈಲಿಗಲ್ಲು ಸೃಷ್ಟಿಸಿದ ಎಷ್ಟೋ ಸಿನಿಮಾಗಳಿವೆ.
2023 ಆರಂಭದಲ್ಲೂ ಅಂಥದ್ದೊಂದು ಹಿಟ್ ಸಿನಿಮಾ ಸಿಗಬಹುದು ಅಂತಾ ಎಲ್ಲರೂ ಬಯಸಿದ್ದರು. ಹೊಸ ವರ್ಷದಲ್ಲಿ ಅದಾಗಲೇ 2 ಶುಕ್ರವಾರ ಕಳೆದುಹೋಗಿದೆ. ಒಂದು ವಾರದಲ್ಲಿ ಏನಿಲ್ಲವೆಂದರೂ ಎಂಟು ಸಿನಿಮಾಗಳು ಬಿಡುಗಡೆಯಾಗಿವೆ. ಇದರಲ್ಲಿ ಒಂದೆರಡು ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದಿರೋದು ಬಿಟ್ಟರೆ ಮಿಕ್ಕ ಯಾವುದೂ ಎದ್ದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಮಿ. ಬ್ಯಾಚುಲರ್ ಇರೋದರಲ್ಲಿ ಬೆಟರ್!
ಇದೊಂಥರಾ ವಿಚಿತ್ರ ಕ್ಯಾರೆಕ್ಟರು. ಆಡೋ ವಯಸ್ಸಿಗೇ ಮದುವೆ ಮಾಡಿಸಿಕೊಳ್ಳುವ ಹುಚ್ಚು. ಎಲ್ಲ ಮಕ್ಕಳೂ ಗಂಟೆ ತಿಂಡಿ ಬೇಕು, ಗೊಂಬೆ ಬೇಕು ಅಂತಾ ಹಠ ಮಾಡಿದರೆ, ಈ ಹುಡುಗ ನಡುರಾತ್ರಿಯಲ್ಲೂ ನಿದ್ರೆಯಿಂದ ಎದ್ದು ‘ನನಗೆ ಮದುವೆ ಮಾಡಿ’ ಅಂತಾ ರಚ್ಚೆ ಹಿಡಿಯುತ್ತಾನೆ. ಒಂಥರಾ ಕೋಟಿಗೊಬ್ಬ ಎನ್ನುವಂತಾ ವ್ಯಕ್ತಿತ್ವದವನು. ಓದು ಮುಗಿಸಿ ಕೆಲಸಕ್ಕೆ ಸೇರಿದ ನಂತರವಷ್ಟೇ ಮದುವೆ ಮಾಡೋದು. ಹೀಗೆಲ್ಲಾ ಕೇಳೋದು ತಪ್ಪು ಅಂತಾ ಅಪ್ಪ ಮನವರಿಕೆ ಮಾಡಿರುತ್ತಾನೆ. ಹೀಗಾಗಿ ಬೂದಿಯೊಳಗಿನ ಕೆಂಡದಂತಿದ್ದ ಮದುವೆ ಹುಚ್ಚು ಬೆಳೆದು ಕೆಲಸಕ್ಕೆ ಸೇರಿದ ಮಾರನೇ ದಿನಕ್ಕೇ ಕೆದರಿಕೊಳ್ಳುತ್ತದೆ. ಆ ಕ್ಷಣದಿಂದಲೇ ಹೆಣ್ಣು ಹುಡುಕುವ ಕೆಲಸಕ್ಕೆ ಚಾಲನೆ ದೊರೆಯುತ್ತದೆ. ಆದರೆ ಅದು ಅಷ್ಟು ಸುಲಭಕ್ಕೆ ನೆರವೇರಲು ತಾನೆ ಹೇಗೆ ಸಾಧ್ಯ? ಹತ್ತಾರು ಕಡೆ ತಡಕಾಡಿದರೂ ಸೂಕ್ತ ವಧು ಲಭ್ಯವಾಗೋದಿಲ್ಲ. ಈ ನಡುವೆ ಒಬ್ಬ ಹೆಣ್ಣುಮಗಳು ಈತನ ಗಂಡಸ್ತನದ ಬಗೆಗೇ ಅನುಮಾನಿಸಿ, ಅದನ್ನು ಪ್ರೂವ್ ಮಾಡಿಕೊಂಡುಬರುವಂತೆ ಟಾಸ್ಕ್ ನೀಡುತ್ತಾಳೆ. ಅಲ್ಲಿ ಶುರುವಾಗುತ್ತೆ ಅಸಲೀ ಆಟ, ನೋಟ, ತುಂಟಾಟ ಎಲ್ಲ.

ಒಬ್ಬ ಗಂಡು ಹೈಕ್ಳು ಹೋಗಿ ಗಂಡಸ್ತನವನ್ನು ಸಾಕ್ಷಿಸಮೇತ ತಂದು ತೋರಿಸೋದೆಂದರೆ ಸುಮ್ಮನೇ ಮಾತಾ? ಈ ಹಾದಿಯಲ್ಲಿ ಭಯಾನಕ ತಮಾಷೆ ಸಂಗತಿಗಳೆಲ್ಲಾ ಜರುಗುತ್ತವೆ. ನೋಡುಗರು ಕೂತಲ್ಲಿ ಕೂರಲಾರದೇ ಎದ್ದೆದ್ದು ಕುಣಿಯುತ್ತಾರೆ. ಹೊಟ್ಟೆ ಹಿಡಿದುಕೊಂಡು ಒರಳಾಡುತ್ತಾರೆ. ತೀರಾ ಅದ್ಭುತ ಅನ್ನಿಸಿಕೊಳ್ಳುವಂತಾ ಎಲಿಮೆಂಟುಗಳಿಲ್ಲದಿದ್ದರೂ ಪಕ್ಕಾ ಮಸಾಲೆ ಸಿನಿಮಾ ಇದಾಗಿರೋದರಿಂದ ಜನ ಒಂದು ಮಟ್ಟಕ್ಕೆ ಮೆಚ್ಚಿಕೊಂಡಿದ್ದಾರೆ
ಇದೇ ವಾರ ಥಗ್ಸ್ ಆಫ್ ರಾಮಘಡ ಹೆಸರಿನ ಚಿತ್ರವೊಂದು ತೆರೆಗೆ ಬಂದಿದೆ. ಈ ಸಿನಿಮಾದಲ್ಲಿ ಕಥೆ, ಚಿತ್ರಕತೆ ಎಲ್ಲವೂ ಇದ್ದರೂ ಅತಿಯಾದ ವೈಲೆನ್ಸ್ ನೋಡುಗರಿಗೆ ಹಿಂಸೆ ನೀಡಿದೆ. ಕಲೆಕ್ಷನ್ ಕೂಡಾ ಇಲ್ಲದೆ ಸೊರಗುತ್ತಿದೆ. ಮಿಸ್ ನಂದಿನಿ ಮತ್ತು ಕಾಕ್‌ಟೈಲ್ ಸಿನಿಮಾಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದರೂ ಥೇಟರುಗಳು ಖಾಲಿ ಹೊಡೆಯುತ್ತಿವೆ. ಇನ್ನು ಟ್ರೇಲರಿನ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಸ್ಪೂಕಿ ಕಾಲೇಜ್ ಚಿತ್ರದಲ್ಲಿ ನೋಡಿಸಿಕೊಂಡು ಹೋಗುವ ಗುಣಗಳೇ ಇಲ್ಲ. ಯಾಕಾದರೂ ಇಂಥಾ ಸಿನಿಮಾ ಬಂತೋ ಅನ್ನುವಂತಾಗಿದೆ.
ಹೀಗೆ 2023 ರ ಆರಂಭವೇ ನೀರಸವಾಗಿ ತೆರೆದುಕೊಂಡಿದೆ. ಸದ್ಯ ಜನವರಿ 12ಕ್ಕೆ ಬರುತ್ತಿರುವ ಆರ್ಕೆಸ್ಟ್ರಾ ಮೈಸೂರು ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದೆ. ಈ ಚಿತ್ರ ದಾಖಲೆ ಸೃಷ್ಟಿಸುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಅಸಲೀಯತ್ತು ಇದೇ ವಾರ ಹೊರಬೀಳಲಿದೆ.
ಕ್ರಾಂತಿಯ ಭಯದಲ್ಲಿ..
ದರ್ಶನ್ ನಟನೆಯ ಕ್ರಾಂತಿ ಚಿತ್ರ ತೆರೆಗೆ ಬರುತ್ತಿರೋದರಿಂದ ಕನ್ನಡದಲ್ಲಿ ಬಿಡುಗಡೆಗೆ ಕಾದಿರುವ ಸಿನಿಮಾಗಳು ಸೈಲೆಂಟಾಗಿ ಸೈಡಲ್ಲಿ ನಿಂತಿವೆ. ಅತಿ ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳಲು ರೆಡಿಯಾಗಿರುವ ಕ್ರಾಂತಿ ಇದೇ 26 ಕ್ಕೆ ತೆರೆಗೆ ಬರಲಿದೆ. ಸದ್ಯ ದರ್ಶನ್ ಮತ್ತು ಪುನೀತ್ ಫ್ಯಾನ್ಸ್ ನಡುವೆ ಸಮರ ಚಾಲನೆಯಲ್ಲಿದೆ. ಕ್ರಾಂತಿಯನ್ನು ನೋಡಬಾರದು ಅಂತಾ ಅಪ್ಪು ಅಭಿಮಾನಿಗಳು ಶಪಥ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳನ್ನು ಹೊರತುಪಡಿಸಿ ಮಿಕ್ಕ ಸಿನಿಮಾ ಅಭಿಮಾನಿಗಳು ಕ್ರಾಂತಿಯ ವಿರುದ್ದ ನಿಂತಿರುವುದರಿಂದ ಈ ಚಿತ್ರ ಏನಾಗಬಹುದು ಅನ್ನೋ ಕುತೂಹಲವೇ ಸದ್ಯ ಇಡೀ ಚಿತ್ರರಂಗದ ಮುಂದಿದೆ.

ದರ್ಶನ್ ಅಭಿಮಾನಿಗಳು ಮಾತ್ರ ನೋಡಿದರೆ ಕ್ರಾಂತಿಯ ಗೆಲುವು ಸಾಧ್ಯವಿಲ್ಲ. ಡಿ ಬಾಸ್ ಅನುಯಾಯಿಗಳು ಎರಡೆರಡು ಸಲ ಸಿನಿಮಾ ನೋಡಿದರೂ ಹೆಚ್ಚೆಂದರೆ ಒಂದು ವಾರವಷ್ಟೇ ಥೇಟರು ತುಂಬಲಿದೆ. ಮಿಕ್ಕಂತೆ ಕ್ರಾಂತಿ ಬಾಕ್ಸಾಫೀಸಿನಲ್ಲಿ ಗೆಲ್ಲಬೇಕೆಂದರೆ ಮಿಕ್ಕವರೂ ಚಿತ್ರ ವೀಕ್ಷಿಸಬೇಕು. ಸದ್ಯ ದರ್ಶನ್ ಮೇಲೆ ಮಾಧ್ಯಮಗಳೂ ನಿಷೇಧ ಹೇರಿರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವವರಿಗೆ ಮಾತ್ರ ಈ ಚಿತ್ರದ ಕುರಿತ ವಿಚಾರಗಳು ತಲುಪುತ್ತಿವೆ. ಹಿರಿಯ ನಾಗರಿಕರು ಮತ್ತು ಮಹಿಳಾ ಅಭಿಮಾನಿಗಳಿಗೆ ಕ್ರಾಂತಿ ತಲುಪಬೇಕೆಂದರೆ, ಅದು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮೀಡಿಯಾಗಳಿಂದ ಮಾತ್ರ ಸಾಧ್ಯ. ಸದ್ಯದ ಮಟ್ಟಿಗೆ ಈ ಎರಡೂ ಮಾಧ್ಯಮಗಳು ದರ್ಶನ್ ಮತ್ತು ಅವರ ಸಿನಿಮಾದ ಕುರಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿಲ್ಲ. ಹೀಗಾಗಿ ಕ್ರಾಂತಿ ಎಷ್ಟರ ಮಟ್ಟಿಗೆ ನಿರ್ಮಾಪಕರಿಗೆ ಲಾಭ ತಂದುಕೊಡುತ್ತದೆ ಅನ್ನೋದು ಗೊತ್ತಾಗುತ್ತಿಲ್ಲ.
ಒಟ್ಟಿನಲ್ಲಿ ವರ್ಷದ ಆರಂಭವೆನ್ನುವುದು ಹೇಳಿಕೊಳ್ಳುವಂತಾ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿಲ್ಲ ಅನ್ನೋದಷ್ಟೇ ಸತ್ಯ.