-ಶಶಿಧರ ಹಾಲಾಡಿ
ಬಿಸಿಲೆ ಘಾಟಿಯುದ್ದಕ್ಕೂ ಕಾಡು ದಟ್ಟವಾಗಿದೆ, ಸಾಕಷ್ಟು ಮೂಲ ಸ್ವರೂಪದಲ್ಲಿದೆ. ಈ ಕಾಡುದಾರಿಯ ನಡುವೆ, ದಟ್ಟ ಅರಣ್ಯದ ಹೃದಯದಲ್ಲಿ `ಬಿಸಿಲೆ’ ಎಂಬ ಪುಟ್ಟ ಹಳ್ಳಿಯಿದೆ. ಅಲ್ಲಿ ಗದ್ದೆ ಬೇಸಾಯವುಂಟು, ಹತ್ತೆಂಟು ಮನೆಗಳುಂಟು. ರಸ್ತೆ ಬದಿಯಲ್ಲಿ ಅಂಗಡಿಗಳು, ಚಾ ದುಕಾನುಗಳು ಈಚೆಗೆ ತಲೆ ಎತ್ತಿವೆ. ಅತ್ತ ವಣಗೂರಿನಲ್ಲಿ ನಾಲ್ಕಾರು ಪುಟಾಣಿ ಹೊಟೇಲ್‌ಗಳು, ಪುಟಾಣಿ ಅಂಗಡಿಗಳಿವೆ. ವಣಗೂರಿನ ಒಂದು ಪುಟ್ಟ ಹೊಟೇಲ್‌ನಲ್ಲಿ ನಾವು ಊಟ ಮಾಡಿದೆವು. ಸರಳ ಪುಟ್ಟ ಕಟ್ಟಡ, ಅದಕ್ಕಿಂತ ಸರಳ ಎನಿಸುವ ಊಟ. ಸುತ್ತಲಿನ ಜಗತ್ತಿಗಿಂತ ಕನಿಷ್ಠ ಮೂವತ್ತು ವರ್ಷ ಹಿಂದಿನ ವಾತಾವರಣವನ್ನು ಹೊಕ್ಕ ಅನುಭವ. ಜನರೂ ಸರಳತೆಯ ಮೂರ್ತಿಗಳು, ಮಲೆನಾಡಿನ ಕುಡಿಗಳು. ವಣಗೂರಿನಿಂದ ಬಿಸಿಲೆಗೆ ೧೩ ಕಿ.ಮೀ., ಬಿಸಿಲೆಯಿಂದ ಸುಬ್ರಹ್ಮಣ್ಯಕ್ಕೆ ೨೬ ಕಿ.ಮೀ. ಈ ದಾರಿಯುದ್ದಕ್ಕೂ ನಿರಂತರವಾಗಿ ಕಾಣುವುದು ಕಾಡಿನ ಕಲರವ, ಬೆಟ್ಟ, ಗುಡ್ಡ, ಪರ್ವತಗಳ ಮೆರವಣಿಗೆ.
ಆ ಪ್ರಪಾತದ ಅಂಚಿನಲ್ಲಿ ನಿಂತು ನೋಡಿದರೆ, ಎತ್ತೆತ್ತಲೂ ಹಸಿರು, ಪರ್ವತಗಳ ಸಾಲು, ಮೇಲೆ ನೀಲಾಗಸ, ಬೀಸಿ ಬರುವ ತಂಗಾಳಿ. ಆ ತಂಗಾಳಿಯಲ್ಲೂ ಹಸಿರಿನ ಸುರಂಗ. ನಾವು ನಿಂತಿರುವುದು ಬಿಸಿಲೆ ಘಾಟ್ ವೀಕ್ಷಣಾ ಗೋಪುರದಲ್ಲಿ. ಕಣ್ಣು ಹಾಯಿಸಿದಷ್ಟು ದೂರವೂ ಅಲ್ಲಿ ಪರ್ವತ ಭಿತ್ತಿಗಳು, ಆ ಭಿತ್ತಿಗಳ ಮೇಲೆ ದಟ್ಟವಾಗಿ ಬೆಳೆದ ಕಾಡು.

ಬಿಸಿಲೆ ಘಾಟ್ ಹೆಸರನ್ನು ನಾನು ಮೊದಲು ಕೇಳಿದ್ದು ೧೯೭೯-೮೦ರ ಸಮಯದಲ್ಲಿ. ಅಲ್ಲಿನ ದಟ್ಟ ಕಾಡಿನ ನಡುವೆ, ಏರಿಳಿವ ಪರ್ವತ ಸಾಲುಗಳ ನಡುವೆ, ನೂರಿನ್ನೂರು ವರ್ಷಗಳ ಹಿಂದೆ ನಿರ್ಮಾಣಗೊಂಡ ಒಂದು ಘಾಟಿ ರಸ್ತೆಯಿದೆ, ಅದನ್ನು ಬಳಸುವವರು ಕಡಿಮೆಯಾಗುತ್ತಾ ಬಂದು, ಅಲ್ಲೆಲ್ಲಾ ಕಾಡು ಬೆಳೆದುಕೊಂಡಿದೆ, ಅಲ್ಲಿನ ಕಣಿವೆಗಳಿಗೆ ಅಡ್ಡಲಾಗಿ ಹರಿಯುವ ಅಡ್ಡಹೊಳೆ' ದಾಟಲು ನಿರ್ಮಿಸಿದ ಸೇತುವೆಯು ಶಿಥಿಲವಾಗಿದೆ. ಎಂದೆಲ್ಲಾ ವಿವರಗಳನ್ನು ಸಂಶೋಧಿಸಿ, ಚಾರಣ ನಡೆಸಿ, ಅಲ್ಲಿನ ಸ್ಥಿತಿಗತಿಗಳನ್ನು ಕಂಡು, ಲೇಖನ ಬರೆದವರು ಮಂಗಳೂರಿನ ಜಿ.ಎನ್. ಅಶೋಕವರ್ಧನ. ಅವರೇ ಕಟ್ಟಿದ
ಆರೋಹಣ-ಸಾಹಸಿಗಳು’ ತಂಡವನ್ನು ಬಿಸಿಲೆ ಕಾಡಿನ ಗರ್ಭದಲ್ಲಿ ಹಲವು ಬಾರಿ ನಡೆದಾಡಿಸಿದವರು. ಆಗೊಮ್ಮೆ ಈಗೊಮ್ಮೆ ಈ ತಂಡವು ಬಿಸಿಲೆ ಘಾಟ್‌ನ ಆ ಪುರಾತನ ದಾರಿಯಲ್ಲಿ ಬೈಕ್‌ಗಳನ್ನು, ಸ್ಕೂಟರುಗಳನ್ನು ಓಡಿಸಿದ್ದೂ ಉಂಟು. ಸುಬ್ರಹ್ಮಣ್ಯದ ಕುಳ್ಕುಂದದಿAದ ಕಾಡಿನೊಳಗೆ ಸಾಗುವ ಬಿಸಿಲೆ ಘಾಟ್ ದಾರಿಯು ಬೂದಿ ಚೌಡಿ ಎಂಬ ಸ್ಥಳದ ಮೂಲಕ, ದಟ್ಟ ಅರಣ್ಯದಲ್ಲೇ ಸಾಗುತ್ತದೆ. ತೀರಾ ದುಸ್ಥಿತಿಯಲ್ಲಿದ್ದ ಆ ದಾರಿಯಲ್ಲಿ ಬೈಕ್, ಸ್ಕೂಟರ್ ಮತ್ತು ಒಂದು ಜೀಪನ್ನು ಸಹ ಬಹು ಸಾಹಸದಿಂದ ಓಡಿಸಿ, ಬಿಸಿಲೆ ಹಳ್ಳಿಯ ಮೂಲಕ ವಣಗೂರು ತಲುಪಿ, ಅಲ್ಲಿಂದ ಸಕಲೇಶಪುರದ ಮೂಲಕ ಶಿರಾಡಿ ಘಾಟಿಯಿಂದಾಗಿ ಮಂಗಳೂರಿಗೆ ವಾಪಸಾಗಿದ್ದರು.

ಆ ಸಾಹಸದ ವಿವರಗಳನ್ನೊಳಗೊಂಡ ಲೇಖನವನ್ನೂ ಬರೆದಿದ್ದ ಜಿ.ಎನ್. ಅಶೋಕವರ್ಧನರು, ಆ ಘಾಟಿ ದಾರಿಯು ಸಕಲೇಶಪುರ ಸನಿಹದ ಮಂಜರಾಬಾದ್ ಕೋಟೆಯಿಂದ ಸುಬ್ರಹ್ಮಣ್ಯಕ್ಕೆ ಸಂಪರ್ಕ ನೀಡುತ್ತಿದ್ದು, ಮಂಜರಾಬಾದ್‌ನಲ್ಲಿ ಆಡಳಿತ ನಡೆಸುತ್ತಿದ್ದ ರಾಜವಂಶದವರಿಗಾಗಿ, ಅವರ ಆರಾಧ್ಯ ದೈವವಿದ್ದ ಸುಬ್ರಹ್ಮಣ್ಯದ ದೇಗುಲಕ್ಕೆ ಸಾಗಲು, ಬ್ರಿಟಿಷ್ ಇಂಜಿನಿಯರ್ ಒಬ್ಬನು ನಿರ್ಮಿಸಿದ ದಾರಿ ಅದೆಂದೂ, ಆ ದಾರಿಯಲ್ಲಿ ಕೆಲವು ಕಡೆ ಬ್ರಿಟಿಷರ ಕಾಲದ ಕಬ್ಬಿಣದ ತೊಲೆಗಳನ್ನು ಉಪಯೋಗಿಸಿ ನಿರ್ಮಿಸಿದ ಕಾಲ್ಸೇತುವೆಗಳು ಇದ್ದವೆಂದೂ ಬರೆದಿದ್ದಾರೆ.
ಇವೆಲ್ಲಾ ೧೯೭೦-೮೦ರ ದಶಕದ ಮಾತು. (ಈಚಿನ ಎರಡು ಮೂರು ದಶಕಗಳಲ್ಲಿ, ಅಶೋಕವರ್ಧನರು ಆ ಕಾಡಿನ ಗರ್ಭದಲ್ಲೇ ಪ್ರಕೃತಿಗೆ ಹತ್ತಿರವಾದ ಅಶೋಕವನ' ಎಂಬ ತಾವನ್ನು ರೂಪಿಸಿ,
ಕಪ್ಪೆಗೂಡ’ನ್ನು ಕಟ್ಟಿಕೊಂಡು, ನಿಸರ್ಗಪ್ರೇಮ ಮೆರೆದವರು.) ನಂತರದ ವರ್ಷಗಳಲ್ಲಿ ಈ ಅಪರೂಪದ ಕಾಡು ದಾರಿಯನ್ನು ಸರ್ಕಾರವು ತುಸುತುಸುವೇ ಸರಿಪಡಿಸತೊಡಗಿತು. ಬಿಸಿಲೆ ಜನರಿಗೆ ತೆರೆದುಕೊಂಡಿತು.
ಆ ಘಾಟ್‌ನ ಸುಂದರ ದೃಶ್ಯಗಳು ಇತ್ತೀಚೆಗೆ ಜನಸಾಮಾನ್ಯರಿಗೆ ಹೆಚ್ಚು ಪರಿಚಿತಗೊಂಡದ್ದು, ಬಿಸಿಲೆ ಹಳ್ಳಿಯ ಬಳಿ ವೀಕ್ಷಣಾ ಗೋಪುರ' ನಿರ್ಮಾಣಗೊಂಡ ನಂತರ. ಕರ್ನಾಟಕ ಅರಣ್ಯ ಇಲಾಖೆಯವರು ನಿರ್ಮಿಸಿದ, ಈ ವೀಕ್ಷಣಾ ಗೋಪುರದಿಂದ ಕಾಣಿಸುವ ಸಹ್ಯಾದ್ರಿಯ ದೃಶ್ಯ ಬಹು ಸುಂದರ. ಮುಖ್ಯ ರಸ್ತೆಯಿಂದ ಕೆಲವೇ ಅಡಿಗಳಷ್ಟು ಒಳಭಾಗದಲ್ಲಿ, ಪ್ರಪಾತದ ಅಂಚಿನಲ್ಲಿರುವ ಈ ಸಿಮೆಂಟಿನ ನಿರ್ಮಿತಿಯ ಮೇಲೆ ನಿಂತರೆ, ಪ್ರಪಾತದೊಳಗೇ ಪಯಣಿಸಿದಂತಾಗುತ್ತದೆ. ಅಲ್ಲಿಂದ ಕಾಣುವ ನೋಟವಾದರೂ ಅದೆಂತಹದ್ದು. ಮೊದಲಿಗೆ ಕಣ್ಣುಗಳನ್ನು ತುಂಬುವ ಹಸಿರಿನ ಸಿರಿ-ಗುಂಗುರು ಗುಂಗುರಾಗಿ ಬೆಳೆದ ಕಾಡು, ಎಲ್ಲೆಲ್ಲೂ, ಸುತ್ತಲೂ ಹರಡಿದ್ದು, ಕಣ್ಣಿನ ತುಂಬಾ ಹಸಿರನ್ನೇ ತುಂಬಿಬಿಡುತ್ತದೆ. ಉದ್ದಾನುದ್ದಕ್ಕೂ ಹರಡಿದ ಆ ವನರಾಶಿಯು ನಮ್ಮ ಮೈಮನಗಳನ್ನೇ ಹಸಿರುಮಯವಾಗಿಸುವ ಪರಿ ಮಾತ್ರ ಅನೂಹ್ಯ, ಅದ್ಭುತ. ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್ ಕಡಲಿನಲಿ ಹಸುರ್ಗಟ್ಟಿತೊ ಕವಿಯಾತ್ಮಂ ಹಸುರ್ ನೆತ್ತರ್ ಒಡಲಿನಲಿ -ಕುವೆಂಪು. ಪ್ರಪಾತದ ತೀರಾ ಕೆಳಗೆ, ದಟ್ಟಕಾಡಿನ ನಡುವೆ ಒಂದು ನದಿ ಹರಿಯುವುದು ಮೊದಲಿಗೆ ಕೇಳಿಸುತ್ತದೆ, ಆ ಮೆಲು ನಿನಾದವನ್ನು ಅನುಸರಿಸಿ ಕಣ್ಣು ಹಾಯಿಸಿದಾಗ,
ಕಾಣುತ್ತದೆ’. ದಟ್ಟ ಕಾಡಿನ ನಡುವೆ ಸಾಗುವ ಬೆಳ್ಳಿಯ ಗೆರೆಯಂತಿದೆ, ಅಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿ. ವಿವಿಧ ವರ್ಣಛಾಯೆಗಳ ಹಸಿರನ್ನು ಹೊದ್ದ ಮರಗಳಿಂದ ತುಂಬಿರುವ ಆ ದಟ್ಟಕಾಡು, ಅಲ್ಲಿ ಹರಿಯುವ ನದಿಯನ್ನು ದಾಟಿ, ಕಣಿವೆಯನ್ನು ಏರುತ್ತಾ ಹೋಗುತ್ತದೆ. ಅಲ್ಲೊಂದು ಮಹಾನ್ ಪರ್ವತಭಿತ್ತಿ ಮೇಲೇರಿ ಸಾಗಿದೆ, ಕರ್ನಾಟಕದಲ್ಲೇ ಅತಿ ಎತ್ತರದ ಪರ್ವತ ಭಿತ್ತಿಗಳಲ್ಲೊಂದು ಅದು. ಮೇಲೇರುತ್ತಾ ಸಾಗುವ ಆ ನಿಬಿಡಾರಾಣ್ಯಭರಿತ ಪರ್ವತ ಭಿತ್ತಿಯು, ತುದಿ ಮುಟ್ಟುವುದು ಕುಮಾರಪರ್ವತ ಅಥವಾ ಪುಷ್ಪಗಿರಿಯ ನೆತ್ತಿಯಲ್ಲಿ. (ಪುಷ್ಪಗಿರಿಯ ಎತ್ತರ ೧೭೧೨ ಮೀಟರ್, ಬಿಸಿಲೆ ಎತ್ತರ ಸುಮಾರು ೮೦೦ ಮೀಟರ್). ಆ ವಿಶಾಲ ಅರಣ್ಯ, ಏರಿ ಹೋಗಿರುವ ಪರ್ವತ, ಆ ಕಣಿವೆ, ಆಳದಲ್ಲಿ ಹರಿಯುತ್ತಿರುವ ನದಿ ಈ ಎಲ್ಲದರ ನೋಟ ನೋಡುಗರ ಮೇಲೆ ಮಾಡುವ ಮೋಡಿ ಅನಿರ್ವಚನೀಯ.
ಆ ವೀಕ್ಷಣಾ ಗೋಪುರದ ನೇರ ಎದುರಿನಲ್ಲಿ, ತಲೆ ಎತ್ತಿ ನೋಡಬೇಕಾದಷ್ಟು ಎತ್ತರದಲ್ಲಿ ಕಾಣಿಸುವ ಕುಮಾರ ಪರ್ವತ, ಪುಷ್ಪಗಿರಿ, ಇನ್ನೂ ಅದೆಷ್ಟೋ ಪರ್ವತ ಶಿಖರಗಳ ನೋಟ ಒಂದೆಡೆಯಾದರೆ, ಬಲಭಾಗದಲ್ಲಿ ಸಾಗಿ ಹೋಗಿರುವ ದೂರ ದಿಗಂತಕ್ಕೆ ಅಂಟಿಕೊAಡಿರುವ ಹತ್ತಾರು ಪರ್ವತ ಶ್ರೇಣಿಗಳ ನೋಟ ಇನ್ನೊಂದೆಡೆ. ಕುಮಾರಪರ್ವತದ ಚಾರಣದಾರಿಯಲ್ಲಿ ಸುಮಾರು ಅರ್ಧದಷ್ಟು ಎತ್ತರದಲ್ಲಿರುವ ಗಿರಿಗದ್ದೆ ಎಂಬ ವಸತಿಯು, ಪುಟಾಣಿ ನಸುಬಿಳಿ ಚುಕ್ಕೆಯಂತೆ ಕಂಡು ವಿಸ್ಮಯವಾಯಿತು. ಅಷ್ಟು ಎತ್ತರದಲ್ಲಿ ಆ ಒಂದು ಕುಟುಂಬ ಅದೆಷ್ಟು ಪುರಾತನ ಕಾಲದಿಂದ ಅಲ್ಲಿ ಕೃಷಿ ಮಾಡಿಕೊಂಡು ವಾಸಿಸುತ್ತಿದೆಯಲ್ಲಾ ಎಂಬ ಅಚ್ಚರಿ.

ಈಗಲೂ ಅವರು ಅಲ್ಲಿದ್ದುಕೊಂಡು, ಕುಮಾರ ಪರ್ವತಕ್ಕೆ ಚಾರಣ ನಡೆಸುವವರಿಗೆ ಊಟ ನೀಡುತ್ತಾ, ರಾತ್ರಿ ತಂಗಲು ತಾವು ನೀಡುತ್ತಾರೆ. ಅಚ್ಚರಿ ಏಕೆಂದರೆ ೧೯೮೨-೮೪ರ ಸಮಯದಲ್ಲಿ ನಾನು ಕುಮಾರ ಪರ್ವತಕ್ಕೆ ಎರಡು ಬಾರಿ ಚಾರಣ ಮಾಡಿದ್ದಾಗ, ಗಿರಿಗದ್ದೆಯ ಇದೇ ಭಟ್ಟರ ಮನೆಯ ಕೊಟ್ಟಿಗೆಯಲ್ಲಿ ರಾತ್ರಿ ಕಳೆದಿದ್ದೆವು, ಭಟ್ಟರ ಜತೆ ಕುಳಿತು ಇಸ್ಪೀಟು ಆಡಿದ್ದೆವು, ಅವರು ಮಾಡಿ ಹಾಕಿದ್ದ ಗಂಜಿಯೂಟ ಮಾಡಿದ್ದೆವು, ಅವರು ನೀಡಿದ್ದ ಮಜ್ಜಿಗೆ ಕುಡಿದಿದ್ದೆವು. ಇಂದಿಗೂ ಆ ಸೇವೆ ಮುಂದುವರಿಸಿರುವ ಆ ಕುಟುಂಬದ ಆಶಯ ಅದೆಷ್ಟು ಉನ್ನತ.
ಬಿಸಿಲೆ ಘಾಟಿಯ ಪ್ರವರ ಬರೆಯುತ್ತಾ ಕುಳಿತರೆ, ಸಾಕಷ್ಟು ವಿವರಗಳಿವೆ, ಜತೆಗೆ ನನ್ನ ಅರಿವಿನ ವ್ಯಾಪ್ತಿ ಮೀರಿದ ಬೇಕಷ್ಟು ಕಥನಗಳೂ ಅಲ್ಲಿ ಅಡಗಿವೆ. ೨೧ನೆಯ ಶತಮಾನದ ಮೊದಲನೆಯ ದಶಕದ ಹೊತ್ತಿಗೆ, ಆ ಪುರಾತನ ರಸ್ತೆಯ ಮರುನಿರ್ಮಾಣಕ್ಕೆ ಸರ್ಕಾರದ ಇಲಾಖೆಗಳು, ರಾಜಕಾರಣಿಗಳು ಆಸಕ್ತಿ ವಹಿಸಿದರು. ಯೋಜನೆಗಳು, ಕಾಮಗಾರಿಗಳು ಜಾರಿ'ಗೆ ಬಂದವು. ಕೆಲವೆಡೆ ಟಾರು ರಸ್ತೆ, ಈಚೆಗೆ ಕೆಲವೆಡೆ ಸಿಮೆಂಟು ರಸ್ತೆ ನಿರ್ಮಾಣವಾಯಿತು. ಬಿಸಿಲೆ ವೀಕ್ಷಣಾ ಗೋಪುರ, ಹತ್ತಿರದಲ್ಲೇ ವೀಕ್ಷಣಾ ಕಟ್ಟೆ, ಬೂದಿ ಚೌಡಿಯಲ್ಲಿ ಅರಣ್ಯ ಇಲಾಖೆಯ
ಡಾರ್ಮಿಟರಿ’ (ಇದೇಕೋ?) ಮೊದಲಾದ ಕಾಮಗಾರಿಗಳು ತಲೆ ಎತ್ತಿದವು. ೧೯೮೦ರ ತನಕ ಕೇವಲ ನಾಲ್ಕಾರು ಕಲ್ಲುಗಳಿಗೆ ಸೀಮಿತವಾಗಿದ್ದ ಬೂದಿಚೌಡಿ ದೇವತೆಯು, ದೇಗುಲದೊಳಗೆ ಸೇರಿಕೊಂಡಳು. ಅಲ್ಲಿಗೆ ಭಕ್ತರು ಭೇಟಿ ಕೊಟ್ಟು, ರಕ್ಷಿತಾರಣ್ಯದಲ್ಲೇ ಅಡುಗೆ ಕೆಲಸ ಮಾಡಿ, ಆ ಪವಿತ್ರ ಕಾಡಿಗೆ ಬೇಕಿಲ್ಲದ, ಅಗತ್ಯವಿಲ್ಲದ ಚಟುವಟಿಕೆಗಳಿಗೆ ನಾಂದಿ ಆಡಿದರು. ೨೦೨೦ರ ಸಮಯಕ್ಕೆ ಬಿಸಿಲೆ ಘಾಟಿಯ ರಸ್ತೆ ಹೆಚ್ಚು ಕಡಿಮೆ ಮೆಟಲ್' ಆಯಿತು. ೨೦೨೧ರಲ್ಲಿ ಕೊನೆಯ ಕಂತಿನಲ್ಲಿ, ಮೂರು ಕಿ.ಮೀ. ಸಿಮೆಂಟ್ ರಸ್ತೆಯೂ ನಿರ್ಮಾಣಗೊಂಡಿತು. ಬೆಂಗಳೂರಿನಿAದ ಈ ಘಾಟ್ ದಾರಿಯಲ್ಲಿ ಸುಬ್ರಹ್ಮಣ್ಯಕ್ಕೆ ಬಸ್ ಇದೆ. ಆದರೆ ಈ ದಾರಿಯಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ ಕೇವಲ ನಾಲ್ಕಾರು. ಈ ರಸ್ತೆಯ ವಿಶೇಷತೆ ಎಂದರೆ, ಹಲವು ಕಡೆ ಅಗಲ ಕಿರಿದಾಗಿದ್ದರೂ, ಎಲ್ಲೂ ವಿಪರೀತ ಎನಿಸುವ ಏರು ರಸ್ತೆ, ಚಡಾವು ಇಲ್ಲ, ತಿರುವುಗಳು ಕಡಿಮೆ. ಕೇವಲ ಐದು ಹೇರ್‌ಪಿನ್ ತಿರುವು, ನಿಧಾನವಾಗಿ ಇಳಿಯುವ ರಸ್ತೆ, ಹೆಚ್ಚು ಪ್ರಪಾತದ ಅಂಚಿಗೆ ಸಾಗದು. ಕೆಳಗಿನಿಂದ ಏರಿ ಬರುವವರಿಗೆ ಹದವಾದ ಏರುದಾರಿ.

ಇದಕ್ಕೆ ಆ ರಸ್ತೆಯನ್ನು ಮೊದಲು ವಿನ್ಯಾಸಗೊಳಿಸಿ, ನಿರ್ಮಿಸಿದ ಬ್ರಿಟಿಷ್ ತಜ್ಞರ ಜಾಣ್ಮೆಯೇ ಕಾರಣ ಎನ್ನಲಾಗಿದೆ. ಹಾಗೆ ನೋಡಹೋದರೆ, ಚಾರ್ಮಾಡಿ ಘಾಟಿಯುದ್ದಕ್ಕೂ ಕಾಣಸಿಗುವಂತಹ ಸುಂದರ ಭೂ ದೃಶ್ಯಗಳು ಇಲ್ಲಿ ಹೆಚ್ಚು ಕಾಣೆವು. ಬಿಸಿಲೆ ವ್ಯೂಪಾಯಿಂಟ್‌ನಲ್ಲಿ ಕಾಣಸಿಗುವ ಸುಂದರ ದೃಶ್ಯವನ್ನು ಹೊರತುಪಡಿಸಿದರೆ, ಅಲ್ಲಲ್ಲಿ ನಾಲ್ಕಾರು ಕಡೆ ಮಾತ್ರ ಕಾಡಿನ ಮರಗಳ ಸಂದಿಯಲ್ಲಿ, ಪ್ರಪಾತದ ಅಂಚಿನಲ್ಲಿ ಬೆಟ್ಟ, ಪರ್ವತಗಳು ಕಂಡಾವು ಅಷ್ಟೆ. ಇಲ್ಲಿ ಕಾಡು ನಿಜಕ್ಕೂ ದಟ್ಟವಾಗಿದೆ, ಸಾಕಷ್ಟು ಮೂಲ ಸ್ವರೂಪದಲ್ಲಿದೆ. ಈ ಕಾಡುದಾರಿಯ ನಡುವೆ, ದಟ್ಟ ಅರಣ್ಯದ ಹೃದಯದಲ್ಲಿ
ಬಿಸಿಲೆ’ ಎಂಬ ಪುಟ್ಟ ಹಳ್ಳಿಯಿದೆ. ಅಲ್ಲಿ ಗದ್ದೆ ಬೇಸಾಯವುಂಟು, ಹತ್ತೆಂಟು ಮನೆಗಳುಂಟು. ರಸ್ತೆ ಬದಿಯಲ್ಲಿ ಅಂಗಡಿಗಳು, ಚಾ ದುಕಾನುಗಳು ಈಚೆಗೆ ತಲೆ ಎತ್ತಿವೆ. ಅತ್ತ ವಣಗೂರಿನಲ್ಲಿ ನಾಲ್ಕಾರು ಪುಟಾಣಿ ಹೊಟೇಲ್‌ಗಳು, ಪುಟಾಣಿ ಅಂಗಡಿಗಳಿವೆ. ವಣಗೂರಿನ ಒಂದು ಪುಟ್ಟ ಹೊಟೇಲ್‌ನಲ್ಲಿ ನಾವು ಊಟ ಮಾಡಿದೆವು. ಸರಳ ಪುಟ್ಟ ಕಟ್ಟಡ, ಅದಕ್ಕಿಂತ ಸರಳ ಎನಿಸುವ ಊಟ. ಸುತ್ತಲಿನ ಜಗತ್ತಿಗಿಂತ ಕನಿಷ್ಠ ಮೂವತ್ತು ವರ್ಷ ಹಿಂದಿನ ವಾತಾವರಣವನ್ನು ಹೊಕ್ಕ ಅನುಭವ. ಜನರೂ ಸರಳತೆಯ ಮೂರ್ತಿಗಳು, ಮಲೆನಾಡಿನ ಕುಡಿಗಳು. ವಣಗೂರಿನಿಂದ ಬಿಸಿಲೆಗೆ ೧೩ ಕಿ.ಮೀ., ಬಿಸಿಲೆಯಿಂದ ಸುಬ್ರಹ್ಮಣ್ಯಕ್ಕೆ ೨೬ ಕಿ.ಮೀ. ಈ ದಾರಿಯುದ್ದಕ್ಕೂ ನಿರಂತರವಾಗಿ ಕಾಣುವುದು ಕಾಡಿನ ಕಲರವ, ಬೆಟ್ಟ, ಗುಡ್ಡ, ಪರ್ವತಗಳ ಮೆರವಣಿಗೆ.
ಹಾಗಂತ, ಬಿಸಿಲೆ ಘಾಟಿಯ ಪ್ರದೇಶ, ವಣಗೂರು ಇವೆಲ್ಲಾ ನಮ್ಮ ನಾಡಿನವರಿಗೆ ಇಂದಿನ ಇಂಟರ್‌ನೆಟ್ ಯುಗದಲ್ಲಿ ತೀರಾ ಅಪರಿಚಿತವಲ್ಲ. ಕೆಲವು ಸಿನಿಮಾಗಳು ಈ ಸರಹದ್ದಿನಲ್ಲಿ ಚಿತ್ರಣಗೊಂಡು, ಈ ಕಾಡು ಪ್ರದೇಶಕ್ಕೆ ಅಗತ್ಯವಿಲ್ಲದ ಪ್ರಚಾರವನ್ನು ಕೊಟ್ಟಿವೆ. ಬಿಸಿಲೆ ಹಳ್ಳಿಯ ಬಳಿ ಇರುವ ರಿಜ್ ಪಾಯಿಂಟ್'ಗೆ ಸಾಕಷ್ಟು ಪ್ರಚಾರ ದೊರೆತಿದೆ. ಅಲ್ಲಲ್ಲಿ ಒಂದೊAದು ಹೋಂಸ್ಟೇಗಳು ರೂಪುಗೊಂಡು, ಬೋರ್ಡ್ ತಗುಲಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸಿ ವಾಹನಗಳು ಈ ರಸ್ತೆಯಲ್ಲಿ ಹರಿದು ಬಂದು, ಇನ್ನಷ್ಟು ಹೋಂಸ್ಟೇಗಳಿಗೆ ಅವಕಾಶ ನೀಡುವ ವಾತಾವರಣಕ್ಕೆ ಈಗಾಗಲೇ ಬುನಾದಿ ಬಿದ್ದಾಗಿದೆ.
ಪಟ್ಲ ಬೆಟ್ಟ’ ಎಂಬ ಬೋಳು ಗುಡ್ಡದ ತುದಿಗೆ ಬಾಡಿಗೆ ಜೀಪುಗಳ ಮೆರವಣಿಗೆ ಆರಂಭವಾಗಿದೆ, ನಗರದವರು ಅಲ್ಲಿ ತಂಗಾಳಿಯನ್ನು, ಮೋಡವನ್ನು ನೋಡಲು ಹೋಗುತ್ತಿದ್ದಾರೆ. ಬಿಸಿಲೆ ಮೂಲಕ ಸುಬ್ರಹ್ಮಣ್ಯಕ್ಕೆ ಸಾಗುವ ರಸ್ತೆಗೆ ಹೆಚ್ಚು ಪ್ರಚಾರ ನೀಡಬಾರದು, ಅದರಿಂದಾಗಿ ನೋಡಲು ಬರುವವರು ಇಲ್ಲಿನ ಪರಿಸರ ಹಾಳುಗೆಡವುತ್ತಾರೆ, ಪ್ಲಾಸ್ಟಿಕ್ ಎಸೆಯುತ್ತಾರೆ ಎಂದು ಕೆಲವು ಪರಿಸರ ಪ್ರೇಮಿಗಳು ಹೇಳಿದ್ದುಂಟು.
ಆದರೆ ಈ ಕಾಡಿನ ಅಂದವನ್ನು, ರಸ್ತೆ ಸೌಕರ್ಯವನ್ನು ಈ ರೀತಿಯ ಪುಟ್ಟ ಲೇಖನಗಳಿಂದ ಮುಚ್ಚಿಡಲು ಸಾಧ್ಯವೆ? ಜನ ಬಂದೇ ಬರುತ್ತಾರೆ, ಇಷ್ಟ ಬಂದAತೆ ವರ್ತಿಸುತ್ತಾರೆ. ಸದಾಶಯ ಎಂದರೆ ಅವರೇ ಸ್ವಯಂ ಶಿಸ್ತನ್ನು ರೂಢಿಸಿಕೊಳ್ಳಬೇಕು, ಅದಕ್ಕೆ ಕಾನೂನಿನ ಬಿಗಿ ಹೇರಿದರೂ ತಪ್ಪಿಲ್ಲ, ಅಲ್ಲವೆ.
ಬಿಸಿಲೆ ವ್ಯೂ ಪಾಯಿಂಟ್, ಬಿಸಿಲೆ ಹಳ್ಳಿ, ವಣಗೂರು, ದಟ್ಟ ಕಾಡಿನ ದಾರಿ, ಪಟ್ಲ ಬೆಟ್ಟ ಮೊದಲಾದ ಕಡೆಗಳಲ್ಲಿ ಮಳೆಗಾಲದಲ್ಲಿ ಮೋಡಗಳ ಮೆರವಣಿಗೆ. ಮುಖಕ್ಕೆ ಬಡಿಯುವ ಕುಳಿರ್ಗಾಳಿ, ಮೋಡಗಳ ಸಾಲು ಸಾಲು. ಅದನ್ನು ನೋಡುವ ಅನುಭವವೇ ಅನನ್ಯ. ನಾವು ಹೋಗಿದ್ದಾಗ ಶುದ್ಧ ಬಿಸಿಲು, ಸುಂದರ ಭೂದೃಶ್ಯದ ನೋಟ, ನೀಲಾಗಸದ ಮಾಟ, ಹಸುರಿನ ಹಿತಕರ ಮೆರವಣಿಗೆ! (ನನ್ನ ಭೇಟಿ: ಮಾರ್ಚ್ ೨೦೨೨).