ಕಿಚ್ಚ ಸುದೀಪ ಎನ್ನುವ ಪ್ಯಾನ್ ಇಂಡಿಯಾ ಸ್ಟಾರ್ ಈ ಸಲ ಗ್ಲೋಬಲ್ ಸ್ಟಾರ್ ಆಗಿ ತಲೆಯೆತ್ತೋದು ಸಾಧ್ಯವಾ?. ಬರಿಯ ಕರ್ನಾಟಕ ಮಾತ್ರವಲ್ಲ ಇಡೀ ಇಂಡಿಯಾದಲ್ಲಿ ಎಲ್ಲಿ ನೋಡಿದರಲ್ಲಿಕಿಚ್ಚನ ಜೊತೆ ಜಾಕ್ವೆಲಿನ್ ಮಾದಕವಾಗಿ ಕುಣಿದಿರುವ ʻರಾ ರಾ ರಕ್ಕಮ್ಮ.. ಎಕ್ಕಸಕ್ಕ ಎಕ್ಕಸಕ್ಕʼ ಅನ್ನೋ ಹಾಡಿನ ಸಾಲುಗಳೇ ಕೇಳಿಬರುತ್ತಿವೆ. ಸೋಷಿಯಲ್ ಮೀಡಿಯಾ ರೀಲ್ಸುಗಳಲ್ಲೂ ಇದೇ ಹಾಡಿಗೆ ಜನ ಕುಣಿದು ಕುಪ್ಪಳಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ಜಾಕ್ ಮಂಜು ನಿರ್ಮಾಣದಲ್ಲಿ, ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ, ಕಿಚ್ಚ ಸುದೀಪ ನಟನೆಯ ಚಿತ್ರ ವಿಕ್ರಾಂತ್ ರೋಣ. ಫ್ಯಾಂಟಮ್ ಎನ್ನುವ ಹೆಸರಿನಲ್ಲಿ ಆರಂಭವಾಗಿ ನಂತರ ಹೆಸರು ಬದಲಾಯಿಸಿಕೊಂಡ ಚಿತ್ರವಿದು. ಫ್ಯಾಂಟಮ್ ಹೆಸರು ಕನ್ನಡಿಗರ ಬಾಯಿಗೆ ಬಂದು ಮನಸ್ಸಿನಲ್ಲುಳಿಯುವುದು ಕಷ್ಟ ಎನ್ನುವ ಕಾರಣವಿರಬಹುದು. ಅಥವಾ ಈ ಚಿತ್ರದಲ್ಲಿ ಸುದೀಪ್ ಪಾತ್ರ ವಿಕ್ರಾಂತ್ ರೋಣ ಅಂತಾ ಗೊತ್ತಾಗಿ, ಆ ಹೆಸರೇ ಹೆಚ್ಚು ಫೇಮಸ್ ಆಗಿತ್ತಾದ್ದರಿಂದ ಅದನ್ನೇ ಟೈಟಲನ್ನಾಗಿಸಿದರು.
ವಿಕ್ರಾಂತ್ ರೋಣ ಚಿತ್ರಕ್ಕಾಗಿ ಕಿಚ್ಚ ಸುದೀಪ ತಿಂಗಳುಗಟ್ಟಲೆ ಕಸರತ್ತು ನಡೆಸಿ ಸಿಕ್ಸ್ ಪ್ಯಾಕ್ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತೀರಾ ಹೊಸ ಬಗೆಯಲ್ಲಿ ಕಾಣಿಸಿಕೊಳ್ಳಬೇಕು ಅಂತಾ ಸ್ವತಃ ಕಿಚ್ಚ ತೀರ್ಮಾನಿಸಿದ್ದರು. ಈ ಕಾರಣಕ್ಕೇ ನಿರ್ದೇಶಕ ಅನೂಪ್ ಭಂಡಾರಿ ಕಲ್ಪನೆಗೆ ತಕ್ಕಂತೆ ತಯಾರಾದರು. ಪ್ರಪಂಚದ ಅತಿ ಎತ್ತರದ ಕಟ್ಟದ ಅನ್ನಿಸಿಕೊಂಡಿರುವ ಬುರ್ಜ್ ಖಲೀಫಾದ ಮೇಲೆ ಈ ಚಿತ್ರದ ಶೀರ್ಷಿಕೆ ಹಾಗೂ ಲಾಂಛನವನ್ನು ಸಹಾ ಪ್ರದರ್ಶನ ಮಾಡಲಾಯಿತು. 180 ಸೆಖೆಂಡುಗಳ ಅವಧಿಯ ದೃಶ್ಯ ಆ ಕಟ್ಟಡದ ಮೇಲೆ ಪ್ರಸಾರವಾಗಿದ್ದು, ದಾಖಲೆಯಾಗಿದೆ. ಅದೂ ಅಲ್ಲದೆ ಕರ್ನಾಟಕದ ಬಾವುಟದ ಜೊತೆಗೆ ಕಿಚ್ಚನ ಇನ್ನೂರು ಅಡಿಗಳ ಬೃಹತ್ ವರ್ಚುವಲ್ ಕಟೌಟ್ ಕೂಡಾ ಬುರ್ಜ್ ಖಲೀಫಾದ ಮೇಲೆ ರಾರಾಜಿಸಿತ್ತು. ಈ ಮೂಲಕ ಇಷ್ಟು ದೊಡ್ಡ ಕಟೌಟ್ ಹೊಂದಿದ ವಿಶ್ವದ ಮೊದಲ ಹೀರೋ ಆಗಿ ಸುದೀಪ ಹೊರಹೊಮ್ಮಿದ್ದಾರೆ. ಈ ಸಿನಿಮಾ ಆರಂಭದಿಂದಲೂ ಕ್ರಿಯೇಟ್ ಮಾಡುತ್ತಿರುವ ಕ್ರೇಜ಼್ ನೋಡಿದರೆ, ವಿಕ್ರಾಂತ್ ರೋಣ ಕನ್ನಡದಲ್ಲಿ ಎಲ್ಲ ಕೋನದಿಂದಲೂ ದಾಖಲೆ ನಿರ್ಮಿಸೋದು ಗ್ಯಾರೆಂಟಿ. ರಂಗಿತರಂಗ ಖ್ಯಾತಿಯ ಅನೂಪ್ ಬಂಢಾರಿ ಹೊಸ ಬಗೆಯ ಸಿನಿಮಾದಿಂದ ಎಲ್ಲರನ್ನೂ ಅಚ್ಛರಿಗೊಳಿಸಿದವರು.
ಇಷ್ಟೆಲ್ಲಾ ಆಗಿ ಇದೇ ತಿಂಗಳು ವಿಕ್ರಾಂತ್ ರೋಣ ತೆರೆಗೆ ಬರುತ್ತಿದೆ. ಎಲ್ಲ ಅಬ್ಬರದ ಪ್ರಛಾರದ ನುಡುವೆಯೂ ಏನೋ ಕೊರತೆ ಎದ್ದು ಕಾಣುತ್ತಿದೆ. ಅದಕ್ಕೆ ಕಾರಣ ಎರಡು. ನಿರ್ದೇಶಕ ಅನೂಪ್ ನಿರ್ದೇಶನದ ರಂಗಿತರಂಗ ದೊಡ್ಡ ಮಟ್ಟದಲ್ಲಿ ಗೆದ್ದಿತ್ತು. ಆ ನಂತರ ಅನೂಪ್ ಎರಡನೇ ಸಿನಿಮಾ ರಾಜರಥ ಭಯಾನಕ ಸೋಲು ಕಂಡಿತ್ತು. ಹೀಗಾಗಿ ಅನೂಪ್ ಈ ಚಿತ್ರವನ್ನು ಹೇಗೆ ಮಾಡಿದ್ದಾರೋ ಎನ್ನುವ ಅನುಮಾನ ಹಲವರದ್ದು. ಯಾವ ನಿರ್ದೇಶಕನ ಎರಡನೇ ಸಿನಿಮಾ ಸೋಲು ಕಂಡಿರುತ್ತದೋ, ಆ ಡೈರೆಕ್ಟರ್ ನ ಮೂರನೇ ಚಿತ್ರದ ಬಗ್ಗೆ ಯಾವಾಗಲೂ ಇದೇ ರೀತಿಯ ಡೌಟಿರುತ್ತದೆ. ಇನ್ನು ಕಿಚ್ಚ ಸುದೀಪ ಕೂಡಾ ಗೆಲುವಿನ ಮುಖ ಕಂಡು ಸಾಕಷ್ಟು ವರ್ಷಗಳಾಗಿವೆ. 2014ರಲ್ಲಿ ಬಂದ ಮಾಣಿಕ್ಯ ಕಿಚ್ಚನ ಕೊನೆಯ ಸೂಪರ್ ಹಿಟ್ ಸಿನಿಮಾ. ಆದಾದ ನಂತರ ಬಂದ ರನ್ನ, ಹೆಬ್ಬುಲಿ, ಡಿ ವಿಲ್ಲನ್, ಕೋಟಿಗೊಬ್ಬ ೨ ಮತ್ತು ೩ ಮತ್ತು ಹಿಂದಿಯ ದಬಾಂಗ್ ಸಿನಿಮಾಗಳು ಬೋರಲು ಬಿದ್ದಿದ್ದವು. ಹೀಗಾಗಿ ಕಿಚ್ಚನ ಆಯ್ಕೆಯ ಬಗ್ಗೆಯೇ ಪ್ರೇಕ್ಷಕರಲ್ಲಿ ಅನುಮಾನಗಳಿವೆ. ಒಂದು ವೇಳೆ ಸಿನಿಮಾ ಸುಮಾರಾಗಿದೆ ಅಂತಾ ಮಾತು ಕೇಳಿಬಂದರೂ ಯಾರೂ ಥೇಟರಿಗೆ ಹೋಗೋದಿಲ್ಲ. ಅತ್ಯದ್ಭುತ ಅನ್ನಿಸಿಕೊಂಡರೆ ಮಾತ್ರ ಚಿತ್ರಮಂದಿರಗಳು ತುಂಬಲಿವೆ. ಇಷ್ಟೆಲ್ಲದರ ನಡುವೆ ಈಗಿನ ಬದಲಾಗಿರುವ ಟ್ರೆಂಡ್ ಗೆ ತಕ್ಕಂತೆ ಪ್ರಚಾರ ಮಾಡುವುದು ಹೇಗೆ ಅನ್ನೋದು ಕೂಡಾ ಚಿತ್ರತಂಡಕ್ಕೆ ಗೊತ್ತಾಗುತ್ತಿಲ್ಲ. ಇನ್ನೂ ಶುರುವೇ ಆಗದ ವಾಹಿನಿಗಳಿಗೆ, ತುಕಾಲಿ ಯೂಟ್ಯೂಬ್ ಚಾನೆಲ್ಲುಗಳಿಗೆ ಕಿಚ್ಚ ಸಂದರ್ಶನ ನೀಡುತ್ತಾ ಕೂತಿದ್ದಾರೆ. ಇವೆಲ್ಲಾ ನೋಡಿದರೆ ನೂರು ಕೋಟಿ ಬಜೆಟ್ಟಿನ ರೋಣನ ಬಗ್ಗೆ ನಿಜಕ್ಕೂ ದಿಗಿಲಾಗುವಂತಿದೆ….!