ವಿಶ್ವದ ಆಹಾರ ಬೇಡಿಕೆ ನೀಗಿಸುವಲ್ಲಿ ಅತಿ ಮಹತ್ವದ ಪಾತ್ರವನ್ನು ಗೋಧಿ ನಿರ್ವಹಿಸುತ್ತದೆ. ಗೋಧಿ ಹಿಟ್ಟಿನಿಂದ ತಯಾರಿಸಿದ ಖಾದ್ಯ, ತಿನಿಸು, ಊಟೋಪಹಾರಗಳಿಂದ ಮುಕ್ಕಾಲು ಜಗತ್ತು ಬದುಕುತ್ತದೆ. ಇದೇ ಕಾರಣಕ್ಕಾಗಿಯೇ ಬಹುತೇಕ ದೊಡ್ಡ ದೇಶಗಳು ಗೋಧಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಯುತ್ತವೆ. ಇದೀಗ ಪ್ರಪಂಚವನ್ನು ಗೋಧಿಯ ಕೊರತೆ ಬಾಧಿಸತೊಡಗಿದೆ.

ಉಕ್ರೇನ್ ಮತ್ತು ರಷ್ಯಾ ಯುದ್ಧ ಅನೇಕ ರಾಷ್ಟçಗಳ ಗೋಧಿ ಬಟ್ಟಲು ಖಾಲಿಯಾಗುವಂತೆ ಮಾಡಿದೆ. ಈ ಎರಡು ದೇಶಗಳು ಅತಿ ಹೆಚ್ಚು ಗೋಧಿ ರಫ್ತುದಾರ ದೇಶಗಳಾಗಿದ್ದವು. ಉಕ್ರೇನ್‌ನಲ್ಲಿ ಗೋದಾಮುಗಳಲ್ಲಿ ಗೋಧಿ ಕೊಳೆಯುತ್ತಿದೆ. ರಫ್ತು ವ್ಯವಸ್ಥೆಯೇ ಕುಸಿದುಬಿದ್ದಿದೆ. ರಷ್ಯಾ ಯುದ್ಧದ ಹಿನ್ನೆಲೆ ತನ್ನ ಆಹಾರ ಭದ್ರತೆ ಕಾಯ್ದುಕೊಳ್ಳಲು ಗೋಧಿಯನ್ನು ಈಚೆ ಬಿಡುತ್ತಿಲ್ಲ. ಇದು ಜಗತ್ತಿನಲ್ಲಿ ಗೋಧಿ ಕ್ಷಾಮವನ್ನು ಸೃಷ್ಟಿಸಿದೆ. ಉಕ್ರೇನ್-ರಷ್ಯಾ ಯುದ್ಧದ ಹಿನ್ನೆಲೆ ಜಾಗತಿಕ ಬೇಡಿಕೆಯನ್ನು ಮನಗಂಡು ಗೋಧಿ ರಫ್ತು ವಿಚಾರದಲ್ಲಿ ಮುಂದಡಿಯಿಟ್ಟು ಹೊಸ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಹೊರಟಿದ್ದ ಭಾರತ ಆಪಾಯದ ಅರಿವಾಗುತ್ತಲೇ ಯೂಟರ್ನ್ ತೆಗೆದುಕೊಂಡಿದೆ. ಗೋಧಿ ರಫ್ತಿನ ಮೇಲೆ ಕಟ್ಟುನಿಟಿನ ನಿರ್ಬಂಧ ವಿಧಿಸಿದೆ.
ದೇಶದಲ್ಲಿ ಗೋಧಿ ಬೆಲೆ ಏರಿಕೆ ನಿಯಂತ್ರಿಸಲು ತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ರಫ್ತಿಗೆ ನಿಷೇಧ ಹೇರಲಾಗಿದೆ ಎಂದು ಭಾರತ ವಿದೇಶ ವ್ಯಾಪಾರ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಗೋಧಿ ದಾಸ್ತಾನು ಅಗತ್ಯ ಪ್ರಮಾಣದಲ್ಲಿ ಇದೆ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಒಂದು ವರ್ಷದಲ್ಲಿ ದೇಶದ ದಕ್ಷಿಣ ವಲಯದಲ್ಲಿ ಗೋಧಿ ಬೆಲೆ ಏರಿಕೆಯು ಅತಿ ಹೆಚ್ಚು (ಶೇಕಡ ೩೩ರಷ್ಟು) ಎಂದು ತಿಳಿಸಿದೆ.
ಗೋಧಿ ರಫ್ತು ಹೆಚ್ಚಿಸಲು ಮೊರಕ್ಕೊ, ಟ್ಯುನಿಷಿಯಾ, ಇಂಡೋನೇಷಿಯಾ, ಥಾಯ್ಲೆಂಡ್, ವಿಯೆಟ್ನಾಂ, ಟರ್ಕಿ, ಅಲ್ಜೀರಿಯಾ ಮತ್ತು ಲೆಬನಾನ್ ದೇಶಗಳಿಗೆ ವ್ಯಾಪಾರ ನಿಯೋಗ ಕಳುಹಿಸುವುದಾಗಿ ವಾಣಿಜ್ಯ ಸಚಿವಾಲಯ ಇತ್ತೀಚೆಗಷ್ಟೇ ಹೇಳಿತ್ತು.
ರಫ್ತಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ವರ್ತಕರು ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರಕ್ಕೆ ಗೋಧಿ ಖರೀದಿಸಿದ್ದಾರೆ. ಹೀಗಾಗಿ ಪ್ರಸಕ್ತ ಹಿಂಗಾರು ಮಾರುಕಟ್ಟೆ ಅವಧಿಯಲ್ಲಿ ಮೇ ೧ರವರೆಗಿನ ಮಾಹಿತಿಯಂತೆ, ಸರ್ಕಾರವು ಗೋಧಿ ಖರೀದಿಸುವ ಪ್ರಮಾಣವು ಶೇಕಡ ೪೪ರಷ್ಟು ಇಳಿಕೆ ಆಗಿ ೧.೬೨ ಕೋಟಿ ಟನ್‌ಗೆ ತಲುಪಿದೆ. ಹಿಂದಿನ ಮಾರುಕಟ್ಟೆ ಅವಧಿಯಲ್ಲಿ ಸರ್ಕಾರವು ೨.೮೮ ಕೋಟಿ ಟನ್ ಗೋಧಿ ಖರೀದಿಸಿತ್ತು.

ಗೋಧಿ ಪೂರೈಕೆ ಜಾಲ
ಜಗತ್ತಿಗೆ ಅತಿ ಹೆಚ್ಚು ಗೋಧಿಯನ್ನು ರಫ್ತು ಮಾಡುವುದು ರಷ್ಯಾ. ಆ ದೇಶ ೨೦೧೮ರಲ್ಲಿ ೪೪.೬೪ ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿತ್ತು. ಅದೇ ವರ್ಷದಲ್ಲಿ ಉಕ್ರೇನ್ ೧೬.೯ ಮಿ. ಟನ್ ಪೂರೈಸಿತ್ತು. ೨೦೨೦ರಲ್ಲಿ ರಷ್ಯಾ ೮೫.೯ ಮಿ. ಟನ್, ಉಕ್ರೇನ್ ೨೪.೯ ಮಿ. ಟನ್ ಗೋಧಿ ಉತ್ಪಾದಿಸಿ ಸಿಂಹಪಾಲನ್ನು ರಫ್ತು ಮಾಡಿದ್ದವು.
ಇನ್ನು ಗೋಧಿ ಉತ್ಪಾದನೆಯಲ್ಲಿ ಚೀನಾ ಮತ್ತು ಭಾರತ ಮೊದಲ ಎರಡು ಸ್ಥಾನಗಳಲ್ಲಿವೆ. ಚೀನಾ ೨೦೨೦ರಲ್ಲಿ ೧೩೪.೨ ಮಿ. ಟನ್ ಗೋಧಿ ಉತ್ಪಾದಿಸಿದರೆ, ಭಾರತ ೧೦೦.೭ ಮಿ. ಟನ್ ಉತ್ಪಾದನೆ ಮಾಡಿತ್ತು. ಆದರೆ ಈ ಎರಡು ದೇಶಗಳು ಗೋಧಿ ರಫ್ತು ಮಾಡದೆ ಆಂತರಿಕ ಬೇಡಿಕೆ ಮತ್ತು ಆಹಾರ ಭದ್ರತೆಗೆ ಗಮನ ನೀಡಿರುವುದರಿಂದ ಜಗತ್ತಿನ ಗೋಧಿ ಬೇಡಿಕೆ ನೀಗಿಸುವಲ್ಲಿ ಯಾವುದೇ ಪಾತ್ರ ವಹಿಸುತ್ತಿರಲಿಲ್ಲ. ಇದೀಗ ಭಾರತ ರಫ್ತು ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿರುವುದರಿAದ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ ಅಭಾವ ತಾರಕಕ್ಕೇರಲಿದೆ.