-ಶೌರ್ಯ ಡೆಸ್ಕ್
ದಕ್ಷಿಣ ಕೊರಿಯಾದ ಕರಾವಳಿಯಲ್ಲಿ ನಿರ್ಮಾಣವಾಗಲಿರುವ ವಿಶ್ವದ ಮೊದಲ ತೇಲುವ ನಗರವು ೨೦೨೫ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ನಗರ ಪರಿಸರ ಸ್ನೇಹಿ ಹಾಗೂ ಸುಸ್ಥಿರವಾಗಿರಲಿದೆ. ಆಹಾರ, ನೀರು ಮತ್ತು ಇಂಧನ ವಿಚಾರದಲ್ಲಿ ಸ್ವಾವಲಂಬಿಯಾಗಿರಲಿದೆ.
ಸಮುದ್ರ ಮಟ್ಟದ ಹೆಚ್ಚಳ ಸಮಸ್ಯೆ ನಿಭಾಯಿಸಲು ಬೂಸಾನ್ ಕರಾವಳಿಯಿಂದ ತೇಲುವ ನಗರ ನಿರ್ಮಿಸಲಾಗುತ್ತಿದೆ. ಇದಕ್ಕೆ ವಿಶ್ವಸಂಸ್ಥೆಯ ಬೆಂಬಲವೂ ಇದೆ. ಇಲ್ಲಿ ಹಲವಾರು ಮಾನವ ನಿರ್ಮಿತ ದ್ವೀಪಗಳು ಇರಲಿವೆ, ಪ್ರವಾಹ ನಿರೋಧಕ ಮೂಲಸೌಕರ್ಯ ಇರಲಿದೆ. ಇದು ಸಮುದ್ರದಲ್ಲಿ ತೇಲುವ ಮುಖಾಂತರ ಪ್ರವಾಹದ ಅಪಾಯವನ್ನು ತೊಡೆದುಹಾಕುವ ಗುರಿ ಹೊಂದಿದೆ.

ಓಷನಿಕ್ಸ್ ಹಾಗೂ ಯುನ್ ಹ್ಯೂಮನ್ ಸೆಟ್ಲ್ಮೆಂಟ್ ಪ್ರೋಗ್ರಾಂನ ಜಂಟಿ ಪ್ರಯತ್ನ ಇದಾಗಿದ್ದು, ಈ ನಗರ ಸೌರ ವಿದ್ಯುತ್ ಉತ್ಪಾದನೆಯ ಸದೃಢ ವ್ಯವಸ್ಥೆಯನ್ನು ಹೊಂದಿರಲಿದ್ದು, ತನಗೆ ಅಗತ್ಯವಾದ ವಿದ್ಯುಚ್ಛಕ್ತಿಯನ್ನು ತಾನೇ ಸೌರಫಲಕಗಳ ಮೂಲಕ ಉತ್ಪಾದಿಸಿಕೊಳ್ಳಲಿದೆ. ಸಮುದ್ರದ ಉಪ್ಪು ನೀರನ್ನು ಸಿಹಿಯಾಗಿಸಿ ಬಳಸಿಕೊಳ್ಳಲಿದೆ. ಕಡಲ ಆಹಾರದ ಸ್ವರ್ಗವಾಗಿರಲಿದೆ.

ಪ್ರಯಾಣಿಕರು, ಪ್ರವಾಸಿಗರು, ನಿವಾಸಿಗಳ ಓಡಾಟಕ್ಕೆ ವಿಶೇಷವಾಗಿ ತಯಾರಿಸಿದ ದೋಣಿಗಳು ಇರಲಿವೆ. ಒಟ್ಟಾರೆ ೭೫ ಹೆಕ್ಟೇರ್ ವಿಸ್ತೀರ್ಣವಿರುವ ಈ ನಗರಿಯಲ್ಲಿ ೧೦ ಸಾವಿರ ನಿವಾಸಿಗಳು ಇರಬಹುದಾಗಿದೆ. ಒಂದು ಗ್ರಾಮದಲ್ಲಿ ೧,೬೫೦ ನಿವಾಸಿಗಳಿಗೆ ಅವಕಾಶವಿದೆ.
ಪ್ರವಾಹ, ಸುನಾಮಿ ಹಾಗೂ ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳಿಂದ ಈ ನಗರಿ ಸುರಕ್ಷಿತವಾಗಿದೆ. ಇದಕ್ಕೆ ತಕ್ಕಂತಹ ವಿನ್ಯಾಸ ಮಾಡಲಾಗಿದೆ. ಒಟ್ಟಾರೆ ತೇಲುವ ನಗರಿ ನಿರ್ಮಾಣಕ್ಕೆ ೨೦೦ ಮಿಲಿಯನ್ ಡಾಲರ್ ವೆಚ್ಚವಾಗಲಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ.
