-ನವರಂಗ್ ಕೊಬ್ಬೆ
ಯಾರು ಏನೇ ಹೇಳಿದರೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ವಕ್ಕಲಿಗ ಸಮುದಾಯ ತನ್ನ ಜನಾಂಗದ ಹೆಮ್ಮೆ ಎಂದೇ ಭಾವಿಸುತ್ತದೆ. ಕೆಂಪೇಗೌಡರಿಗೆ ದೊಡ್ಡ ಗೌರವ ನೀಡಿ, ಐತಿಹಾಸಿಕವಾಗಿ ಸ್ಮರಣೀಯವಾಗಿಸಿ ವಕ್ಕಲಿಗ ಸಮುದಾಯವನ್ನು ತನ್ನತ್ತ ಆಕರ್ಷಿಸುವುದು ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ನಿರ್ಣಾಯಕ ಸ್ಥಾನಗಳನ್ನು ಗಳಿಸುವುದು ಬಿಜೆಪಿ ಲೆಕ್ಕಾಚಾರವಾಗಿದೆ. ಇದರ ಭಾಗವೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಬಳಿ ಕೆಂಪೇಗೌಡರ ಬೃಹತ್ ಪ್ರತಿಮೆ ಸ್ಥಾಪನೆ. ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರನ್ನೇ ಕರೆಸಿ ಉದ್ಘಾಟನೆ ಮಾಡಿಸುವ ಮೂಲಕ ವಕ್ಕಲಿಗ ಸಮುದಾಯಕ್ಕೆ ಪ್ರಬಲ ಸಂದೇಶ ಕೊಡಲು ಬಿಜೆಪಿ ಹೊರಟಿದೆ. ಈ ಸಂದೇಶ ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ ಅಲ್ಲಿನ ಪಟೇಲ್ ಸಮುದಾಯಕ್ಕೆ ನೀಡಿದ ಸಂದೇಶದಂತಿರಬೇಕು ಎಂಬುದು ಕಮಲನಾಯಕರ ಲೆಕ್ಕಾಚಾರವಾಗಿದೆ.

ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸದೇ ಕರ್ನಾಟಕದಲ್ಲಿ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬ ಸತ್ಯದ ಮನವರಿಕೆ ಕಳೆದ 2018 ರ ಚುನಾವಣೆ ಫಲಿತಾಂಶ ಹೊರಬಿದ್ದ ಕ್ಷಣವೇ ಬಿಜೆಪಿಗಾಗಿತ್ತು. 2008 ರಲ್ಲಿ ಯಡಿಯೂರಪ್ಪ ಎಬ್ಬಿಸಿದ್ದ ‘ದಳಪತಿಗಳ ವಚನದ್ರೋಹ’ದ ಕೂಗು ಹಳೇ ಮೈಸೂರು ಭಾಗದಲ್ಲಿ ಫಲ ಕೊಡದಿದ್ದರೂ ಇತರ ಎಲ್ಲಾ ಪ್ರದೇಶಗಳಿಗೆ ಮುಟ್ಟಿ 110 ಸ್ಥಾನ ಗಳಿಸುವಂತಾಗಿತ್ತು. ಆಗ ಪಕ್ಷೇತರರ ನೆರವಿನಿಂದ ಅಧಿಕಾರ ಸಿಕ್ಕಿತ್ತು. ಅದಾದ 10 ವರ್ಷಗಳ ನಂತರ 2018 ರಲ್ಲಿ ಬಿಜೆಪಿ ಮತ್ತೆ 100 ಸ್ಥಾನಗಳ ಗಡಿದಾಟಿ ನಿಂತು ಮ್ಯಾಜಿಕ್ ಸಂಖ್ಯೆಯಿದ್ದ ದೂರವಿದ್ದ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾಗಿತ್ತು.
ಒಟ್ಟಾರೆ ಬಿಜೆಪಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೇರದೆ ಬಹುಮತದ ಸಮೀಪ ಬಂದು ಕುಸಿಯಲು ಹಳೇ ಮೈಸೂರು ಭಾಗದಲ್ಲಿ ಪಕ್ಷ ದುರ್ಬಲವಾಗಿರುವುದೇ ಕಾರಣ ಎಂಬುದು ಬಿಜೆಪಿ ದೆಹಲಿ ನಾಯಕರಿಗೂ ಅನುಮಾನಕ್ಕೆಡೆ ಇಲ್ಲದೆ ಅರ್ಥವಾಗಿತ್ತು. ಹಳೇ ಮೈಸೂರು ಭಾಗದಲ್ಲಿ ಪಕ್ಷ ಮೇಲೆತ್ತಲು ಈ ಭಾಗದಲ್ಲಿ ಪ್ರಬಲವಾಗಿರುವ ವಕ್ಕಲಿಗ ಸಮುದಾಯದ ಬೆಂಬಲ ಬೇಕು ಎಂಬುದೂ ಸಹಜವಾಗಿಯೇ ನಾಯಕರಿಗೆ ತಿಳಿದಿತ್ತು. ಇದೇ ಕಾರಣಕ್ಕೇ ಬೆಂಗಳೂರಿನ ಮತ್ತು ಹಳೇ ಮೈಸೂರು ಪ್ರಾಂತ್ಯದ ವಕ್ಕಲಿಗ ಶಾಸಕರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸಿ ‘ಅಪರೇಷನ್ ಕಮಲ’ ದ ಸಮಯದಲ್ಲಿ ನಾಲ್ಕೈದು ವಕ್ಕಲಿಗ ಶಾಸಕರನ್ನು ಸೆಳೆದಿದ್ದಲ್ಲದೆ ಯಡಿಯೂರಪ್ಪ ಸರ್ಕಾರದಲ್ಲಿ ಅವರಿಗೆಲ್ಲ ಮಂತ್ರಿ ಪದವಿಗಳನ್ನೂ ದಯಪಾಲಿಸಿ, ವಕ್ಕಲಿಗ ಸಮುದಾಯಕ್ಕೆ ಉಪಮುಖ್ಯಮಂತ್ರಿ ಪಟ್ಟವನ್ನೂ ನೀಡಿ ವಕ್ಕಲಿಗ ಪಾಳೇಪಟ್ಟಿನ ಬೆಂಬಲ ಗಳಿಸಲು ಪ್ರಯತ್ನಿಸಿತ್ತು. ಇಂತಹ ಪ್ರಯತ್ನಗಳಿಗೆ ತಕ್ಕಮಟ್ಟಿನ ಯಶಸ್ಸು ಸಿಕ್ಕಿ ಉಪಚುನಾವಣೆಗಳಲ್ಲಿ ವಕ್ಕಲಿಗ ಹಾರ್ಟ್ ಲ್ಯಾಂಡ್ ಜಿಲ್ಲೆಗಳಲ್ಲಿ ಯಾವತ್ತೂ ಗೆಲ್ಲದ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬಂದಿದ್ದವು. ಮಂಡ್ಯದ ಕೆ.ಆರ್.ಪೇಟೆ, ತುಮಕೂರಿನ ಶಿರಾ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಚಿಕ್ಕಬಳ್ಳಾಪುರವನ್ನು ದಾಟಿ ವಕ್ಕಲಿಗರ ಕೋಟೆಗಳು ಬಿಜೆಪಿ ವಶವಾಗಿದ್ದವು. ಈಗ ವಕ್ಕಲಿಗ ಪ್ರಾಬಲ್ಯದ ಇನ್ನಷ್ಟು ಕ್ಷೇತ್ರಗಳತ್ತ ನೆಲೆ ವಿಸ್ತರಿಸಿಕೊಂಡು 2023 ರ ಕದನ ಗೆಲ್ಲಲು ಬಿಜೆಪಿ ತಂತ್ರಗಾರಿಕೆ ನಡೆಸಿದೆ. ಇದರ ಭಾಗವೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಬಳಿ ಕೆಂಪೇಗೌಡರ ಬೃಹತ್ ಪ್ರತಿಮೆ ಸ್ಥಾಪನೆ.

ಯಾರು ಏನೇ ಹೇಳಿದರೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ವಕ್ಕಲಿಗ ಸಮುದಾಯ ತನ್ನ ಜನಾಂಗದ ಹೆಮ್ಮೆ ಎಂದೇ ಭಾವಿಸುತ್ತದೆ. ಕೆಂಪೇಗೌಡರಿಗೆ ದೊಡ್ಡ ಗೌರವ ನೀಡಿ, ಐತಿಹಾಸಿಕವಾಗಿ ಸ್ಮರಣೀಯವಾಗಿಸಿ ವಕ್ಕಲಿಗ ಸಮುದಾಯವನ್ನು ತನ್ನತ್ತ ಆಕರ್ಷಿಸುವುದು ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ನಿರ್ಣಾಯಕ ಸ್ಥಾನಗಳನ್ನು ಗಳಿಸುವುದು ಬಿಜೆಪಿ ಲೆಕ್ಕಾಚಾರವಾಗಿದೆ.
ಜೆಡಿಎಸ್ ಭದ್ರಕೋಟೆ ಅಲುಗಾಡಿಸಲು ವ್ಯೂಹ ರಚನೆ
ರಾಜ್ಯ ರಾಜಕೀಯದಲ್ಲಿ ವಕ್ಕಲಿಗ ಸಮುದಾಯ 1994 ರಿಂದಲೂ ಜನತಾದಳದ ಪರ ಭದ್ರವಾಗಿ ಕಾಲೂರಿ ನಿಂತಿದೆ. ದೇವೇಗೌಡರನ್ನು ಹಿಂಬಾಲಿಸಿಕೊಂಡೇ ಬಂದಿದೆ. 2004 ರಲ್ಲಿ ಮತ್ತು 2018 ರಲ್ಲಿ ಮೈತ್ರಿ ಸರ್ಕಾರ ರಚಿಸಿ ಜೆಡಿಎಸ್ ಅಧಿಕಾರಕ್ಕೆ ಬರಲು ಕೂಡಾ ವಕ್ಕಲಿಗರ ಕೋಟೆ ದಳಪತಿಗಳ ವಶದಲ್ಲಿದ್ದದ್ದೇ ಕಾರಣ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾದ 37 ಶಾಸಕರ ಪೈಕಿ 23 ಮಂದಿ ವಕ್ಕಲಿಗ ಸಮುದಾಯದವರು. ಕಾಂಗ್ರೆಸ್‌ನ 78 ಸ್ಥಾನಗಳ ಪೈಕಿ 13 ಶಾಸಕರಷ್ಟೇ ವಕ್ಕಲಿಗ ಸಮುದಾಯಕ್ಕೆ ಸೇರಿದವರು. ಇನ್ನು ಬಿಜೆಪಿ ಕಾಂಗ್ರೆಸ್ ಪಕ್ಕಕ್ಕೂ ಒಂದು ಸ್ಥಾನ ಹೆಚ್ಚು ಅಂದರೆ 14 ವಕ್ಕಲಿಗ ಶಾಸಕರನ್ನು ಗೆಲ್ಲಿಸಿಕೊಂಡುಬಂದಿತ್ತು.

ಮೈತ್ರಿ ಸರ್ಕಾರ ಪತನದ ಬಳಿಕ ನಡೆದ ಉಪಚುನಾವಣೆಗಳು ಮತ್ತು ಶಿರಾ ಉಪಚುನಾವಣೆ ಬಳಿಕ ಬಿಜೆಪಿಯ ವಕ್ಕಲಿಗ ಶಾಸಕರ ಸಂಖ್ಯೆ 20ಕ್ಕೆ ಮುಟ್ಟಿದೆ. ಜೆಡಿಎಸ್ ಭದ್ರಕೋಟೆಗಳನ್ನು ಛಿದ್ರ ಮಾಡಿ ಬಿಜೆಪಿ ಮುನ್ನೆಡೆದಿದೆ. ಅದಾದ ನಂತರ ವಕ್ಕಲಿಗ ಅಭಿವೃದ್ಧಿ ನಿಗಮ, ಹೆಚ್ಚು ವಕ್ಕಲಿಗರಿಗೆ ಮಂತ್ರಿಸ್ಥಾನ, ಡಿಸಿಎಂ ಸ್ಥಾನ, ಮಠಗಳ ಓಲೈಕೆ ನಂತರ ಕೆಂಪೇಗೌಡರ ಮೂಲಕ ವಕ್ಕಲಿಗ ಮತಬುಟ್ಟಿಗೆ ಬಿಜೆಪಿ ಕೈ ಇಟ್ಟಿದೆ. ಜೆಡಿಎಸ್ ಪ್ರಾಬಲ್ಯದ 50 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಳದ ಅಭಿವೃದ್ಧಿಗೆ ಮೃತ್ತಿಕೆ (ಮಣ್ಣು) ಸಂಗ್ರಹಿಸಿ ವಕ್ಕಲಿಗರ ವಿಶ್ವಾಸ ಗಳಿಸಲು ಪ್ರಯತ್ನಿಸಿದೆ. ಸಚಿವ ಸಿ.ಎನ್. ಅಶ್ವತ್ಥ ನಾರಾಯಣ, ಆರ್. ಅಶೋಕ್, ಸಿ.ಟಿ. ರವಿ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಡಾ. ಸುಧಾಕರ್ ಹೀಗೆ ವಕ್ಕಲಿಗ ನಾಯಕಪಡೆಯನ್ನು ಮುಂಚೂಣಿಗೆ ಬಿಟ್ಟು ಹಳೇ ಮೈಸೂರು ಜಿಲ್ಲೆಗಳಲ್ಲಿ ಪಕ್ಷ ಬಲವರ್ಧನೆಗೆ ವ್ಯೂಹ ರಚಿಸಿದೆ. ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರನ್ನೇ ಕರೆಸಿ ಉದ್ಘಾಟನೆ ಮಾಡಿಸುವ ಮೂಲಕ ವಕ್ಕಲಿಗ ಸಮುದಾಯಕ್ಕೆ ಪ್ರಬಲ ಸಂದೇಶ ಕೊಡಲು ಬಿಜೆಪಿ ಹೊರಟಿದೆ. ಈ ಸಂದೇಶ ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ ಅಲ್ಲಿನ ಪಟೇಲ್ ಸಮುದಾಯಕ್ಕೆ ನೀಡಿದ ಸಂದೇಶದಂತಿರಬೇಕು ಎಂಬುದು ಕಮಲನಾಯಕರ ಲೆಕ್ಕಾಚಾರವಾಗಿದೆ.
ಕಾಂಗ್ರೆಸ್ ಪಕ್ಷದತ್ತ ನಂಬಿಕೆ ಇಡದ ವಕ್ಕಲಿಗ ಪಡೆ
ಕಾಂಗ್ರೆಸ್ ಪಕ್ಷದ ಬಗ್ಗೆ ಇಂದಿಗೂ ವಕ್ಕಲಿಗ ಸಮುದಾಯಕ್ಕೆ ಇರುವ ಅಪನಂಬಿಕೆ ಹೋಗಿಲ್ಲ. 1999 ರ ಚುನಾವಣೆಯಲ್ಲಿ ಎಸ್.ಎಂ. ಕೃಷ್ಣ ಅವರು ಚುನಾವಣೆ ಸಾರಥ್ಯ ವಹಿಸಿ ಪಾಂಚಜನ್ಯ ಮೊಳಗಿಸಿದ ಕಾರಣಕ್ಕೆ ವಕ್ಕಲಿಗ ಸಮುದಾಯ ಅವರನ್ನು ಹಿಂಬಾಲಿಸಿ ಹೋಗಿತ್ತು. ಜನತಾ ದಳ ವಿಭಜನೆಯಿಂದ ರಾಜಕೀಯ ಅಸ್ಥಿರತೆಗೆ ಸಿಲುಕಿರುವ ದೇವೇಗೌಡರ ಹಿಂದೆ ಹೋಗುವುದಕ್ಕಿಂತ ಕಾಂಗ್ರೆಸ್ ಸೈನ್ಯ ಮುನ್ನಡೆಸುತ್ತಿರುವ ಕೃಷ್ಣ ಬೆನ್ನಿಗೆ ನಿಲ್ಲುವುದೇ ಶ್ರೇಯಸ್ಕರ ಎಂದು ವಕ್ಕಲಿಗ ಸಮುದಾಯ ಭಾವಿಸಿತ್ತು. ಪರಿಣಾಮ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. 2004 ರಲ್ಲಿ ಮತ್ತೆ ದೇವೇಗೌಡರು ಪ್ರಬಲರಾಗುತ್ತಲೇ ಯಥಾಪ್ರಕಾರ ಅವರನ್ನು ಅಪ್ಪಿಕೊಂಡಿತ್ತು. ಅದಾದ ನಂತರ 2008, 2013, 2018 ರ ಚುನಾವಣೆಗಳಲ್ಲಿ ವಕ್ಕಲಿಗ ಪಡೆ ಜೆಡಿಎಸ್ ಪರ ಬಲವಾಗಿ ನಿಂತ ಕಾರಣಕ್ಕಾಗಿಯೇ ಆ ಪಕ್ಷದ ಅಸ್ಥಿತ್ವ ಉಳಿದಿತ್ತು.

ಈ ನಡುವೆ 2013 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ವಕ್ಕಲಿಗ ವಿರೋಧಿ ಎಂಬಂತೆ ಬಿಂಬಿತವಾದರು. 2018 ರಲ್ಲಿ ಅಳಿದುಳಿದ ವಕ್ಕಲಿಗ ಸಮುದಾಯವೂ ಕಾಂಗ್ರೆಸ್ ಪಕ್ಷದಿಂದ ವಿಮುಖವಾಯಿತು. ಇದರಿಂದ ಮಂಡ್ಯ, ಹಾಸನ, ತುಮಕೂರು, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಜೆಡಿಎಸ್ ನೆಲೆಗಳನ್ನು ಉಳಿಸಿಕೊಂಡಿತು. ನಂತರ ಈಗ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಸಾರಥ್ಯ ನೀಡಿದರೂ ವಕ್ಕಲಿಗ ಪಡೆ ಕಾಂಗ್ರೆಸ್ ಪಕ್ಷವನ್ನು ನಂಬುವ ಸ್ಥಿತಿಯಲ್ಲಿಲ್ಲ. ಡಿಕೆಶಿ ನೋಡಿ ಮತ ಕೊಟ್ಟರೆ ಮುಖ್ಯಮಂತ್ರಿ ಆಗುವುದು ಸಿದ್ದರಾಮಯ್ಯ ಎಂಬ ಭಾವನೆ ಆ ಸಮುದಾಯದಲ್ಲಿದೆ.

ಹೀಗಾಗಿ ವಕ್ಕಲಿಗ ಕೋಟೆಯಲ್ಲಿ ಈ ಸಲ ಜೆಡಿಎಸ್-ಬಿಜೆಪಿ ನಡುವೆಯೇ ಕಾಳಗ ಎಂಬಂತ ವಾತಾವರಣ ನಿರ್ಮಾಣವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅಧಿಕಾರದ ಕನಸಿಗೆ ಎರವಾಗುವ ಆಗಿದೆ. ಒಟ್ಟಾರೆ ಕೆಂಪೇಗೌಡರ ಮತಬುಟ್ಟಿಗೆ ಬಿಜೆಪಿ ಕೈ ಹಚ್ಚಿ ಲಾಭದ ಹಾದಿಯಲ್ಲಿರುವಂತೆ ತೋರುತ್ತಿರುವುದು ಮಾತ್ರ ದಿಟ.