ನಿರ್ದೇಶಕ ಆರ್. ಚಂದ್ರು ಅವರಿಗೆ ಬೆಳಗಾನ ಎದ್ದು ಪೇಪರು, ಟೀವಿ, ಮೊಬೈಲಲ್ಲಿ ತಮ್ಮ ಕುರಿತಾದ ಸುದ್ದಿ ಕಾಣಿಸದಿದ್ದರೆ ದಿನ ಆರಂಭವಾಗೋದೇ ಇಲ್ಲವಾ? ಪತ್ರಕರ್ತರಿಗಂತೂ ಕಬ್ಜ ಸಿನಿಮಾದ ಕುರಿತಾಗಿ ಸುದ್ದಿ ಬರೆದೂ ಬರೆದೂ ಸಾಕಾಗಿ ಹೋಗಿದೆ. ಸಿನಿಮಾವೊಂದನ್ನು ಶುರು ಮಾಡಿ, ವಾರಕ್ಕೊಂದು ಪೋಸ್ಟರು ಬಿಟ್ಟು, ದಿನಕ್ಕೊಂದು ನ್ಯೂಸು ನಿರೀಕ್ಷಿಸೋದು ಚಂದ್ರು ಗುಣ. ಕುಂತರೂ ನಿಂತರೂ ಪ್ರಚಾರ ಬಯಸುವ ಚಂದ್ರು ಹೆಸರು ಕೇಳಿದರೇನೇ ಮೀಡಿಯಾದವರಿಗೆ ರೇಜಿಗೆ ಹುಟ್ಟುವಂತಾಗಿರುತ್ತದೆ. ಏನೂ ಸುದ್ದಿ ಸಿಗದೇ ಹೋದರೆ ಖುದ್ದು ಪ್ಲಾನು ಮಾಡಿ, ತಾವೇ ಒಂದು ವಿವಾದದ ರೀತಿಯಲ್ಲಿ ಏನಾದರೊಂದು ಸುದ್ದಿ ಹುಟ್ಟುಹಾಕುವ ಮಟ್ಟಿಗೆ ಈ ವ್ಯಕ್ತಿಯ ಮನಸ್ಥಿತಿ ಹಡಾಲೆದ್ದಿದೆ!

ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ಕಿಚ್ಚ ಸುದೀಪ ನಟಿಸುತ್ತಿದ್ದಾರೆ ಅನ್ನೋದು ಹಳೇ ನ್ಯೂಸು. ಸುದೀಪ್ ನಟಿಸುತ್ತಿಲ್ಲ ಅಂತಾ ಯಾರೂ ಹೇಳೇ ಇಲ್ಲ. ಸದ್ಯ ವಿಕ್ರಾಂತ್ ರೋಣ ಟ್ರೆಂಡಿAಗ್‌ನಲ್ಲಿದೆ. ಈ ಹೊತ್ತಿನಲ್ಲಿ ಸುದೀಪ್ ಮತ್ತು ತಮಗೆ ಸಂಬAಧಿಸಿದ ವಿಚಾರ ಹರಿಬಿಟ್ಟರೆ ಜನರಿಗೆ ರೀಚ್ ಆಗುತ್ತದೆ ಅನ್ನೋದು ಬಹುಶಃ ಚಂದ್ರನ ಪ್ಲಾನಿರಬೇಕು. ʻʻಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ “ಸುದೀಪ್” ಅವರು “ಕಬ್ಜ” ಚಿತ್ರತಂಡದಿAದ ಹೊರಗೆ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ, ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ಶ್ರೀ “ಕಿಚ್ಚ ಸುದೀಪ್” ಅವರು ಈಗಾಗಲೇ “ಕಬ್ಜ” ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರು ಕಿವಿ ಕೊಡಬಾರದು.ʼʼ ಎಂದು ಚಂದ್ರು ಟ್ವೀಟ್ ಮಾಡಿದ್ದಾರೆ.

ಅಸಲಿಗೆ, ಕಿಚ್ಚ ಕಬ್ಜದಲ್ಲಿ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಕಬ್ಜಕ್ಕೆ ಹೆಚ್ಚು ಖರ್ಚು ಮಾಡಿದ್ದಾರೆ. ಏಳಲ್ಲ, ಎಪ್ಪತ್ತು ಲಾಂಗ್ವೇಜಲ್ಲಿ ರಿಲೀಸ್ ಮಾಡಿದರೂ ಸದ್ಯ ಉಪೇಂದ್ರನಿಗಿರುವ ಮಾರ್ಕೆಟ್ಟಲ್ಲಿ ಅಷ್ಟೊಂದು ಹಣ ತೆಗೆಯುವುದು ಕಷ್ಟ. ಹೀಗಾಗಿ ಸುದೀಪ್‌ಗಾಗಿ ವಿಶೇಷ ಪಾತ್ರವೊಂದನ್ನು ಸೃಷ್ಟಿಸಿ ಒಪ್ಪಿಸಿದ್ದರು. ಕಿಚ್ಚ ಸುದೀಪ ಜಗತ್ ಕಿಲಾಡಿ. ಈ ಇಪ್ಪತ್ತೈದು ವರ್ಷಗಳಲ್ಲಿ ಚಂದ್ರು ಥರದ ನೂರಾರು ಜನರನ್ನು ನೋಡಿದ್ದಾರೆ. ಹೆಸರಿಗೆ ಅತಿಥಿ ಪಾತ್ರ ಕೊಟ್ಟು, ಇಡೀ ಸಿನಿಮಾದ ಹೀರೋ ಎನ್ನುವಂತೆ ಬಿಂಬಿಸಿಕೊಳ್ಳುತ್ತಾರೆ ಅನ್ನೋದು ಸುದೀಪ್‌ಗೆ ಗೊತ್ತು. ಹೀಗಾಗಿ ಅಗ್ರಿಮೆಂಟಿನಲ್ಲೇ ʻನನ್ನ ಫೋಟೋವನ್ನು ಯಾವ ಪಬ್ಲಿಸಿಟಿಯಲ್ಲೂ ಬಳಸಬಾರದುʼ ಅಂತಾ ಕರಾರು ವಿಧಿಸಿದ್ದರು. ಇದು ಚಂದ್ರುಗೆ ನುಂಗಲಾರದ ತುತ್ತಾಗಿತ್ತು. ಈವರೆಗೂ ಸುದೀಪ್ ಸ್ಟಿಲ್ ಅನ್ನು ಯಾವ ಪಬ್ಲಿಸಿಟಿ ಡಿಸೈನಿನಲ್ಲೂ ಬಳಸಿಲ್ಲ. ಬದಲಿಗೆ ಕಿಚ್ಚನನ್ನು ಹೋಲುವ ಚಿತ್ರ ಬರೆಸಿ ಬಳಸಿಕೊಂಡಿದ್ದಾರೆ.

ಈಗ ಕಿಚ್ಚನನ್ನು ಬಳಸಿಕೊಂಡು ಮತ್ತೊಂದು ರೌಂಡು ನ್ಯೂಸು ಮಾಡಿಸಿಕೊಳ್ಳಲು ಹೊಸಾ ಐಡಿಯಾ ಶುರು ಮಾಡಿದ್ದಾರೆ!