29.2 C
Bengaluru
Sunday, March 19, 2023
spot_img

ಎಲ್ಲಿಗೆ ಪಯಣ.. ಯಾವುದೋ ಹಾದಿ…

-ಬಾಲಾಜಿ ದೊಡ್ಡಬಳ್ಳಾಪುರ

ಕಾಲಚಕ್ರ ಉರುಳಿದೆ. ಮತ್ತೊಂದು ವರ್ಷ ಉದಯಿಸಿದೆ. ಹೊಸ ವರ್ಷಕ್ಕೆ ಸವಾಲುಗಳ ಸರಮಾಲೆಯ ಸ್ವಾಗತ ಸಿಕ್ಕಿದೆ. ಆರ್ಥಿಕ ಹಿಂಜರಿಕೆಯ ಕಾರ್ಮೋಡಗಳು ಎಲ್ಲ ದೇಶಗಳ ಮೇಲೆ ಕವಿಯುತ್ತದೆ ಎಂಬುದನ್ನು ಎಲ್ಲರೂ ಹೇಳುತ್ತಿದ್ದಾರೆ. ಇದರ ಜತೆ ಭಾರತದಲ್ಲಿ ಕೋವಿಡ್ ಕೊರೊನಾ ವೈರಸ್‌ನ ಬಿಎಫ್.7 ಎಂಬ ರೂಪಾಂತರ ತಳಿ ಮತ್ತೆ ಅವತಾರ ಎತ್ತಲಿದೆ ಎಂಬ ಭಯವನ್ನು ಕೆಲ ಮಾಧ್ಯಮಗಳು ಲೆಕ್ಕಾಚಾರದಿಂದ ಹಬ್ಬಿಸುತ್ತಿವೆ. ಭಾರತದ ಆರ್ಥಿಕ ಸ್ಥಿತಿಗತಿಗಳ ಬಗ್ಗೆಯೂ ಆತಂಕವಿದೆ. ಆರ್ಥಿಕ ಹಿಂಜರಿಕೆಯ ಅಪ್ಪಳಿಸುವಿಕೆ ಭಾರತದ ಎಲ್ಲರನ್ನೂ ಚಿತ್ ಮಾಡಿಬಿಡುತ್ತದೆ ಎಂಬುದಕ್ಕೂ ಕೂಡ ಪಕ್ಕಾ ಆಧಾರಗಳಿಲ್ಲ ಎಂದು ವಿತ್ತ ತಜ್ಞರು ಹೇಳಿದರೂ ಕೋವಿಡ್ ಏನು ಮಾಡುತ್ತದೆ ಎಂಬುದಷ್ಟೇ ಅದನ್ನು ನಿರ್ಧರಿಸಬೇಕಿದೆ. ರಾಜಕೀಯವಾಗಿ ಬಂದರೆ, ಈ ವರ್ಷ ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆಗಳಿಗೆ ಚುನಾವಣೆ ಜರುಗಲಿದೆ ಈ ಚುನಾವಣೆಗಳು 2024 ರ ಸಂಸತ್ ಚುನಾವಣೆಗೆ ದಿಕ್ಸೂಚಿಯಾಗಿ ಭಾರತ ಭವಿಷ್ಯ ಬರೆಯಲಿವೆ. ಒಟ್ಟಾರೆ ಹೊಸ ವರ್ಷದ ಪಯಣ ಎಲ್ಲಿಗೆ.. ಯಾವುದು ಹಾದಿ… ನೋಡೋಣ ಬನ್ನಿ.

2022ರಲ್ಲಿ ಕೋವಿಡ್ ಕಾಲ್ತೆಗೆಯಿತು. ಹಳಿ ತಪ್ಪಿದ ಎಲ್ಲವನ್ನೂ ಹಳಿಗೆ ಮರಳಿಸುವ ಕಾರ್ಯ ವೇಗ ಪಡೆಯುತ್ತಿದ್ದಂತೆಯೇ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಆರಂಭಿಸಿದ್ದೇ ಯುರೋಪ್ ಎರಡನೇ ಮಹಾಯುದ್ಧದಲ್ಲಿ ಎದುರಿಸಿದ್ದ ಸಂಕಟಗಳನ್ನು ಮತ್ತೆ ಸುತ್ತಿಕೊಂಡಂತಾಯ್ತು. ಆರ್ಥಿಕ ಸಂಕಷ್ಟದ ಅಲೆಗಳು ಜಗತ್ತಿನಾದ್ಯಂತ ಬಡಿಯಲು ಆರಂಭಿಸಿತು. ಮುನ್ನಡೆ ಮತ್ತು ಹಿನ್ನಡೆ ಎರಡೂ ಒಟ್ಟಿಗೆ ಆಗುವ ಸ್ಥಿತಿ 2023ರಲ್ಲೂ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ.

ಆರ್ಥಿಕ ಹಿಂಜರಿಕೆಯ ಕಾರ್ಮೋಡಗಳು ಎಲ್ಲ ದೇಶಗಳ ಮೇಲೆ ಕವಿಯುತ್ತದೆ ಎಂಬುದನ್ನು ಎಲ್ಲರೂ ಹೇಳುತ್ತಿದ್ದಾರೆ. ಇದರ ಜತೆ ಭಾರತದಲ್ಲಿ ಕೋವಿಡ್ ಕೊರೊನಾ ವೈರಸ್‌ನ ಬಿಎಫ್.7 ಎಂಬ ರೂಪಾಂತರ ತಳಿ ಮತ್ತೆ ಅವತಾರ ಎತ್ತಲಿದೆ ಎಂಬ ಭಯವನ್ನು ಕೆಲ ಮಾಧ್ಯಮಗಳು ಲೆಕ್ಕಾಚಾರದಿಂದ ಹಬ್ಬಿಸುತ್ತಿವೆ. ಇದರ ಹಿಂದೆ ಮೆಡಿಕಲ್ ಮಾಫಿಯಾ ಸಕ್ರಿಯವಾಗಿದೆ. ರಾಜಕಾರಣಿಗಳು, ದಲ್ಲಾಳಿಗಳು ಕೂಡ ಖಜಾನೆ ಮೂಟೆಗಳತ್ತ ನೋಡುತ್ತಿದ್ದಾರೆ. 2022ರಲ್ಲಿ ನಿವಾರಣೆಯಾಗಿದ್ದ ಆತಂಕ ಈಗ ಮತ್ತೆ ತನ್ನ ವ್ಯಾಘ್ರ ಮುಖವನ್ನು ತೋರಿಸತೊಡಗಿದೆ. ಲಸಿಕೆ, ಜೀವನ ಶೈಲಿಯಲ್ಲಿ ಮಾರ್ಪಾಡು ಮೊದಲಾದ ಉಪಕ್ರಮಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಿದೆ. ಪ್ರತಿಕಾಯ (ಆ್ಯಂಟಿ ಬಾಡಿಸ್)ಗಳು ಹೆಚ್ಚಿ ರೂಪಾಂತರ ವೈರಸ್‌ಗಳು ತಮ್ಮ ಬಲ ತೋರಿಸಲು ಆಗುವುದಿಲ್ಲ ಎಂಬ ಆಶಾವಾದವನ್ನು ಭಯವೆಂಬ ಬಿಸ್ನೆಸ್‌ನಲ್ಲಿ ತೊಡಗದ ಅಪರೂಪದ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸಂಕಷ್ಟ ಕಾಲದಲ್ಲಿ ಮಾನವೀಯತೆಗಿಂತ ಕಾಮನೆಗಳಿಗೆ ದಾಸರಾಗಿ ಥೈಲಿವಾಲಾಗಳಾಗುವ ವೈದ್ಯರೇ ಹೆಚ್ಚಿದ್ದಾರೆ ಎಂಬುದು ಈಗಾಗಲೇ ರುಜುವಾತಾಗಿದೆ. ಇವರನ್ನು ಮಾದರಿಯಾಗಿಸಿಕೊಂಡು ಬೆಲೆ ಏರಿಸಿರುವ ಪಾಷಾಂಡಿಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಇಂಥ ಸನ್ನಿವೇಶದಲ್ಲೂ ಅಲ್ಬಟ್ ಕಮೂ ಬರೆದ ದಿ ಪ್ಲೇಗ್ ಕಾದಂಬರಿಯಲ್ಲಿ ಬರುವ ಡಾ. ರಿಯೋರಂಥ ಅಸಲಿ ವೈದ್ಯರು ಈಗ ಹಬ್ಬಿರುವ ಸುಳ್ಳು ಕಾರ್ಮೋಡಗಳನ್ನು ದೂರ ಸರಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ನಿಟ್ಟಿನಿಂದ ನೋಡಿದಾಗ ಭಾರತ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಂಭವ ತುಂಬ ಕಡಿಮೆ. ಪ್ರಗತಿಯತ್ತ ದೈತ್ಯ ಹೆಜ್ಜೆ ಇಡುವ ಭಾರತವನ್ನು ಹಿಂದಿಕ್ಕುವ ಚೀನಾದ ಹುನ್ನಾರವನ್ನು ಕೂಡ ಹಲವು ತಜ್ಞರು ಈಗಾಗಲೇ ತೆರೆದಿಟ್ಟಿದ್ದಾರೆ.

ಇನ್ನು ಆರ್ಥಿಕ ಹಿಂಜರಿಕೆಯ ಅಪ್ಪಳಿಸುವಿಕೆ ಭಾರತದ ಎಲ್ಲರನ್ನೂ ಚಿತ್ ಮಾಡಿಬಿಡುತ್ತದೆ ಎಂಬುದಕ್ಕೂ ಕೂಡ ಪಕ್ಕಾ ಆಧಾರಗಳಿಲ್ಲ. ಪರಿಸ್ಥಿತಿ ಹದಗೆಟ್ಟರೂ ಎಲ್ಲರ ಕೈಗೂ ಭಿಕ್ಷಾಪಾತ್ರೆ ಬರುವ ಸನ್ನಿವೇಶ ಉಂಟಾಗದು ಎಂಬುದಕ್ಕೆ ಜ್ಯೋತಿಷಿಗಳನ್ನು ಕೇಳಬೇಕಾಗಿಲ್ಲ. ಇಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿದಾಗ ಇದು ಅರಿವಾಗುತ್ತದೆ. ಜಾಗತಿಕ ಸವಾಲುಗಳನ್ನು ಆಳವಾಗಿ ಗಮನಿಸಿ ಕೂಡ ನಮ್ಮ ಆಶಾವಾದವನ್ನು ಕಾಯ್ದುಕೊಳ್ಳಲು ಬೇಕಾದ ಸ್ಟಾಕಿ ಸ್ಪಿರಿಟ್ ಇದ್ದೇ ಇದೆ. ಇನ್ನು  ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ಚಂಡಮಾರುತ ಹಾವಳಿಯಿಂದ 2022ರಲ್ಲಿ ವರ-ಶಾಪ ಎರಡೂ ಆಗಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೂ ಕೃಷಿಯಲ್ಲಿ ನಮ್ಮ ನಡೆ ಆಶಾದಾಯಕವಾಗಿಯೇ ಇದೆ. ಒಟ್ಟಾರೆ ನೂತನ ವರ್ಷದ ಗತಿ ನಮ್ಮ ಜೀವನದ ದೋಣಿಯನ್ನು ಹೇಗೆ ಸಾಗಿಸುತ್ತದೆ ಎಂಬುದನ್ನು ಗಮನಿಸೋಣ

ಆರ್ಥಿಕ ನಡೆ ಎತ್ತ ಕಡೆ?

ಅಲ್ಪಾವಧಿಯ ಅವಕಾಶಗಳು ಹೆಚ್ಚಲಿವೆ. ಪ್ರತಿಭೆಯನ್ನು ಪೋಷಿಸುವುದು, ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳನ್ನು ಒದಗಿಸುವತ್ತ ಕಂಪನಿಗಳು ಗಮನಹರಿಸಲಿವೆ ಎನ್ನಲಾಗಿದೆ. ದೂರ ಸಂಪರ್ಕ ಹಾಗೂ ಸೇವಾ ವಲಯಗಳು ಹೊಸ ವರ್ಷದಲ್ಲಿ ಪಿಂಕ್ ಸ್ಲಿಪ್ ಬದಲು ಆಫರ್ ಲೆಟರ್‌ಗಳ ಹಂಗಾಮನ್ನು ಆರಂಭಿಸಲಿವೆ. 2023 ರ ಪ್ರಮುಖ ನೇಮಕಾತಿಗಳ ಟ್ರೆಂಡ್ ಹೇಗಿರುತ್ತದೆ ಎಂದರೆ ಪ್ರತಿಭೆಗಳ ಆಂತರಿಕ ಚಲನಶೀಲತೆಯನ್ನು ಹೆಚ್ಚಿಸುವತ್ತ ಕಂಪನಿಗಳು ಹೆಚ್ಚು ಗಮನ ನೀಡಲಿವೆ ಎಂಬುದು ತಜ್ಞರ ಅಭಿಮತ.

2022ರ ದ್ವಿತೀಯಾರ್ಧದಲ್ಲಿ ಸಾಮೂಹಿಕ ವಜಾ, ನೇಮಕ ಸ್ಥಗತಿ ಮುಖ್ಯವಾಗಿತ್ತು. 23ರಲ್ಲಿ ಇದೆಲ್ಲವೂ ಅಡಗಿ, ಹೊಸ ನವೋದಯವಾಗುತ್ತದೆ ಎಂದೇನೂ ಇಲ್ಲ. ಆದರೆ ಇದೊಂದು ರೀತಿಯಲ್ಲಿ ಬೇಕಾದ್ದು ಬೇಡವಾದದ್ದು–ಎಲ್ಲವನ್ನೂ ತುಂಬಿಕೊಂಡ ಚೀಲ (ಮಿಕ್ಸೆಡ್ ಬ್ಯಾಗ್). ಸುಲಭ ವಿಂಗಡಣೆ ಕೈಲಾಗದು.

2022ರಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ವಿವಿಧ ಪ್ರವೃತ್ತಿಗಳು ಹೊರಹೊಮ್ಮಿದ್ದವು, ಇದರಲ್ಲಿ ರಿಸ್ಕಿಲ್ ಮತ್ತು ಹೊಸ ಕೌಶಲ್ಯ ಉಪಕ್ರಮಗಳಿಗೆ ಒತ್ತು ನೀಡಲಾಯಿತು. ಮತ್ತು ಈ ಪ್ರವೃತ್ತಿಗಳು 2023 ರಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ, ಕಂಪನಿಗಳು ಪಾರಂಪರಿಕ ಕೌಶಲ್ಯಗಳಿಗೆ ಹೋಲಿಸಿದರೆ ಸಂಬಂಧಿತ ಕೌಶಲ್ಯಗಳಿಗೆ ಹೆಚ್ಚಿನ ಬೆಲೆ ಪಾವತಿಸಲು ಸಿದ್ಧವಾಗಿವೆ. ಕಳೆದ ವರ್ಷ (2021) ಅಕ್ಟೋಬರ್‌ಗೆ ಹೋಲಿಸಿದರೆ ಟೆಕ್ ಉದ್ಯಮದಲ್ಲಿ ನೇಮಕವು ಶೇಕಡಾ 18 ರಷ್ಟು ಕಡಿಮೆ (ನೌಕ್ರಿ ರಿಸರ್ಚ್) ಇತ್ತು.  ಹೊಸ ವರ್ಷವು ಇನ್ನೂ ಹೆಚ್ಚಿನ ಬಂಡಾಯದ ಆಘಾತಗಳನ್ನು ತರುವುದಿಲ್ಲ ಎಂದು ನಿರೀಕ್ಷಿಸಲಾಗುವುದಿಲ್ಲ, ಏಕೆಂದರೆ ಸಂಸ್ಥೆಗಳು ಈಗಾಗಲೇ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡಿವೆ ಎಂದು ತೋರುತ್ತದೆ.

ಆರ್ಥಿಕ ಹಿಂಜರಿತದ ಭೀತಿಯ ನಡುವೆ ಕೂಡ ಮೆಟಾ, ಟ್ವಿಟರ್, ಮೈಕ್ರೋಸಾಫ್ಟ್, ಸ್ನಾಪ್ ಚಾಟ್ ಮತ್ತು ಇತರ ಅನೇಕ ಟೆಕ್ ಸಂಸ್ಥೆಗಳು ಭಾರಿ ಉದ್ಯೋಗ ಕಡಿತವನ್ನು ಘೋಷಿಸಿದ ನಂತರ, ಭಾರತೀಯ ಉದ್ಯೋಗ ಮಾರುಕಟ್ಟೆ, ವಿಶೇಷವಾಗಿ ಐಟಿ ಸೇವೆ ಜ್ವಾಲಾಮುಖಿ ತಾಪ ಅನುಭವಿಸತೊಡಗಿವೆ.

“ಸಾಮೂಹಿಕವಾಗಿ ಕೆಲಸದಿಂದ ತೆಗೆದುಹಾಕುವಿಕೆ, ನೇಮಕಾತಿ ಸ್ಥಗಿತ ಮತ್ತು ಮುಂಬರುವ ಆರ್ಥಿಕ ಹಿಂಜರಿತದೊಂದಿಗೆ ನಡೆಯುತ್ತಿರುವ ಜಾಗತಿಕ ಪ್ರಕ್ಷುಬ್ಧತೆಯು ಸೇವಾ ವಲಯದ ಮೇಲೆ, ವಿಶೇಷವಾಗಿ ಐಟಿ ಉದ್ಯಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಆದಾಗ್ಯೂ, ಭಾರತದಲ್ಲಿ ಭಾವ ಖಿನ್ನತೆಗಿಂತ ಮೇಲ್ಮುಖ ಉತ್ಕರ್ಷ ಕಾಣಿಸುತ್ತಿದೆ. ಶೇಕಡಾ 33 ರಷ್ಟು ಉದ್ಯೋಗದಾತರು ಹೆಚ್ಚಿನ ನೇಮಕಾತಿ ದೃಷ್ಟಿಕೋನವನ್ನು ಹೊಂದಿದ್ದಾರೆ,’’ ಎನ್ನುತ್ತಾರೆ   ಎಂದು ಟೀಮ್‌ಲೀಸ್ ಸರ್ವೀಸ್‌ನ ಚೀಫ್ ಬಿಸ್ನೆಸ್ ಆಫೀಸರ್ ಮಯೂರ್ ಟಾಡೆ. ಎಫ್‌ಡಿಐ ಸುಧಾರಣೆ, “ಸಾಂಪ್ರದಾಯಿಕ ಉಪಗ್ರಹ ಸಂವಹನ ವಲಯದ ಉದಾರೀಕರಣ, ದೂರ ಸಂವೇದಿ ವಲಯಗಳತ್ತ(ರಿಮೋಟ್ ಸೆನ್ಸಿಂಗ್) ಖಾಸಗಿ ಪಾಲುದಾರಿಕೆ ಹೆಚ್ಚಳದಂಥ ಕೇಂದ್ರ ಸರಕಾರದ ಕ್ರಮಗಳು ಉದ್ಯೋಗ ಬೆಳವಣಿಗೆಗೆ ಕಾರಣವಾಗಿದೆ,’’ ಎಂದು ಟಾಡೆ ಆಶಾವಾದ ವ್ಯಕ್ತಪಡಿಸುತ್ತಾರೆ.

ಬಂಡವಾಳ ವೆಚ್ಚದ ತೀವ್ರ ಹೆಚ್ಚಳದ ಮೂಲಕ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳು 2023 ರಲ್ಲಿಯೂ ಬೆಳವಣಿಗೆಯ ವೇಗವನ್ನು ಹಾಗೆಯೇ ಉಳಿಸಿಕೊಳ್ಳುವ ನಿರೀಕ್ಷೆಯನ್ನು ಹಲವು ಉದ್ಯಮ ತಜ್ಞರು ಹೊಂದಿದ್ದಾರೆ.

ರಪ್ತು ಏರಿಕೆ ಹಾದಿ

2021-22ರಲ್ಲಿ ಭಾರತದ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 422 ಬಿಲಿಯನ್ ಡಾಲರ್ ತಲುಪಿರಬಹುದು ಆದರೆ ಪ್ರಮುಖ ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿನ ಆರ್ಥಿಕ ಹಿಂಜರಿತ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಭೌಗೋಳಿಕ-ರಾಜಕೀಯ ಬಿಕ್ಕಟ್ಟು 2023 ರಲ್ಲಿ ದೇಶದ ಹೊರಹೋಗುವ ಸಾಗಣೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಹದಗೆಡುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿಶ್ವ ವ್ಯಾಪಾರ ಸಂಸ್ಥೆ 2023 ರಲ್ಲಿ ಜಾಗತಿಕ ವ್ಯಾಪಾರವು ಕೇವಲ ಶೇ.1 ರಷ್ಟು ಮಾತ್ರ ಬೆಳೆಯುತ್ತದೆ ಎಂದು ಅಂದಾಜಿಸಿದೆ. ಆದಾಗ್ಯೂ ಭಾರತವು ಇಲ್ಲಿಯವರೆಗೆ ರಫ್ತುಗಳಲ್ಲಿ ಬೆಳವಣಿಗೆಯ ದರವನ್ನು ಕಾಯ್ದುಕೊಂಡಿದೆ. ಸೇವಾ ವಲಯದ ರಫ್ತುಗಳಲ್ಲಿನ ಆರೋಗ್ಯಕರ ಬೆಳವಣಿಗೆಯು 2023 ರಲ್ಲಿ ದೇಶದ ಒಟ್ಟಾರೆ ಹೊರಹೋಗುವ ಸಾಗಣೆಗೆ ಸಹಾಯ ಮಾಡುತ್ತದೆ ಎಂದೇ ಎಲ್ಲರೂ ನಂಬಿದ್ದಾರೆ. 2021-22 ರಲ್ಲಿ ಸೇವೆಗಳ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 254 ಬಿಲಿಯನ್ ಡಾಲರ್‌ಗೆ ಮುಟ್ಟಿತ್ತು. ಇದು ಹೊಸ ವರ್ಷದಲ್ಲಿ ಕುಸಿಯಲಾರದು. 

ಜಾಗತಿಕ ವ್ಯಾಪಾರದಲ್ಲಿ ನಮ್ಮ ಪಾಲು ಇನ್ನೂ ಶೇ. 2 ಕ್ಕಿಂತ ಕಡಿಮೆ ಇದೆ ಮತ್ತು ಆದ್ದರಿಂದ, ಜಾಗತಿಕ ವ್ಯಾಪಾರ ಗ್ರಾಫ್ ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರಬಾರದು ಎಂಬ ಅಂಶದ ಬಗ್ಗೆ ನಮಗೆ ಅರಿವಿದೆ. ಇದಲ್ಲದೆ, ಕೆಲವು ಸಕಾರಾತ್ಮಕ ಬೆಳವಣಿಗೆಗಳು 2023 ರಲ್ಲಿ ಭಾರತಕ್ಕೆ ಸಹಾಯ ಮಾಡುತ್ತವೆ

ಎಂದು ತಜ್ಞರು ಘೋಷಿಸಿದ್ದಾರೆ. ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ಇತ್ತೀಚೆಗೆ ಅಂತಿಮಗೊಳಿಸಲಾದ ಮುಕ್ತ ವ್ಯಾಪಾರ ಒಪ್ಪಂದಗಳ ಪರಿಣಾಮಕಾರಿ ಬಳಕೆಯು ಮುಂಬರುವ ತಿಂಗಳುಗಳಲ್ಲಿ ರಫ್ತು ಬೆಳೆಯಲು ಸಹಾಯ ಮಾಡುತ್ತದೆ. ಮುಂಬೈ ಮೂಲದ ರಫ್ತುದಾರ ಮತ್ತು ಟೆಕ್ನೋಕ್ರಾಫ್ಟ್ ಇಂಡಸ್ಟ್ರೀಸ್ ಅಧ್ಯಕ್ಷ ಶಾರದಾ ಕುಮಾರ್ ಸರಾಫ್, ಯುರೋಪ್, ಅಮೆರಿಕ  ಮತ್ತು ಜಪಾನ್ ಸೇರಿದಂತೆ ಎಲ್ಲಾ ಪ್ರಮುಖ ಆರ್ಥಿಕತೆಗಳು ಆರ್ಥಿಕ ಹಿಂಜರಿತದ ಚಿಹ್ನೆಗಳನ್ನು ತೋರಿಸುತ್ತಿದ್ದರೂ, ಭಾರತದ ರಫ್ತು 2023 ರಲ್ಲಿ ಇನ್ನೂ ಶೇ 8-10 ರಷ್ಟು ಬೆಳವಣಿಗೆಯನ್ನು ಸಾಧಿಸುವ ಸಾಧ್ಯತೆಯಿದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ. ಈ ಸಂಗತಿಗಳು ನಮ್ಮ ಆರ್ಥಿ-ಕತೆ ದುರಂತ ಅಂತ್ಯವಾಗುವುದಿಲ್ಲ ಎಂಬುದನ್ನು ನಿಖರವಾಗಿ ಹೇಳುತ್ತವೆ ಎಂಬುದನ್ನು ಮರೆಯಬಾರದು.

ರಾಜಕೀಯ ರೋಚಕ ಆಟ

ಈ ವರ್ಷ ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆಗಳಿಗೆ ಚುನಾವಣೆ ಜರುಗಲಿದೆ.

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಾಗಲೇ ಯಾತ್ರೆ ಪರ್ವ ಆರಂಭಿಸಿವೆ. ಬಿಜೆಪಿಯನ್ನು ಮತ್ತೆ ಅಧಿಕಾರದ ಕುರ್ಚಿಗೆ ಏರಿಸಲು ಪ್ರತೀವಾರ ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಬರುವ ನಿರೀಕ್ಷೆ ಇದೆ. ಜೆಡಿಎಸ್ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಪಂಚರತ್ನ ಯಾತ್ರೆ ಮಾಡುವುದರ ಮೂಲಕ ಜೆಡಿಎಸ್ ನಾಯಕ ಎಚ್‌ಡಿಕೆ, ತಮ್ಮನ್ನು ಅಧಿಕಾರಕ್ಕೆ ತಂದರೆ ಆಡಳಿತದ ಹೊಸ ಸಂಸ್ಕೃತಿ ಆರಂಭಿಸುವ ಉದ್ಘೋಷ ಮಾಡುತ್ತಿದ್ದಾರೆ. ಜಿಎಸ್‌ಟಿ ಪಾಲಿನಲ್ಲಿ ವಂಚನೆ, ತೈಲ ಬೆಲೆ ಏರಿಕೆ, ಶೇ. 40 ಕಮೀಷನ್ ದಂಧೆ, ತೈಲಬೆಲೆ ಏರಿಕೆ, ಇಂದಿರಾ ಕ್ಯಾಂಟೀನ್‌ಗೆ ಬಾಗಿಲು, ನೌಕರಶಾಹಿ ಜಡತೆ ಮೊದಲಾದ ವಿಷಯಗಳನ್ನು ಮುಂಚೂಣಿಗೆ ತಂದಿರುವ ಕಾಂಗ್ರೆಸ್, ರಾಹುಲ್ ಐಕ್ಯತಾ ಯಾತ್ರೆಯ ತೇಜಸ್ಸನ್ನು ಪಸರಿಸಿ ಅದನ್ನು ಗೆಲುವಾಗಿಸಲು ಹರ ಸಾಹಸ ಮಾಡುತ್ತಿದೆ. ಮೀಸಲು ಅಸ್ತ್ರವನ್ನು ಕಮಲದ ನಗುವಾಗಿಸುವ ಶತಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ನಮ್ಮ ಕ್ಲಿನಿಕ್, ಸಾಲ ಮನ್ನಾ, ರಿಯಾಯಿತಿ ಯೋಜನೆಗಳ ಮೂಲಕ ಮೋಡಿ ಮಾಡಲು ತೊಡಗಿದೆ. ಒಟ್ಟಾರೆ ವೇಗದ ಓಟದ ಈ ಪ್ರಯಾಣದಲ್ಲಿ ಒಂದು, ಎರಡರ ಅಂತರ ಕಡಿಮೆ. ಮೂರನೇ ಸ್ಥಾನಿಗಳು ಮಾತ್ರ ಗಜಗಟ್ಟಲೆ ಅಂತರದಲ್ಲಿರುತ್ತಾರೆ. ಅವರ ಹೆಗಲ ಮೇಲೆ ಕೈ ಹಾಕುವ ಅನಿವಾರ್ಯತೆ ಇದ್ದೇ ಇರುತ್ತದೆ ಎಂಬುದು ಬಹುತೇಕ ರಾಜಕೀಯ ಪಂಡಿತರ ಎಣಿಕೆ.

ಕರ್ನಾಟಕದಲ್ಲಿ ಓಡುವ ಅಶ್ವಗಳ ಖರೀದಿ ಎಂಬುದು ಪೊಲಿಟಿಕಲ್ ಕಲ್ಚರ್‌ನಂತೆ ಆಗಿದೆ. ಅದು ಮತ್ತೊಮ್ಮೆ ತನ್ನ ಇನ್ನಿಂಗ್ಸ್ ಆರಂಭಿಸುತ್ತದೆ. ಮುಖ ತಿರುಗಿಸಿದವರು ಅನಿವಾರ್ಯವಾಗಿ ದೋಸ್ತಿಗಳಾಗಬೇಕು. ದೋಣಿ ನಡೆಸಬೇಕು. ನಾವಿಕರು ಹೆಚ್ಚಿರುವುದರಿಂದ ಅದರ ದಿಕ್ಕು ದೆಸೆಗಳಿಗೆ ಪಕ್ಕಾ ಹಾದಿ ಇರುವುದಿಲ್ಲ. ಗೊಂದಲಗಳನ್ನು ನಿವಾರಿಸಿಕೊಂಡು ಆಡಳಿತ ಚುಕ್ಕಾಣಿಯನ್ನು ಯೋಗ್ಯ ಹಾದಿಯಲ್ಲಿ ಮುನ್ನೆಡೆಸುವ ಸವಾಲು ಸುಲಭದ್ದಲ್ಲ ಎಂಬುದು ಎಲ್ಲರಿಗೂ ಮನವರಿಕೆಯಾಗುವ ಸಂಗತಿ. ಮತ್ತೆ ಇಂಥ ಸವಾಲಿನತ್ತ ಎಲ್ಲರ ನೋಟವಿದೆ. 

ವಿಶ್ವಕಪ್ ಕ್ರಿಕೆಟ್ ಸವಾಲ್

2022 ಅಂತ್ಯಗೊಳ್ಳುತ್ತಿದ್ದಂತೆ ಟೀಮ್ ಇಂಡಿಯಾ ಬಿಡುವಿಲ್ಲದ ವೇಳಾಪಟ್ಟಿಗೆ ಸಜ್ಜಾಗುತ್ತಿದೆ. ಏಕದಿನ ವಿಶ್ವಕಪ್ 2023 ಹೊರತಾಗಿ, ಭಾರತೀಯ ಕ್ರಿಕೆಟ್ ತಂಡವು ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಕೆಲವು ಪ್ರಮುಖ ಸರಣಿಗಳನ್ನು ಹೊಂದಿದೆ. ಭಾರತೀಯ ಆಟಗಾರರು ಐಪಿಎಲ್ 2023 ರಲ್ಲಿಯೂ ಭಾಗವಹಿಸಲಿದ್ದಾರೆ, ನಂತರ ಅವರು ಏಷ್ಯಾ ಕಪ್ 2023ಗೆ ಅಣಿಯಾಗಲಿದ್ದಾರೆ.

ಏಕದಿನ ವಿಶ್ವಕಪ್ ಅಕ್ಟೋಬರ್ 10 ರಂದು ಪ್ರಾರಂಭವಾಗಿ ನವೆಂಬರ್ 26 ರಂದು ಕೊನೆಗೊಳ್ಳುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಏಕದಿನ ಪಂದ್ಯಗಳ ಸಂಖ್ಯೆ ಕಡಿಮೆಯಾಗಿದೆ. ಆದಾಗ್ಯೂ, ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಪ್ರಾರಂಭಿಸಿತು. ಪ್ರತಿ ಪಂದ್ಯದಲ್ಲೂ ಹತ್ತು ಪಾಯಿಂಟ್‌ಗಳನ್ನು ನೀಡಲಾಗುತ್ತದೆ ಮತ್ತು 2023 ರ ಏಕದಿನ ವಿಶ್ವಕಪ್‌ನಲ್ಲಿ ಪಂದ್ಯಾವಳಿಗೆ ಅರ್ಹತೆ ಪಡೆಯಲು ತಂಡಗಳಿಗೆ ಆ ಪಾಯಿಂಟ್‌ಗಳ ಅಗತ್ಯವಿದೆ. ಕಳೆದ ಬಾರಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಕಿರೀಟ ಧರಿಸಿತು. ಭಾರತ ಮೂರನೇ ಬಾರಿ ಇಂಥ ಸಾಹಸ ಮಾಡುವುದೇ ಎಂಬ ಲೆಕ್ಕಾಚಾರಗಳಿಗೆ ಕೊರತೆ ಇಲ್ಲ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles