ನೀರು ಎಂದರೆ ಅದು ಜೀವಜಲ. ನೀರಿಲ್ಲದೆ ಮನುಷ್ಯನ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ನೀರು ಇಲ್ಲದೆ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ. ಆದರೆ, ಆ ನೀರೇ ಈ ಹುಡುಗಿಗೆ ಕಂಟಕವಾಗಿ ಪರಿಣಮಿಸಿದೆ. ಈ ಸುದ್ದಿ ಅಚ್ಚರಿಯಾದರೂ ನಿಜ. ಅಮೆರಿಕದ ಅರಿಝೋನಾದಲ್ಲಿ ವಾಸಿಸುವ ಈ ಸುಂದರ ಯುವತಿ ಕಳೆದ ಎರಡು ವರ್ಷಗಳಿಂದ ನೀರನ್ನೇ ಕುಡಿದಿಲ್ಲವಂತೆ. ಇದಕ್ಕೆ ಕಾರಣ ನೀರು ಕುಡಿದರೆ ಈಕೆಗೆ ಆ್ಯಸಿಡ್ ಸೇವಿಸಿದ ಅನುಭವವಾಗುತ್ತಿದೆಯಂತೆ.

ಜಗತ್ತಿನಲ್ಲಿದ್ದಾರೆ ೧೦೦ಕ್ಕೂ ಹೆಚ್ಚು ರೋಗಿಗಳು
೧೫ ವರ್ಷದ ಅಬಿಗೈಲ್ ಬಾಲ್ಯದಿಂದಲೂ ಅಕ್ವಾಜೆನಿಕ್ ಉರ್ಟಿಕೇರಿಯಾ ಎಂಬ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾಳೆ. ವೈದ್ಯರ ಪ್ರಕಾರ ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ದೇಹದ ಮೇಲೆ ನೀರು ಬಿದ್ದರೆ ಅದು ಆ್ಯಸಿಡ್‌ನಂತೆಯೇ ಹಾನಿಯನ್ನುಂಟು ಮಾಡುತ್ತದಂತೆ. ಕಣ್ಣಿನಿಂದ ಬರುವ ಕಣ್ಣೀರು ಸಹ ರೋಗಿಗೆ ಅಲರ್ಜಿಯನ್ನುಂಟು ಮಾಡುತ್ತದಂತೆ. ಪ್ರಪಂಚದಾದ್ಯಂತ ಸುಮಾರು ೧೦೦ಕ್ಕೂ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ವರದಿಯಾಗಿದೆ.
ಈ ಕಾಯಿಲೆಯಿಂದಾಗಿ ಅಬಿಗೈಲ್ ಬೇಸಿಗೆಯಲ್ಲಿ ತನ್ನ ಮನೆಯಲ್ಲಿಯೇ ಬಂಧಿಯಾಗಿದ್ದಾಳೆ. ಇದಕ್ಕೆ ಕಾರಣ ಬೆವರುವಿಕೆಯಿಂದ ದೇಹಕ್ಕೆ ಹಾನಿಯುಂಟಾಗುತ್ತಿದೆ. ಬೆವರಿನಿಂದ ಉಂಟಾಗುವ ಅಲರ್ಜಿಯನ್ನು ತಪ್ಪಿಸಲು ಅಬಿಗೈಲ್ ಮನೆಯಲ್ಲಿಯೇ ಸೆರೆವಾಸ ಅನುಭವಿಸಬೇಕಾಗಿದೆ. ಇದಲ್ಲದೆ ಜಿಮ್ನಾಸ್ಟಿಕ್ಸ್ನಲ್ಲಿ ಒಲವು ಹೊಂದಿದ್ದರೂ ಸಹ ಆಕೆ ಈಜಲು ಅಥವಾ ಜಿಮ್ನಾಸ್ಟಿಕ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

೨ ವರ್ಷದಿಂದ ನೀರು ಕುಡಿಯದ ಯುವತಿ!
ಈ ರೋಗವು ಅಪರೂಪದಲ್ಲಿಯೇ ಅಪರೂಪವೆಂದು ವೈದ್ಯರು ಹೇಳಿದ್ದಾರೆ. ಪ್ರತಿ ೨೦೦ ಮಿಲಿಯನ್ ಜನರಲ್ಲಿ ಒಬ್ಬರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ರೋಗವು ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ನೀರು ತಾಗದೆಯೂ ರೋಗಿಗೆ ತೊಂದರೆ ಶುರುವಾಗುತ್ತದೆ. ಅಬಿಗೈಲ್ ಸಹ ಇದೇ ರೀತಿಯ ತೊಂದರೆಯನ್ನು ಅನುಭವಿಸುತ್ತಿದ್ದಾಳೆ. ಈ ಹುಡುಗಿಯ ದೇಹದ ಮೇಲೆ ನೀರು ಆಮ್ಲದಂತೆ ಕೆಲಸ ಮಾಡುತ್ತದೆ. ಈ ಕಾಯಿಲೆಯಿಂದ ಸುಮಾರು ೨ ವರ್ಷಗಳಿಂದ ಆಕೆ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಕೆ ಕೇವಲ ಎನರ್ಜಿ ಡ್ರಿಂಕ್ಸ್ ಮತ್ತು ಜ್ಯೂಸ್ ಮಾತ್ರ ಕುಡಿಯುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.