ಸಾಮಾನ್ಯವಾಗಿ ಆಕಾಶ ನೀಲಿ ಬಣ್ಣದ್ದಾಗಿರುತ್ತದೆ. ಮೋಡಗಳಿಂದ ಮುಚ್ಚಿ ಹೋಗಿದ್ದಾಗ ಆಕಾಶವೆಲ್ಲಾ ಬಿಳಿಯಾಗಿ ಕಾಣುತ್ತದೆ. ಇನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ, ಕಿತ್ತಳೆ ಅಥವಾ ತಿಳಿ ಕೆಂಪು ಬಣ್ಣದಲ್ಲಿ ಆಕಾಶ ಕಂಗೊಳಿಸುತ್ತದೆ. ಆದರೆ ಇತ್ತೀಚೆಗೆ ಚೀನಾದ ಆಕಾಶ ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದ್ದನ್ನು ಕಂಡು ಜನ ಬೆಚ್ಚಿ ಬಿದ್ದ ವಿದ್ಯಾಮಾನ ನಡೆದಿದೆ.

ಈ ದೃಶ್ಯವು ಮೇ ೭ರಂದು ಚೀನಾದ ಝೋಶನ್ ನಗರದಲ್ಲಿ ಕಾಣಿಸಿಕೊಂಡಿದೆ. ಇದು ಯಾಕೆ ಹೀಗೆ ಎನ್ನುವುದು ಮೊದಲಿಗೆ ಯಾರಿಗೂ ಅರ್ಥವಾಗಿರಲಿಲ್ಲ. `ಇದು ಪ್ರಪಂಚದ ಅಂತ್ಯ’ ಎಂದು ಮಾತನಾಡಿಕೊಂಡರು.
ವಿಡಿಯೋದಲ್ಲಿ ಬೇರೆ ದೇಶಗಳಲ್ಲಿ ಈ ದೃಶ್ಯ ನೋಡಿದ ಜನ ಇದು ಚೀನಾದ ಪಾಪದ ಫಲ ಎಂದರೆ, ಇನ್ನು ಕೆಲವರು ಮಾಫ್ ಮಾಡಿದ ವಿಡಿಯೋ ಎಂದರು. ಆದರೆ ಇದು ನೈಜ ದೃಶ್ಯವಾಗಿದ್ದು ವಿಜ್ಞಾನಿಗಳು ವೈಜ್ಞಾನಿಕ ದೃಷ್ಟಿಕೋನದಿಂದಲೂ ಪರಿಶೀಲಿಸಿ ದೃಢಪಡಿಸಿಕೊಂಡಿದ್ದಾರೆ.
ಕಾರಣ ತಿಳಿಸಿದ ಹವಾಮಾನ ಇಲಾಖೆ
ಚೀನಾದ ರಾಜ್ಯ ಮಾಧ್ಯಮ ಗ್ಲೋಬಲ್ ಟೈಮ್ಸ್ ಪ್ರಕಾರ, ಸ್ಥಳೀಯ ಹವಾಮಾನ ಇಲಾಖೆಯು ಬೆಳಕು ಮತ್ತು ಚದುರುವಿಕೆಯ ವಕ್ರೀಭವನದ ಕಾರಣದಿಂದಾಗಿ ಚೀನಾದ ಆಕಾಶವು ಕೆಂಪು ಬಣ್ಣದಲ್ಲಿ ಕಾಣುತ್ತಿದೆ ಎಂದು ಹೇಳಿದೆ. ಸಾಮಾನ್ಯವಾಗಿ ಬಂದರುಗಳಲ್ಲಿ ಉರಿಯುತ್ತಿರುವ ಕೆಂಪು ಮೀನುಗಾರಿಕೆ ದೀಪಗಳ ಕಾರಣದಿಂದ ಹೀಗಾಗುತ್ತದೆ ಎಂದು ಹೇಳಿದೆ. ಆಕಾಶವು ಶುಭ್ರವಾಗಿದ್ದಾಗ ಈ ಬೆಳಕು ಆಕಾಶದಲ್ಲಿ ಹರಡುತ್ತವೆ. ಇದರಿಂದಾಗಿ ಆಕಾಶವು ಕೆಂಪು ಬಣ್ಣದಲ್ಲಿ ಕಾಣುತ್ತದೆ. ಈ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.